varthabharthi


ನಿಮ್ಮ ಅಂಕಣ

ಸಾಮಾಜಿಕ ಒಡಂಬಡಿಕೆಗೆ ದ್ರೋಹ

ವಾರ್ತಾ ಭಾರತಿ : 31 Dec, 2020
ಸತ್ಯಾನಂದ್ ಕಾರ್ಯದರ್ಶಿ, ಎಐಟಿಯುಸಿ ಬೆಂಗಳೂರು

ಸಕಲರ ಒಳಿತಿಗಾಗಿ ನಾಗರಿಕರು ಕೆಲ ವೈಯಕ್ತಿಕ ಸ್ವಾತಂತ್ರ್ಯವನ್ನು ಸರಕಾರಕ್ಕೆ ಬಿಟ್ಟುಕೊಡುವುದೇ ಸಾಮಾಜಿಕ ಒಡಂಬಡಿಕೆಯ ಪರಿಕಲ್ಪನೆ. ಇದೇ ಆಧುನಿಕ ಪ್ರಜಾತಂತ್ರದ ರಾಷ್ಟ್ರದ ಬುನಾದಿ. ಸ್ವೀಕಾರಾರ್ಹವಾದ ಒಂದು ಸಾಮಾಜಿಕ ಒಡಂಬಡಿಕೆಯ ಆಧಾರದಲ್ಲಿ ಸ್ವಾತಂತ್ರ್ಯ ಹಾಗೂ ಸಮಾನ ನಾಗರಿಕರು ಸಮಸ್ತರ ಕಲ್ಯಾಣಕ್ಕಾಗಿ ಒಂದಾಗುವುದೇ, ಜೊತೆಯಾಗುವುದೇ ಆಧುನಿಕ ರಾಷ್ಟ್ರದ ಮೂಲ ಪರಿಕಲ್ಪನೆ.

ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲಿ ಈ ತತ್ತ್ವ ಏರುಪೇರಾಗಿದೆ. ಭಾರತದಲ್ಲಿ ಕೊರೋನ ಸಾಂಕ್ರಾಮಿಕವು ಮಾರುಕಟ್ಟೆ ಆಧರಿತ, ಸರಕಾರದಿಂದ ಬೆಂಬಲಿತ ಅರ್ಥವ್ಯವಸ್ಥೆಯ ‘ಪಶು ಪ್ರವೃತ್ತಿ’ಗಳನ್ನು ಮುನ್ನಲೆಗೆ ತಂದಿದೆ. ಇದು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ. ಕೊರೋನ ಸಾಂಕ್ರಾಮಿಕ ಆರಂಭಗೊಂಡ ದಿನದಿಂದ ಬೃಹತ್ ಕಾರ್ಪೊರೇಟ್ ಕಂಪೆನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕೇಂದ್ರ ಸರಕಾರ ದುಡಿಯುವ ವರ್ಗದ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಕ್ರಮಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ದುಡಿಯುವ ವರ್ಗದ ಚಳವಳಿಯ ಇತಿಹಾಸದಲ್ಲಿ ಇತ್ತೀಚಿನ ಸಮಯದಲ್ಲಿ ನಡೆದ ರೀತಿಯ ಕಾರ್ಮಿಕ ಹಕ್ಕುಗಳ ಮೇಲಿನ ದಾಳಿ ಈ ಹಿಂದೆ ಎಂದೂ ನಡೆದಿಲ್ಲ. 2020 ಮೇ 5ರಷ್ಟು ಬೇಗನೆ ಕೇಂದ್ರ ಕಾರ್ಮಿಕ ಕಾರ್ಯದರ್ಶಿಯವರು ಎಲ್ಲ ರಾಜ್ಯ ಸರಕಾರಗಳಿಗೆ ಪತ್ರಗಳನ್ನು ಬರೆದು ಕೋವಿಡ್-19 ಅನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಅನುಷ್ಠಾನಿಸುವಂತೆ ಅವುಗಳ ಮೇಲೆ ಒತ್ತಡ ತಂದಿದ್ದರು.

