varthabharthi


ವಿಶೇಷ-ವರದಿಗಳು

ಕುವೆಂಪು ಬೆಳಕಿನ ಕಿಡಿಗಳು

ವಾರ್ತಾ ಭಾರತಿ : 28 Dec, 2020

ಸೆಕ್ಯುಲರಿಸಂ

ಸೆಕ್ಯುಲರಿಸಂ ಎಂದರೆ ಇನ್ನೇನೂ ಅಲ್ಲ. ಎಲ್ಲರೂ ತನ್ನಂತೆಯೇ ಎನ್ನುವ ಅತ್ಯಂತ ಸರಳ ಅನುಭೂತಿ:

-----------

ರೈತರನ್ನು ಮರೆತೆವು

ಅನೇಕ ರೀತಿಯ ಭೋಗದ ಮತ್ತು ಶೋಕಿಯ ವಸ್ತುಗಳ ತಯಾರಿಕೆಗೆ ಬಡರೈತರ ತೆರಿಗೆಯ ಧನವನ್ನು ವ್ಯಯ ಮಾಡಿದೆವು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಭೋಗ ಜೀವನ ನಡೆಸುವ ಶ್ರೀಮಂತರ ಸುಖಕ್ಕಾಗಿ ಹಳ್ಳಿಗಳನ್ನೂ, ರೈತವರ್ಗವನ್ನೂ ಮರೆತುಬಿಟ್ಟೆವು. ಮರೆತೇ ಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುದಕ್ಕಾಗಿಯೂ ರೈತರ ಜೀವ ಆಡುವಷ್ಟರ ಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು.

-----------

ನಿರಂಕುಶಮತಿಗಳಾಗಿ

ನಿರಂಕುಶಮತಿಗಳಾಗಬೇಕಾದರೆ ದಾಸ್ಯಬುದ್ಧಿ ತೊಲಗಬೇಕು; ದಾಸ್ಯಬುದ್ಧಿ ತೊಲಗಬೇಕಾದರೆ ಸ್ವತಂತ್ರವಾಗಿ ಜೀವಿಸಲು ಪ್ರಯತ್ನಿಸಬೇಕು; ಎಂದರೆ ಸ್ವಾವಲಂಬನ ಬೇಕು; ಎಂದರೆ ಇನ್ನೊಬ್ಬರ ಕೈ ಹಾರೈಸಿ ಹೊಟ್ಟೆ ಹೊರೆಯುವುದು ತಪ್ಪಬೇಕು.

----------

ಓದುವುದು, ಬರೆಯುವುದು

ಉಳದೆ, ಬಿತ್ತದೆ, ಬೆಳೆಯದೆ, ಪೈರು ಕೊಯ್ಲಿಗೆ ಬರುವುದಿಲ್ಲ. ಬೆವರು ಸುರಿಸದೆ, ಕೈ ಸೇರುವುದಿಲ್ಲ, ವಿದ್ಯೆಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ. ಅಲ್ಲಿ ಯಾರೂ ವಂಚನೆಯಿಂದ ಸಂಪತ್ತು ಗಳಿಸಲಾರರು... ಪ್ರೀತಿಯ ಪುಸ್ತಕಗಳನ್ನು ಕೊಂಡುಕೊಳ್ಳುವುದಕ್ಕಾಗಿ ಹಸಿದಿರಬೇಕಾಗುತ್ತದೆ; ಅವುಗಳನ್ನೋದಿ ಜಯಿಸುವುದಕ್ಕಾಗಿ ನಿದ್ದೆಗೆಡಬೇಕಾಗುತ್ತದೆ. ಬೆವರು ಸುರಿಸಬೇಕಾಗುತ್ತದೆ. ಎಣ್ಣೆ ಉರಿಸಬೇಕಾಗುತ್ತದೆ. ಎಷ್ಟೋ ಮನರಂಜನೆಗಳನ್ನೂ ತ್ಯಾಗ ಮಾಡಿ ಅಧ್ಯಯನ ತಪಸ್ಸಿನಲ್ಲಿ ಮಗ್ನವಾಗಬೇಕಾಗುತ್ತದೆ.

