varthabharthi


ಅನುಗಾಲ

ಕುಸಿಯುತ್ತಿದೆ ಪ್ರಜಾಪ್ರಭುತ್ವಸೌಧ!

ವಾರ್ತಾ ಭಾರತಿ : 24 Dec, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದೇಶವು ಎಲ್ಲ ಬಗೆಯ ಕಷ್ಟಕೋಟಲೆಗಳಲ್ಲಿ ಬಳಲುತ್ತಿದೆ. ಕೋವಿಡ್-19ರ ಪರಿಣಾಮವಾಗಿ ಈ ಬಳಲಿಕೆಯಿಂದಾಗಿ ದೇಶವು ತೀವ್ರನಿಗಾ ಘಟಕದಲ್ಲಿರಬೇಕಾದ ಶೋಚನೀಯ ಸ್ಥಿತಿ ತಲುಪಿದೆ. ಆರ್ಥಿಕ ಸ್ಥಿತಿಯಂತೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಈಗ ಕೋವಿಡ್-19 ಸೋಂಕು -20 ಮತ್ತು -21ಕ್ಕೆ ಬಂದು ತಲುಪಿದೆ. ಇಷ್ಟಾದರೂ ಸರಕಾರವು ಹುಸಿ ಆಡಂಬರಗಳನ್ನು ಬಿಟ್ಟುಕೊಡುತ್ತಿಲ್ಲ. ಪ್ರಧಾನಿ ನಿವಾಸ ಸಮುಚ್ಚಯದ ನಿರ್ಮಾಣಕ್ಕೆ 13 ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ಆಯವ್ಯಯಪಟ್ಟಿ (ಆಯವಿಲ್ಲ, ವ್ಯಯಪಟ್ಟಿ ಮಾತ್ರ!) ತಯಾರಾಗಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಯಾರಿಗೆ ಉಪಯೋಗ?

ಸಂವಿಧಾನವನ್ನು ಮೂಲೆಪಾಲು ಮಾಡಿ ಸಂಸದೀಯ ಪ್ರಜಾಪ್ರಭುತ್ವವು ಕುಸಿಯುತ್ತಿರುವ ಲಕ್ಷಣಗಳು ಕಳೆದ ಅನೇಕ ದಶಕಗಳಿಂದ ಇವೆಯಾದರೂ ಅವೀಗ ಸ್ಪಷ್ಟ ಸ್ವರೂಪವನ್ನು ಪಡೆಯುತ್ತಿವೆೆ. ಮಹಾಭಾರತದ ಕಾಲದ ಕೌರವನ ಆಸ್ಥಾನದಲ್ಲಿ ದೇಶದ, ಕಾಲದ ಹಣೆಬರಹವನ್ನು ಕೌರವನ ಆದೇಶದಂತೆ ಕೆಲವೇ ಮಂದಿ ನಿರ್ಧರಿಸುತ್ತಿದ್ದರು; ಇತರರು ಸಜ್ಜನಿಕೆಯ ಪೋಷಾಕು ಧರಿಸಿ ಭಯದಿಂದಲೋ, ಅನ್ನದ ಋಣದಿಂದಲೋ ವೌನವಾಗಿರುತ್ತಿದ್ದರು. ರಾಜಸತ್ತೆಯ ಎಲ್ಲ ಕೆಟ್ಟ ಕಾಲದಲ್ಲೂ ಈ ಪರಿಸ್ಥಿತಿ ಮರುಕಳಿಸುತ್ತಿತ್ತು. ಒಂದಿಬ್ಬರು ರಾಜಕಾರಣಿಗಳು, ಕೆಲವು ಉದ್ಯಮಿಗಳು ಈ ಹುನ್ನಾರಕ್ಕೆ ಸೇರಿಕೊಂಡಿದ್ದಾರೆಂಬುದನ್ನು ಹೊರತುಪಡಿಸಿದರೆ ಈಗ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ದೇಶದ 130 ಕೋಟಿಗೂ ಹೆಚ್ಚು ಸಂಖ್ಯೆಯ ಜನದನಿ ಸ್ತಬ್ಧವಾಗಿದೆ ಅಥವಾ ಕ್ಷೀಣಿಸಿದೆ. ತಾವು ಶಾಶ್ವತವೆಂದು ಬಗೆದ ದುಷ್ಟಕೂಟಗಳು ಅಧಿಕಾರದ ದುರಹಂಕಾರದಿಂದ ಈ ಮೌನದ ಹಿಂದಿರುವ ಆತಂಕವನ್ನು, ರೊಚ್ಚನ್ನು ಗಮನಿಸುವ ಗೋಜಿಗೆ ಹೋಗುತ್ತಿಲ್ಲ. ಹೆಸರೇ ಹೇಳುವಂತೆ ಸಂಸದೀಯ ಪ್ರಜಾಪ್ರಭುತ್ವದ ಮುಖ್ಯ ಆಧಾರ ಸಂಸತ್ತು. ಅದು ಮುಖ್ಯ ಮೂರಂಗಗಳಲ್ಲಿ ಒಂದಾದ ಶಾಸಕಾಂಗ. ಪಾರಂಪರಿಕವಾಗಿ ಹೇಳುವುದಾದರೆ ‘ಆಸ್ಥಾನ’. ದೇಶದ ನೈತಿಕತೆಯನ್ನು ಶಾಸನಗಳ ಮೂಲಕ ನಿರ್ಧರಿಸುವ ವೇದಿಕೆ. ಲೋಕಸಭೆಯಲ್ಲಿರುವವರು ‘ಜನ ಪ್ರತಿನಿಧಿಗಳು’. ಆ ಸ್ಥಾನಗಳನ್ನು ತುಂಬಿಸುವ ಕೆಲಸವನ್ನು ಜನತೆ ಮಾಡುತ್ತದೆ. ರಾಜ್ಯಸಭೆಯೆಂಬ ಮೇಲ್ಮನೆಯ ಸದಸ್ಯರನ್ನು ಚುನಾಯಿತರು ಆರಿಸುತ್ತಾರೆ.

