varthabharthi


ವಿಶೇಷ-ವರದಿಗಳು

ಕೋವಿಡ್-19 ಪಿಡುಗನ್ನು ಚೆನ್ನಾಗಿ ನಿರ್ವಹಿಸಿದ್ದರೆ ಕೇಂದ್ರವೇಕೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿದೆ?

ವಾರ್ತಾ ಭಾರತಿ : 18 Dec, 2020
ರೋಹನ್ ವೆಂಕಟರಾಮಕೃಷ್ಣನ್- scroll.in

ಇತರ ದೇಶಗಳಿಗೆ ಹೋಲಿಸಿದರೆ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಭಾರತವು ಉತ್ತಮ ಸಾಧನೆಯನ್ನು ಮಾಡಿದೆ ಎಂದು ಕೇಂದ್ರವು ಹೇಳಿಕೊಂಡಿದೆ. ಅದು ವಿಶೇಷವಾಗಿ ಕೋವಿಡ್ ನಿಯಂತ್ರಣದಲ್ಲಿ ದಿಲ್ಲಿ ಸರಕಾರದ ಪ್ರಯತ್ನಗಳಿಗಾಗಿ ಅದನ್ನು ಅಭಿನಂದಿಸಿದೆ. ತನ್ಮಧ್ಯೆ ಮುಂದಿನ ತಿಂಗಳು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗುವಂತೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನವೂ ಹೋಗಿದೆ.

ಆದರೂ ಪರಿಸ್ಥಿತಿಯು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸಲು ಸಾಕಷ್ಟು ಸುರಕ್ಷಿತವಾಗಿಲ್ಲ ಎಂದು ಕೇಂದ್ರವು ಸಮಜಾಯಿಷಿ ನೀಡಿದೆ. ಇದೇ ವೇಳೆ ಕೋವಿಡ್ ನಿಯಂತ್ರಣದಲ್ಲಿ ತನಗಿಂತ ಕಡಿಮೆ ಸಾಧನೆಗಳನ್ನು ಮಾಡಿವೆ ಎಂದು ಭಾರತವು ಬೆಟ್ಟು ಮಾಡಿರುವ ಹೆಚ್ಚಿನ ದೇಶಗಳು ತಮ್ಮ ಸಂಸತ್ ಅಥವಾ ಸಮಾನ ಸಂಸ್ಥೆಗಳ ಅಧಿವೇಶನಗಳನ್ನು ನಡೆಸಲು ಎಲ್ಲ ಮಾರ್ಗಗಳನ್ನು ಕಂಡುಕೊಂಡಿವೆ.

ಅಧಿಕೃತ ಕೊರೋನ ವೈರಸ್ ಅಂಕಿಸಂಖ್ಯೆಗಳಂತೆ ರಾಷ್ಟ್ರಮಟ್ಟದಲ್ಲಿ ಸಾಂಕ್ರಾಮಿಕವು ಸೆಪ್ಟೆಂಬರ್ ತಿಂಗಳಲ್ಲಿ ಉತ್ತುಂಗಕ್ಕೇರಿತ್ತು ಮತ್ತು ದಿಲ್ಲಿಯಲ್ಲಿ ನವೆಂಬರ್‌ನಲ್ಲಿ ಹೊಸ ಸೋಂಕು ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿತ್ತಾದರೂ ನಂತರ ಹೊಸ ಪ್ರಕರಣಗಳ ಇಳಿಮುಖಗೊಳ್ಳುತ್ತಿದ್ದು ಚೇತರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಚಳಿಗಾಲದಲ್ಲಿ ಕೋವಿಡ್-19 ಉಲ್ಬಣಗೊಳ್ಳುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ವಿವರಿಸಿದ್ದಾರೆ. ಅಲ್ಲದೆ ಸಂಸತ್ ಅಧಿವೇಶನವನ್ನು ರದ್ದುಗೊಳಿಸಲು ಚಳಿಯನ್ನು ಸರಕಾರವು ದೂರಿದ್ದರೂ ಜನವರಿಯಲ್ಲಿ ಸಂಸತ್ತಿನ ಮುಂಗಡಪತ್ರ ಅಧಿವೇಶನವನ್ನು ನಡೆಸಲು ತಾನು ಸಿದ್ಧನಾಗಿದ್ದೇನೆ ಎಂಬ ಸುಳಿವುಗಳನ್ನು ನೀಡಿದೆ. ಅಂದ ಹಾಗೆ ಜನವರಿಯಲ್ಲೂ ಚಳಿಗಾಲವಿರುತ್ತದೆ ಎನ್ನುವುದನ್ನು ಗಮನಿಸಬೇಕು.

