varthabharthi


ನಿಮ್ಮ ಅಂಕಣ

ಸರಕಾರಿ ಗ್ರಾಮೀಣ ಕ್ಷೌರದಂಗಡಿಗಳು ಅಗತ್ಯವೇ?

ವಾರ್ತಾ ಭಾರತಿ : 24 Dec, 2020
ದಾಸನೂರು ಕೂಸಣ್ಣ

ಕರ್ನಾಟಕ ಸರಕಾರ ಅಸ್ಪಶ್ಯತೆ ನಿರ್ಮೂಲನೆಗೆ ಅಥವಾ ಮೇಲ್ವರ್ಗ/ಹಿಂದುಳಿದ ವರ್ಗಗಳ ಮಡಿವಂತಿಕೆಗಳನ್ನು ಮುಕ್ಕಾಗದಂತೆ ಇಡಲು ಸರಕಾರಿ ಗ್ರಾಮೀಣ ಕ್ಷೌರದಂಗಡಿಗಳನ್ನು ತೆರೆಯುತ್ತಿರಬೇಕು. ಸಂವಿಧಾನದ ಪರಿಚ್ಛೇದ 17 ನೇರವಾಗಿ ಎಲ್ಲಾ ಬಗೆಯ ಅಸ್ಪಶ್ಯತೆ ಆಚರಣೆಗಳನ್ನು ನಿಷೇಧಿಸಿದೆ. ಇದರಡಿ ಅಸ್ಪಶ್ಯತೆ ಆಚರಣೆ ಕಾಯ್ದೆ (1955) ಜಾರಿಗೆ ಬಂತು. 1976ರಲ್ಲಿ ಇದನ್ನು ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಎಂದು ತಿದ್ದುಪಡಿ ಮಾಡಿ ರಾಜ್ಯದ ನೀತಿ ಎಂದು ಘೋಷಣೆ ಮಾಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಿರಂತರವಾಗಿ ಸಾಮೂಹಿಕ ಕೊಲೆ, ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಆಸಿ-್ತಪಾಸ್ತಿ ನಾಶ, ಅಪಮಾನ, ನಿಂದನೆ ಇತ್ಯಾದಿಗಳನ್ನು 1976 ಕಾಯ್ದೆ ಮತ್ತು ಭಾರತೀಯ ಅಪರಾಧ ದಂಡ ಸಂಹಿತೆಗಳ ಮೂಲಕ ನಿಯಂತ್ರಿಸಲು ಅಸಾಧ್ಯವೆಂದು ಪರಿಗಣಿಸಿ, ರಾಜೀವ ಗಾಂಧಿ ಸರಕಾರ ಆಂಧ್ರಪ್ರದೇಶದ ಕರ್ಮಚೇಡು ಗ್ರಾಮದ ಧಾರುಣ ಘಟನೆ ಹಿನ್ನೆಲೆಯಲ್ಲಿ ಪ್ರತಿಬಂಧಕ ಕಾಯ್ದೆ (1989) ಜಾರಿ ಮಾಡಿತು. ಅದು ಸಹ ಈಗಂತೂ ಪಂಜರದ ಹುಲಿಗಿಂತಲೂ ನಿಸ್ತೇಜವಾಗುತ್ತಿದೆ.