ಇನ್ನು ಕೆಲವರನ್ನು ಸಾಂಸ್ಕೃತಿಕ ಮತ್ತಿತರ ಕಾರಣಗಳಿಗಾಗಿ ರಾಷ್ಟ್ರಪತಿಗಳು ಆಯ್ಕೆಮಾಡುತ್ತಾರೆ. ಅಲ್ಲಿ ಉನ್ನತ ಆದರ್ಶಗಳ ಚರ್ಚೆ ನಡೆಯಬೇಕೆಂದು ಸಂವಿಧಾನವು ಬಯಸುತ್ತದೆ. ಮೌಲ್ಯಗಳ ದೃಷ್ಟಿಯಿಂದ ಲೋಕಸಭೆಯು ‘ಮರ್ತ್ಯ’ವಾದರೆ ರಾಜ್ಯಸಭೆಯು ‘ಸ್ವರ್ಗ’. ರಾಷ್ಟ್ರಪತಿ ಈ ಎಲ್ಲದರ ನೈತಿಕ ಹೊಣೆಗಾರರು. ಮನೆಯ ವ್ಯವಹಾರವನ್ನು ಯಾರೇ ಮಾಡಲಿ, ಸಾಂಪ್ರದಾಯಿಕ ನಡವಳಿಕೆಗಳು ನಡೆಯುವುದು, ಅಥವಾ ಕನಿಷ್ಠಪಕ್ಷ ಆರಂಭವಾಗುವುದು ಈ ಮಡಿಹಚ್ಚುವ ಹಿರಿಯರ ಹೆಸರಿನಲ್ಲಿ. ಸಂಸದೀಯ ಕಾರ್ಯಕಲಾಪಗಳು ಆರಂಭವಾಗುವುದೂ ಈ ಮಹಾಶಯ ರಿಂದಲೇ. ಹಾಗೆಂದು ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿ ವಿಘ್ನಕಾರಕರಲ್ಲ. ಚುನಾಯಿತ ಸರಕಾರದ ನಿರ್ಧಾರಕ್ಕೆ ಒಮ್ಮೆ ಒಲ್ಲೆನೆಂದರೂ ಆನಂತರದ ಒತ್ತಾಯಕ್ಕೆ, ಒತ್ತಡಕ್ಕೆ, ಮಣಿಯಲೇಬೇಕು. ಹೀಗಾಗಿ ಅದೊಂದು ಆಲಂಕಾರಿಕ ಸ್ಥಾನ. ಮನೆಯೊಳಗಿನ ವ್ಯವಹಾರ ಹೇಗಿದ್ದರೂ ಸಾರ್ವಜನಿಕವಾಗಿಯಾದರೂ ಹಿರಿಯರಿಗೆ ಗೌರವ ಸಲ್ಲಿಸುವುದು ಈ ದೇಶದ ಸಂಸ್ಕೃತಿ. ಕಾಂಗ್ರೆಸ್ ಸರಕಾರದ ಕಾಲದಲ್ಲಿ ರಾಷ್ಟ್ರೀಯ ಮಟ್ಟದ ನಾಯಕರನ್ನು ರಾಷ್ಟ್ರಪತಿಗಳನ್ನಾಗಿ ಆಯ್ಕೆಮಾಡು ತ್ತಿದ್ದರು. ನೆಹರೂ ಯುಗದಲ್ಲಿ ವ್ಯಕ್ತಿ(ತ್ವ)ಸಂಘರ್ಷದಿಂದಾಗಿ ಆಡಳಿತದಿಂದ ಹೊರಗಿಡುವ ಉದ್ದೇಶದಿಂದ ಡಾ. ರಾಜೇಂದ್ರಪ್ರಸಾದರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಯಿತು ಎಂಬ ಸಂಶಯವು ಇಂದಿಗೂ ಪ್ರಚಲಿತವಿದೆ. ಆನಂತರ ಸಾರ್ವಜನಿಕ ಜೀವನದಲ್ಲಿ ಶುಭ್ರತೆಯನ್ನು ಕಾಪಾಡಿಕೊಂಡು ಬಂದಿರುವ ಜನಪ್ರಿಯ, ಮುತ್ಸದ್ದಿತನದ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವವನ್ನು ತರಬಲ್ಲ ವ್ಯಕ್ತಿಯನ್ನು ಆಯ್ಕೆಮಾಡುವ ಸಂಪ್ರದಾಯ ಆರಂಭವಾತು. ಆದರೆ ಕ್ರಮೇಣ ಈ ಹುದ್ದೆ ಎಷ್ಟು ಮಲಿನಗೊಂಡಿತೆಂದರೆ ಇಂದಿರಾಗಾಂಧಿ ಕಾಲದಲ್ಲಿ ಪ್ರಧಾನಿ ತಮಗೆ ಬೇಕಾದವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಕೆಟ್ಟ ಸಂಪ್ರದಾಯ ಆರಂಭವಾಯಿತು. ಇದು ಯಾವ ಹಂತಕ್ಕೆ ಏರಿತು/ಇಳಿಯಿತು ಎಂದರೆ ಪ್ರಧಾನಿಯ ಮತ್ತು ಪಕ್ಷ ಧುರೀಣರ ಎದುರು ಪ್ರಶ್ನಿಸುವುದಿರಲಿ, ಕುಳಿತುಕೊಳ್ಳುವ, ಮಾತನಾಡುವ ಧೈರ್ಯವಿಲ್ಲದವರೂ ರಾಷ್ಟ್ರಪತಿಯಾದರು; ಪ್ರಧಾನಿಯ ‘ಸನ್ನೆಯರಿತ ಸತಿ’ಯಾದರು.

