varthabharthi


ನಿಮ್ಮ ಅಂಕಣ

ಇಂದು ರಾಷ್ಟ್ರೀಯ ಗ್ರಾಹಕರ ದಿನ

ಗ್ರಾಹಕರ ಹಕ್ಕುಗಳಿಗೆ ಬೆಲೆ ಸಿಗಲಿ

ವಾರ್ತಾ ಭಾರತಿ : 24 Dec, 2020
ಡಾ. ಅವರೆಕಾಡು ವಿಜಯ ಕುಮಾರ್

ಭಾರತ ಸರಕಾರ 1986, ಡಿಸೆಂಬರ್ 24ರಂದು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ದಿನದ ಸವಿನೆನಪಿಗಾಗಿ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯು ಸಂವಿಧಾನದ ಅನುಚ್ಛೇದ 14 ರಿಂದ 19ರ ವರೆಗಿನ ಮೂಲಭೂತ ಹಕ್ಕುಗಳ ಮೇಲೆ ಅವಲಂಬಿತವಾಗಿದೆ. ಈ ಕಾಯ್ದೆಯ ಕ್ಷೇತ್ರ ವ್ಯಾಪ್ತಿಯು ಸರಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ವಲಯಕ್ಕೂ ವಿಸ್ತರಿಸಿದೆ. ಇಲ್ಲಿ ಮೂಲತಃವಾಗಿ ಗ್ರಾಹಕರಾಗಿ ನಮ್ಮ ಹಕ್ಕು ಬಾಧ್ಯತೆಗಳು ಯಾವುವು ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ಸಾಮಾನ್ಯವಾಗಿ ನಾವು ಕೊಂಡುಕೊಳ್ಳುವ ಪದಾರ್ಥಗಳಿಗೆ, ವಸ್ತುಗಳಿಗೆ ಗುಣಾತ್ಮಕವಾದ ಸೇವೆ ಪಡೆಯುವುದು ಎಂಬ ಮನಸ್ಥಿತಿ ನಮ್ಮದು. ಒಂದರ್ಥದಲ್ಲಿ ಗ್ರಾಹಕರ ಇಚ್ಛೆಯನುಸಾರ ಅವರು ಕೊಳ್ಳುವ ಪದಾರ್ಥಗಳ, ವಸ್ತುಗಳ ಉತ್ತಮ ಸೇವೆ ಹಾಗೂ ಸಂಬಂಧಪಟ್ಟ ಮಾಹಿತಿ ಆಡುಮಾತಿನಲ್ಲಿ ದೊರೆಯಲಿಲ್ಲ ಎಂದರೆ ಕೆಲವೊಮ್ಮೆ ಅನಾಹುತಗಳು ಸಂಭವಿಸಬಹುದು. ಏಕೆಂದರೆ ಗ್ರಾಹಕರೊಡನೆ ಉತ್ಪಾದನಾ ಕಂಪೆನಿಗಳು ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಒಂದರ್ಥದಲ್ಲಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಾರಣ ಸಮಾಜದಲ್ಲಿ ಗ್ರಾಹಕರಷ್ಟೇ ಪರಿಣಾಮಕಾರಿಯಾಗಿ ಉತ್ಪಾದನಾ ಕಂಪೆನಿಗಳು ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಇಬ್ಬರು ಮಹತ್ವದ ಕಾರ್ಯವನ್ನು ನಿಭಾಯಿಸುವುದರಲ್ಲಿ, ನೆರವೇರಿಸುವುದರಲ್ಲಿ ಎರಡು ಮಾತಿಲ್ಲ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ ಎಂಬಂತೆ ಮುಂದೆ ಸಾಗುತ್ತವೆ. ಇದು ಧನಾತ್ಮಕವಾದ ಚಿಂತನಾ ಕ್ರಮವೂ ಹೌದು.

