varthabharthi


ನಿಮ್ಮ ಅಂಕಣ

ವೈದಿಕ-ಅವೈದಿಕಗಳೆಂಬ ದಾಟಲಾರದ ಕಂದಕ

ವಾರ್ತಾ ಭಾರತಿ : 27 Dec, 2020
ಎಸ್. ನಟರಾಜ ಬೂದಾಳು

ಕಾಯಿಲೆಯನ್ನು ವಾಸಿಮಾಡಿಕೊಳ್ಳಲು ಸರಿಯಾದ ವೈದ್ಯರನ್ನು ಕಂಡು, ಕಾಯಿಲೆಯ ಹೆಸರನ್ನು ತಿಳಿದುಕೊಂಡು, ಅವರು ಬರೆದುಕೊಟ್ಟ ಔಷಧಿಗಳ ಚೀಟಿಯನ್ನು ಬರೇ ಓದಿಕೊಂಡರೆ ಏನೂ ಪ್ರಯೋಜನವಿಲ್ಲ. ವೈದ್ಯರು ಸೂಚಿಸಿದ ಔಷಧಿಗಳನ್ನು ಬಳಸಬೇಕು. ಆಗ ಮಾತ್ರ ಎಲ್ಲದರ ಸಾರ್ಥಕತೆ. ದರ್ಶನವೆನ್ನುವುದು ಹಾಗೆಯೇ ಸರಿಯಾಗಿ ಬಾಳಿ ಕಂಡುಕೊಳ್ಳಬೇಕಾದದ್ದು. ಸರಿಯಾಗಿ ಇರಬೇಕು ಎನ್ನುವುದಾದರೆ ತಪ್ಪನ್ನು ತ್ಯಜಿಸಬೇಕು ಅಷ್ಟೆ.


ಇದೊಂದು ಮಹತ್ವದ ಪುಸ್ತಕ. 1997ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ, ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ರಥಬೀದಿ ಗೆಳೆಯರು, ಉಡುಪಿ ಇವರ ಸಹಪ್ರಾಯೋಜಕತ್ವದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಉಪನ್ಯಾಸಗಳ ಸಂಗ್ರಹ. ಪ್ರಾಚೀನ ಭಾರತೀಯ ವೈದಿಕ-ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರಾದ ಡಿ.ಆರ್. ನಾಗರಾಜ್, ಕೆ.ಎಸ್. ಕೆದಿಲಾಯ, ಮುರಾರಿ ಬಲ್ಲಾಳ, ಅವಧಾನಿ ಅಶ್ವತ್ಥನಾರಾಯಣ ಮತ್ತೂರು, ಎಂ. ರಾಜಗೋಪಾಲ ಆಚಾರ್ಯ, ವಿದ್ವಾನ್ ಎನ್.ರಂಗನಾಥ ಶರ್ಮ, ಪ್ರಭಾಕರ ಜೋಶಿ, ಶ್ರೀಪತಿ ತಂತ್ರಿ, ರಾಜನ್ ಕರುಕ್ಕಳ್ ಅವರು ಮಂಡಿಸಿದ ವಿಚಾರಗಳ ಸಂಪಾದನೆ. ಯು.ಆರ್. ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರೂ ಅವರ ಮಾತುಗಳನ್ನು ದಾಖಲಾಗಿಸಲು ಸಾಧ್ಯವಾಗಿಲ್ಲ. ಇಲ್ಲಿನ ಬರಹ ರೂಪಗಳಿಗೆ ಮನು ವಿ. ದೇವದೇವನ್ ಅವರ ಪ್ರತಿಕ್ರಿಯೆಯ ಒಂದು ಲೇಖನವೂ ಇದೆ. ಮನು ದೇವದೇವನ್ ತಕರಾರೊಂದನ್ನು ತೆಗೆದಿದ್ದಾರೆ. ಕೇವಲ ಪುಸ್ತಕೀಯ ಜ್ಞಾನದ ಬಗೆಗೆ ಮಾತ್ರ ಮಾತುಕತೆ ನಡೆದಿದೆ.

