varthabharthi


ಅನುಗಾಲ

ಕನ್ನಡದ ಕವಿಕನಕ

ವಾರ್ತಾ ಭಾರತಿ : 3 Dec, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರಾಜಕಾರಣದ ಆಸಕ್ತಿಯಿದ್ದವರಿಗೆ ಅವರು ಒಂದು ಜಾತಿ/ಜನಾಂಗದ ನಾಯಕರಾಗಿರುವುದು ವರ್ತಮಾನದ ದುರಂತಗಳಲ್ಲೊಂದು. ಆದರೆ ಕನಕದಾಸರನ್ನು ಅವರ ಕೃತಿಗಳ ಅಂದರೆ ನಡೆನುಡಿಗಳ ಮೂಲಕ ಕಾಣುವುದು ಮತ್ತು ಅವರು ಉಳಿಸಿಹೋದ ಬರಹದ ಪ್ರಪಂಚವನ್ನು ನೆನೆಯುವುದು ನಿಜಕ್ಕೂ ಅವರ ಅವ್ಯಕ್ತ ನೆಲೆಗೆ ಕೊಡಬಹುದಾದ ಗೌರವ; ಮಾಡಬಹುದಾದ ಪೂಜೆ.


ತಿರುಪತಿಯ ತಿಮ್ಮಪ್ಪ ಸಂಪತ್ತಿಗೆ ಅಧಿದೇವತೆಯಂತಹ ದೇವರು. ವೈರಾಗ್ಯವನ್ನು ಬಯಸಿ ಅವನನ್ನು ಪೂಜಿಸುವವರಿರಲಾರರು. ಅವನನ್ನು ಪೂಜಿಸುವವರು ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವವರು ಮತ್ತು ಒಂದಲ್ಲ ಒಂದು ದಿನ ಶ್ರೀಮಂತರಾಗಬಯಸುವವರು. ರಾಜಬೀದಿಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಾಶಿಹಾಕಿ (ಹಳ್ಳಿಯ ಮಾರುಕಟ್ಟೆಗಳಲ್ಲಿ ತರಕಾರಿ ರಾಶಿ ಹಾಕಿದಂತೆ) ಮಾರುತ್ತಿದ್ದರೆನ್ನಲಾದ ಐತಿಹ್ಯದ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿಯೇ ತಿರುಪತಿ ವಿಖ್ಯಾತವಾದ ಕ್ಷೇತ್ರ. ಆದ್ದರಿಂದ ಅವನನ್ನು ಪೂಜಿಸಿದ ಅಪ್ಪ-ಅಮ್ಮ ಮಗನಿಗೆ ತಿಮ್ಮಪ್ಪನೆಂದು ಹೆಸರಿಟ್ಟಿದ್ದರೆ ಅಚ್ಚರಿಯಿಲ್ಲ. ನಮಗೆ ಗೊತ್ತಿರುವ ಕನಕದಾಸ. ದೇವರ ದಾಸ. ಇನ್ನೂ ಸ್ಪಷ್ಟವಾಗಿ ನೋಡಿದರೆ ಕಾಗಿನೆಲೆಯ ಕೇಶವನ ದಾಸ. ಲೌಕಿಕ ಬದುಕಿನಲ್ಲಿ ಇರಬಹುದಾದ ವೈರುಧ್ಯಗಳನ್ನು ಎದುರಿಸಿದ ಮಹಿಮ. ಆದರೆ ಇಂತಹ ತಿಮ್ಮಪ್ಪ ತಿರುಪತಿಯನ್ನು ಪೂಜಿಸುತ್ತಲೇ ಮತ್ತು ಶ್ರೀವೈಷ್ಣವ ರಾಮಾನುಜಾಚಾರ್ಯರನ್ನು ಗೌರವಿಸುತ್ತಲೇ ಕನಕನಾದ ಕಥೆ ನಿಜಕ್ಕೂ ಕುತೂಹಲಕಾರಿ. ಉಡುಪಿ ಕೃಷ್ಣನನ್ನು ತನ್ನ ಕಡೆಗೆ ತಿರುಗಿಸಿಕೊಂಡರೆಂಬ ಪವಾಡಕತೆಯ ನಾಯಕರಾದ ಕನಕದಾಸರು ಮಾಧ್ವರಲ್ಲ. ಹಾಗೆ ನೋಡಿದರೆ ಕೃಷ್ಣನೇ ಮಾಧ್ವನಲ್ಲ.