ಗ್ರಾಹಕರು ಈ ರಾಷ್ಟ್ರೀಯ ದಿನವನ್ನು ಆಚರಿಸುವುದಕ್ಕಿಂತ ಮೊದಲು ಗ್ರಾಹಕರ ತಮ್ಮ ಹಿತರಕ್ಷಣೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಗ್ರಾಹಕರ ಹಿತರಕ್ಷಣಾ ಕಾಯ್ದೆ ಮೂಲಕ ಗ್ರಾಹಕರಿಗೆ ಅರಿವು ಮೂಡಿಸುವುದು ಅತಿಮುಖ್ಯವಾದದ್ದು. ನಾವು ಹಣಕೊಟ್ಟು ವಸ್ತುಗಳನ್ನು, ಪದಾರ್ಥಗಳನ್ನು ಖರೀದಿಸುವ ಮೂಲಕ ಸೇವೆಗಳ ಗ್ರಾಹಕರು ಆಗಿರುತ್ತೇವೆ. ಈ ಕಾರಣದಿಂದ ನಾವು ಹಣಕೊಟ್ಟು ಪಡೆದ ವಸ್ತುಗಳು ಅಥವಾ ಸೇವೆಗಳಿಗೆ ಪಾವತಿಸಿದ ಹಣಕ್ಕೆ ಪೂರಕವಾಗಿ ಅನುಗುಣವಾದ ಗುಣಮಟ್ಟವನ್ನು ನಿರೀಕ್ಷಿಸುವ ಮೂಲ ಹಕ್ಕು ಗ್ರಾಹಕರದ್ದಾಗಿರುತ್ತದೆ. ನಾವು ಹಣಕೊಟ್ಟು ಖರೀದಿಸಿದಂತಹ ಸರಕು ಅಥವಾ ಸೇವೆ ನಮ್ಮ ನಿರೀಕ್ಷಿತ ಗುಣಮಟ್ಟಕ್ಕಿಂತ ಕಡಿಮೆ ಇದ್ದರೆ ಅದಕ್ಕನುಗುಣವಾಗಿ ಪರಿಹಾರ ಪಡೆಯುವ ಸಾಮಾಜಿಕ ಹಕ್ಕನ್ನು ಕಾನೂನು ನಮಗೆ ಕೊಟ್ಟಿದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಗ್ರಾಹಕರ ಪ್ರತಿಭಟನೆ, ಹೋರಾಟ, ಒತ್ತಾಯ ಇವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ಸಹಜವಾಗಿಯೇ ನಾವು ಶೋಷಣೆಗೆ ಸಿಲುಕುತ್ತೇವೆ. 1986ರಲ್ಲಿ ಭಾರತದ ಸಂಸತ್ತು ಗ್ರಾಹಕರ ಸುರಕ್ಷತೆ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಮೂಲಭೂತ ಅಗತ್ಯಗಳನ್ನು ಪೂರೈಸುವ ಹಕ್ಕು, ಆಯ್ಕೆಯ ಹಕ್ಕು, ಪರಿಹಾರದ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು, ಸುತ್ತಮುತ್ತಲಿನ ಪರಿಸರದ ಹಕ್ಕು, ಇತ್ಯಾದಿ ಹಕ್ಕುಗಳನ್ನು ಜಾರಿಗೆ ತರುವ ಮೂಲಕ ಗ್ರಾಹಕರಾಗಿ ನಮ್ಮ ಹಕ್ಕುಗಳ ಬಗ್ಗೆ ಕಣ್ತೆರೆಸಿದೆ.

