varthabharthi


ಬೆಂಗಳೂರು

ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷಾ ನಿಧನ

ವಾರ್ತಾ ಭಾರತಿ : 3 Dec, 2020

ಬೆಂಗಳೂರು, ಡಿ.3: ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಝಮೀರ್ ಪಾಷಾ(67) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ 9:30ರ ಸುಮಾರಿಗೆ ಶಾಂತಿ ನಗರದ ರಿಚ್ಮಂಡ್ ಟೌನ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಝಮೀರ್ ಪಾಷಾ, ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಝಮೀರ್ ಪಾಷ ಅವರು ಕೋಲಾರ ಜಿಲ್ಲಾಧಿಕಾರಿಯಾಗಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.

ಸೇವೆಯಿಂದ ನಿವೃತ್ತರಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ರಾಜಕಾರಣದಲ್ಲಿಯೂ ಅವರು ಸಕ್ರಿಯವಾಗಿದ್ದರು. ಅಲ್ಲದೇ, ಸದಾಯೆ ಇತ್ತೇಹಾದ್ ಎಂಬ ಸಾಮಾಜಿಕ ಸೇವಾ ಸಂಘಟನೆ ಸ್ಥಾಪಿಸಿ ಕೋಮು ಸೌಹಾರ್ದಕ್ಕೂ ಶ್ರಮಿಸುತ್ತಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಶಾಂತಿ ನಗರದಲ್ಲಿರುವ ಈದ್ಗಾ ಬಿಲಾಲ್‌ನ  ಖಬರಸ್ಥಾನ್‌ನಲ್ಲಿ ಮೃತರ ದಫನ ಕಾರ್ಯ ನೆರವೇರಿಸಲಾಯಿತು.

ಸೈಯದ್ ಝಮೀರ್ ಪಾಷಾ 34 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕ, ಕೃಷಿ ಮಾರುಕಟ್ಟೆ ಆಯುಕ್ತ, ಕೋಲಾರ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಳೆಯೆ ವೋಲ್ವೊ, ಸ್ಕ್ಯಾನಿಯಾ, ಬೆಂಝ್ ಸಂಸ್ಥೆಯ ಬಸ್ಸುಗಳನ್ನು ಬಿಎಂಟಿಸಿಗೆ ಸೇರ್ಪಡೆ ಮಾಡುವಲ್ಲಿ ಝಮೀರ್ ಪಾಷ ಯಶಸ್ವಿಯಾಗಿದ್ದರು. ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಸುಮಾರು 16 ಪ್ರಶಸ್ತಿಗಳು ಇವರ ಅಧಿಕಾರ ಅವಧಿಯಲ್ಲಿ ಬಿಎಂಟಿಸಿಗೆ ಸಲ್ಲಿಕೆಯಾಗಿದ್ದವು. ಬೆಂಗಳೂರು ನಗರದಲ್ಲಿ ಬಸ್ಸು ನಿಲ್ದಾಣಗಳ ಆಧುನೀಕರಣ ಕಾರ್ಯಕ್ಕೆ ಕಾರಣೀಕರ್ತರಾಗಿದ್ದರು. 2012ರಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿಗೂ ಝಮೀರ್ ಪಾಷ ಭಾಜನರಾಗಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಆಯುಕ್ತರಾಗಿದ್ದ ವೇಳೆ ರೈತರ ಸಂತೆ ರಚನೆ, ಎಪಿಎಂಸಿಗಳಲ್ಲಿ ಗಣಕೀಕರಣ ವ್ಯವಸ್ಥೆ ಜಾರಿಗೆ ತಂದು ಆಧುನೀಕರಣಗೊಳಿಸಿದ್ದರು. ಇಡೀ ರಾಜ್ಯವನ್ನೆ ತಲ್ಲಣಗೊಳಿಸಿದ್ದ ಕಂಬಾಲ ಪಲ್ಲಿ ದುರಂತದ ವೇಳೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಝಮೀರ್ ಪಾಷ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸೈಯದ್ ಝಮೀರ್ ಪಾಷ, ಬೆಂಗಳೂರಿನಲ್ಲಿರುವ ಹಜ್ ಭವನ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲು ಶ್ರಮಿಸಿದ್ದರು. ಐಎಎಸ್

ಸೇವೆಯಿಂದ ನಿವೃತ್ತರಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ರಾಜಕಾರಣದಲ್ಲೂ ಸಕ್ರಿಯವಾಗಿದ್ದ ಝಮೀರ್ ಪಾಷ, ಸದಾಯೆ ಇತ್ತೇಹಾದ್ ಎಂಬ ಸಾಮಾಜಿಕ ಸೇವಾ ಸಂಘಟನೆ ಸ್ಥಾಪಿಸಿ ಕೋಮು ಸೌಹಾರ್ದಕ್ಕೂ ಶ್ರಮಿಸುತ್ತಿದ್ದರು. ಕರ್ನಾಟಕ ಮುಸ್ಲಿಮ್ ಕೋ ಆರ್ಡಿನೇಶನ್ ಸಮಿತಿ(ಕೆಎಂಸಿಸಿ)ಯ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಾಮಾಜಿಕ ಸಂಘಟನೆಗಳ ಜೊತೆ ಒಡನಾಟವಿಟ್ಟುಕೊಂಡಿದ್ದರು. ಶಾಸಕರಾಗಿ ವಿಧಾನಸಭೆ ಪ್ರವೇಶಿಸಬೇಕೆಂಬ ಆಶಯ ಹೊಂದಿದ್ದ ಝಮಿರ್ ಪಾಷ, 2018ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಶಾಸಕ ಎನ್.ಎ.ಹಾರಿಸ್, ಜೆಡಿಎಸ್ ಮುಖಂಡ ಸೈಯದ್ ಶಫೀಉಲ್ಲಾ ಸೇರಿದಂತೆ ಇನ್ನಿತರ ಮುಖಂಡರು ಝಮೀರ್ ಪಾಷ ಅವರ ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)