varthabharthi


ವಿಶೇಷ-ವರದಿಗಳು

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ, ಫೋಟೊ ಹಂಚಿಕೆ

ರಾಜ್ಯಾದ್ಯಂತ ಶಾಲೆ ಆರಂಭಕ್ಕೆ ಮಕ್ಕಳ ವಿಭಿನ್ನ ಅಭಿಯಾನ!

ವಾರ್ತಾ ಭಾರತಿ : 3 Dec, 2020

ಮಂಗಳೂರು, ಡಿ.2: ಕೊರೋನ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂಭತ್ತು ತಿಂಗಳಿನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಾ, ಮೊಬೈಲ್ ಫೋನ್‌ಗಳಲ್ಲಿ ಆನ್‌ಲೈನ್ ತರಗತಿಗಳಿಂದ ಬೇಸತ್ತಿರುವ ರಾಜ್ಯದ ವಿದ್ಯಾರ್ಥಿಗಳನೇಕರು ವೀಡಿಯೊ ಸಂದೇಶಗಳ ಮೂಲಕ ಶಾಲೆ ಆರಂಭಕ್ಕೆ ಸರಕಾರಕ್ಕೆ ಒತ್ತಾಯಿಸುವ ಅಭಿಯಾನ ಆರಂಭಿಸಿದ್ದಾರೆ. ಮುಖ್ಯವಾಗಿ ಸರಕಾರಿ ಶಾಲಾ ಮಕ್ಕಳೇ ಈ ಅಭಿಯಾನದ ಮುಂಚೂಣಿಯಲ್ಲಿರುವುದು ವಿಶೇಷವಾಗಿದೆ.

ತಮ್ಮ ಪೋಷಕರು ಹಾಗೂ ಶಿಕ್ಷಕರ ನೆರವಿನೊಂದಿಗೆ ಮೊಬೈಲ್ ಫೋನ್‌ಗಳಲ್ಲಿ ಕೆಲ ವಿದ್ಯಾರ್ಥಿಗಳು ಶಾಲೆ ಆರಂಭವಾಗದೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ವೀಡಿಯೊ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಸಂಕಷ್ಟಗಳನ್ನು ಅರಿತು ಶಾಲೆ ಆರಂಭಿಸಬೇಕೆಂಬ ಒತ್ತಾಸೆಯನ್ನು ಸರಕಾರಕ್ಕೆ ತಲುಪಿಸುವ ವಿನೂತನ ಪ್ರಯೋಗವಾಗಿ ಈ ಅಭಿಯಾನ ನಡೆಯುತ್ತಿದೆ.

ಕಳೆದ ಮೂರು ದಿನಗಳಿಂದೀಚೆಗೆ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಯಾದಗಿರಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಾಮರಾಜ ನಗರ, ಬೆಂಗಳೂರು ನಗರ, ಬಳ್ಳಾರಿ, ರಾಯಚೂರು, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಂದ ಬುಧವಾರ ಮಧ್ಯಾಹ್ನದ ವೇಳೆಗೆ 150ಕ್ಕೂ ಅಧಿಕ ವೀಡಿಯೊಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೆಯಾಗುತ್ತಿದೆ. ವೀಡಿಯೊಗಳ ಜೊತೆಯಲ್ಲೇ ವಿದ್ಯಾರ್ಥಿಗಳು ತಮ್ಮ ಶಾಲೆಯ ಗೇಟ್‌ನ ಎದುರು ಶಾಲೆ ಆರಂಭಿಸಬೇಕೆಂಬ ಭಿತ್ತಿಪತ್ರಗಳನ್ನು ಹಿಡಿದ ಫೋಟೊಗಳ ಮೂಲಕ ಶಾಲೆ ಆರಂಭಿಸಲು ಸರಕಾರವನ್ನು ನಿವೇದಿಸಿಕೊಳ್ಳುತ್ತಿದ್ದಾರೆ.

