varthabharthi


ಅನುಗಾಲ

ಸಾಹಿತ್ಯದ ನವರೂಪ(ಕ)ಗಳು

ವಾರ್ತಾ ಭಾರತಿ : 10 Dec, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ಖ್ಯಾತರಾಗಿದ್ದ ಕವಿ ಸಾಲಿ ರಾಮಚಂದ್ರರಾಯರು ಅನೇಕ ಒಳ್ಳೆಯ ಕವನಗಳನ್ನು ಬರೆದಿದ್ದರು. ಆಗಿನ ಶ್ರೇಷ್ಠ ಕನ್ನಡ ಪತ್ರಿಕೆಗಳಲ್ಲಿ ಅವರ ಕವಿತೆಗಳಿದ್ದವು. ಅವರ ಕವಿತೆಗಳನ್ನು ಒಟ್ಟಾಗಿ ಪ್ರಕಟಿಸುವುದಿಲ್ಲವೇ ಎಂದು ಕೇಳಿದಾಗ ಅವರು ‘ಅದೇಕೆ ಬೇಕು; ನನ್ನ ಸಂತೋಷಕ್ಕೆ ನಾನು ಬರೆದೆನು, ಹಾಡಿದೆನು; ಆಯಿತು, ಅಷ್ಟಕ್ಕೆ ಕೆಲಸ ಮುಗಿಯಿತು; ಕವಿ ಕವಿ ಎಂದು ನನ್ನನ್ನು ಕರೆವುದೇಕೆ, ಮತ್ತೆ ಮತ್ತೆ ನೆನಪು ಬೇಕೆ; ನನ್ನನ್ನು ನೆನೆಯದಿರಿ, ಮರೆತುಬಿಡಿ;’ ಎಂದರಂತೆ.


ಸಮ್ಮೇಳನವೇ ಕನ್ನಡ ಸಾಹಿತ್ಯವಲ್ಲ. ಅದು ಸಾಹಿತ್ಯಸಂಬಂಧಿ ಚಟುವಟಿಕೆಗಳಲ್ಲಿ ಒಂದು. ಹಿಂದೆ ಸರಳವಾಗಿ ನಡೆದು ಬರುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನವು ಈಗ ಬರಬರುತ್ತಾ ಸಾಹಿತ್ಯದ ರಾಜಸ ಭಾಗವಾಗಿ ಪರಿಣಮಿಸಿದೆ. ಘೋಷಿತ ಉದ್ದೇಶವೇನೇ ಇರಲಿ, ಅದ್ಧೂರಿಯ ಜನಸಂಭ್ರಮದ ಮೂಲಕ ಒಟ್ಟು ಕನ್ನಡ, ಕನ್ನಡಿಗ, ಕರ್ನಾಟಕ ಎಂಬಿತ್ಯಾದಿ ಭಾವನೆಗಳನ್ನು ಉದ್ದೀಪನಗೊಳಿಸುವುದಷ್ಟೇ ಅದರ ಈಗಿನ ಸೂಚಿತ ಉದ್ದೇಶ. ಕೆಲವು ದಿನ/ವಾರಗಳ ಹಿಂದೆ 2021ರ ಫೆಬ್ರವರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಅನೇಕ ಪ್ರಜ್ಞಾವಂತರು ತೀವ್ರ ಕಳವಳ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದರು. ಕೋವಿಡ್-19ರ ಹಿನ್ನೆಲೆಯಲ್ಲಿ 2020ರ ಬಹುಭಾಗವನ್ನು ನಷ್ಟಗೊಳಿಸಿದ ಈ ಹಂತದಲ್ಲಿ ಅನೇಕ ಜನರು ಇನ್ನೂ ಚೇತರಿಸಲಾಗದೆ ಒದ್ದಾಡುತ್ತಿದ್ದಾರೆ. ಸರಕಾರದಿಂದ ಜಾತೀಯ, ಮತೀಯ ಮಂಜೂರಾತಿ ಎಂದಿನಂತೆಯೇ ಅಶ್ಲೀಲವಾಗಿ ಮುಂದುವರಿದಿದೆಯಾದರೂ ಹಣವಿಲ್ಲವೆಂಬ ನೆಪ/ಕಾರಣದಲ್ಲಿ ಅನೇಕ ಕಲ್ಯಾಣ ಯೋಜನೆಗಳಿಗೆ ಕತ್ತರಿ ಬಿದ್ದಿದೆ. ಈ ಹಂತದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯವಿದೆಯೇ ಮತ್ತು ಅದಕ್ಕೆ ಸರಕಾರ ಹಣ ಒದಗಿಸಲಿದೆಯೇ, ಒದಗಿಸಬೇಕೇ ಎಂಬ ಪ್ರಶ್ನೆಗಳು ಸಾಕಷ್ಟು ಧೂಳನ್ನೆಬ್ಬಿಸಬೇಕಿತ್ತು. ಆದರೆ ಕೆಲವು ಮಂದಿ ತಮ್ಮ ಅಭಿಪ್ರಾಯಗಳನ್ನು ಹೇಳಿದ ಬಳಿಕ ಎಲ್ಲವೂ ತಣ್ಣಗಾಗಿದೆ. ಈ ತಣಿವನ್ನು ಬಿಸಿಗೊಳಿಸುವುದು ನನ್ನ ಉದ್ದೇಶವಲ್ಲ. ಇಂತಹ ಸಂದರ್ಭದಲ್ಲಿ ಎಚ್‌ಎಸ್‌ಆರ್‌ರಂತಹ ಕೈಬೆರಳೆಣಿಕೆಯ ಸಂಖ್ಯೆಯ ಹಿರಿಯರು ಮಾತ್ರ ಸಮ್ಮೇಳನದ ಅಗತ್ಯವಿಲ್ಲವೆಂದು ತಮ್ಮ ಘನತೆಗೆ ತಕ್ಕಂತೆ ನುಡಿದಿದ್ದಾರೆ.

ಆದರೆ ನನಗೆ ಭಯಾನಕವಾಗಿ ಕಂಡದ್ದು ಕನ್ನಡದ ಹಿರೀಕರೆಂದು ಜನರು (ತಪ್ಪು) ತಿಳಿದ ಕೆಲವು (ಸ್ವ)ಪ್ರತಿಷ್ಠಿತರು ಜಪಮಾಲೆ ಹಿಡಿದು ಮೌನವ್ರತ ಧರಿಸಿದ್ದು. ಸ್ವಂತ ವೆಚ್ಚದಲ್ಲಿ ಸಮ್ಮೇಳನದಲ್ಲಿ ಭಾಗಿಯಾಗುವುದು ಏನಿದ್ದರೂ ಸಾಹಿತ್ಯದ ಜನಸಾಮಾನ್ಯರು ಮಾತ್ರ. ಪ್ರಚಾರ, ಪ್ರಕಟನೆ, ಪ್ರಶಸ್ತಿಯಲ್ಲಿ ಒಂದು ಹಂತ ತಲುಪಿದ ಮೇಲೆ ಯಾರೂ ಕನ್ನಡಕ್ಕಾಗಿ, ಕನ್ನಡ ಪುಸ್ತಕಗಳಿಗಾಗಿ, ಸಮ್ಮೇಳನಯಾತ್ರೆಗಾಗಿ, ಸ್ವಂತಕಿಸೆಯಿಂದ ಖರ್ಚುಮಾಡುವುದಿಲ್ಲ. ಏನಿದ್ದರೂ ಅವರು ಪರಶ್ರೇಷ್ಠರು. ಯಾರು ಕನ್ನಡದ ಭಾಷೆ, ಸಾಹಿತ್ಯದ ಕುರಿತು ಸದಾ ಭಾಷಣಮಾಡುತ್ತಿರುತ್ತಾರೋ ಮತ್ತು ತಾವೇ ಈ ವಿಚಾರಗಳ ಗಲ್ಲಿಯಲ್ಲಿ ಅಧಿಕಾರಯುತವಾಗಿ ಮತ್ತು ಅಧಿಕೃತವಾಗಿ ಮಾತನಾಡುತ್ತೇವೆಂದು ತಿಳಿಸುತ್ತಾರೋ ಅಂತಹವರು ಕನ್ನಡ ಸಾಹಿತ್ಯ ಸಮ್ಮೇಳನದ, ಅಲ್ಲಿ ವೇದಿಕೆಯಲ್ಲಿ ತಾವು ಅಧೀಶರಾಗಿರುವ ಚಿತ್ರದ ಮತ್ತು ಆ ಮೂಲಕ ಕಿಸೆಯಲ್ಲಿ ಪುಟ್ಟಲಕ್ಷ್ಮೀ ಕೊಳೆಯುವ ಕನಸು ಕಾಣುವ, ಕಲ್ಪಿತ ಸನ್ನಿವೇಶದ ಭವಿಷ್ಯವು ಹೇಗಿರಬಹುದೆಂದು ಊಹಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ನಾಡೋಜರು ತಮ್ಮ ಅವಧಿಯನ್ನು ಹೆಚ್ಚಿಸಿಕೊಂಡದ್ದು ರಾಜಕಾರಣಿಗಳಿಗೂ ನಾಚಿಕೆ/ವಾಕರಿಕೆ ತರುವಂತಿತ್ತು. ಆದರೆ ಕಾಲವೆಂಬ ಹಕ್ಕಿ ಎಷ್ಟು ಬೇಗ ಹಾರಿಹೋಯಿತೆಂದರೆ ಆ ರಿಯಾಯಿತಿಯ ದಿನವೂ ದಾಟಿದೆ.