ಈಗಲೂ ಈ ಪರಿಸ್ಥಿತಿ ಉದ್ಧಾರವಾಗಿಲ್ಲ. ಆಳುವ ಪಕ್ಷದಲ್ಲಿ ದುಡಿಯುತ್ತಿದ್ದ ರಾಜ್ಯಮಟ್ಟದ ನಿಷ್ಠಾವಂತ ಸೇವಕರೊಬ್ಬರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆಮಾಡಿದ್ದರ ಪರಿಣಾಮವಾಗಿ ಅವರು ಮಡಿಹಚ್ಚುವ ಕೆಲಸವನ್ನೂ ಮಾಡಲಾಗುತ್ತಿಲ್ಲ. ಇದಕ್ಕೆ ಸದ್ಯದ ದ್ಯೋತಕವೆಂದರೆ ಬ್ರಿಟಿಷ್ ಕಾಲದಿಂದ (1927) ಅಸ್ತಿತ್ವದಲ್ಲಿರುವ ಸಂಸತ್ ಭವನಕ್ಕೆ ಅದು ಶಿಥಿಲವಾಗಿದೆಯೆಂಬ ಕಾರಣ ಹೂಡಿ ಪರ್ಯಾಯವಾಗಿ ನಿರ್ಮಿಸಲಿರುವ ಸುಮಾರು 900 ಕೋಟಿ ರೂಪಾಯಿಗೂ ಮಿಕ್ಕಿ ವೆಚ್ಚದ ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸ ನಡೆದಿದ್ದು ದೇಶದ ಕಾರ್ಯಾಂಗದ ಅಧಿಕಾರವು ನಿಹಿತವಾಗಿರುವ ಮತ್ತು ದೇಶದ ಮೊದಲ ಪ್ರಜೆಯಾಗಿರುವ ರಾಷ್ಟ್ರಪತಿಗಳು ಇದ್ದರೂ ಪ್ರಧಾನಿಯೇ ಸಂಸತ್ತಿನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಯಥಾಶಕ್ತಿ ಪ್ರಜಾಪ್ರಭುತ್ವದ ಘನತೆಯನ್ನು ಕುಗ್ಗಿಸಿದ್ದಾರೆ. ಯಾರೇ ಮಾಡಲಿ, ಇದು ಅಗತ್ಯವಿತ್ತೇ ಮತ್ತು ಇದರ ಬೆಲೆಯನ್ನು ಪರಿಸರವೂ ಸೇರಿದಂತೆ ಯಾರು ಮತ್ತು ಯಾವುದು ತೆರಬೇಕು ಎಂಬುದನ್ನು ಸರಕಾರವು ಜನರ ಮುಂದಿಡುತ್ತಿಲ್ಲ. (ಇದರ ಬೇರು 2010ರಲ್ಲಿದೆ. ಆಗಿನ ಯುಪಿಎ ಸರಕಾರ ಈಗಿರುವ ಸಂಸತ್ ಭವನದ ಬದಲು ಹೊಸ ನಿರ್ಮಾಣಕ್ಕೆ ಸಂಚು ಹೂಡಿತ್ತು. ಹೀಗಾಗಿ ಸ್ವಾರ್ಥಲಾಲಸೆಯಲ್ಲಿ ಪಕ್ಷಗಳ ನಡುವೆ ಅಂತರ, ವ್ಯತ್ಯಾಸ, ಭಿನ್ನತೆಗಳನ್ನು ಹುಡುಕುವುದು ತಪ್ಪಾಗುತ್ತದೆ.) ಮೋದಿ ಸರಕಾರದ ಒಂದು ವೈಶಿಷ್ಟ್ಯವೆಂದರೆ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ಎಲ್ಲ ತಪ್ಪುಗಳನ್ನೂ ಮುಂದುವರಿಸುವ ಮತ್ತು ಅವನ್ನೂ ಮೀರಿಸುವ ಹೊಸ ತಪ್ಪುಗಳನ್ನು ಮಾಡುವ, ಕೆಟ್ಟ ಯೋಚನೆ, ಯೋಜನೆ. ದೇಶದ ಅದೃಷ್ಟಕ್ಕೆ ಈ ನವನಿರ್ಮಾಣವು ಸದ್ಯಕ್ಕೆ ಆರಂಭದ ಹಂತದಲ್ಲೇ ನಿಲುಗಡೆಯಾಗುವ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ಹೇರಿದೆ.

