varthabharthi


ನಿಮ್ಮ ಅಂಕಣ

ಭಾರತದ ಯುವಜನತೆಯ ಮೇಲೆ ಹೂಡಬೇಕಾದ ಬಂಡವಾಳ

ವಾರ್ತಾ ಭಾರತಿ : 30 Dec, 2020
ಎರಿಕ್ ಫಾಲ್ಟ್

ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಯುವಜನತೆಯನ್ನು ಹೊಂದಿರುವ ಭಾರತ ಪ್ರತಿಯೊಬ್ಬ ನಾಗರಿಕನನ್ನು ಸಮಾಜಕ್ಕೆ ಓರ್ವ ಉಪಯೋಗವುಳ್ಳ ನಾಗರಿಕನನ್ನಾಗಿ ಮಾಡಲು ಆತನಿಗೆ ಬೇಕಾದ ಶಿಕ್ಷಣ ನೀಡುವ ಸಮಸ್ಯೆಯನ್ನು ಎದುರಿಸುತ್ತಿದೆ. ಕೊರೋನದಿಂದಾಗಿ ಸರಕಾರದ ಕೆಲಸ ಇನ್ನಷ್ಟು ಕಷ್ಟವಾಗಿದೆ. 320 ಮಿಲಿಯಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕೊರೋನ ಪರಿಣಾಮ ಬೀರಿದೆ ಮತ್ತು ಐದು ಮಿಲಿಯ ಯುವಕ ಯುವತಿಯರು ತಮ್ಮ ನೌಕರಿಗಳನ್ನು ಕಳೆದುಕೊಂಡಿರುವ ಸಾಧ್ಯತೆಯಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೊಸ ರೀತಿಯ ಶಿಕ್ಷಣ ಪ್ರಧಾನ ಪಾತ್ರ ವಹಿಸಬಲ್ಲದು.

ಭಾರತದ ಶಿಕ್ಷಣ ಹಕ್ಕು ಕಾಯ್ದೆಯು 6ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಹಕ್ಕು ನೀಡುತ್ತದೆ. ಅದೇನಿದ್ದರೂ ಬಹಳ ಮಂದಿ ನೌಕರಿಗೆ ಬೇಕಾದ 21ನೇ ಶತಮಾನದ ಕೌಶಲ್ಯಗಳನ್ನು ಅವರು ತಾವು ಮಾಡುವ ಉದ್ಯೋಗದಿಂದಲೇ ಅಥವಾ ಕೌಶಲ್ಯಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಒತ್ತು ನೀಡುವ ಕೋರ್ಸ್‌ಗಳಿಂದ ಕಲಿಯುತ್ತಾರೆ ಎಂಬುದನ್ನು ಪುರಾವೆಗಳು ದೃಢಪಡಿಸುತ್ತದೆ. ಅಂದರೆ ವೃತ್ತಿ ಶಿಕ್ಷಣವು ನಿರ್ದಿಷ್ಟ ಕೌಶಲ್ಯಗಳನ್ನು ಪಡೆಯಲು ಒಂದು ಉತ್ತಮ ಮಾರ್ಗ ಎಂಬುದನ್ನು ಇದು ಸೂಚಿಸುತ್ತದೆ.

