varthabharthi


ಸಂಪಾದಕೀಯ

ಬಿಕ್ಕಟ್ಟಿನ ಸುಳಿಯಿಂದ ಪಾರಾದ ರಾಜ್ಯ ಸರಕಾರ

ವಾರ್ತಾ ಭಾರತಿ : 2 Dec, 2020

ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿರುವುದರಿಂದ ರಾಜ್ಯ ಬಿಜೆಪಿ ಸರಕಾರದಲ್ಲಿ ಉಲ್ಬಣಗೊಂಡಿದ್ದ ಆಂತರಿಕ ಬಿಕ್ಕಟ್ಟು ಸದ್ಯ ಡಿಸೆಂಬರ್ ಕೊನೆಯವರೆಗೆ ಮುಂದೂಡಲ್ಪಟ್ಟಂತಾಗಿದೆ. ಇದರಿಂದ ತೀವ್ರ ಒತ್ತಡಕ್ಕೊಳಗಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪಅವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ನೆಮ್ಮದಿಯ ನಿಟ್ಟುಸಿರು ತಾತ್ಕಾಲಿಕ ಮಾತ್ರ. ಪಂಚಾಯತ್ ಚುನಾವಣೆ ಮುಗಿದ ನಂತರ ಇದು ಮತ್ತೆ ಉಲ್ಬಣಗೊಂಡರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಇದು ‘ಅನರ್ಹ’ರನ್ನು ಪಕ್ಷಕ್ಕೆ ಸೇರಿಸಿಕೊಂಡು ಅರ್ಹರನ್ನಾಗಿಸಿ ರಚನೆಯಾದ ಸರಕಾರ. ಮಾತು ಕೊಟ್ಟಂತೆ ಬಾಕಿ ಉಳಿದ ಇಬ್ಬರನ್ನು ಮಂತ್ರಿಗಳನ್ನಾಗಿ ಮಾಡಬೇಕು. ಮಂತ್ರಿ ಪದವಿ ಸಿಗದ ಬಿಜೆಪಿಯ ಮೂಲ ನಿವಾಸಿಗಳಿಗೆ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಸಂಪುಟ ಪುನಾರಚನೆ ಮಾಡಬೇಕು. ಇದು ಯಡಿಯೂರಪ್ಪನವರ ಮುಂದಿರುವ ಸವಾಲು. ಆದರೆ ಇದಿಷ್ಟೇ ಆದರೆ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಬಿಜೆಪಿ ಹೈಕಮಾಂಡ್ ಇನ್ನೂ ಮತ್ತೇನನ್ನೋ ಬಯಸುತ್ತಿದೆ. ನಾಯಕತ್ವವನ್ನೇ ಬದಲಿಸುವ ಲೆಕ್ಕಾಚಾರದಲ್ಲಿ ಅದು ಇದೆ ಎಂದು ಹೇಳಲಾಗುತ್ತದೆ. ನಾಯಕತ್ವ ಬದಲಾವಣೆಯ ಗಂಡಾಂತರದಿಂದ ಮುಖ್ಯಮಂತ್ರಿ ಯಡಿಯೂರಪ್ಪಸದ್ಯಕ್ಕೆ ಪಾರಾಗಿದ್ದಾರೆ ಎಂಬುದಂತೂ ನಿಜ.

ರಾಜ್ಯದಲ್ಲಿ ಈ ಬಾರಿ ಇನ್ನೊಂದು ನಮೂನೆಯ ಆಪರೇಷನ್ ಕಮಲದ ಮೂಲಕ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿದುಕೊಂಡ ಬಿಜೆಪಿ ಆರಂಭದಿಂದಲೂ ಅಭಿವೃದ್ಧಿ ಕಾರ್ಯಕ್ರಮಗಳ ಬದಲಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ಹೀಗಾಗಿ ಕೊರೋನ ಬಂದು ಅಪ್ಪಳಿಸಿದಾಗಲೂ ಅದನ್ನು ಸರಿಯಾಗಿ ನಿಭಾಯಿಸಲಾಗಲಿಲ್ಲ.ಹೈಕಮಾಂಡ್ ಮತ್ತು ಸಂಘಪರಿವಾರದ ಸೂಪರ್ ಹೈಕಮಾಂಡ್‌ನಿಂದ ಕಿರುಕುಳ ಅನುಭವಿಸುತ್ತಲೇ ಬಂದ ಮುಖ್ಯಮಂತ್ರಿ ಜಾತಿಗೊಂದು ನಿಗಮ, ಮಂಡಳಿ ಎಂಬ ಪ್ರತ್ಯಸ್ತ್ರ ಬಿಡುತ್ತಲೇ ಬಂದರು. ಇತ್ತೀಚಿನ ವಿಧಾನಸಭಾ ಉಪಚುನಾವಣೆ ಎಂಬ ಅಗ್ನಿಪರೀಕ್ಷೆಯಲ್ಲಿ ನಾನಾ ಕಸರತ್ತುಗಳನ್ನು ನಡೆಸಿ ಪಾರಾದರು. ಇನ್ನೇನು ಮತ್ತೆ ಸಮಸ್ಯೆ ಶುರುವಾಯಿತು ಎನ್ನುವಾಗ ಪಂಚಾಯತ್ ಚುನಾವಣೆ ಮುಳುಗುವವನಿಗೆ ಆಸರೆಯ ಕಡ್ಡಿಯಂತಾಗಿದೆ.

