varthabharthi


ವಿಶೇಷ-ವರದಿಗಳು

ಅರ್ನಬ್ ಗೆ ತಮಾಷೆ ಮಾಡಿದ್ದಕ್ಕೆ ನಿನಗೆ ಹೀಗಾಯಿತು ಎಂದವರಿಗೆ ರಾಜೀವ್ ನಿಗಮ್ ಹೇಳಿದ್ದೇನು?

ಹಾಸ್ಯ ಕಲಾವಿದನ ಮಗನ ಸಾವಿಗೆ ಸಂಭ್ರಮಿಸಿದ ಬಲಪಂಥೀಯ ಟ್ರೋಲ್ ಗಳು!

ವಾರ್ತಾ ಭಾರತಿ : 14 Dec, 2020

ಹೊಸದಿಲ್ಲಿ: ಖ್ಯಾತ ಹಾಸ್ಯ ಕಲಾವಿದ, ನಟ ರಾಜೀವ್ ನಿಗಮ್ ಅವರ ಪುತ್ರ ಇತ್ತೀಚೆಗಷ್ಟೇ ಅನಾರೋಗ್ಯದಿಂದ ರಾಜೀವ್ ಅವರ ಹುಟ್ಟುಹಬ್ಬದ ದಿನದಂದೇ ನಿಧನರಾಗಿದ್ದು, ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್ ನಲ್ಲಿ ಭಾವನಾತ್ಮಕ ಸಂದೇಶವನ್ನೂ ಹಂಚಿಕೊಂಡಿದ್ದರು. 

ತನ್ನ ಮಗನ ಜೊತೆಗಿರುವ ಫೋಟೋ ಹಾಕಿದ ರಾಜೀವ್ ನಿಗಮ್ ''ನನ್ನ ಮಗ ದೇವರಾಜ್ ಇಂದು ನನ್ನನ್ನು ತೊರೆದಿದ್ದಾನೆ. ನನ್ನ ಹುಟ್ಟುಹಬ್ಬದ ಕೇಕ್ ಅನ್ನು ಸಹ ಕತ್ತರಿಸದೆ...ಯಾರು ನೀಡುತ್ತಾರೆ ಈ ರೀತಿಯ ಅಚ್ಚರಿಯ ಉಡುಗೊರೆ'' ಎಂದು ಭಾವನಾತ್ಮಕ ಅಡಿಬರಹ ಹಾಕಿದ್ದರು.

ಇವರ ಪೋಸ್ಟ್ ಗೆ ಹಲವರು ದುಖಃ ವ್ಯಕ್ತಪಡಿಸಿದ್ದು, ರಾಜೀವ್ ಅವರ ಮಗನ ಸಾವಿಗೆ ಮರುಗಿದ್ದಾರೆ. ನಿಮಗೆ ದೇವರು ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಆದರೆ ಕಾಮೆಡಿಯನ್ ಆಗಿ ಗುರುತಿಸಿಕೊಂಡಿರುವ, ಆಡಳಿತ ಪಕ್ಷ ಮತ್ತು ಅದರ ಪರ ಬ್ಯಾಟಿಂಗ್ ಮಾಡುವ ಮಾಧ್ಯಮಗಳನ್ನು ಸದಾ ಕಾಮೆಡಿ ಮಾಡುವ ರಾಜೀವ್ ಅವರ ವಿರುದ್ಧ ಅವರ ಮಗನ ಸಾವಿನ ಸಂದರ್ಭ ಬಲಪಂಥೀಯರು ವ್ಯಂಗ್ಯವಾಡಿದ್ದು, "ಅರ್ನಬ್ ಬಗ್ಗೆ ತಮಾಷೆ ಮಾಡಿದ್ದಕ್ಕೆ ನಿನ್ನ ಮಗ ಸಾವನ್ನಪ್ಪಿದ್ದಾನೆ" ಎಂದು ಕಮೆಂಟ್ ಮಾಡಿದ್ದಾರೆ.

