varthabharthi


ವಿಶೇಷ-ವರದಿಗಳು

"ಮಕ್ಕಳನ್ನು ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ"

ಸರಕಾರ ಕೂಡಲೇ ಶಾಲೆಗಳನ್ನು ತೆರೆಯಲಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

ವಾರ್ತಾ ಭಾರತಿ : 30 Nov, 2020

ಲಸಿಕೆಯ ನಂತರ ಶಾಲೆ ಆರಂಭ: ಅರ್ಥಹೀನ ಮಾತು

ಕೊರೋನ ಲಸಿಕೆ ಬಂದ ನಂತರ ಶಾಲೆ ಆರಂಭಿಸುವ ಬಗ್ಗೆ ವಾದವಿದ್ದು, ಲಸಿಕೆ ಸದ್ಯಕ್ಕೆ ಬರುವುದಿಲ್ಲ. ಬಂದರೂ ಸರಕಾರದ ನಿಯಮದಂತೆ ಕೊರೋನ ವಾರಿಯರ್ಸ್‌ಗಳಿಗೆ, ತುರ್ತು ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಅದಕ್ಕೆ ಕೊರೋನ ಲಸಿಕೆ ಬಂದ ನಂತರ ಶಾಲೆ ಆರಂಭ ಎನ್ನುವ ಮಾತು ಸಂಪೂರ್ಣವಾಗಿ ಅರ್ಥಹೀನವಾದುದು.

ಶಾಲೆಗಳನ್ನು ತೆರೆಯಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಚರ್ಚೆ, ವಾದ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲವನ್ನು ತೆರೆದ ಮೇಲೆ ಶಾಲೆಗಳನ್ನು ತೆರೆಯಬೇಕಾ ಎಂದು ಮಾಡುತ್ತಿರುವ ಚರ್ಚೆ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಜಗತ್ತಿನ ಎಲ್ಲ ದೇಶಗಳು ಆದ್ಯತೆಯ ಮೇರೆಗೆ ಶಾಲೆಗಳನ್ನು ತೆರೆದಿವೆ. ಕೊರೋನದ 2, 3 ಹೀಗೆ ಎಷ್ಟೇ ಅಲೆಗಳು ಬಂದರೂ ಶಾಲೆಗಳನ್ನು ಮತ್ತೆ ಮುಚ್ಚಬಾರದು ಎಂಬುದನ್ನು ಎಲ್ಲ ದೇಶಗಳೂ ಕಂಡುಕೊಂಡಿವೆ. ಆದ್ದರಿಂದ ನಮ್ಮ ದೇಶದಲ್ಲಿಯೂ ಸರಕಾರ ಕೂಡಲೇ ಶಾಲೆಗಳನ್ನು ತೆರೆಯಬೇಕು.

ಶಿಕ್ಷಣ ಸಚಿವರು ಬಹಳ ಸ್ಪಷ್ಟವಾಗಿ ಶೂನ್ಯವರ್ಷವನ್ನು ಪರಿಗಣಿಸುವುದಿಲ್ಲ ಎಂದು ಹೇಳಿದ್ದು, ಅದು ಸರಿಯಾಗಿದೆ. ಮಗುವಿನ ಜೀವನದಲ್ಲಿ ಶೂನ್ಯವರ್ಷ ಎಂಬುದಿಲ್ಲ. ಮಕ್ಕಳು ಯಾವ ವರ್ಷದಲ್ಲಿ ಏನನ್ನೂ ಕಲಿಯಬೇಕು, ಅದನ್ನು ಕಲಿಯಲೇಬೇಕು.