ದೇವರನ್ನು ಜಾತಿ-ಮತ-ಪಂಥಕ್ಕೆ ಅಂಟಿಸಿದ್ದು ಮನುಷ್ಯನೇ ಹೊರತು ಧರ್ಮವೂ ಅಲ್ಲ; ಶಾಸ್ತ್ರವೂ ಅಲ್ಲ. ಕನಕದಾಸರು ಕುರು ಬಜಾತಿಯಲ್ಲಿ ಹುಟ್ಟಿದರೆಂದು ಚರಿತ್ರೆ ದಾಖಲಿಸಿದೆ. ಕನಕದಾಸರು ಕುರುಬರೆಂದಾಕ್ಷಣ ಕುರಿ ಮೇಯಿಸುವವರೆಂಬ ಆಖ್ಯಾನ ಆರಂಭವಾಗುವುದಕ್ಕೂ ಮೊದಲಿನ ಕಾಲದವರು. ಕನಕನಾಯಕನೂ ಪಂಪನಂತೆ ಒಂದು ದೊಡ್ಡದೋ ಸಣ್ಣದೋ ಅಂತೂ ಒಂದು ಪಡೆಯ ನಾಯಕ. ಪ್ರಾಯಃ ವಿಜಯನಗರದ ಸಾಮಂತರಂತೆ ಅಥವಾ ಪಾಳೇಗಾರರಂತೆ ಆಯುಧ ಹಿಡಿದು ಜೀವನವನ್ನೂ ಆಡಳಿತವನ್ನೂ ಸಾಧಿಸುತ್ತಿದ್ದ ಯೋಧಕುಲ. ಕನಕಚರಿತ್ರೆಯನ್ನು ಹೇಳುವವರು ನಂಬಿಕೆಯ, ಆರಾಧನೆಯ ಭಾವದಿಂದ ವಿಚಾರಗಳನ್ನು ಗೌಣವಾಗಿಸಿ ಕನಕದಾಸರು ಯುದ್ಧ ಮಾಡುತ್ತಿರುವಾಗ ತೀವ್ರ ಗಾಯಗೊಂಡರೆಂದು ಆಗ ಭಗವಂತನ ದರುಶನವಾಗಿ ಲೌಕಿಕದಿಂದ ವಿರಕ್ತಿಗೊಂಡು ದಾಸರಾದರೆಂದೂ ಹೇಳುತ್ತಾರೆ. ಇವೆಲ್ಲ ಅವರ ಕೀರ್ತನೆಗಳನ್ನಾಧರಿಸಿದ, ಆದರಿಸಿದ (ರಣದೊಳಗೆ ದೇಹವ ಖಂಡತುಂಡವ ಮಾಡಿ ರಣವನುತ್ತರಿಸಿ ಮರಣವ ತೋರಿದೆ) ಐತಿಹ್ಯವಿರಬಹುದು. ನಮಗಿಂದು ಕನಕದಾಸರು ಗೋಚರವಾಗುವುದು ಅವರ ಕೀರ್ತನೆಗಳಿಂದ, ಕಾವ್ಯಗಳಿಂದ ಮತ್ತು ಹಲಕೆಲವು ದಂತಕತೆಗಳಿಂದ. ಎಲ್ಲ ವ್ಯಕ್ತಿಗಳನ್ನೂ ಪವಾಡಪೌರುಷಕ್ಕೆ ಏರಿಸುವ ಅಮಲಿನ ಸಮಾಜವು ಕನಕದಾಸರಿಗೂ ವಿನಾಯಿತಿ ಕೊಟ್ಟಿಲ್ಲ.

ಸರಕಾರದ ಮೂಲಕ ಒಂದು ಪಂಗಡದ ಪ್ರತಿನಿಧಿಯೆಂಬಂತೆ ಕನಕಜಯಂತಿಯನ್ನು ಆಚರಿಸುವುದೂ ಈ ಸೋಗುಗಳಲ್ಲೊಂದು. ಆದ್ದರಿಂದ ಸದಭಿರುಚಿಯ ಸಾಂಸ್ಕೃತಿಕ ಆಸಕ್ತಿಯವರನ್ನು ಹೊರತುಪಡಿಸಿದರೆ ಉಳಿದವರು ಕನಕದಾಸರ ಕುರಿತ ದೈವತ್ವವನ್ನೇ ಆಶ್ರಯಿಸಿಯಾರು. ರಾಜಕಾರಣದ ಆಸಕ್ತಿಯಿದ್ದವರಿಗೆ ಅವರು ಒಂದು ಜಾತಿ/ಜನಾಂಗದ ನಾಯಕರಾಗಿರುವುದು ವರ್ತಮಾನದ ದುರಂತಗಳಲ್ಲೊಂದು. ಆದರೆ ಕನಕದಾಸರನ್ನು ಅವರ ಕೃತಿಗಳ ಅಂದರೆ ನಡೆನುಡಿಗಳ ಮೂಲಕ ಕಾಣುವುದು ಮತ್ತು ಅವರು ಉಳಿಸಿಹೋದ ಬರಹದ ಪ್ರಪಂಚವನ್ನು ನೆನೆಯುವುದು ನಿಜಕ್ಕೂ ಅವರ ಅವ್ಯಕ್ತ ನೆಲೆಗೆ ಕೊಡಬಹುದಾದ ಗೌರವ; ಮಾಡಬಹುದಾದ ಪೂಜೆ. ಕನಕದಾಸರೊಬ್ಬರನ್ನೇ ದಾಸಸಾಹಿತಿಯೆಂದು ಚರ್ಚಿಸುವುದು ಅಪೂರ್ಣಸತ್ಯವಾಗುತ್ತದೆ. ದಾಸಸಾಹಿತ್ಯದ ಸೃಷ್ಟಿಯ ಆರಂಭವಾದದ್ದೂ ಪುರಂದರ-ಕನಕರಿಂದಲ್ಲ. ಇವರೀರ್ವರ ಗುರುಗಳಾದ ವ್ಯಾಸರಾಯರು, ಶ್ರಿಪಾದರಾಜರು ಕೀರ್ತನೆಗಳನ್ನು ರಚಿಸಿದ್ದರು.

