varthabharthi


ನಿಮ್ಮ ಅಂಕಣ

ಪರಿಶಿಷ್ಟ ಬುಡಕಟ್ಟು ಸ್ಥಾನಮಾನ ಬೇಡಿಕೆ: ಒಂದು ಅವಲೋಕನ

ವಾರ್ತಾ ಭಾರತಿ : 1 Jan, 2021
ಡಾ. ಬಿ. ಆರ್. ಮಂಜುನಾಥ, ಬೆಂಡರವಾಡಿ

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಹುತೇಕ ಹಿಂದುಳಿದ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಬುಡಕಟ್ಟು (ಎಸ್ಟಿ) ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನಿಡುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ನೆಲೆಸಿರುವ ಕುರುಬ ಸಮುದಾಯದವರನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಬೇಕೆಂಬ ಪ್ರಯತ್ನ ಹೆಚ್ಚಿದೆ. ಆ ಸಮುದಾಯಕ್ಕೆ ಸೇರಿದ ಮಠಾಧಿಪತಿಗಳು, ರಾಜಕೀಯ ಧುರೀಣರು, ಮುಖಂಡರು, ಸಮುದಾಯದ ಸದಸ್ಯರು, ಅಧಿಕಾರಿಗಳು ಎಲ್ಲರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೊನ್ನೆ ಮೈಸೂರಿನಲ್ಲಿ ವಿಭಾಗ ಮಟ್ಟದ ಚಿಂತನಾ ಸಭೆಯೂ ನಡೆದಿದೆ. ಈ ಸಭೆಯಲ್ಲಿ ಸಚಿವರು ‘‘ಎಸ್ಟಿ ಮೀಸಲಾತಿಯನ್ನು ಕೊಡಿಸಿಯೇ ತೀರುತ್ತೇನೆ’’ ಎಂದು ಘೋಷಿಸಿದ್ದಾರೆ. ಸಮುದಾಯದ ಸದಸ್ಯರಾಗಿ ಅವರ ಅಭಿಪ್ರಾಯ ತಪ್ಪಲ್ಲ. ಆದರೆ ಸರಕಾರದ ಸಚಿವರಾಗಿ ಈ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎನ್ನುವುದು ನನ್ನ ಭಾವನೆ. ಏಕೆಂದರೆ ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದರೆ ಮೊದಲು ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು, ನಂತರ ರಾಜ್ಯ ಸರಕಾರದಲ್ಲಿ ಚರ್ಚೆಯಾಗಿ ಅನುಮೋದನೆ ದೊರೆತರೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಅನುಮೋದನೆಗೊಂಡರೆ ಅಂತಿಮವಾಗಿ ರಾಷ್ಟ್ರಪತಿಯವರ ಒಪ್ಪಿಗೆಯ ಮೇರೆಗೆ ಕಲಂ 342ರಡಿಯಲ್ಲಿ ಬರುವ ಪರಿಶಿಷ್ಟ ಬುಡಕಟ್ಟು ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ನಮ್ಮ ರಾಷ್ಟ್ರದಲ್ಲಿ ಒಂದು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು 1960ರ ದಶಕದಲ್ಲಿ ಅಂದಿನ ಕಾನೂನು ಮಂತ್ರಾಲಯದ ಕಾರ್ಯದರ್ಶಿಯಾಗಿದ್ದ ಬಿ. ಎನ್. ಲೋಕೂರ್‌ರವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯನ್ನು ರಚಿಸಿ, ಆ ಸಮಿತಿ ನೀಡಿರುವ ಸಲಹೆಯನ್ನು ಇಂದಿಗೂ ಪರಿಗಣಿಸಲಾಗುತ್ತಿದೆ. ಬಿ. ಎನ್. ಲೋಕೂರ್ ಸಮಿತಿ ನೀಡಿರುವ ವರದಿಯಂತೆ ಯಾವುದೇ ಒಂದು ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಪ್ರಮುಖವಾಗಿ ಐದು ಗುಣಲಕ್ಷಣಗಳನ್ನು ಹೊಂದಿರಬೇಕು. ಅವುಗಳೆಂದರೆ ಪಾಚೀನ ಗುಣಲಕ್ಷಣಗಳನ್ನು (ಜ್ಞಿಜ್ಚಿಠಿಜಿಟ್ಞ ಟ್ಛ ಟ್ಟಜಿಞಜಿಠಿಜಿಛಿ ಠ್ಟಿಜಿಠಿ), ಹೊಂದಿರುವುದರ ಜೊತೆಗೆ ವಿಶಿಷ್ಟವಾದ ಸಂಸ್ಕೃತಿ (ಈಜಿಠಿಜ್ಞ್ಚಿಠಿಜಿಛಿ ್ಚ್ಠ್ಝಠ್ಠ್ಟಿಛಿ), ಭೌಗೋಳಿಕ ಪ್ರತ್ಯೇಕತೆ (ಎಛಿಟಜ್ಟಜ್ಚಿಚ್ಝ ಜಿಟ್ಝಠಿಜಿಟ್ಞ), ಪ್ರಮುಖ (ದೊಡ್ಡ) ಸಮುದಾಯಗಳೊಂದಿಗೆ ಬೆರೆಯಲು ಸಂಕೋಚ/ನಾಚಿಕೆ (ಖಢ್ಞಛಿ ಟ್ಛ ್ಚಟ್ಞಠಿಚ್ಚಠಿ ಡಿಜಿಠಿ ಠಿಛಿ ್ಚಟಞಞ್ಠ್ಞಜಿಠಿ ಠಿ ್ಝಚ್ಟಜಛಿ) ಮತ್ತು ಹಿಂದುಳಿದಿರುವಿಕೆ (ಖಟ್ಚಜಿಟ ಛ್ಚಿಟ್ಞಟಞಜ್ಚಿ ಚಿಚ್ಚಡಿಚ್ಟಛ್ಞಛಿ). ಈ ಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ಯಾವುದೇ ಸಮುದಾಯವನ್ನು ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸಲು ಸಾಧ್ಯ. ಹಾಗಾದರೆ ಈ ಮಾನದಂಡ ಅಥವಾ ಲಕ್ಷಣಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ‘ಕುಲಶಾಸ್ತ್ರೀಯ (ಕುಲವರ್ಣನ) ಅಧ್ಯಯನ’ ಪ್ರಮುಖ ಪಾತ್ರವಹಿಸುತ್ತದೆ. ಈ ಅಧ್ಯಯನವನ್ನು ಎಲ್ಲರೂ ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ‘ಮಾನವಶಾಸ್ತ್ರ’ ವಿಷಯದಲ್ಲಿ ತಜ್ಞತೆಯನ್ನು ಹೊಂದಿರುವಂತಹ ಹಿರಿಯ ಪ್ರಾಧ್ಯಾಪಕರು ಅಥವಾ ಮಾನವಶಾಸ್ತ್ರಜ್ಞರೇ ಮಾಡಬೇಕು. ಏಕೆಂದರೆ ಕುಲಶಾಸ್ತ್ರೀಯ ಅಥವಾ ಕುಲವರ್ಣನ ಸಂಶೋಧನೆಯಲ್ಲಿ ಮಾನವಶಾಸ್ತ್ರಜ್ಞರು ವಿಶೇಷವಾದ ತರಬೇತಿಯನ್ನು ಪಡೆದಿರುತ್ತಾರೆ.