ಜೂನ್‌ನಲ್ಲಿ ಶಾಲೆ ಆರಂಭವಾದರೆ ಡಿಸೆಂಬರ್ ವೇಳೆಗೆ ಪಠ್ಯಕ್ರಮವನ್ನು ಕಲಿಸಿ, ನಂತರ 2-3 ತಿಂಗಳು ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ ಪರೀಕ್ಷಾ ತಯಾರಿ ನಡೆಯುತ್ತಿತ್ತು. ಮುಂದಿನ ಡಿಸೆಂಬರ್‌ನಿಂದ ಮೇವರೆಗೆ ಶಾಲೆ ನಡೆಸಿದರೆ ಕಲಿಕೆಗೆ ಸಮಸ್ಯೆಯಾಗದಂತೆ ಜೂನ್‌ನಲ್ಲಿ ಎಂದಿನಂತೆ ಮತ್ತೆ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಎಲ್ಲ ತಯಾರಿಗಳನ್ನು ಮಾಡಬಹುದಾಗಿದ್ದು, ಇದರಿಂದ ಶೂನ್ಯ ವರ್ಷದ ಪ್ರಶ್ನೆ ಬರುವುದಿಲ್ಲ, ಪಠ್ಯದಲ್ಲಿ ಕಡಿತ ಮಾಡುವ ಅಗತ್ಯವಿಲ್ಲ ಎಂಬುದು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಅಭಿಪ್ರಾಯವಾಗಿದೆ. ಈ ಬೇಡಿಕೆಯನ್ನೇ ಸರಕಾರದ ಮುಂದಿಡಲಾಗುವುದು. ಪಠ್ಯ ಕಡಿತದ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಕರು ಚರ್ಚಿಸಬೇಕು. ಆದರೆ ಕಡಿತ ಮಾಡುವ ಅಗತ್ಯವೇ ಇಲ್ಲ. ಮಗು ಕಲಿಯಬೇಕಾದ್ದನ್ನು ಕಲಿಯಲೇಬೇಕು. ವಿದ್ಯಾಗಮದಿಂದ ಶಿಕ್ಷಕರಿಗೆ ಸಮಸ್ಯೆಯಾಯಿತು ಎಂದು ಮಕ್ಕಳನ್ನು ಆರೋಪಿಗಳನ್ನಾಗಿ ಮಾಡಲಾಯಿತು. ಇದೂ ಕೂಡ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವೇ ಆಗಿದೆ. ಇದು ವೈಜ್ಞಾನಿಕವಾಗಿ ಅಸಂಬದ್ಧ ವಿಚಾರ. ವಾಸ್ತವ ಏನೆಂದರೆ ಮಕ್ಕಳಿಂದ ಹಿರಿಯರಿಗೆ ಕೊರೋನ ತಗಲುವುದು ಅತ್ಯಂತ ಕಡಿಮೆ. ಮಕ್ಕಳಿಗೆ ಕೊರೋನದಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಕೊರೋನ ಸೋಂಕಿತರಲ್ಲಿ ಮಕ್ಕಳ ಸಂಖ್ಯೆ ಎಷ್ಟಿದೆ?, ಆಸ್ಪತ್ರೆಗಳಿಗೆ ದಾಖಲಾದವರಲ್ಲಿ ಮಕ್ಕಳ ಸಂಖ್ಯೆ ಎಷ್ಟಿದೆ?, ಕೊರೋನದಿಂದ ಮೃತರಾದವರಲ್ಲಿ ಮಕ್ಕಳ ಸಂಖ್ಯೆ ಎಷ್ಟಿದೆ? ಇವೆಲ್ಲವನ್ನು ಸರಕಾರ ಜನರ ಮುಂದಿಡಬೇಕು. ಇದನ್ನು ಬಿಟ್ಟು ಎಲ್ಲದಕ್ಕೂ ಮಕ್ಕಳನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಮಕ್ಕಳಿಗೆ ಕೊರೋನ ತಗಲುವ ಸಾಧ್ಯತೆ ಕಡಿಮೆ, ಸೋಂಕು ತಗಲಿದರೂ ಅವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಸದ್ಯ ದಾಖಲಾಗಿರುವ ಸೋಂಕಿತರಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಶಾಲೆ ಇಷ್ಟು ಸಮಯ ಮುಚ್ಚಿದ್ದರಿಂದ ಕೊರೋನ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಸರಕಾರದ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಕೊರೋನದಿಂದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹೇಳಿಕೊಳ್ಳುವಂತಹ ಯಾವುದೇ ಸಮಸ್ಯೆಯಾಗಿಲ್ಲ.ಕೊರೋನ ಬಂದರೂ ಯಾವುದೇ ಸಮಸ್ಯೆಯಾಗಲ್ಲ, ಮಕ್ಕಳಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಮಕ್ಕಳನ್ನು ಅಪರಾಧಿಗಳನ್ನಾಗಿ ಮಾಡುವುದು ಸರಿಯಲ್ಲ. ಕೊರೋನ ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಕೊರೋನದಿಂದ ಮೃತಪಡುವ ಸಾಧ್ಯತೆ ಇರುವವರನ್ನು ಮೊದಲೇ ಎಚ್ಚರಿಸಿ, ತಮ್ಮ ಸುರಕ್ಷತೆ ಮಾಡಿಕೊಳ್ಳುವಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಒಂದು ವೇಳೆ ಅವರಿಗೆ ಸೋಂಕು ತಗಲಿದರೆ ತಕ್ಷಣ ಚಿಕಿತ್ಸೆ ಪಡೆಯಬೇಕೇ ಹೊರತು ಸೋಂಕು ತಗಲದಂತೆ ತಡೆಯಲು ಸಾಧ್ಯವಿಲ್ಲ. ಶಾಲೆಗಳಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ತಗಲಿದರೂ ಜ್ವರ, ಕೆಮ್ಮು ರೋಗದ ಲಕ್ಷಣಗಳು ಇರುವ ಸಾಧ್ಯತೆ ಅಪರೂಪ. ಆದ್ದರಿಂದ ಆ ಮಕ್ಕಳಿಗೆ ಮಾಸ್ಕ್ ಧರಿಸುವ ಹಾಗೂ ಇತರ ನಿಯಮಗಳನ್ನು ಹೇಳುವ ಅಗತ್ಯವಿಲ್ಲ. ಪ್ರೌಢಶಾಲಾ ಮಕ್ಕಳಿಗೆ ಸ್ವಲ್ಪ ಮುಂಜಾಗ್ರತಾ ಕ್ರಮಗಳನ್ನು ಹೇಳಿಕೊಡಬಹುದು.

ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ಸಿಡಿಸಿ ಹಾಗೂ ಜಗತ್ತಿನ ಎಲ್ಲ ಅಧ್ಯಯನಗಳು ವಸ್ತುಗಳನ್ನು ಮುಟ್ಟುವುದರಿಂದ ಕೊರೋನ ಬರುವುದು ತೀರಾ ವಿರಳ ಎಂದು ತಿಳಿಸಿವೆ.

ಶಾಲೆ ತೆರೆದರೆ ಮಕ್ಕಳಿಗೆ ಸೋಂಕು ಬಂದರೂ, ಹೋದರೂ ಅದು ತಿಳಿಯುವುದಿಲ್ಲ. ಸಮಾಜದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯಲು ದರಿಂದ ಪೂರಕವಾಗಲಿದೆ. ರೋಗ ಉಲ್ಬಣವಾಗಲು, ಸಾವುಗಳಿಗೆ ಅದು ಕಾರಣವಾಗುವುದಿಲ್ಲ ಎಂದು ವಿಶ್ವದ ರೋಗ ಪ್ರಸರಣದ ತಜ್ಞರು ಹೇಳಿದ್ದಾರೆ. ಆದ್ದರಿಂದ ಶಾಲೆ ತೆರೆಯುವುದಕ್ಕೂ ಕೊರೋನದ 2ನೇ, 3ನೇ ಅಲೆಗೂ ಯಾವುದೇ ಸಂಬಂಧವಿಲ್ಲ. ಮುಂಬೈ, ದಿಲ್ಲಿ, ಬೆಂಗಳೂರಿನಲ್ಲಿ ಕೊರೋನ 2ನೇ, 3ನೇ ಅಲೆ ಕಂಡು ಬರಬಹುದು. ಲಾಕ್‌ಡೌನ್ ನಂತರ ಈ ನಗರಗಳಿಂದ ಲಕ್ಷಾಂತರ ಜನರು ತಮ್ಮ ಊರುಗಳಿಗೆ ವಾಪಸಾಗಿದ್ದಾರೆ. ಅವರೆಲ್ಲ ಮತ್ತೆ ಕೆಲಸ ಅರಿಸಿ ನಗರಗಳಿಗೆ ಬಂದಿದ್ದು, ಅವರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಅವರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಸರಕಾರ ಒದಗಿಸಬೇಕು. ಮೊಬೈಲ್ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕಾಗಿದೆ. ಈ ಮೂಲಕ ಮಕ್ಕಳನ್ನು ಈ ಜಂಜಾಟದಿಂದ ಹೊರಗೆ ತರಬೇಕಾಗಿದೆ. ಮಕ್ಕಳಿಗೆ ಕಲಿಯಲು ಅವಕಾಶ ಮಾಡಿಕೊಡಬೇಕು.