ಕಡು ಶಿಸ್ತಿನ ಪಕ್ಷ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಬಿಜೆಪಿಗೆ ಆಂತರಿಕ ಕಚ್ಚಾಟ ಹೊಸದಲ್ಲ. ಹಿಂದೆ 2008ರಲ್ಲಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ, ಭ್ರಷ್ಟಾಚಾರದ ಆರೋಪ, ಆಂತರಿಕ ಭಿನ್ನಾಭಿಪ್ರಾಯ, ಒಳಜಗಳ ಇವುಗಳಿಂದಾಗಿ ರಾಜ್ಯದಲ್ಲಿ ಅಸ್ಥಿರ ರಾಜಕೀಯ ವಾತಾವರಣ ಉಂಟಾಗಿತ್ತು. ಒಂದೇ ಅವಧಿಯಲ್ಲಿ ಮೂವರು ಮುಖ್ಯ ಮಂತ್ರಿಗಳನ್ನು ಕರ್ನಾಟಕ ಕಾಣಬೇಕಾಯಿತು. ಆಗ ಅಥವಾ ಈಗ ಬಿಜೆಪಿ ಸರಕಾರದ ಬಿಕ್ಕಟ್ಟಿಗೆ ಪ್ರತಿಪಕ್ಷಗಳು ಎಂದೂ ಕಾರಣವಾಗಿಲ್ಲ. ಬೀದಿಗೆ ಬಂದ ಒಳ ಕಚ್ಚಾಟಗಳಿಂದಲೇ ಅದು ಇಕ್ಕಟ್ಟಿಗೆ ಸಿಲುಕಿದೆ ಅಂದರೆ ಅತಿಶಯೋಕ್ತಿಯಲ್ಲ. ಈ ಬಾರಿಯಾದರೂ ಹಿಂದಿನ ತಪ್ಪುಗಳಿಂದ ಬಿಜೆಪಿ ಪಾಠ ಕಲಿಯಬೇಕಾಗಿತ್ತು. ಆದರೆ ಕಲಿಯಲಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷವಾಗುವುದರೊಳಗೆ ಒಳ ತಿಕ್ಕಾಟ ಆರಂಭವಾಯಿತು. ಬಿಜೆಪಿಯ ಮಂತ್ರಿಗಳು, ಶಾಸಕರು ಹಾಗೂ ನಾಯಕರು ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸದೆ ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾ ಬಂದರು. ಕೋವಿಡ್ ಕಾಲದಲ್ಲೂ ಮಂತ್ರಿಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಕೊರೋನ ದುಷ್ಪರಿಣಾಮದ ಜೊತೆಗೆ ಆರ್ಥಿಕ ಬಿಕ್ಕಟ್ಟು ರಾಜ್ಯವನ್ನು ಬಾಧಿಸುತ್ತಲೇ ಇದೆ.

ಇದೆಲ್ಲದರ ಪರಿಣಾಮವಾಗಿ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ.ಬರೀ ನಿಗಮ, ಮಂಡಳಿ, ಸಂಪುಟ ವಿಸ್ತರಣೆ, ಆರೋಪ, ಪ್ರತ್ಯಾರೋಪ, ಹೈಕಮಾಂಡ್‌ಗೆ ದೂರು ಇವುಗಳಲ್ಲೇ ಬಿಜೆಪಿ ಶಾಸಕರು, ನಾಯಕರು ಮುಳುಗಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ. ಇದನ್ನೆಲ್ಲ ನೋಡಿ ದಿಲ್ಲಿಯಲ್ಲಿ ಕುಳಿತ ವರಿಷ್ಠ ನಾಯಕರು ಮೇಲ್ನೋಟಕ್ಕೆ ಮೌನ ವೀಕ್ಷಕರಂತೆ ಕಾಣುತ್ತಿದ್ದರೂ ಒಳಗೊಳಗೆ ಮುಖ್ಯಮಂತ್ರಿಯವರ ವಿರುದ್ಧ ಗುಂಪುಗಾರಿಕೆಗೆ ಅವರು ಪ್ರಚೋದನೆ ನೀಡುತ್ತಿದ್ದಾರೆಂಬ ಸಂಗತಿ ಜನ ಜನಿತವಾಗಿದೆ.

