varthabharthi


ವಿಶೇಷ-ವರದಿಗಳು

‘ರೀ ಥಿಂಕ್ ಆಧಾರ್’ ಅಭಿಯಾನದಲ್ಲಿ ಬಹಿರಂಗ

ಆಧಾರ್ ಬಳಸಿಕೊಂಡೇ ನೇರ ಹಣ ವರ್ಗಾವಣೆಯಲ್ಲಿ ಅಕ್ರಮ

ವಾರ್ತಾ ಭಾರತಿ : 14 Dec, 2020

ಸಾಂದರ್ಭಿಕ ಚಿತ್ರ

► ನೈಜ ಫಲಾನುಭವಿಗಳ ಖಾತೆಗೆ ಜಮಾವಣೆಯಾಗದ ಹಣ

► ಸ್ಕಾಲರ್‌ಶಿಪ್, ಎಂ ನರೇಗಾ, ಎಲ್‌ಪಿಜಿ ಸಬ್ಸಿಡಿಯಲ್ಲಿ ಗೋಲ್‌ಮಾಲ್?

 ಹೊಸದಿಲ್ಲಿ,ಡಿ.14: ಆಧಾರ್ ಹಾಗೂ ಬ್ಯಾಂಕ್ ಖಾತೆಗಳ ಜೋಡಣೆ ಸ್ವಯಂಪ್ರೇರಿತವೆಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹೊರತಾಗಿಯೂ, ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಗೆ ಆಧಾರ್ ಒಂದು ದೊಡ್ಡ ಅಡ್ಡಗೋಡೆಯಾಗಿ ಬಿಟ್ಟಿದೆ. ಆಧಾರ್ ವ್ಯವಸ್ಥೆಯಿಂದಾಗಿ ನೇರ ಸವಲತ್ತು ವರ್ಗಾವಣೆ ರೂಪದಲ್ಲಿ ವಂಚನೆ ಹಗರಣಗಳು ನಡೆಯುತ್ತಿರುವುದರ ಬಗ್ಗೆ ಬೆಳಕು ಚೆಲ್ಲುವ ವರದಿಯನ್ನು ‘ರೀ ಥಿಂಕ್ ಆಧಾರ್ ’ ಎಂಬ ಹೆಸರಿನ ಅಭಿಯಾನ ಪ್ರಕಟಿಸಿದೆ.

 ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಎಂನರೇಗಾದಂತಹ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸುವಲ್ಲಿ ಅನೇಕ ಮಂದಿಗೆ ಆಧಾರ್ ಬಳಸಿಕೊಂಡೇ ಅಕ್ರಮಗಳು ನಡೆಯುತ್ತಿರುವುದಾಗಿ ಹಲವಾರು ವರದಿಗಳು ಬಹಿರಂಗಪಡಿಸಿವೆ.

ಸ್ಕಾಲರ್‌ಶಿಪ್, ಪ್ರಧಾನಮಂತ್ರಿ ಕಿಸಾನ್ ಯೋಜನೆ, ಎಲ್‌ಪಿಜಿ ಸಬ್ಸಿಡಿ ಇತ್ಯಾದಿ ಸರಕಾರಿ ಯೋಜನೆಗಳಿಗೆ ಹಣ ವಿತರಣೆಯಲ್ಲೂ ಆಧಾರ್ ಸಂಖ್ಯೆಯ ಮೂಲಕ ಗೋಲ್‌ಮಾಲ್ ನಡೆದಿದೆಯೆಂದು ‘ರೀ ಥಿಂಕ್ ಆಧಾರ್’ ವರದಿಯು ಬಹಿರಂಗಪಡಿಸಿದೆಯೆಂದು ‘ದಿ ವೈರ್’ ಸುದ್ದಿ ಜಾಲ ತಾಣ ಪ್ರಕಟಿಸಿದೆ.

ಆಧಾರ್ ಆಧಾರಿತ ನೇರ ಸವಲತ್ತು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಲ್ಲಿ, ಆಧಾರ್ ಸಂಖ್ಯೆ ಸೇರಿದಂತೆ ವ್ಯಕ್ತಿಗಳ ಖಾಸಗಿ ವಿವರಗಳನ್ನು ಬಳಸಿಕೊಂಡು ಹಣ ಪಾವತಿಯನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ನಿಜವಾದ ಫಲಾನುಭವಿಗಳು ಡಿಬಿಟಿ ಮೂಲಕ ತಮಗೆ ಸಿಗಬೇಕಾದ ಮೊತ್ತವು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿಲ್ಲವೆಂದು ದೂರುತ್ತಿದ್ದಾರೆ. ಸಬ್ಸಿಡಿಗಳನ್ನು ವರ್ಗಾಯಿಸಲು ಸರಕಾರಿ ಇಲಾಖೆಗಳು ಹಲವಾರು ಬ್ಯಾಂಕ್ ಖಾತೆಗಳನ್ನು ಸೃಷ್ಟಿಸುತ್ತಿದ್ದು, ಅವುಗಳಿಗೆ ಯಾರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿದೆಯೋ ಅವರ ಬಗ್ಗೆ ಪೂರ್ಣ ವಿವರಗಳು ತಿಳಿದಿರುವುದಿಲ್ಲವೆಂದು ವರದಿ ತಿಳಿಸಿದೆ.

 ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ವು ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಆತನ ಬ್ಯಾಂಕ್ ಖಾತೆಯ ಜೊತೆ ಜೋಡಿಸುತ್ತದೆ. ಹೀಗೆ ಜೋಡಿಸಲ್ಪಟ್ಟ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಗಳು ನಡೆಯುತ್ತವೆ. ಆದರೆ ಈ ಬ್ಯಾಂಕ್ ಖಾತೆ ಸಂಖ್ಯೆಯು ಯಾರಿಗೆ ಸೇರಿದ್ದೆಂಬುದರ ಬಗ್ಗೆ ತಪಾಸಣೆಯನ್ನು ಮಾಡಲಾಗುತ್ತಿಲ್ಲ. ಬ್ಯಾಂಕ್‌ಖಾತೆಯನ್ನು ಜೋಡಿಸುವುದಕ್ಕೆ ಫಲಾನುಭವಿಗಳ ಒಪ್ಪಿಗೆ ಅಗತ್ಯವಿದ್ದರೂ,ಎನ್‌ಬಿಟಿ ವಿಷಯದಲ್ಲಿ ಈ ನಿಯಮವನ್ನು ಅನುಸರಿಸಲಾಗುತ್ತಿಲ್ಲ.

 ಬ್ಯಾಂಕ್ ಖಾತೆಗಳ ಪಟ್ಟಿ ಹಾಗೂ ಅದಕ್ಕೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗಳ ವಿವರಗಳು ಎನ್‌ಪಿಸಿಐನಲ್ಲಿ ಮಾತ್ರವೇ ಲಭ್ಯವಿರುತ್ತವೆ. ಹೀಗಾಗಿ ಫಲಾನುಭವಿಗೆ ತನ್ನ ಖಾತೆಗೆ ಜಮಾವಣೆಯಾಗಬೇಕಾಗಿರುವ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲಾಗುತ್ತಿದೆಯೇ ಎಂಬ ಮಾಹಿತಿ ಇರುವುದಿಲ್ಲವೆಂದು ವರದಿ ಇಳಿಸಿದೆ.

ಜಾರ್ಖಂಡ್‌ನಲ್ಲಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ವಿತರಿಸುವಲ್ಲಿ ವ್ಯಾಪಕ ವಂಚನೆ ನಡೆದಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ನ ತನಿಖಾ ವರದಿಯೊಂದು ಇತ್ತೀಚೆಗೆ ಬಹಿರಂಗಪಡಿಸಿತ್ತು.

ಅಸ್ಸಾಂ,ಪಂಜಾಬ್, ಬಿಹಾರಗಳಲ್ಲೂ ಇದೇ ರೀತಿಯ ಹಗರಣಗಳು ನಡೆದಿರುವ ಬಗ್ಗೆ ವರದಿಗಳು ಬಂದಿವೆ. ತಮ್ಮ ವಿದ್ಯಾರ್ಥಿವೇತನದ ಒಂದು ಸಣ್ಣ ಭಾಗವಷ್ಟೇ ತಮಗೆ ಪಾವತಿಸಲಾಗಿದೆ ಎಂದು ಅವರು ದೂರಿದ್ದಾರೆ. ಬ್ರೋಕರ್‌ಗಳು, ಬ್ಯಾಂಕ್ ಪ್ರತಿನಿಧಿಗಳು, ಶಾಲಾ ಸಿಬ್ಬಂದಿ ಹಾಗೂ ರಾಜ್ಯ ಸರಕಾರದ ಉದ್ಯೋಗಿಗಳು ಅಪವಿತ್ರ ನಂಟಿನಿಂದಾಗಿ ಈ ವಂಚನೆ ನಡೆದಿದೆಯೆಂದು ತನಿಖಾ ವರದಿ ಹೇಳಿದೆ.

ಲಾಕ್‌ಡೌನ್ ಅವಧಿಯಲ್ಲಿ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ಅನೇಕ ಮಂದಿ ಫಲಾನುಭವಿಗಳಿಗೆ ಬರಬೇಕಾಗಿದ್ದ ಎಲ್‌ಪಿಜಿ ಸಬ್ಸಿಡಿ ಹಣವನ್ನು ‘ಮಂಗಮಾಯ ’ಮಾಡಲಾಗಿತ್ತು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಲಭಿಸುವ ಹಣವನ್ನು ಲಪಟಾಯಿಸಲು ಕೂಡಾ ಆಧಾರ್ ಸಂಖ್ಯೆಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

ತಮಗೆ ನೇರ ವರ್ಗಾವಣೆಯ ಮೂಲಕ ದೊರೆಯಬೇಕಾಗಿರುವ ಹಣಪಾವತಿಯಲ್ಲಿ ಲೋಪವುಂಟಾಗಿದೆಯೆಂದು ಫಲಾನುಭವಿಗಳಿಗೆ ಅರಿವಾದಲ್ಲಿ ಆ ಬಗ್ಗೆ ಜಿಲ್ಲೆ, ತಾಲೂಕು ಹಾಗೂ ಗ್ರಾಮಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಆಡಳಿತಗಳಿಗೆ ಮನವಿ, ದೂರು ನೀಡಲು ವಿಶೇಷವಾದ ವ್ಯವಸ್ಥೆಯನ್ನು ರೂಪಿಸದೆ ಇರುವುದು ಇನ್ನೊಂದು ಸಮಸ್ಯೆಯಾಗಿ ಪರಿಣಮಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)