varthabharthi


ನಿಮ್ಮ ಅಂಕಣ

ಒತ್ತಡದ ಕಲಿಕೆ ಬೇಡ

ವಾರ್ತಾ ಭಾರತಿ : 31 Dec, 2020
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರಗಿ

ಮಾನ್ಯರೇ,

ಹೊಸ ವರ್ಷದ ಆರಂಭದೊಂದಿಗೆ ಬರೋಬ್ಬರಿ ಒಂಭತ್ತು ತಿಂಗಳ ನಂತರ ಮತ್ತೆ ಅಧಿಕೃತವಾಗಿ ಮಕ್ಕಳು ಶಾಲೆಯ ಬಾಗಿಲನ್ನು ತಟ್ಟುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆಯೆಂದು ವರದಿಗಳು ಬರುತ್ತಿವೆ. ಒಂದಷ್ಟು ಸಮಯದ ನಂತರ ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು, ಶಾಲಾಚಟುವಟಿಕೆಯಲ್ಲಿ ಭಾಗವಹಿಸಲು ಸಾಕಷ್ಟು ಸಮಯ ಬೇಕಾಗಬಹುದು. ಬಹುತೇಕ ಮಕ್ಕಳು ಓದು ಬರಹ, ಕಲಿಕೆಯಲ್ಲಿ ಹಿಂದುಳಿಯಬಹುದು. ಪುನರಾವರ್ತನೆ ಇಲ್ಲದೆ ಕಲಿತದ್ದೆಲ್ಲವೂ ಮರೆತು ಹೋಗುವ ಸಾಧ್ಯತೆ ಇದೆ. ಮಕ್ಕಳಿಗೆ ಹಿಮ್ಮಾಹಿತಿ ಪಡೆಯದೆ ಪಾಠ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಎಸೆಸೆಲ್ಸಿ ಓದುವ ಮಕ್ಕಳು ಬೋರ್ಡ್ ಮಾದರಿಯ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ಮಾಡುತ್ತೇವೆ ಎಂದು ಇಲಾಖೆ ಘೋಷಣೆ ಮಾಡಿದೆ. ಆದರೆ ಯಾವಾಗ ಮಾಡುತ್ತೇವೆ ಎಂದು ತಿಳಿಸಿಲ್ಲ. ಮಕ್ಕಳಿಗೆ ಎಷ್ಟು ಪಠ್ಯ ಬೋಧನೆ ಮಾಡಬೇಕು, ಪರೀಕ್ಷೆ ತಯಾರಿ ಹೇಗೆ ಮಾಡಬೇಕು ಆಂತರಿಕ ಮೌಲ್ಯಮಾಪನ ಹೇಗೆ ಮಾಡಬೇಕು ಎಂಬ ಗೊಂದಲ ಉಂಟಾಗಿದೆ. ನೇರವಾಗಿ ಪಠ್ಯಪುಸ್ತಕದ ಪಾಠ ಮಾಡಿ ಅಲ್ಪ ಸಮಯದಲ್ಲೇ ರಾಜ್ಯಮಟ್ಟದ ಬೋರ್ಡ್ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಲಿಖಿತ ಉತ್ತರದ ಮೌಲ್ಯಮಾಪನ ಕ್ರಿಯೆ ಮಾಡಿದರೆ ಸಾಕಷ್ಟು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಮೊದಲು ಮಕ್ಕಳನ್ನು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಪೂರಕ ಚಟುವಟಿಕೆ ಹಮ್ಮಿ ಕೊಳ್ಳುವ ಅಗತ್ಯವಿದೆ. ಭಯ, ಆತಂಕ ಹೋಗಲಾಡಿಸಿ ಪ್ರೀತಿ-ವಿಶ್ವಾಸದಿಂದ ಮಕ್ಕಳನ್ನು ಶಾಲೆಯತ್ತ ಆಕರ್ಷಿಸ ಬೇಕಿದೆ. ತೀವ್ರವಾದ ಒತ್ತಡ ಹೇರದೆ ಸಹಜ ಕಲಿಕೆಯತ್ತ ತೊಡಗುವಂತೆ ಮಾಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)