varthabharthi


ನಿಮ್ಮ ಅಂಕಣ

ಇಂದು ವಿಶ್ವ ಅಂಗವಿಕಲರ ದಿನ

ರಾಜ್ಯದ ಅಂಗವಿಕಲರ ಪರಿಸ್ಥಿತಿ ಸುಧಾರಣೆಯಾಗಲಿ

ವಾರ್ತಾ ಭಾರತಿ : 3 Dec, 2020
ಎಸ್. ಬಾಬು ಖಾನ್ ಸಂಯೋಜಕರು, ದಕ್ಷಿಣ ಭಾರತ ಅಂಗವಿಕಲರ ಕಾನೂನು ಸಲಹಾ ಕೇಂದ್ರ, ಬೆಂಗಳೂರು

ಭಾಗ -1

ಪ್ರತಿ ವರ್ಷದಂತೆ ಈ ಸಲವೂ ವಿಶ್ವಸಂಸ್ಥೆಯು 2020ರ ವಿಶ್ವ ಅಂಗವಿಕಲರ ದಿನಾಚರಣೆಯ ಘೋಷವಾಕ್ಯವನ್ನು ಹೊರಡಿಸಿದೆ, ಕೋವಿಡ್-19ರ ನಂತರದ ಸುಧಾರಿತ ಮರುನಿರ್ಮಾಣ: ಅಂಗವಿಕಲತೆ-ಸಮನ್ವಯ, ಸಮಂಜಸ ಸೌಕರ್ಯ ಮತ್ತು ಸುಸ್ಥಿರತೆಗೆ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಂಗವಿಕಲರ ಸ್ಥಿತಿಗತಿಯ ಬಗ್ಗೆ ಅವಲೋಕನ ಮಾಡಲಾಗಿದ್ದು, ಮೊದಲನೆಯದಾಗಿ, ಸಮಾಜದ ಅಲಕ್ಷಕ್ಕೆ ಒಳಗಾದ ಅತ್ಯಂತ ನಿರ್ಲಕ್ಷಿತ ಗುಂಪಾದ ಅಂಗವಿಕಲರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದವರು. ಇತ್ತೀಚೆಗೆ ಅಂಗವಿಕಲರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದು ನಡೆದಿದೆ. ಯಾವ ಪರ್ಯಾಯ ಹೆಸರುಗಳಿಂದ ಅಥವಾ ದಿವ್ಯಾಂಗ ಎಂದು ಕರೆದರೂ ಅಂಗವಿಕಲರ ಮತ್ತು ಅಂಗವಿಕಲತೆಯ ಪರಿಸ್ಥಿತಿಯಲ್ಲಿ ಬದಲಾವಣೆಗಳೇನು ಘಟಿಸುವುದಿಲ್ಲ. ಅಂಗವಿಕಲರು ಅಂಗವಿಕಲರಾಗಿಯೇ ಉಳಿಯುತ್ತಾರೆ. ನಮ್ಮ ರಾಜ್ಯದ ಅಂಗವಿಕಲರ ಪರಿಸ್ಥಿತಿಯಲ್ಲಿ ಹಲವಾರು ಸಕಾರಾತ್ಮಕವಾದ ಬದಲಾವಣೆಗಳಾಗಿವೆಯೇನೋ ಸರಿ, ಆದರೆ ಇನ್ನೂ ಹತ್ತು ಹಲವು ಸಮಸ್ಯೆಗಳು ಹಾಗೆಯೇ ಇವೆ, ಹೊಸ ಹೊಸ ಸಮಸ್ಯೆಗಳು-ಸವಾಲುಗಳು ಎದುರಾಗುತ್ತಲೇ ಇವೆ.

