varthabharthi


ಸಂಪಾದಕೀಯ

ಅಹ್ಮದ್ ಪಟೇಲ್ ಇಲ್ಲದ ಕಾಂಗ್ರೆಸ್

ವಾರ್ತಾ ಭಾರತಿ : 3 Dec, 2020

ಕಾಂಗ್ರೆಸ್ ಬಹುದೊಡ್ಡ ತಿರುವಿನಲ್ಲಿ ನಿಂತುಕೊಂಡಿದೆ. ತಳಸ್ತರದಲ್ಲಿ ಪಕ್ಷವನ್ನು ಸಂಘಟಿಸುವಲ್ಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಈ ಪಕ್ಷ, ಇನ್ನೂ ಗಾಂಧಿ ಕುಟುಂಬವನ್ನೇ ನೆಚ್ಚಿಕೊಂಡಿದೆ. ಪಕ್ಷವನ್ನು ಈವರೆಗೆ ಮುನ್ನಡೆಸಿಕೊಂಡು ಬಂದಿರುವ ಸೋನಿಯಾಗಾಂಧಿ ಸುಸ್ತಾಗಿ ಕೂತಿದ್ದಾರೆ. ಕಾಂಗ್ರೆಸ್‌ನ ಸೋಲಿನ ಮೂಲ ಕಾಂಗ್ರೆಸ್‌ನೊಲಗೇ ಇದೆ. ಸುಮಾರು 70 ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪರೋಕ್ಷವಾಗಿ ಆರೆಸ್ಸೆಸ್‌ನ್ನು ಬೆಳೆಸುತ್ತಾ ತನ್ನ ನಾಶಕ್ಕೆ ತಾನೇ ಯೋಜನೆಗಳನ್ನು ರೂಪಿಸುತ್ತಾ ಬಂತು. ಆರೆಸ್ಸೆಸ್‌ನ ಪರವಾಗಿ ಮೃದು ನಿಲುವನ್ನು ಹೊಂದಿದ್ದ ಕಾಂಗ್ರೆಸ್ ನಾಯಕರು ಅಂದೂ ಇದ್ದರು, ಇಂದೂ ಇದ್ದಾರೆ. ಒಂದೆಡೆ ಬಾಬರಿ ಮಸೀದಿ ಧ್ವಂಸವನ್ನು ಖಂಡಿಸುತ್ತಾ, ಮಗದೊಂದೆಡೆ ರಾಮಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‌ನ ಕೊಡುಗೆಯಿದೆ ಎಂದು ಹೇಳಿಕೊಳ್ಳುತ್ತಾ ಕಾಂಗ್ರೆಸ್ ತನ್ನೊಳಗೆ ಸೈದ್ಧಾಂತಿಕವಾಗಿ ಒಡೆದುಕೊಂಡಿದೆ. ಮುಂದೊಂದು ದಿನ ಕಾಂಗ್ರೆಸ್ ‘ಆರೆಸ್ಸೆಸ್ ಬಿಜೆಪಿಯ ಸೊತ್ತಲ್ಲ, ದೇಶದ ಆಸ್ತಿ’ ಎಂದರೂ ಅಚ್ಚರಿಯಿಲ್ಲ.