ಆದರೆ ದಾಸ ಸಾಹಿತ್ಯಕ್ಕೆ ಐತಿಹಾಸಿಕ ಮುನ್ನೆಲೆ ಬಂದದ್ದರಲ್ಲಿ ಇವರೀರ್ವರ ಪಾಲು ದೊಡ್ಡದು ಎಂದು ಒಪ್ಪಿಕೊಳ್ಳಬೇಕಾಗಿದೆ. ಕನಕ-ಪುರಂದರರು ಹೆಚ್ಚುಕಡಿಮೆ ಸಮಕಾಲೀನರು. ಆದರೆ ಪ್ರಾಯಃ ಅವರು ಪರಸ್ಪರ ಭೇಟಿಯಾದದ್ದು ಗುರುಸಮ್ಮುಖದಲ್ಲಿ. ವರ್ಣಾಶ್ರಮ-ವರ್ಗಾಶ್ರಮ ಪದ್ಧತಿ ಇಂದಿಗಿಂತಲೂ ಜೋರಾಗಿದ್ದ ಆ ದಿನಗಳಲ್ಲಿ ಚಿನಿವಾರ ಜಾತಿಗೆ ಸೇರಿದ್ದ ಶ್ರೀನಿವಾಸ ನಾಯಕರು ಪುರಂದರದಾಸರಾಗುವ ಮೊದಲೇ ಶ್ರೀಮಂತರು; ಸಾಮಾಜಿಕ ಪ್ರತಿಷ್ಠೆಗೊಳಪಟ್ಟವರು. ಪುರಂದರರು ರಾಜಸತ್ತೆಗೆ ಸಮೀಪವಾಗಿರಲಿಲ್ಲ. ಆದರೆ ತಮ್ಮ ವೈರಾಗ್ಯ ಮತ್ತು ಆ ಮೂಲಕ ರಚನೆಗೊಂಡ ಚಿಕಿತ್ಸಕ ದೃಷ್ಟಿಯ ಭಕ್ತಿಪೂರ್ಣ ಕೀರ್ತನೆಗಳಿಂದ ಪ್ರಸಿದ್ಧಿಯಾದವರು. ದಾಸರೆಂದರೆ ಪುರಂದರದಾಸರಯ್ಯ ಎಂದದ್ದು ಅವರಿದ್ದಾಗ ಇರಲಿಕ್ಕಿಲ್ಲ. ಪುರಂದರದಾಸರು ಕೀರ್ತನಕಾರರು; ಗೀತಕಾರರು.

