varthabharthi


ನಿಮ್ಮ ಅಂಕಣ

ಭೀಮಾ ಕೋರೆಗಾಂವ್: ಶೋಷಿತರ ವಿಮೋಚನೆಗೆ ದಿಕ್ಕಾಗಲಿ

ವಾರ್ತಾ ಭಾರತಿ : 1 Jan, 2021
ಪ್ರದೀಪ್ ಎನ್. ವಿ., ಮೈಸೂರು

ಬಿಕರಿಯಾಗುವ ಮನಸ್ಥಿತಿಯಿಂದ ದಲಿತ ಸಂಘಟನೆಗಳು, ಹೋರಾಟಗಾರರು, ನೌಕರರು, ವಿದ್ಯಾರ್ಥಿಗಳು ಹೊರಬಂದು ಸಮುದಾಯದ ಹಿತಾಸಕ್ತಿಗಾಗಿ ದುಡಿಯಬೇಕಾದ ತುರ್ತಿದೆ. ಆ ಮೂಲಕ ಬಾಬಾಸಾಹೇಬರ ಋಣವನ್ನು ತೀರಿಸಬೇಕಿದೆ. ಆಗ ಮಾತ್ರ ಶೋಷಿತರು ಎಲ್ಲಾ ಬಗೆಯಲ್ಲೂ ವಿಮೋಚನೆ ಹೊಂದಲು ಸಾಧ್ಯ. ಅದಕ್ಕಾಗಿ ಕೋರೆಗಾಂವ್ ವಿಜಯೋತ್ಸವವೂ ಒಂದು ಭೂಮಿಕೆಯಾಗಲಿ. ಈ ಯುದ್ಧ ಭಾರತೀಯರೆಲ್ಲರ ಪ್ರಜ್ಞೆಯಲ್ಲಿ ಸುಳಿದಾಡಲಿ. ಹಾಗೆಯೇ ರೋಗಗ್ರಸ್ಥ ಮನಸ್ಥಿತಿಗಳಿಗೆ ಮುಲಾಮಾಗಲಿ. ಜೊತೆಗೆ ತಮ್ಮನ್ನು, ತಮ್ಮ ಸಮುದಾಯದ ಸ್ವಾಭಿಮಾನವನ್ನು ಅಡವಿಡುತ್ತಿರುವ ನಕಲಿ ಹೋರಾಟಗಾರರೆಲ್ಲರಿಗೂ ಮಾದರಿಯಾಗಲಿ. ಒಟ್ಟಾರೆಯಾಗಿ ಕೋರೆಗಾಂವ್ ಯುದ್ಧ ಶೋಷಿತ ಸಮುದಾಯಗಳ ವಿಮೋಚನೆಗೆ ದಿಕ್ಕಾಗಲಿ.


ಇಡೀ ಜಗತ್ತಿನ ಹಲವರಿಗೆ ಜನವರಿ ಒಂದನೇ ತಾರೀಖನ್ನು ಸಂಭ್ರಮಿಸಲು ಬಹುಬಗೆಯ ಕಾರಣಗಳಿವೆ. ಆದರೆ ನನ್ನಂತಹವರಿಗೆ ನನ್ನ ಪೂರ್ವಿಕರಾದ ಮಹರ್ ಸೈನಿಕರ ಸ್ವಾಭಿಮಾನದ ಕಿಚ್ಚು ಮತ್ತು ತ್ಯಾಗ-ಬಲಿದಾನಗಳ ಅದಮ್ಯ ಸ್ಫೂರ್ತಿ ಮಾತ್ರ. ಈ ದಿನ ಭಾರತದ ಇತಿಹಾಸದಲ್ಲಿ ಅದರಲ್ಲೂ ಅಸ್ಪಶ್ಯ ಸಮುದಾಯದ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಬೇಕಾದ ದಿನ. ಈ ನೆಲದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಹಾಗೂ ಅದು ಸೃಷ್ಟಿಸಿದ ಅಸಮಾನತೆಗಳನ್ನೇ ನೀತಿಯನ್ನಾಗಿಸಿಕೊಂಡಿದ್ದವರ ವಿರುದ್ಧ ಅಸ್ಪಶ್ಯ ಸೈನಿಕರು ಸ್ವಾಭಿಮಾನಕ್ಕಾಗಿ ಯುದ್ಧಮಾಡಿ ಗೆದ್ದ ದಿನವೇ ಜನವರಿ 01, 1818.