ಕಸುಬು ಕೌಶಲ ಶ್ರಮ ಮುಂತಾದ ಮಾಧ್ಯಮಗಳ ಜ್ಞಾನವನ್ನು ಕುರಿತಾದದ್ದಕ್ಕೆ ಅವಕಾಶವೇ ಇಲ್ಲ. ನಿಜ ಇದು ತೀರಾ ಗಂಭೀರವಾದ ಕೊರತೆ. ಭಾರತೀಯ ಸಂಗೀತ, ಶಿಲ್ಪ, ಕಸುಬುಗಳು, ಕೌಶಲಗಳು, ಅನ್ನಾಹಾರಗಳು-ಇವು ನಮ್ಮ ಬದುಕನ್ನು ಸಮೃದ್ಧಗೊಳಿಸಿರುವುದು; ಪುಸ್ತಕಗಳು ಮಾತ್ರವಲ್ಲ. ಆದರೆ ಭಾಷೆಯಾಚೆಗಿನ ಸಂಗತಿಗಳು ಎಂದು ಉದಾಹರಿಸುವ ಶಿಲ್ಪ, ಸಂಗೀತ, ಇತ್ಯಾದಿಗಳಿಗೂ ಮೀಮಾಂಸಾ ಆಕರವೆಂಬುದು ಮತ್ತೆ ಅದೇ ಆಗಿದೆ ಎಂಬುದನ್ನು ಗಮನಿಸದಿರಲು ಸಾಧ್ಯವಿಲ್ಲ. ಹಾಗೆ ನೋಡಿದರೆ ದರ್ಶನ, ಮೀಮಾಂಸೆ, ಕಾವ್ಯ ಮತ್ತು ಕೌಶಲ ಈ ನಾಲ್ಕರ ಮೀಮಾಂಸಾ ಆಕರಗಳನ್ನು ಕುರಿತಾದ ಚರ್ಚೆಯೇ ಇಲ್ಲಿಯ ಕೇಂದ್ರವಸ್ತು. ಇದೊಂದು ರೀತಿಯಲ್ಲಿ ಸರಿ ಕೂಡ. ಕಾವ್ಯವಾಗಲೀ, ಸಂಗೀತವಾಗಲೀ, ಶಿಲ್ಪವಾಗಲೀ ಸರಿದಾರಿ ಹಿಡಿಯಲು ಅಥವಾ ದಾರಿತಪ್ಪಿಸಲು ಸಾಧ್ಯವಿರುವುದು ಇಲ್ಲಿಯೇ. ಲೋಕಗ್ರಹಿಕೆಯನ್ನು ನಿರ್ದೇಶಿಸುವ ಮತ್ತು ನಿರ್ಣಾಯಕವಾಗಿ ಪ್ರಭಾವಿಸುವ ಈ ಹಂತವೇ ಇಲ್ಲಿ ಚರ್ಚೆಗೆ ಒಳಪಟ್ಟಿರುವುದು. ಅದಕ್ಕಿಂತ ಮುನ್ನ ಡಿ.ಆರ್. ನಾಗರಾಜ್ ತಮ್ಮ ಆರಂಭಿಕ ಮಾತುಗಳಲ್ಲಿ ಉದ್ಧರಿಸಿದ ಕಾಮಕಲೆಯ ಕತೆ ತುಂಬಾ ಗಂಭೀರವಾದದ್ದೆಂದು ನಾನು ಭಾವಿಸುತ್ತೇನೆ. ಅದು ವಿದ್ವತ್ತಿನ ನಿರುಪಯುಕ್ತತೆಯನ್ನು ಹೇಳುವ ಕತೆ ಎಂದು ಹೇಳಿದ್ದರೂ ಕೇವಲ ಭಾಷಿಕ ರಚನೆಗಳನ್ನು ಊದಿ ಊದಿ ಬೆಳೆಸಿದ ಬೃಹತ್ ಬಲೂನುಗಳನ್ನು ಚುಚ್ಚಲು ಇಂತಹ ಸಣ್ಣ ಆದರೆ ಅತ್ಯಂತ ಪರಿಣಾಮಕಾರಿಯಾದ ಮುಳ್ಳನ್ನು ನಾಗರಾಜ್ ಬಳಸಿದ್ದಾರೆ.