ಈ ಹೆಚ್ಚಿನ ದಯಾಬದುಕಿನ ದಿನಗಳಲ್ಲಿ ಕನ್ನಡ ನಾಡು-ನುಡಿ-ಸಾಹಿತ್ಯಕ್ಕೆ ಹೇಳತಕ್ಕ ಕರಸೇವೆಯೇನೂ ನಡೆಯಲಿಲ್ಲ. ವ್ಯವಹಾರ ಹೇಗೆ ನಡೆದಿದೆಯೋ ಹೊರಗಿರುವವರಿಗೆ ತಿಳಿಯುವುದಿಲ್ಲ. ಅದು ಅಂತರಂಗದ ಚತುಷ್ಟಯಗಳಿಗಷ್ಟೇ ಗೊತ್ತು. ಅದು ಬಹಿರಂಗವಾಗಬೇಕಾದರೆ ಮಾಹಿತಿಹಕ್ಕಿನ ಕಾಯ್ದೆಯನ್ನು ಸಾಹಿತಿ-ಸಾಹಿತ್ಯಕ್ಕೂ ಅನ್ವಯಿಸಬೇಕಾದ ದುರದೃಷ್ಟ ಕನ್ನಡಿಗರದ್ದು. ಆರೋಪ-ಪ್ರತ್ಯಾರೋಪಗಳು ರಾಜಕೀಯದಂತೆ ಸಾಹಿತ್ಯದಲ್ಲೂ ನಿಯಮಿತವಾಗಿ ನಡೆಯುತ್ತಿರುವುದು ದುರಂತವಾದರೂ ಅದರ ಆಳ-ಅಗಲ ಮುಂದಿನ ಸಾಹಿತ್ಯ ಚುನಾವಣೆಯ ಹೊತ್ತಿಗೆ ಅರಿಯಬಹುದು. ಒಂದು ರೀತಿಯಲ್ಲಿ ಇದು ಸರಿ. ಗೋಷ್ಠಿ-ಗೀಷ್ಠಿ ಹೋಗಲಿ, ಅಕಸ್ಮಾತ್ತಾಗಿ ಅಧ್ಯಕ್ಷತೆಯೇ ಒದಗಿ ಬಂದಿತೆಂದಿಟ್ಟುಕೊಳ್ಳಿ. ಮಾಧ್ಯಮಗಳಲ್ಲಿ ಒಂದಷ್ಟು ಮುಖಪುಟದ ಸುದ್ದಿಯಾಗುತ್ತದೆ, ಕೆಲವು ಖಾಸಾ ಸಂದರ್ಶನಗಳು ನಡೆಯುತ್ತವೆ ಮತ್ತು ಸಮ್ಮೇಳನದಲ್ಲಿ ಆಕಳಿಸಬೇಡವೆಂದರೂ ತಾವೇ ಆಕಳಿಸುವ ವರೆಗೆ ವಿಶ್ವಕ್ಕೆ ಕನ್ನಡ ನಾಡು-ನುಡಿ-ಜಲ-ಗಾಳಿ-ಗಡಿ-ಇನ್ನಿತರ ಪಂಚಭೂತಗಳನ್ನು ಆವಾಹಿಸಿಕೊಂಡು ಭಾಷಣ ಮಾಡಲು ಅವಕಾಶದಾಕಾಶ ಸಿಗುವುದು ಈ ಮೂರುದಿನಗಳ ನವಾಬಗಿರಿಯ ಅಮೂರ್ತ ಅನುಕೂಲವಾದರೆ ಅದರೊಂದಿಗೆ ಸಿಗುವ ಲಕ್ಷ್ಮೀ ಮೂರ್ತ ಅನುಕೂಲ. ಹೀಗಾಗಿ ಅವರ ಕುರಿತಂತೆ ಮತ್ಸರಿಸುವುದೊಂದೇ ದಾರಿ. ಆದ್ದರಿಂದ ಸಮ್ಮೇಳನ ಖಂಡಿತಾ ನಡೆಯುತ್ತದೆ ಮತ್ತು ಅಲ್ಲಿಗೆ ದಿಂಡೀ ಮತ್ತು ದಾಂಡೀ ನಡೆಯುತ್ತದೆಯೆಂದು ನಂಬಿಕೊಳ್ಳಬಹುದು.

