varthabharthi


ಆರೋಗ್ಯ

ವೃಥಾ ಭಯ ಮೂಡಿಸುವ ಅಗೋರಾಫೋಬಿಯಾ

ವಾರ್ತಾ ಭಾರತಿ : 30 Dec, 2020

ಅಗೋರಾಫೋಬಿಯಾ ಎಂಬ ಹೆಸರೇ ನಿಜಕ್ಕೂ ದಿಗಿಲು ಮೂಡಿಸುತ್ತದೆ. ಇದೊಂದು ಆತಂಕ,ಭಯದ ಕಾಯಿಲೆಯಾಗಿದೆ. ಅಗೋರಾಫೋಬಿಯಾ ಇರುವವರು ಕೆಲವು ಸ್ಥಳಗಳಲ್ಲಿ ಅಥವಾ ಸನ್ನಿವೇಶಗಳಲ್ಲಿ ಇರಲು ಅಳಕುತ್ತಾರೆ ಮತ್ತು ಅಂತಹ ಸಂದರ್ಭಗಳಿಂದ ನುಣುಚಿಕೊಳ್ಳುತ್ತಾರೆ. ತಮಗೆ ಅಂತಹ ಸ್ಥಿತಿಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿರುತ್ತಾರೆ. ಅವರ ಮನಸ್ಸಿನಲ್ಲಿ ಅತಿಯಾದ ಆತಂಕ ಮನೆಮಾಡಿರುತ್ತದೆ ಮತ್ತು ತಮಗೆ ನೆರವಾಗಲೂ ಯಾರೂ ಇಲ್ಲ ಎಂಬ ಕಳವಳ ಅವರಲ್ಲಿರುತ್ತದೆ. ಗ್ರೀಕ್ ಭಾಷೆಯ ಅಗೋರಾ (ಮಾರುಕಟ್ಟೆ) ಮತ್ತು ಫೋಬಿಯಾ (ಭಯ) ಸೇರಿ ಅಗೋರಾಫೋಬಿಯಾ ಶಬ್ದ ಸೃಷ್ಟಿಯಾಗಿದೆ. ಮಾರುಕಟ್ಟೆ ಎನ್ನುವುದನ್ನು ಜನ ಸಮಾವೇಶದ ಸ್ಥಳ ಎಂದು ಪರಿಗಣಿಸಲಾಗಿದೆ. ಕೇವಲ ಜನ ಸೇರುವ ಸ್ಥಳ ಮಾತ್ರವಲ್ಲ, ವಾಹನ, ರೈಲು, ವಿಮಾನ, ಲಿಫ್ಟ್ ಇವೆಲ್ಲವೂ ಅಗೋರಾಫೋಬಿಯಾ ಪೀಡಿತನಲ್ಲಿ ಭಯವನ್ನು ಮೂಡಿಸುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಆತ ಭಯ ಪಡುತ್ತಾನೆ. ಸೇತುವೆಗಳನ್ನು ದಾಟುವಾಗ ವಿಪರೀತ ಭಯ, ಅಂಗಡಿಗಳಿಗೆ ಹೋದರೆ ತನಗೇನಾಗುತ್ತದೋ ಎಂಬ ಆತಂಕ ಇವೆಲ್ಲ ಅಗೋರಾ ಫೋಬಿಯಾಕ್ಕೆ ನಿದರ್ಶನಗಳಾಗಿವೆ. ಇಂತಹ ಸ್ಥಿತಿಗಳಿಗೆ ತಮ್ಮ ಪ್ರತಿಕ್ರಿಯೆಗಳ ಬಗ್ಗೆ ಈ ರೋಗಿಗಳು ಭಯ ಹೊಂದಿರುತ್ತಾರೆ ಮತ್ತು ಈ ಭಯವೇ ಅವರನ್ನು ಅಗೋರಾಫೋಬಿಯಾ ಸ್ಥಿತಿಗೆ ತಳ್ಳುತ್ತದೆ. ಅತಿರೇಕದ ಪ್ರಕರಣಗಳಲ್ಲಿ ಅಗೋರಾಫೋಬಿಯಾ ರೋಗಿ ತನಗೇನಾಗಬಹುದೋ ಎಂಬ ಭಯದಿಂದ ಮನೆಯಿಂದ ಎಂದೂ ಹೊರಗೆ ಹೋಗದಿರಬಹುದು. ಅಗೋರಾಫೋಬಿಯಾ ಹೆಚ್ಚಾಗಿ ಪ್ಯಾನಿಕ್ ಡಿಸಾರ್ಡರ್(ಆತಂಕದ ಕಾಯಿಲೆ)ನ ಅಂತಿಮ ಹಂತವಾಗಿರುತ್ತದೆ. ಇನ್ನೇನು ಬರಸಿಡಿಲು ಬಡಿಯಲಿದೆ ಅಥವಾ ಗುಡ್ಡವೇ ಕುಸಿದು ಬೀಳಲಿದೆ ಎಂಬಂತಹ ಭಾವನೆಯೊಂದಿಗೆ ಆಗಾಗ್ಗೆ ತೀವ್ರ ಪ್ಯಾನಿಕ್ ಅಟ್ಯಾಕ್‌ಗಳು ಈ ಪ್ಯಾನಿಕ್ ಡಿಸಾರ್ಡರ್‌ನ ವೈಶಿಷ್ಟಗಳಾಗಿವೆ. ಪ್ಯಾನಿಕ್ ಅಟ್ಯಾಕ್‌ನ್ನು ಉಂಟು ಮಾಡಬಹುದು ಎಂದು ತಾನು ಭಾವಿಸುವ ಸ್ಥಿತಿ,ಸಂದರ್ಭಗಳನ್ನು ವ್ಯಕ್ತಿಯು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಂತಹ ವ್ಯಕ್ತಿಗಳು ಅಗೋರಾಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ಹೇಳಬಹುದು.

