varthabharthi


ಸಂಪಾದಕೀಯ

ಕಾರ್ಪೊರೇಟ್ ಕೈಗೇ ಬ್ಯಾಂಕ್ ತಿಜೋರಿಯ ಕೀಲಿ ಕೈ?

ವಾರ್ತಾ ಭಾರತಿ : 30 Nov, 2020

ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದ ಮಹತ್ತರ ಬೆಳವಣಿಗೆಗಳಲ್ಲಿ ಬ್ಯಾಂಕ್ ರಾಷ್ಟ್ರೀಕರಣವೂ ಒಂದು. ಆವರೆಗೆ ಉಳ್ಳವರ ಪರವಾಗಿದ್ದ ಬ್ಯಾಂಕ್ ‌ಗಳು ರಾಷ್ಟ್ರೀಕರಣದ ಬಳಿಕ ಜನಸಾಮಾನ್ಯರಿಗೂ ತನ್ನ ಬಾಗಿಲನ್ನು ತೆರೆದವು. ಮುಂದೆ, ಸಾಲಮೇಳಗಳ ಮೂಲಕ ಬ್ಯಾಂಕ್ ‌ಗಳು ರೈತರಿಗೆ, ಕಾರ್ಮಿಕರಿಗೆ ಇನ್ನಷ್ಟು ಹತ್ತಿರವಾದವು. ಭಾರತದ ಅರ್ಥ ವ್ಯವಸ್ಥೆಯ ತಳಪಾಯ ಗಟ್ಟಿಯಾಗಿಸಿದ್ದೂ ಈ ಬ್ಯಾಂಕ್ ರಾಷ್ಟ್ರೀಕರಣವೇ. ಫೈನಾನ್ಸ್ ಗಳು, ಬಡ್ಡಿ ಲೇವಾದೇವಿಗಾರರ ಹಿಡಿತದಲ್ಲಿದ್ದ ರೈತರಿಗೆ ಈ ಮೂಲಕ ಸಣ್ಣ ಬಿಡುಗಡೆಯೊಂದು ದೊರೆಯಿತು. ಕಳೆದ ಹತ್ತು ವರ್ಷಗಳವರೆಗೂ ಬ್ಯಾಂಕ್‌ಗಳೆಂದರೆ ‘ನಂಬಿಕೆ’ಗೆ ಇನ್ನೊಂದು ಹೆಸರಾಗಿತ್ತು. ಆದರೆ ಕಳೆದ ಒಂದು ದಶಕದಿಂದ ಬ್ಯಾಂಕ್‌ಗಳ ಸ್ಥಿತಿ ಸಂಪೂರ್ಣ ಬದಲಾಗಿದೆ. ನೋಟು ನಿಷೇಧಗೊಂಡ ದಿನಗಳಿಂದ ಅವು ಪೂರ್ತಿ ಹದಗೆಟ್ಟಿವೆ. ಕಾರ್ಪೊರೇಟ್ ವ್ಯಕ್ತಿಗಳು ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ಬಾಕಿಯಿರಿಸಿರುವುದು, ಆ ಮೂಲಕ ಬ್ಯಾಂಕ್‌ಗಳೆಲ್ಲವೂ ಮುಳುಗುವ ಹಂತದಲ್ಲಿರುವುದು ಇದೇ ಸಂದರ್ಭದಲ್ಲಿ ಬಹಿರಂಗವಾಯಿತು. ಕೋಟಿ ಕೋಟಿ ಲೂಟಿ ಮಾಡಿದವರೆಲ್ಲ ವಿದೇಶ ಸೇರಿಕೊಂಡಿದ್ದಾರೆ. ನಷ್ಟಕ್ಕೀಡಾದ ಬ್ಯಾಂಕ್‌ಗಳನ್ನು ಲಾಭದಿಂದಿರುವ ಬ್ಯಾಂಕ್‌ಗಳಿಗೆ ಜೋಡಿಸಿ ತೇಪೆ ಹಚ್ಚುವ ಕಾರ್ಯವೂ ಶುರುವಾಯಿತು. ಜನರ ವಿಶ್ವಾಸದ ತಳಹದಿಯ ಮೇಲೆ ನಿಂತ ಹತ್ತು ಹಲವು ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳ ಜೊತೆಗೆ ವಿಲೀನವಾದವು. ಕರ್ನಾಟಕದ ಹೆಮ್ಮೆಯ ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಮೈಸೂರು ಬ್ಯಾಂಕ್‌ಗಳು ಒಂದೊಂದಾಗಿ ಅಸ್ತಿತ್ವ ಕಳೆದುಕೊಂಡವು. ಇದಿಷ್ಟೇ ಅಲ್ಲ, ಇಂದು ಬ್ಯಾಂಕುಗಳು ತಮ್ಮ ವಿಶ್ವಾಸಾರ್ಹತೆಯನ್ನು ಸಂಪೂರ್ಣ ಕಳೆದುಕೊಂಡಿವೆ. ಹಿಂದೆಲ್ಲ ದರೋಡೆಕೋರರಿಂದ ‘ಬ್ಯಾಂಕ್ ಲೂಟಿ’ ನಡೆಯುತ್ತಿದ್ದರೆ ಇಂದು ಬ್ಯಾಂಕುಗಳೇ ‘ಗ್ರಾಹಕರ ಲೂಟಿ’ ನಡೆಸುತ್ತಿವೆ. ಹಿಂದೆ ‘ಫೈನಾನ್ಸ್’ಗಳನ್ನು ‘ಬ್ಲೇಡ್ ಕಂಪೆನಿ’ ಎಂದು ಜನರು ಕರೆಯುತ್ತಿದ್ದರು. ಜನರನ್ನು ಬಡ್ಡಿಯ ಮೂಲಕ ಲೂಟಿ ಹೊಡೆದು ಬಳಿಕ ಮುಳುಗಿ ಹೋಗುವ ಫೈನಾನ್ಸ್ ಕಂಪೆನಿಗಳ ಸ್ಥಾನದಲ್ಲಿ ‘ನಂಬಿಕಸ್ಥ ಬ್ಯಾಂಕ್’ಗಳು ಬಂದು ನಿಂತಿವೆ.

           ಹೀಗಿರುವ ಸಂದರ್ಭದಲ್ಲಿ ಆಂತರಿಕ ಕ್ರಿಯಾ ಸಮಿತಿ (ಐಡಬ್ಲುಜಿ)ಯು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸಲ್ಲಿಸಿದ ಶಿಫಾರಸುಗಳ ಪಟ್ಟಿಯಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸಲಹೆ ನೀಡಿದೆ. ಭಾರತದ ಖಾಸಗಿ ವಲಯದ ಬ್ಯಾಂಕ್‌ಗಳ ಮಾಲಕತ್ವದ ಕುರಿತಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಹಾಗೂ ಅವುಗಳ ಸಾಂಸ್ಥಿಕ ಸಂರಚನೆಯ ಪರಾಮರ್ಶೆಗಾಗಿ ಆಂತರಿಕ ಕ್ರಿಯಾ ಸಮಿತಿಯನ್ನು ರಚಿಸಲಾಗಿತ್ತು. ಕಾರ್ಪೊರೇಟ್ ಕಂಪೆನಿಗಳು ಬ್ಯಾಂಕಿಂಗ್ ವಲಯದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುವುದಕ್ಕಾಗಿ ಹಾಗೂ ಸಂಪರ್ಕಿತ ಸಾಲವನ್ನು(ಕನೆಕ್ಟೆಡ್ ಲೆಂಡಿಂಗ್) ತಡೆಗಟ್ಟಲು 1949ರ ಬ್ಯಾಂಕಿಂಗ್ ತಿದ್ದುಪಡಿ ಕಾಯ್ದೆಗೆ ಅವಶ್ಯಕವಾದ ತಿದ್ದುಪಡಿಗಳನ್ನು ಮಾಡುವಂತೆಯೂ ಆಂತರಿಕ ಕ್ರಿಯಾ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಯಾದರೆ ಭಾರತವು ಆರ್ಥಿಕ ಅರಾಜಕತೆಗೆ ತನ್ನನ್ನು ಸಂಪೂರ್ಣ ಒಪ್ಪಿಸುವ ಬಹುಮುಖ್ಯ ಹಂತಕ್ಕೆ ಕಾಲಿಟ್ಟಂತಾಗುತ್ತದೆ. ಭಾರೀ ಮೊತ್ತದ ಸಾಲಗಳನ್ನು ಬಾಕಿ ಉಳಿಸಿ ರಾಷ್ಟ್ರೀಯ ಬ್ಯಾಂಕುಗಳಿಗೆ ನಾಮ ಎಳೆದ ಉದ್ಯಮಪತಿಗಳೇ ಇದೀಗ ಬೇರೆ ವೇಷದಲ್ಲಿ ತಾವೇ ಬ್ಯಾಂಕ್ ನಡೆಸುವುದಕ್ಕೆ ಮುಂದಾಗಿರುವುದು ಭಾರತದ ಆರ್ಥಿಕತೆಯ ಅತಿ ಕ್ರೂರ ವಿಕಟ ಕ್ಷಣವಾಗಿದೆ.