ಜಗತ್ತಿನಲ್ಲಿ ಅನೇಕ ಯುದ್ಧಗಳು ನಡೆದಿವೆ. ಆ ಯುದ್ಧಗಳೆಲ್ಲ ದೇಶ, ಸಾಮ್ರಾಜ್ಯ, ಪ್ರಾಂತಗಳ ವಿಸ್ತರಣೆಗಾಗಿ. ಆದರೆ ಮನುಷ್ಯನ ಘನತೆಗಾಗಿ ನಡೆದ ಮೊತ್ತಮೊದಲ ಯುದ್ಧವೇ ಕೋರೆಗಾಂವ್ ಯುದ್ಧ. ಬ್ರಿಟಿಷರಿಗೂ ಮತ್ತು ಭಾರತದ ಮರಾಠರಿಗೂ ನಡೆದ ಕೊನೆಯ ಯುದ್ಧವಿದು. ಎರಡು ಸಾವಿರ ವರ್ಷಗಳ ಕಾಲ ಗಾಢ ಕತ್ತಲಲ್ಲಿ ಜೀವಿಸುತ್ತಿದ್ದ ಶೋಷಿತ ಸಮುದಾಯಕ್ಕೆ ಶಿಕ್ಷಣ, ಉದ್ಯೋಗಗಳನ್ನು ಪಡೆದು ಹೊಸ ಲೋಕಕ್ಕೆ ಕಾಲಿರಿಸಲು ಕಾರಣವಾದದ್ದು ಇದೇ ಯುದ್ಧ. 1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವೆಂದು ವಿಜೃಂಭಿಸಿ ಬರೆಯುವ ಬಹುತೇಕ ಇತಿಹಾಸಕಾರರು ಕೋರೆಗಾಂವ್ ಯುದ್ಧವನ್ನು ಕುರಿತಾಗಿ ವೌನವಹಿಸುತ್ತಾರೆ. ಪಠ್ಯಗಳಲ್ಲಿರುವ ಇತಿಹಾಸದ ಪುಟಗಳಲ್ಲಿ ‘‘ಆಂಗ್ಲೋ-ಮರಾಠರಿಬ್ಬರೂ ಕೋರೆಗಾಂವ್ ಎಂಬಲ್ಲಿ ಯುದ್ಧ ಮಾಡಿದರು. ಈ ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ವಿರುದ್ಧ ಪೇಶ್ವೆಗಳು ಸೋಲನ್ನಪ್ಪಿದರು’’ ಎಂದಷ್ಟೇ ಓದುವಂತೆ ರೂಪಿಸಿದ್ದಾರೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರರು ಮಾತ್ರ ಕೋರೆಗಾಂವ್ ಯುದ್ಧದಲ್ಲಿ ಅಸ್ಪಶ್ಯ ಸೈನಿಕರು ಬ್ರಿಟಿಷ್ ಸೈನ್ಯದ ಪರವಾಗಿ ನಿಂತು ಹೋರಾಡಿದ್ದಕ್ಕೆ ಕಾರಣಗಳ ಸಮೇತವಾಗಿ ದಾಖಲಿಸುತ್ತಾರೆ. ಅಸ್ಪಶ್ಯರು ಯಾತಕ್ಕಾಗಿ ಈ ಯುದ್ಧದಲ್ಲಿ ಭಾಗವಹಿಸಿದ್ದರು? ಅವರು ಬ್ರಿಟಿಷ್ ಸೈನ್ಯವನ್ನು ಸೇರಿಕೊಳ್ಳುವುದಕ್ಕೆ ಪ್ರಮುಖ ಕಾರಣವೇನು? ಎಂಬುದನ್ನು ವಸ್ತುನಿಷ್ಠ ವಾಗಿ ದಾಖಲಿಸುತ್ತಾರೆ. ಭಾರತದ ಪುಣೆಯ ಪೇಶ್ವೆ ಬಾಜಿರಾಯ ಮನುಧರ್ಮಶಾಸ್ತ್ರವನ್ನು ತನ್ನ ಸಾಮ್ರಾಜ್ಯದ ನಡಾವಳಿಯನ್ನಾಗಿಸಿಕೊಂಡಿದ್ದ. ಈತ ಹಿಂದುತ್ವದ ಕಟ್ಟಾ ಅನುಯಾಯಿ. ಈತ ತನ್ನ ಆಳ್ವಿಕೆಯಲ್ಲಿ ಜಾತೀಯತೆ ಹಾಗೂ ಅಸ್ಪಶ್ಯತೆಯ ಆಚರಣೆಯನ್ನು ಅಮಾನವೀಯವಾಗಿ ಆಚರಿಸುತ್ತಿದ್ದನು.