----------

ಶಿಕ್ಷಣ ರಂಗದ ಶುದ್ಧಿ: ಬೇಕು ಒಂದು ಪೊರಕೆ

ಎರಡು ಕೈಲಿ ಎರಡು ಪೊರಕೆ ಹಿಡಿದುಕೊಂಡು ಇದುವರೆಗೆ ಶಿಕ್ಷಣ ರಂಗದಲ್ಲಿ ತುಂಬಿದ ಕಸವನ್ನು ಗುಡಿಸಬೇಕಾಗಿದೆ. ಗುಡಿಸುವುದಕ್ಕೆ ಅಡ್ಡಿ ಮಾಡಿದವರನ್ನು ಆ ಪೊರಕೆಯಿಂದ ಪ್ರಯೋಗ ಮಾಡಿ ಮುಂದುವರಿಯಬೇಕು.

             ---------

ದೇವರು, ದೇವಾಲಯಗಳು

ದೇವರ ಸೋಮಾರಿಗಳಿಗೆ ಹಬ್ಬಗಳೇ ವರಗಳು, ಶೋಷಕರಿಗೆ ಅನುಕೂಲ ಸಾಧನಗಳು. ಜಾತಿ ಮತಗಳ ರಕ್ಷಣಾ ಕೇಂದ್ರಗಳು ದೇವಾಲಯಗಳು. ಈ ಜಾತಿ ಮತಗಳು ಮನುಷ್ಯನ ಆತ್ಮವನ್ನು ಕಿತ್ತು ತಿನ್ನುತ್ತಿವೆ.

 -------- 

ಧರ್ಮದ ಮೆರೆತ

ಸುಳ್ಳಿನಿಮಾಲೆಯ ಕೊರಳಿಗೆ ಸೂಡಿ

ಕಳ್ಳನೊಬ್ಬನನು ಗುರುವನು ಮಾಡಿ

ಬಡವರ ಹೊನ್ನನು ಕಾಣಿಕೆ ನೀಡಿ

ಧರ್ಮವ ಮೆರೆವರ ನೋಡಯ್ಯ.

     ------------

ಒಂದೆ ರಾಮಾಯಣವಲ್ಲ

ಜಗಕೆಲ್ಲ ಒಂದೆ ರಾಮಾಯಣವು ಎಂಬುದದು ಹೆದ್ದಪ್ಪು.

ಇಳೆಗೆಲ್ಲ ವಾಲ್ಮೀಕಿಯೊಬ್ಬನೇ ಕವಿ ಎಂಬುದೂ ತಪ್ಪು.

ತಿರೆಗೆಲ್ಲ ಶ್ರೀರಾಮನೊಬ್ಬನೇ ಎಂಬರೂ ಬೆಪ್ಪುಗಳೆ.

------------

ವಿಶ್ವ ಮಾನವ ಎಂದರೆ

ನನಗೆ ಯಾವ ಮತದ ಗೋಜೂ ಇಲ್ಲ. ನನ್ನದು ಮನುಜಮತ, ವಿಶ್ವಪಥ. ನಾನು ಹಿಂದುವಲ್ಲ, ವಿಶ್ವಮಾನವ.

ಮತವನ್ನು ತೊರೆದು, ಅಧ್ಯಾತ್ಮ ಪಥವನ್ನು ಸ್ವೀಕರಿಸಿದ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಮಾನವನಾಗುತ್ತಾನೆ.

-----------

ಇದು ನನ್ನ ಹಾದಿ

ನಾನು ಪೂಜೆಯ ಸಲುವಾಗಿ ದೇವಸ್ಥಾನಗಳಿಗೆ ಕೂಡ ಹೋಗದೆ ಕಾಲು ಶತಮಾನಕ್ಕಿಂತಲೂ ಹೆಚ್ಚಾಯಿತೆಂದು ತೋರುತ್ತದೆ. ನಾನು ಜಾತಕ ಪಂಚಾಂಗ ಇತ್ಯಾದಿಗಳ ಕಡೆ ಎಂದೂ ಮುಖ ಹಾಕಿದವನಲ್ಲ. ನನಗೆ ರಾಹುಕಾಲ, ಗುಳಿಕ ಕಾಲಗಳ ಅರ್ಥವೂ ಗೊತ್ತಿಲ್ಲ. ಪಿತೃಗಳಿಗೆ ಶ್ರಾದ್ಧ ಮಾಡುವುದು, ಪಿಂಡ ಅರ್ಪಿಸುವುದು ಇತ್ಯಾದಿಗಳನ್ನು ಕೇಳಿ ಬಲ್ಲೆನೆ ಹೊರತು ಮಾಡುವ ಗೋಜಿಗೆ ಹೋದವನಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)