ರಾಜೀವ್ ಅವರು ಪ್ರಧಾನಿ ಮೋದಿ, ಬಿಜೆಪಿ ಸರಕಾರದ ಬಗ್ಗೆ ಹಲವು ಬಾರಿ ಕಾಮೆಡಿ ಮಾಡಿದ್ದು, ಸುಶಾಂತ್ ಸಾವಿನ ಬಗ್ಗೆ ಅರ್ನಬ್ ಮಾಡಿದ ಡಿಬೇಟ್ ಗಳನ್ನೂ ವ್ಯಂಗ್ಯವಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಲಪಂಥೀಯ ಟ್ರೋಲ್ ಪೇಜ್‌‌ಗಳು, ಬಿಜೆಪಿ ಕಾರ್ಯಕರ್ತರು, ಅರ್ನಬ್ ಅಭಿಮಾನಿಗಳು ರಾಜೀವ್ ಅವರನ್ನು ಅವರ ಮಗನ ಸಾವಿನ ಸಂದರ್ಭ ವ್ಯಂಗ್ಯವಾಡಿದ್ದಾರೆ. 

ಈ ಬಗ್ಗೆ ರಾಜೀವ್ ಅವರು ವಿಡಿಯೋ  ಸಂದೇಶವನ್ನು ಹಂಚಿಕೊಂಡಿದ್ದು, ಅರ್ನಬ್ ಬಗ್ಗೆ ತಮಾಷೆ ಮಾಡಿದ್ದಕ್ಕೆ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ ಎಂದು ದುಖಃ ವ್ಯಕ್ತಪಡಿಸಿದ್ದಾರೆ.

"ನನ್ನ 9 ವರ್ಷದ ಮಗ ನನ್ನನ್ನು ಬಿಟ್ಟು ತೊರೆದಿದ್ದಾನೆ. ನನ್ನ ಪರಿಚಯದ ಹಲವರು ನನ್ನನ್ನು ಸಮಧಾನಪಡಿಸಿದ್ದಾರೆ. ಆದರೆ ಕೆಲವರು ನನ್ನ ಕೊನೆಯ ವಿಡಿಯೋ ನೋಡಿ ನನ್ನನ್ನು ವ್ಯಂಗ್ಯವಾಡಿದರು. 'ಇದು ಅರ್ನಬ್ ಬಗ್ಗೆ ತಮಾಷೆ ಮಾಡಿದ್ದಕ್ಕೆ ನಿನಗೆ ಸಿಕ್ಕ ಪ್ರತಿಫಲ. ಆ ದೇವರು ದೀಪಾವಳಿಗೂ ಮುನ್ನ ಕೊಟ್ಟ ಉಡುಗೊರೆ' ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ರೀತಿಯ ವ್ಯಂಗ್ಯದ ಕಮೆಂಟ್‌ಗಳು ಹಲವು ಮಂದಿ ಮಾಡಿದ್ದಾರೆ. ಆದರೆ ದುಖಃದ ನಡುವೆಯೂ ಈ ರೀತಿ ನಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು" ಎಂದು ಅವರು ತಿರುಗೇಟು ನೀಡಿದ್ದಾರೆ.

ಅರ್ನ‌ಬ್‌ನನ್ನು ತಮಾಷೆ ಮಾಡಿದ್ದಕ್ಕೆ ನನ್ನ ಮಗು ಸಾವನ್ನಪ್ಪಿದ ಎಂಬುವುದು ನಿಮಗೆ ಗೊತ್ತಾಯಿತು. ನಾನೊಬ್ಬ ತಂದೆ. ಆದರೆ ಅರ್ನ‌‌ಬ್ ಗಾಡ್ ಫಾದರ್. ಕಂಗನಾಳನ್ನೂ ನಾನು ತಮಾಷೆ ಮಾಡಿದ್ದೇನೆ. ಇದಕ್ಕಾಗಿ ನನ್ನ ಪತ್ನಿಯೂ ಸಾವನ್ನಪ್ಪಬಹುದೇ ? ನಾನು ಹಲವು ಮಹಾನ್ ಜನರಿಗೆ ಧನ್ಯವಾದ ಹೇಳುತ್ತೇನೆ. ಮರಣದ ಬಗ್ಗೆ ದೇವರಿಗೆ ಮಾತ್ರ ಗೊತ್ತು. ಆದರೆ ಅರ್ನ‌ಬ್ ಬಗ್ಗೆ ತಮಾಷೆ ಮಾಡಿದ್ದಕ್ಕೆ ಮಗ ಸಾವನ್ನಪ್ಪಿದ ಎಂದು ಈ ಮಹಾ ಜನರಿಗೆ ಗೊತ್ತಾಗಿದೆ. ಇವರಿಗೆ ನಾನು ನಮಸ್ಕರಿಸುತ್ತೇನೆ" ಎಂದು ರಾಜೀವ್ ಅವರು ಭಾವುಕರಾಗಿ ಹೇಳಿದ್ದಾರೆ.