ಇಲ್ಲಿ ಪ್ರಶ್ನೆಯೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿರುವ ಹೋರಾಟ ಯಾರ ವಿರುದ್ಧ ಎಂಬುದು? ಏಕೆಂದರೆ ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸಬೇಕೆಂಬ ವಿವಿಧ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಅಂದಿನ ಕಾಂಗ್ರೆಸ್ ಸರಕಾರವೇ ಕುಲಶಾಸ್ತ್ರೀಯ ಅಧ್ಯಯನಕ್ಕೆ ಶಿಫಾರಸು ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ಕುಡುಬಿ, ಕುಣುಬಿ, ಕಾಡುಗೊಲ್ಲ, ಗಂಗಾಮತಸ್ಥ, ಹೆಳವ-ಪಿಚಗುಂಟ್ಲು, ಕೊಡಗಿನ ಕೊಡವರು, ನಾಯಕ/ಪರಿವಾರ/ತಳವಾರ, ಕುರುಬ, ಉಪ್ಪಾರ ಇತ್ಯಾದಿ... ಈಗಾಗಲೇ ಅನೇಕ ಅಧ್ಯಯನಗಳು ಪೂರ್ಣಗೊಂಡು ಸರಕಾರಕ್ಕೆ ಸಲ್ಲಿಸಲ್ಪಟ್ಟಿವೆ.

