varthabharthi


ನಿಮ್ಮ ಅಂಕಣ

‘ಸ್ವಚ್ಛ ಗಂಗಾ ಅಭಿಯಾನ’ಕ್ಕೆ ಇನ್ನೆಷ್ಟು ಬಲಿದಾನಗಳು ಬೇಕು?

ವಾರ್ತಾ ಭಾರತಿ : 22 Dec, 2020
ಚಿನ್ಮಯ್ ಮಂಡಲ್

ಗಂಗಾ ನದಿಯ ರಕ್ಷಣೆಗಾಗಿ ಕಳೆದ 2 ದಶಕಗಳಿಂದ ಹೋರಾಡುತ್ತಿರುವ 75 ವರ್ಷದ ಪರಿಸರ ವಾದಿ ಸ್ವಾಮಿ ಶಿವಾನಂದ ಸರಸ್ವತಿ, ಮಾತ್ರ ಸದನದ ಇತರ ಸಂತರೊಂದಿಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಆಡಳಿತ ವರ್ಗಕ್ಕೆ ಹಲವು ಪ್ರಶ್ನೆಯನ್ನು ಒಡ್ಡಿದೆ. ದಿನಕ್ಕೆ ಕೇವಲ 5 ಲೋಟ ನೀರು ಕುಡಿದು ಬದುಕುತ್ತಿರುವ ಶಿವಾನಂದ ಸರಸ್ವತಿ, ಹರಿದ್ವಾರದ ಅರಣ್ಯದಲ್ಲಿರುವ ಸಣ್ಣ ಆಶ್ರಮದಲ್ಲಿ ವಾಸಿಸುತ್ತಿದ್ದು ಪ್ರಕೃತಿಯ ನಿಯಮದ ವಿರುದ್ಧದ ಮಾನವ ಕೈಗೊಳ್ಳುತ್ತಿರುವ ಕ್ರಮಗಳಿಂದ ಉಂಟಾಗುವ ದೂರಗಾಮಿ ಪರಿಣಾಮಗಳ ಬಗ್ಗೆ ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ.

ಗಂಗಾ ನದಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಪ್ರತಿಪಾದಿಸುತ್ತಿರುವಾಗ, ಸ್ವಾಮಿ ಶಿವಾನಂದ ಹಾಗೂ ಇತರ ಸಂತರು ಗಂಗಾ ನದಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಅಗತ್ಯವೇನು ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ(ಎನ್‌ಎಂಸಿಜಿ), ಸೆಂಟರ್ ಫಾರ್ ಗಂಗಾ ರಿವರ್ ಬೇಸಿನ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸ್ಟಡೀಸ್(ಸಿ ಗಂಗಾ)ನ ಆಶ್ರಯದಲ್ಲಿ ಇತ್ತೀಚೆಗೆ ಐದನೇ ‘ಇಂಡಿಯಾ ವಾಟರ್ ಇಂಫ್ಯಾಕ್ಟ್ ’ (ಭಾರತದ ನೀರಿನ ಪ್ರಭಾವ) ಸಮ್ಮೇಳದ ಪ್ರಮುಖ ವಿಷಯ ‘ಮಾನವ ವಸತಿಗೆ ಹೊಂದಿಕೊಂಡು ನದಿ ಸಂರಕ್ಷಣೆ’ ಎಂಬುದಾಗಿತ್ತು. ಗಂಗಾ ನದಿ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಭಾರತ ಕೈಗೊಂಡಿರುವ ಹಲವು ಉಪಕ್ರಮಗಳಲ್ಲಿ ಇದೂ ಒಂದಾಗಿದೆ.