ಸುಳ್ಳು ಪಾವಿತ್ರತೆಯನ್ನು ಹೊದ್ದು ಬರುವ ಧಾರ್ಮಿಕತೆಯ ಅನೈಸರ್ಗಿಕ ಆವರಣವನ್ನು ಕಳಚಲು ಇಂಥವುಗಳೆಲ್ಲ ಬೇಕಾಗುತ್ತವೆ. ಈ ಹೊತ್ತು ಇಡೀ ಜಗತ್ತನ್ನು ವ್ಯಾಪಿಸಿ ಮನುಷ್ಯರು ಸಮಾಧಾನದಿಂದ ಬದುಕದ ಹಾಗೆ ಮಾಡಿರುವ ಮತ್ತೂ ಕೆಲವು ಧರ್ಮದ ಬಲೂನುಗಳಿವೆ. ಅವುಗಳಿಗೂ ಇಂತಹ ಟ್ರೀಟ್‌ಮೆಂಟಿನ ಅಗತ್ಯವಿದೆ. ಇನ್ನೂ ಕೆಲವು ಸಂಗತಿಗಳನ್ನು ಡಿ.ಆರ್. ಪ್ರಸ್ತಾಪಿಸಿದರು. ಬಹುಪಾಲು ವೈದಿಕ ವಿದ್ವಾಂಸರು ಅವುಗಳನ್ನು ಹುಷಾರಾಗಿ ಅರುಗಾಗಿ ಹೋಗಿದ್ದಾರೆ. ಮನು ದೇವದೇವನ್ ಕೂಡ ಅದೇ ದಾರಿಯಲ್ಲಿ ನಡೆಯುವುದೇ ಕ್ಷೇಮವೆನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ಮೊದಲನೆಯದು ಅವೈದಿಕತೆಗೆ ಸ್ವಯಂ ವಿಸರ್ಜನೆಯ ಗುಣವಿದೆ. ವೈದಿಕತೆಗೆ ಸ್ವಯಂ ಸ್ಥಾಪನೆಯ ಗುಣವಿದೆ. ಸ್ವಯಂ ಸ್ಥಾಪಿತ ವೈದಿಕತೆಗೆ ಒಂದು ರೀತಿಯ ವಿಚಿತ್ರ ಅಹಂಕಾರ ಒದಗಿಬಂದಿದೆ.

ಎರಡನೆಯದಾಗಿ ಸದಾ ದಾಟುವಿಕೆಯನ್ನೇ ತನ್ನ ಸಹಜ ನಡೆಯನ್ನಾಗಿಸಿಕೊಂಡಿರುವ ಅವೈದಿಕತೆಗೆ ಅಧಿಕಾರ ಕೇಂದ್ರಗಳ ಸಖ್ಯ ಸಾಧ್ಯವಾಗುವುದಿಲ್ಲ. ಆದರೆ ಅಂತಹ ಅಪವಿತ್ರ ಮೈತ್ರಿಗೆ ಸದಾ ಹಾತೊರೆದು ಕೂತಿರುವ ವೈದಿಕತೆ ಅಧಿಕಾರವಿಲ್ಲದಿದ್ದರೆ ತತ್ತರಿಸಿ ಹೋಗುತ್ತದೆ. ಈ ಹೊತ್ತಿನ ಸವಾಲು ಕೂಡ ಇದೇ ಆಗಿದೆ. ಮೂರನೆಯದು ವೈದಿಕತೆಯು ಕೇವಲ ಭಾಷಿಕ ರಚನೆಗಳನ್ನಾಧರಿಸಿದ್ದು. ಅದೊಂದು ದರ್ಶನವೇ? ಎನ್ನುವುದನ್ನು ಕೂಡ ಗಂಭೀರವಾಗಿ ಪರಿಶೀಲಿಸಬೇಕಾದದ್ದು. ದರ್ಶನವೆಂದರೆ ಏನೆಂದು ಮುರಾರಿ ಬಲ್ಲಾಳರು ವಿವರಿಸುತ್ತಾರೆ: ಜಗತ್ತಿನ ಸ್ವರೂಪ, ಜಗತ್ಕಾರಣದ ಸ್ವರೂಪ ಮತ್ತು ಜೀವನ ಸ್ವರೂಪವನ್ನು ತಿಳಿದುಕೊಂಡು ಅನುಭವದ ನೆಲೆಯಲ್ಲಿ ಸಿದ್ಧಾಂತ ಮಾಡಿದರೆ ಅದನ್ನು ದರ್ಶನ ಎನ್ನುತ್ತಾರೆ. ಇಲ್ಲಿ ಅವು ಏನು ನಿರ್ಣಯ ತೆಗೆದುಕೊಳ್ಳುತ್ತಮೋ ಅದನ್ನು ಆಧರಿಸಿ ಅವುಗಳ ಮುಂದಿನ ಪ್ರಯಾಣ ನಡೆಯುತ್ತ ಹೋಗುತ್ತದೆ. ಅನುಭವಕ್ಕೆ ದಕ್ಕದ ಸಂಗತಿಗಳೇ ವೈದಿಕ ತಾತ್ವಿಕತೆಯಲ್ಲಿ ನಿರ್ಣಾಯಕ. ಆತ್ಮ, ಪರಬ್ರಹ್ಮ, ಪರಾವಾಕ್ಕು, ಅನುತ್ತರಾ ಇತ್ಯಾದಿಗಳೆಲ್ಲ ಭಾಷೆಯಲ್ಲಿ ಊದಿ ಬೆಳೆಸಿರುವ ಬಲೂನುಗಳೋ ಅನುಭವಕ್ಕೆ ದಕ್ಕಿದವುಗಳೋ ಎನ್ನುವುದು ಇಂದಿಗೂ ಚರ್ಚಿಸಬೇಕಾದ ಸಂಗತಿಯೇ ಆಗಿದೆ.