ಶಾಲೆ ತೆರೆಯಬೇಕು ಎಂಬುದು ಖಾಸಗಿ ಶಾಲೆಗಳ ಹುನ್ನಾರ ಎನ್ನುವುದು ಒಪ್ಪಲು ಸಾಧ್ಯವಿಲ್ಲ. ಸರಕಾರಿ, ಖಾಸಗಿ ಶಾಲೆಗಳು ತೆರೆಯಬೇಕು. ಮಕ್ಕಳು, ಪಾಲಕರಿಗೆ ಶಾಲೆ ತೆರಯುವುದು ಅಗತ್ಯವಾಗಿದೆ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳಿಗೆ ಅಷ್ಟು ಲಾಭವಾಗುತ್ತಿಲ್ಲ. ಶಿಕ್ಷಣ, ಆರೋಗ್ಯ, ಆಹಾರ ಇವೆಲ್ಲವೂ ಮಕ್ಕಳಿಗೆ ಬೇಕು. ಮನೆಯಲ್ಲಿದ್ದವರಿಗೆ ಇವೆಲ್ಲ ಸಿಗದು. ಕೊರೋನದಿಂದ ಮಕ್ಕಳಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಮಕ್ಕಳ ಒಟ್ಟಾರೆ ಬೆಳವಣಿಗೆಯನ್ನು ನಾವು ಕೆಡಿಸಿದ್ದೇವೆ. ಇದು ಅಕ್ಷಮ್ಯವಾದುದು. ಕೊರೋನ ಹರಡುವಿಕೆ ತುಂಬಾ ವಿರಳವಾಗಿರುವುದರಿಂದ ಮಕ್ಕಳು, ಶಿಕ್ಷಕರಿಗೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆಯಿದ್ದು, ಶೀಘ್ರದಲ್ಲಿ ಶಾಲೆಗಳನ್ನು ತೆರೆಯಲೇಬೇಕಾಗಿದೆ.

► ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯಿಂದ ಚೀನಾ ಭಾರತಕ್ಕಿಂತ 30 ವರ್ಷ ಮುಂದಿದೆ

ಶಿಕ್ಷಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯಿಂದ ಚೀನಾ ಭಾರತಕ್ಕಿಂತ ಮೂವತ್ತು ವರ್ಷ ಮುಂದಿದೆ. ಚೀನಾ ಅಮೆರಿಕಕ್ಕಿಂತ 6 ವರ್ಷ ಮುಂದಿದೆ. ಸಂಶೋಧನೆಗಳ ವರದಿಗಳನ್ನು ಗಮನಿಸಿದರೆ ಚೀನಾದ ವಿಜ್ಞಾನಿಗಳು ಪ್ರಕಟಿಸಿದ ವರದಿಗಳು ನಂ. ಒನ್ ಸ್ಥಾನದಲ್ಲಿವೆ. ನಾವು ಚೀನಾಗಿಂತ ಈಗಾಗಲೇ 30 ವರ್ಷ ಹಿಂದಿದ್ದೇವೆ. ಚೀನಾ, ಅಮೆರಿಕ, ನ್ಯೂಝಿಲ್ಯಾಂಡ್, ತೈವಾನ್, ಸ್ವೀಡನ್‌ನಲ್ಲಿ ಶಾಲಾ-ಕಾಲೇಜುಗಳು ತೆರೆದಿದ್ದು, ಆಸ್ಟ್ರೇಲಿಯದಲ್ಲಿ ಶಾಲೆಗಳನ್ನು ಮುಚ್ಚಲೇ ಇಲ್ಲ ಎಂಬುದು ಗಮನಾರ್ಹ ಸಂಗತಿ. ಭಾರತದಲ್ಲಿ ಒಂಭತ್ತು ತಿಂಗಳಿಂದ ಶಾಲಾ-ಕಾಲೇಜುಗಳನ್ನು ಮುಚ್ಚಿದ್ದೇವೆ. ಇತರ ದೇಶಗಳ ವಿದ್ಯಾರ್ಥಿಗಳಿಗಿಂತ ಈಗಾಗಲೇ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ನಾವೆಲ್ಲ ಚಿಂತಿಸಬೇಕಾದ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)