ಪ್ರಸ್ತುತ ಕುರುಬ, ಉಪ್ಪಾರ ಮತ್ತು ಕೊಡವ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಗಳು ಪ್ರಗತಿಯಲ್ಲಿವೆ. ಅಧ್ಯಯನಗಳು ಪೂರ್ಣಗೊಂಡ ನಂತರ ಅಧ್ಯಯನ ವರದಿಯ ಆಧಾರದ ಮೇಲೆ ಮೇಲ್ಕಂಡ ಸಮುದಾಯಗಳನ್ನು ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸಬಹುದು ಅಥವಾ ಸೇರಿಸದೆ ಇರಬಹುದು. ವರದಿಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ಸಿದ್ದರಾಮಯ್ಯನವರು ಹೇಳುವಂತೆ ವರದಿ ಪೂರ್ಣಗೊಂಡು ಸರಕಾರದ ಕೈಸೇರುವ ಮೊದಲೇ ಹೋರಾಟ ರೂಪಿಸುತ್ತಿರುವುದರ ಹಿಂದೆ ಸಮುದಾಯದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಪ್ರಮುಖವೆಂಬುದು ಇಲ್ಲಿ ಗೋಚರಿಸುತ್ತದೆ. ಏಕೆಂದರೆ ಅಧ್ಯಯನ ಪೂರ್ಣಗೊಂಡ ನಂತರ ವರದಿಯ ಆಧಾರದ ಮೇಲೆ ಕುರುಬ ಸಮುದಾಯ ಬುಡಕಟ್ಟು ಲಕ್ಷಣಗಳನ್ನು ಹೊಂದಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ಅನುಮೋದನೆ ಪಡೆದು ಪರಿಶಿಷ್ಟ ಪಟ್ಟಿಗೆ ಸೇರಿಸಲು ತೊಂದರೆಯಾಗುವುದಿಲ್ಲ. ರಾಜಕೀಯ ದೃಷ್ಟಿಯಿಂದ ಅತಿ ದೊಡ್ಡ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯವನ್ನು ವಿರೋಧ ಪಕ್ಷಗಳು ಕೂಡ ವಿರೋಧಿಸುವುದಿಲ್ಲ. ಹಾಗಾಗಿ ಹೋರಾಟ ಅನವಶ್ಯಕ ಎಂಬುದು ನನ್ನ ಅನಿಸಿಕೆ.

ಇಲ್ಲಿ ಮತ್ತೊಂದು ಪ್ರಶ್ನೆಯೆಂದರೆ ಇತರ ಹಿಂದುಳಿದ ಸಮುದಾಯಗಳನ್ನು ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸುವುದು ಎಷ್ಟು ಸಮಂಜಸ ಎನ್ನುವುದು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದರೆ ಪರಿಶಿಷ್ಟ ಬುಡಕಟ್ಟುಗಳಿಗೆ ಶೇ.7.5ರಷ್ಟು ಮೀಸಲಾತಿ ನೀಡಬೇಕು. ಪ್ರಸ್ತುತ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಪರಿಶಿಷ್ಟ ಬುಡಕಟ್ಟು ಎಂದರೆ ಕೇವಲ ನಾಯಕ ಸಮುದಾಯ ಎಂಬುದು ಅನೇಕರ ತಿಳುವಳಿಕೆ ಆದರೆ ಆ ಸಮುದಾಯದ ಜೊತೆಗೆ ಇನ್ನೂ 49 ಸಮುದಾಯಗಳು ಪರಿಶಿಷ್ಟ ಪಟ್ಟಿಯಲ್ಲಿ ಬರುತ್ತವೆ. ಅದರಲ್ಲೂ ಅರಣ್ಯವಾಸಿ ಸಮುದಾಯಗಳಾದ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಯರವ, ಹಕ್ಕಿಪಿಕ್ಕಿ, ಡುಂಗ್ರಿಗೆರೆಸಿಯಾ, ಕೊರಗ ಮುಂತಾದ ಅನೇಕ ಸಣ್ಣ-ಸಣ್ಣ ಸಮುದಾಯಗಳು ಎಲ್ಲಾ ರೀತಿಯಿಂದಲೂ ವಂಚಿತವಾಗಿವೆ. ಇಂದಿಗೂ ಕೂಡ ಸಾಮಾಜಿಕ, ರಾಜಕೀಯ ಪ್ರಾತಿನಿಧ್ಯ ಈ ಸಮುದಾಯಗಳಿಗೆ ದೊರೆತಿಲ್ಲ. ಬೇರೆ-ಬೇರೆ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುತ್ತಾ ಹೋದರೆ ನಿಜವಾದ ಅರಣ್ಯವಾಸಿ ಬುಡಕಟ್ಟುಗಳು ಸೌಲಭ್ಯದಿಂದ ವಂಚಿತವಾಗುತ್ತವೆ. ಆದ್ದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಕುರುಬ, ಉಪ್ಪಾರ, ಹೆಳವ ಮತ್ತಿತರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬದಲು ‘ಅತ್ಯಂತ ಹಿಂದುಳಿದ ಸಮುದಾಯಗಳು’ ಎಂದು ಗುರುತಿಸಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಬುಡಕಟ್ಟು ಸಮುದಾಯಗಳಿಗೆ ನೀಡುವ ಎಲ್ಲಾ ರೀತಿಯ ಅಥವಾ ಅದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನು ನೀಡಿ ಆ ಸಮುದಾಯಗಳ ಸಬಲೀಕರಣಕ್ಕೆ ಮುಂದಾದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಬುಡಕಟ್ಟು ಸಮುದಾಯಗಳನ್ನೊಳಗೊಂಡಂತೆ ಎಲ್ಲಾ ಸಮುದಾಯಗಳು ವಂಚಿತವಾಗುತ್ತವೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚಿಂತಿಸಿ ಕ್ರಮ ಕೈಗೊಂಡರೆ ಎಲ್ಲರಿಗೂ ಅನುಕೂಲವಾದಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)