ಭಾರತ ಸೇವಾದಲವನ್ನು ಜಾತ್ಯತೀತ ಭಾರತವನ್ನು ಕಟ್ಟುವುದಕ್ಕೆ ಸಮಗ್ರವಾಗಿ ಬಳಸುವ ಅವಕಾಶ ಕಾಂಗ್ರೆಸ್‌ಗಿತ್ತು. ಹೇಗೆ ಬಿಜೆಪಿಗೆ ಆರೆಸ್ಸೆಸ್ ಸೈದ್ಧಾಂತಿಕವಾಗಿ ಬದ್ಧತೆಯುಳ್ಳ ಕಾರ್ಯಕರ್ತರನ್ನು ನೀಡುತ್ತಾ ಬಂತೋ ಹಾಗೆಯೇ ಸೇವಾದಲದ ಮೂಲಕ ಸೈದ್ಧಾಂತಿಕವಾಗಿ ಬದ್ಧರಾಗಿರುವ ಕಾರ್ಯಕರ್ತರನ್ನು ಕಟ್ಟುವ ಅವಕಾಶ ಕಾಂಗ್ರೆಸ್‌ಗೂ ಇತ್ತು. ಆದರೆ ಸೋಮಾರಿಗಳು, ಅಧಿಕಾರ ಲಾಲಸಿಗಳೂ ಆಗಿರುವ ನಾಯಕರಿಂದಾಗಿ ಕಾಂಗ್ರೆಸ್ ಇಂದು ಕಾರ್ಯಕರ್ತರಿಲ್ಲದ ‘ನಾಯಕರ ಪಕ್ಷ’ವಾಗಿ ಅಳಿವಿನಂಚಿನಲ್ಲಿದೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್‌ನ್ನು ಕಟ್ಟಿನಿಲ್ಲಿಸಲು ಶ್ರಮಿಸಿದ ಅಹ್ಮದ್ ಪಟೇಲ್ ನಿಧನ ಒಂದು ರೂಪಕದಂತಿದೆ. ಪ್ರಧಾನಿ ನರೇಂದ್ರ ಮೋದಿಯೇ ಅಹ್ಮದ್ ಪಟೇಲರ ಪಕ್ಷ ಸಂಘಟನೆಯ ಸಾಮರ್ಥ್ಯವನ್ನು ಶ್ಲಾಘಿಸುತ್ತಾರೆ ಎನ್ನುವುದೇ ಕಾಂಗ್ರೆಸ್ ನಿಜಕ್ಕೂ ಕಳೆದುಕೊಂಡದ್ದು ಏನು ಎನ್ನುವುದನ್ನು ಅರ್ಥ ಮಾಡಿಸುತ್ತದೆ.

ಕಾಂಗ್ರೆಸ್ ಪಕ್ಷದೊಳಗಿನ ನಿರಂತರವಾದ ದ್ವಂದ್ವಗಳಿಗೆ ಪಟೇಲ್ ಅವರು ಸಾಕ್ಷಿ ಮಾತ್ರವಲ್ಲ ಬಲಿಪಶು ಕೂಡಾ ಆಗಿದ್ದರು. ಪಕ್ಷದಲ್ಲಿನ ಗುಂಪುಗಾರಿಕೆ, ಬಂಡಾಯ ಹಾಗೂ ವೈಯಕ್ತಿಕ ದ್ವೇಷಗಳಿಗೆ ಮಣಿಯುವ ಬದಲು, ಅವರು ತಾನೇ ಸುಧಾರಣೆಗೊಳ್ಳುವುದನ್ನು ಕಲಿತರು ಹಾಗೂ ಅತ್ಯುನ್ನತ ಮಟ್ಟದ ಕಾರ್ಯನಿರ್ವಹಣೆಯಲ್ಲಿ ಪರಿಪಕ್ವವನ್ನು ಸಾಧಿಸಿದರು. 1984ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಅಧಿಕಾರಕ್ಕೇರಿದ ರಾಜೀವ್‌ಗಾಂಧಿ ಅವರು ಅರುಣ್‌ಸಿಂಗ್, ಅಹ್ಮದ್ ಪಟೇಲ್ ಹಾಗೂ ಆಸ್ಕರ್ ಫೆರ್ನಾಂಡಿಸ್ ಅವರನ್ನೊಳಗೊಂಡ ಸಂಸದೀಯ ಕಾರ್ಯದರ್ಶಿಗಳ ತಂಡದೊಂದಿಗೆ ಆಡಳಿತದಲ್ಲಿ ಹೊಸ ಪ್ರಯೋಗಕ್ಕೆ ಪ್ರಯತ್ನಿಸಿದರು. ಈ ತಂಡ ರಾಜೀವ್ ಗಾಂಧಿಯವರ ‘ಅಮರ್, ಅಕ್ಬರ್, ಆ್ಯಂಟನಿ’ ಎಂದೇ ರಾಜಕೀಯ ವಲಯಗಳಲ್ಲಿ ಬಣ್ಣಿಸಲ್ಪಟ್ಟಿತ್ತು. ಈ ತಂಡದ ಮೂಲಕ ನೂತನ ಪ್ರಧಾನಿಯು ಯುವ ತಲೆಮಾರಿನ ರಾಜಕೀಯ ಧ್ವನಿಗಳಿಗೆ ನಾಂದಿ ಹಾಡಲಿದ್ದಾರೆಂಬ ಸಂಕೇತವನ್ನು ನೀಡಿದ್ದರು. ಆದರೆ ಪಕ್ಷದ ಹಿರಿಯ ತಲೆಮಾರಿನೊಂದಿಗಿನ ಬಿಕ್ಕಟ್ಟಿನಲ್ಲಿ ಸ್ವತಃ ರಾಜೀವ್ ಗಾಂಧಿಯವರೇ ಸಿಲುಕಿಕೊಂಡಾಗ, ಈ ರಾಜಕೀಯ ಪ್ರಯೋಗವು ಪರ್ಯಾವಸಾನಗೊಂಡಿತು. ಆದರೆ ರಾಜೀವ್ ಗಾಂಧಿಯವರು, ಯುವಕರಾಗಿದ್ದ ಅಹ್ಮದ್ ಪಟೇಲ್ ಅವರ ರಾಜಕೀಯ ನಿರ್ವಹಣಾ ಚಾತುರ್ಯದಲ್ಲಿ ಭರವಸೆಯಿಟ್ಟಿದ್ದರು.

