varthabharthi


ರಾಷ್ಟ್ರೀಯ

ದೇಶದಲ್ಲಿ ಜೀವನ ಗುಣಮಟ್ಟ ಯಾವ ನಗರದಲ್ಲಿ ಅತ್ಯುತ್ತಮ ಗೊತ್ತೇ?

ವಾರ್ತಾ ಭಾರತಿ : 5 Dec, 2020

ಹೊಸದಿಲ್ಲಿ, ಡಿ.5: ಭಾರತದ ನಗರಗಳ ಪೈಕಿ ವಾಣಿಜ್ಯ ರಾಜಧಾನಿ ಎನಿಸಿದ ಮುಂಬೈನಲ್ಲಿ ಜನರ ಜೀವನಮಟ್ಟ ಅತ್ಯುತ್ತಮ ಎಂದು ಬಾಂಬೆ ಐಐಟಿ ಸಮೀಕ್ಷೆಯಿಂದ ತಿಳಿದುಬಂದಿದೆ. ದೇಶದ ನಗರಗಳ ವಾಸ್ತವ ತಿಳಿಯುವ ಉದ್ದೇಶದಿಂದ ಐಐಟಿ ಸಂಶೋಧನೆ ನಡೆಸಿ ನಗರ ಜೀವನ ಗುಣಮಟ್ಟ ಸೂಚ್ಯಂಕ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಲಿಂಗಾನುಪಾತ ಅಂಶವನ್ನು ಸೇರಿಸಿದ್ದು, ಚೆನ್ನೈ ಮಹಿಳೆಯರ ಪಾಲಿಗೆ ಅತ್ಯುತ್ತಮ ನಗರ ಎನಿಸಿಕೊಂಡಿದೆ.

ಒಟ್ಟಾರೆ 14 ನಗರಗಳ ಪೈಕಿ ಮುಂಬೈ ಅಗ್ರಸ್ಥಾನದಲ್ಲಿದ್ದರೆ, ದಿಲ್ಲಿ, ಕೊಲ್ಕತ್ತಾ ಹಾಗೂ ಚೆನ್ನೈ ಕ್ರಮವಾಗಿ ನಂತರದ ಸ್ಥಾನಗಳನ್ನು ಹಂಚಿಕೊಂಡಿವೆ. ಲಿಂಗ ಸಮಾನತೆ ಮಾನದಂಡವನ್ನು ಜೀವನ ಗುಣಮಟ್ಟ ರ್ಯಾಂಕಿಂಗ್‌ಗೆ ಸೇರಿಸಿದ್ದರೆ ಆರು ನಗರಗಳ ರ್ಯಾಂಕಿಂಗ್ ಬದಲಾಗುತ್ತಿತ್ತು. ದಿಲ್ಲಿ, ಜೈಪುರ ಹಾಗೂ ಇಂದೋರ್ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿ, ಮುಂಬೈ, ಭೋಪಾಲ್ ಮತ್ತು ಲಕ್ನೋ ನಗರವನ್ನು ಹಿಂದಿಕ್ಕುತ್ತಿದ್ದವು. ಲಿಂಗ ಸೂಚ್ಯಂಕದಲ್ಲಿ ಚೆನ್ನೈ, ಕೊಲ್ಕತ್ತಾ ಹಾಗೂ ಮುಂಬೈ ಮಾತ್ರ ಸರಾಸರಿಗಿಂತ ಅಧಿಕ ಅಂಕ ಸಂಪಾದಿಸಿವೆ. ಇಂದೋರ್, ಜೈಪುರ ಹಾಗೂ ಪಾಟ್ನಾ ಸರಾಸರಿಗಿಂತ ಹಿಂದಿವೆ.

"ನಗರಗಳ ಮಹಿಳಾ ಅನುಭವ ಭಿನ್ನ. ಸುಸ್ಥಿರ ನಗರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಹಿಳೆಯರ ಅಗತ್ಯತೆಯನ್ನು ಪೂರೈಸುವುದು ಅಗತ್ಯ" ಎಂದು "ಟ್ರಾನ್ಸ್‌ಪೋರ್ಟ್ ಪಾಲಿಸಿ" ನಿಯತಕಾಲಿಕ ಹೇಳಿದೆ. ಜೈಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತ್ಯಧಿಕವಾದರೆ, ಚೆನ್ನೈನಲ್ಲಿ ಕನಿಷ್ಠ ಎಂದು ವರದಿ ವಿವರಿಸಿದೆ.

ಪುರುಷರು ಹಾಗೂ ಮಹಿಳೆಯರ ನಡುವಿನ ಸಾಕ್ಷರತೆ ಅಂತರ ಜೈಪುರದಲ್ಲಿ ಗರಿಷ್ಠ (13.2%) ಹಾಗೂ ಕೊಲ್ಕತ್ತಾದಲ್ಲಿ ಕನಿಷ್ಠ (5.4). ಮಹಿಳೆಯರ ನಿರುದ್ಯೋಗ ಪ್ರಮಾಣ ಪಟ್ನಾದಲ್ಲಿ ಅತ್ಯಧಿಕ. ಇದು ಪ್ರತಿ ಸಾವಿರಕ್ಕೆ 346 ಇದ್ದರೆ, ರಾಷ್ಟ್ರೀಯ ಸರಾಸರಿ 73. ಪಾಟ್ನಾದಲ್ಲಿ ಶೇಕಡ 36ರಷ್ಟು ಮಂದಿ ಮಾತ್ರ ಸಂಸ್ಕರಿತ ಕೊಳಾಯಿ ನೀರು ಪಡೆಯುತ್ತಿದ್ದಾರೆ. ಸಾಕ್ಷರತೆ ಪ್ರಮಾಣ ಪುಣೆಯಲ್ಲಿ ಅತ್ಯಧಿಕ (91%). ಅಚ್ಚರಿ ಎಂದರೆ ಹೈದರಾಬಾದ್‌ನಲ್ಲಿ ಈ ಪ್ರಮಾಣ ಕನಿಷ್ಠ (83%).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)