ಅನೇಕ ಬರೆಹಗಾರರು ಗಾಳಿಕೋಳಿಗಳಂತೆ ಗಾಳಿ ಬಂದಾಗ ತೂರಿಕೊಳ್ಳುವ ತಯಾರಿಯಲ್ಲೇ ಇದ್ದಾರೆ. ಗಾಳಿ ಬಂದಾಗ ತೂರಿಕೋ ಎಂದದ್ದೂ ಇಂತಹ ಸಂದರ್ಭವನ್ನು ಬಳಸಿಕೊಳ್ಳು ವವರನ್ನುದ್ದೇಶಿಸಿಯೇ ಇರಬೇಕು. ಸಮಯ ಮತ್ತು ಸಂದರ್ಭವನ್ನು ನೋಡಿಕೊಂಡು ತಮ್ಮ ಕೆಲಸವನ್ನು ಪೂರೈಸಿಕೊಳ್ಳುವ ಸಾಧಕರಿರುತ್ತಾರೆ. ಇವರನ್ನು ಸಮಯಸಾಧಕರೆನ್ನಬೇಕೋ ಸಂದರ್ಭಸಾಧಕರೆನ್ನಬೇಕೋ ಎಂಬ ಚರ್ಚೆ ಪ್ರಾಯಃ ನಡೆಯಲಾರದು. ಮತ್ತೆ ಆಯ್ಕೆಯಾಗದಿದ್ದರೆ ಸದ್ಯದ ಸಾಹಿತ್ಯ ಸಮ್ಮೇಳನವು ಪರಿಷತ್ತಿನ ಅಧ್ಯಕ್ಷರಿಗೆ ಹಂಸಗೀತೆಯಾಗಬಹುದು. ಅದನ್ನು ಮೀರಿದ ಮಹತ್ವಾಕಾಂಕ್ಷೆ ಅವರಿಗಿದ್ದೀತೆಂದು ಅನ್ನಿಸುವುದಿಲ್ಲ. ಆದ್ದರಿಂದ ಆ ಕುರಿತು ಉಸ್ತುವಾರಿ ಮಂತ್ರಿಗಳ ಮುಂದಾಳುತನದಲ್ಲಿ ಸಮಿತಿ ರಚಿಸಿ ಸರಕಾರದಿಂದ ಧನಸಹಾಯವನ್ನು ಪಡೆಯುವುದು ಅಧಿಕಾರಶಾಹಿಯಿಂದಲೇ ಬಂದ ಅವರಿಗೆ ಕಷ್ಟವಾಗಲಾರದು. ಸರಸ್ವತಿಗೆ ಲಕ್ಷ್ಮೀ ಒಲಿಯುವುದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ. ಆದರೆ ಹಂತಹಂತವಾಗಿ ವಿತರಣೆ-ಹಂಚಿಕೆಯಾಗುವ ಈ ಆದಾನ-ಪ್ರದಾನಗಳಲ್ಲಿ ಕೊನೆಗೂ ಗುಡಿಯ ಸರಸ್ವತಿ ಗುಡಿಸಲು ಸೇರುತ್ತಾಳೆ.