ವಿಶ್ವ ಅಂಗವಿಕಲ ದಿನದ ಸಂದರ್ಭದಲ್ಲಿ ನಮ್ಮ ನಾಡಿನ ಅಂಗವಿಕಲರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮರುಶೋಧಿಸಿಕೊಳ್ಳುವ ಮತ್ತು ಸವಾಲುಗಳನ್ನು ಅರ್ಥೈಸಿಕೊಳ್ಳುವ ಮತ್ತು ಇದಕ್ಕೆ ಸಾಧ್ಯವಿರುವ ಪರಿಹಾರ ಕ್ರಮಗಳನ್ನು ಗಂಭೀರವಾಗಿ ಹುಡುಕುವ ಅನಿವಾರ್ಯತೆ ಇದೆ. ಕಾರಣ ವಿಶ್ವ ಅಂಗವಿಕಲರ ಹಕ್ಕುಗಳ ಒಡಂಬಡಿಕೆ ಜಾರಿಯಾಗಿ ಒಂದುವರೆ ದಶಕಗಳ ಮೇಲಾಗಿದೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಜಾರಿಯಾಗಿ 4 ವರ್ಷಗಳಾಗುತ್ತಾ ಬಂದಿದೆ. ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ ಅಂಗವಿಕಲರ ಪ್ರಮಾಣ ಶೇ. 2.17 ಅಂದರೆ 13.24 ಲಕ್ಷ ಅಂಗವಿಕಲರನ್ನು ಹೊಂದಿರುವ ರಾಜ್ಯ ನಮ್ಮದು. ನಗರ ಪ್ರದೇಶಗಳಲ್ಲಿ ಶೇ. 40ರಷ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ. 60ರಷ್ಟು ಅಂಗವಿಕಲರಿದ್ದಾರೆ. ನಮ್ಮ ರಾಜ್ಯದಲ್ಲಿರುವ ಕುಟುಂಬಗಳು ಮತ್ತು ಅಂಗವಿಕಲರ ಸಂಖ್ಯೆಯನ್ನು ಹೋಲಿಸಿ ನೋಡಿದರೆ, 10.41 ಲಕ್ಷ ಕುಟುಂಬಗಳಲ್ಲಿ ಅಥವಾ ಶೇ. 7.82 ಕುಟುಂಬಗಳಲ್ಲಿ ಅಂಗವಿಕಲರು ಇದ್ದಾರೆ. 2019-20ರ ಅಂಕಿಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ 9.07 ಲಕ್ಷ ಅಂಗವಿಕಲರಿಗೆ ಮಾಸಿಕ ಪೋಷಣಾ ಭತ್ತೆ ಸಿಗುತ್ತಿದೆ. ಭಾರತದ ಸಂವಿಧಾನದ ಪ್ರಕಾರ ಅಂಗವಿಕಲರಿಗೆ ಎಲ್ಲಾ ಸೌಲಭ್ಯಗಳನ್ನು, ಪುನರ್ವಸತಿಯನ್ನು ಒದಗಿಸುವ ಜವಾಬ್ದಾರಿ ರಾಜ್ಯ ಸರಕಾರಗಳದ್ದು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 37ರ ಪ್ರಕಾರ ಸರಕಾರದ ಎಲ್ಲಾ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇ. 5 ಸಂಪನ್ಮೂಲಗಳನ್ನು ಅಂಗವಿಕಲರಿಗೆ ಮೀಸಲಿಡಬೇಕು.

ಸ್ಥಳೀಯ ಸಂಸ್ಥೆಗಳು ಕೂಡ ಅಂಗವಿಕಲ ಕುಟುಂಬಗಳ ಬಡತನ ನಿರ್ಮೂಲನೆಗಾಗಿ ಶೇ. 5 ಅನುದಾನವನ್ನು ಮೀಸಲಿಡಬೇಕು. ಶೇ. 5ರ ಅನುದಾನದ ಬಳಕೆಯ ಪ್ರಮಾಣ ಪ್ರತಿ ಗ್ರಾಮಪಂಚಾಯತ್, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಹೆಚ್ಚುತ್ತಿದ್ದು ಯಾವ ಕಾರ್ಯಕ್ರಮಕ್ಕಾಗಿ ಆದ್ಯತೆ ಕೊಡಬೇಕು ಎಂಬುದನ್ನು ನಿರ್ಧರಿಸುವಾಗ ಸಮಗ್ರ ದೃಷ್ಟಿಕೋನದ ಕೊರತೆ ಎದ್ದು ಕಾಣುತ್ತಿದೆ. ಬಹಳಷ್ಟು ಅನುದಾನ ಜನಪ್ರಿಯ ಕಾರ್ಯಕ್ರಮವಾದ ‘ಮಾರ್ಪಡಿಸಿದ ದ್ವಿಚಕ್ರವಾಹನ’ಕ್ಕಾಗಿ ಬಳಕೆಯಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಒಟ್ಟಾರೆ ಅನುದಾನದಲ್ಲಿ ಸರಾಸರಿ ಶೇ. 40-45ರಷ್ಟು ಖರ್ಚಾಗುತ್ತಿದೆ. ಇದನ್ನು ಹೊರತು ಪಡಿಸಿ ರಾಜ್ಯದ ಶಾಸಕರು ಮತ್ತು ಸಂಸದರೂ ಸಹ ಶೇ. 5 ಅನುದಾನವನ್ನು ಅಂಗವಿಕಲರಿಗಾಗಿ ಮೀಸಲಿಡಬೇಕು. ಅನುದಾನವನ್ನು ಹಕ್ಕು ಮತ್ತು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಯಾವ ಕಾರ್ಯಕ್ರಮಗಳಿಗಾಗಿ ಬಳಸಬೇಕು ಎಂಬುದನ್ನು ಮತ್ತೆ ಪರಿಶೀಲಿಸಬೇಕಿದೆ. ಸರಕಾರದ ಕಾರ್ಯಕ್ರಮಗಳು ಸಾಮಾನ್ಯವಾಗಿ ಜನಪ್ರಿಯ ಮಾದರಿಗಳನ್ನು ಅನುಸರಿಸುವುದರಿಂದ ಅದು ಕಲ್ಯಾಣ ಅಥವಾ ವೆಲ್ಫೇರ್ ಮಾದರಿಯನ್ನು ಆಧರಿಸಿರುತ್ತವೆ. ಇನ್ನುಮುಂದೆ ಕಲ್ಯಾಣ ದೃಷ್ಟಿಕೋನದಿಂದ ಹಕ್ಕು-ಅಭಿವೃದ್ಧಿ ದೃಷ್ಟಿಕೋನದತ್ತ ಸರಕಾರದ ನಡೆ ಹೊರಳಬೇಕಾಗಿದೆ. ಆಯಾ ಹಣಕಾಸು ವರ್ಷದಲ್ಲಿ ಮೀಸಲಿಟ್ಟ ಅನುದಾನ ಸಂಪೂರ್ಣವಾಗಿ ಬಳಕೆಯಾಗಲು ಕಾಯ್ದೆಯಲ್ಲಿ ತಿದ್ದುಪಡಿಯಾಗಬೇಕು. ಇನ್ನು 15ನೇ ಹಣಕಾಸು ಆಯೋಗದಲ್ಲಿ ಶೇ. 5ರ ಸಂಪನ್ಮೂಲ ಲಭ್ಯವಿದೆ. ಇದನ್ನು ಬಳಸಿದರೆ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ.