ಕಾರಣಗಳೇನು? ಅಗೋರಾ ಫೋಬಿಯಾಕ್ಕೆ ನಿಖರ ಕಾರಣವಿನ್ನೂ ಗೊತ್ತಾಗಿಲ್ಲ. ಇತರ ಮಾನಸಿಕ ಅಸ್ವಸ್ಥತೆಗಳಲ್ಲಿರುವಂತೆ ಜನ್ಮಜಾತ ಮತ್ತು ಪರಿಸರದ ಅಂಶಗಳು ಈ ಕಾಯಿಲೆಯಲ್ಲಿ ಪಾತ್ರ ಹೊಂದಿವೆ.

ಲಕ್ಷಣಗಳು

ತನಗೆ ಪಾರಾಗಲು ಸಾಧ್ಯವೇ ಇರುವುದಿಲ್ಲ ಎಂಬ ಭೀತಿಯಿಂದ ವ್ಯಕ್ತಿ ಯಾವುದೇ ಸ್ಥಳಕ್ಕೆ ತೆರಳುವುದನ್ನು ಅಥವಾ ಕೆಲಸವನ್ನು ಮಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದರೆ ಅದಕ್ಕೆ ಅಗೋರಾಫೋಬಿಯಾ ಕಾರಣವಾಗಿರಬಹುದು. ಎದೆ ಡವಗುಡುವುದು ಅಥವಾ ಹೃದಯವು ದಿಢೀರಾಗಿ ವೇಗವಾಗಿ ಹೊಡೆದುಕೊಳ್ಳುವುದು,ಧಗೆಯ ವಾತಾವರಣವಿಲ್ಲದಿದ್ದರೂ ಅತಿಯಾಗಿ ಬೆವರುವಿಕೆ,ಅದುರುವಿಕೆ ಅಥವಾ ನಡುಗುವಿಕೆ,ಉಸಿರಾಟಕ್ಕೆ ಕಷ್ಟ,ಸಾಕಷ್ಟು ಗಾಳಿ ದೊರೆಯುತ್ತಿಲ್ಲ ಎಂಬ ಭಾವನೆ,ಎದೆ ಕಟ್ಟಿದ ಅನುಭವ ಅಥವಾ ಎದೆಯಲ್ಲಿ ನೋವು,ವಾಕರಿಕೆ,ತಲೆ ಸುತ್ತುವಿಕೆ,ಹುಚ್ಚು ಹಿಡಿಯುತ್ತದೆಯೇನೋ ಎಂಬ ಭೀತಿ,ಶಾರೀರಕ ಕಾರ್ಯಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವಿಕೆ,ಶರೀರವೆಲ್ಲ ಮರಗಟ್ಟಿದಂತಾಗಿ ಇನ್ನೇನು ತಾನು ಸಾಯುತ್ತೇನೆ ಅಥವಾ ಶರೀರದ ಭಾಗಗಳು ಕಳಚಿಕೊಳ್ಳುತ್ತಿವೆ ಎಂದು ಅನಿಸುವುದು,ಕಾರಣವಿಲ್ಲದೆ ಚಳಿ ಅಥವಾ ಮೈ ಬಿಸಿಯಾಗುತ್ತಿದೆ ಎಂಬ ಭಾವನೆ ಇವೆಲ್ಲ ಪ್ಯಾನಿಕ್ ಅಟ್ಯಾಕ್‌ನ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. ಇಂತಹ ವ್ಯಕ್ತಿ ದಿನದಲ್ಲಿ ಹಲವು ಬಾರಿ ಪ್ಯಾನಿಕ್ ಅಟ್ಯಾಕ್‌ಗಳಿಗೆ ಗುರಿಯಾಗಬಹುದು ಅಥವಾ ಇಂತಹ ಅಟ್ಯಾಕ್‌ಗಳು ಸಾಂದರ್ಭಿಕವಾಗಿ ಉಂಟಾಗಬಹುದು, ಇಂತಹ ಸಾಂದರ್ಭಿಕ ಅಟ್ಯಾಕ್‌ಗಳು ಕೂಡ ಈ ಹಿಂದಿನ ಪ್ಯಾನಿಕ್ ಅಟ್ಯಾಕ್‌ನೊಂದಿಗೆ ಗುರುತಿಸಿಕೊಂಡಿದ್ದ ಅದೇ ಸ್ಥಳಕ್ಕೆ ಮರಳುತ್ತಿರುವ ಅಥವಾ ಅದೇ ಕೆಲಸವನ್ನು ಮಾಡುವ ಭಯಕ್ಕೆ ಕಾರಣವಾಗುತ್ತವೆ. ಪ್ಯಾನಿಕ್ ಅಟ್ಯಾಕ್ 10-15 ನಿಮಿಷಗಳಲ್ಲಿ ಕೊನೆಗೊಳ್ಳಬಹುದು ಅಥವಾ ಹೆಚ್ಚು ಸಮಯ ಕಾಡಬಹುದು ಮತ್ತು ಅದು ಮುಗಿದ ಬಳಿಕ ವ್ಯಕ್ತಿ ತುಂಬ ಸುಸ್ತಾಗಿರುತ್ತಾನೆ.

ಮಹಿಳೆಯರು ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು ಅಗೋರಾಫೋಬಿಯಾದಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಕುಟುಂಬದಲ್ಲಿಯೇ ಹರಿಯುತ್ತಿರುತ್ತದೆ.

ಅಗೋರಾಫೋಬಿಯಾ ಮಾರಣಾಂತಿಕವಲ್ಲ,ಆದರೆ ಹಾಗೆಯೇ ಬಿಟ್ಟರೆ ವ್ಯಕ್ತಿ ಮಾನಸಿಕ ರೋಗಿಯಾಗುವ ಅಪಾಯವಿರುತ್ತದೆ. ಹೀಗಾಗಿ ಇಂತಹ ರೋಗಿಗಳು ತಜ್ಞವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಅಗೋರಾಫೋಬಿಯಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಆತಂಕಗಳಿಂದ ಪಾರಾಗಲು ಎಂದಿಗೂ ಮದ್ಯ ಮತ್ತು ಇತರ ಮಾದಕ ದ್ರವ್ಯಗಳ ಮೊರೆ ಹೋಗಬಾರದು. ಅಗೋರಾಫೋಬಿಯಾ,ಆತಂಕ ಮತ್ತು ಭೀತಿ ಇವುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಿದ್ದರೆ ಸಮಸ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)