ಅಮೆರಿಕ ಚುನಾವಣಾ ಅಕ್ರಮ ಆರೋಪಕ್ಕೆ ಪುರಾವೆ ಇಲ್ಲ: ಅಟಾರ್ನಿ ಜನರಲ್
ಟ್ರಂಪ್
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ರಿಪಬ್ಲಿಕನ್ ಪಕ್ಷದ ಆರೋಪವನ್ನು ಅಮೆರಿಕದ ಅಟಾರ್ನಿ ಜನರಲ್ ತಳ್ಳಿ ಹಾಕಿದ್ದಾರೆ. ಇದರೊಂದಿಗೆ ಜೋ ಬೈಡನ್ ಅವರ ಸ್ಪಷ್ಟ ಜಯವನ್ನು ಬುಡಮೇಲು ಮಾಡುವ ಟ್ರಂಪ್ ಹುನ್ನಾರಕ್ಕೆ ಹಿನ್ನಡೆಯಾದಂತಾಗಿದೆ.
"ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟು ಪ್ರಮಾಣದಲ್ಲಿ ಅಕ್ರಮ ನಡೆದಿರುವುದನ್ನು ನಾವು ಕಂಡಿಲ್ಲ" ಎಂದು ಅಟಾರ್ನಿ ಜನರಲ್ ಬಿಲ್ ಬಾರ್ರ್ ಅಸೋಸಿಯೇಟೆಡ್ ಪ್ರೆಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹೇಳಿಕೆಯಿಂದಾಗಿ ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆ ಬಗ್ಗೆ ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಭಾಗ, ಅಮೆರಿಕದ ಗುಪ್ತಚರ ವಿಭಾಗ ಮತ್ತು ಸ್ವತಂತ್ರ ಚುನಾವಣಾ ವೀಕ್ಷಕರು ಅಧಿಕೃತ ಸರ್ಕಾರಿ ಭಾಷೆಯಲ್ಲಿ, "ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುರಕ್ಷಿತ ಚುನಾವಣೆ" ಎಂದು ಬಣ್ಣಿಸಿದ್ದಾರೆ.
ಮಿಚಿಗನ್, ಪೆನ್ಸೆಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ವ್ಯಾಪಕವಾಗಿ ಅಕ್ರಮ ಮತದಾನ ನಡೆದಿದೆ ಎಂಬ ಟ್ರಂಪ್ ಅವರ ಆಧಾರ ರಹಿತ ಪ್ರತಿಪಾದನೆ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಬೈಡನ್ ಅವರು ಟ್ರಂಪ್ಗಿಂತ 62 ಲಕ್ಷ ಮತಗಳನ್ನು ಹೆಚ್ಚುವರಿಯಾಗಿ ಪಡೆದಿದ್ದು, 306 ರಾಜ್ಯವಾರು ಮತಗಳನ್ನು ಪಡೆದಿದ್ದಾರೆ. ಚುನಾವಣಾ ವಿಜೇತರನ್ನು ಘೋಷಿಸಲು ಡಿಸೆಂಬರ್ 14ರಂದು ಎಲೆಕ್ಟ್ರೊರಲ್ ಕಾಲೇಜ್ ಸಭೆ ಸೇರಲಿದ್ದು, ಇದಕ್ಕೆ ಮುನ್ನ ಮತಗಳ ಅಂತಿಮ ಬಲಾಬಲವನ್ನು ದೃಢೀಕರಿಸದಂತೆ ತಡೆಯಲು ಟ್ರಂಪ್ ಬಣ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.