ಕಾರ್ಮಿಕ ಸ್ನೇಹಿ ಕಾನೂನುಗಳ ವ್ಯಾಪ್ತಿಯಿಂದ ಬಹುಸಂಖ್ಯೆಯ ಕಾರ್ಮಿಕರನ್ನು ಹಾಗೂ ಫ್ಯಾಕ್ಟರಿಗಳನ್ನು ಹೊರಗಿಡುವುದೇ ಈ ತಿದ್ದುಪಡಿಗಳ ಉದ್ದೇಶವಾಗಿತ್ತು. ಈ ತಿದ್ದುಪಡಿಗಳ ಮುಖ್ಯ ಒತ್ತು ಇದ್ದದ್ದು ‘‘ನೇಮಿಸಿಕೋ ಹಾಗೂ ಕಿತ್ತುಹಾಕು’’ (ಹಯರ್ ಆ್ಯಂಡ್ ಫಯರ್) ಎಂಬ ಒಂದು ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸುವುದರ ಮೇಲೆ. ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ (ಬಿಜೆಪಿ ಆಡಳಿತವಿರುವ) ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು 3-4 ವರ್ಷಗಳವರೆಗೆ ಕಾರ್ಮಿಕ ಕಾನೂನುಗಳಿಗೆ ಸಂಪೂರ್ಣ ರಜೆ ಘೋಷಿಸಿದವು. ಕರ್ನಾಟಕ ಸರಕಾರ ಕೂಡ ಈ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿತ್ತು. 2020ರ ಜುಲೈಯಲ್ಲಿ ಅದು ತುಟ್ಟಿಭತ್ತೆ ಪಾವತಿಯನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಿತು. ಈ ಎಲ್ಲ ಕ್ರಮಗಳ ಉದ್ದೇಶ ‘‘ವ್ಯಾಪಾರ ವ್ಯವಹಾರ ಮಾಡುವುದನ್ನು ಸುಲಭಗೊಳಿಸುವುದು’’ ಎನ್ನಲಾಗಿದೆ. ಈ ಎಲ್ಲ ಕ್ರಮಗಳ ಹಿಂದೆ ಬೃಹತ್ ಕಾರ್ಪೊರೇಟ್ ಹೌಸ್‌ಗಳಿಗೆ ನೆರವಾಗುವ ಮೂಲಕ ಮಾತ್ರ ದೇಶದ ಅರ್ಥವ್ಯವಸ್ಥೆಯನ್ನು ಮರಳಿ ಸರಿದಾರಿಗೆ ತರಬಹುದು ಎಂಬ ನಂಬಿಕೆಯಿದೆ.

ಖಾಸಗಿ ಉಪಭೋಗದ ಇಂಜಿನ್‌ನ ಬಲದಿಂದ ಅರ್ಥವ್ಯವಸ್ಥೆ ನಡೆಯುತ್ತಿದೆ. ಇದು ಈಗ ರಾಜ್ಯ ಸರಕಾರಗಳ ಎರ್ರಾಬಿರ್ರಿ ನೀತಿಗಳಿಂದಾಗಿ ಕೆಳಕ್ಕೆ ಕುಸಿದಿದೆ. ಬೃಹತ್ ಕಾರ್ಪೊರೇಟ್ ಹೌಸ್‌ಗಳಿಂದ ನಿಯಂತ್ರಿಸಲ್ಪಟ್ಟ ನೀತಿಗಳು ತೆರಿಗೆ ರಜೆಯಂತಹ ಕ್ರಮಗಳ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿವೆ. ಆ ಮೂಲಕ ಕಾರ್ಮಿಕರ ಹಕ್ಕುಗಳನ್ನು ಹಾಗೂ ಸಾರ್ವಜನಿಕ ರಂಗದಲ್ಲಿ ಹೂಡಿಕೆ ಮಾಡುವುದನ್ನು ಅಮುಖ್ಯಗೊಳಿಸಲಾಗಿದೆ. ಪರಿಣಾಮವಾಗಿ ನಾಗರಿಕರ ದೇಶೀಯ ಖಾಸಗಿ ಉಪಭೋಗಕ್ಕೆ ಹೊಡೆತ ಬಿದ್ದಿದೆ.