  ಇದನ್ನು ಗಂಭೀರವಾಗಿ ಇದಿರಾದವರು ಬುದ್ಧ, ನಾಗಾರ್ಜುನ, ಸರಹಪಾದ ಮತ್ತು ಕನ್ನಡದ ಮಟ್ಟಿಗೆ ಅಲ್ಲಮರು. ಡಿ.ಆರ್. ಈ ಆಯಾಮವನ್ನು ಮುಂದಿಟ್ಟು ಚರ್ಚೆಯನ್ನು ಬೆಳೆಸಿದ್ದಾರೆ. ಆದರೆ ಇವರನ್ನು ಅವೈದಿಕರೆಂಬ ಇನ್ನೊಂದು ಗುಂಪಿಗೆ ಸೇರಿಸಲಾಗದು. ವಿಜ್ಞಾನಿಗಳನ್ನು ಹೇಗೆ ಅವೈದಿಕ-ವೈದಿಕ ವರ್ಗೀಕರಣಕ್ಕೆ ಒಳಗಾಗಿಸಲಾಗದೋ ಹಾಗೆಯೇ ಇವರನ್ನು ಕೂಡ ಇಂತಹ ವರ್ಗೀಕರಣದ ಆಚೆಗಿಟ್ಟು ನೋಡಬೇಕು. ಬೇಕಾದರೆ ಕುವೆಂಪು ಅವರನ್ನು ಉದಾರೀ ಅದ್ವೈತಿ ಎನ್ನಬಹುದೇನೋ ಆದರೆ ತೇಜಸ್ವಿಯನ್ನು ಹಾಗೆ ವರ್ಗೀಕರಿಸಲಾಗದು. ವೈದಿಕ ಸಾರರೂಪಿ ನಿಲುವಿನ ದೋಷದ ಬಗೆಗೆ ಅತ್ಯಂತ ತಾರ್ಕಿಕವಾಗಿ ವಿವರಿಸಿದವರು ಎಂದ ಮಾತ್ರಕ್ಕೆ ಇವರನ್ನು ಅವೈದಿಕರು ಎನ್ನಲಾಗದು. ಇವರೆಲ್ಲ ನಮ್ಮ ಬದುಕಿಗೆ ಅನಿವಾರ್ಯವಾದ ವೈದ್ಯರು. ವೈದ್ಯರಿಗೆ ಜಾತಿಧರ್ಮದ ಹಂಗಿರಬಾರದು. ಇದು ತುಸು ಅತಿ ಅನ್ನಿಸಬಹುದೇನೋ. ಆದರೆ ವೈದಿಕ-ಅವೈದಿಕ ಸಂಘರ್ಷ ತುದಿಯನ್ನು ಮುಟ್ಟಿದ್ದು ನಾಗಾರ್ಜುನನಲ್ಲಿಯೇ. ಕನ್ನಡದ ಮಟ್ಟಿಗಾದರೆ ಅಲ್ಲಮನಲ್ಲಿ. ಅವೈದಿಕತೆಯ ಆಹ್ವಾನ ಮತ್ತು ವಿಸರ್ಜನೆಯ ನಿಸರ್ಗ ಸಹಜ ನಡೆಯನ್ನು ಭಾರತೀಯ ಪರಂಪರೆಯ ನಡುವೆ ತಂದು ನಿಲ್ಲಿಸಿದವರು ನಾಗಾರ್ಜುನ ಮತ್ತು ಅವನ ಗುರುವಾದ ಸರಹಪಾದ. ಭಾಷಿಕಜ್ಞಾನದ ಪೊಳ್ಳುತನವನ್ನು ಒಬ್ಬ ಕಸುಬಿನ ಕೌಶಲದ ಮೂಲಕ ತೋರಿಸಿಕೊಟ್ಟರೆ ಇನ್ನೊಬ್ಬ ಭಾಷೆ ಮತ್ತು ತರ್ಕವನ್ನೇ ಬಳಸಿ ತೋರಿಸಿಕೊಟ್ಟವನು.