2014ರಲ್ಲಿ ನಮಾಮಿ ಗಂಗಾ ಎಂಬ 20,000 ಕೋಟಿ ರೂ. ವೆಚ್ಚದ ಸಮಗ್ರ ಸುರಕ್ಷಾ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿತು. ಮಾಲಿನ್ಯ ನದಿ ಸೇರದಂತೆ ತಡೆಯುವುದು ಮತ್ತು ಗಂಗಾ ನದಿಯ ಸಂರಕ್ಷಣೆ ಮತ್ತು ನವೀಕರಿಸುವ ಅವಳಿ ಉದ್ದೇಶದ ಯೋಜನೆ ಇದಾಗಿದೆ. ಎನ್‌ಎಂಸಿಜಿ ಮತ್ತು ರಾಜ್ಯದ ನದಿ ಸಂರಕ್ಷಣಾ ಸಂಸ್ಥೆಯು ಈ ಯೋಜನೆಯನ್ನು ಜಾರಿಗೊಳಿಸುತ್ತದೆ. 2014ರ ಬಳಿಕ ರಾಷ್ಟ್ರೀಯ, ರಾಜ್ಯಮಟ್ಟದ ಹಲವು ಸಮಿತಿಗಳನ್ನು ರೂಪಿಸಲಾಗಿದೆ. ಗಂಗಾ ನದಿ ಪಾತ್ರದ ರಾಜ್ಯಗಳ ಮುಖ್ಯಮಂತ್ರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ , ತಳಮಟ್ಟದ ಸಂಸ್ಥೆಗಳ ಅಧಿಕಾರಿಗಳು ಇದರ ಸದಸ್ಯರಾಗಿದ್ದಾರೆ. ಈ ಯೋಜನೆಯಡಿ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹಲವು ಎಂಒಯು(ಮೆಮೊರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್)ಗೆ ಸಹಿ ಹಾಕಲಾಗಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸ್ವಾಮಿ ಶಿವಾನಂದರಂತಹ ಪರಿಸರ ತಜ್ಞರು ಮತ್ತು ಪರಿಸರವಾದಿಗಳು ಹಲವು ಬಾರಿ ಪ್ರಶ್ನೆ ಎತ್ತಿದ್ದಾರೆ.

ಸ್ವಚ್ಛ ಗಂಗಾ ಅಭಿಯಾನದ ಹಿನ್ನೆಲೆಯಲ್ಲಿ ಗಂಗಾ ಕ್ರಿಯಾ ಯೋಜನೆಗೆ 1986ರಲ್ಲೇ ಚಾಲನೆ ನೀಡಲಾಗಿತ್ತು. ಗಂಗಾ ನದಿ ಪಾತ್ರದ ಐದು ರಾಜ್ಯಗಳಲ್ಲಿ ( ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ) ಗಂಗಾ ನದಿಗೆ ಹರಿದು ಬರುವ ಮಾಲಿನ್ಯದ ಬಗ್ಗೆ ಎನ್‌ಎಂಸಿಜಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ(ಭಾರತೀಯ ವನ್ಯಜೀವಿ ಸಂಸ್ಥೆ) 2018ರ ಮೇ ತಿಂಗಳಿನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಅಲಕಾನಂದ ನದಿ ಮತ್ತು ಭಾಗೀರಥಿ ನದಿ ಪಾತ್ರದಲ್ಲಿ ಈಗ ಇರುವ 16, ಸಿದ್ಧಗೊಳ್ಳುತ್ತಿರುವ 14 ಮತ್ತು ಪ್ರಸ್ತಾವಿತ 14 ಜಲವಿದ್ಯುತ್ ಯೋಜನೆಯು ಉತ್ತರಾಖಂಡದ ಭಾಗದಲ್ಲಿ ಗಂಗಾ ನದಿಯನ್ನು ಮರುಭೂಮಿಯನ್ನಾಗಿಸಿದೆ. ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದು ಹಿಮಾಲಯ ಪ್ರದೇಶದ ವಿಸ್ತಾರವಾದ ಬೂಭಾಗವನ್ನು ಮುಳುಗಿಸುವುದರ ಜೊತೆಗೆ, ಆಗಾಗ ಭೂಕುಸಿತದಂತಹ ಘಟನೆಗೂ ಕಾರಣವಾಗಿದೆ. ನದಿಯ ಹರಿವಿಗೆ ತಡೆಯೊಡ್ಡುವುದರಿಂದ ನದಿಯ ಚಲನೆಯ ಗತಿ ಕ್ಷೀಣಿಸಿದ್ದು ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ ಮತ್ತು ನೀರಿನ ಖನಿಜಗಳು ನದಿಯ ತಳ ಸೇರಿಕೊಂಡಿವೆ.