ಭರೂಚ್ ಮೂಲದ ಅಹ್ಮದ್ ಪಟೇಲ್‌ರನ್ನು ಅವರು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಆ ಸಮಯದಲ್ಲಿ ಗುಜರಾತ್ ಕಾಂಗ್ರೆಸ್‌ನಲ್ಲಿ ಮಾಧವಸಿನ್ಹಾ ಸೋಲಂಕಿ, ಜಿನ್ಹಾಬಾಯಿ ದಾರ್ಜಿ, ಸನತ್ ಮೆಹ್ತಾ, ಅಮರಸಿನ್ಹಾ ಚೌಧರಿ ಹಾಗೂ ಪ್ರಭೋದ್ ರಾವಲ್ ಅವರಂತಹ ಹಿರಿಯ ನಾಯಕರಿದ್ದರು. ಅಹ್ಮದ್ ಪಟೇಲ್‌ರನ್ನು ಈ ಹಿರಿಯ ನಾಯಕರು ಸಹಿಸಿದ್ದರಾದರೂ, ಅವರಿಗೆ ಗೌರವ ನೀಡುತ್ತಿರಲಿಲ್ಲ. ಗುಜರಾತ್ ಕಾಂಗ್ರೆಸ್ ನಾಯಕರಲ್ಲಿ ವ್ಯಾಪಕವಾಗಿದ್ದ ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ ಪಕ್ಷವು ಯಾವ ಬೆಲೆಯನ್ನು ತೆರಬೇಕಾಗಿ ಬರಲಿದೆಯೆಂದು ಅಹ್ಮದ್ ಪಟೇಲ್‌ರಿಗೆ ಆ ಹೊತ್ತಿಗಾಗಲೇ ಮನದಟ್ಟಾಗಿತ್ತು. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆಯ ಪ್ರತ್ಯಕ್ಷ ಅನುಭವವಾಗಿದ್ದ ಪಟೇಲ್‌ರಿಗೆ ಅದು ತನ್ನದೇ ಆದ ಕಾರ್ಯನಿರ್ವಹಣಾ ತತ್ವವೊಂದನ್ನು ರೂಪಿಸಲು ನೆರವಾಯಿತು. ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವ ಯಾರನ್ನೇ ಆಗಲಿ ಅಥವಾ ಯಾವುದನ್ನೇ ಆಗಲಿ ದೂರವಿಡಬೇಕೆಂದು ಅವರು ಭಾವಿಸಿದ್ದರು. ತನ್ನ ಕೊನೆಗಾಲದವರೆಗೂ ಅವರು ಆ ವಿಚಾರಧಾರೆಯಲ್ಲೇ ಬದುಕಿದರು.