 ಚರ್ಚಿಸಿರುವ ಮತ್ತೊಂದು ಸಂಗತಿ ಭಾಷೆಗೆ ಸಂಬಂಧಿಸಿದ್ದು. ಈ ಚರ್ಚೆ ಭಾಷಾ ವಿಜ್ಞಾನದಲ್ಲಿ ತೀರ್ಮಾನವಾಗಿರುವ ಸಂಗತಿ. ಭಾಷೆಗೆ ತನ್ನದೇಆದ ದಿವ್ಯಸತ್ವ ಇಲ್ಲ ಎನ್ನುವುದು ಬೌದ್ಧರ ನಿಲುವು. ಇಲ್ಲ ಅದೊಂದು ದಿವ್ಯದ ಅಭಿವ್ಯಕ್ತಿ ಎನ್ನುವುದು ವೈದಿಕತೆಯ ನಿಲುವು. ಇವು ಈ ಹೊತ್ತಿನ ಬೈನರಿ ಭಾಷೆ ಅಥವಾ ಮಷಿನ್ ಲ್ಯಾಂಗ್ವೇಜ್‌ಗಳ ನಡುವೆ ಇಟ್ಟು ನೋಡಬೇಕಾದ ಸಂಗತಿಗಳು. ಈ ಹೊತ್ತು ಭಾಷೆಯ ಅಭಿವ್ಯಕ್ತಿಯನ್ನು ಸೊನ್ನೆ-ಒಂದರ ಬೈನರಿಗೆ ಇಳಿಸಿ, ಎರಡರ ಆಹ್ವಾನ ವಿಸರ್ಜನೆಯ ಮೂಲಕವೇ ಭಾಷಾ ಸೃಷ್ಟಿ ಮತ್ತು ವಿಸರ್ಜನೆ ನಡೆಯುವುದನ್ನು ಮಕ್ಕಳೂ ತಮ್ಮ ಬೆರಳ ತುದಿಯಲ್ಲಿ ಒತ್ತಿ ತೋರಿಸುತ್ತಿವೆ. ಭಾಷಾವಿಜ್ಞಾನದ ಈ ಚರ್ಚೆಗೆ ಇಂದಿನ ಆಯಾಮವನ್ನು ಸೇರಿಸಿಕೊಳ್ಳದೆ ಚರ್ಚೆಯನ್ನು ಬೆಳೆಸಲಾಗದು.

ಒಂದು ಗಾದೆ ಮಾತಿದೆ: ನಾಯಿ ಕಂಡು ಬೊಗಳಿದರೆ, ನರಮನುಷ್ಯ ಕಾಣದೆ ಬೊಗಳುತ್ತಾನೆ. ಕಾಣದುದರ ಬಗೆಗೆ, ತನ್ನ ಅನುಭವಕ್ಕೆ ಬಾರದುದರ ಬಗೆಗೆ ಇರುವ ಸಾಹಿತ್ಯವೇ ಜಗತ್ತಿನಲ್ಲಿ ಅತ್ಯಂತ ಹೆಚ್ಚು. ಕೇವಲ ಕಲ್ಪನೆ, ಊಹೆಗಳನ್ನು ಆಧರಿಸಿ ಲಕ್ಷ ಲಕ್ಷ ಪ್ರಶ್ನೆಗಳನ್ನು ಕೇಳುತ್ತಲೇ ಇರಬಹುದು. ಅಂತಹ ಮಾತುಕತೆಯಲ್ಲಿ ತೊಡಗುವುದರಿಂದ ಕೇಳುವವನು ಹೇಳುವವನು ಇಬ್ಬರೂ ನಿಜದ ದಾರಿಯನ್ನು ಬಿಟ್ಟಿರುತ್ತಾರೆ. ವಿಜ್ಞಾನಕ್ಕೆ ಮತ್ತು ಬುದ್ಧನಿಗೆ ಒಂದು ಸ್ಪಷ್ಟತೆ ಇತ್ತು ಮತ್ತು ಇದೆ. ಅದೇನೆಂದರೆ ಕೇವಲ ಕಾಲ್ಪನಿಕ ಸಂಗತಿಗಳನ್ನು ಕುರಿತು ಚರ್ಚೆಗೆ ತೊಡಗದಿರುವುದು. ಯಾಕೆಂದರೆ ಕೇವಲ ಊಹೆ ಮತ್ತು ಕಲ್ಪನೆಯನ್ನಾಧರಿಸಿದ ಸಂಗತಿಗಳನ್ನು ಚರ್ಚಿಸಲು ತೊಡಗುವುದಾದರೆ ಅದು ಎಂದೂ ಮುಗಿಯುವುದೇ ಇಲ್ಲ. ಹಾಗಾಗಿ ಕೇವಲ ಊಹೆಯನ್ನಾಧರಿಸಿದ ಪ್ರಶ್ನೆಗಳಿಗೆ ಬುದ್ಧಗುರು ಉತ್ತರಿಸದೆ ಮೌನ ತಾಳಿದನು. ವೈದಿಕ-ಅವೈದಿಕ ತಾತ್ವಿಕತೆಯನ್ನು ಕುರಿತಾದ ಮಾತುಕತೆಗೆ ಅಕಾಲ್ಪನಿಕತೆಯನ್ನು ಅನ್ವಯಿಸಿಕೊಳ್ಳದೆ ಹೋದರೆ ಚರ್ಚೆ ಮಾತ್ರ ಇರುತ್ತದೆ, ಫಲ ಇರೋದಿಲ್ಲ. ನಾವು ಮಾಡಬೇಕಾದ್ದೂ ಅದೇ.

