varthabharthi


ವಿಶೇಷ-ವರದಿಗಳು

ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣದ ಪರಿಣಾಮ

ಶೇ.81 ಗ್ರಾಮೀಣ ಮಕ್ಕಳು ಶಿಕ್ಷಣ ವಂಚಿತ

ವಾರ್ತಾ ಭಾರತಿ : 16 Dec, 2020
ಬಾಬುರೆಡ್ಡಿ ಚಿಂತಾಮಣಿ

ಬೆಂಗಳೂರು, ಡಿ.15: ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣದ ಪರಿಣಾಮ ಶೇ.81 ರಷ್ಟು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಕೇವಲ ಶೇ.15ರಷ್ಟು ಮಕ್ಕಳಿಗಷ್ಟೇ ಇದರ ಉಪಯೋಗವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಚಿಂತಕರು, ತಜ್ಞರು, ಸಂಘ-ಸಂಸ್ಥೆಗಳು ಕೂಡಲೇ ಶಾಲೆಗಳನ್ನು ತೆರೆಯುವಂತೆ ಆಗ್ರಹಪಡಿಸಿವೆ.

ಆನ್‌ಲೈನ್ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲದಿರುವುದು, ಸ್ಮಾರ್ಟ್ ಫೋನ್‌ಗಳ ಕೊರತೆ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹಲವು ಕಾರಣಗಳಿಂದಾಗಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆರು ತಿಂಗಳಿನಿಂದ ಶಾಲೆಗಳು ಆರಂಭವಾಗಿಲ್ಲ. ಕೊರೋನ ಕಾರಣವನ್ನಿಟ್ಟುಕೊಂಡು ಸರಕಾರ ಶಾಲೆಗಳನ್ನು ತೆರೆಯಲು ಮುಂದಾಗುತ್ತಿಲ್ಲ.

ಸರಕಾರವು ಆನ್‌ಲೈನ್ ಮೂಲಕವೇ ಪಾಠಗಳನ್ನು ನಡೆಸುತ್ತಿದೆ. ಮತ್ತೊಂದು ಕಡೆ ಚಂದನ ವಾಹಿನಿಯಲ್ಲಿ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆದರೂ ಶೇ.100 ರಷ್ಟು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಶಿಕ್ಷಣ ತಜ್ಞರು, ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸರಕಾರವು ವಿದ್ಯಾಗಮದ ಮೂಲಕ ಎಲ್ಲೆಡೆ ಶಿಕ್ಷಣ ನೀಡಲು ಯೋಜನೆ ರೂಪಿಸಿ, ಅನುಷ್ಠಾನವನ್ನೂ ಮಾಡಲಾಗಿತ್ತು. ಆದರೆ, ಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ಮಕ್ಕಳಲ್ಲಿ ಕೊರೋನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ಇದರ ನಡುವೆ ಕೇವಲ ಶೇ.10ರಿಂದ 15ರಷ್ಟು ಮಕ್ಕಳಿಗೆ ಶಿಕ್ಷಣ ಸಿಗುವಂತಾಗಿದ್ದು, ಶೇ.81ರಷ್ಟು ಮಕ್ಕಳು ವಂಚಿತರಾಗುತ್ತಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ವರದಿಯೊಂದು ಹೇಳಿದೆ.

 55 ಲಕ್ಷ ಮಕ್ಕಳು ಶಾಲೆ ಬಿಡುವ ಸಾಧ್ಯತೆ: ಹೆಚ್ಚಿನ ಮಕ್ಕಳು ಆಹಾರ, ಪೋಷಣೆ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಮಕ್ಕಳ ಮೇಲಾಗುತ್ತಿರುವ ಅಪಾಯಗಳು ಅಗಾಧವಾಗಿದ್ದು, ಮಾನಸಿಕ ಒತ್ತಡ, ಭಯ, ಪೋಷಣೆ ಹಾಗೂ ಶಿಕ್ಷಣ ಅಂತಹ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಶಾಲೆಗಳು ಮುಚ್ಚಿದ್ದರಿಂದ ಶೇ.73ರಿಂದ 80ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. 55 ಲಕ್ಷ ಮಕ್ಕಳು ಶಾಲೆ ಬಿಡುವ ಸಾಧ್ಯತೆಯಿದ್ದು, ಇದರಿಂದ ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಅನೇಕ ತೊಂದರೆಗಳ ಜತೆಗೆ ಕೊರೋನವೂ ಸೇರಿ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುವಂತೆ ಮಾಡಿದೆ ಎಂದು ಅಧ್ಯಯನವೊಂದು ಹೇಳಿದೆ. ಆದರೆ, ಕಳೆದ ಮಾರ್ಚ್‌ನಿಂದ ಶಾಲೆಗಳಿಗೆ ಬೀಗ ಜಡಿದಿದ್ದರಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಇದೀಗ ಏಕಾಏಕಿ ಹೊಸ ವಿಷಯಗಳನ್ನು ಮಕ್ಕಳ ಮೇಲೆ ಹೇರಿಕೆ ಮಾಡಲು ಸಾಧ್ಯವಾಗದು. ಈ ಹಿಂದೆ ಕಲಿತದ್ದನ್ನು ಮರೆತಿರುತ್ತಾರೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.

