varthabharthi


ಅನುಗಾಲ

ಸಾಹಿತ್ಯ ಧನ ಗೌರವ

ವಾರ್ತಾ ಭಾರತಿ : 31 Dec, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಈ ಸದಸ್ಯ ಗೌರವಪ್ರಾಪ್ತರನ್ನು ಒಂದರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವಮಾನಿಸಿದೆಯೇನೋ ಎಂದೂ ಅನ್ನಿಸುತ್ತದೆ. ಏಕೆಂದರೆ ಈ ಐವರೂ ಕನ್ನಡದ ಕೆಲಸ ಮಾಡಿದವರೇ. ಯೋಗ್ಯರೇ. ಗೌರವಸ್ಥರೇ. ಇನ್ನೂ ದೊಡ್ಡ ಗೌರವಕ್ಕೆ ಅರ್ಹರೇ ಇರಬಹುದು. ಆದರೆ ಈ ಲಕ್ಷಾಧಿಪತ್ಯದ ಗೌರವದ ಮೂಲಕ ಈ ಐವರು ಅದೃಷ್ಟಶಾಲಿಗಳಿಗೂ ಇದೊಂದು ನಗದು ಪರಿಹಾರದ ಅಥವಾ ಪುನರ್ವಸತಿ ಯೋಜನೆಯಂತೆ ಅನ್ನಿಸಿದರೆ ಅಚ್ಚರಿಯಿಲ್ಲ.ಕೋವಿಡ್-19ರಂತಹ ಮಾರಕ ಸೋಂಕಿನಿಂದಾಗಿ ನಾಡೇ ಬಡವಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದಂತಹ ಖರ್ಚಿನ ಬಾಬು ಅಗತ್ಯವಿದೆಯೇ ಎಂದು ಪರಿಷತ್ತು ಯೋಚಿಸಬೇಕಿತ್ತು. ಆದರೆ ಈಗಾಗಲೇ ಅದರ ಕುರಿತು ಹೆಚ್ಚೂ ಕಡಿಮೆ ನಿರ್ಣಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಫೆಬ್ರವರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯೋಜಿಸಿದೆ. ಈ ಬಗ್ಗೆ ಬೆರಳೆಣಿಕೆಯ ಹಿರಿಯ ಸಾಹಿತಿಗಳು ಪ್ರತಿರೋಧ ಒಡ್ಡಿದರು. ಭಾಷೆ ಮತ್ತು ಸಾಮಾಜಿಕ ಕಾಳಜಿಯ ಕೆಲವು ಉತ್ಸಾಹಿಗಳು ಒಂದಷ್ಟು ದಿನ ವಟಗುಟ್ಟಿ ಕೈಸೋತು ಸುಮ್ಮನಾದರು. ಇವರನ್ನು ಹೊರತುಪಡಿಸಿದರೆ ಉಳಿದಂತೆ ಯಾವ ಸಾಹಿತಿಗಳೂ, ಭಾಷಾಪಂಡಿತರೂ, ವಿದ್ವಾಂಸರೂ ವಿರೋಧಿಸಲಿಲ್ಲ. ಸಾಹಿತ್ಯದ, ಪುಸ್ತಕಗಳ ರಾಶಿಯಲ್ಲಿ ತಲೆಯನ್ನು ಹೂತಿಟ್ಟು ತಾವು ಇದನ್ನು ಕಾಣದ ಉಷ್ಟ್ರಪಕ್ಷಿಗಳಾದರು.

