varthabharthi


ನಿಮ್ಮ ಅಂಕಣ

ರೈತರ ಪ್ರತಿರೋಧವನ್ನು ಸರಕಾರ ಅರ್ಥ ಮಾಡಿಕೊಳ್ಳಲಿ

ವಾರ್ತಾ ಭಾರತಿ : 22 Dec, 2020
-ಡಾ. ಬಿ. ಆರ್. ಮಂಜುನಾಥ ಬೆಂಡರವಾಡಿ ಗುಂಡ್ಲುಪೇಟೆ

ಮಾನ್ಯರೇ,

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಮೈಕೊರೆಯುವ ಚಳಿಯಲ್ಲಿ ಲಕ್ಷಾಂತರ ರೈತರು ದಿಲ್ಲಿಯಲ್ಲಿ ಹೋರಾಟ ನಿರತರಾಗಿದ್ದು, ಅವರಲ್ಲಿ 23ಕ್ಕೂ ಹೆಚ್ಚು ಜನರು ಅನಾರೋಗ್ಯದ ಕಾರಣಗಳಿಂದ ಮೃತರಾಗಿರುವುದು ಮತ್ತು ಧರ್ಮ ಗುರುವೊಬ್ಬರು ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಮನಕಲಕುವಂತಹದ್ದು. ಸರಕಾರ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳನ್ನು ರೈತರು ಮತ್ತು ತಜ್ಞರೊಂದಿಗೆ ಚರ್ಚಿಸಿ ಜಾರಿಗೆ ತರಬೇಕಿತ್ತು. ಕಾಯ್ದೆಯ ಮರ್ಮವನ್ನು ಅರಿತುಕೊಂಡು ಕಾಯ್ದೆಯ ರದ್ಧತಿಗೆ ಆಗ್ರಹಿಸಿ ಹೋರಾಟ ರೂಪಿಸಿರುವ ಸಂದರ್ಭದಲ್ಲಿ ರೈತರಿಗೆ ಸ್ಪಂದಿಸಬೇಕಾದ ಸರಕಾರ ಅದರ ಅನುಕೂಲತೆಯ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಕೃಷಿ ಮಸೂದೆ ಉತ್ತಮವಾದುದೆಂದು ಬಿಂಬಿಸಲು ಹೊರಟಿರುವುದು ಅವೈಜ್ಞಾನಿಕವಾದುದು.

ಏಕೆಂದರೆ ತರಾತುರಿಯಲ್ಲಿ ತಂದಿರುವ ಈ ಕಾಯ್ದೆ ಮೇಲ್ನೋಟಕ್ಕೆ ಉತ್ತಮವಾಗಿರುವಂತೆ ಕಂಡರೂ ಭವಿಷ್ಯದಲ್ಲಿ ರೈತರಿಗೆ ಅದು ಮಾರಕ. ಕೃಷಿ ಕ್ಷೇತ್ರದ ಲಾಭ ನಷ್ಟಗಳು ಅಥವಾ ಅದರ ಆಗುಹೋಗುಗಳು ರೈತರಿಗಿಂತ ನಾಲ್ಕು ಗೋಡೆಯ ನಡುವೆ ಕುಳಿತು ಕಾಯ್ದೆ ರೂಪಿಸಿರುವ ಅಧಿಕಾರಿಗಳಿಗೆ ಗೊತ್ತೇ?. ಒಂದು ವೇಳೆ ಜಾರಿಗೆ ತಂದಿರುವ ಕಾಯ್ದೆ ಉತ್ತಮವಾಗಿದೆ ಎಂದುಕೊಂಡರೂ; ಅದನ್ನು ರೈತರೇ ಬೇಡವೆನ್ನುವಾಗ ಬಲವಂತವಾಗಿ ಅದನ್ನೇಕೆ ಜಾರಿ ಮಾಡಬೇಕು. ಹಸಿವಿನಿಂದ ಬಳಲುತ್ತಿದ್ದಾನೆ ಎಂದು ಆತನ ಅಗತ್ಯಗಳನ್ನು ವಿಚಾರಿಸದೆ ಶುದ್ಧ ಸಸ್ಯಾಹಾರಿ ವ್ಯಕ್ತಿಯೊಬ್ಬನಿಗೆ ಬೇಳೆ ಸಾಂಬಾರಿನಲ್ಲೇಕೆ ತಿನ್ನುತ್ತೀಯಾ ಬಿರಿಯಾನಿಯನ್ನೇ ತಿನ್ನು ಎಂದು ನೀಡಿದರೆ ಆತ ನಿರಾಕರಿಸುತ್ತಾನೆ. ಏಕೆಂದರೆ ಅವನ ಆಹಾರ ಸಂಸ್ಕೃತಿಗೆ ಒಗ್ಗುವುದಿಲ್ಲ. ಆತ ಬೇಕಾದರೆ ಸಾಯಲು ಸಿದ್ಧನಿರುತ್ತಾನೆಯೇ ಹೊರತು ಮಾಂಸಹಾರವನ್ನು ಸೇವಿಸಲು ಅಲ್ಲ. ಈ ಕಾಯ್ದೆಯೂ ಹಾಗೆಯೇ ಇದೆ. ಇಲ್ಲವೆಂದರೆ ರೈತರೇಕೆ ಪ್ರತಿರೋಧಿಸುತ್ತಿದ್ದರು. ಇದನ್ನು ಸರಕಾರ ಅರ್ಥ ಮಾಡಿಕೊಂಡು ಪ್ರತಿಷ್ಠೆಯನ್ನು ಪಕ್ಕಕ್ಕೆ ಸರಿಸಿ ಅವರಿಗೆ ಸ್ಪಂದಿಸುವಂತಾಗಲಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)