ಭಾರತೀಯ ಜನತಾ ಪಕ್ಷ ಸರಕಾರಿ ಗ್ರಾಮೀಣ ಕ್ಷೌರದಂಗಡಿಗಳನ್ನು ಅಲ್ಲಿನ ಪರಿಶಿಷ್ಟರಿಗಾಗಿ ತೆರೆಯಲು ಚಿಂತನೆ ನಡೆಸಿದೆ. ಬಹುಶಃ ಅಸ್ಪಶ್ಯತೆ ನಿರ್ಮೂಲನೆಗೆ ಆಸಕ್ತಿ ಇಲ್ಲದ ಮನೋಧರ್ಮದ ಸಾಮಾಜಿಕ ಧೋರಣೆ ಈ ಕಾರ್ಯಕ್ರಮದಡಿ ಇಣುಕುತ್ತಿದೆ. ಭಾಜಪ ಮತ್ತು ಅದರ ಅಂಗ ಸಂಘಟನೆಗಳು ‘ಹಿಂದೂಗಳೆಲ್ಲರೂ ಒಂದು’ ಎಂದು ಸಾರುವ ಉದ್ಘೋಷಗಳಿಗೆ ಈ ನಡೆ ತದ್ವರುದ್ಧವಾಗಿದೆ. ಕರ್ನಾಟಕ ಮಟ್ಟದಲ್ಲಿ ಹೇಳುವುದಾದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನಾಗರಿಕ ಅಗತ್ಯ ಸೇವೆಗಳಾದ ಕ್ಷೌರ, ಬಟ್ಟೆ ಸ್ವಚ್ಛತೆಗಳು ವೃತ್ತಿ ನಿರತ ಸಮುದಾಯಗಳಿಂದ ಸಿಗುತ್ತಿಲ್ಲ ಅನ್ನುವ ಬದಲು, ಮಡಿವಾಳ, ಸವಿತಾ ಸಮಾಜಗಳೊಂದಿಗೆ ನಿಕಟ ಸಾಮಾಜಿಕ ಬಳಕೆ ಹೊಂದಿರುವ ಸ್ಪಶ್ಯ ಜಾತಿಗಳಿಗೆ ಅಗತ್ಯ ಸೇವೆಗಳು ಸಿಗುತ್ತಿವೆ. ಅದರಲ್ಲೂ ಹೊಲೆಯ-ಮಾದಿಗ ಸಂಬಂಧಿತ ಜಾತಿ-ಉಪಜಾತಿಗಳಿಗೆ ಸಮಾನಾಂತರ ರೂಪದಲ್ಲಿ ದೊರೆಯುತ್ತಿಲ್ಲ. ಉದಾಹರಣೆಗೆ, ಬೇಡ, ನಾಯಕ ಅಥವಾ ವಾಲ್ಮೀಕಿಗಳಿಗೆ ಈ ಸೇವೆಗಳು ಯಾವುದೇ ಅಡೆ-ತಡೆಗಳಿಲ್ಲದೆ ಸಿಗುತ್ತಿವೆ. ಸರಕಾರ ಸಂವಿಧಾನದ ಉದ್ದೇಶ ಸಾಕಾರ ಮಾಡಲು ಯೋಚಿಸುತ್ತಿದೆಯೋ ಅಥವಾ ಜಾತಿವಾದಿ ಪರಿಧಿಯನ್ನು ಬಿಗಿಗೊಳಿಸಲು ಕ್ಷೌರದಂಗಡಿ ತೆರೆಯುತ್ತಿದೆಯೋ ಎಂಬ ವಿಚಾರ ಮುಖ್ಯವಾಗಿದೆ.

ಅದರ ಅಂತರಂಗದ ನಡೆಯಲ್ಲಿ ಅಸ್ಪಶ್ಯತೆ ಜೀವಂತವಾಗಿರಬೇಕೆನ್ನುವ ಸಮಾಜೋಧಾರ್ಮಿಕತೆಗಳು ಅಡಗಿರುವುದನ್ನು ಈ ಕಾರ್ಯಕ್ರಮದ ಮೂಲಕ ಗುರುತಿಸಬಹುದು. ದೇವರಾಜ ಅರಸು ತಮ್ಮ ಕನಸಿನ ಜನತಾ ವಸತಿ ಯೋಜನೆ ಜಾರಿಗೆ ತಂದಾಗ ಎಲ್ಲಾ ಸಮುದಾಯಗಳು ಕನಿಷ್ಠ ಮಟ್ಟದಲ್ಲಾದರೂ ಐಕ್ಯರೂಪದಲ್ಲಿ ಜೀವಿಸಬೇಕೆಂಬ ಉದಾತ್ತ ಧೋರಣೆಯಿಂದ ವಿಭಜನೆರಹಿತವಾಗಿ ನಿವೇಶನ ಹಂಚಿಕೆ ಸ್ವರೂಪ ಜಾರಿಗೊಳಿಸಿದ್ದರು. ಇಂದಿಗೂ ಅದು ಮಾದರಿ. ಭೂರಹಿತರಾದ ಸವಿತಾ ಇಲ್ಲವೆ ಮಡಿವಾಳ ಸಮಾಜಗಳು ಮೇಲ್ವರ್ಗ ಅಥವಾ ಹಿಂದುಳಿದ ವರ್ಗಗಳ ನಡುವೆ ಬದುಕಿನ ಅನಿವಾರ್ಯತೆಗಳನ್ನು ಕಟ್ಟಿಕೊಂಡಿವೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲವು ಅಗತ್ಯ ನಾಗರಿಕ ಸೇವೆಗಳನ್ನು ದಲಿತರಿಗೆ ನೀಡಲು ಬಯಸುವುದಿಲ್ಲ.