ಭಗವಂತನ ನರ್ತನ ಅವರ ನರನಾಡಿಗಳಲ್ಲಿ ಹರಿಯುವಂಥಾದ್ದು. ಕನಕರೂ ದೊರೆಯ ದೂರ-ಸಮೀಪದಲ್ಲಿದ್ದರೂ ಅವರ ಕ್ಷೇತ್ರ ರಾಜಸವಾದದ್ದು. ಅವರಿದ್ದ ಸ್ಥಾನ-ಮಾನಕ್ಕೆ ಆಳುವುದೂ ಗೊತ್ತು; ದೊರೆತನಕ್ಕೆ ಒಳಪಟ್ಟು ದಾಸರಾಗುವುದೂ ಗೊತ್ತು. ಕನಕದಾಸರು ಕೀರ್ತನಕಾರರೂ ಹೌದು; ಸಾಹಿತ್ಯ ಮೀಮಾಂಸೆಯ ಕವಿಯೂ ಹೌದು. ಕನಕದಾಸರ ಕೀರ್ತನೆಗಳು ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಸಿದ್ಧ ಅವರ ಕಾವ್ಯ. ಸೇನೆಯಲ್ಲಿ ದುಡಿದದ್ದಕ್ಕೆ ಮಾತ್ರವಲ್ಲ, ಕಾವ್ಯಪ್ರಕಾರದಲ್ಲೂ ಕನಕದಾಸರು ಪಂಪನ ಹೋಲುವೆಗೆ ಸಿಗುತ್ತಾರೆ. ಲೌಕಿಕವನ್ನು ಹೇಗೆ ದುಡಿಸಿಕೊಂಡರೋ ಹಾಗೆಯೇ ಆಗಮವನ್ನೂ ದುಡಿಸಿಕೊಂಡರು. ಮೋಹನ ತರಂಗಿಣಿಯನ್ನು ಬರೆದವರೇ ಹರಿಭಕ್ತಿಸಾರವನ್ನು ಬರೆದರು; ನಳಚರಿತ್ರೆಯನ್ನು ಬರೆದವರೇ ರಾಮಧಾನ್ಯ ಚರಿತ್ರೆಯನ್ನೂ ಬರೆದರು. ಸಮಾಜದ ಒರೆಕೋರೆಗಳನ್ನು ದಾಸಶ್ರೇಷ್ಠರಾಗಿಯೇ ಬರೆದರು. ಕನಕದಾಸರು ಅವಿದ್ಯಾವಂತರೆಂದು ಅಂದುಕೊಳ್ಳುವಂತೆಯೇ ಇಲ್ಲ. ಕುರುಬರೆಂದಾಕ್ಷಣ ಅವರಿಗೆ ವಿದ್ಯಾರ್ಹತೆಯಿರಲಿಲ್ಲವೆಂಬ ಅನುಕಂಪಸೂಚಿತ ಮಾತುಗಳು ಕನಕದಾಸರ ಮಟ್ಟಿಗೆ ವ್ಯರ್ಥವಾಗುತ್ತವೆ. (ಇಂತಹ ಕುರುಡು ಅಭಿಪ್ರಾಯಗಳಿಂದಾಗಿಯೇ ಪವಾಡಗಳು ಸೃಷ್ಟಿಯಾಗುವುದು. ಕಾಳಿದಾಸನಿಗೂ ಇದೇ ಮಹತ್ತು ಒದಗಿದೆ!) ಅವರ ಕಾವ್ಯದಲ್ಲಿ ಛಂದಸ್ಸಿದೆ; ಭಾಷಾ ಸಾಮರ್ಥ್ಯವಿದೆ; ಪ್ರಕಾಂಡ ಪಂಡಿತರ ಸಂಸ್ಕೃತ ಪದ-ಮಾತುಗಳಿವೆ; ಕನ್ನಡ ಮತ್ತು ಕನ್ನಡ ಸಾಹಿತ್ಯವಂತೂ ಇದೆ. ಅವರಿಗೆ ಸಂಗೀತ ಜ್ಞಾನವಿತ್ತು. ಮುಂಡಿಗೆಗಳನ್ನು ಬರೆದರು; ಅವನ್ನು ಬರೆಯುವುದಕ್ಕೆ ಅನುಭವವೂ ಬೇಕು; ಅರಿವೂ ಬೇಕು; ಕೌಶಲ್ಯವೂ ಬೇಕು. ಬೆಡಗಿನ ವಚನಗಳ ಹಾಗೆ. ಅಲ್ಲೆಲ್ಲ ಕನಕದಾಸರು ದೇಸೀ ಶೈಲಿಯನ್ನೇ ಬಳಸಿದರು.