ಹಿಮಾಲಯದ ಬುಡದ ಬಳಿ ಗಂಗಾ ನದಿಯ ವಿಸ್ತಾರ ಪ್ರದೇಶ ಅಕ್ರಮ ಮರಳು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯ ಕೇಂದ್ರಬಿಂದುವಾಗಿದೆ. ಈ ಸಮಸ್ಯೆ ಉತ್ತರಖಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಗಂಗಾ ನದಿಯು ವಿಶ್ವದ ಅತ್ಯಂತ ಜನಸಾಂದ್ರತೆಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾನ್ಪುರ, ಅಲಹಾಬಾದ್, ವಾರಣಾಸಿ(ಉ.ಪ್ರದೇಶ), ಬಿಹಾರದ ಪಾಟ್ನ, ಪಶ್ಚಿಮ ಬಂಗಾಳದ ಹೌರಾ ನಗರಗಳ ಮೂಲಕ ಹರಿಯುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ 2018ರ ಮಾರ್ಚ್‌ನ ಅಂಕಿಅಂಶದ ಪ್ರಕಾರ, ಗಂಗಾ ನದಿಯ 61 ಪರಿವೀಕ್ಷಣಾ ಕೇಂದ್ರಗಳ ಪೈಕಿ ಕೇವಲ 13 ಮಾತ್ರ ಸ್ನಾನ ಮಾಡಲು ಯೋಗ್ಯವಾಗಿದೆ. ಯಾರ ಬೇಡಿಕೆಗಳನ್ನು ಮೊದಲು ಈಡೇರಿಸಬೇಕು. ಮಾತ್ರ ಸದನದ ಉಪವಾಸ ನಿರತ ಸಂತರದ್ದೇ ಅಥವಾ ವಿದ್ಯುತ್‌ಶಕ್ತಿಯ ವ್ಯವಸ್ಥೆ ಇನ್ನೂ ತಲುಪದಿರುವ ಗ್ರಾಮೀಣ ಭಾಗದ ಮಿಲಿಯಾಂತರ ಜನರದ್ದೇ ?