ಮಕ್ಕಳಿಗೆ ಶಾಲೆಗಳಲ್ಲಿಯೇ ಸಾಮಾನ್ಯ ತರಗತಿಗಳನ್ನು ಆರಂಭಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಹಲವಾರು ಸಮಯದಿಂದ ಒತ್ತಾಯ ಮಾಡುತ್ತಿರುವ ಶಿಕ್ಷಣ ತಜ್ಞರಾದಂತಹ ಡಾ.ನಿರಂಜನಾರಾಧ್ಯ, ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮೊದಲಾದವರು ಕೂಡಾ ಮಕ್ಕಳ ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಿ ಬಲ ತುಂಬುತ್ತಿ ದ್ದಾರೆ. ಮಕ್ಕಳ ಈ ವಿಭಿನ್ನ ಅಭಿಯಾನಕ್ಕೆ ಬೆಂಬಲ ನೀಡುವ ಸಲುವಾಗಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಕೂಡಾ ಮಕ್ಕಳ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳಲು ಫೇಸ್‌ಬುಕ್ ಪೇಜ್ ತೆರೆಯಲು ಮುಂದಾಗಿದೆ.

‘‘ಶಿಕ್ಷಕರ ಅನುಪಸ್ಥಿತಿಯಲ್ಲಿ ಪಾಠದ ವಿಷಯಗಳನ್ನು ಗ್ರಹಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಕಾರ್ಯಕ್ರಮ ವೀಕ್ಷಿಸಿದ ಬಳಿಕ ನನಗೆ ಸಾಕಷ್ಟು ಅನುಮಾನಗಳಿರುತ್ತವೆ. ಆದರೆ ಅದನ್ನು ಪರಿಹರಿಸಲು ಯಾರೂ ಇಲ್ಲ. ಹಾಗಾಗಿ ಶಾಲೆ ಪುನರಾಂಭಿಸುವ ಮೂಲಕ ನನ್ನ ಸಮಸ್ಯೆಯನ್ನು ಬಗೆಹರಿಸಿ’’ ಎಂದು ವೀಡಿಯೊದಲ್ಲಿ 10ನೇ ತರಗತಿಯ ರಾಯಚೂರಿನ ವಿದ್ಯಾರ್ಥಿ ವೆಂಕಟೇಶ್ ಮನವಿ ಮಾಡಿದ್ದಾನೆ.

‘‘ಕೊರೋನ ಭೀತಿಯಲ್ಲಿ ಸಭೆ ಸಮಾರಂಭಗಳು ನಡೆಯುತ್ತಿವೆ. ಆದರೆ, 100ಕ್ಕಿಂತಲೂ ಕಡಿಮೆ ಇರುವ ಸರಕಾರಿ ಶಾಲೆಗಳು ಯಾಕೆ ತೆರೆಯುತ್ತಿಲ್ಲ. ನಾವೇನು ಅಪರಾಧಿಗಳೇ? ನಮಗೂ ಹಕ್ಕುಗಳಿಲ್ಲವೇ?’’ ಎಂದು ಸುಳ್ಯದ ವಿದ್ಯಾರ್ಥಿನಿಯೊಬ್ಬರು ವೀಡಿಯೊ ಮೂಲಕ ಪ್ರಶ್ನಿಸುತ್ತಿದ್ದರೆ, ಪುತ್ತೂರು ತಾಲೂಕಿನ 5ನೇ ತರಗತಿಯ ವಿದ್ಯಾರ್ಥಿಯೊಬ್ಬ, ‘‘ಪಾಠವೆಲ್ಲಾ ವಾಟ್ಸ್‌ಆ್ಯಪ್‌ನಲ್ಲಿ ಮಾಡಲಾಗುತ್ತಿದೆ. ಅದು ನನ್ನ ತಲೆಗೇ ಹತ್ತುತ್ತಿಲ್ಲ. ಶಾಲೆಯಲ್ಲಿ ಆಟ ಪಾಠದೊಂದಿಗೆ ನಮಗೆ ಪಾಠ ಅರ್ಥವಾಗುತ್ತಿತ್ತು. ಏನಾದರೂ ಸಮಸ್ಯೆ, ಅನುಮಾನವಿದ್ದಾಗ ಶಿಕ್ಷಕರಲ್ಲಿ ಮುಖಾಮುಖಿಯಾಗಿ ಮಾತನಾಡಲು ಅವಕಾಶವಿತ್ತು. ಈಗ ಅಂತಹ ವ್ಯವಸ್ಥೆ ಇಲ್ಲ. ಶಾಲೆ ಆರಂಭಿಸಿ’’ ಎಂದು ಸರಕಾರಕ್ಕೆ ಮನವಿ ಮಾಡಿದ್ದಾನೆ.