ಅಸ್ಪಶ್ಯರೆಂದು ಪರಿಗಣಿಸಲ್ಪಟ್ಟ ಸಮುದಾಯದವರು ನಡೆಯುವಾಗ ತಮ್ಮ ಕೊರಳಿಗೆ ಮಡಿಕೆಯನ್ನು ನೇತುಹಾಕಿಕೊಂಡು ನಡೆದಾಡಬೇಕಿತ್ತು. ಆ ಮಡಿಕೆಯಲ್ಲಿಯೇ ಉಗುಳಬೇಕು. ಜೊತೆಗೆ ತಾವು ನಡೆಯುವಾಗ ನೆಲಕ್ಕೆ ಅಂಟುವ ಹೆಜ್ಜೆಗಳ ಗುರುತನ್ನು ಅಳಿಸಿಹಾಕಲು ಸೊಂಟಕ್ಕೊಂದು ಪೊರಕೆಯನ್ನು ಕಟ್ಟಿಕೊಳ್ಳಬೇಕಿತ್ತು. ತಾವು ಬರುವುದನ್ನು ಮೇಲ್ಜಾತಿಯವರು ನೋಡಿದರೆ ಮೈಲಿಗೆಯಾಗುತ್ತದೆ ಎಂಬ ಕಾರಣಕ್ಕಾಗಿ ಗಂಟೆಯ ಶಬ್ಧವನ್ನು ಮಾಡಬೇಕಿತ್ತು. ಜೊತೆಗೆ ಮೇಲ್ಜಾತಿ ಕೇರಿಗಳಲ್ಲಿ ಯವುದೇ ಪ್ರಾಣಿಗಳು ಸತ್ತರೆ ಎಳೆದು ಹಾಕಬೇಕಿತ್ತು. ಹಿಂದೂ ಸವರ್ಣೀಯರಿಗೆ ಬಿಟ್ಟಿ ಚಾಕರಿ ಮಾಡಬೇಕಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ಅಸ್ಪಶ್ಯರು ಅಕ್ಷರ-ಅಧಿಕಾರ-ಅಂತಸ್ತಿನ ಹಕ್ಕನ್ನು ಹೊಂದುವುದನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿತ್ತು. ಈ ನೀತಿ-ನಿಯಮಗಳನ್ನೇ ಇವನ ಆಸ್ಥಾನದಲ್ಲಿ ಚಾಚೂತಪ್ಪದಂತೆ ಪ್ರತಿಪಾದಿಸುತ್ತಿದ್ದುದಲ್ಲದೆ ಮನು ಧರ್ಮಶಾಸ್ತ್ರದ ರೀತಿ-ರಿವಾಜುಗಳನ್ನೆಲ್ಲವನ್ನೂ ಯಥವತ್ತಾಗಿ ಪ್ರತಿಪಾದಿಸಿದ್ದ.