ಭಾರತದಲ್ಲಿ ಕಳೆದ ದಶಕದಲ್ಲಿ ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆ ತೀವ್ರ ಸ್ವರೂಪದ ಬದಲಾವಣೆಗಳನ್ನು ಕಂಡಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನೀತಿಯನ್ನು 2009ರಲ್ಲಿ ಆರಂಭಿಸಿ 2015ರಲ್ಲಿ ಅದನ್ನು ಪುನರ್‌ರೂಪಿಸಲಾಯಿತು. ಸ್ವಲ್ಪವೇ ಸಮಯದ ಬಳಿಕ ಕೌಶಲ್ಯ ಅಭಿವೃದ್ಧಿ ಅಭಿಯಾನವನ್ನು ಆರಂಭಿಸಲಾಯಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ‘ಕೌಶಲ್ಯ ರಾಜಧಾನಿ’ (ಸ್ಕಿಲ್ ಕ್ಯಾಪಿಟಲ್)ಯಾಗಿಸುವ ತನ್ನ ದೂರದೃಷ್ಟಿಯನ್ನು (ವಿಷನ್) ಘೋಷಿಸಿದರು. ಅಂದಿನ ಲಾಗಾಯ್ತು ಭಾರತವು ಯುವಜನತೆಗೆ ಉತ್ತಮ ಗುಣಮಟ್ಟದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಲಭ್ಯವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದೇ ವೇಳೆ ಅದು ಹಲವು ಸವಾಲುಗಳನ್ನು ಕೂಡ ಎದುರಿಸಬೇಕಾಗಿ ಬಂದಿದೆ. ಭಾರತದ ಕುರಿತಾದ ಯುನೆಸ್ಕೊದ 2020ರ ಶಿಕ್ಷಣ ಸ್ಥಿತಿ ವರದಿಯು ವೃತ್ತಿ ಶಿಕ್ಷಣ ಮತ್ತು ತರಬೇತಿಗೆ ವಿಶೇಷ ಮಹತ್ವ ನೀಡಿದೆ. ಅಲ್ಲದೆ ವೃತ್ತಿ ಶಿಕ್ಷಣ ಕುರಿತ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಯೋಗಿಕ ಶಿಫಾರಸುಗಳನ್ನು ಮಾಡಿದೆ. ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣ ಮತ್ತು ತರಬೇತಿ (ಟೆಕ್ನಿಕಲ್ ಆ್ಯಂಡ್ ಒಕೇಶನಲ್ ಎಜ್ಯುಕೇಶನ್ ಆ್ಯಂಡ್ ಟ್ರೈನಿಂಗ್ - ಟಿವಿಇಟಿ) ಯಡಿಯಲ್ಲಿ ಯುವಕರಿಗೆ ಹಾಗೂ ಯುವತಿಯರಿಗೆ ವೃತ್ತಿ ಶಿಕ್ಷಣ ಕುರಿತಾದ ಮಾಹಿತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಅದೇ ವೇಳೆ ಟಿವಿಇಟಿ ಬಗ್ಗೆ ಇರುವ ಮಿಥ್ಯೆಗಳನ್ನು ದೂರಮಾಡಬೇಕಾಗಿದೆ: ಟಿವಿಇಟಿ ಪದವೀಧರರಿಗೆ ವಿಶ್ವವಿದ್ಯಾನಿಲಯಗಳ ಪದವೀಧರರಿಗೆ ಸಿಗುವಷ್ಟು ವೇತನ ಸಿಗುವುದಿಲ್ಲ; ಅಷ್ಟು ಬೇಗನೆ ನೌಕರಿ ಸಿಗುವುದಿಲ್ಲ ಎಂಬ ತಪ್ಪು ಅಭಿಪ್ರಾಯಗಳಿವೆ. ಯುನೆಸ್ಕೊ ವರದಿ ಪುರಾವೆ-ಆಧಾರಿತ ಸಂಶೋಧನೆಯ ಅವಶ್ಯಕತೆಯ ಮಹತ್ವವನ್ನು ಒತ್ತಿಹೇಳಿದೆ. ಇಂತಹ ಸಂಶೋಧನೆಯು ಟಿವಿಇಟಿಯ ಯೋಜನೆ ಹಾಗೂ ಅನುಷ್ಠಾನದ ಎಲ್ಲ ಅಂಶಗಳ ವೌಲ್ಯವನ್ನು ಹೆಚ್ಚಿಸಬಲ್ಲದು. ನೂತನ ಶಿಕ್ಷಣ ನೀತಿ 2025ರ ವೇಳೆಗೆ ಎಲ್ಲ ವಿದ್ಯಾರ್ಥಿಗಳಲ್ಲಿ ಶೇ. 50 ಮಂದಿಗೆ ವೃತ್ತಿ ಶಿಕ್ಷಣ ನೀಡುವ ಗುರಿಹೊಂದಿದೆ. ಆರನೇ ತರಗತಿಯಿಂದ ಆರಂಭಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ನೀಡುವಂತಹ ಶಾಲೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಸ್ಥಳೀಯ ಅರ್ಥವ್ಯವಸ್ಥೆಗಳಿಗೆ ಪ್ರಸ್ತುತವಾಗುವ ಹಾಗೂ ಲಾಭವಾಗುವಂತಹ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈಗ ಇರುವ ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಗಳನ್ನು ಬಲಪಡಿಸಿದರೆ ಮಾತ್ರ ಇದೆಲ್ಲ ಸಾಧ್ಯವಾಗಬಹುದು. ಯುನೆಸ್ಕೊ ತನ್ನ ನೀತಿ ನಿರೂಪಣೆಗಳ ಮೂಲಕ ಭಾರತ ಸರಕರದ ವೃತ್ತಿಶಿಕ್ಷಣ -ನೌಕರಿ ಅಭಿಯಾನಕ್ಕೆ ನೆರವು ನೀಡುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಟಿವಿಇಟಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ವಿಸ್ತರಿಸಲು ಎದುರಾಗುವ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದು ಸವಾಲು ಎಂದರೆ ಮಹತ್ವಾಕಾಂಕ್ಷೆಯ ಕೊರತೆ ಹಾಗೂ ಬಡಗಿ ಮತ್ತು ಹೊಲಿಗೆಯಂತಹ ವೃತ್ತಿಗಳಿಗೆ ಅಂಟಿಕೊಂಡಿರುವ ಕೀಳರಿಮೆ (ಸ್ಟಿಗ್ಮ). ಇಂತಹ ಮನೋಧರ್ಮ ಬದಲಾದಲ್ಲಿ ಮಾತ್ರ ವೃತ್ತಿಶಿಕ್ಷಣ ಹಾಗೂ ಅದನ್ನು ಆಧರಿಸಿರುವ ಉದ್ಯೋಗಗಳನ್ನು ಮಾಡಲು ಯುವಕ ಯುವತಿಯರು ಮುಂದೆ ಬರುತ್ತಾರೆ.