‘‘ಕಾಲಿಲ್ಲದಾತನು ಹತ್ತಿದನಾ ಮರ ಚಂದಮಾಮ ಕೈಯಿಲ್ಲದಾತನು ಕೊಯ್ದನು ಆ ಹಣ್ಣ ಚಂದಮಾಮ’’ ಎಂಬುದು ಜನಪದೀಯ ಶೈಲಿಯೂ ಹೌದು. ಇನ್ನೊಂದು ಸಂದರ್ಭದಲ್ಲಿ ಅವರು ಓದುಗ/ಕೇಳುಗರಿಗೆ ಸವಾಲೆಸೆಯುವಂತೆ ‘‘ಕನಕನು ಹೇಳಿದ ಬೆಡಗನು ಕಂಡವರು ನೀವ್‌ ಕೇಳಿ ತಿಳಿದು ನಿಮ್ಮ ಮನದಲ್ಲಿ ನೋಡಿ’’ ಎನ್ನುತ್ತಾರೆ. ಹೇಳಿದ್ದನ್ನು ಕಾಣಬೇಕು; ಕೇಳಿದ್ದನ್ನು ತಿಳಿಯಬೇಕು: ಮನದಲ್ಲಿ ನೋಡಬೇಕು. ಎಲ್ಲವೂ ಒಗಟೇ. ಮೋಹನ ತರಂಗಿಣಿ ಶುದ್ಧ ರಸಿಕ ಕಾವ್ಯ. ಇಲ್ಲಿನ ವಿಚಾರ ಕನ್ನಡದ ಯಾವುದೇ ಉತ್ತಮ ಲೌಕಿಕ ಕಾವ್ಯದಂತೆ. ಇದು ಕನಕದಾಸರ ಕಾವ್ಯಪ್ರಜ್ಞೆ ಮಾತ್ರವಲ್ಲ, ಕನ್ನಡಪ್ರಜ್ಞೆಯನ್ನೂ ತೋರಿಸಿದೆ. ಅವರು ‘‘ಉರಗಾಲಯದ ಪೆಸರ್ವಡೆದವನ ಮತ್ಸ್ಯೋ ದರಜಾತೆಯಾತ್ಮ ಸಂಭವನ ವರಪುರಾಣಂಗಳ ಕನ್ನಡಿಸಿದ ಕವೀಶ್ವರರ ಕೊಂಡಾಡುವೆ ಮುದದಿ॥ ಎನ್ನುವ ಮೂಲಕ ತಾನು ಕನ್ನಡದ ಹರಿವಿನ ಭಾಗವೆಂಬುದನ್ನು ಅರಿವಿಗೆ ತರುತ್ತಾರೆ. ಅಂಕಿತವೂ ಅವರ ಕಾಲದ ಕಾವ್ಯ ವಿನ್ಯಾಸದೊಳಗಿತ್ತು.

ಪೌರಾಣಿಕ ಪ್ರಸಿದ್ಧ ನಳೋಪಖ್ಯಾನವನ್ನು ಕನಕದಾಸರು ಸೊಗಸಾಗಿ ನಳಚರಿತ್ರೆಯಾಗಿ ಬರೆದರು. ಇದು ಮಹಾಭಾರತದಲ್ಲಿ ಬರುವ ಕಾಮ್ಯಕವನದಲ್ಲಿ ರೋಮಶ ಮುನಿ ಧರ್ಮಜನಿಗೆ ಹೇಳಿದಂತಿದೆ. ಆದರೆ ಅವರ ಬರವಣಿಗೆ-ಕೀರ್ತನೆಯಾಗಲೀ ಕಾವ್ಯವಾಗಲೀ ಸಂಸ್ಕೃತ ಭೂಹಿಷ್ಠವಲ್ಲ. ದೇಸೀ ಪದ್ದತಿಯನ್ನು ಬಳಸಿಕೊಂಡದ್ದು ಅವರ ವೈಶಿಷ್ಟ್ಯ. ನಳಚರಿತ್ರೆಯ 4ನೆಯ ಸಂಧಿಯಲ್ಲಿ ಬರುವ ‘‘ಮುರಿದು ನೋಡಿದನಲ್ಲಿ ತೆಂಗಿನ ಮರಗಳುನ್ನತ ವಿವಿಧ ವೃಕ್ಷದ ಹೊರೆಗೆಯಲಿ ಕಣ್ಗೆಸೆವ ನಗರೋದ್ಯಾನ ವೀಧಿಯಲಿ॥