ಅಂಗವಿಕಲ ಕ್ಷೇತ್ರದಲ್ಲಿ ಬೆಳವಣಿಗೆಗಳು ಬಹಳ ವೇಗವಾಗಿ ಆಗುತ್ತಿವೆ. ಕಾರಣ ಈ ಕ್ಷೇತ್ರದ ಹರವು ವಿಸ್ತಾರವಾಗುತ್ತಲೇ ಇರುವುದು. 1995ರ ಕಾಯ್ದೆಯಲ್ಲಿ ಕೇವಲ 7 ಅಂಗವಿಕಲತೆಗಳನ್ನು ಮಾತ್ರ ಪರಿಗಣಿಸಲಾಗಿತ್ತು ಆದರೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರಲ್ಲಿ ಹೆಚ್ಚಿನ ಅಂಗವಿಕಲತೆಗಳನ್ನು ಸೇರಿಸಲಾಗಿದ್ದು ಒಟ್ಟು 21 ಅಂಗವಿಕಲತೆಯ ಸ್ಥಿತಿಗಳನ್ನು ಒಳಗೊಂಡಿದೆ. ಆ್ಯಸಿಡ್ ದಾಳಿಗೊಳಗಾದವರು, ಹಿಮೋಫಿಲಿಯಾ, ಸ್ನಾಯು ಕ್ಷಯ, ಥಲಸೇಮಿಯ, ತೀವ್ರವಾದ ನ್ಯೂರೊಲಾಜಿಕಲ್ ಸ್ಥಿತಿಯಲ್ಲಿರುವವರು ಮುಂತಾದವುಗಳನ್ನು ಸೇರಿಸಿದೆ. ಹಾಗಾಗಿ ಗಣನೀಯವಾಗಿ ಅಂಗವಿಕಲರ ಜನಸಂಖ್ಯೆ ಹೆಚ್ಚಿದೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿಗಳು ರಚನೆಯಾಗಬೇಕು. ನಮ್ಮ ರಾಜ್ಯದಲ್ಲಿ ಶೇ. 50ರಷ್ಟು ಜಿಲ್ಲೆಗಳಲ್ಲಿ ಸಮಿತಿಗಳು ರಚನೆಯಾಗಿರಬಹುದು. ಈ ಸಮಿತಿಗಳು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಖಂಡಿತವಾಗಿಯೂ ಬಹಳಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಇದೆ.