ಈ ಮೌನಕ್ಕೆ ಕಾರಣಗಳಿವೆ. ಮುಂದೆ ಬರಬಹುದಾದ ಶುಕ್ರದೆಸೆಯನ್ನು ತಪ್ಪಿಸಿಕೊಳ್ಳಲು ನಮ್ಮ ಬಹುಪಾಲು ಸಾಹಿತಿಗಳು ಸಿದ್ಧರಿಲ್ಲ. ಆದ್ದರಿಂದ ಸರಕಾರದ ಮತ್ತು ಕೆಲವು ಗಣ್ಯರ ಹಾಗೂ ಮಾಮೂಲಿನಂತೆ ಸರಕಾರಿ ನೌಕರರ ಒಂದು ದಿನದ ಸಂಬಳದ ನೆರವಿನಿಂದ ಸಾಹಿತ್ಯ ಸಮ್ಮೇಳನವು ವೈಭವೋಪೇತವಾಗಿ ನಡೆಯಬಹುದು. ನೇಪಥ್ಯದಿಂದ ಇಣುಕುತ್ತಿರುವ ಇಷ್ಟಮಿತ್ರರಿಗೆ ಅಭಿನಂದನೆಗಳು. ದಕ್ಷಯಜ್ಞದಂತೆ ನಡೆಯುವ ಈ ಸಮ್ಮೇಳನದಲ್ಲಿ ವಾಸ್ತವವನ್ನು ಹೇಳುವವರನ್ನು ಭಿನ್ನರೆಂದು ಪರಿಗಣಿಸಿ ಅವರನ್ನು ಆಹ್ವಾನಿಸದಿರಬಹುದು. ಇಂತಹ ತಾರತಮ್ಯವು ತನಗಾದ ಅಪಮಾನವೆಂದು ತಿಳಿದು ಸಾಹಿತ್ಯಸರಸ್ವತಿ ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಸುಟ್ಟುಹೋಗಬಹುದೆಂದು ನಿರೀಕ್ಷಿಸಬೇಕಾಗಿಲ್ಲ. ಅದೆಲ್ಲ ಗೊಡ್ಡು ಪುರಾಣ. ಆಕೆಗೂ ತಾವರೆಯ ಮೇಲೆ ಕುಳಿತು ಲಕ್ಷ್ಮಿಯಾಗುವ ಆಸೆಯಿದೆ.

ಇದಕ್ಕೆ ಇಂಬು ಕೊಡುವಂತೆ ಕೆಲವು ವಾರಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಐದು ಮಂದಿ ಗಣ್ಯ ಕನ್ನಡಿಗರಿಗೆ ‘ಗೌರವ ಸದಸ್ಯತ್ವ’ವನ್ನು ನೀಡಿ ಗೌರವಿಸಿತು. ಇವರೆಲ್ಲ ನಾಡು-ನುಡಿಗೆ ಪರಿಚಿತರೇ. ಒಂದಲ್ಲ ಒಂದು ಕಾರಣಗಳಿಗಾಗಿ ವಂದನೀಯರೇ. ಇವರು ಈ ಮೊದಲೇ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಿರಬಹುದು. ಈಗ ಗೌರವ ಬಂದಿತು, ಅಷ್ಟೇ ವ್ಯತ್ಯಾಸ. ಈ ಘಟನೆ ಮಾಮೂಲಾಗಿ ಹಾರ, ಶಾಲು, ಹಣ್ಣುಹಂಪಲು, ಫಲಕ ಇಷ್ಟೇ ಆಗಿದ್ದರೆ ಯಾರ ಗಮನವನ್ನೂ ಸೆಳೆಯದೆ ಜಾರಿಹೋಗುತ್ತಿತ್ತು. ಆದರೆ ಪ್ರಾಯಃ ಮೊದಲ ಬಾರಿಗೆ ಈ ಗೌರವ ಸದಸ್ಯತ್ವದ ಮೌಲ್ಯಮಾಪನವಾಯಿತು. ತಲಾ ಒಂದು ಲಕ್ಷ ರೂಪಾಯಿ ನೀಡಲಾಯಿತು. (ಹೀಗೆ ನಿಧಿ ನೀಡುವುದಕ್ಕೆ ‘ಅರ್ಪಣೆ’, ‘ಸಮರ್ಪಣೆ’ ಮುಂತಾದ ವಿಶೇಷಣಗಳಿರುತ್ತವೆ.) ಹೀಗೆ ಹಣ ನೀಡುವುದಕ್ಕೆ ಹಿನ್ನೆಲೆ, ಕಾರಣ, ನೆಪ ಇವ್ಯಾವುವೂ ಇದ್ದಂತಿಲ್ಲ. ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೂ ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಹಣ ನೀಡುವುದರ ಮೂಲಕ ಪರಿಷತ್ತು ‘ಗೌರವ’ಕ್ಕೆ ಹೊಸ ವ್ಯಾಖ್ಯಾನ ಬರೆಯಿತು. ಹಿಂದೆಲ್ಲ ‘ಗೌರವ’ ಪದದೊಂದಿಗೆ ಘನತೆಯ ಅಳತೆಯಿತ್ತು. ಸಾಹಿತ್ಯ ಅಂತಲ್ಲ-ಯಾವುದೇ ಸಾರ್ವಜನಿಕ ಸಂಸ್ಥೆಯಲ್ಲಿ ಗೌರವಾಧ್ಯಕ್ಷರು, ಗೌರವ ಕಾರ್ಯದರ್ಶಿ, ಗೌರವ ಖಜಾಂಚಿ ಮುಂತಾದ ಸ್ಥಾನಗಳು ಆಯಾ ಸ್ಥಾನವನ್ನಲಂಕರಿಸಿದ ವ್ಯಕ್ತಿಯ ವರ್ಚಸ್ಸಿಗೆ, ಶ್ರೇಷ್ಠತೆಗೆ, ಸಾಕ್ಷಿಯಾಗುತ್ತಿದ್ದವು. ಅವರಿಂದಾಗಿ ಆ ಸ್ಥಾನವು ಹೆಚ್ಚು ಗೌರವ ಪಡೆಯುತ್ತದೆಯೆಂದೇ ಭಾವಿಸಲಾಗುತ್ತಿತ್ತು. ಇಂತಹ ಗೌರವಸ್ಥಾನಗಳಿಗೆ ಆಯ್ಕೆಯಾಗುವುದೇ ಒಂದು ಗೌರವವೆಂಬಂತಿತ್ತು. ಒಬ್ಬ ವ್ಯಕ್ತಿಯ ಹೆಸರಿನಿಂದಲೇ ಬರುವ ಘನತೆಗಾಗಿ ಅಂತಹ ಗೌರವವನ್ನು ನೀಡಿ ಗೌರವಿಸಲಾಗುತ್ತಿತ್ತು ಮತ್ತು ಅಂತಹವರಿಗೆ ಮಾತ್ರ ಅದು ಪ್ರಾಪ್ತಿಯಾಗುತ್ತಿತ್ತು. ಈ ಗೌರವಾನ್ವಿತರು ದುಡಿಯಬೇಕೆಂದಿರಲಿಲ್ಲ. ಅವರು ಒಂದರ್ಥದಲ್ಲಿ ಮಾರ್ಗದರ್ಶಕರು ಅಥವಾ ಬೆಳಕಿನ ದೀಪಗಳು. ಪ್ರಾಯಃ ಇಂತಹ ಸ್ಥಾನಗಳಿಗೆ ಸ್ಪರ್ಧೆಯಿರುತ್ತಿರಲಿಲ್ಲ. ಇನ್ನುಳಿದಂತೆ ಗೌರವಾಧ್ಯಕ್ಷರೊಂದಿಗೆ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹೀಗೆಲ್ಲ ಇತರ ಸ್ಥಾನಗಳಿದ್ದು ಅವು ಮಾಮೂಲು ಆಯ್ಕೆಗಳಾಗಿದ್ದವು.

ಕನ್ನಡ ಸಾಹಿತ್ಯ ಪರಿಷತ್ತಿನ ಅವಧಿ ಮೂರು ವರ್ಷವಿದ್ದದ್ದು ಈಗ ಐದು ವರ್ಷಕ್ಕೆ ಹಿಗ್ಗಿದೆ. ಈ ಹಿಗ್ಗು ಈಗಾಗಲೇ ಆಯ್ಕೆಯಾದವರಿಗೆ ಪೂರ್ವಾನ್ವಯವಾಗಿ ಪ್ರಾಪ್ತಿಯಾಗಿ ಅವರು ತಮ್ಮ ಕೈಕಾಲುಗಳನ್ನು ಎರಡು ವರ್ಷ ಹೆಚ್ಚು ಚಾಚಲು ಅವಕಾಶವಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಮಾಮೂಲು ಸಾರ್ವಜನಿಕ ಸಂಸ್ಥೆಯಲ್ಲ. ಅದು ಒಂದು ಶತಮಾನಗಳ ಕಾಲ ಆಗಿಹೋದ ವಿದ್ವಾಂಸರ, ಕನ್ನಡನಾಡು-ನುಡಿಗೆ ಜೀವ ಸವೆಸಿದವರ ಸಿರಿಮನೆ. ತಮ್ಮ ಕಿಸೆಯಿಂದಲೇ ಹಣ ತೆತ್ತು ಭಾಷೆ, ಸಾಹಿತ್ಯ, ಜನತೆ ಇವುಗಳ ಕ್ಷೇಮಕ್ಕಾಗಿ ಬೇಯುತ್ತಿದ್ದ ಸಂಸ್ಥೆ. ಸಾಹಿತ್ಯ ಸಮ್ಮೇಳನಗಳೂ ಅವರವರ ವೆಚ್ಚದಲ್ಲಿ ಹಾಜರಾಗಿ ವಿದ್ವತ್ಪೂರ್ಣ ಅರಿವಿನ ವಿನಿಮಯದ ವೇದಿಕೆಯಾಗುತ್ತಿತ್ತೇ ವಿನಾ ಜನಜಾತ್ರೆಯಾಗಲಿ ವಿಜೃಂಭಣೆಯ ಒಡ್ಡೋಲಗವಾಗಲಿ ಆಗಿರಲಿಲ್ಲ. ಆದರೆ ಇತ್ತೀಚೆಗಿನ ದಶಕಗಳಲ್ಲಿ ಅದಕ್ಕೆ ರಾಜಕೀಯದ ಮತ್ತು ಅಧಿಕಾರಶಾಹಿಯ ಸೋಂಕು ತಗಲಿ ಸರಕಾರದ ಅನುದಾನದಿಂದ ನಡೆದುಬರುತ್ತಿದೆ; ಇದರಿಂದಾಗಿ ಸರಕಾರಿ ಸ್ಥಾನಮಾನದ ಮೂಲಕ ಹೆಚ್ಚು ಸಮಾನರನ್ನು ಸೃಷ್ಟಿಸಲಾರಂಭಿಸಿದೆ. ಯಾರು ಬೇಕಾದರೂ ರಾಜಕೀಯ, ಇಲ್ಲವೇ ಜಾತೀಯ, ಪ್ರಭಾವದಿಂದ ಅಧ್ಯಕ್ಷರಾಗಬಹುದೆಂಬಂತೆ ಕನ್ನಡ ಸಾಹಿತ್ಯ ಪರಿಷತ್ತೂ ಬದಲಾಗತೊಡಗಿದೆ. ಸವಲತ್ತುಗಳ ಮುಖೇನ ಸಭೆ-ಸಮಾರಂಭಗಳಲ್ಲೆಲ್ಲ ಅಧ್ಯಕ್ಷರು ಮತ್ತವರ ತಂಡ ರಾಜಠೀವಿಯನ್ನೂ ಅಧಿಕಾರವನ್ನೂ ಪ್ರದರ್ಶಿಸಿ ಎಷ್ಟೇ ದೊಡ್ಡ ವಿದ್ವಾಂಸನೂ ಸಾಹಿತಿಯೂ ಪ್ರಭಾ(ವ)ವಲಯದ ಕೃಪೆಗೆ ಪಾತ್ರರಾದರಷ್ಟೇ ಉನ್ನತ ಸಾಹಿತ್ಯಸ್ಥಾನಗಳನ್ನು, ಪ್ರಶಸ್ತಿಗಳನ್ನು, ಪದವಿಗಳನ್ನು ಪಡೆಯಬಹುದೆಂಬ ಸ್ಥಿತಿ ಮೂಡಿದೆ. ಇದರಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರ ಹೆಚ್ಚಾಗಿ ಉತ್ತರದಾಯಿತ್ವ ಮತ್ತು ಹೊಣೆ ಕಡಿಮೆಯಾಗತೊಡಗಿತು.