ಭಾರತದಲ್ಲಿದ್ದ ಬ್ರಿಟಿಷರು ಪುಣೆಯನ್ನು ಆಕ್ರಮಿಸಲು ಹವಣಿಸುತ್ತಿದ್ದರು. ಆ ಕಾರಣಕ್ಕಾಗಿಯೇ ಮರಾಠ ರಾಜರ ಮೇಲೆ ಆಂಗ್ಲೋ-ಮರಾಠ ಯುದ್ಧಗಳನ್ನು ಸಾರಿದರು. ಅದರಲ್ಲಿ ಒಂದು ಮತ್ತು ಎರಡನೇ ಆಂಗ್ಲೋ-ಮರಾಠ ಯುದ್ಧಗಳಲ್ಲಿ ಮರಾಠರು ಸೋಲನ್ನೊಪ್ಪಿಕೊಂಡು ಬ್ರಿಟಿಷರೊಟ್ಟಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಸಂಪೂರ್ಣವಾಗಿ ಭಾರತದಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸಬೇಕೆಂಬ ಕನಸೊತ್ತಿದ್ದ ಬ್ರಿಟಿಷರಿಗೆ ಇದು ಸಮಾಧಾನವಾಗಿರಲಿಲ್ಲ. ಹಾಗಾಗಿ ಪೇಶ್ವೆಗಳ ವಿರುದ್ಧ 3ನೇ ಆಂಗ್ಲೋ ಮರಾಠ ಯುದ್ಧವನ್ನು ಸಾರುವುದಕ್ಕೆ ಮುಂದಾದರು. ಅದಕ್ಕಾಗಿ ಪೇಶ್ವೆಗಳ ಸೈನ್ಯದಲ್ಲಿದ್ದ ಅಸ್ಪಶ್ಯ ಸೈನಿಕರ ಸಹಕಾರವನ್ನು ಕೇಳಿದರು. ಪೇಶ್ವೆಯ ಸೈನ್ಯದಲ್ಲಿ ಸೈನಿಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರೂ ಪೇಶ್ವೆಗಳಿಂದ ಜಾತಿಯ ಕಾರಣಕ್ಕಾಗಿ ಅಪಮಾನ ಹಾಗೂ ತಾರತಮ್ಯಕ್ಕೆ ಒಳಗಾಗಿದ್ದವರು ಈ ಅಸ್ಪಶ್ಯ ಸೈನಿಕರು. ಆದರೂ, ಪೇಶ್ವೆಗಳ ಸೈನ್ಯದೊಳಗಿದ್ದುಕೊಂಡು ಬ್ರಿಟಿಷರ ಪರವಾಗಿ ಹೋರಾಟ ಮಾಡುವುದು ದ್ರೋಹವೆಂದು ಅಸ್ಪಶ್ಯ ಸೈನಿಕರು ಪರಿಗಣಿಸಿದರು. ತಮ್ಮದೇ ನೆಲದ ರಾಜನ ವಿರುದ್ಧ ವಿದೇಶಿಯರಾದ ಬ್ರಿಟಿಷರು ಯುದ್ಧ ನಡೆಸುವುದನ್ನು ಸಹಿಸದಾದರು.

ಪೇಶ್ವೆ ರಾಜ ಎರಡನೇ ಬಾಜಿರಾಯನಿಗೆ ಈ ವಿಷಯವನ್ನು ತಿಳಿಸಿದರು. ಮಹಾರ್ ಜಾತಿಯ ಪ್ರಮುಖ ಸೇನಾಪತಿಯಾಗಿದ್ದ ಸಿದನಾಕ ತನ್ನವರೊಟ್ಟಿಗೆ ಬಾಜಿರಾಯನನ್ನು ಭೇಟಿಯಾಗಿ ಈ ಸುದ್ದಿ ತಿಳಿಸುವುದಕ್ಕಾಗಿ ಆಸ್ಥಾನಕ್ಕೆ ಭೇಟಿ ನೀಡಿದರು. ತನ್ನ ಸಮುದಾಯದ ಮೇಲೆ ಹೇರಲಾಗಿರುವ ಅಸ್ಪಶ್ಯತಾ ಆಚರಣೆ ಹಾಗೂ ಸೈನಿಕರಾಗಿರುವ ತಮ್ಮನ್ನು ಜಾತಿ ಕಾರಣಕ್ಕಾಗಿ ಹೀಗೆ ಹೀನಾಯವಾಗಿ ಕಾಣುವುದನ್ನು ತಡೆಗಟ್ಟಬೇಕೆಂದು ಕೇಳಿಕೊಂಡರು. ಇದನ್ನು ಕೇಳಿದ ಬಾಜಿರಾಯ ಅರಮನೆ ಒಳಗಡೆ ಬಂದಿದ್ದ ಅಸ್ಪಶ್ಯರನ್ನು ಕಂಡು ಕೋಪಗೊಂಡ. ಬ್ರಿಟಿಷರು ತನ್ನ ಪ್ರಾಂತದ ಮೇಲೆ ಆಕ್ರಮಣ ಮಾಡಬಹುದೆಂಬ ವಿಷಯಕ್ಕಿಂತ ಅಸ್ಪಶ್ಯರು ಸಮಾನತೆ ಕೇಳುವುದನ್ನು ಮನಸಾರೆ ಒಪ್ಪದಾದ. ಮನುಧರ್ಮದ ಶಾಸ್ತ್ರಗ್ರಂಥಗಳು ಹೇಳುವುದೇ ತನಗೆ ಮುಖ್ಯ, ಶಾಸ್ತ್ರಧಾರಿತ ಸಂಪ್ರದಾಯಗಳನ್ನು ಮೀರಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು ಆಜ್ಞೆಹೊರಡಿಸಿದ. ಮುಂದೆ ಮಾತನಾಡಲು ಅವಕಾಶ ಕೊಡದೆ ಅಸ್ಪಶ್ಯ ಸಿದನಾಕ ಹಾಗೂ ಇನ್ನುಳಿದ ಸೈನಿಕರನ್ನು ತನ್ನ ಅರಮನೆ ಸೈನಿಕರಿಂದ ಹೊರದಬ್ಬಿಸಿದ. ಬಾಜಿರಾಯನ ವರ್ತನೆ ಹಾಗೂ ಅವನ ಮಾತು ಅಸ್ಪಶ್ಯರನ್ನು ಘಾಸಿಗೊಳಿಸಿತು. ಅಸ್ಪಶ್ಯರ ಮನದಲ್ಲಿ ಬಂಡಾಯದ ಸೇಡು ಚಿಗುರೊಡೆಯುವಂತೆ ಮಾಡಿತು.

