varthabharthi


ವಿಶೇಷ-ವರದಿಗಳು

ಗೋಹತ್ಯೆ ನಿಷೇಧ ಕಾಯ್ದೆ: ಬಿಬಿಎಂಪಿ ಕೋಟ್ಯಂತರ ರೂ. ಆದಾಯಕ್ಕೆ ಖೋತಾ

ವಾರ್ತಾ ಭಾರತಿ : 31 Dec, 2020
ಸಮೀರ್ ದಳಸನೂರು

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಗೋಹತ್ಯೆ ನಿಷೇಧ ಕಾಯ್ದೆ ಒಂದು ವೇಳೆ ಜಾರಿಯಾದಲ್ಲಿ ಬಿಬಿಎಂಪಿ ಆದಾಯದ ಮೇಲೂ ಗಂಭೀರ ಪರಿಣಾಮ ಬೀರಲಿದ್ದು, ಶುಲ್ಕ ರೂಪದಲ್ಲಿ ಖಜಾನೆಗೆ ಸೇರುತ್ತಿರುವ ಕೋಟ್ಯಂತರ ರೂ. ಆದಾಯಕ್ಕೆ ಪೆಟ್ಟು ಬೀಳಲಿದೆ.

ಈಗಾಗಲೇ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವಲ್ಲಿ ಹೆಜ್ಜೆ ಹಾಕಿದೆ. ಆದರೆ ಇದು ಸಂಪೂರ್ಣ ಜಾರಿಯಾದರೆ, ಪಾಲಿಕೆಯ ಪಶುಸಂಗೋಪನೆ ಅಡಿ ಬರುತ್ತಿದ್ದ ವಾರ್ಷಿಕ 3ರಿಂದ 5 ಕೋಟಿ ರೂ. ಆದಾಯವೂ ನಿಂತು ಹೋಗಲಿದೆ.

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಅಧಿಕೃತವಾಗಿ ಟ್ಯಾನರಿ ರಸ್ತೆ, ಡಿಜೆ ಹಳ್ಳಿ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆಯಲ್ಲಿ ಕಸಾಯಿಖಾನೆಗಳಿದ್ದು, ಇಲ್ಲಿ ವಧೆಯಾಗುವ ಪ್ರಾಣಿಗಳ ಆರೋಗ್ಯ ತಪಾಸಣೆ ಹಾಗೂ ವಧೆಯ ನಂತರದ ಮುಂಡಗಳ ಗುಣಮಟ್ಟದ ಪರಿಶೀಲನೆಯನ್ನು ವಧಾಗಾರಗಳಿಗೆ ನಿಯೋಜನೆಗೊಂಡಿರುವ ಪಶು ವೈದ್ಯರು ನಿರ್ವಹಿಸುತ್ತಾರೆ. ಜತೆಗೆ, ವಧೆಗೆ ಬರುವ ಪ್ರಾಣಿಗಳ ಪ್ರವೇಶ ಶುಲ್ಕ ಹಾಗೂ ವಧಾ ಶುಲ್ಕದ ಸಂಗ್ರಹಣೆಯ ಹಕ್ಕುಗಳನ್ನು ಇ-ಟೆಂಡರ್ ಮುಖಾಂತರ ಗುತ್ತಿಗೆ ನೀಡಲಾಗುತ್ತದೆ. ಇದರಿಂದ ಪಾಲಿಕೆಗೆ ಮಾಸಿಕವಾಗಿಯೇ 25ರಿಂದ 30 ಲಕ್ಷ ರೂ. ಆದಾಯ ಬರುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಗೋಹತ್ಯೆ ಕಾನೂನಿನಿಂದ ಈ ಆದಾಯ ಕೈಜಾರುವುದು ನಿಜ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ದಂಡ-ಕಸಕ್ಕೂ ಹೊಡೆತ?: 1976ರ ಕರ್ನಾಟಕ ಮುನಿಸಿಪಲ್ ಕಾಯ್ದೆ ಪ್ರಕಾರ, ನಗರ ಪ್ರದೇಶದೊಳಗೆ ಹಸು, ಎತ್ತುಗಳನ್ನು ಪಾಲಿಕೆಯಿಂದ ಪರವಾನಿಗೆ ಪಡೆಯದೆ ವಧೆ ಮಾಡುವಂತಿಲ್ಲ. ಹಾಗೊಂದು ವೇಳೆ ವಧೆ ಮಾಡಿದರೆ, ಪಾಲಿಕೆಯ ಸ್ಥಳೀಯ ಅಧಿಕಾರಿಗಳು ಕಸಾಯಿಖಾನೆಗಳ ಮಾಲಕರಿಗೆ ದಂಡ ವಿಧಿಸುತ್ತಿದ್ದರು.

ಮತ್ತೊಂದೆಡೆ ಕಸಾಯಿಖಾನೆಗಳು ಯಾವುದೇ ರೀತಿಯ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಜೊತೆಗೆ ಪ್ರಾಣಿತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇದನ್ನು ಮಾಡದಿದ್ದರೆ, ಮಾರ್ಷಲ್‌ಗಳು ದಂಡ ಹಾಕುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದರಿಂದಲೂ ಪಾಲಿಕೆಯ ಖಜಾನೆಗೆ ಆದಾಯ ಬಂದು ಸೇರುತ್ತಿದೆ. ಆದರೆ, ಕಾಯ್ದೆಯಿಂದ ಇದೆಲ್ಲವೂ ನಿಲ್ಲಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಹಿಂದಿನ ಸಾಲಿನಲ್ಲಿ ಎಷ್ಟು ಪ್ರಾಣಿ ವಧೆ?

ಬಿಬಿಎಂಪಿಯ 2018-2019ನೇ ಸಾಲಿನ ವಾರ್ಷಿಕ ಅಧಿಕೃತ ವರದಿ ಪ್ರಕಾರ ಬೆಂಗಳೂರಿನಲ್ಲಿ 55,052-ಎತ್ತುಗಳು, 1,268-ಎಮ್ಮೆಗಳನ್ನು ವಧೆ ಮಾಡಲಾಗಿದೆ.

ಕಸಾಯಿಖಾನೆಗಳಿಂದ ಆದಾಯ ಬರುತ್ತಿರುವುದು ನಿಜ. ಆದರೆ ಗೋ-ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೆ, ಅದರಲ್ಲಿನ ಅಂಶಗಳನ್ನು ಪಾಲನೆ ಮಾಡಬೇಕಾಗಿದೆ.

-ಡಿ.ರಂದೀಪ್, ವಿಶೇಷ ಆಯುಕ್ತ, ಬಿಬಿಎಂಪಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)