ಹೀಗೆ ಹಗುರಾದ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಪಕ್ಷಗಳಂತೆ ರಾಜ್ಯದಿಂದ ಜಿಲ್ಲೆಗಳಿಗೆ, ಅಲ್ಲಿಂದ ತಾಲೂಕುಗಳಿಗೆ ಮತ್ತು ಇತ್ತೀಚೆಗೆ ತಾಲೂಕುಗಳಿಂದ ಹೋಬಳಿ, ಗ್ರಾಮಮಟ್ಟಕ್ಕೆ ತನ್ನ ವ್ಯವಸ್ಥಿತ ಕಾರ್ಯಭಾರವನ್ನು ಇಳಿಸಿತು. ಸಾಹಿತ್ಯದ ಹೆಸರಿನಲ್ಲಿ ವೇದಿಕೆ ಸಿಕ್ಕಿದರೆ ಸಾಕೆಂದಿರುವ ಮಂದಿ, ಈ ವೇದಿಕೆಯನ್ನು ಪ್ರಸಿದ್ಧಿಗೆ ಬಳಸುವ ಅವಕಾಶವಾದಿಗಳು, ಅವರೊಂದಿಗೆ ಪರಸ್ಪರ ಹಿತದೊಂದಿಗೆ ಪ್ರಚಾರ ನೀಡುವ ಮಾಧ್ಯಮಗಳಿರುವ ಇಂದಿನ ಕಾಲದಲ್ಲಿ, ಪರಿಷತ್ತು ಎಷ್ಟು ಸಾಧ್ಯವೋ ಅಷ್ಟೂ ಹಗುರಾಗತೊಡಗಿದೆ. ರಾಜಕೀಯ, ಜಾತೀಯ ಒಲವಿನೊಂದಿಗೆ ಆಯ್ಕೆಯಾಗಲು ಸುವರ್ಣ ಸಂದರ್ಭವನ್ನೊದಗಿಸಿಕೊಟ್ಟಿದೆ. ಎಲ್ಲ ಹಂತಗಳಲ್ಲೂ ಅಧಿಕಾರಸ್ಥರ ಸಾಮಿಪ್ಯ, ಸಾನ್ನಿಧ್ಯ ಇವು ಅನೇಕ ಸಾಹಿತಿಗಳಿಗೆ ಹಲವಾರು ಬಿಟ್ಟಿ ಸಾಹಿತ್ಯೇತರ ಅವಕಾಶಗಳನ್ನೊದಗಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ ಇತರ ಸಭೆ-ಸಮಾರಂಭಗಳಲ್ಲೂ ಶೋಭಿಸಲು ಸಾಹಿತ್ಯ, ಭಾಷೆ ಮತ್ತಿತರ ಅಗತ್ಯ ಪ್ರೌಢಿಮೆಯಿದ್ದರೆ ಸಾಲದು; ಬದಲಾಗಿ ಆಯಾ ಸೀಮೆಯ ಅಧಿಕಾರಸ್ಥರ ಬೆಂಬಲ ಅಥವಾ ಪ್ರಭಾವ ಬೇಕು ಎಂಬ ಸ್ಥಿತಿ ಬಂದಿದೆ. ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯೂ ರಾಜಕೀಯ ಪ್ರಜಾಪ್ರಭುತ್ವ ರೀತ್ಯಾ ಆಯ್ಕೆಯಾದ ಅಧ್ಯಕ್ಷರ ಮೂಲಕ ನಡೆಯುತ್ತಿದ್ದು, ಸಾಹಿತಿಯೊಬ್ಬ ತನ್ನ ಬರಹದ, ಓದಿನ, ವಿಚಾರದ, ವಿದ್ವತ್ತಿನ ಮೂಲಕ ಮಾತ್ರ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಅಖಿಲ ಭಾರತ ಮಟ್ಟದಲ್ಲಿ ಹೇಗಾದರೂ ಆಯ್ಕೆಯಾದರೆ ಅದರೊಂದಿಗೂ ಒಂದಷ್ಟು ಲಕ್ಷದ ಹೊನ್ನಿನ ಕೊಡ ಸಿಗುತ್ತದೆಂಬುದು ಸಾಹಿತ್ಯದ ಆಮಿಷವಾಗುತ್ತಿದೆ. ಒಬ್ಬಿಬ್ಬರನ್ನು (ಪ್ರಾಯಃ ಎಸ್.ಎಲ್.ಭೈರಪ್ಪನವರೊಬ್ಬರೇ!) ಹೊರತುಪಡಿಸಿದರೆ ಇನ್ಯಾವ ಸಮ್ಮೇಳನಾಧ್ಯಕ್ಷರೂ ತಮಗೆ ನಿಡಿದ ನಿಧಿಯನ್ನು ಮರಳಿಸಿದ ಅಥವಾ ಸಾಹಿತ್ಯದ ಕಾರ್ಯಗಳಿಗೆ ವಿನಿಯೋಗಿಸಿದ ಉದಾಹರಣೆ ನನಗೆ ಗೊತ್ತಿಲ್ಲ. ಯಾವುದೇ ಸಮ್ಮೇಳನದಲ್ಲೂ ಅಧ್ಯಕ್ಷರು, ಇನ್ನಿತರ ಗೋಷ್ಠಿಭಾಗಿಗಳು ಬದಲಾದರೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಗೌರವ ತಂದವರು ಸಮ್ಮೇಳನದಲ್ಲಿ ಓಡಾಡುವಂತಿರಬೇಕು. ಆಸಕ್ತರಿಗೆ, ಅಭಿಮಾನಿಗಳಿಗೆ ಅವರನ್ನು ಕಾಣುವ ಅವಕಾಶವಿರಬೇಕು. ಕಳೆದ ಬಾರಿ ಅವರಿಗೆ ಅವಕಾಶ ಕೊಟ್ಟಿದ್ದೇನೆ; ಈ ಬಾರಿಗೆ ಇನ್ನೊಬ್ಬರಿಗೆ ಎಂಬ ಸೂತ್ರ ಸಾಹಿತ್ಯಕ್ಕೆ ಹಿಡಿಸದು. ಆದರೂ ಈ ಜಾಯಮಾನ ಪ್ರಚಲಿತವಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಈ ಸದಸ್ಯ ಗೌರವಪ್ರಾಪ್ತರನ್ನು ಒಂದರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವಮಾನಿಸಿದೆಯೇನೋ ಎಂದೂ ಅನ್ನಿಸುತ್ತದೆ. ಏಕೆಂದರೆ ಈ ಐವರೂ ಕನ್ನಡದ ಕೆಲಸ ಮಾಡಿದವರೇ. ಯೋಗ್ಯರೇ. ಗೌರವಸ್ಥರೇ. ಇನ್ನೂ ದೊಡ್ಡ ಗೌರವಕ್ಕೆ ಅರ್ಹರೇ ಇರಬಹುದು. ಆದರೆ ಈ ಲಕ್ಷಾಧಿಪತ್ಯದ ಗೌರವದ ಮೂಲಕ ಈ ಐವರು ಅದೃಷ್ಟಶಾಲಿಗಳಿಗೂ ಇದೊಂದು ನಗದು ಪರಿಹಾರದ ಅಥವಾ ಪುನರ್ವಸತಿ ಯೋಜನೆಯಂತೆ ಅನ್ನಿಸಿದರೆ ಅಚ್ಚರಿಯಿಲ್ಲ. ಮಾಧ್ಯಮ ವರದಿಗಳನ್ನು ಗಮನಿಸಿದರೆ ಈ ಗೌರವ ಸಿಗಬೇಕಾಗಿದ್ದರೆ ಅವರಿಗೆ ಇನ್ನು ಕೆಲವು- ಜ್ಞಾನಪೀಠ, ಸಮ್ಮೇಳನಾಧ್ಯಕ್ಷತೆ, ಸರಸ್ವತಿ ಸಮ್ಮಾನ್, ಕಬೀರ್ ಸಮ್ಮಾನ್ ಮುಂತಾದ ಗೌರವಗಳು ಪ್ರಾಪ್ತಿಯಾಗಿರಬಾರದು. ಅಂದರೆ ಅವರು ಬೇರೆಲ್ಲೂ ಗೌರವ ಸಿಕ್ಕಿದ ವ್ಯಕ್ತಿಗಳಾಗಿರಬಾರದು. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುವ, ಹೀಗೆ ಅನರ್ಹತೆಯೇ ಅರ್ಹತೆಯಾಗುವ ಪರಿ ಕನ್ನಡಕ್ಕೆ ಹೊಸದು. ಇದರ ಅನ್ವೇಷಕರು, ಸಂಶೋಧಕರು ಅಭಿನಂದನಾರ್ಹರು. ಅವರ ಅದೃಷ್ಟಕ್ಕೆ ಈ ಮೊತ್ತವನ್ನು ಜನಧನ ಯೋಜನೆಯಂತೆ ಅವರವರ ಬ್ಯಾಂಕ್ ಖಾತೆಗಳಿಗೆ ನೇರ ಸೇರ್ಪಡೆಗೊಳಿಸಿರಲಾರರು. ಈ ಮಾನದಂಡಗಳನ್ನು ಅಳೆದರೆ ಕೊನೆಗೆ ಗೌರವ ಸದಸ್ಯತ್ವ ಪಡೆಯದೆ 250 ರೂಪಾಯಿ ತೆತ್ತು ಸಾದಾ ಸದಸ್ಯತ್ವ ಪಡೆದವರೇ ಹೆಚ್ಚು ಗೌರವಸ್ಥರು ಎಂದನ್ನಿಸಿದರೆ ತಪ್ಪಿಲ್ಲ. ಇವರಿಗೆ ಮುಂದೆ ಇನ್ಯಾವುದೇ ಅನುಸೂಚಿತ ಪ್ರಶಸ್ತಿ ಬಂದರೆ ಈ ಗೌರವಸದಸ್ಯತ್ವವನ್ನು ಕಿತ್ತುಕೊಳ್ಳಲಾಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಕಾನೂನಿನಲ್ಲಿ ಇಮ್ಮಡಿ ವಿಪತ್ತು (ಈಟ್ಠಚ್ಝಿಛಿ ಒಛಿಟಟ್ಟ) ಯಾರಿಗೂ ಬರಬಾರದು ಎಂಬ ನಿಯಮ ಬಳಕೆಯಲ್ಲಿದೆ. ಇದು ಇಮ್ಮಡಿ ಪ್ರಶಸ್ತಿಗೂ ಅನ್ವಯಿಸಬಾರದಲ್ಲ!