"ಮಗನ ಸಾವಿನಿಂದಾಗಿ ನಾನು ದುಖಃದಲ್ಲಿದ್ದೇನೆ. ಆದರೂ ತಾವು ತಮಾಷೆಯ ಮೂಲಕ ನಗಿಸುತ್ತಿದ್ದೀರಿ. ಕಾಮೆಡಿಯನ್ ಆಗಿ ಹಲವರು ಹಲವರ ಬಗ್ಗೆ ತಮಾಷೆ ಮಾಡುತ್ತಾರೆ. ನಾನೂ ಮಾಡಿದ್ದೇನೆ. ಆದರೆ ಕಾಮೆಡಿ ಮಾಡಿದವರ ಮಕ್ಕಳು ಮಾತ್ರ ಸಾವನ್ನಪ್ಪುತ್ತಿದ್ದಾರೆಯೇ ? ಅರ್ನಬ್ ಸುಶಾಂತ್ ಬಗ್ಗೆ ತುಂಬಾ ಟಿಬೇಟ್ ಮಾಡಿದ್ದಾನೆ. ಆದರೆ ಆತನಿಗೆ ಸುಶಾಂತ್ ಸಾವಿನ ಬಗ್ಗೆ ಗೊತ್ತಾಗಲಿಲ್ಲ. ಆದರೆ ನಿಮಗೆ ನನ್ನ ಮಗನ ಸಾವಿನ ಕಾರಣ ಗೊತ್ತಾಗಿದೆ!‍" ಎಂದು ಈ ಟ್ರೋಲ್ ‌ಗಳನ್ನು ಅವರು ಕುಟುಕಿದ್ದಾರೆ.

"ಕಾಮೆಡಿ ಮಾಡುವವರು ಸಿಂಗಲ್ ಆಗಿರಬೇಕು. ಇಲ್ಲದಿದ್ದರೆ ಅವರ ಮಕ್ಕಳು, ಪತ್ನಿ ಸಾಯುತ್ತಾರೆ. ಗೋರಖ್‌ಪುರದಲ್ಲಿ ಮಕ್ಕಳು ಸಾವನ್ನಪಿದರು. ಅವರ ಪೋಷಕರು ಯಾವುದೋ ಮಹಾನ್ ವ್ಯಕ್ತಿಯನ್ನು ತಮಾಷೆ ಮಾಡಿರಬಹುದು. ಅಲ್ಲವೇ ? ಯಾರು ಯಾರನ್ನೂ ಕಾಮೆಡಿ ಮಾಡಬಾರದು.‌ ಮಾಡಿದರೆ ನಿಮ್ಮ ಮಕ್ಕಳು ಸಾವನ್ನಪ್ಪುತ್ತಾರೆ ಎಂಬುದು ಈ ಟ್ರೋಲ್‌ಗಳ ನಿಯಮ. ನೀವು ನಿಮ್ಮ ಮಕ್ಕಳು, ಕುಟುಂಬ ಯಾವತ್ತೂ ಸಂತೋಷದಿಂದಿರಲಿ" ಎಂದು ರಾಜೀವ್ ನಿಗಮ್ ಟ್ರೋಲ್‌ಗಳಿಗೆ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)