ಸಾರ್ವಜನಿಕರಿಗೆ, ರಾಜಕಾರಣಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕೋವಿಡ್-19 ದೊಡ್ಡ ಬೆದರಿಕೆಯಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ವೈರಸ್ ಹರಡುವಿಕೆಯನ್ನು ತಡೆಯಲು ಮಾಡಿದ್ದ ವ್ಯವಸ್ಥೆಗಳು ಸಮರ್ಪಕವಾಗಿರಲಿಲ್ಲ ಮತ್ತು ಅಧಿವೇಶನವನ್ನು ಅವಧಿಗೆ ಮುನ್ನವೇ ಮುಂದೂಡುವುದು ಅನಿವಾರ್ಯವಾಗಿತ್ತು.

ಆದರೆ ಕೋವಿಡ್ ಬೆದರಿಕೆಯೊಂದೇ ಸಮಸ್ಯೆಯಾಗಿದ್ದರೆ ಜನವರಿಯಲ್ಲಿ ಮುಂಗಡಪತ್ರ ಅಧಿವೇಶನವನ್ನು ನಡೆಸುವ ಪ್ರಶ್ನೆಯೇ ಇಲ್ಲ. ಆದರೆ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿ ನೇರವಾಗಿ ಮುಂಗಡಪತ್ರ ಅಧಿವೇಶನವನ್ನು ನಡೆಸುವ ಸರಕಾರದ ನಿರ್ಧಾರವು ನೂತನ ಕೃಷಿ ಕಾನೂನುಗಳ ಕುರಿತು ಚರ್ಚೆಗಳಿಂದ ತಪ್ಪಿಸಿಕೊಳ್ಳುವ ನೆಪವಾಗಿದೆ ಅಷ್ಟೇ. ಸೆಪ್ಟೆಂಬರ್‌ನಲ್ಲಿ ಕೋಲಾಹಲಕಾರಿ ಸನ್ನಿವೇಶದಲ್ಲಿ ಮತಗಳ ಸೂಕ್ತ ಎಣಿಕೆ ನಡೆಸದೆ ಈ ಕಾನೂನುಗಳನ್ನು ಅಂಗೀಕರಿಸಲಾಗಿತ್ತು ಮತ್ತು ಈ ಕಾನೂನುಗಳನ್ನು ವಿರೋಧಿಸಿ ಸಹಸ್ರಾರು ರೈತರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಕಾನೂನುಗಳಲ್ಲಿ ತಿದ್ದುಪಡಿಗಳನ್ನು ತರುವುದು ಸೇರಿದಂತೆ ಹಲವಾರು ಕೊಡುಗೆಗಳನ್ನು ಕೇಂದ್ರವು ಪ್ರತಿಭಟನಾನಿರತ ರೈತರ ಮುಂದಿರಿಸಿದೆ, ಆದರೆ ಅವುಗಳನ್ನು ರೈತರು ತಿರಸ್ಕರಿಸಿದ್ದಾರೆ. ಇಂತಹ ವಿಷಯಗಳನ್ನು ಚರ್ಚಿಸಲು ಸಂಸತ್ತಿಗಿಂತ ಉತ್ತಮ ಸ್ಥಳ ಬೇರೆ ಯಾವುದಿದೆ? ಅಲ್ಲಿ ಪ್ರತಿಪಕ್ಷಗಳು ಆಗ್ರಹಿಸಿರುವಂತೆ ಮೊದಲು ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು. ರೈತರ ಪ್ರತಿಭಟನೆಗಳ ಕಾವನ್ನು ಜನವರಿ ವೇಳೆಗೆ ಹೇಗಾದರೂ ತಗ್ಗಿಸುವ ಆಶಯವನ್ನು ಸರಕಾರವು ಹೊಂದಿದೆ ಮತ್ತು ಮುಂಗಡಪತ್ರ ಅಧಿವೇಶನವು ಕೇವಲ ಬಜೆಟ್ ಅನ್ನು ಕೇಂದ್ರೀಕರಿಸುವಂತೆ ಮಾಡಲು ಯೋಜಿಸಿದೆ.