ಹೋಗಲಿ, ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಅರಿತಿರುವ ಈ ಶ್ರೇಷ್ಠರು ತಮಗೊದಗಿದ ಧನಭಾಗ್ಯವನ್ನು ಸಾರಾಸಗಟು ತಿರಸ್ಕರಿಸಬಹುದಾಗಿತ್ತು. ಅದು ಅವರಿಗೂ ಕನ್ನಡಕ್ಕೂ ಭೂಷಣಪ್ರಾಯವಾಗುತ್ತಿತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಯೋಗ್ಯ ಪಾಠವಾಗುತ್ತಿತ್ತು. ಅದೂ ಅಲ್ಲದೆ ಈ ಕೊಡುಗೆ ನೀಡಿದ ಸಮಯವೂ ದುರಂತಮಯವಾದದ್ದು. ಕೋವಿಡ್-19ರಿಂದಾಗಿ ನಾಡೇ ತಲ್ಲಣಗೊಂಡಿದೆ. ಆರ್ಥಿಕವಾಗಿ ಬಹುಪಾಲು ಜನರು ಬಳಲಿದ್ದಾರೆ. ಈ ಹಣವನ್ನು ಸರಕಾರದ ನಿಧಿಗಾದರೂ (ಅದೆಷ್ಟೇ ದುರುಪಯೋಗವಾಗುತ್ತದೆಂದು ಭಯವಿದ್ದರೂ) ನೀಡಿದ್ದರೆ ಅದೊಂದು ಆದರ್ಶ ಮಾದರಿಯಾಗುತ್ತಿತ್ತು; ಜನರಿಗೆ ಸಾಹಿತ್ಯದ ಕುರಿತು ಗೌರವ ಬರುತ್ತಿತ್ತು. ಆದರೆ ಅವರು ಈ ಕೊಡುಗೆಯನ್ನು ಸ್ವೀಕರಿಸುವ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಕಿದ್ದಾರೆ. ಮುಂದೆ ಬರುವ ಅಧ್ಯಕ್ಷರು ಇದನ್ನು ಹೆಚ್ಚಿಸುವ ಕೆಲಸಮಾಡಿಯಾರೆಂದು ಮತ್ತು ತಮ್ಮ ಸರದಿ ಯಾವಾಗ ಬಂದೀತೆಂದು ಈ ರೀತಿಯಲ್ಲಿ ಇತರ ಪ್ರಶಸ್ತಿ ಪಡೆಯದ ಸಾಹಿತಿಗಳೆಲ್ಲ ಕಾಯುತ್ತಿದ್ದರೆ ಅಚ್ಚರಿಯಿಲ್ಲ. ‘ಅ್ಛಠಿಛ್ಟಿ ಚ್ಝ್ಝ’ ಪ್ರತೀ ಸಾಹಿತಿಯೊಳಗೂ ಒಬ್ಬ ಮನುಷ್ಯನಿರುತ್ತಾನಲ್ಲವೇ?