ದೇಶವು ಎಲ್ಲ ಬಗೆಯ ಕಷ್ಟಕೋಟಲೆಗಳಲ್ಲಿ ಬಳಲುತ್ತಿದೆ. ಕೋವಿಡ್-19ರ ಪರಿಣಾಮವಾಗಿ ಈ ಬಳಲಿಕೆಯಿಂದಾಗಿ ದೇಶವು ತೀವ್ರನಿಗಾ ಘಟಕದಲ್ಲಿರಬೇಕಾದ ಶೋಚನೀಯ ಸ್ಥಿತಿಗೆ ತಲುಪಿದೆ. ಆರ್ಥಿಕ ಸ್ಥಿತಿಯಂತೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಈಗ ಕೋವಿಡ್-19 ಸೋಂಕು -20 ಮತ್ತು -21ಕ್ಕೆ ಬಂದು ತಲುಪಿದೆ. ಇಷ್ಟಾದರೂ ಸರಕಾರವು ಹುಸಿ ಆಡಂಬರಗಳನ್ನು ಬಿಟ್ಟುಕೊಡುತ್ತಿಲ್ಲ. ಪ್ರಧಾನಿ ನಿವಾಸ ಸಮುಚ್ಚಯದ ನಿರ್ಮಾಣಕ್ಕೆ 13 ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ಆಯವ್ಯಯಪಟ್ಟಿ (ಆಯವಿಲ್ಲ, ವ್ಯಯಪಟ್ಟಿ ಮಾತ್ರ!) ತಯಾರಾಗಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಯಾರಿಗೆ ಉಪಯೋಗ? ಬಂಕಿಂಗ್‌ಹ್ಯಾಮ್ ಅರಮನೆಯಂತೆ ವಂಶಪಾರಂಪರ್ಯವಾಗಿ ಆಳುವ ಕಾಲ ಸರಿದಿದೆ. ಆದ್ದರಿಂದ ಎಲ್ಲರೂ ಲೂಟಿಯ ಹಣವನ್ನು ಹಂಚಿಕೊಂಡಂತೆ ಅಧಿಕಾರನಿಯುಕ್ತರು ವಾಸಿಸುವಲ್ಲಿ ಸುಖಸೌಕರ್ಯಗಳು ಇನ್ನಷ್ಟು ಹೆಚ್ಚಾಗಲಿ ಎಂಬ ಇರಾದೆಯೇ ಈ ನಿರ್ಮಾಣಕ್ಕೂ ನೆಪವಿರಬಹುದು.