ಕಲ್ಪಿತ ಸಂಗತಿಗಳನ್ನು ಕುರಿತಾದ ಸಂಗತಿಗಳನ್ನು ಈ ಮಾತುಕತೆಯಿಂದ ಮೊದಲು ಆಚೆಗೆ ಅಟ್ಟಬೇಕು. ಕೇವಲ ಭಾಷೆಯಲ್ಲಿ ಮಾತ್ರ ಇರುವ ಅಥವಾ ಸಂಭವಿಸುವ-ಭಾಷಾ ವಿಜ್ಞಾನದ ಮೂಲಕ ಹೇಳುವುದಾದರೆ ಕೇವಲ ಸೂಚಕಗಳು ಮಾತ್ರ ಇದ್ದು ಸೂಚಿತಗಳಿಲ್ಲದ ಸಂಗತಿಗಳ ಕುರಿತ- ಮಾತುಕತೆ ಈಗಂತೂ ಅಪ್ರಸ್ತುತ. ಇಂಥ ಮಾತುಕತೆಗೆ ಅದೆಷ್ಟೇ ದೀರ್ಘಕಾಲೀನ ಇತಿಹಾಸ ಇರ ಲಿ, ಎಂತೆಂತಹ ಮಹನೀಯರುಗಳಾದರೂ ಚರ್ಚೆಗೆ ತೊಡಗಿದ್ದಿರಲಿ ಅದನ್ನು ಅದಿರುವಂತೆಯೇ ನೋಡಬೇಕು. ಒಮ್ಮಮ್ಮೆ ಹಾಗೆ ನಿಷ್ಠುರವಾಗಬೇಕು. ಇದೊಂದು ರೀತಿಯಲ್ಲಿ ರಾಜನ ಬೆತ್ತಲೆಯ ಸತ್ಯ. ಅವನು ಬಟ್ಟೆಯನ್ನೇ ಹಾಕಿಲ್ಲ ಎನ್ನುವುದನ್ನು ಹೇಳಲು ಒಂದು ಮಗು ಬೇಕಾದ ಹಾಗೆ ಸತ್ಯದ ನಿರ್ವಚನ. ಜಾತಿ ಎನ್ನುವುದು ಕೇವಲ ಭಾಷೆಯಲ್ಲಿರುವ ಪೊಳ್ಳು. ಅದನ್ನು ಇಡೀ ಜಗತ್ತು ಪಾಲಿಸುತ್ತದೆ ಎನ್ನುವುದು ಅದನ್ನು ನಿಜವನ್ನಾಗಿಸಲಾರದು. ಹಿಂದೂ ಧರ್ಮ, ಕ್ರೈಸ್ತಧರ್ಮ, ಇಸ್ಲಾಂ ಅಥವಾ ಬೌದ್ಧಧರ್ಮ ಏನೇನೋ ನಂಬಿವೆ, ಜಗತ್ತನ್ನು ನಂಬಿಸಿವೆ ಎಂದ ಮಾತ್ರಕ್ಕೆ ಅದೆಲ್ಲ ನಿಜವಾಗಿರಬೇಕಿಲ್ಲ. ವಿಜ್ಞಾನಕ್ಕೆ ಈ ತಿಳುವಳಿಕೆ ಇದೆ.