  ಬಾಬರಿ ಮಸೀದಿ ಧ್ವಂಸ ಘಟನೆಯ ಬಳಿಕ ಕಳೆಗುಂದಿದ್ದ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಮರುಸ್ಥಾಪಿಸಲು ಅಹ್ಮದ್ ಪಟೇಲ್ ಶ್ರಮಿಸಿದರು. ಆಗಿನ ಕಾಂಗ್ರೆಸ್ ಸರಕಾರದಲ್ಲಿ ಪ್ರಧಾನಿಯಾಗಿದ್ದ ಪಿ. ವಿ. ನರಸಿಂಹರಾವ್ ಅವರನ್ನು ಪದಚ್ಯುತಗೊಳಿಸುವಂತೆ ಅರ್ಜುನ್‌ಸಿಂಗ್, ನಟವರ್ ಸಿಂಗ್, ಎಂ. ಎಲ್. ಫೋತೆದಾರ್, ಶಿವಶಂಕರ್ ಹಾಗೂ ಶೀಲಾ ದೀಕ್ಷಿತ್ ಮತ್ತಿತರ ಕಾಂಗ್ರೆಸ್ ನಾಯಕರ ಗುಂಪೊಂದು ಬಯಸಿತ್ತು. ಆದರೆ ಪಟೇಲ್ ಅವರ ನಿಲುವು ಸ್ಪಷ್ಟವಾಗಿತ್ತು. ಭಾರತದ ಗಣರಾಜ್ಯವು ಕೋಮುವಾದಿ ಶಕ್ತಿಗಳ ಪ್ರಹಾರಕ್ಕೊಳಗಾಗಿರುವಾಗ ಕಾಂಗ್ರೆಸ್ ಪಕ್ಷವು ಅಂತಃಕಲಹದಲ್ಲಿ ತೊಡಗುವುದಕ್ಕೆ ಸಮಯ ವ್ಯರ್ಥಮಾಡಕೂಡದೆಂದವರು ಬಲವಾಗಿ ನಂಬಿದ್ದರು. ನರಸಿಂಹರಾವ್ ವಿರೋಧಿ ಬಣಕ್ಕೆ ಸೇರ್ಪಡೆಯಾಗಲು ಪಟೇಲ್ ಅವರು ನಿರಾಕರಿಸಿದ್ದುದು, ಅವರಿಗೆ ಕಾಂಗ್ರೆಸ್‌ನಲ್ಲಿ ಹೊಸ ಗೌರವವನ್ನು ತಂದುಕೊಟ್ಟಿತ್ತು.ನರಸಿಂಹರಾವ್ ವಿರೋಧಿ ಪಾಳಯದಲ್ಲಿ ನೇರವಾಗಿ ಸೋನಿಯಾಗಾಂಧಿ ಗುರುತಿಸಿಕೊಂಡಿರಲಿಲ್ಲ. ಆದರೆ ಸಮಯ ಬಂದಾಗ, ನರಸಿಂಹರಾವ್ ಹಾಗೂ ಸೀತಾರಾಮ ಕೇಸರಿ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಮುಖ ಕಚೇರಿಯಿಂದ ದೂರವಿಡುವಲ್ಲಿ ಅಹ್ಮದ್ ಪಟೇಲ್‌ರನ್ನು ಅಸ್ತ್ರವಾಗಿ ಬಳಸಿಕೊಂಡರು.