ಮತ್ತೆ ಕುಮಾರವ್ಯಾಸ ಮಹಾಭಾರತವನ್ನು ನೆನಪಿಸಿದರೆ ‘‘ಆ ಸುಯೋಧನನರಮನೆಯನವನೀಶ ಹೊಕ್ಕನು ಪವನಸುತ ದುಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ॥ ವಾಸವಾದುದು ಯಮಳರಿಗೆ ದುಶ್ಯಾ ಸನಾನುಜರರಮನೆಗಳುಳಿದೈಸುಮನೆ ಭಂಡಾರವಾದುದು ಭೂಪ ಕೇಳೆಂದ॥ !ಹೊಸದಿಲ್ಲಿಯ ಎಲ್ಲ ಹಂಗಿನರಮನೆಗಳಿಗೂ ಹೀಗೆ ಸುಯೋಗಗಳು ಲಭಿಸಲಿ. ಕೋಟಿಕೋಟಿ ಜನರ ಹೊಟ್ಟೆಯನ್ನು ಹಸಿವಿನ ಮತ್ತು ಬಡತನದ ಬೆಂಕಿ ಸುಟ್ಟರೂ ನಮ್ಮ ಜನಪ್ರತಿನಿಧಿಗಳ ಹೊಟ್ಟೆ ತಣ್ಣಗಿರಲಿ; ಕಿಸೆ ತುಂಬಿರಲಿ.

ಸಂಸತ್ ಸಾಂಕೇತಿಕವಾಗಿ ಇಡೀ ದೇಶವೇ ಆಗಿದೆ. ಅಲ್ಲಿ ಜನತೆಯ ಸಮಸ್ಯೆಗಳು ಚರ್ಚೆಗೊಳ್ಳುತ್ತವೆಂದು ನಿರೀಕ್ಷಿಸಲಾಗಿದೆ. ಆದರೆ ಇತ್ತೀಚೆಗಿನ ನಡವಳಿಕೆಗಳನ್ನು ನೋಡಿದರೆ ಅವುಗಳಿಗೂ ಜನತೆಯ ಇಚ್ಛಾಶಕ್ತಿಗೂ ಸಂಬಂಧವೇ ಇಲ್ಲದಿರುವುದು ಗೋಚರವಾಗುತ್ತಿದೆ. ಇಡೀ ದೇಶವನ್ನು ತಲ್ಲಣಗೊಳಿಸಬೇಕಾದ ವಿಚಾರಗಳು ತಣ್ಣಗೆ ಸ್ವೀಕೃತವಾಗುತ್ತಿವೆ. ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ಉದ್ಯಮಿಗಳ ಒಪ್ಪಿಗೆ ಮೇರೆಗೆ (ಮತ್ತು ಬಹುಪಾಲು ಅವರ ಆದೇಶ, ಸೂಚನೆಯ ಮೇರೆಗೆ!) ಮತ್ತು ಚರ್ಚೆಗಳಿಲ್ಲದೆ, ಇದ್ದರೂ ಕಾಟಾಚಾರದ, ನಿಷ್ಠಾವಂತ ವಿರೋಧಿಗಳ ಪ್ರಶ್ನೋತ್ತರಗಳೊಂದಿಗೆ ಅಂಗೀಕರಿಸಲಾಗುತ್ತಿದೆ. ಅನೇಕ ಬಾರಿ ಸಂಸತ್ತಿನಲ್ಲಿ ಸದಸ್ಯರ ಅಭಾವವಿರುವುದು ಕಾಣುತ್ತಿದೆ. ಸದ್ಯ ದಿಲ್ಲಿಯಲ್ಲಿ ಕೃಷಿಕಜನಸ್ತೋಮ ಲಗ್ಗೆಯಿಟ್ಟರೂ ಸಂಸತ್ತಿಗೆ ಹೊಣೆಗಾರರಾಗಿರುವ ಸಚಿವರಾಗಲಿ, ಸಂಸದರಾಗಲಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗದೆ, ತಮ್ಮ ಪಾಡಿಗೆ ತಾವು ಸುಮ್ಮನಿದ್ದಾರೆ.