ಸಿಪಿಸಿಬಿಯ ಇತ್ತೀಚಿನ ಮಾಹಿತಿಯ ಪ್ರಕಾರ ಗಂಗಾ ನದಿಗೆ ಸೇರುವ ತ್ಯಾಜ್ಯ ನೀರಿನ ಪ್ರಮಾಣ 6,087 ಎಂಎಲ್‌ಡಿ( ತ್ಯಾಜ್ಯ ನೀರಿನ ಅಂದಾಜು ಪ್ರಮಾಣಕ್ಕಿಂತ 123ಶೇ ಅಧಿಕ). ಸಮರ್ಪಕವಾಗಿ ಕಾರ್ಯನಿರ್ವಹಿಸದ ಮತ್ತು ಕಡಿಮೆ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕಗಳಿಂದಾಗಿ ನದಿಗೆ ಸೇರುವ ಕೊಳಚೆ ನೀರಿನ ಪ್ರಮಾಣ ಹೆಚ್ಚುವುದರ ಜೊತೆಗೆ, ನೀರಿನಲ್ಲಿ ಕೊಳಕು ಮತ್ತು ತ್ಯಾಜ್ಯದ ಅಂಶ ಸ್ವೀಕೃತಿ ಯೋಗ್ಯ ಪ್ರಮಾಣಕ್ಕಿಂತ ತುಂಬಾ ಹೆಚ್ಚಿದೆ. ಗಂಗಾ ನದಿಯ ದಡದುದ್ದಕ್ಕೂ ಇರುವ ಉದ್ದಿಮೆಗಳು, ಕೈಗಾರಿಕೆಗಳು, ಚರ್ಮ ಹದಮಾಡುವ ಕೈಗಾರಿಕೆಗಳು ಹಾನಿಕಾರಕ ಕೈಗಾರಿಕಾ ತ್ಯಾಜ್ಯ ನೀರನ್ನು ನದಿಗೆ ಸೇರಿಸುತ್ತಿವೆ. ಗಂಗಾ ನದಿ 400 ಮಿಲಿಯಕ್ಕೂ ಅಧಿಕ ಜನರ ಮೇಲೆ ಪ್ರಭಾವ ಬೀರುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಭಾರತ ವಿದ್ಯುತ್‌ಶಕ್ತಿ ಪೂರೈಕೆಯಲ್ಲಿ ವಾರ್ಷಿಕ ಶೇ.7ಪ್ರಗತಿ ಸಾಧಿಸುವ ಮೂಲಕ ಜಿಡಿಪಿಯಲ್ಲಿ ವಾರ್ಷಿಕ ಸುಮಾರು ಶೇ.8.5 ಪ್ರಗತಿ ಸಾಧಿಸುವುದೆಂದು ಪಿಡಬ್ಲೂಸಿ ಮತ್ತು ಫಿಕಿ(ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ)ಯ ವರದಿ ತಿಳಿಸಿದೆ. ಜಿಡಿಪಿಯಲ್ಲಿ ಉದ್ದೇಶಿತ ಗುರಿ ಸಾಧಿಸಬೇಕಾದರೆ ಆಗ ಜಲವಿದ್ಯುತ್ ಯೋಜನೆಗೇ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಮತ್ತೆ ಅದೇ ಪ್ರಶ್ನೆ ಮೂಡುತ್ತದೆ- ಉಪವಾಸ ಕುಳಿತಿರುವ ಸಂತರ ಬೇಡಿಕೆಗೆ ಮೊದಲ ಆದ್ಯತೆಯೇ ಅಥವಾ ಮಿಲಿಯಾಂತರ ಜನರ ವಿದ್ಯುತ್‌ಶಕ್ತಿಯ ಬೇಡಿಕೆಗೆ ಆದ್ಯತೆಯೇ?

ಸ್ವಚ್ಛ ಗಂಗಾ ಯೋಜನೆ ಮತ್ತು ಗಂಗೆಯನ್ನು ಶುದ್ಧಗೊಳಿಸುವ ಭರವಸೆಯ ಬಗ್ಗೆ ಸರಕಾರ ಮರುಚಿಂತಿಸಬೇಕಾಗಿದೆ. ಇದೇ ವೇಳೆ ಸುಸ್ಥಿರ ಅಭಿವೃದ್ಧಿಯ ಜೊತೆಗೆ ಜಿಡಿಪಿ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಯತ್ನ ಮುಂದುವರಿಸಬೇಕಾಗುತ್ತದೆ. ಆದರೂ ಹಲವು ಪ್ರಶ್ನೆಗಳು ಉತ್ತರ ಸಿಗದೇ ಉಳಿದುಬಿಡುತ್ತವೆೆ. ಗಂಗಾ ನದಿ ಯಾವತ್ತಾದ್ರೂ ಸ್ವಚ್ಛವಾಗುವುದೇ, ವಿದ್ಯುತ್‌ಶಕ್ತಿಯ ಪ್ರಯೋಜನ ಪಡೆಯುವ ಮೂಲಭೂತ ಅವಶ್ಯಕತೆ ಮಿಲಿಯಾಂತರ ಭಾರತೀಯರಿಗೆ ಇನ್ನೂ ಕನಸಾಗಿಯೇ ಉಳಿದಿರುವಾಗ,  ಭಾರತವು ಸುಸ್ಥಿರತೆಯತ್ತ ಹೆಜ್ಜೆಯಿಡಲು ಮತ್ತು ಪರಿಸರ ಕ್ರಿಯಾಶೀಲತೆಯ ಪ್ರತಿಪಾದಕರಾಗಲು ಶಕ್ತವಾದೀತೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.

(ಕೃಪೆ-ಕೌಂಟರ್‌ಕರೆಂಟ್ಸ್)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)