varthabharthi


ಅನುಗಾಲ

ಸರ್ವಾಧಿಕಾರದೆದುರು ಮೇಟಿ ವಿದ್ಯೆ

ವಾರ್ತಾ ಭಾರತಿ : 16 Dec, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಂದಿರಾಗಾಂಧಿಯ ಜೊತೆಗೇ ಇದ್ದ ಜಗಜೀವನರಾಮ್, ಹೇಮವತೀನಂದನಬಹುಗುಣ ಮುಂತಾದವರು ಯಾವಾಗ ನಾವೆ ಮುಳುಗಹೊರಟಿತೋ ಆಗ ಅನಿರೀಕ್ಷಿತವಾಗಿ ಹಾರಿ ದಡ ಸೇರಿಕೊಂಡರು. ಹೀಗೆಯೇ ಈಗ ಅಥವಾ ಇನ್ನೊಂದಷ್ಟು ಕಾಲದಲ್ಲಿ ಮೋದಿಯವರ ಟೈಟಾನಿಕ್ ಮುಳುಗಲು ಸಕಾರಣವೇನೂ ಬೇಕಾಗಿಲ್ಲ. ಅವರ ಕುತ್ಸಿತ ದುಷ್ಟ ರಾಜಕಾರಣವೇ ಸಾಕು.

ಪ್ರಾಯಃ ಈಗ ಈ ದೇಶದಲ್ಲಿ ಜೀವಂತವಿರುವವರು ದಿಲ್ಲಿಯ ಗಡಿಯಲ್ಲಿ ಚಳವಳಿ ಹೂಡಿರುವ ಉತ್ತರ ಭಾರತದ ಬಹುಪಾಲು ಮತ್ತು ಇತರ ಭಾಗದ ಕೆಲವು ರೈತರು ಮತ್ತು ತಪ್ಪಿನ ಆರೋಪ ಹೊತ್ತು ಜಾಮೀನು ಸಿಗದೆ ಬಂಧನದಲ್ಲಿ ಕೊಳೆಯುವ ಅಮಾಯಕರು ಮಾತ್ರ. ಇವರೆಲ್ಲ ದೇಶದ್ರೋಹ ಮತ್ತು ಅದಕ್ಕಿಂತ ಕಡಿಮೆ ಗಾತ್ರದ ಆರೋಪಗಳನ್ನು ವಾಚಾಮಗೋಚರವಾಗಿ ಎದುರಿಸುತ್ತಿದ್ದಾರೆ. ಇನ್ನುಳಿದವರು ಅನಕ್ಷರಸ್ಥ-ಅಕ್ಷರಸ್ಥರೆಂಬ ವ್ಯತ್ಯಾಸ-ಅಂತರವಿಲ್ಲದೆ ಎಂದಿನಂತೆಯೇ ಪ್ರಧಾನಿ ಅವರನ್ನು ಹೊಗಳುತ್ತಾ ದೇಶದ ‘ಅಚ್ಛೇ ದಿನ್’ಗಳನ್ನು ಸಂಕ್ಷೇಪಿಸುತ್ತ್ತಾ, ವ್ಯಾಖ್ಯಾನಿಸುತ್ತಾ ತಮ್ಮ ಸುತ್ತ ತಮ್ಮದೇ ಬಲೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ; ಪ್ರಜಾಪ್ರಭುತ್ವವನ್ನು ಮತ್ತು ದೇಶದ ಸಂವಿಧಾನವನ್ನು ಸ್ವಲ್ಪಸ್ವಲ್ಪವೇ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದಾರೆ. ಪ್ರಧಾನಿ ಅವರಂತೂ ಯಾವುದೇ ಟೀಕೆಗೆ ಸೊಪ್ಪುಹಾಕದೆ ಇವೆಲ್ಲ ಪ್ರತಿಪಕ್ಷಗಳ ಕುತಂತ್ರವೆಂದು ಹೇಳುತ್ತಿದ್ದಾರೆ. ದಿಲ್ಲಿಯ ಕೊರೆವ ಚಳಿಯಲ್ಲಿ ಲಕ್ಷಗಟ್ಟಲೆ ರೈತರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೆ ಅವರನ್ನು ಭೇಟಿಯಾಗಲು ‘ಇಗೋ’ ಸಮಸ್ಯೆಯಿಂದಲೋ, ಭಯದಿಂದಲೋ, ಸಂಕೋಚದಿಂದಲೋ ಬಳಲುತ್ತಿರುವ ಪ್ರಧಾನಿ ದೂರದ ಕಚ್‌ನಲ್ಲಿ ರೈತರಿಗೆ ಕೃಷಿಮಸೂದೆಗಳ ಹಿತವಚನ ಬೋಧಿಸುತ್ತಿದ್ದಾರೆ. ರೈತರ ಹೋಗಲಿ, ಕೃಷಿವಿಜ್ಞಾನಿಗಳ ಸಲಹೆ-ಸೂಚನೆಗಳನ್ನು, ಅಭಿಪ್ರಾಯಗಳನ್ನೂ ಪಡೆಯದೇ ತನ್ನಿಚ್ಛೆಯಂತೆ ಮಂಡಿಸಿ ಬೆನ್ನಗಲದಲ್ಲಿ ಮಂಜೂರು ಮಾಡಿಸಿಕೊಂಡ ಕೃಷಿಮಸೂದೆಗಳನ್ನು ಅವರ ಹಿತ ಕಾಪಾಡಲೋಸುಗವೇ ಮಾಡಿದ್ದೆಂದು ಪ್ರಧಾನಿ ತಮ್ಮನ್ನು ತಾವೇ ಶ್ಲಾಘಿಸಿಕೊಂಡು ರೈತರ ಹೊಟ್ಟೆಗೆ ತಣ್ಣೀರುಪಟ್ಟಿ ಕಟ್ಟುತ್ತಿದ್ದಾರೆ. ಅವರ ಅನೇಕ ಜನಹಿತ, ಸಮಾಜ ಕಲ್ಯಾಣ, ಯೋಜನೆಗಳು ಒಳಾರ್ಥದಲ್ಲಿ ‘ದಯಾಮರಣ’ಗಳೇ ಆಗಿವೆ. ದೇಶ ಕೈಬೆರಳೆಣಿಕೆಯ ಮಂದಿಯ ಕೈಗೆ ಸಿಕ್ಕಿ ನಲುಗುತ್ತಿದೆ. ರೈತರಿಗೆ ಬೇಡದ ಕೃಷಿಮಸೂದೆ ರಾಜಕಾರಣಿಗಳಿಗೇಕೆ ಬೇಕು? ಯಾರ ಹಿತಕ್ಕಾಗಿ ಈ ನಾಟಕ? ಇದಕ್ಕೆ ಪ್ರಧಾನಿ ಉತ್ತರಿಸುವುದಿಲ್ಲ. ಆಳುವ ಪಕ್ಷದ ಇತರ ಕುರಿಮಂದೆಗೆ ಉಸಿರೆತ್ತಲು ಧೈರ್ಯವೇ ಇಲ್ಲ. ಒಬ್ಬಿಬ್ಬರು ಮಾತ್ರ ಪ್ರಧಾನಿ ಅವರು ಛೂಬಿಟ್ಟು ಕಳುಹಿಸಿದವರಂತೆ ಧ್ವನಿಮುದ್ರಿತ ಸಾಲುಗಳನ್ನು ಉತ್ತರಕುಮಾರರಂತೆ ಹಾಡುತ್ತಿದ್ದಾರೆಯೇ ವಿನಃ ತಮ್ಮ ನಡೆಯನ್ನಾಗಲಿ ಸರಕಾರದ ನಡೆಯನ್ನಾಗಲಿ ಸಮರ್ಥಿಸುವಲ್ಲಿ ವಿಫಲರಾಗಿದ್ದಾರೆ. ವಿಷಾದವೆಂದರೆ ರೈತರಿಗೆ ಅನ್ವಯಿಸಬೇಕಾದ ಮಸೂದೆಗಳು ಕಾರ್ಪೊರೇಟ್ ಜಗತ್ತಿಗೆ ಸಂತಸ ತಂದಿದೆ. ಇಂತಹ ವೈರುಧ್ಯವನ್ನು ಭಾರತ ಕೆಲಕಾಲದಿಂದ ಕಂಡಿರಲಿಲ್ಲ. ದೇಶದ ಎಲ್ಲೆಡೆಯ ರೈತರು ಈ ಚಳವಳಿಯಲ್ಲಿ ಭಾಗವಹಿಸುತ್ತಿಲ್ಲ. ದಕ್ಷಿಣ ಭಾರತದ ರೈತರಂತೂ ತಮ್ಮ ರಕ್ಷಣೆಗಾಗಿಯೇ ಈ ಮಸೂದೆಯೆಂಬ ಕನಸಿನಲ್ಲಿ ಮೀಯುತ್ತಿದ್ದಾರೆ. ಇದರಿಂದ ಆಳುವವರಿಗೆ ಚಿಂತೆಯಾಗಬೇಕೇ ವಿನಃ ಜನರಿಗಲ್ಲ. ಸ್ವಾತಂತ್ರ ಚಳವಳಿಯ ಬಹಳಷ್ಟು ಬಲಿದಾನ ನಡೆದದ್ದು, ಕಿಡಿ ಹಚ್ಚಿದ್ದು ಪಂಜಾಬ್ ಮತ್ತು ಬಂಗಾಳದಲ್ಲಿ. ಕೆಲವು ದಶಕದ ಹಿಂದಿನ ಚರಿತ್ರೆಯನ್ನು ಗಮನಿಸಿದರೆ ತುರ್ತುಸ್ಥಿತಿಯ ಆನಂತರ ಚುನಾವಣೆ ನಡೆದಾಗ ಇಂದಿರಾ ನಾಯಕತ್ವದ ಕಾಂಗ್ರೆಸನ್ನು ಸೋಲಿಸಿದ್ದು ಉತ್ತರ ಭಾರತವೇ ಹೊರತು ದಕ್ಷಿಣ ಭಾರತವಲ್ಲ. ದಕ್ಷಿಣ ಭಾರತದ ಬಹುಪಾಲು ಜನರು ತುರ್ತು ಸ್ಥಿತಿಯನ್ನು ಬೆಂಬಲಿಸಿದ್ದರು. ಸಂಸತ್ತಿನ ಸ್ಥಾನಗಳನ್ನು ಲೆಕ್ಕ ಹಾಕಿದರೆ ಕಾಂಗ್ರೆಸ್‌ಗೆ ಬಂದ ನೂರಕ್ಕೂ ಹೆಚ್ಚು ಸ್ಥಾನಗಳು ದಕ್ಷಿಣದ ರಾಜ್ಯಗಳದ್ದೇ. (ತಮಾಷೆಯೆಂದರೆ ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸಿಗೆ ಇಷ್ಟೂ ಸ್ಥಾನಗಳು ಲಭ್ಯವಾಗಿಲ್ಲ!) ಆದ್ದರಿಂದ ಅಧಿಕಾರದ ಕುರ್ಚಿಯನ್ನು ಬೀಳಿಸುವಲ್ಲಿ ಉತ್ತರದ ಅದರಲ್ಲೂ ಪಂಜಾಬ್ ಮತ್ತಿತರ ರಾಜ್ಯಗಳ ಸರದಾರರ ಸಂಕಲ್ಪಶಕ್ತಿ ದಕ್ಷಿಣದವರಿಗಿಲ್ಲವೆಂಬುದನ್ನು ಇತಿಹಾಸ ಹೇಳಿದೆ; ಹೇಳುತ್ತಲೇ ಇದೆ. ಆದ್ದರಿಂದ ಇದು ಪಂಜಾಬ್ ಮತ್ತು ಹರ್ಯಾಣದ ರೈತರ ಚಳವಳಿಯೇ ಹೊರತು ದೇಶದ ರೈತರದ್ದಲ್ಲ ಎಂಬ ವಾದ ಮೂರ್ಖತನದ್ದಾದೀತು!

ಭಾರತೀಯ ಪುರಾಣಗಳಲ್ಲಿ ರಾಕ್ಷಸರೂ ದೈವಭಕ್ತರೇ ಆಗಿದ್ದರು. ವರಪಡೆಯುವುದಕ್ಕಾಗಿ ತಮ್ಮನ್ನು ತಾವು ದಂಡಿಸಿ ಸಾಕಷ್ಟು ಕಾಲ ಘೋರತಪದ ಹಠಪ್ರಯೋಗಮಾಡಿದ್ದರು. ಆದರೆ ಈ ಹಠಕ್ಕೆ ಒಮ್ಮೆ ದೈವದೇವರುಗಳು ಒಲಿದು ವರ ನೀಡಿದರೆಂದಾಕ್ಷಣ ಅವರು ತಮ್ಮ ವಿನಯ, ಸೌಜನ್ಯ, ಭಕ್ತಿ, ಶರಣಾಗತಿಯ ಬದುಕನ್ನು ಮೆಟ್ಟಿ ವರಬಲಗರ್ವಿತರಾಗಿ ನಡೆದರು. ಈ ವರಗಳೂ ಬೇಷರತ್ತಿನವಾಗಿರಲಿಲ್ಲ. ಅವು ನಮ್ಮ ಆಧುನಿಕ ಮಾರುಕಟ್ಟೆಯ ಬಂಡವಾಳ ಹೂಡಿಕೆಯ ಅರ್ಜಿಗಳಂತೆ ‘ಷರತ್ತುಗಳು ಅನ್ವಯಿಸುತ್ತವೆ’ ಎಂಬ ಹಾಗಿದ್ದವು. ಸಾವಿಲ್ಲದ ವರ ಯಾರಿಗೂ ಸಿಗಲಿಲ್ಲ. ಅಮರತ್ವದಂತೆ ಕಾಣುವ ವರವು ಶಾಪವೆಂಬುದನ್ನು ಅಂತಹ ವರಪ್ರಸಾದಿತರನ್ನು ಗಮನಿಸಿ ತಿಳಿಯಬಹುದು. ಆದ್ದರಿಂದ ಗೆಲುವಿನ ಭೀಕರ ಫಲಿತಾಂಶ, ಪರಿಣಾಮ, ಮತ್ತು ಪ್ರತಿಫಲವನ್ನು ಅಸುರರು ಬೇಗನೆ ಉಂಡರು. ಇದು ಕುಹಕಿಗಳಾದ ದೇವದೇವತೆಗಳಿಗೆ ಅರ್ಥವಾಗಿತ್ತು. ಆದ್ದರಿಂದ ಅವರು ಸೋಲನ್ನು ಕಾಲಗತಿಯೆಂದು ಸ್ವೀಕರಿಸಿದರೇ ವಿನಃ ದೇವರ ಸೋಲೆಂದಲ್ಲ. ಕಾಂಗ್ರೆಸ್ ಕುಸಿಯಲು ಅದು ಸ್ಥಾಪನೆಯಾಗಿ ಒಂದು ಶತಮಾನಕ್ಕೂ ಮಿಕ್ಕಿ ಮತ್ತು ಸ್ವತಂತ್ರ ಭಾರತದಲ್ಲಿ ಸುಮಾರು ಏಳು ದಶಕಗಳಷ್ಟು ಕಾಲ ಕಾಯಬೇಕಾಯಿತು. ಕಾಂಗ್ರೆಸ್ ಕೊನೆಯ ಕೆಲವು ದಶಕಗಳ ಹೊರತಾಗಿ ಸಾಕಷ್ಟು ಘನತೆ ಮತ್ತು ಸಂಯಮದಿಂದಲೇ ತನ್ನ ಹೊಣೆಯನ್ನು ನಿಭಾಯಿಸಿತ್ತು. ಆದರೂ ಅದು ಇಳಿಯುತ್ತಿದೆಯೆಂದರೆ, ಜವಾಬ್ದಾರಿಯ ಸ್ಥಾನದಲ್ಲಿ ಅಧಿಕಾರದ ದುರಹಂಕಾರ ಬಂದಾಗ ಮುಳುವು ಹತ್ತಿರವಾಗುತ್ತದೆಯೆಂದೇ ಅರ್ಥ. ಈಗ ಭಾರತೀಯ ಜನತಾ ಪಕ್ಷದ ಗೆಲುವು ಮೇಲೆ ಹೇಳಿದ ಆಸುರೀ ಗೆಲುವಿನಂತಿದೆ. ಗ್ರಾಮ ಪಂಚಾಯತ್ ಮತ್ತಿತರ ಸ್ಥಳೀಯ ಚುನಾವಣೆಯ ಗೆಲುವನ್ನೂ ಮೋದಿಯವರ ಯಶಸ್ಸೆಂದು ಹೇಳುವವರು ತಾವು ಪ್ರಜಾಪ್ರಭುತ್ವಕ್ಕೆ ಎಂತಹ ಅನ್ಯಾಯ ಮಾಡುತ್ತಿದ್ದೇವೆಂಬುದನ್ನು ಅರಿಯರು. ಯಾವುದನ್ನು ಕಾಂಗ್ರೆಸ್ ತನಗರಿವಿಲ್ಲದಂತೆ ಮತ್ತು ಕೆಲವೇ ಸ್ವಾರ್ಥಿಗಳ ಅನುಕೂಲಕ್ಕಾಗಿ ತನ್ನ ಅವನತಿಯ ಸೂತ್ರಗಳಾಗಿ ಸ್ವೀಕರಿಸಿತೋ ಅದನ್ನೇ ಈಗ ಭಾರತೀಯ ಜನತಾಪಕ್ಷವು ಮಾಡುತ್ತಿರುವುದು ದೇಶಾಸಕ್ತರಲ್ಲಿ (ಏಕೆಂದರೆ ‘ದೇಶಭಕ್ತ’ರೆಂಬ ಅಭಿದಾನದ ಕೃತಿಸ್ವಾಮ್ಯವು ತನ್ನದೆಂದು ಭಾಜಪವು ತಿಳಿದಿದೆಯಾದ್ದರಿಂದ ಸದ್ಯ ಅದು ವ್ಯಂಗ್ಯೋಪಾದಿಯಲ್ಲೇ ಬಳಕೆಯಾಗುತ್ತಿದೆ!) ಸಮಾಧಾನವನ್ನು ತರಬಹುದು. ಏರುವುದಕ್ಕೆ ಸಾಕಷ್ಟು ಕಾಲಾವಕಾಶವನ್ನು