ಕೊರೋನದಿಂದ ಶಾಲೆಗಳು ಮುಚ್ಚಿ ಸುಮಾರು ಎಂಟು ತಿಂಗಳುಗಳೇ ಕಳೆದಿವೆ. ಸರಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಬಿಸಿಯೂಟದ ವ್ಯವಸ್ಥೆಯೂ ಇರುತ್ತಿತ್ತು. ಇದರಿಂದ ಕೂಲಿ, ಬಡ ಕುಟುಂಬಗಳ ಅದೆಷ್ಟೋ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಸಾಧ್ಯವಾಗಿತ್ತು. ಆದರೆ ಇದೀಗ ಕೊರೋನ ನೆಪದಲ್ಲಿ ಇನ್ನೂ ಶಾಲೆ ಆರಂಭಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಕೊರೋನ ತೀವ್ರವಾಗಿದ್ದ ಜೂನ್, ಜುಲೈ ತಿಂಗಳಲ್ಲಿ ಹಠಕ್ಕೆ ಬಿದ್ದು ಎಸೆಸೆಲ್ಸಿ ಪರೀಕ್ಷೆ ಮಾಡಿರುವ ಸರಕಾರ ಇದೀಗ ಕೊರೋನ ಇಳಿಮುಖವಾಗುತ್ತಿದ್ದರೂ ಶಾಲೆ ಆರಂಭಿಸಲು ಮನಸ್ಸು ಮಾಡದಿರುವುದು ಸೋಜಿಗದ ಸಂಗತಿ. ಶಾಲೆ ಇಲ್ಲದೆ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುವ, ಚಂದನ ಟಿವಿಯಲ್ಲಿ ಪ್ರಸಾರವಾಗುವ ಪಾಠ ಅರ್ಥವಾಗದೆ ಸಂಕಟ ಪಡುತ್ತಿರುವ ವಿದ್ಯಾರ್ಥಿಗಳ ವೇದನೆ ಬಗ್ಗೆ ಸರಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಕೊರೋನದಿಂದಾಗಿ ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪೋಷಕರಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾದ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಖರೀದಿ ಹೊರೆಯಾಗಿದೆ. ಇದಕ್ಕೆಲ್ಲಾ ಪರಿಹಾರ ಶಾಲೆ ಆರಂಭಿಸುವುದು. ಪೋಷಕರು ಒಪ್ಪುತ್ತಿಲ್ಲ ಎನ್ನುವ ಸಚಿವರ ಮಾತುಗಳಿಗೆ ವಿರುದ್ಧವಾಗಿ ಶಾಲೆ ತೆರೆಯಬೇಕೆಂಬ ನಿವೇದನೆ, ಮನವಿಯನ್ನು ವಿದ್ಯಾರ್ಥಿಗಳೇ ವೀಡಿಯೊ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಜ್ಯೋತಿ ಕೆ.,

ರಾಜ್ಯ ಅಧ್ಯಕ್ಷರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿ ದಂತೆ ಮಕ್ಕಳ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಸಂಬಂಧಿಸಿದವರಲ್ಲಿಯೇ ಸಮಾಲೋಚನೆ ನಡೆಸಬೇಕು. ಅವರ ವಯಸ್ಸು, ಪ್ರಬುದ್ಧತೆಯನ್ನು ಗೌರವಿಸಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಆದರೆ, ಸರಕಾರ ಮಾತ್ರ ಈವರೆಗೆ ಮಕ್ಕಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಮಕ್ಕಳ ಸಂಕಷ್ಟಗಳನ್ನು ಆಲಿಸಿಲ್ಲ. ಪೋಷಕರ ನಿಲುವು ಪಡೆಯಲು ಎಲ್ಲ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಎಸ್‌ಡಿಎಂಸಿ ಸಮನ್ವಯ ಸಮಿತಿ ಅಸ್ತಿತ್ವದಲ್ಲಿದೆ. ಅವರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಹಾಗೂ ಪೋಷಕರಿಂದಲೇ ‘ನಮ್ಮ ನಡೆ ಶಾಲೆ ಕಡೆ’ ಎಂಬ ಅಭಿಯಾನ ನಡೆಯುತ್ತಿದೆ.ವಿದ್ಯಾರ್ಥಿ, ಪ್ರಗತಿಪರ ಸಂಘಟನೆಗಳು ಹಾಗೂ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಸಹಭಾಗಿತ್ವದಲ್ಲಿ ಈ ಅಭಿಯಾನದಲ್ಲಿ ಮಕ್ಕಳು, ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಸರಕಾರಿ ಶಾಲೆಗಳ ಹೆಣ್ಣು ಮಕ್ಕಳು ಹೆಚ್ಚಾಗಿ ತಮ್ಮ ವೇದನೆಗಳನ್ನು ಈ ಅಭಿಯಾನದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಶಾಲೆ ಆರಂಭವಾಗದೆ ಸಂಕಷ್ಟದಲ್ಲಿರುವವರು ಮಕ್ಕಳು ಹಾಗೂ ಪೋಷಕರು. ಹಾಗಾಗಿ ಮುಖ್ಯಮಂತ್ರಿಯವರು ಹಳ್ಳಿಗಳಿಗೆ ಭೇಟಿ ನೀಡಿ ಮಕ್ಕಳು, ಪೋಷಕರಲ್ಲಿ ಮಾತನಾಡಲಿ. ಡಿಸೆಂಬರ್ 15ರಿಂದಲಾದರೂ ಶಾಲೆ ಆರಂಭವಾದರೆ ಜೂನ್‌ವರೆಗೆ ಸುಮಾರು ಆರು ತಿಂಗಳ ಪಠ್ಯ ಹಾಗೂ ಇತರ ಚಟುವಟಿಕೆಗಳಿಗೆ ಸಾಧ್ಯವಾಗಲಿದೆ. 