ಕಾವ್ಯವನ್ನು ಸಮರ್ಥಿಸುವ ತನ್ನೊಂದು ಪ್ರಬಂಧದಲ್ಲಿ ಆಂಗ್ಲ ರೊಮಾಂಟಿಕ್ ಕವಿ ಶೆಲ್ಲಿ 1921ರಷ್ಟು ಹಿಂದೆ ‘‘ಕವಿಗಳು ವಿಶ್ವದ ಅನಭಿಷಿಕ್ತ ಶಾಸಕರು’’ ಎಂದ. ಇದಾಗಿ ಒಂದು ಶತಮಾನ ಕಳೆಯುತ್ತಿದೆ. ಈಗ ಕವಿಗಳು ಎಂದರೆ ಎಲ್ಲ ಬಗೆಯ ಸಾಹಿತಿಗಳೂ ಸಾರ್ವಜನಿಕ ಗೌರವಕ್ಕೂ ಪೂಜೆ/ಆರಾಧನೆಗೂ ಭಾಜನರಾಗುತ್ತಿದ್ದಾರೆ; ಶ್ರೇಷ್ಠರೆಂದು ಪರಿಗಣಿಸಲ್ಪಟ್ಟಿದ್ದಾರೆ; ಮತ್ತು/ಅಥವಾ ಕೆಲವು ಸಂದರ್ಭಗಳಲ್ಲಿ ಅದಕ್ಕೂ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ಆದ್ದರಿಂದ ಎಲ್ಲ ಬಗೆಯ ಸಾಹಿತಿಗಳು ಸಾಹಿತ್ಯದ ಮೂಲಕ ಸಿಗುವ ಗೌರವಗಳಿಗಾಗಿ ಶಾಸಕರಂತೆಯೇ ವರ್ತಿಸುತ್ತಾರೆ. ಈ ಗೌರವ ಸದಸ್ಯತ್ವದ ಹಿನ್ನೆಲೆ-ಮುನ್ನೆಲೆಗಳನ್ನು ಗಮನಿಸಿದರೆ ಮತ್ತು ಭಾರತದ ಅಥವಾ ಕರ್ನಾಟಕದ ರಾಜಕೀಯವನ್ನು ಗಮನಿಸಿದರೆ ನಮ್ಮ ಸಾಹಿತಿಗಳು ಶಾಸಕರಂತೆಯೇ ವರ್ತಿಸಿದ್ದಾರೆ. 2003ರಲ್ಲಿ ಬರೆದ ಮುನ್ನುಡಿಯೊಂದರಲ್ಲಿ ಜನಪರ/ಜೀವಪರ ಕಾಳಜಿಯ ಬರೆಹಗಾರ ಜಿ.ರಾಜಶೇಖರ ಅವರು ‘‘ಇತ್ತೀಚೆಗಿನ ಕನ್ನಡ ಬರವಣಿಗೆಯಂತೂ ಯಾವ ದುರಂತವನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ಸಂವೇದನೆಯನ್ನೇ ಜಡಗೊಳಿಸುತ್ತಿರುವ ಮೂರ್ಖ ಮಾತುಗಾರಿಕೆಯಾಗಿದೆ.’’ ಎಂದಿದ್ದರು. ಅವರು ಹೇಳಿದ ಸಂದರ್ಭವೇನೇ ಇರಲಿ, ಎರಡು ದಶಕಗಳು ಸಮೀಪಿಸಿದರೂ ಪರಿಸ್ಥಿತಿ ಬದಲಾಗಿಲ್ಲ. ಮಾತು ಮಾತ್ರವಲ್ಲ, ಸಾಹಿತಿಗಳ ನಡತೆಯೂ ಅವರು ಆತಂಕಪಟ್ಟಂತೆಯೇ ಇದೆ. ‘‘ಕನ್ನಡವೆಂದರೆ ಬರಿನುಡಿಯಲ್ಲ, ಹಿರಿದಿದೆ ಅದರರ್ಥ’’ ಎಂದು ನಿಸಾರ್ ಅಹಮದ್ ಹೇಳಿದ್ದು ವ್ಯಂಗ್ಯಾರ್ಥದಲ್ಲಿ ಸತ್ಯವಾಗುತ್ತಿದೆ. ‘ಅರ್ಥ’ ಎಂದರೆ ‘ಹಣಕಾಸು’ ಎಂಬರ್ಥವೂ ಇದೆಯಲ್ಲವೇ? ಘನಗೌರವಕ್ಕಿಂತ ಧನಗೌರವ ಲೇಸಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)