ಇವೆಲ್ಲವುದಕ್ಕೆ ಮುಕುಟಮಣಿಯಂತೆ ಘನ ಸರಕಾರವು ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನವನ್ನು ರದ್ದುಗೊಳಿಸಿದೆ. ಇದಕ್ಕೆ ನೀಡಿದ ಕಾರಣ ವಂತೂ ನೆಪವೂ ಆಗದಷ್ಟು ಕ್ಷುಲ್ಲಕ. ಕೋವಿಡ್-19ರಿಂದಾಗಿ ಈ ಅಧಿವೇಶನವನ್ನು ರದ್ದುಗೊಳಿಸಲಾಗಿದೆಯೆಂದು ವರದಿಯಾಗಿದೆ. ಆದರೆ ನೈಜಕಾರಣಗಳು ಬೇರೆ ಇವೆಯೆಂಬುದು ಆಳುವವರಿಗೂ ವಿರೋಧಪಕ್ಷಗಳಿಗೂ ಗೊತ್ತಿದೆ. ಕೃಷಿಕರ ಬೃಹತ್ ಆಂದೋಲನವನ್ನು ಎದುರಿಸಲಾಗದೆ ಸರಕಾರವು ಅಕ್ಷರಶಃ ಪಲಾಯನವನ್ನೇ ಮಾಡಿದೆ. ಈಗ ಅಧಿವೇಶನವು ನಡೆದರೆ ಪ್ರತಿಪಕ್ಷಗಳು ಅದನ್ನು ಬಳಸಿಕೊಂಡು ಮಾಡಬಹುದಾದ ಚರ್ಚೆಯಲ್ಲಿ ಕೃಷಿಮಸೂದೆಗಳ ಪೊಳ್ಳುತನಗಳೂ ಧೂರ್ತತನ ಗಳೂ ಬಯಲಾಗಿ ಕೃಷಿಕರಿಗೆ ನೈತಿಕ ಸ್ಥೈರ್ಯವನ್ನು ನೀಡಲು ಮತ್ತು ದೇಶದ ಎಲ್ಲೆಡೆ ಈ ಕೃಷಿಕರ ಚಳವಳಿಯು ಹಬ್ಬುವ ಸಾಧ್ಯತೆಯಿದೆ. ಇವೆಲ್ಲವುಗಳನ್ನು ಹೋಗಲಾಡಿಸಲು ಇರುವ ಒಂದೇ ಉಪಾಯವೆಂದರೆ ವೈಶಂಪಾಯನ ಕೆರೆಯೊಳಗೆ ಹೋಗಿ ಕುಳಿತುಕೊಳ್ಳುವುದು. ಹಿಂದೆ ನಮ್ಮ ಮಣ್ಣಿನ ಮಕ್ಕಳಾದ ರಾಜಕಾರಣಿಗಳು ಆಪತ್ತಿನ ಹೊತ್ತಿಗೆ ಅನಾರೋಗ್ಯವನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರಂತೆ!