ನಾವು ಕೂಡ ಇಟ್ಟುಕೊಳ್ಳಬೇಕಾದ ಕನಿಷ್ಠ ತಿಳುವಳಿಕೆ ಅದು. ಬ್ರಹ್ಮಜಾಲ ಸುತ್ತಾಂತದ ಎಲ್ಲ ಅರುವತ್ತುಮೂರು ಚಿಂತನಾ ಪ್ರಸ್ಥಾನಗಳ ನಿಲುವುಗಳನ್ನು ನಿರಾಕರಿಸಿದ ಬುದ್ಧನ ಎದುರಿಗೆ ಬಂದ ಪ್ರಶ್ನೆ ಇದೇ. ಹಾಗಾದರೆ ನಿನ್ನ ನಿಲುವೇನು?. ಯಾವುದೂ ಇಲ್ಲ ಇದು ಬುದ್ಧನ ಉತ್ತರ. ಯಾವುದೂ ಇಲ್ಲ ಎಂದರೆ ನಿಲುವೇ ಇಲ್ಲ ಎಂದಲ್ಲ; ಬದಲಿಗೆ ಆಕ್ಷಣಕ್ಕೆ ತೆಗೆದುಕೊಂಡ ನಿಲುವು ಮರುಕ್ಷಣಕ್ಕೆ ಅಪ್ರಸ್ತುತವೆಂದಾದರೆ ವಿಸರ್ಜಿಸುತ್ತೇನೆ-ಎನ್ನುವುದು ಅದರ ಅರ್ಥ. ಡಿ.ಆರ್. ಹೇಳಿದ ಕಾಮಕಲೆಯ ಕತೆಯೂ ಅದನ್ನೇ ಹೇಳುತ್ತಿದೆ. ಕಾಯಿಲೆಯನ್ನು ವಾಸಿಮಾಡಿಕೊಳ್ಳಲು ಸರಿಯಾದ ವೈದ್ಯರನ್ನು ಕಂಡು, ಕಾಯಿಲೆಯ ಹೆಸರನ್ನು ತಿಳಿದುಕೊಂಡು, ಅವರು ಬರೆದುಕೊಟ್ಟ ಔಷಧಿಗಳ ಚೀಟಿಯನ್ನು ಬರೇ ಓದಿಕೊಂಡರೆ ಏನೂ ಪ್ರಯೋಜನವಿಲ್ಲ. ವೈದ್ಯರು ಸೂಚಿಸಿದ ಔಷಧಿಗಳನ್ನು ಬಳಸಬೇಕು. ಆಗ ಮಾತ್ರ ಎಲ್ಲದರ ಸಾರ್ಥಕತೆ. ದರ್ಶನವೆನ್ನುವುದು ಹಾಗೆಯೇ ಸರಿಯಾಗಿ ಬಾಳಿ ಕಂಡುಕೊಳ್ಳಬೇಕಾದದ್ದು. ಸರಿಯಾಗಿ ಇರಬೇಕು ಎನ್ನುವುದಾದರೆ ತಪ್ಪನ್ನು ತ್ಯಜಿಸಬೇಕು ಅಷ್ಟೆ. ಅಷ್ಟೇ ಅಲ್ಲ ಸರಿತಪ್ಪು ಎನ್ನುವುದು ಬದುಕುವ ಸಂದರ್ಭಕ್ಕನುಗುಣವಾಗಿ ಬದಲಾಗುತ್ತಿರಬೇಕು. ಹಾಗಾಗಿ ಅದು ವೈದಿಕವಾಗಿರಲಿ ಅವೈದಿಕವಾಗಿರಲಿ ಯಾವುದೂ ಈಗಾಗಲೇ ಹೇಳಿಮುಗಿಸಿರುವ ದರ್ಶನವಲ್ಲ. ಅದು ಕೂಡ ನಿರಂತರವಾಗಿ ವರ್ತಮಾನದ ಜೊತೆಗೆ ಹರಿಯುತ್ತಿರುವ ತಿಳುವಳಿಕೆ.