ಬಿಜೆಪಿಯಲ್ಲಿ ಮೂಲ ನಿವಾಸಿಗಳು ಮತ್ತು ವಲಸಿಗರ ಗುಂಪುಗಳು ಮಾತ್ರವಲ್ಲ ನಾನಾ ವಿಧದ ಗುಂಪುಗಳು ಕಾರ್ಯೋನ್ಮುಖವಾಗಿವೆ. ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಬಂದವರಲ್ಲಿ ತಮ್ಮನ್ನು ನಿರ್ಲಕ್ಷ ಮಾಡಲಾಗಿದೆ ಎಂಬ ಭಾವನೆ ಉಂಟಾಗಿದೆ. ಸರಕಾರ ರಚನೆ ಮಾಡುವಾಗ ತಮಗೆ ನೀಡಿದ ಪ್ರಾಮುಖ್ಯತೆಯನ್ನು ಈಗ ಸಚಿವ ಸ್ಥಾನವನ್ನು ನೀಡುವಲ್ಲಿ ತೋರುತ್ತಿಲ್ಲ ಎಂಬ ಅಸಮಾಧಾನ ವಲಸಿಗರಲ್ಲಿದೆ.

ಈಗ ಪಂಚಾಯತ್ ಚುನಾವಣೆ ಬಂದಿರುವುದರಿಂದ ಸದ್ಯಕ್ಕೆ ಸಿ.ಎಂ. ಯಡಿಯೂರಪ್ಪನವರು ಬಿಕ್ಕಟ್ಟಿನಿಂದ ಪಾರಾಗಿದ್ದಾರೆ. ಆದರೆ ಈ ನೆಮ್ಮದಿ ಶಾಶ್ವ್ವತವಲ್ಲ ಎಂಬುದೂ ನಿಜ.

ಬಿಜೆಪಿಯ ಹೈಕಮಾಂಡ್‌ಗೆ ರಾಜ್ಯದಲ್ಲಿ ಸಂಪುಟ ಪುನಾರಚನೆಗಿಂತ ನಾಯಕತ್ವ ಬದಲಾವಣೆಯ ಬಗ್ಗೆ ವಿಶೇಷ ಆಸಕ್ತಿ ಇದ್ದಂತೆ ಕಾಣುತ್ತದೆ. ಸರಕಾರ ರಚನೆಯಾಗುವಾಗ ಮಾತು ಕೊಟ್ಟಂತೆ ಯಡಿಯೂರಪ್ಪನವರು ಪದತ್ಯಾಗ ಮಾಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಸರಕಾರದಲ್ಲಿ ಯಡಿಯೂರಪ್ಪನವರ ಪುತ್ರರ ಬಗ್ಗೆ ವಿಶೇಷವಾಗಿ ವಿಜಯೇಂದ್ರರ ಪ್ರಭಾವದ ಬಗ್ಗೆ ಒಂದು ಗುಂಪಿನ ಶಾಸಕರಲ್ಲಿ ಅಸಮಾಧಾನವಿದೆ. ಸಂಘಪರಿವಾರದ ನಿಯಂತ್ರಣ ತಪ್ಪಿಹೋಗುತ್ತಿದೆ ಎಂಬ ಕೋಪವೂ ಇದೆ. ಆದರೆ ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿದರೆ ಅಧಿಕಾರಕ್ಕೆ ಬರಲು ನೆರವಾದ ವೀರಶೈವ, ಲಿಂಗಾಯತ ಮತಗಳು ಕೈ ಬಿಟ್ಟು ಹೋಗಬಹುದು ಎಂಬ ಆತಂಕವೂ ಬಿಜೆಪಿ ವರಿಷ್ಠರಲ್ಲಿದೆ. ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಅವರಷ್ಟೇ ವರ್ಚಸ್ಸನ್ನು ಹೊಂದಿರುವ ಇನ್ನೊಬ್ಬ ಲಿಂಗಾಯತ ನಾಯಕ ಬಿಜೆಪಿಯಲ್ಲಿಲ್ಲ ಎಂಬುದು ಬಿಜೆಪಿ ವರಿಷ್ಠ ನಾಯಕರ ಚಿಂತೆಯಾಗಿದೆ. ಹೀಗಾಗಿ ಸದ್ಯಕ್ಕಂತೂ ಯಡಿಯೂರಪ್ಪ ಸುರಕ್ಷಿತವಾಗಿದ್ದಾರೆ.

ಬಿಜೆಪಿ ಸರಕಾರದಿಂದ ರಾಜ್ಯದ ಜನತೆ ಬಯಸುವುದು ದಕ್ಷ ಪಾರದರ್ಶಕ ಆಡಳಿತವನ್ನು. ಅದನ್ನು ನೀಡುವಲ್ಲಿ ಬಿಜೆಪಿ ವಿಫಲಗೊಂಡರೆ 2013ರಂತೆ ಮತ್ತೆ ಜನರಿಂದ ತಿರಸ್ಕಾರಕ್ಕೆ ಗುರಿಯಾಗಬೇಕಾಗುತ್ತದೆ. ಈ ಎಚ್ಚರ ಬಿಜೆಪಿಯ ಎಲ್ಲ ಬಣಗಳಲ್ಲಿದ್ದರೆ ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)