ತನ್ಮೂಲಕ ರೈತರ ಪ್ರತಿಭಟನೆ, ಕೋವಿಡ್-19 ಲಸಿಕೆಯ ವಿತರಣೆಗೆ ಸರಕಾರದ ಯೋಜನೆ, ತೀರ ಉಲ್ಬಣಿಸಿರುವ ಅಪೌಷ್ಟಿಕತೆ ಮತ್ತು ಪೂರ್ವ ಲಡಾಖ್‌ನಲ್ಲಿ ಚೀನದ ನಿರಂತರ ಅತಿಕ್ರಮಣದಂತಹ ಮಹತ್ವದ ವಿಷಯಗಳ ಮೇಲೆ ಚರ್ಚೆಗಳಿಂದ ನುಣುಚಿಕೊಳ್ಳುತ್ತಿದೆ.

ವಂಗ್ಯವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಂಸತ್ತನ್ನು ಹೆಚ್ಚಾಗಿ ಕಾರ್ಯಕಾರಿ ಕ್ರಮಗಳಿಗೆ ರಬ್ಬರ್ ಸ್ಟಾಂಪ್‌ನಂತೆ ಬಳಸಲಾಗುತ್ತಿದೆ ಮತ್ತು ಈ ಕ್ರಮಗಳು ಪರಿಶೀಲನೆ ಮತ್ತು ಹೆಚ್ಚಿನ ಚರ್ಚೆಗಳಿಲ್ಲದೆ ಅಂಗೀಕಾರಗೊಳ್ಳುತ್ತಿವೆ. ಈ ಲೆಕ್ಕದಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸಲು ಸರಕಾರವು ಹೆಚ್ಚು ತಲೆಬಿಸಿ ಮಾಡಕೊಳ್ಳಬೇಕಿರಲಿಲ್ಲ ಮತ್ತು ಕನಿಷ್ಠ ನೆಪಕ್ಕಾದರೂ ಸಂಸತ್ ಅಧಿವೇಶನ ನಡೆದಿದೆ ಎಂದು ತೋರಿಸಬಹುದಿತ್ತು. ಎಲ್ಲ ನೆಪಗಳನ್ನೊಡ್ಡಿಯೂ ಕೆಲ ದಿನಗಳ ಕಾಲ ವೃತ್ತಪತ್ರಿಕೆಗಳಲ್ಲಿ ತನಗೆ ವಿರುದ್ಧವಾದ ಶೀರ್ಷಿಕೆಗಳು ಮತ್ತು ಕಠಿಣ ಪ್ರಶ್ನೆಗಳಿಗೆ ಬೆದರಿರುವ ಮೋದಿ ಸರಕಾರವು ಭಾರತೀಯ ಸಂಸತ್ತನ್ನು ತಾನು ಏನೆಂದು ಪರಿಗಣಿಸಿದ್ದೇನೆ ಮತ್ತು ಪ್ರಜಾಪ್ರಭುತ್ವಕ್ಕೆ ಅದರ ಸುಸಂಗತೆ ಏನು ಎನ್ನುವುದನ್ನು ಸ್ಪಷ್ಟಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)