ಓರ್ವ ಪಂಚಮ, ಚಂಡಾಲ, ಅಸ್ಪಶ್ಯ ತನ್ನ ದೈನಂದಿನ ಸಾಮಾಜೋಧಾರ್ಮಿಕ ವ್ಯವಹಾರಗಳನ್ನು ದ್ವಿಜರಿಂದ 260 ಅಡಿ ಅಂತರದಿಂದ, ಮಧ್ಯಮ ವರ್ಗಗಳಿಂದ 66 ಅಡಿ ಮತ್ತು ಹಿಂದುಳಿದ ವರ್ಗಗಳಿಂದ 33 ಅಡಿ ಅಂತರಗಳಲ್ಲಿ ನಿಂತು ನಿರ್ವಹಿಸಬೇಕಿತ್ತು. ಸಂವಿಧಾನೋತ್ತರ ಕಾಲಘಟ್ಟಗಳಲ್ಲಿ ಈ ಅಂತರಗಳು ಅಷ್ಟಿಷ್ಟು ಕಡಿಮೆ ಆಗಿದ್ದರೂ ಮಾನಸಿಕ ಈರ್ಷ್ಯೆಗಳ ಅಂತರ ಅವರಿಗಿರುವ ಅಭಿವೃದ್ಧಿ ಫಲಗಳನ್ನು ಹಂಚುವಾಗ, ಮೀಸಲಾತಿ ಜಾರಿ ವಿಮರ್ಶೆಗಳಲ್ಲಿ ಎಗ್ಗಿಲ್ಲದೆ ಸ್ಫೋಟವಾಗುತ್ತವೆ. ದಲಿತರ ಸಾಮಾಜಿಕ ನೋವುಗಳಿಗೆ ದಿವ್ಯಸ್ಪಂದನ ನೀಡುವ ತವಕ ಅಥವಾ ಹಿಂದೂ ಸಮಾಜದ ಅಂಗಾಂಗಗಳಲ್ಲಿ ಅಮೂರ್ತವಾಗಿರುವ ಭೇದಭಾವ, ಅಸ್ಪಶ್ಯತೆಗಳನ್ನು ಹೋಗಲಾಡಿಸಬೇಕಿದ್ದರೆ ಇದರ ಭೀತಿಗಳಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆ ನೀಡುವುದು ಬಲು ಸೂಕ್ತ. ಅದನ್ನು ಬಿಟ್ಟು ಸದಾ ಜಾಗೃತವಾಗಿರುವ ಒಳ ಸಾಮಾಜಿಕ ನೋವಿನ ಹೊರಮೈಗೆ ಕ್ಷೌರದಂಗಡಿ ಮುಲಾಮು ಹಚ್ಚಿದರೆ ಗ್ರಾಮೀಣ ಪ್ರದೇಶದಲ್ಲಿ ಅಸ್ಪಶ್ಯತೆ ಹೋಗಲಾರದು. ಇದು ಹೇಗಿದೆ ಎಂದರೆ, ಅಸ್ಪಶ್ಯತೆಯ ನೋವುಂಡವರ ಮುಂದೆ ಅದರ ನಿರ್ಮೂಲನೆಗೆ ಗಗನ ಚುಂಬಿಸುವ ದನಿಯಲ್ಲಿ ಟೀಕಿಸಿ, ಅದನ್ನು ಆಚರಿಸುವವರ ಮುಂದೆ ಪಿಸುಮಾತಿನಲ್ಲಿ ಖಂಡಿಸಿದಂತಿದೆ.