13 ಲಕ್ಷ ಜನಸಂಖ್ಯೆಯಿರುವ ಅಂಗವಿಕಲರ ಸಮಸ್ಯೆಗಳು ವಿವಿಧ ಬಗೆಯವು. ಅಂಗವಿಕಲತೆವಾರು ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ತರಬೇತಿ ಹೊಂದಿದ ತಾಂತ್ರಿಕ ಪರಿಣಿತರ ಅಗತ್ಯವಿದೆ. ಆರಂಭದಲ್ಲಿ ಪತ್ತೆ ಹಚ್ಚುವುದರಿಂದ ಹಿಡಿದು ಪುನಶ್ಚೇತನದವರೆಗೆ ಕಾರ್ಯನಿರ್ವಹಿಸಲು, ಸರಕಾರಿ ಸೌಲಭ್ಯಗಳ ಮಾಹಿತಿ ತಲುಪಿಸಲು ಸಾಮಾಜಿಕ ಕಾರ್ಯಕರ್ತರ ಅವಶ್ಯಕತೆಯೂ ಇದೆ. ಒಟ್ಟಾರೆ ಮಾನವ ಸಂಪನ್ಮೂಲದ ದೊಡ್ಡಕೊರತೆ ಇದೆ. ಕರ್ನಾಟಕದ ಅಂಗವಿಕಲ ಕ್ಷೇತ್ರವನ್ನು ಗಮನಿಸಿದಾಗ ಸುಮಾರು 300-350 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಇದು ಹದಿಮೂರು ಲಕ್ಷ ಜನರನ್ನು ತಲುಪಲು ಸಾಕಾಗುತ್ತಿಲ್ಲ. ನುರಿತ ತಜ್ಞರನ್ನು ಹುಡುಕಿ ನೇಮಿಸಿಕೊಳ್ಳಬಹುದು. ಆದರೆ ಅದಕ್ಕೆ ತಗಲುವ ವೆಚ್ಚ ಅಪಾರವಾದುದು. ಆರೋಗ್ಯ ಇಲಾಖೆಯು ಬಹಳಷ್ಟು ಪ್ರಯತ್ನ ಪಡುತ್ತಿದ್ದರೂ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಪೂರ್ಣವಾಗಿ ವೈದ್ಯರನ್ನು ನೇಮಿಸಲು ಸಾಧ್ಯವಾಗಿಲ್ಲ. ಇನ್ನು ತೀವ್ರತರ ಅಂಗವಿಕಲತೆಗಳಾದ ಮೆದುಳುವಾತ, ಬುದ್ಧಿಮಾಂದ್ಯತೆ, ಬಹುವಿಧ ಮತ್ತು ಆಟಿಸಂ ಹೊಂದಿರುವ ಅಂಗವಿಕಲರಿಗೆ ನ್ಯಾಷನಲ್ ಟ್ರಸ್ಟ್ ಆ್ಯಕ್ಟ್ ಮೂಲಕ ನಿರಮಯ ಆರೋಗ್ಯವಿಮೆ ಪಡೆಯಲು ಸಂಸ್ಥೆಗಳ ಮೊರೆಹೋಗಬೇಕು. ಅವು ನ್ಯಾಷನಲ್ ಟ್ರಸ್ಟ್ ಆ್ಯಕ್ಟ್‌ನಲ್ಲಿ ನೋಂದಾಯಿಸಿಕೊಂಡಿರಬೇಕು. ಕರ್ನಾಟಕದಲ್ಲಿ ಸುಮಾರು 3.60ಲಕ್ಷ ತೀವ್ರತರ ಅಂಗವಿಕಲರಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ನಮ್ಮ ರಾಜ್ಯದ 42 ಸಂಸ್ಥೆಗಳು ನೋಂದಣಿಯಾಗಿದ್ದು, 23 ಸಂಸ್ಥೆಗಳು ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡಿವೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲರು ಹೆಚ್ಚಿದ್ದರೂ ಅವರಿಗೆ ಸೌಲಭ್ಯ ಒದಗಿಸುವಲ್ಲಿ ಸಂಸ್ಥೆಗಳ ಕೊರತೆ ಇದೆ. ನಮ್ಮ ರಾಜ್ಯದಲ್ಲಿರುವ ಸಂಖ್ಯೆ ಸೊನ್ನೆಯಿಂದ ಹದಿನೆಂಟರವರೆಗಿನ ಅಂಗವಿಕಲ ಮಕ್ಕಳ ಸಂಖ್ಯೆ 2011ರ ಜನಗಣತಿಯ ಪ್ರಕಾರ ಒಟ್ಟು 3,89,383. ಅದರಲ್ಲಿ 0-4 ವರ್ಷದೊಳಗೆ 58,602 (ಶೇ.15.05) ಅಂಗವಿಕಲ ಮಕ್ಕಳಿದ್ದಾರೆ. 