ಇದರಂತೆ ಭಾರತದ ಸಂಸತ್ತು 1986ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮವನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಗ್ರಾಹಕರು ಕೊಂಡ ಸರಕು, ಪದಾರ್ಥಗಳು ದೋಷ ಪೂರಕವಾಗಿದ್ದರೆ ಇಲ್ಲವೇ ನಾವು ಪಾವತಿಸಿ ಪಡೆದ ಸೇವೆಯಲ್ಲಿ ಸಮಸ್ಯೆಗಳೇನಾದರೂ ಇದ್ದರೆ ಪರಿಹಾರವನ್ನು ಪಡೆಯಬಹುದು. ಇದಕ್ಕೆ ಕಾನೂನಿನಲ್ಲಿ ಮುಕ್ತವಾದ ಅವಕಾಶವಿದೆ. ಈ ಕಾರಣದಿಂದಲೇ ಜಿಲ್ಲಾಮಟ್ಟದ ಗ್ರಾಹಕ ವೇದಿಕೆ, ರಾಜ್ಯಮಟ್ಟದ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಮಟ್ಟದ ಗ್ರಾಹಕ ವೇದಿಕೆ ಎಂಬ ಮೂರು ರೀತಿಯ ಗ್ರಾಹಕ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಸಾಮಾನ್ಯವಾಗಿ ನಾವು ಸಲ್ಲಿಸುವ ಪ್ರಾಥಮಿಕ ದೂರುಗಳೆಲ್ಲವೂ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಸೇರುತ್ತವೆ. ಗ್ರಾಹಕರ ನ್ಯಾಯಾಲಯಗಳಲ್ಲಿ ಸಲ್ಲಿಸಿದ ದೂರಿಗೆ ನಾವೇ ವಾದವನ್ನು ಮಂಡಿಸಬಹುದು. ಕಾನೂನಿನ ಪ್ರಕಾರ ಈ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು 90 ದಿನದೊಳಗೆ ಇತ್ಯರ್ಥ ಮಾಡಲೇಬೇಕಾದ ಕ್ರಮ ಇದೆ. ಬೇರೆ ನ್ಯಾಯಾಲಯಗಳಿಗೆ ಹೋಲಿಸಿಕೊಂಡರೆ ಗ್ರಾಹಕ ನ್ಯಾಯಾಲಯದ ಶುಲ್ಕ ಕೂಡ ಅತಿ ಕಡಿಮೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರವನ್ನು ಪ್ರತಿವಾದಿಯು ಒದಗಿಸದಿದ್ದರೆ ಕಾನೂನಾತ್ಮಕವಾಗಿ ಸೆರೆಮನೆಗೆ ಕಳಿಸುವ ಅವಕಾಶವನ್ನು ಈ ನ್ಯಾಯಾಲಯ ಹೊಂದಿದೆ.