ಗುಟ್ಟು ಜನರಿಗೆ ಅರ್ಥವಾಗಿಲ್ಲವೆಂದಲ್ಲ. ಆದರೆ ಒಂದು ವರ್ಗವು ತನ್ನ ಪ್ರಜ್ಞೆಯನ್ನೇ ಆಳುವವರಿಗೆ ಮುಡುಪಾಗಿಟ್ಟು ಪಾತಿವ್ರತ್ಯ ರಕ್ಷಣೆಗೆ ಕಟಿಬದ್ಧರಾಗಿರು ವುದರಿಂದ ಸತ್ಯ ಗೊತ್ತಿದ್ದರೂ ತಮ್ಮ ಕಾಲಡಿಯ ನೆಲವೇ ಕುಸಿಯುತ್ತಿದ್ದರೂ ಮೌನದ ಮಣಿಗಳಾಗಿದ್ದಾರೆ. ದೇಶದ ಗೃಹಸಚಿವರು ತಾನು ದೇಶದ ಗೃಹಕೃತ್ಯವನ್ನು ನಿಭಾಯಿಸಬೇಕೆಂಬುದನ್ನು ಮರೆತು ರಾಜ್ಯರಾಜಕೀಯದಲ್ಲಿ ಪಕ್ಷಸಂಕರವನ್ನು ಮಾಡುವ ತುರ್ತಿನಲ್ಲಿದ್ದು ಅಲ್ಲಿ ಜನನಿಬಿಡ ಸಮಾರಂಭಗಳಲ್ಲಿ ಕೀಳುಮಟ್ಟದ ರಾಜಕೀಯದ ಹೊಲಸನ್ನು ಬಿತ್ತುವ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನುಳಿದ ವಿಶ್ವಕುಟುಂಬಸಂಸ್ಕೃತಿಯ ವಕ್ತಾರರೆಂದು (ಸ್ವ)ಘೋಷಿಸಿಕೊಳ್ಳುವವರು ಭಜನೆಮಾಡುತ್ತ ಪಕ್ಷಾಂತರವೆಂಬ ಕೋವಿಡ್ ಪಿಡುಗನ್ನೇ ನಾಮಫಲಕವಾಗಿಸಿಕೊಂಡಿದ್ದಾರೆ. ಈ ವೈರುಧ್ಯಗಳ ನಡುವೆ ಪ್ರಜಾಪ್ರಭುತ್ವವು ನಲುಗುತ್ತಿದೆ!

ಒಕ್ಕೂಟ ವ್ಯವಸ್ಥೆಯಲ್ಲಿ ಸಂಸತ್ತು ದೇಶಕ್ಕೆ ಹೊಣೆಯಾದಂತೆಯೇ ಶಾಸನಸಭೆಗಳು, ಪರಿಷತ್ತುಗಳು ರಾಜ್ಯದ ಸುಖೀಬದುಕಿಗೆ, ಹಿತರಕ್ಷಣೆಗೆ ಹೊಣೆಗಾರರು. ಆದರೆ ಈಗೀಗ ಅಲ್ಲೆಲ್ಲ ಹೊಣೆರಹಿತರು ಮತ್ತು ಕೇಡಿಗರು ತುಂಬಿಕೊಂಡಿರುವುದು ಕಾಣಿಸುತ್ತಿದೆ. ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಸಭಾಪತಿಯವರ ವಜಾಕ್ಕೆ ನಡೆದ (ಕು)ತಂತ್ರ ಹೇಗೆ ಮಸಾಲೆ ಸಿನೆಮಾಗಳ ಹೊಡೆದಾಟವನ್ನೂ ನಾಚಿಸುವಂತಿತ್ತು ಎಂಬುದನ್ನು ಜನತೆ ಗಮನಿಸಿರಬಹುದು. ಟಿವಿ ಮತ್ತು ಪತ್ರಿಕೆಗಳ ಪ್ರೇಕ್ಷಕರಿಗೆ ಈ ಪ್ರಸಂಗದ ಸರಿಯಾದ ಪರಿಚಯವಾಗದು. ಏಕೆಂದರೆ ನಮ್ಮ ಟಿವಿ, ಪತ್ರಿಕೆಗಳಲ್ಲಿ ಬಹುಪಾಲು ಈ ಪ್ರಸಂಗಗಳನ್ನು ತಮ್ಮ ಮತ್ತು ತಾವು ನಂಬಿದ ದೊರೆಗಳ ರಕ್ಷಣೆಗಾಗಿ ತಿರುಚಿರುತ್ತಾರೆ. ಅದೇ ಸತ್ಯವೆಂದು ನಂಬುವವರೇ ಇರುತ್ತಾರೆ. ಇಂತಹವರನ್ನೂ ಮೇಲ್ಮನೆಯವರು ಎಂದು ಹೇಳುವಾಗ ಪ್ರಜಾಪ್ರಭುತ್ವವು ನೇಣಿನ ಹಗ್ಗವನ್ನು ಹುಡುಕುತ್ತಿರುತ್ತದೆ!

