varthabharthi


ನಿಮ್ಮ ಅಂಕಣ

ಚುನಾಯಿತ ಜನಪ್ರತಿನಿಧಿಗಳೆಲ್ಲ ಬಿಪಿಎಲ್ ಕಾರ್ಡ್‌ದಾರರೇ?

ವಾರ್ತಾ ಭಾರತಿ : 29 Dec, 2020
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಜನಸಾಮಾನ್ಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಅರ್ಜಿಗಳನ್ನು ಸಲ್ಲಿಸಿದಾಗ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪರಿಹಾರದ ನಿಧಿಯಿಂದ ಧನಸಹಾಯ ದೊರೆಯುತ್ತದೆ ಎಂಬ ಮಾನದಂಡವನ್ನು ಮಾನ್ಯ ಮುಖ್ಯಮಂತ್ರಿ ರೂಪಿಸಿರುತ್ತಾರೆ. ಈ ಹಿಂದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆದಾಯ ಪ್ರಮಾಣ ಪತ್ರವನ್ನು ಸಹ ಪರಿಗಣಿಸುತ್ತಿದ್ದರು. ಇದರಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತಿತ್ತು. ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ಬಡವರು ಉಳಿದವರು ಶ್ರೀಮಂತರೆಂಬ ಅಭಿಪ್ರಾಯಕ್ಕೆ ಸರಕಾರ ಬಂದಿರುತ್ತದೆ. ಮದುವೆಯಾಗದ ಅನೇಕ ಮಂದಿ, ವಾಸಕ್ಕೆ ಮನೆಯಿಲ್ಲದ ಮಂದಿ, ಶಾಶ್ವತವಾದ ಮನೆಗಳನ್ನು ಹೊಂದಿಲ್ಲದವರು ಅನೇಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿರುವುದಿಲ್ಲ.

ಬಿಪಿಎಲ್ ಕಾರ್ಡ್ ಇಲ್ಲದವರ ಪಟ್ಟಿಯಲ್ಲಿ ಆಟೊರಿಕ್ಷಾ ಚಾಲಕರು, ಅಡುಗೆ ಕೆಲಸದವರು, ಬಾಡಿಗೆ ಮನೆಯವರು ಹೀಗೆ ಅನೇಕರು ಬರುತ್ತಾರೆ. ಬಿಪಿಎಲ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಧನಸಹಾಯ ದೊರೆಯುವುದಿಲ್ಲ. ಆದರೆ ನಮ್ಮ ಚುನಾಯಿತ ಪ್ರತಿನಿಧಿಗಳು ಅವರಿಗೂ ಸೇರಿದಂತೆ ಅವರ ಕುಟುಂಬದ ಸದಸ್ಯರಿಗೆ ರೋಗಗಳು ಬಂದಾಗ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಹಲವಾರು ಲಕ್ಷ ರೂಪಾಯಿಗಳ ಆಸ್ಪತ್ರೆಯ ಬಿಲ್ಲನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಡೆದುಕೊಳ್ಳುತ್ತಾರೆ. ಇವರಿಗೆ ಯಾವ ಮಾನದಂಡವೂ ಇರುವುದಿಲ್ಲ. ಇವರು ಯಾರೂ ಬಿಪಿಎಲ್ ಕಾರ್ಡ್ ಹೊಂದಿರುವವರೂ ಅಲ್ಲ. ಜನರಿಗೊಂದು ನ್ಯಾಯ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೊಂದು ನ್ಯಾಯ ಇದು ಸರಿಯಲ್ಲ.

ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ಹಿಂದಿನಂತೆ ಆದಾಯಪ್ರಮಾಣ ಪತ್ರವನ್ನು ಮಾನದಂಡವನ್ನಾಗಿ ಮಾಡುವಂತೆ ಸಂಬಂಧಪಟ್ಟವರಿಗೆ ತಿಳಿಸಿ ಸಹಾಯ ಮಾಡಲು ದೊಡ್ಡಮನಸ್ಸು ಮಾಡಬೇಕು. ಮುಖ್ಯಮಂತ್ರಿಗಳ ಪರಿಹಾರನಿಧಿಗೆ ಈಗಲೂ ಲಕ್ಷಾಂತರ ಮಂದಿ ವಿಧಾನ ಸೌಧದ ಎರಡನೇ ಮಹಡಿಯಲ್ಲಿ ಅಲೆದಾಡುತ್ತಾ ತಮ್ಮ ಚಪ್ಪಲಿಗಳನ್ನು ಸವೆಸಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಸಾಮಾನ್ಯ ಜ್ಞಾನವಿಲ್ಲದ ಜನರು ತಮ್ಮ ದಾಖಲೆಗಳನ್ನು ಆನ್‌ಲೈನ್ ಮೂಲಕ ಕಚೇರಿಗೆ ಕಳುಹಿಸುವಲ್ಲಿ ಪಡುತ್ತಿರುವ ಪಾಡು ಹೇಳತೀರದು. ಹಣ ಬರುತ್ತದೋ ಇಲ್ಲವೋ ಆದರೆ ದಾಖಲೆಗಳ ಆನ್‌ಲೈನ್ ಮಾಡುವ ಸಲುವಾಗಿ ಸೈಬರ್‌ಸೆಂಟರ್‌ಗಳಲ್ಲಿ ನೂರಾರು ರೂಪಾಯಿಗಳನ್ನು ಕಣ್ಣೀರಿಡುತ್ತಾ ನೀಡುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)