varthabharthi


ನಿಮ್ಮ ಅಂಕಣ

ದ್ರಾವಿಡ್ ಬೇಕು

ವಾರ್ತಾ ಭಾರತಿ : 21 Dec, 2020
ವಿಜಯಕುಮಾರ್ ಎಚ್. ಕೆ . ರಾಯಚೂರು

ಮಾನ್ಯರೇ,

ಭಾರತ ಕ್ರಿಕೆಟ್ ತಂಡ ಮೊದಲನೆಯ ಟೆಸ್ಟ್ ಪಂದ್ಯದಲ್ಲಿ ಎಂದೂ ಕಾಣದ ಸೋಲು ಕಂಡಿರುವುದು ಬಲು ಸೋಜಿಗ ಹಾಗೂ ನಾಚಿಕೆಗೇಡು. ಭಾರತ ತಂಡಕ್ಕೆ ಬ್ಯಾಟಿಂಗ್ ಹೇಳಿ ಕೊಡಲು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಂತಹ ಕೋಚ್ ಅವಶ್ಯಕತೆ ಇದೆ. ಜಹೀರಾಗಿದೆ.ರಾಹುಲ್ ದ್ರಾವಿಡ್ ಇದ್ದರೆ ಭಾರತಕ್ಕೆ ಆನೆಬಲ, ಅವರನ್ನು ಆಸ್ಟ್ರೇಲಿಯಕ್ಕೆ ಕಳುಹಿಸಲು ಇದು ಸೂಕ್ತ ಸಮಯ! ಬಾರ್ಡರ್-ಗವಾಸ್ಕರ್ ಟ್ರೋಫಿ ಸಲುವಾಗಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ಬೆನ್ನಲ್ಲೇ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಬೇಕೆಂಬ ದನಿ ಹೆಚ್ಚಾಗುತ್ತಿದೆ. ಆತಿಥೇಯ ಆಸ್ಟ್ರೇಲಿಯ ಎದುರು ಡೇ-ನೈಟ್ ಟೆಸ್ಟ್ ಪಂದ್ಯ ಗೆಲ್ಲುವ ಸುವರ್ಣಾವಕಾಶವನ್ನು ಕೈ ಚೆಲ್ಲಿದ ಟೀಮ್ ಇಂಡಿಯಾ 8 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಟೀಮ್ ಇಂಡಿಯಾದ ಆತ್ಮಬಲ ಹೆಚ್ಚಿಸುವ ಸಲುವಾಗಿ ರಾಹುಲ್ ದ್ರಾವಿಡ್, ಒಬ್ಬ ಬ್ಯಾಟ್ಸ್‌ಮನ್ ಆಗಿ ಆಸ್ಟ್ರೇಲಿಯ ನೆಲದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಅವರ ಅನುಭವದ ಅಗತ್ಯ ಈಗ ಭಾರತ ತಂಡಕ್ಕೆ ಇದೆ.

ಆಸ್ಟ್ರೇಲಿಯದಲ್ಲಿನ ಪರಿಸ್ಥಿತಿಗಳಲ್ಲಿ ಚೆಂಡು ಸ್ವಿಂಗ್ ಆಗುವಾಗ ಯಾವ ರೀತಿ ಬ್ಯಾಟ್ ಮಾಡಬೇಕು ಎಂಬುದನ್ನು ದ್ರಾವಿಡ್ ಅವರಿಗಿಂತಲೂ ಉತ್ತಮವಾಗಿ ಯಾರಿಂದಲೂ ಹೇಳಿಕೊಡಲು ಸಾಧ್ಯವಿಲ್ಲ. ತಂಡದಲ್ಲಿ ದ್ರಾವಿಡ್ ಇದ್ದಾರೆ ಎಂದಾಕ್ಷಣವೇ ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಕೋವಿಡ್-19 ಕಾರಣದಿಂದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. 2ನೇ ಪಂದ್ಯಕ್ಕೆ ಪೃಥ್ವಿ ಶಾ ಬದಲು ಶುಭಮನ್ ಗಿಲ್‌ಗೆ ಓಪನಿಂಗ್ ನೀಡಿ ಎಂಬ ಕೂಗು ಕೇಳಿ ಬರುತ್ತಿದೆೆ. ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್‌ಸಿಎ) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಇದಕ್ಕೂ ಮುನ್ನ ಭಾರತ ‘ಎ’ ಮತ್ತು ಭಾರತ ಕಿರಿಯರ ತಂಡಗಳ ಕೋಚ್ ಆಗಿ ಯಶಸ್ಸು ತಂದುಕೊಟ್ಟಿದ್ದರು. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತದ ಕಿರಿಯರ ತಂಡ 2018ರಲ್ಲಿ ನ್ಯೂಝಿಲ್ಯಾಂಡ್ ನೆಲದಲ್ಲಿ ವಿಶ್ವಕಪ್ ಗೆದ್ದಿತ್ತು. ಗುರು ದ್ರಾವಿಡ್ ಹೇಳಿಕೊಟ್ಟ ಮಾರ್ಗದಲ್ಲಿ ನಡೆದಿದ್ದ ಶುಭಮನ್ ಗಿಲ್ ಮತ್ತು ಪೃಥ್ವಿ ಶಾ ಭವಿಷ್ಯದ ತಾರೆಗಳಾಗಿ ಬೆಳೆದು ಬಂದಿದ್ದರು. ಹೀಗಾಗಿ ಭಾರತ ತಂಡದ ವಿಚಾರದಲ್ಲಿ ದ್ರಾವಿಡ್ ಪಾಲ್ಗೊಳ್ಳುವಿಕೆ ಹೆಚ್ಚಾಗುವಂತೆ ಬಿಸಿಸಿಐ ಮಾಡಬೇಕು.

ದ್ರಾವಿಡ್ ಆಸ್ಟ್ರೇಲಿಯಕ್ಕೆೆ ತೆರಳಿ 14 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟರೂ, ಜನವರಿ 7ರಂದು ಶುರುವಾಗಲಿರುವ ತೃತೀಯ ಟೆಸ್ಟ್ ಪಂದ್ಯದ ನೆಟ್ ಅಭ್ಯಾಸಕ್ಕೆ ಟೀಮ್ ಇಂಡಿಯಾ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಭಾರತ ತಂಡದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ದ್ರಾವಿಡ್ ಅವರನ್ನು ಕೇಳಲು ಇದು ಸೂಕ್ತ ಸಮಯ. ಹೀಗಾಗಿ ಭಾರತ ಕ್ರಿಕೆಟ್ ತಂಡಕ್ಕೆ ದ್ರಾವಿಡ್ ಬೇಕೇ ಬೇಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)