varthabharthi


ಸಿನಿಮಾ

ಜೆಎನ್‍ಯು ಹೋರಾಟ ಹಿನ್ನೆಲೆಯ 'ವರ್ತಮಾನಂ' ಮಲಯಾಳಂ ಚಿತ್ರ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ ಸೆನ್ಸಾರ್ ಮಂಡಳಿ

ವಾರ್ತಾ ಭಾರತಿ : 29 Dec, 2020

ತಿರುವನಂತಪುರಂ: ಪಾರ್ವತಿ ತಿರುವೊತ್ತು ಅವರು ಮುಖ್ಯ ಭೂಮಿಕೆಯಲ್ಲಿರುವ ಮಲಯಾಳಂ ಚಿತ್ರ 'ವರ್ತಮಾನಂ' ಪ್ರದರ್ಶನಕ್ಕೆ  ಸೆನ್ಸಾರ್ ಮಂಡಳಿಯ ಕೇರಳ ಪ್ರಾದೇಶಿಕ ಕಚೇರಿ ಅನುಮತಿ ನಿರಾಕರಿಸಿದೆ. ಕೊಝಿಕ್ಕೋಡ್‍ನ ಯುವತಿಯೊಬ್ಬಳು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕುರಿತ ಸಂಶೋಧನೆಗೆ ತೆರಳುವ ಹಾಗೂ ಆಕೆ ಎದುರಿಸುವ ಸವಾಲುಗಳ ಸುತ್ತಲಿನ ಕಥಾ ಹಂದರವಿರುವ ಈ ಚಿತ್ರವನ್ನು ಸಿದ್ಧಾರ್ಥ ಶಿವ ನಿರ್ದೇಶಿಸಿದ್ದಾರೆ.

ಚಿತ್ರ ಕಥೆ ಬರೆದಿರುವ ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ ಮಾತನಾಡಿ "ಜೆಎನ್‍ಯುವಿನ ದಿಲ್ಲಿ ಕ್ಯಾಂಪಸ್ ಹಾಗೂ ಅಲ್ಲಿನ ವಿದ್ಯಾರ್ಥಿ ಚಳುವಳಿಯ ಸುತ್ತ ಈ ಚಿತ್ರದ ಕಥೆಯಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಎಲ್ಲರೂ ಒಗ್ಗೂಡುವ  ಹಾಗೂ ಜಾತ್ಯತೀತತೆಯ ಸಿದ್ಧಾಂತವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ,'' ಎಂದಿದ್ದಾರೆ.

"ನಮಗೆ ಸೆನ್ಸಾರ್ ಮಂಡಳಿಯಿಂದ ನೋಟಿಸ್ ಬಂದಿದೆ ಹಾಗೂ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಮಾಹಿತಿಯಿದೆ. ಈ ಕ್ರಮದ ಹಿಂದಿನ ಕಾರಣ ನಮೂದಿಸಲಾಗಿಲ್ಲ.'' ಎಂದು ಅವರು ಹೇಳಿದರು.

ರವಿವಾರ ಈ ಚಲನಚಿತ್ರದ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕ ಹಾಗೂ ಸೆನ್ಸಾರ್ ಮಂಡಳಿ ಸದಸ್ಯ ವಿ ಸಂದೀಪ್ ಕುಮಾರ್, "ಸೆನ್ಸಾರ್ ಮಂಡಳಿ ಸದಸ್ಯನಾಗಿ ಚಿತ್ರವನ್ನು ವೀಕ್ಷಿಸಿದೆ. ಜೆಎನ್‍ಯು ಹೋರಾಟದಲ್ಲಿ ದಲಿತರು ಹಾಗೂ ಮುಸ್ಲಿಮರ ಶೋಷಣೆಯ ಕುರಿತಾದ ಕಥೆ ಇದೆ. ನಾನು ಅದನ್ನು ವಿರೋಧಿಸಿದೆ. ಆರ್ಯದನ್ ಶೌಕತ್ ಅವರು ಈ ಚಿತ್ರಕಥೆ ಬರೆದು ಅದನ್ನು ನಿರ್ಮಿಸಿರುವುದರಿಂದ ಸಹಜವಾಗಿ ಅದರ  ಮುಖ್ಯ ವಿಚಾರ ದೇಶ ವಿರೋಧಿಯಾಗಿದೆ,'' ಎಂದು ಬರೆದಿದ್ದರು. ಆ ಟ್ವೀಟ್ ಅನ್ನು ಕುಮಾರ್ ಇದೀಗ ಡಿಲೀಟ್ ಮಾಡಿದ್ದಾರೆ.

"ಜೆಎನ್‍ಯು ಕ್ಯಾಂಪಸ್ಸಿನಲ್ಲಿನ ವಿದ್ಯಾರ್ಥಿ ಪ್ರತಿಭಟನೆ ಕುರಿತ ವಿಚಾರ ದೇಶ ವಿರೋಧಿ ಹೇಗಾಗುತ್ತದೆ?'' ಎಂದು ಶೌಕತ್ ಪ್ರಶ್ನಿಸಿದ್ದಾರೆ.

ഡൽഹി ക്യാമ്പസ്സിലെ വിദ്യാര്‍ത്ഥി സമരത്തെകുറിച്ച പറഞ്ഞാല്‍, ഇന്ത്യയിലെ ജനാധിപത്യ പോരാട്ടത്തെകുറിച്ച് പറഞ്ഞാല്‍...

Posted by Aryadan Shoukath on Sunday, 27 December 2020

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)