ಪದ್ಯವನ್ನು ಗಮನಿಸಬಹುದು. ರಸಪೋಷಣೆಗೆ ಬೇಕಾದಲ್ಲಿ ಅವರು ‘‘ನಿರಿಗುರುಳ ಚೆಂದುಟಿಯ ಸುಂಡಿಲತೆರೆದ ತೊಳ್ಗಳ ಕಂಬುಕಂಠದ ತರಳ ನಯನದ ಸಂಪಗೆಯ ನಾಸಿಕದ ಪೆರೆನೊಸಲ ಹರಿಯ ಮಧ್ಯದ ಹಂಸಗಮನದಗುರುಕುಚದ ಕರಪಲ್ಲವದ ಸರ ಸಿರುಹಮುಖಿ ನಲಿದಾಡುತಿರ್ದಳು ರಾಜಭವನದಲಿ’’ ಎಂದು ಬರೆದು ಜನ್ನನಿಂದ ರತ್ನಾಕರವರ್ಣಿಯವರೆಗಿನ ಶೃಂಗಾರ ಕವಿತ್ವವನ್ನು ಪ್ರದರ್ಶಿಸಿದ್ದಾರೆ. ಮಾಮೂಲಾಗಿ ಸಾಂಪ್ರದಾಯಿಕ ಸನಾತನ ನಂಬಿಕೆಯ ‘‘ಪಂಚಕನ್ಯೇ ಸ್ಮರೇ’’ಗೆ ಪರ್ಯಾಯವಾಗಿ ‘‘..ಲೋಕದ ಲಲನೆಯರ ಪರಿಯಲ್ಲ ನಾಲ್ವರು ಚೆಲುವೆಯರು ಗ ುಣಶೀಲ ಸಂಪನ್ನೆಯರು ಭುವನದಲಿ ನಳಿನಮುಖಿ ದಮಯಂತಿ ಸೀತಾ ಲಲನೆ ದ್ರೌಪದಿ ಚಂದ್ರಮತಿ ಕೋ ಮಲೆಯರಚು್ಯತನಚ್ಚುಮೆಚ್ಚಿನ ರಾಜವನಿತೆಯರು’’ ಎಂದು ಹೇಳುವ ಮೂಲಕ ಅಹಲ್ಯೆ, ತಾರೆ, ಮಂಡೋದರಿಯರನ್ನು ಕೈಬಿಟ್ಟಿದ್ದಾರೆ. ಇದು ಲಾಭ-ನಷ್ಟದ ಪ್ರಶ್ನೆಯಲ್ಲ; ಸ್ವತಂತ್ರ ಮತ್ತು ಸ್ವಾಭಿವ್ಯಕ್ತಿಯದ್ದು. ಕಾಮ್ಯಕವನದಲ್ಲಿ ನಳನ ಕತೆ ಹೇಳಿದ ಮುನಿ ಕತೆಯನ್ನು ಮುಗಿಸಿ ತನ್ನಾಶ್ರಮಕ್ಕೆ ಮರಳುತ್ತಾನೆ. ಹರಿಭಕ್ತಿಸಾರವನ್ನು ಕನಕದಾಸರು ಬರೆದದ್ದು ಹೌದೇ ಎಂಬ ಸಂಶಯವನ್ನು ಕೆಲವರು ತಾಳಿದ್ದಾರೆ.

ಆದರೆ ಅವರ ಇತರ ಬರವಣಿಗೆಯನ್ನು ಗಮನಿಸಿದರೆ ಮತ್ತು ಅವರ ಲೌಕಿಕ-ಆಧ್ಯಾತ್ಮ ಮುನ್ನೋಟಗಳನ್ನು ಪರಿಶೀಲಿಸಿದರೆ ಅದನ್ನು ಅವರೇ ಬರೆದರೆಂದು ಹೇಳಬೇಕಾಗುತ್ತದೆ. ಹರಿಭಕ್ತಿಸಾರದ ಪ್ರತೀ ಷಟ್ಪದಿಯೂ ‘‘ರಕ್ಷಿಸು ನಮ್ಮನನವರತ’’ ಎಂದು ಕೊನೆಗೊಳ್ಳುತ್ತದೆ. ನಳಚರಿತ್ರೆಯ ಮೊದಲ ಸಂಧಿಯ 3ನೇ ಷಟ್ಪದಿಯೂ ‘‘ರಕ್ಷಿಸು ನಮ್ಮನನವರತ’’ ಎಂದು ಕೊನೆಗೊಳ್ಳುವುದೂ ಗಮನಾರ್ಹ. ನಳಚರಿತ್ರೆಯು ಕುಮಾರವ್ಯಾಸ ಭಾರತವನ್ನು ತನ್ನ ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ಮಾತ್ರವಲ್ಲ, ಸ್ತುತಿಯ ವಿಧಾನದಲ್ಲಿ, ಪದಗಳ ಓಟದಲ್ಲಿ, ಓಘದಲ್ಲಿ ಹೋಲುತ್ತದೆ. ರಾಮಧಾನ್ಯ ಚರಿತ್ರೆಯನ್ನು ವಿವಿಧ ರೀತಿಯಲ್ಲಿ ಬಣ್ಣಿಸಿದವರಿದ್ದಾರೆ. ಅದಕ್ಕೆ ಅತಿ ಸಾಮಾಜಿಕ, ವರ್ಗ ವಿನ್ಯಾಸವನ್ನು ನೀಡುವುದು ಕಾವ್ಯಗುಣಕ್ಕೆ ಅಪಚಾರವೆಸಗಿದಂತಾದೀತು. ಈ ಕುರಿತಂತೆ ಅಕ್ಕಿ ಶ್ರೀಮಂತರದ್ದು, ರಾಗಿ ಬಡವರದ್ದು ಎಂಬ ವಾದವಿದೆ. ಯಾರದ್ದೇ ಆಗಲಿ, ಬೆಂದ ಮೇಲೆ, ಸುಟ್ಟ ಮೇಲೆ ಎಲ್ಲವೂ ಒಂದೇ.