ದೇಶಕ್ಕೆ ಮತ್ತು ರಾಜ್ಯಗಳಿಗೆ ಪೊಲೀಸ್ ಇಲಾಖೆಯಿದೆ; ಕಾನೂನು ಇಲಾಖೆಯಡಿ ಇದು ಕೆಲಸಮಾಡುತ್ತದೆ. ಇವರ ಕೆಲಸ ಕಾನೂನನ್ನು ಉಲ್ಲಂಘಿಸುವ ದುರ್ಜನರ ವಿರುದ್ಧ ಸರಕಾರದ ಪರವಾಗಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಮತ್ತು ಅವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು. ಇನ್ನೊಂದು ನೆಲೆಯಲ್ಲಿ ಸರಕಾರವು ಕಳ್ಳರ ಇಲಾಖೆಯೊಂದನ್ನು ಸೃಷ್ಟಿಸುವ ಹಂತಕ್ಕೆ ತಲುಪಿ ಅವರನ್ನು ರಕ್ಷಿಸಲು ಎಲ್ಲ ಶ್ರಮವನ್ನೂ ಮಾಡುತ್ತಿದೆ. ಇತ್ತೀಚೆಗೆ ಕರ್ನಾಟಕ ಸರಕಾರವು ಜೈಲುಗಳಲ್ಲಿ, ಲಾಕಪ್ಪಿನಲ್ಲಿ ಇರಬೇಕಾದ ಶಾಸಕರ, ರಾಜಕಾರಣಿಗಳ ವಿರುದ್ಧ ದಾಖಲಾಗಿದ್ದ, ಇತ್ಯರ್ಥಕ್ಕೆ ಬಾಕಿಯಿದ್ದ, ಅನೇಕ ಪ್ರಕರಣಗಳನ್ನು ಏಕಪಕ್ಷೀಯವಾಗಿ ಹಿಂದೆಗೆದುಕೊಳ್ಳಲು ಆದೇಶಿಸಿತು. ಸದ್ರಿ ರಾಜಕಾರಣಿಗಳ ಹಿಂಬಾಲಕರು ಸಿಹಿ ಹಂಚಿದರು. ಆದರೆ ಯಾರೋ ಪುಣ್ಯಾತ್ಮರು ಇದನ್ನು ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರ ಪರಿಣಾಮವಾಗಿ ನ್ಯಾಯಾಲಯವು ಈ ಆದೇಶಕ್ಕೆ ತಡೆಯೊಡ್ಡಿದೆ.

ನ್ಯಾಯಾಲಯಗಳು ಇರದಿದ್ದಲ್ಲಿ ದೇಶದ, ರಾಜ್ಯಗಳ ಸ್ಥಿತಿ ಹೇಗಿರುತ್ತಿತ್ತು? ಊಹಿಸಲಾಗದು. ನ್ಯಾಯಾಲಯಗಳು ಕೆಲವು ಬಾರಿ ತಪ್ಪೆಸಗುತ್ತವೆ. ಆದರೆ ಹೆಚ್ಚಾಗಿ ಅವು ತಡವಾಗಿಯಾದರೂ ನ್ಯಾಯನಿರ್ಣಯಗಳನ್ನು ಕೈಗೊಳ್ಳುತ್ತವೆ. ಇದೊಂದೇ ನಮ್ಮ ಕುಸಿಯುತ್ತಿರುವ ಪ್ರಜಾಪ್ರಭುತ್ವದಲ್ಲಿನ ಬೆಳ್ಳಿಗೆರೆ. ಮೊಂಡಮಗನನ್ನು ಹೆತ್ತವರು ಸರಿದಾರಿಗೆ ತರದಿದ್ದರೆ ಸಮಾಜ ಮತ್ತು ಅದು ಸೃಷ್ಟಿಸಿದ ಕಾನೂನೇ ಹದ್ದುಬಸ್ತಿನಲ್ಲಿಡಬೇಕಾಗುತ್ತದೆ. ನಮ್ಮ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ಮತ್ತು ದುಷ್ಟತನದಿಂದ ಬಕಾಸುರರಾಗಿ ಬದುಕಿದರೆ ಅವರಿಗೆ ಕಾನೂನೊಂದೇ ಕಡಿವಾಣ ಹಾಕಬಹುದು.

ಕುಸಿಯುವ ಪ್ರಜಾಪ್ರಭುತ್ವದ ಮನೆಗೆ ಜಂತಿಯ ರಕ್ಷಣೆ ಬೇಕಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)