ಅಹ್ಮದ್ ಪಟೇಲ್ ಅವರ ಹಿರಿಮೆಯೆಂದರೆ, ತನ್ನ ವೈಯಕ್ತಿಕ ರಾಜಕೀಯ ಬೆಳವಣಿಗೆಯ ಕುರಿತು ಮಹತ್ವಾಕಾಂಕ್ಷೆಯನ್ನು ಹೊಂದಿದವರಾಗಿರಲಿಲ್ಲ. ಅವರು ಯಾವತ್ತೂ ಹಿನ್ನೆಲೆಯಲ್ಲಿದ್ದುಕೊಂಡು ಪಕ್ಷದ ಹಿತಕ್ಕಾಗಿ ಶ್ರಮಿಸುತ್ತಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸರಕಾರಿ ಸತ್ಕಾರ ಕೂಟಗಳಲ್ಲಿ ಆಗಲಿ ಅಥವಾ ಹೈದರಾಬಾದ್ ಹೌಸ್‌ನಲ್ಲಿ ನಡೆಯುವ ಭೋಜನ ಕೂಟಗಳಲ್ಲಾಗಲಿ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಸಂಪುಟ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರಾದರೂ, ಪ್ರಮಾಣವಚನ ಕಾರ್ಯಕ್ರಮಗಳಿಂದ ದೂರವಿರುತ್ತಿದ್ದರು. ಅವರಿಗೆ ಯಾವುದೇ ಸ್ವಯಂ ಆಕಾಂಕ್ಷೆಗಳಿರಲಿಲ್ಲ.

ಅಹ್ಮದ್ ಪಟೇಲ್ ಅವರದು ಎಲ್ಲರಿಗೂ ತಲುಪಬಲ್ಲಂತಹ ವ್ಯಕ್ತಿತ್ವವಾಗಿತ್ತು. ಸಾಮಾಜಿಕ ವ್ಯಕ್ತಿಗಳಿರಲಿ ಅಥವಾ ಧಾರ್ಮಿಕ ಪಂಗಡಗಳ ನಾಯಕರಿರಲಿ ಅಥವಾ ಕೈಗಾರಿಕಾ ಮುಖಂಡರಿರಲಿ ಇಲ್ಲವೇ ಪಕ್ಷದ ಕಾರ್ಯಕರ್ತರಿರಲಿ ಎಲ್ಲರಿಗೂ ಅಹ್ಮದ್ ಪಟೇಲ್ ಸಂಪರ್ಕಕ್ಕೆ ಸಿಗುತ್ತಿದ್ದರು. ಅವರಿಗೆ ವೈಯಕ್ತಿಕವಾಗಿ ಯಾವುದೇ ಪ್ರಲೋಭನೆಗಳಿರಲಿಲ್ಲ ಹಾಗೂ ಅತ್ಯಂತ ವಿಶ್ವಸನೀಯರಾಗಿದ್ದರು. ಎಲ್ಲಾ ರಾಜಕೀಯ ವಿಭಜನೆಗಳನ್ನು ಮೀರಿ ಅವರು ನಾಯಕರು ಹಾಗೂ ಪಕ್ಷಗಳೊಂದಿಗೆ ಅತ್ಯಂತ ವಿಶ್ವಸನೀಯ ಹಾಗೂ ಪರಿಣಾಮಕಾರಿ ಸಂಧಾನಕಾರರಾಗಿದ್ದರು. ಹೀಗಾಗಿ ಯುಪಿಎ ಆಡಳಿತದ ಅವಧಿಯಲ್ಲಿ ಪಕ್ಷದ ರಾಷ್ಟ್ರೀಯ ವ್ಯವಹಾರಗಳನ್ನು ನಿಭಾಯಿಸಿದ ಕೋರ್ ಗ್ರೂಪ್‌ನ ಅವಿಭಾಜ್ಯ ಅಂಗ ಅವರಾಗಿದ್ದರು.