ಅಂತಹ ತಾರತಮ್ಯವನ್ನು ಕನಕದಾಸರು ಹೊಂದಿದ್ದರೆ ಇತ್ಯರ್ಥಕ್ಕೆ ರಾಮನು ಬೇಕಾಗಿರಲಿಲ್ಲ. ಇದರ ಸಂದರ್ಭವೂ ಕಾಮ್ಯಕವನದಲ್ಲೇ. ರೋಮಶಮುನಿಯ ಬದಲು ಇಲ್ಲಿ ಶಾಂಡಿಲ್ಯ ಮುನಿ. ಕತೆ ಮುಗಿಸಿ ಮುನಿ ತನ್ನಾಶ್ರಮಕ್ಕೆ ತೆರಳುವ ಪ್ರಸಂಗ ಇಲ್ಲೂ ಇದೆ. ಇಷ್ಟಕ್ಕೂ ಕನಕದಾಸರು ಸಂಸಾರಿಯಾಗಿದ್ದವರು. ಹೆತ್ತವರನ್ನು ಕಳೆದುಕೊಂಡರು; ಪತ್ನಿಯನ್ನು ಕಳೆದುಕೊಂಡರು; ಮಗನನ್ನೂ ಕಳೆದುಕೊಂಡರು. ಬಡವರಾಗಿದ್ದು ಆನಂತರ ಒಂದು ಹಂತದ ಶ್ರೀಮಂತಿಕೆ ಬಂದಿತ್ತು. ಅದನ್ನು ಸದ್ವಿನಿಯೋಗಿಸಿದರು. ಇನ್ನು ಲೌಕಿಕ ಬದುಕಿನಲ್ಲಿ ಉಳಿದುದ್ದೇನು? ಸಹಜವಾಗಿಯೇ ಮನಸ್ಸು-ಬುದ್ಧಿ ಸಿನಿಕವಾಗಬೇಕು. ಆದರೆ ಈ ಗೊಂದಲಕ್ಕೆ ತೆರೆ ಬಿದ್ದದ್ದು, ನಿರಾಶೆಯಾಕಳಿಕೆ ಕೊನೆಯಾದದ್ದು ಕಲಿತನದ ಪ್ರವೃತ್ತಿಯಿಂದಲೇ. ಜಗದ ಜಂಜಡಗಳಿಗೆ ಪರಿಹಾರವು ಕಾಗಿನೆಲೆಯ ದೈವಸಾಮೀಪ್ಯದಲ್ಲಿ ಎಂದು ಅನ್ನಿಸಿದರೂ ಬದುಕಿನ ಅನುಭವವು ಜ್ಞಾನದ್ರವ್ಯದೊಂದಿಗೆ ಸೇರಿ ಕಾವ್ಯಸಾನ್ನಿಧ್ಯದ ಶಕ್ತಿಯನ್ನು ಕೊಟ್ಟಿತು.

ಕವಿಯಾದ್ದರಿಂದಲೇ ಕನಕದಾಸರಿಗೆ ‘‘ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು’’ ಎನ್ನಲು ಮತ್ತು ‘‘ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು’’ ಎಂದು ಬರೆಯಲು ಸಾಧ್ಯವಾಯಿತು. ಯಾರೇ ಆಗಲಿ, ಕನಕದಾಸರನ್ನು ತಮ್ಮ ಜಾತಿ-ಮತ-ಪರಂಪರೆಗೆ ಕಟ್ಟಿಹಾಕಲು ಎಷ್ಟೇ ಪ್ರಯತ್ನಿಸಿದರೂ ಅವರನ್ನು ಲೋಕ ತನ್ನದಾಗಿಸಿಕೊಳ್ಳುತ್ತದೆ. ರಾಮ-ಕೃಷ್ಣರನ್ನು ಧರ್ಮದೇವತೆಗಳಾಗಿಸಿದ್ದು ದಶಾವತಾರ ನಾಟಕ ಕಂಪೆನಿಯ ನಾಯಕ ಪಾತ್ರಗಳಾಗಿಸಿದ್ದು ಹಿಂದೂ ಧರ್ಮದ ದೊಡ್ಡ ಅಪರಾಧ. ಅವರು ಎಂದಿದ್ದರೂ ಪೌರಾಣಿಕರೇ; ಕಾವ್ಯಸೃಷ್ಟಿಗಳೇ. ವೈಯಕ್ತಿಕ ನಂಬಿಕೆಗಳಲ್ಲಿ ಅವರು ದೇವರುಗಳಾದರೂ ಸಾಮಾಜಿಕವಾಗಿ ಅವರ ಪಾತ್ರಮೌಲ್ಯಗಳಷ್ಟೇ ಮುಖ್ಯವಾಗುತ್ತವೆ. ಹಾಗೆಯೇ ಕನಕದಾಸರು ಕನ್ನಡ ಸಾಹಿತ್ಯದ ಮತ್ತು ಕವಿಪರಂಪರೆಯ ಮೈಲಿಗಲ್ಲಾಗಬೇಕೇ ವಿನಾ ಮೂರೋ-ನಾಲ್ಕೋ ಮಾರ್ಗಗಳು ಸೇರುವಲ್ಲಿ ಪೂಜೆಗೊಳ್ಳುವ ಗುಡಿಯ ದೈವವಾಗಬಾರದು. ಇದಕ್ಕೆ ಪುಷ್ಟಿನೀಡುವಂತೆ ಅವರಿದ್ದ ಕಾಲವನ್ನು ಗಮನಿಸಿದರೆ ಅದು ಚರಿತ್ರೆಯದ್ದೇ ಹೊರತು ಪುರಾಣದ್ದಲ್ಲ.