ಡಾ.ನಿರಂಜನಾರಾಧ್ಯ,

ಶಿಕ್ಷಣ ತಜ್ಞ ಹಾಗೂ ಮಹಾ ಪೋಷಕರು ಎಸ್‌ಡಿಎಂಸಿ ಸಮನ್ವಯ ವೇದಿಕೆ, ಕರ್ನಾಟಕ

ಕಳೆದ ಆಗಸ್ಟ್‌ನಿಂದಲೇ ಶಾಲೆ ಆರಂಭಿಸುವ ಕುರಿತಂತೆ ಎಸ್‌ಡಿಎಂಸಿ ಸಮನ್ವಯ ಸಮಿತಿ ಸರಕಾರಕ್ಕೆ ಮನವಿ ನೀಡುತ್ತಿದೆ. ವೆಬಿನಾರ್ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರು ಚರ್ಚಿಸಿದ ಸಂದರ್ಭದಲ್ಲೂ ಎಲ್ಲಾ ಜಿಲ್ಲೆಗಳ ಎಸ್‌ಡಿಎಂಸಿಯವರು ಶಾಲೆ ತೆರೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಶಾಲೆ ತೆರೆಯಲು ಪೋಷಕರ ಅನುಮತಿ ಇಲ್ಲ ಎಂಬ ಸಚಿವರ ಹೇಳಿಕೆ ಹಾಸ್ಯಾಸ್ಪದ. ದ.ಕ. ಮತ್ತು ಉಡುಪಿಯ ಶಿಕ್ಷಕರ ಸಂಘದ ಪ್ರಮುಖರಲ್ಲಿಯೂ ನಾನು ಮಾತನಾಡಿದ್ದೇನೆ. ಅವರು ಕೂಡಾ ಪಾಳಿ ವ್ಯವಸ್ಥೆಯಲ್ಲಿ ಶಾಲೆ ಆರಂಭಿಸಲು ಸಲಹೆ ನೀಡಿದ್ದಾರೆ. ವಿದ್ಯಾರ್ಥಿಗಳು ವಾರದಲ್ಲಿ ಕೆಲ ದಿನಗಳಾದರೂ ಶಾಲೆಗೆ ಬರುವಂತಹ ವ್ಯವಸ್ಥೆಯಾಗಬೇಕು. ಮಕ್ಕಳಿಗೆ ಸಿಗುವ ಹಾಲು, ಬಿಸಿಯೂಟ ಸಿಗಬೇಕು.