5-9 ವರ್ಷದೊಳಗೆ 93,449 (ಶೇ. 24) ಮತ್ತು 10-19 ವರ್ಷದೊಳಗೆ 2,37,332 (ಶೇ. 61) ಅಂಗವಿಕಲ ಮಕ್ಕಳಿದ್ದಾರೆ. ನಮ್ಮ ರಾಜ್ಯದಲ್ಲಿ 0-6 ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಇನ್ನೂ ಗುಣಮುಖರಾಗಿಲ್ಲ, ಸಮರ್ಪಕವಾದ ಚಿಕಿತ್ಸೆ ಮತ್ತು ಆಹಾರ ಸಿಗದಿದ್ದರೆ ಒಂದಲ್ಲ ಒಂದು ಅಂಗವಿಕಲತೆಗೆ ಶಾಶ್ವತವಾಗಿ ಈಡಾಗುವ ಸಾಧ್ಯತೆಯೇ ಹೆಚ್ಚು. ಸೊನ್ನೆಯಿಂದ ಆರು ವರ್ಷದೊಳಗಿನ ಮಕ್ಕಳನ್ನು ಅಂಗವಿಕಲರೆಂದು ಗುರುತಿಸುವಂತಿಲ್ಲ. ಏನಿದ್ದರೂ ಕುಂಠಿತ ಅಥವಾ ನಿಧಾನ ಬೆಳವಣಿಗೆಯ ಮಕ್ಕಳೆಂದು ಕರೆಯಬಹುದು. ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ಆಗಬೇಕಿದ್ದು, ದೊಡ್ಡ ಸಮಸ್ಯೆಯೆಂದರೆ, ಮಾನವ ಸಂಪನ್ಮೂಲ, ನುರಿತ ತಜ್ಞರು, ವಿಷಯ ಪರಿಣಿತರು ಮತ್ತು ತಾಂತ್ರಿಕ ಪರಿಣಿತಿ ಹೊಂದಿದವರ ಸಂಖ್ಯೆ ಕಡಿಮೆ ಇದ್ದು, ಎಲ್ಲಾ ಮಕ್ಕಳಿಗೂ ಶೀಘ್ರ ಪತ್ತೆಹಚ್ಚುವಿಕೆಯ ಸೌಲಭ್ಯ ಸಿಗುತ್ತಿಲ್ಲ. ಕರ್ನಾಟಕದ ಸಾಕ್ಷರತೆಯ ಪ್ರಮಾಣ ಸರಾಸರಿ ಶೇ. 75.6. ಆದರೆ ಅಂಗವಿಕಲರ ಸಾಕ್ಷರತೆಯ ಪ್ರಮಾಣ 59.45 ಆಗಿದೆ. ಇದಕ್ಕೆ ಮೂಲಕಾರಣ ಶಾಲೆಗಳಲ್ಲಿ ದಾಖಲಾತಿಯಲ್ಲಿ ಹಿಂದುಳಿದಿರುವುದು. ಒಂದರಿಂದ ಎಂಟನೆಯ ತರಗತಿಗಳಿಗೆ ದಾಖಲಾತಿ ಕಡಿಮೆಯಾಗುತ್ತಿರುವುದು ಗಂಭೀರವಾದ ವಿಷಯ. ಸದುದ್ದೇಶದಿಂದ ಆರಂಭಿಸಲಾದ ಶಿಕ್ಷಣ ಇಲಾಖೆಯ ರಾಜ್ಯ ಸಮನ್ವಯಕೋಶದ ಸ್ಥಿತಿಗತಿ ಏನಾಗಿದೆಯೋ ಗೊತ್ತಿಲ್ಲ, ಇದನ್ನು ಸಕ್ರಿಯಗೊಳಿಸಬೇಕಿದೆ. ಶಾಲೆಬಿಡುವ ಮಕ್ಕಳ ಪ್ರಮಾಣವೂ ಹೆಚ್ಚಿದ್ದು, ಅರ್ಧದಷ್ಟು ಮಕ್ಕಳು ಪ್ರೌಢಶಾಲೆ ತಲುಪುವುದಿಲ್ಲ. ಒಂದು ಕಡೆ ಪೋಷಕರಲ್ಲಿ ಅಸಹಾಯಕತೆ ಕಂಡು ಬಂದರೆ, ಮತ್ತೊಂದು ಕಡೆ, ಈ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಅಂಗವಿಕಲರಿಗೆ ಪೂರಕವಾದ ಪರಿಸರವನ್ನು ನಿರ್ಮಿಸುವಲ್ಲಿ ವ್ಯವಸ್ಥೆಯ ಸೋಲು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)