ಅವರಿದ್ದ ಕಾಲದಲ್ಲಿ ಭಾರತದಲ್ಲಿ ಇಸ್ಲಾಮ್ ಬೇರುಬಿಟ್ಟಿತ್ತು. ವಚನಕಾರರು ಸೃಷ್ಟಿಸಿದ ಕಾಯಕದ ಸಮಸಮಾಜದ ಧರ್ಮವು ಕುಸಿದು ಅದೊಂದು ಜಾತಿಯಾಗಿತ್ತು. ಧರ್ಮ-ಜಾತಿಗಳ ಆಷಾಢಭೂತಿತನವನ್ನು ಅವರು ನಿರ್ವಿಕಾರವಾಗಿ ಟೀಕಿಸಿದರು. ಗೊಡ್ಡು ಬ್ರಾಹ್ಮಣ್ಯದ ಮಡಿವಂತಿಕೆಯನ್ನೂ ಉದರವೈರಾಗ್ಯವನ್ನೂ ಟೀಕಿಸಿದ್ದು ಮಾತ್ರವಲ್ಲ, ‘‘ಅಲ್ಲಾ ಖುದಾ ಎಂಬ ಅರ್ಥವನು ಅರಿಯದೆ ಮುಲ್ಲ ಶಾಸ್ತ್ರದ ನೆಲೆಯ ಮುನ್ನರಿುದೆ ಕಳ್ಳ ೂಗನೆ ಕೂಗಿ ಬೊಗಳಿ ಬಾಯ್ದೆರೆವಂತ ಕಳ್ಳರಿೆ ತಾ ವೀರಸ್ವರ್ಗ ದೊರಕುವುದೆ? ಲಿಂಗಾಂಗದೊಳಗಿರುವ ಅನುಭವವ ತಿಳಿಯದೆ ಅಂಗ ಲಿಂಗದ ನೆಲೆಯ ಗುರುತರಿಯದೆ ಜಂಗಮ ಸ್ಥಾವರದ ಹೊಲಬನರಿಯದ ಇಂಥ ಭಂಗಿ ುುಕ್ಕುಗಳೆಲ್ಲ ಲಿಂಗವಂತರಹುದೆ’’ ಎಂದು ಹೇಳಿದ್ದು ಅವರ ದಾರ್ಶನಿಕತೆಗೆ ಸಾಕ್ಷಿ.

ಕೇವಲ 5-6 ಶತಮಾನಗಳ ಹಿಂದೆ ಇದ್ದ ವ್ಯಕ್ತಿಯೊಬ್ಬನನ್ನು (ಇಷ್ಟು ಬೇಗ) ದೇವ-ದೇವತೆಯಾಗಿಸಿದರೆ ಹೇಗೆ? ಈ ದೃಷ್ಟಿಯಿಂದ ಪುರಂದರದಾಸರು ಅದೃಷ್ಟಶಾಲಿ. ಅವರು ದಾಸವರೇಣ್ಯರಾದರೇ ಹೊರತು ದೈವ-ದೇವರಾಗಲಿಲ್ಲ; ಅವತಾರಪುರುಷ ರಾಗಲಿಲ್ಲ. ಕನಕರು ನಮ್ಮ ನಡುವೆ ಮನುಷ್ಯರಾಗಿ ಬಾಳಿದವರು; ಉಳಿದವರು. ಅವರನ್ನು ಹಾಗೆಯೇ ಉಳಿಸಿಕೊಂಡರೆ ಅವರು ಲೋಕಶ್ರೇಷ್ಠರಾಗಿಯೇ ಮತ್ತು ವಿವಾದಾತೀತರಾಗಿಯೇ ಇರುತ್ತಾರೆ. ಏಕೆಂದರೆ ಅವರು ಅರಿವಿನ ತಿಮ್ಮಪ್ಪ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)