ಇಂತಹ ನೀತಿಗಳು ದುಡಿಯುವ ವರ್ಗ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ದುಷ್ಪರಿಣಾಮ ಬೀರಿವೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ ಕೊರೋನ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಅರುವತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯುವಕ-ಯುವತಿಯರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ.

ಮೋದಿ ಸರಕಾರ ಘೋಷಿಸಿದ ಇಪ್ಪತ್ತು ಲಕ್ಷ ಕೋಟಿ ರೂ. ಪ್ಯಾಕೇಜ್ ಬಗ್ಗೆ ಈಗ ಇಲ್ಲಿಯೂ ಒಂದು ಕ್ಷೀಣ ಧ್ವನಿ ಕೂಡ ಕೇಳಿಸುತ್ತಿಲ್ಲ. ಸಂಘಟಿತ ರಂಗದಲ್ಲಿ ಒಟ್ಟು ಉದ್ಯೋಗಗಳ ಶೇಕಡಾ 85ರಷ್ಟನ್ನು ಉತ್ಪಾದಿಸುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳು ಕೋಟಿಗಟ್ಟಲೆ ಸಾಲ ಮರುಪಾವತಿಯಾಗದೆ ಸಂಕಷ್ಟದಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆಯಲು ಒದ್ದಾಡುತ್ತಿವೆ. ಇಂತಹ ಹಲವು ಉದ್ಯಮಗಳ ಪ್ರಕಾರ ಸರಕಾರ ಘೋಷಿಸಿದ ಪ್ಯಾಕೇಜ್ ಅನುಷ್ಠಾನದಲ್ಲಿ ಒಂದು ಭಾರೀ ವೈಫಲ್ಯವಾಗಿದೆ. ಸರಕಾರವು ನೌಕರಿಗಳನ್ನು ರಕ್ಷಿಸುವುದರಲ್ಲಷ್ಟೇ ಸೋತಿರುವುದಲ್ಲ, ಅದು ಇಂತಹ ಉದ್ಯಮಗಳನ್ನು ರಕ್ಷಿಸುವುದರಲ್ಲೂ ಶೋಚನೀಯವಾಗಿ ಸೋತಿದೆ.

ರಾಜ್ಯ ಸರಕಾರಗಳ ಕಾರ್ಯವಿಧಾನ ದುಡಿಯುವ ವರ್ಗಗಳ ಸಂಕಷ್ಟಗಳನ್ನು ಪರಿಹರಿಸುವುದಕ್ಕೆ ಬದಲಾಗಿ ಆಯ್ದ ಕೆಲವು ಕಾರ್ಪೊರೇಟ್ ಹೌಸ್‌ಗಳನ್ನು ಇನ್ನಷ್ಟು ಶ್ರೀಮಂತಗೊಳಿಸುವ ಗುರಿ ಹೊಂದಿದೆ. ಕೊರೋನ ಸಾಂಕ್ರಾಮಿಕವನ್ನು ಎದುರಿಸುವ ನೆಪದಲ್ಲಿ ಸರಕಾರ ಯಾವ ಸಾಮಾಜಿಕ ಒಡಂಬಡಿಕೆಗೆ ಬದ್ಧವಾಗಿರಬೇಕೋ ಅದನ್ನು ತ್ಯಜಿಸಲಾಗಿದೆ. ಸರಕಾರದ ಸದ್ಯದ ನೀತಿ ಮಿಲಿಯಗಟ್ಟಲೆ ಜನರನ್ನು ನಿರುದ್ಯೋಗಕ್ಕೆ ತಳ್ಳಲಿದೆ.

ಕೃಪೆ: deccanherald          

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)