ಸಾಹಿತ್ಯ ಸಮ್ಮೇಳನದಂತಹ ಒಂದು ಸಾಂಘಿಕ ಭಾಗವು ಸಾಹಿತ್ಯದ ಒಟ್ಟಂದವನ್ನು ಕೆಡಿಸದಿದ್ದರೆ ಸಾಕು. ಆದರೆ ವ್ಯಸನವಾಗುವುದು ಸಾಹಿತ್ಯದ ಒಟ್ಟು ಪಾಡಿನಲ್ಲಿ. ಕಳೆದ ಒಂದೆರಡು ದಶಕಗಳಿಂದ ಸಾಹಿತ್ಯವು ತನ್ನ ಏಕಾಂತವನ್ನು ಕಳೆದುಕೊಂಡು ಲೋಕಾಂತವಾಗಿದೆ. ಅಂತರಂಗದಲ್ಲಿ ಅಂತರ್ಜಲದಂತೆ ಪ್ರವಹಿಸಬೇಕಾದ, ಲೇಖಕನಿಂದ ಓದುಗನಿಗೆ ಮುಟ್ಟಬೇಕಾದ ಬರೆಹ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರಗೊಳ್ಳುತ್ತಲೇ ಇರುವುದರಿಂದ ಅದೀಗ ಮಸಾಲೆ ಸಿನೆಮಾಗಳ ಹಾಗೆ ಕಟ್‌ಔಟ್‌ಗಳ ಎತ್ತರದ ಮೂಲಕ ಸಾಹಿತಿಗಳ ಶ್ರೇಷ್ಠತೆಯನ್ನು ಅಳೆಯುವಂತಾಗಿದೆ. ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ ಎಂಬ ಮಾತುಗಳನ್ನು ಅಕ್ಷರಶಃ ಸಾಧಿಸಿ ತೋರಿಸುವುದು ಇಂದು ಲಜ್ಜೆಗೇಡಿನ ಕೆಲಸವಾಗಿಲ್ಲವೆಂಬುದು ಕಾಲಕ್ಕೆ ಮುಜುಗರ ತರುವ ವಿಚಾರ. ಕೆಲವು ವರ್ಷಗಳ ಹಿಂದೆ ಒಬ್ಬ ಸಾಹಿತಿಯ ಕುರಿತಂತೆ ಹೀಗೆ ಹಾಸ್ಯವಾಡುತ್ತಿದ್ದರು: ಕನ್ನಡದ ಶ್ರೇಷ್ಠ ಕವಿ ಯಾರು? ನಾಟಕಕಾರ ಯಾರು? ಕಾದಂಬರಿಕಾರ ಯಾರು? ಕಥೆಗಾರ ಯಾರು? ಮತ್ತು ಕೊನೆಗೆ ಇದನ್ನು ಹೇಳುವವರು ಯಾರು? ಈ ಎಲ್ಲ ಪ್ರಶ್ನೆಗೂ ಒಂದೇ ಉತ್ತರವಿತ್ತು. ಅದು ಆ ಸಾಹಿತಿಯ ಹೆಸರು. ಇದನ್ನು ಲಘುವಾಗಿ ಸ್ವೀಕರಿಸಿ ನಕ್ಕು ಸುಮ್ಮನಾಗುತ್ತಿದ್ದೆವು. ಆದರೆ ಈ ಆತ್ಮರತಿ ಈಗ ಎಂದಿಗಿಂತ ಹೆಚ್ಚು ಬಾಧಿಸುತ್ತಿದೆ ಮತ್ತು ಅದು ತಮ್ಮ ಘನತೆಗೆ ಚ್ಯುತಿ ತಾರದು ಎಂಬಂತಹ ವರ್ತನೆಯಿದೆ. ಈಗಂತೂ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಈ ಮುನ್ನುಗ್ಗುವಿಕೆ ಮರ್ಯಾದೆಯ ಕನಿಷ್ಠ ಅಂಕಗಳನ್ನೂ ಲೆಕ್ಕಿಸದೆ ಓಡುತ್ತಿದೆ.