ಏಕಮುಕ ಶಿಕ್ಷಣ ಸಲ್ಲದು: ಸಂಶೋಧನೆಯೊಂದರ ಪ್ರಕಾರ ಶೇ.73ರಿಂದ 80ರಷ್ಟು ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚನೆಗೊಳಗಾಗಿದ್ದಾರೆ ಎಂಬುದು ತಿಳಿಸಿದೆ. ಇನ್ನು, ಆನ್‌ಲೈನ್ ಶಿಕ್ಷಣ ಪಡೆಯುತ್ತಿರುವ ಶೇ.15ರಿಂದ 20ರಷ್ಟು ಮಕ್ಕಳಿಗೂ ಶಿಕ್ಷಣ ಪರಿಣಾಮಕಾರಿಯಾಗಿಲ್ಲ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ ಕೊರತೆ, ಮಾಹಿತಿ ಕೊರತೆಯುಂಟಾಗುತ್ತದೆ. ಏಕಮುಖ ಶಿಕ್ಷಣದಿಂದ ಏನೂ ಪರಿಣಾಮವಾಗುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಪ್ರತಿಕ್ರಿಯಿಸಿದ್ದಾರೆ.

ಸಚಿವರ ಪ್ರತಿಕ್ರಿಯೆ: ವಿದ್ಯಾಗಮವು ಮರು ಆರಂಭಿಸಲು ಚಿಂತನೆ ನಡೆಸಿದ್ದು, ಇದು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್‌ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ. ಇದು ಶಾಲಾರಂಭವಲ್ಲ ಎಂಬುದನ್ನು ಪೋಷಕರು ಮನಗಾಣಬೇಕು ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮವನ್ನು ಹೈಕೋರ್ಟ್ ಅಪೇಕ್ಷೆಯನುಸಾರ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದ್ದು ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.

ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ಶಾಲೆಗಳನ್ನು ತೆರೆಯ ಬೇಕೆಂದು ಆಗ್ರಹಿಸಿ ಸರಕಾರಕ್ಕೆ ಮನವಿ ಮಾಡಿ, ಹಕ್ಕೊತ್ತಾಯ ಸಲ್ಲಿಸಿದ್ದೇವೆ. ಅಲ್ಲದೆ, ಎಸ್‌ಡಿಎಂಸಿ ಪ್ರತಿನಿಧಿಗಳು ಸಹ ಶಾಲೆ ಪ್ರಾರಂಭಿಸ ಬೇಕೆಂದು ಒತ್ತಾಯಿಸಿದ್ದಾರೆ. ಆದರೂ, ಸರಕಾರ ಶಾಲೆಗಳನ್ನು ತೆರೆಯುತ್ತಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಬಾಲ ಕಾರ್ಮಿಕರಾಗುತ್ತಿದ್ದಾರೆ, ಬಾಲ್ಯ ವಿವಾಹಗಳಾಗು ತ್ತಿವೆ. ಕಾರ್ಪೊರೇಟ್ ಹಾಗೂ ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣ ನಡೆಸುತ್ತಿದ್ದು, ಅವು ಕೇವಲ ಉಳ್ಳವರಿಗಷ್ಟೇ ಅನುಕೂಲಕರವಾಗಿವೆ. ಶೋಷಿತ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ದೊರಕದಂತಹ ಅಸಮಾನ ವ್ಯವಸ್ಥೆ ಸೃಷ್ಟಿಯಾಗುತ್ತಿದೆ. ಅಲ್ಲದೆ ಶೇ. 70 ಪ್ರಮಾಣದ ಬಡ ಕುಟುಂಬದ ಮಕ್ಕಳ ಬಳಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಲ್ಲ, ಅವರಿಗೆ ಇಂಟರ್ನೆಟ್ ಸೌಲಭ್ಯವಿಲ್ಲ. ಈ ಕಾರಣಕ್ಕಾಗಿಯೇ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಶ್ರೀಪಾದ್ ಭಟ್, ಚಿಂತಕರು

ಸರಕಾರ ಹಾಗೂ ಶಿಕ್ಷಣ ಇಲಾಖೆಯು ತನ್ನ ಜವಾಬ್ದಾರಿ ಮರೆತು ಶಾಲೆಗಳನ್ನು ಮುಚ್ಚಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಸರಕಾರವು ಮಕ್ಕಳ ಆರೋಗ್ಯದ ಜೊತೆಗೆ ಶೈಕ್ಷಣಿಕ, ಮಾನಸಿಕ, ಆಹಾರದ ದೃಷ್ಟಿಯಿಂದ ನೋಡಬೇಕಾಗುತ್ತದೆ. ಉಳ್ಳವರಿಗೆ ಶಿಕ್ಷಣ ಎಂಬಂತಾಗುತ್ತಿದ್ದು, ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡುವಂತಿದೆ ಸರಕಾರದ ನಿರ್ಧಾರ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕೈಗೆಟುಕದಂತಾಗಿದ್ದು, ಬಡತನದಿಂದ ನರಳುವ ಕುಟುಂಬಗಳು ಹೇಗೆ ಇದರಲ್ಲಿ ಭಾಗವಹಿಸಲು ಸಾಧ್ಯ? ಹೀಗಾಗಿ, ಸರಕಾರ ಕೂಡಲೇ ಎಲ್ಲ ಶಾಲೆಗಳನ್ನು ತೆರೆಯಬೇಕು, ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು. 

ಕೆ.ಜ್ಯೋತಿ, ಎಐಎಸ್‌ಎಫ್ ನಾಯಕಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)