     ಕಾರ್ಪೊರೇಟ್ ಕಂಪೆನಿಗಳನ್ನು ಬ್ಯಾಂಕಿಂಗ್ ಉದ್ಯಮಕ್ಕೆ ಕರೆತರುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ ರಾಜನ್, ಆರ್‌ಬಿಐನ ಮಾಜಿ ಉಪ ಗವರ್ನರ್ ವಿಠಲ್ ಆಚಾರ್ಯ, ಮಾಜಿ ಆರ್ಥಿಕ ಸಲಹೆಗಾರರಾದ ಶಂಕರ ಆಚಾರ್ಯ ಹಾಗೂ ಅರವಿಂದ ಸುಬ್ರಮಣಿಯನ್, ಮಾಜಿ ವಿತ್ತ ಕಾರ್ಯದರ್ಶಿ ವಿಜಯ್ ಕೇಳ್ಕರ್ ಹಾಗೂ ಅರ್ಥಶಾಸ್ತ್ರಜ್ಞ ವಿವೇಕ್ ಕೌಲ್ ವ್ಯಕ್ತಪಡಿಸಿದ ಆತಂಕಗಳನ್ನು ನಾವು ಗಮನಿಸಬೇಕಾಗಿದೆ.ಭಾರತದಲ್ಲಿ ಬ್ಯಾಂಕಿಂಗ್ ವಲಯವು ಕಳೆದ ಕೆಲವು ವರ್ಷಗಳಿಂದ ತೀವ್ರ ಸಂಕಷ್ಟದಲ್ಲಿದೆ. ಒಂದು ಕಂಪೆನಿಗೆ ನೀಡಲಾಗುವ ಸಾಲದ ಪ್ರಮಾಣವನ್ನು ಸೀಮಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ 2016ರಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸೃಷ್ಟಿಸಿದೆ. ಒಂದು ವೇಳೆ ಬ್ಯಾಂಕೊಂದು ಒಂದೇ ಕಂಪೆನಿಗೆ ಅತಿಯಾದ ಸಾಲವನ್ನು ನೀಡಿದ್ದೇ ಆದಲ್ಲಿ ಆ ಕಂಪೆನಿಯು ಮುಳುಗಿ ಹೋದಲ್ಲಿ ಬ್ಯಾಂಕ್ ಕೂಡಾ ನಷ್ಟಕ್ಕೀಡಾಗುವ ಅಪಾಯವಿದೆ. ಐಡಬ್ಲುಜಿಯ ನೂತನ ಪ್ರಸ್ತಾವಗಳನ್ನು, ಬೃಹತ್ ಬಂಡವಾಳದ ಕಂಪೆನಿಗಳು ಮಾತ್ರವೇ ಈಡೇರಿಸಲು ಶಕ್ತವಾಗಿವೆ. ನೂತನ ಕಾನೂನಿನೊಂದಿಗೆ ಆರ್‌ಬಿಐ ದೊಡ್ಡ ಪ್ರಮಾಣದ ಬಂಡವಾಳ, ದೊಡ್ಡ ಉದ್ಯಮಶೀಲತೆ ಹಾಗೂ ಬೃಹತ್ ಸಾಲ ನೀಡಿಕೆಯ ಸಾಮರ್ಥ್ಯವನ್ನು ಸೃಷ್ಟಿಸಲಿದೆ. ಆದರೆ ಇವೆಲ್ಲದರ ನಿಯಂತ್ರಣ ಒಬ್ಬನ ಕೈಯಲ್ಲಿರುವುದು ಆರ್ಥಿಕತೆಗೆ ಅತಿ ದೊಡ್ಡ ಗಂಡಾಂತರವಾಗಿದೆ.