ಯಾವಾಗಲೂ ಸಾಮಾಜಿಕ ಬದಲಾವಣೆ ನಿತ್ಯ ಸೂರ್ಯನಂತೆ ಹಿಮ್ಮುಖ ಮತ್ತು ಮುಮ್ಮುಖ ಪರಿಣಾಮಗಳ ನಡುವೆ ಘಟಿಸಿದಾಗ ಅಲ್ಲೂಂದು ಪರಿವರ್ತನೆ ಸಾಧ್ಯವಿದೆ. ಬಹುಶಃ ಕನ್ನಡ ಮಣ್ಣಿನ ಲಿಂಗಾಯತ ಧರ್ಮ ಅದನ್ನು ಈ ಹಿಂದೆ ಮಾಡಿದೆ. ಅನುಭವ ಮಂಟಪ ಅದಕ್ಕೆ ಸಾಕ್ಷಿಯಾಗಬಲ್ಲದು. ಅಂತರಂಗದಲ್ಲಿ ಕ್ರೌರ್ಯ, ಮತ್ಸರ, ಸೇಡು ತುಂಬಿದವನು ನಡೆಯಲ್ಲಿ ದೇವರ ನಾಮಸ್ಮರಣೆ ಮಾಡಿದಂತಿದೆ ಸರಕಾರಿ ಕ್ಷೌರದಂಗಡಿ ನಾಟಕ. ಅಂದರೆ ಸೈದ್ಧಾಂತಿಕವಾಗಿ ಭಾಜಪ ಹೇಳುವ ಹಿಂದೂ ಐಕ್ಯ ಸಾಮಾಜೀಕರಣ ಪರಿಕಲ್ಪನೆಗೆ ಇದು ವಿರುದ್ಧವಾಗಿದೆ. ಬಹುತೇಕ ಗಾಂಧಿವಾದಿಗಳು ಅಸ್ಪಶ್ಯರ ಆತ್ಮೋದ್ಧಾರದ ಉದ್ಧನೆಯ ಭಾಷಣ ಬಿಗಿದವರೆಲ್ಲರೂ ಅಂತರಂಗದಲ್ಲಿ ಕರ್ಮಠ ಜಾತಿವಾದಿ ಧೋರಣೆ ಉಳ್ಳವರಾಗಿದ್ದರು.

ಬಹುಶಃ ಭಾಜಪದ ನಡೆ ಅದಕ್ಕಿಂತೇನೂ ವಿಭಿನ್ನವಾಗಿಲ್ಲ. ಸಾಮಾಜಿಕ ಮೈತ್ರಿಭಾವ ಅಥವಾ ಮಾನಸಿಕ ಬಾಂಧವ್ಯ ಜೋಡಣೆ ಮಾಡುವಂತಹ ಪುರೋಗಾಮಿ ಕಾರ್ಯಕ್ರಮಗಳಿಂದ ಅಸ್ಪಶ್ಯತೆ ನಿಯಂತ್ರಿಸಬಹುದು. ಇಲ್ಲದೆ ಹೋದರೆ, ಕ್ಷೌರದಂಗಡಿ ವಿಕ್ಷಿಪ್ತ ಕಾರ್ಯಕ್ರಮ ಎಳೆಯ ಕಂದಮ್ಮಗಳನ್ನು ಜಾತಿ ಚೌಕಟ್ಟಿನ ಅಂಗನವಾಡಿಗಳಲ್ಲಿ ಬೆಳೆಸಿದ ಕ್ರೌರ್ಯದಂತಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)