ಭಾಜಪ ತೆಗೆದುಕೊಂಡಿತ್ತು ಎಂಬ ಸಂಗೀತನುಡಿಗಳನ್ನು ನಂಬುವ ಅಗತ್ಯವಿಲ್ಲ. ಸ್ವಲ್ಪ ಮಟ್ಟಿಗೆ ಕಾಂಗ್ರೆಸಿನ ವೈಫಲ್ಯ ಮತ್ತು ಪತನದ ಹಾದಿ ಈ ಬೆಳವಣಿಗೆಗೆ ಕಾರಣವೆಂದು ಅನ್ನಿಸುತ್ತದೆ. ಬಹುಪಾಲು ಈ ವಿಜಯಕ್ಕೆ 1992ರ ಆನಂತರದ ಮತೀಯ ಬೆಳವಣಿಗೆಗಳು ಕಾರಣವೆಂದು ಎಂತಹ ಮುಗ್ಧನಿಗೂ ಗೊತ್ತಾಗಬಹುದು. 2014ರ ಕಾಂಗ್ರೆಸಿನ ಸೋಲು ಈ ಬಾರಿಯ ಡೊನಾಲ್ಡ್ ಟ್ರಂಪ್ ಸೋಲಿನಂತೆ. ಟ್ರಂಪ್‌ನ ಬದಲು ಯಾರೂ ಆಗಬಹುದು ಎಂಬುದೇ ಬೈಡನ್ ಗೆಲುವಿಗೆ ಕಾರಣವಾಗಿತ್ತೆಂಬುದು ಟ್ರಂಪಿಗೆ ಈ ಪೈಪೋಟಿಯ ಸೋಲಿನಲ್ಲೂ ಗಳಿಕೆಯಾದ ಮತಗಳೇ ಹೇಳುತ್ತವೆ. ಹಾಗೆಯೇ ಭಾಜಪವು ಪರಿಸ್ಥಿತಿಯನ್ನು ಬಳಸಿಕೊಂಡು ಗೆದ್ದಿತು. ಆನಂತರದ ಬೆಳವಣಿಗೆಯೇ ಪ್ರಜಾತಂತ್ರಕ್ಕೆ ಮಾರಕವಾದದ್ದು. ಬಹುಮತೀಯ ಮತಾಂಧತೆ ಎಗ್ಗಿಲ್ಲದೇ ಮುಂದುವರಿಯಿತು. ಪ್ರತಿಪಕ್ಷಗಳಲ್ಲಿ ಒಗ್ಗಟ್ಟಿಲ್ಲದೇ ಇದ್ದದ್ದು ಅದರ ಈ ಮತ್ತು ಇನ್ನಷ್ಟು ಬೆಳವಣಿಗೆಗೆ ಕಾರಣವಾಯಿತೆನ್ನಬಹುದು. ಯಾವುದೇ ರಾಜಕೀಯ ಪಕ್ಷ ಆಂತರಿಕ ಪ್ರಜಾಪ್ರಭುತ್ವವನ್ನು ಸಹಿಸುವುದಿಲ್ಲ. ಆದರೆ ಒಟ್ಟಂದದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸದೇ ಹೋದರೆ ಇತಿಹಾಸ ತಮ್ಮನ್ನು ಕ್ಷಮಿಸದು ಎಂಬ ಭಯ ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳಿಗೂ ಅವುಗಳನ್ನು ಬೆಂಬಲಿಸುವ, ಅವಲಂಬಿಸುವ ಸಮಾಜಕ್ಕೂ ಇರುತ್ತದೆ. ಇದು ಕಾರಣವಾಗಿ ಅಂತಹ ಬಲಿಷ್ಠ ನಾಝಿ ಜರ್ಮನಿ ವಿಶ್ವದೆದುರು ತಲೆಬಾಗಿದ್ದು; ಸೋವಿಯೆತ್ ಒಕ್ಕೂಟವು ಒಡೆದುಹೋದದ್ದು; ಸೂರ್ಯ ಮುಳುಗದ ಸಾಮ್ರಾಜ್ಯದ ಕನಸನ್ನು ನನಸಾಗಿಸಿಕೊಂಡ ಬ್ರಿಟನ್ ಕೂಡಾ ಸೂರ್ಯಾಸ್ತಮಾನಕ್ಕೆ ಸಾಕ್ಷಿಯಾದದ್ದು; ಇರಾಕಿನಂತಹ ಇರಾಕ್ ಕೂಡಾ ಸದ್ದಾಮ್ ಹುಸೇನ್‌ನ ಅಂತ್ಯವನ್ನೆದುರಿಸಿದ್ದು. ಇವೆಲ್ಲ ಸಂಸ್ಕೃತಿಯ ಅವಸಾನವಲ್ಲ. ದುರಹಂಕಾರದ ಅವಸಾನಗಳು. ಇದೇ ವೇಳೆಗೆ, ಅಮೆರಿಕ, ಈಗಿನ ಇಂಗ್ಲೆಂಡ್, ಯುರೋಪಿನ ಅನೇಕ ರಾಷ್ಟ್ರಗಳು ಉಳಿದಿವೆಯಾದರೆ ತಮ್ಮ ಆರ್ಥಿಕ ಶಕ್ತಿಯಿಂದಲ್ಲ; ಜನಪ್ರಭುತ್ವಕ್ಕೆ ತಲೆಬಾಗುವುದರಿಂದ. ಇನ್ನೇನು, ಟ್ರಂಪ್ ಚುನಾವಣಾ ಫಲಿತಾಂಶವನ್ನು ಧಿಕ್ಕರಿಸುತ್ತಾರೆಂಬ ವಿಶ್ವವದಂತಿಗಳು ಬಂದಾಗಲೂ ಅಮೆರಿಕದಲ್ಲಿ ತಳಮಳವಾಗಲಿಲ್ಲ. ಅಲ್ಲಿನ ಜನತಂತ್ರ ಮತ್ತು ಸ್ವಲ್ಪಮಟ್ಟಿಗೆ ಅಲ್ಲಿನ ನ್ಯಾಯಾಂಗದ ಘನತೆಯು ಯಾವುದೇ ಅವಾಂತರವಾಗದಂತೆ ಅಲ್ಲಿನ ಗಣತಂತ್ರ ವ್ಯವಸ್ಥೆಯನ್ನು ಕಾಪಾಡುತ್ತಿದೆ. ಭಾರತದಲ್ಲಿಯೂ ಈ ‘ಅಲ್ಪಪ್ರಭುತ್ವ’ದ ಬದಲಿಗೆ ‘ಜನಪ್ರಭುತ್ವ’ವು ತಲೆಯೆತ್ತಿದರೆ ಎಂತಹ ದುರಹಂಕಾರಿಯಾದರೂ ಮಣ್ಣುಮುಕ್ಕುವುದು ಖಚಿತ.

ಭಾರತೀಯ ಜನತಾ ಪಕ್ಷ ಎಂದೂ ಯಾವುದೇ ಘನತರವಾದ ಮೌಲ್ಯವನ್ನು ಆಶ್ರಯಿಸಿ, ಆಚರಿಸಿದ ಚರಿತ್ರೆಯಿಲ್ಲ. ಅದು ತೀರಾ ಸಾಮಾನ್ಯವಾದ ಅಮಾಯಕರು ಮಾತ್ರ ನಂಬಬಹುದಾದ ಸುಳ್ಳುಕಥೆಗಳನ್ನು ಹತ್ತುಬಾರಿ ಹೇಳಿ ಜನರನ್ನು ನಂಬಿಸಹೊರಡುತ್ತದೆ. ಸುಳ್ಳುಗಾರರನ್ನು ಇತರರು ನಂಬುವುದಿಲ್ಲ ಎಂಬದಕ್ಕಿಂತಲೂ ಅವರು ಇತರರನ್ನು ನಂಬುವುದಿಲ್ಲ ಎಂಬುದೇ ಮುಖ್ಯ. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದೇ ಇದು. ಅಭಿವೃದ್ಧಿ, ಅರಿವು, ವೈಜ್ಞಾನಿಕ ಬೆಳವಣಿಗೆ, ಶಿಕ್ಷಣ, ಆರೋಗ್ಯ ಮುಂತಾದ ಹಿತಕರವಾಗಬೇಕಾಗಿದ್ದ ಸಂಗತಿಗಳು ಮೂಲೆಗುಂಪಾಗುತ್ತಿವೆ. ಇದರ ಸ್ಥಾನದಲ್ಲಿ ಅಜ್ಞಾನ, ಅಂಧಾಭಿವ್ಯಕ್ತಿ, ಮೂಢನಂಬಿಕೆಗಳು, ಹಿಮ್ಮುಖ ಚಲನೆ, ಸುಳ್ಳು ಇವೇ ಕಾರ್ಯೋನ್ಮುಖವಾಗಿವೆ. ಇವು ಒಂದು ಹಂತದಲ್ಲಿ, ಒಂದಷ್ಟು ಕಾಲ ಜನರಿಗೆ ಸಂತೆಹೊತ್ತಿನ ಇಂದ್ರಜಾಲದಂತೆ ಸುಖಕರ ಸೌಕರ್ಯವಾಗುತ್ತವೆ. ಆದರೆ ಮಂಪರು ಹರಿದಾಗ ತಾವು ದಾರಿತಪ್ಪಿಎಷ್ಟು ದೂರ ಬಂದಿದ್ದೇವೆಂಬ ಮತ್ತು ಅದರ ಫಲವನ್ನು ತಾವೇ ಉಣ್ಣುತ್ತಿದ್ದೇವೆಂಬ ವಾಸ್ತವ ತಿಳಿಯುತ್ತದೆ. ಸ್ಥಾಯೀಭಾವದ ಸಿದ್ಧಾಂತಗಳಿಲ್ಲದೆ ಜನರನ್ನು ಭಯಾನಕವಾದ ದುರಂತಕ್ಕೆ ತಳ್ಳಿ ಅಧಿಕಾರವನ್ನು ಅನುಭವಿಸಲು ಇಚ್ಛೆಪಟ್ಟವರೆಲ್ಲ ವ್ಯಷ್ಟಿ-ಸಮಷ್ಟಿಯ ದುರಂತ ಅಂತ್ಯವನ್ನೇ ಕಂಡಿದ್ದಾರೆ. ಹಿಟ್ಲರ್, ಮುಸ್ಸೋಲಿನಿ ಮಾತ್ರವಲ್ಲ, ಸದ್ದಾಮ್, ಗಡ್ಡಾಫಿ ಮುಂತಾದವರೂ ವಿಶ್ವಗುರುವಾಗುವ, ಬಹುತೇಕ ಆಗಿಯೇ ಹೋದ ಕನಸಿನಲ್ಲಿದ್ದರು! ದೊಡ್ಡವರು ಸಣ್ಣತನ ಮಾಡಲು ಹೊರಟಾಗ ದೇಶಕ್ಕೆ ಅಳಿಗಾಲವೇ ಹೊರತು ಉಳಿಗಾಲವಿಲ್ಲ. ಭಾರತವು ನಾಝಿ ಜರ್ಮನಿಯಂತಾಗಲು ಬಹುಕಾಲ ಬೇಕಿಲ್ಲ. ದೇಶದ ಪ್ರತಿಷ್ಠಿತರೆಲ್ಲ ಗೆದ್ದೆತ್ತಿನ ಬಾಲ ಹಿಡಿದು ಹಿಂಬಾಲಿಸುತ್ತಿದ್ದಾರೆ. ತಮ್ಮ ಅನುಕೂಲವಾದರೂ ಯಾವುದರಲ್ಲಿ ಮತ್ತು ಎಲ್ಲಿದೆ ಎಂಬುದನ್ನೂ ಅರಿಯುವ ವಿವೇಕವಿಲ್ಲದಿದ್ದರೆ ಕಿಂದರಿಜೋಗಿಯನ್ನು ಹಿಂಬಾಲಿಸಿದವರಲ್ಲಿ ನಡೆಯಲಾಗದ ಕುಂಟನಷ್ಟೇ ಹಿಂದುಳಿಯಬಹುದು; ತನಗರಿವಿಲ್ಲದೆಯೇ ಅಪಾಯದಿಂದ ಪಾರಾಗಬಹುದು. ಒಂದೇ ಒಂದು ನಿದರ್ಶನದೊಂದಿಗೆ ಅವನತಿಯ ಇತ್ತೀಚೆಗಿನ ಬೆಳವಣಿಗೆಯನ್ನು (ಅವನತಿಗೂ ಬೆಳವಣಿಗೆಯಿದೆ- ಕ್ಯಾನ್ಸರಿನ ಬೆಳವಣಿಗೆಯಂತೆ!) ಗಮನಿಸಬಹುದು:

ನನ್ನ ಅನೇಕ ಅಲೋಪತಿ ವೈದ್ಯ ಮಿತ್ರರು, (ಇವರಲ್ಲಿ ಬಹುಪಾಲು ಮೆಲ್ಜಾತಿ-ಮೇಲ್ವರ್ಗದವರು) ಮೊನ್ನೆ ಮೊನ್ನೆಯವರೆಗೂ ಮೋದಿಯ ಖಾಸಾದಾಸರಾಗಿದ್ದರು. ಈ ನಡುವೆ ಕೇಂದ್ರ ಸರಕಾರವು ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ/ ಪದವೀಧರರಿಗೆ ಕೆಲವು ತರಬೇತಿಗಳೊಂದಿಗೆ ಅಲೋಪತಿ ಚಿಕಿತ್ಸೆಯನ್ನು ಮಾಡಲು ಅನುಮತಿಯನ್ನು ನೀಡುವ ನಿರ್ಧಾರವನ್ನು ಕೈಗೊಂಡಿತು. ಅಲಹಾಬಾದನ್ನು