ಮೊಯ್ದಿನ್ ಕುಟ್ಟಿ,

ರಾಜ್ಯ ಅಧ್ಯಕ್ಷರು, ಎಸ್‌ಡಿಎಂಸಿ ಸಮನ್ವಯ ವೇದಿಕೆ

ಅಮೆರಿಕದ ಹಿರಿಯ ವೈದ್ಯ ವಿಜ್ಞಾನಿ ಡಾ.ಆಂಥನಿ ಫವುಚಿಯವರು ಬಾರು ಮುಚ್ಚಿ ಶಾಲೆಗಳನ್ನು ತೆರೆಯಿರಿ ಎಂದಿದ್ದಾರೆ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ ಆಲೋಚಿಸಲು ಆರಂಭಿಸಬೇಕಾಗಿದೆ. ಶಾಲೆ ಆರಂಭಿಸಲು ಹೋರಾಟಗಾರರು, ಬುದ್ಧಿಜೀವಿಗಳು, ಎಡ-ಬಲ ನಡು ಪಂಥೀಯರು ಮಕ್ಕಳು, ಪೋಷಕರ ಶಾಲೆ ಆರಂಭಿಸುವ ಅಭಿಯಾನಕ್ಕೆ ಕೈಜೋಡಿಸಬೇಕಾಗಿದೆ. ಸರಕಾರವು ನವೆಂಬರ್‌ನಲ್ಲಿ ಸಭೆ ನಡೆಸಿದಾಗ ತಜ್ಞರ ಸಮಿತಿ ಹಾಗೂ ದೃಶ್ಯ ಮಾಧ್ಯಮಗಳ ವಿರೋಧದಿಂದಾಗಿ ಶಾಲೆ ಆರಂಭಕ್ಕೆ ಹಿಂದೇಟು ಹಾಕಿದೆ. ಆ ನಿಟ್ಟಿನಲ್ಲಿ ಪೋಷಕರು, ಮಕ್ಕಳ ಜತೆಯಲ್ಲೇ ಸರಕಾರಕ್ಕೂ ಬೆಂಬಲವಾಗಿ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಹಾಗೂ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಸಹಕಾರದಲ್ಲಿ ‘ವಿದ್ಯಾರ್ಥಿಗಳ ನಡೆ ಶಾಲೆಯ ಕಡೆ’ ಎಂಬ ಅಭಿಯಾನ ಆರಂಭಿಸಿದ್ದೇವೆ. ಇದಕ್ಕೆ ಅದ್ಭುತವಾದ ಬೆಂಬಲ ವ್ಯಕ್ತವಾಗಿದ್ದು, ಸರಕಾರವೂ ಇದನ್ನು ಮನದಟ್ಟು ಮಾಡಿಕೊಂಡು ಡಿ.15ರಿಂದ ಶಾಲೆ ಆರಂಭಿಸುವ ವಿಶ್ವಾಸ ನಮ್ಮದು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ,

ತಜ್ಞ ವೈದ್ಯರು, ಮಂಗಳೂರು

ಶಾಲೆ ಆರಂಭಿಸದಿರಲು ಯಾವುದೇ ವೈಜ್ಞಾನಿಕ ಕಾರಣಗಳು ಕಾಣುತ್ತಿಲ್ಲ. ಶಾಲೆ ಇಲ್ಲದೆ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿರುವುದು ಮಾತ್ರವಲ್ಲದೆ, ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹೆಚ್ಚುತ್ತಿದೆ. ಮಕ್ಕಳಿಂದ ಕೊರೋನ ಹರಡುವ ಅಥವಾ ಮಕ್ಕಳು ಬಾಧಿತರಾಗಿ ಸಮಸ್ಯೆಗೊಳಗಾಗುವ ಪ್ರಕರಣಗಳು ಅತ್ಯಲ್ಪ ಎಂದು ವೈಜ್ಞಾನಿಕ ತಜ್ಞರೇ ಹೇಳುತ್ತಿರುವಾಗ ಶಾಲೆಯನ್ನು ಮುಂಜಾಗೃತಾ ಕ್ರಮಗಳೊಂದಿಗೆ ಆರಂಭಿಸುವುದರಲ್ಲಿ ಅಡ್ಡಿಯಿಲ್ಲ. ಮಕ್ಕಳ ಶಿಕ್ಷಣಕ್ಕೆ ಆನ್‌ಲೈನ್ ಪರ್ಯಾಯ ಅಲ್ಲವೇ ಅಲ್ಲ. ಇದರಿಂದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಯೂ ಆನ್‌ಲೈನ್ ಶಿಕ್ಷಣಕ್ಕೆ ಅಡ್ಡಿಯಾಗುತ್ತಿರುವುದರಿಂದ ಪೋಷಕರಿಗೆ ಮನವರಿಕೆ ಮಾಡಿಸಿ, ಪೂರಕ ವಾತಾವರಣದೊಂದಿಗೆ ಶಾಲೆಗಳನ್ನು ಆರಂಭಿಸಲು ಸರಕಾರ ಮುಂದಾಗಬೇಕು.

ರೆನ್ನಿ ಡಿಸೋಜ,

ನಿರ್ದೇಶಕರು, ಪಡಿ ಸಂಸ್ಥೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)