 ಬ್ಯಾಂಕ್ ಎನ್ನುವುದು ಸಂಪೂರ್ಣವಾಗಿ ಒಂದು ಉದ್ಯಮವಲ್ಲ. ಅದು ಪರಸ್ಪರ ನಂಬಿಕೆಯ ತಳಹದಿಯಲ್ಲಿ ನಿಂತಿರುವ ಆರ್ಥಿಕ ವ್ಯವಸ್ಥೆ. ಬಹುತೇಕ ಕಾರ್ಪೊರೇಟ್ ವಲಯಗಳು ಇಂದು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಅವುಗಳಿಂದಲೇ ಬ್ಯಾಂಕ್‌ಗಳು ಸರ್ವನಾಶವಾಗಿವೆ. ಕಾರ್ಪೊರೇಟ್ ಶಕ್ತಿಗಳ ಬೆನ್ನಿಗೆ ರಾಜಕಾರಣಿಗಳೂ ಇರುವುದರಿಂದ, ಭಾರತದಂತಹ ದೇಶದಲ್ಲಿ ಈ ಬ್ಯಾಂಕಿಂಗ್ ಸುಧಾರಣೆ ಖಂಡಿತವಾಗಿಯೂ ಯಶಸ್ವಿಯಾಗಲಾರದು. ಬದಲಿಗೆ ಇನ್ನಷ್ಟು ಅನಾಹುತಗಳನ್ನಷ್ಟೇ ಸೃಷ್ಟಿಸಬಹುದು. ಇಲ್ಲಿ ಬಹು ಮುಖ್ಯವಾಗಿ ಕಾರ್ಪೊರೇಟ್ ಬ್ಯಾಂಕ್‌ಗಳು ತಮ್ಮದೇ ನಕಲಿ ಸಂಸ್ಥೆಗಳನ್ನು, ಉದ್ಯಮಗಳನ್ನು ಸೃಷ್ಟಿಸಿ ಸಾಲಗಳನ್ನು ನೀಡುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಆರ್ಥಿಕ ತಜ್ಞರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆಂತರಿಕ ಸಮಿತಿಯ ವರದಿಯಲ್ಲೇ ಹೇಳುವ ಪ್ರಕಾರ, ಕಾರ್ಪೊರೇಟ್ ಬ್ಯಾಂಕ್‌ಗಳು ತಮ್ಮವರಿಗೇ ಸಾಲ ನೀಡಲು ಮುಂದಾಗಬಹುದು ಅಥವಾ ಆಪ್ತರಿಗಷ್ಟೇ ಸಾಲ ನೀಡುವಂತೆ ಪ್ರಭಾವ ಬೀರಬಹುದು. ಬ್ಯಾಂಕ್‌ಗಳ ಆಡಳಿತ ಮಂಡಳಿಯ ಮೇಲೆ ಕಾರ್ಪೊರೇಟ್ ಕಂಪೆನಿಗಳು ಪ್ರಭಾವ ಬೀರುವುದನ್ನು ತಡೆಯುವುದು ಕಷ್ಟ.

ಬ್ಯಾಂಕಿಂಗ್ ವ್ಯವಸ್ಥೆಗೆ ಬಂಡವಾಳ ತರುವ ಅವಶ್ಯಕತೆಗಾಗಿ ಅಥವಾ ಅನಿವಾರ್ಯತೆಗಾಗಿ ಇಂದು ಕಾರ್ಪೊರೇಟ್ ಕೈಗೆ ಬ್ಯಾಂಕ್‌ಗಳನ್ನು ಒಪ್ಪಿಸಲಾಗುತ್ತಿದೆ. ಆದರೆ, ಈಗ ಇರುವ ಸ್ಥಿತಿಯಲ್ಲಿ ಬ್ಯಾಂಕ್‌ಗಳಿಗೆ ಬಂಡವಾಳ ಒದಗಿಸುವುದು ತೀರಾ ಕಷ್ಟವೇನಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ತರಬೇಕಾದ ಅಗತ್ಯವಿದೆ ನಿಜ. ಆದರೆ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಕಾರ್ಪೊರೇಟ್ ಕಂಪೆನಿಗಳನ್ನು ಸ್ವಾಗತಿಸಲು ಹಾಗೂ ಸಾರ್ವಜನಿಕರಂಗದ ಬ್ಯಾಂಕ್‌ಗಳಿಗೆ ವಿದಾಯ ಹೇಳಲು ಇದು ಸೂಕ್ತ ಸಮಯವಲ್ಲ. ಈಗಾಗಲೇ ದೇಶದ ರಾಜಕೀಯ ನಿಯಂತ್ರಣ ಕಾರ್ಪೊರೇಟ್ ಶಕ್ತಿಗಳ ಕೈಯಲ್ಲಿದೆ. ದೇಶದ ಅರ್ಥವ್ಯವಸ್ಥೆಯ ನಿಯಂತ್ರಣವನ್ನೂ ಸಂಪೂರ್ಣ ಅವರ ಕೈಗೆ ಒಪ್ಪಿಸಿದರೆ, ದೇಶದ ಭವಿಷ್ಯವನ್ನೇ ಅವರ ಕೈಗೆ ಒಪ್ಪಿಸಿದಂತೆ. ಆದುದರಿಂದ ಜನಸಾಮಾನ್ಯರನ್ನು ಇನ್ನಷ್ಟು ತೊಡಗಿಸುವ ಮೂಲಕ ಬ್ಯಾಂಕ್‌ಗಳನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು. ಜನಸಾಮಾನ್ಯರಿಂದ ಕಿತ್ತು ಕಾರ್ಪೊರೇಟ್ ಕೈಗೆ ಬ್ಯಾಂಕ್‌ಗಳನ್ನು ಒಪ್ಪಿಸುವುದೆಂದರೆ, ಕೋಳಿಮರಿಗಳನ್ನು ಎತ್ತಿ ಹದ್ದುಗಳ ಗೂಡಲ್ಲಿಟ್ಟಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)