ಪ್ರಯಾಗ್‌ರಾಜ್ ಮಾಡುವ, ಹೈದರಾಬಾದನ್ನು ಭಾಗ್ಯನಗರವಾಗಿಸುವ ನಿರ್ಧಾರಗಳು ಗುಳ್ಳೆಗಳೇ ಹೊರತು ಅವುಗಳಿಂದ ಮೂರ್ತ ಹಾನಿಯಿಲ್ಲ. ಆದರೆ ಇಂತಹ ವೈದ್ಯಕೀಯ ಮಿಶ್ರಪತಿಗಳಿಂದ ಜನರಿಗೆ ಅಪಾರ ಹಾನಿಯಾಗಬಹುದು. ಆದರೆ ತಮಾಷೆಯೆಂದರೆ ನನ್ನೀ ವೈದ್ಯಮಿತ್ರರು ಈಗ ಈ ನಿರ್ಧಾರವನ್ನು ಖಂಡಿಸುತ್ತಿದ್ದಾರೆ; ಅಸಹನೆಯಿಂದ ಕುದಿಯುತ್ತಿದ್ದಾರೆ. ಇದರಲ್ಲಿ ತಾತ್ವಿಕ ಭಿನ್ನಾಭಿಪ್ರಾಯಕ್ಕಿಂತಲೂ ಹೆಚ್ಚು ವೈಯಕ್ತಿಕ ನಷ್ಟದ, ತೊಂದರೆಯ ಆತಂಕ. ತಮ್ಮ ಮನೆಗೆ ಬೆಂಕಿ ಬೀಳುವವರೆಗೆ ಈ ದೇಶದ ಬಹುಪಾಲು ಜನರು ಚಳಿಕಾಯಿಸುತ್ತಾ ಆನಂದಿಸುತ್ತಿರುತ್ತಾರೆ. ಈ ಮಿಶ್ರ ತಳಿ ಎಷ್ಟುಕಾಲ ಬದುಕುತ್ತದೆಯೋ ಹೇಸರಗತ್ತೆಯೇ ಹೇಳಬೇಕು.

ಇಂತಹ ಅನೇಕ ಇತರ ಕ್ಷೇತ್ರಗಳ ಕಡೆಗೆ ಪ್ರಜ್ಞಾವಂತರು ಗಮನ ಹರಿಸಬಹುದು. ಇಂದಿರಾಗಾಂಧಿಯ ಜೊತೆಗೇ ಇದ್ದ ಜಗಜೀವನರಾಮ್, ಹೇಮವತೀನಂದನಬಹುಗುಣ ಮುಂತಾದವರು ಯಾವಾಗ ನಾವೆ ಮುಳುಗ ಹೊರಟಿತೋ ಆಗ ಅನಿರೀಕ್ಷಿತವಾಗಿ ಹಾರಿ ದಡ ಸೇರಿಕೊಂಡರು. ಹೀಗೆಯೇ ಈಗ ಅಥವಾ ಇನ್ನೊಂದಷ್ಟು ಕಾಲದಲ್ಲಿ ಮೋದಿಯವರ ಟೈಟಾನಿಕ್ ಮುಳುಗಲು ಸಕಾರಣವೇನೂ ಬೇಕಾಗಿಲ್ಲ. ಅವರ ಕುತ್ಸಿತ ದುಷ್ಟ ರಾಜಕಾರಣವೇ ಸಾಕು.

ದಿಲ್ಲಿಯಲ್ಲಿ ಬೀಡುಬಿಟ್ಟಿರುವ ರೈತರು ಇವನ್ನೆಲ್ಲ ನೆನಪಿಸಿದರು. ಸರ್ವಾಧಿಕಾರದೆದುರು ಮೇಟಿ ವಿದ್ಯೆ ಮೇಲೆನಿಸಿದೆ. ಚಳಿಯಲ್ಲೂ ಅವರೊಡ್ಡಿದ ಸವಾಲು ನಮ್ಮನ್ನು ಬೆಚ್ಚಗಿಟ್ಟಿದೆ. ಕರ್ನಾಟಕದಲ್ಲಿಯೂ ರೈತರು ಮೈಕೊಡವಿ ಎದ್ದರೆ ಸ್ವಲ್ಪ ಹೆಚ್ಚು ಬೆಳಕು ಸಿಕ್ಕೀತು. ಆದರೆ ನೆನಪಿಡಬೇಕಾದ ಸೋಜಿಗವೊಂದಿದೆ: ಕಿಷ್ಕಿಂಧೆಯೆಂಬ ಸ್ಥಳವಿರುವುದು ನಮ್ಮ ಕರ್ನಾಟಕದಲ್ಲೇ! ಇದರ ಪರಂಪರೆಯನ್ನು ಮರೆಯುವ ಹಾಗಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)