ಸಾಹಿತ್ಯವನ್ನು ಸರಕಿನಂತೆ ಮಾರಲು ಇಂದು ಪಶ್ಚಿಮಬುದ್ಧಿಯ ವ್ಯಾಪಾರಿ ವಾತಾವರಣವಿದೆ. ಸಾಹಿತ್ಯದ ಕುರಿತಂತೆ ಮಾಧ್ಯಮಗಳಲ್ಲಿ ಅರ್ಥಪೂರ್ಣ ಚರ್ಚೆಯಾಗುತ್ತಿದ್ದ ಕಾಲವೊಂದಿತ್ತು. ಸಾಹಿತ್ಯಪತ್ರಿಕೆಗಳೂ ಇದ್ದವು. ಸಾಹಿತ್ಯದ ನೈಜ ಪರಿಚಾರಕರಿದ್ದರು. ಆದರೆ ಈಗ ಬಹುತೇಕ ಸಾಹಿತ್ಯಪತ್ರಿಕೆಗಳು ಕಣ್ಣುಮುಚ್ಚಿವೆ. ಮಾಧ್ಯಮಗಳು ರಾಜಕಾರಣಿಗಳ, ಸಿನೆಮಾತಾರೆಗಳ, ಕ್ರೀಡಾಪಟುಗಳ ಹಿಂದೆ ಬಿಡುವಿಲ್ಲದೆ ಬೆನ್ನಟ್ಟುವ ವ್ಯವಧಾನದಲ್ಲಿರುವುದರಿಂದ ಸಹಜವಾಗಿಯೇ ಸಾಹಿತ್ಯಕ್ಕೆ ಆರತಿ ಬೆಳಗುವವರಿಲ್ಲ. ಇಂತಹ ಸಂದರ್ಭದಲ್ಲಿ ಗಮನಸೆಳೆಯುವ ಕಾಯಕದಲ್ಲೇ ಸಾಹಿತಿಗಳು ಮಗ್ನರಾಗುವುದು ಅನಿವಾರ್ಯವೇನೋ? ಆದ್ದರಿಂದ ಪುಸ್ತಕಗಳಲ್ಲಿ ಸತ್ಯಂ ಶಿವಂ ಸುಂದರಂ ಮರೆಯಾಗಿ ಮಾಧ್ಯಮಾನುಸಂಧಾನದ ಬ್ರಹ್ಮ ವಿಷ್ಣು ಮಹೇಶ್ವರರ ಮುಖಗಳೇ ಮುಖ್ಯವಾಗುತ್ತಿವೆ. ಒಬ್ಬ ಸಹೃದಯಿ ಸಾಮಾಜಿಕ ಜಾಲತಾಣದಲ್ಲಿ ‘ಬರೆದಿದ್ದು ಏನು ಅನ್ನುವುದಕ್ಕಿಂತ ಬರೆದದ್ದು ಯಾರು ಎನ್ನುವುದೇ ಮುಖ್ಯವಾಗುತ್ತಿದೆಯೇ’ ಎಂಬ ಪ್ರಶ್ನೆಯನ್ನೆಸೆದಿದ್ದರು. ಅವರಿಗೆ ಕನ್ನಡದ ಪ್ರಸಕ್ತ ವಾತಾವರಣದ ಪರಿಚಯವೇ ಇಲ್ಲವೆಂದು ಕಾಣುತ್ತದೆ. ಈಗ ಪರಿಸ್ಥಿತಿ ತೀರ ಬದಲಾಗಿದೆ. ಸಿನೆಮಾಗಳ ಹಾಗೆ ಕೃತಿ ಬರುವ ಮೊದಲೇ ಅದರ ಟ್ರೈಲರನ್ನು ಬಿಡುಗಡೆಗೊಳಿಸುವ ಸಂಪ್ರದಾಯವು ಆರಂಭವಾಗಿದೆ.

ಪ್ರಕಟನೆಗೂ ಮೊದಲೇ ವಿಮರ್ಶೆ ಬರುವುದೂ ನಿಯತಕಾಲಿಕಗಳಂತೆ ಪುಸ್ತಕಗಳು ಪ್ರಕಟವಾಗುವುದೂ ಈಗ ಅಚ್ಚರಿ ತರುವುದಿಲ್ಲ. ಇಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಮೈತ್ರಿಕೂಟಗಳಂತೆ ಇವರ ಪುಸ್ತಕಕ್ಕೆ ಅವರ ಮುನ್ನುಡಿ ಮತ್ತು ಅವರ ಪುಸ್ತಕಕ್ಕೆ ಇವರ ಮುನ್ನುಡಿ ಹೀಗೆ ಸಾಹಿತ್ಯಸಂಸಾರದ ಜನ್ಮಾನುಬಂಧ ನಡೆಯುತ್ತದೆ. ಒಂದೇ ಪುಸ್ತಕಕ್ಕೆ ಹಲವಾರು ಮುನ್ನುಡಿ/ಹಿನ್ನುಡಿ/ಬೆನ್ನುಡಿ, ಹೊರ-ಒಳ ರಕ್ಷಾಕವಚಗಳ ಬ್ಲರ್ಬ್ ಮತ್ತಿತರ ಪ್ರಕಾರ-ಪ್ರಾಕಾರಗಳಿರುವುದೂ ವಿಶೇಷವೆಂದೆನಿಸುವುದಿಲ್ಲ. ಇದನ್ನೂ ಮೀರಿ ತಾನೇ ತನ್ನ ಕೃತಿಯ ಶ್ರೇಷ್ಠತೆಯ ಕುರಿತು ಹೇಳುವ ಲಜ್ಜಾತೀತ ಪರಂಪರೆಯೂ ಸೃಷ್ಟಿಯಾಗಿದೆ. ವಿಮರ್ಶೆಯು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಲೇಖಕನೇ ತನ್ನ ಕೃತಿಯು ಯಾಕೆ ಶ್ರೇಷ್ಠ ಎಂದು ಹೇಳಿದ ಮೇಲೆ ಅದನ್ನು ಚೆನ್ನಾಗಿಲ್ಲವೆನ್ನುವ ಹಕ್ಕು ಯಾರಿಗಿದೆ? ಇದಕ್ಕೆ ಸಾರ್ವಜನಿಕ ಸಾಹಿತ್ಯ ಸಂಸ್ಥೆಗಳು ಒಳ್ಳೆಯ ವೇದಿಕೆಯನ್ನು ಕಲ್ಪಿಸುತ್ತವೆ. ಯಾವುದೇ ಸಂಸ್ಥೆಯ ಹೊಣೆಗಾರಿಕೆಯ ಅಥವಾ ಮೇಲಂತಸ್ಥಿನ ಹುದ್ದೆ ಒಬ್ಬ ಸಾಹಿತಿಗೆ ಸಿ/ದಕ್ಕಿದರೆ ಆತ ಉದಾರಿ ಕಾಗೆಯಂತೆ ತನ್ನ ಬಳಗವನೆಲ್ಲ ಕರೆಯದಿಹನೇ? ಅಲ್ಲಿ ಅರ್ಹತೆಯ ಪ್ರಶ್ನೆಯೇ ಬರುವುದಿಲ್ಲ. ಬದಲಾಗಿ ಆತ ಈ ನಾಯಕರಿಗೆ ಎಷ್ಟು ಹತ್ತಿರದಲ್ಲಿದ್ದಾನೆಂಬ ಪ್ರಶ್ನೆ ಮಾತ್ರ ಹುಟ್ಟುತ್ತದೆ. ಪದೇಪದೇ ಉಲ್ಲೇಖವಾಗುವ ಗಣಪತಿನ್ಯಾಯ-ಷಣ್ಮುಖನ್ಯಾಯದಂತೆ ಲೋಕವೆಲ್ಲ ಸುತ್ತುವುದರ ಬದಲಿಗೆ ನಾಯಕರ ಸುತ್ತ ಸುತ್ತಿದರಾಯಿತು, ಯೋಗಕ್ಷೇಮಂ ವಹಾಮ್ಯಹಂ! ಕರಿಷ್ಯೇ ವಚನಂ ತವ!

ಈ ಮೊದಲು ಉಲ್ಲೇಖಿತವಾಗಿದೆಯೋ ಗೊತ್ತಿಲ್ಲ-ಶಿವ ದೇವಾಲಯ ಗಳಲ್ಲಿ ಹೊರಗೆ ನಂದಿಯ ಮೂರ್ತಿಯಿರುತ್ತದೆ. ಅದಕ್ಕೆ ಜಗದ ಗೊಡವೆಯಿಲ್ಲ. ಗರ್ಭಗುಡಿಯ ಬಾಗಿಲು ಹಾಕಿ ದೇವರು ಅದೃಶ್ಯನಾದ ಆನಂತರವೂ ಅದು ಹುಲ್ಲಿಗಾಗಲೀ ತನ್ನ ಇನ್ನಿತರ ಕೆಲಸಕ್ಕಾಗಲೀ ಹೋಗುವುದಿಲ್ಲ. ಇಂತಹ ಅನೇಕ ಸಾಹಿತಿಶಿಷ್ಯರಿರುತ್ತಾರೆ. ಅವರು ತಮ್ಮ ಆದರಣೀಯ ಮತ್ತು ಆರಾಧನೀಯರ ಕುರಿತು ಮೈಡಾಸ್ ಸ್ಪರ್ಶದ ತದೇಕ ಚಿತ್ತದ ಮೆಚ್ಚುಗೆಯನ್ನು ನೀಡುತ್ತಾರೆ. ಅಭಿಮಾನಿಗಳ ಸಂಘವಿದೆಯೇನೋ ಗೊತ್ತಿಲ್ಲ!