ಇಂತಹ ತಿಳುವಳಿಕೆಯನ್ನು ಕಂಡುಕೊಳ್ಳಲು ಅನೇಕ ಮಾರ್ಗಗಳಿವೆ. ಇನ್ನು ವೈದಿಕ-ಅವೈದಿಕವೆಂಬ ಈ ವರ್ಗೀಕರಣದ ಅಗತ್ಯವಾದರೂ ಏನು? ಇಂತಹ ವರ್ಗೀಕರಣದ ಉದ್ದೇಶಗಳು ಏನಿದ್ದಾವು? ಯಾರು ಇಂತಹ ವರ್ಗೀಕರಣವನ್ನು ಚಾಲ್ತಿಗೆ ತರುತ್ತಾರೆ? ಮುಂತಾದ ಪ್ರಶ್ನೆಗಳನ್ನು ಇನ್ನು ಮೇಲಾದರೂ ನಾವು ಕೇಳಿಕೊಳ್ಳಬೇಕಾಗಿದೆ. ರಾಷ್ಟ್ರೀಯತೆ, ಭಾಷೆ, ಧರ್ಮ ಮುಂತಾದ ಸಂಸ್ಥೆಗಳನ್ನು ತನ್ನ ಪರವಾದ ದುಡಿಮೆಗೆ ಬಳಸಿಕೊಳ್ಳುವ ಅಧಿಕಾರ ಕೇಂದ್ರಗಳ ಜೊತೆಗೆ ಸಾಂಸ್ಕೃತಿಕ ವಸಾಹತುಶಾಹಿ ಕೂಡಿ ಇಂತಹ ವರ್ಗೀಕರಣಕ್ಕೆ ಚಾಲನೆ ನೀಡುತ್ತದೆ. ಭಾರತದ ಸಂದರ್ಭದಲ್ಲಿ ಓರಿಯಂಟಲ್ ಮತ್ತು ಇಂಡಲಾಜಿಕಲ್ ಎರಡೂ ಮಾದರಿಯ ಅಧ್ಯಯನಗಳು ಇಂತಹ ಇಕ್ಕಟ್ಟನ್ನು ಸೃಷ್ಟಿಸುತ್ತ ಬಂದಿವೆ. ಈ ವರ್ಗೀಕರಣದ ಬಿಕ್ಕಟ್ಟು ಹೊರಗಿನಿಂದ ಹೇರಿದ್ದು. ರೆಡ್‌ಇಂಡಿಯನ್ಸ್ ಎಂಬ ಹೆಸರನ್ನಿಟ್ಟುಕೊಳ್ಳುವ ಯಾವ ಅಗತ್ಯವೂ ಮೂಲ ಅಮೆರಿಕನ್ನರಿಗೆ ಇರಲಿಲ್ಲ. ಅದು ಹೊರಗಿನಿಂದ ಬಂದ ಕೇಡು ಬರೀ ಹೆಸರಲ್ಲ. ಚರ್ಚೆಗೆ ಒಳಗಾದ ಸಂಗತಿಗಳು ಈ ಹೊತ್ತಿನ ತಂತ್ರಜ್ಞಾನಿ ಮನುಷ್ಯನೊಬ್ಬನಿಗೆ ಹೇಗೆ ಕಾಣಿಸಬಹುದು? ಇದು ನನಗೆ ತುಂಬಾ ಕುತೂಹಲಕರವಾದ ಸಂಗತಿ. ಇದೆಲ್ಲಾ ಕೋಲಾರದ ಚಿನ್ನದ ಗಣಿಯಿಂದ ಚಿನ್ನದ ಗಟ್ಟಿಗಳನ್ನು ತುಂಬಿಕೊಂಡು ಬರುವ ರಿಸರ್ವ್‌ಬ್ಯಾಂಕಿನ ಲಾರಿಗಳ ಹಾಗೆ ಕಾಣಿಸಬಹುದಾ? ಅಥವಾ... ಬೆಂಗಳೂರಿನಿಂದ ಸಾಲಾಗಿ ಬರುವ ಬಿಬಿಎಂಪಿಯ ಕಸದ ಲಾರಿಗಳಂತೆ ಕಾಣಿಸಬಹುದಾ? ಅವರನ್ನೇ ಕೇಳಬೇಕು!

ಪುಸ್ತಕ: ವೈದಿಕ-ಅವೈದಿಕ ದರ್ಶನ (ಪ್ರಾಚೀನ ಭಾರತೀಯ ವಾಗ್ವಾದಗಳು)
 ಪ್ರಕಟನೆ: 
ಋತುಮಾನ ಟ್ರಸ್ಟ್, ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್‌ಮೆಂಟ್, ಅರೆಕೆರೆ ಬನ್ನೇರುಘಟ್ಟ ರಸ್ತೆ, ಬೆಂಗಳೂರು.
 ಪುಟಗಳು: 136, ಮುದ್ರಣ: 2020 ಬೆಲೆ: 150

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)