ಸಾಮಾನ್ಯವಾಗಿ ಗ್ರಾಹಕರು ಮೋಸ ಹೋಗುವುದು ಎಲ್ಲಿ? ಇದಕ್ಕುತ್ತರವಾಗಿ ತೂಕ, ಅಳತೆ ಮಾಪನಗಳಲ್ಲಿ, ಆಹಾರ ಪದಾರ್ಥಗಳ ಕಲಬೆರಕೆ, ಅತಿ ಹಳೆಯ ದಾಸ್ತಾನುಗಳಲ್ಲಿ ಮಾತ್ರ. ಜೊತೆಗೆ ಕಂಪೆನಿಗಳಿಂದ ಸಿದ್ಧಗೊಂಡ ಪದಾರ್ಥಗಳು ಆಗಿರಬಹುದು, ಇನ್ನಿತರ ವಸ್ತುಗಳಾಗಿರಬಹುದು ಅವುಗಳ ಮೇಲಿನ ಕಂಪೆನಿಯ ಚಿಹ್ನೆ, ಮುದ್ರಿಸಿದ ಬೆಲೆ, ತಯಾರಾದ ದಿನಾಂಕ, ಎಷ್ಟು ದಿನ ಅಥವಾ ತಿಂಗಳು ಬಳಸಲು ಯೋಗ್ಯ, ಇತ್ಯಾದಿ ಅಂಶಗಳನ್ನು ನಾವು ಬಲು ಎಚ್ಚರಿಕೆಯಿಂದ ಗಮನಿಸುವುದು ಅತ್ಯಾವಶ್ಯಕವಾದದ್ದು. ಇದು ಆದರ್ಶ ಗ್ರಾಹಕನ ಮೂಲಭೂತ ಲಕ್ಷಣವೂ ಹೌದು. ಗ್ರಾಹಕರು ಯಾವುದೇ ರೀತಿಯ ವಸ್ತು ಗಳನ್ನು, ಪದಾರ್ಥಗಳನ್ನು ಖರೀದಿಸಿದ ತಕ್ಷಣ ಹಣ ಪಾವತಿಸಿದ ರಸೀದಿಯನ್ನು ಪಡೆಯುವುದು ಸೂಕ್ತ. ಕಾರಣ ಕೊಂಡ ರಸೀದಿ ಇದ್ದರೆ ಕಾನೂನಾತ್ಮಕವಾಗಿ ಅವಶ್ಯವಿದ್ದಲ್ಲಿ ಪರಿಹಾರ ಪಡೆಯಲು ಸಾಧ್ಯ. ಅಲ್ಲದೆ ಭಾರೀ ರಿಯಾಯಿತಿಯ ಆಮಿಷವೊಡ್ಡಿ ಗ್ರಾಹಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಭರದಿಂದ ಸಾಗುತ್ತಿದೆ. ನಾಡ, ರಾಷ್ಟ್ರೀಯ ಹಬ್ಬಗಳ ಹೆಸರಿನಲ್ಲಿ ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂಬ ಜಾಹೀರಾತುಗಳು ಹಲವು ರೀತಿಯಲ್ಲಿ ಗ್ರಾಹಕರ ನಿದ್ರೆ ಕೆಡಿಸಿರುವ ಪ್ರಸಂಗಗಳಿವೆ. ಗ್ರಾಹಕರಿಗೆ ಯಾವುದೇ ಕಂಪೆನಿಯ ಉತ್ಪನ್ನಗಳಲ್ಲಿ, ಪದಾರ್ಥಗಳಲ್ಲಿ ಪೂರ್ತಿ ಪ್ರಮಾಣದ ತೃಪ್ತಿ ದೊರಕದಿದ್ದಲ್ಲಿ ಸಂಬಂಧಿಸಿದ ಕಂಪೆನಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲೂಬಹುದು. ಇದರಾಚೆಗೆ ರಾಜ್ಯ ಸರಕಾರಗಳು ‘ಮಾತೃಭಾಷೆಯ ಬಳಕೆ ವ್ಯವಹಾರಕ್ಕೆ’ ಎಂದು ಪೂರಕವಾಗಿ ಶ್ರಮಿಸಿದಲ್ಲಿ ಗ್ರಾಹಕರಿಗೆ ಅವರವರ ಆಡುಭಾಷೆಯಲ್ಲಿ ಸುಲಭ ವ್ಯವಹಾರಕ್ಕೆ, ಸಂವಹನಕ್ಕೆ ನಾಂದಿ ಹಾಡಿದಂತೆ ಆಗುತ್ತದೆ. ಈ ಪ್ರಕ್ರಿಯೆ ಭಾಷಾ ಬಳಕೆಯಿಂದಲೂ ಬೆಳವಣಿಗೆಯಿಂದಲೂ ಉತ್ತಮವಾದದ್ದು.

ಈ ನೆಲೆಯಲ್ಲಿ ಯಾವುದೇ ಕಂಪೆನಿ ಆಗಿರಲಿ ಉತ್ತಮ ಗುಣಮಟ್ಟದ ಸೇವಾ ಮನೋಭಾವವನ್ನು ಪ್ರಸ್ತುತಪಡಿಸಿದರೆ ಗ್ರಾಹಕ ದೇವರು ಎಂಬ ಪರಿಕಲ್ಪನೆಗೆ ಅರ್ಥ ಸಿಗುತ್ತದೆ. ಅಲ್ಲದೆ ಸರಕಾರದ ರೀತಿ ನೀತಿಗಳನ್ನು ಉತ್ಪಾದನಾ ಕಂಪೆನಿಗಳು ಪಾಲಿಸುವುದು, ಗ್ರಾಹಕರು ಕೂಡ ವ್ಯವಹಾರ ಕಾನೂನು ಪಾಲನೆಯಲ್ಲಿ ಮುಂದೆ ಸಾಗಿದರೆ ಪ್ರಸ್ತುತ ರಾಷ್ಟ್ರೀಯ ಗ್ರಾಹಕ ದಿನಾಚರಣೆಗೆ ಮಹತ್ವ ದೊರೆತಂತಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)