ಇನ್ನು ಕೆಲವರು ಸೂರ್ಯಕಾಂತಿ ಹೂಗಳಂತೆ. ಸೂರ್ಯ ಸಂಚರಿಸಿದಂತೆಲ್ಲ ಅವೂ ತಮ್ಮ ಮುಖಾರವಿಂದವನ್ನು ತಿರುಗಿಸುತ್ತವೆ. ಅವರು ಎಂದೆಂದಿಗೂ ಆಳುವ ಪಕ್ಷದ ಅಭಿಮಾನಿಗಳು. ಅವರಿಗೆ ಎಲ್ಲ ದೊರೆಗಳ ಎದುರೂ ಸನ್ಮಾನ; ಫಲಪುಷ್ಪ. ಅವರನ್ನು ನೀವು ಎಡ-ಬಲ, ತತ್ವ-ಸಿದ್ಧಾಂತಗಳ ಕುರಿತು ಸಂದರ್ಶಿಸಬೇಕಾಗಿಲ್ಲ. ಯಾವ ವಿವಾದದ ಕುರಿತೂ ಅವರು ಉತ್ತರಿಸುವುದಿಲ್ಲ. ಎಂತಹ ಸಂದರ್ಭದಲ್ಲೂ ಅವರಿಂದ ಟೀಕೆಗಳು ಬರಲಾರವು. ಮೌನಂ ಶರಣಂ ಗಚ್ಛಾಮಿ! ಇಂತಹ ಸಂದರ್ಭದಲ್ಲಿ ತಾನು ಬರೆದದ್ದು ಪ್ರಕಟವಾಗಬೇಕಿಲ್ಲವೆಂದು ಹೇಳುವುದು ಬಹಳಷ್ಟು ಜನರಿಗೆ ಸಾಧ್ಯವಿಲ್ಲ; ಸಾಧುವೂ ಅಲ್ಲ. ಎಷ್ಟು ಪ್ರತಿಗಳು ಬಿಕರಿಯಾದವು, ಎಷ್ಟು ದಿನಗಳಲ್ಲಿ ಎಷ್ಟು ಮುದ್ರಣ ಕಂಡವು ಎಂಬುದೇ ಯಶಸ್ಸಿನ ಬೆಳ್ಳಿತೆರೆಯ ಮಾನದಂಡವಾದಾಗ ಉಳಿದ ಸಾಹಿತ್ಯಮೌಲ್ಯಗಳ ಕೋದಂಡ ದಂಡವೂ ಹೀಗೆ ದಂಡ! ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ಖ್ಯಾತರಾಗಿದ್ದ ಕವಿ ಸಾಲಿ ರಾಮಚಂದ್ರರಾಯರು ಅನೇಕ ಒಳ್ಳೆಯ ಕವನಗಳನ್ನು ಬರೆದಿದ್ದರು. ಆಗಿನ ಶ್ರೇಷ್ಠ ಕನ್ನಡ ಪತ್ರಿಕೆಗಳಲ್ಲಿ ಅವರ ಕವಿತೆಗಳಿದ್ದವು. ಅವರ ಕವಿತೆಗಳನ್ನು ಒಟ್ಟಾಗಿ ಪ್ರಕಟಿಸುವುದಿಲ್ಲವೇ ಎಂದು ಕೇಳಿದಾಗ ಅವರು ‘ಅದೇಕೆ ಬೇಕು; ನನ್ನ ಸಂತೋಷಕ್ಕೆ ನಾನು ಬರೆದೆನು, ಹಾಡಿದೆನು; ಆಯಿತು, ಅಷ್ಟಕ್ಕೆ ಕೆಲಸ ಮುಗಿಯಿತು; ಕವಿ ಕವಿ ಎಂದು ನನ್ನನ್ನು ಕರೆವುದೇಕೆ, ಮತ್ತೆ ಮತ್ತೆ ನೆನಪು ಬೇಕೆ; ನನ್ನನ್ನು ನೆನೆಯದಿರಿ, ಮರೆತುಬಿಡಿ;’ ಎಂದರಂತೆ. ಇಷ್ಟು ಅತಿಯಲ್ಲದಿದ್ದರೂ ಸ್ವಲ್ಪಮಟ್ಟಿನ ಕಾರ್ಯನಿವೃತ್ತಿ ಇಂದಿನ ಅಗತ್ಯಗಳಲ್ಲೊಂದು. ಆಗ ಮಾತ್ರ ಶತಮಾನಕ್ಕೊಬ್ಬರಲ್ಲದಿದ್ದರೂ ದಶಕಕ್ಕೊಬ್ಬಿಬ್ಬರು ಶ್ರೇಷ್ಠರನ್ನು ಹುಡುಕಬಹುದು. ಸಾಹಿತ್ಯಕ್ಕೂ ಸ್ವಲ್ಪ ಮಟ್ಟಿನ ಪಥ್ಯದ ಅವಶ್ಯಕತೆಯಿದೆ. ಮುಖಮುಸುಕು ಅದಕ್ಕೂ ಬೇಕಷ್ಟೇ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)