ಅಧಿಕಾರದಾಸೆಗಾಗಿ ಗಾಳಿಬಂದ ದಿಕ್ಕಿನಲ್ಲಿ ತೂರಿಕೊಳ್ಳುವ ರಾಜಕಾರಣಿಗಳೇ ವಿಜೃಂಭಿಸುತ್ತಿರುವ ಈಗಿನ ದಿನಗಳಲ್ಲಿ ಅಹ್ಮದ್ ಪಟೇಲ್ ವಿಭಿನ್ನವಾಗಿ ಕಾಣುತ್ತಾರೆ. ಕಳೆದ ಮೂರು ದಶಕಗಳಿಂದ ಅವರು ಸರಳವಾದ 23 ವೆಲಿಂಗ್ಟನ್ ಕ್ರೆಸೆಂಟ್ (ಮದರ್ ಥೆರೇಸಾ ಕ್ರೆಸೆಂಟ್)ನಲ್ಲಿ ನಿವಾಸದಲ್ಲೇ ವಾಸವಾಗಿದ್ದರು. ಯುಪಿಎ ಅಧಿಕಾರದಲ್ಲಿದ್ದಾಗ ಅವರು ಅಕ್ಬರ್ ರಸ್ತೆಯಲ್ಲಿರುವ ವಿಲಾಸಿ ಬಂಗಲೆಗಳಿಗಾಗಿ ಬೇಡಿಕೆ ಸಲ್ಲಿಸಬಹುದಾಗಿತ್ತು. ಆದರೆ ಅಂತಹ ಸಣ್ಣತನವನ್ನು ಅವರು ಯಾವತ್ತೂ ತೋರಲಿಲ್ಲ.

ಸೋನಿಯಾ ಗಾಂಧಿ ತನ್ನ ರಾಜಕೀಯ ಪ್ರವೇಶದ ಆರಂಭದ ವರ್ಷಗಳಲ್ಲಿ ಆಹ್ಮದ್ ಪಟೇಲ್ ಬಗ್ಗೆ ಅಷ್ಟೇನೂ ಉತ್ತಮವಾದ ಬಾಂಧವ್ಯವನ್ನು ಹೊಂದಿರಲಿಲ್ಲವಾದರೂ, ಕ್ರಮೇಣ ಈ ಮುತ್ಸದ್ದಿಯ ತೀರ್ಮಾನ, ಸಲಹೆ ಹಾಗೂ ಚತುರತೆಯನ್ನು ಮನಗಂಡರು. ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನ ದೀರ್ಘಾವಧಿಯ ಅಧ್ಯಕ್ಷೆಯಾಗಿ ಸೋನಿಯಾ ಉಳಿದುಕೊಂಡಿದ್ದುದಕ್ಕೆ ಅಹ್ಮದ್ ಪಟೇಲ್ ಅವರೇ ಏಕೈಕ ಕಾರಣವಾಗಿದ್ದಾರೆ. ಸೋನಿಯಾ ಅವರಂತೆ ರಾಹುಲ್ ಮತ್ತು ಪ್ರಿಯಾಂಕಾ ಅಹ್ಮದ್ ಪಟೇಲರ ಹಿರಿತನವನ್ನು ಗೌರವಿಸುತ್ತಿರಲಿಲ್ಲ. ಅಂತಿಮ ದಿನಗಳಲ್ಲಿ ಅಹ್ಮದ್ ಪಟೇಲ್ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದರು. ಜೊತೆಗೇ ಕಾಂಗ್ರೆಸ್ ಕೂಡ ಮೂಲೆಗುಂಪಾಗುತ್ತಾ ಬಂತು. ಇದೀಗ ಅವರು ನಿಧನರಾಗಿದ್ದಾರೆ. ಸೋನಿಯಾ ಗಾಂಧಿಯವರಿಗೆ ವಯಸ್ಸಾಗಿದೆ ಹಾಗೂ ಅನಾರೋಗ್ಯ ಕೂಡಾ ಎಡೆಬಿಡದೆ ಕಾಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಡೆಸಲು ಅಹ್ಮದ್ ಪಟೇಲ್‌ಗೆ ಸರಿಸಾಟಿಯಾದಂತಹ ಇನ್ನೋರ್ವ ವ್ಯಕ್ತಿ ಕಾಣಸಿಗುತ್ತಿಲ್ಲ. ಪಟೇಲ್ ಜೊತೆಗೆ ಕಾಂಗ್ರೆಸ್ ಪಕ್ಷದ ಇತಿಹಾಸದ ಒಂದು ಅಧ್ಯಾಯ ಕೊನೆಗೂ ಮುಕ್ತಾಯಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)