ಭಾರತದಲ್ಲಿರುವ ಅಪಾರವಾದ ಯುವಶಕ್ತಿಯ ಸದ್ಬಳಕೆಯಾಗಬೇಕಾದರೆ ಯುನೆಸ್ಕೊ ನೀಡಲು ಸಿದ್ಧವಿರುವ ನೆರವನ್ನು ಭಾರತ ಪೂರ್ಣವಾಗಿ ಬಳಸಿ ಕೊಳ್ಳಬೇಕು. ದೇಶದ ಅರ್ಥ ವ್ಯವಸ್ಥೆ ಹಾಗೂ ದೇಶದ ಜನರ ಬದುಕನ್ನು ಸರಿದಾರಿಗೆ ತರಲು, ಅವರನ್ನು ಉದ್ಯೋಗಿಗಳನ್ನಾಗಿಸಲು ಟಿವಿಇಟಿ ಖಂಡಿತವಾಗಿಯೂ ಬಹಳ ಮುಖ್ಯವಾದ ಒಂದು ಸಾಧನವಾಗಿದೆ.

(ಲೇಖಕರು ದಿಲ್ಲಿಯ ಯುನೆಸ್ಕೊದ ನಿರ್ದೇಶಕರು ಹಾಗೂ ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ಯುನೆಸ್ಕೊದ ಪ್ರತಿನಿಧಿಯಾಗಿದ್ದಾರೆ) 

(ಕೃಪೆ: thehindu)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)