ಮಹಾರ್ ಸೈನಿಕರು ಬ್ರಿಟಿಷರ ಆಕ್ರಮಣದ ಬಗೆಗೆ ತಿಳಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಪೇಶ್ವೆ ಬಾಜಿರಾಯ ತಾನೇ ಮುಂದಾಗಿ ಬ್ರಿಟಿಷರ ಮೇಲೆ ಆಕ್ರಮಣ ನಡೆಸಲು ನಿರ್ಧರಿಸಿದ. ಅದರಲ್ಲೂ ರಾತ್ರಿ ಹೊತ್ತು ಹಠಾತ್ ದಾಳಿ ನಡೆಸಲು ತೀರ್ಮಾನಿಸಿದ. ಇದಕ್ಕಾಗಿ 25 ಸಾವಿರ ಅಶ್ವದಳ, 5 ಸಾವಿರ ಕಾಲಾಳು ಪಡೆ. ಇವರಲ್ಲಿ ಕೆಲವರು ಬಂದೂಕುಧಾರಿಗಳು ಇದ್ದರು. ಹೀಗೆ ಒಟ್ಟು 30,000 ಸೈನಿಕರನ್ನು ಸಜ್ಜುಗೊಳಿಸಿದ. ಹಿಂದೆ ತನ್ನ ತಪ್ಪಿನಿಂದಲೇ ಪುಣೆಯನ್ನು ಕಳೆದುಕೊಂಡಿದ್ದ ಪೇಶ್ವೆ ಬಾಜಿರಾಯ ಈ ಯುದ್ಧದಲ್ಲಿ ಅದನ್ನೂ ತನ್ನ ಕೈವಶ ಮಾಡಿಕೊಳ್ಳುವುದಕ್ಕಾಗಿ ಶಪಥ ಮಾಡಿದ್ದ.

ಪೇಶ್ವೆಯ ಸೈನಿಕರು ಭೀಮಾನದಿ ದಡದಲ್ಲಿ ಯುದ್ಧಕ್ಕೆ ಸಜ್ಜಾಗಿರುವ ವಿಷಯ ಬ್ರಿಟಿಷರಿಗೆ ತಿಳಿಯಿತು. ಬ್ರಿಟಿಷ್ ಸೈನ್ಯ ನೋಡಿಕೊಳ್ಳುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಫಿಲ್ಸ್‌ಮನ್ ಪೇಶ್ವೆಗಳ ಅಪಮಾನದಿಂದ ರೋಸಿಹೋಗಿದ್ದ ಮಹಾರ್ ಸೈನ್ಯದ ನಾಯಕ ಸಿದನಾಕನನ್ನು ಸಂಪರ್ಕಿಸಿದ. ಸಿದನಾಕನು ತನ್ನ ಆತ್ಮೀಯ ಸಂಗಡಿಗರಾದ ರತನಾಕ, ಜತನಾಕ, ಭೀಕನಾಕರ ಜೊತೆ ಮಾತಾಡಿದ. ಅಸ್ಪಶ್ಯತೆ ಮತ್ತು ಜಾತಿಪದ್ಧತಿಯ ಆಚರಣೆಗೆ ಯಾವ ಕಿಮ್ಮತ್ತನ್ನು ಕೊಡದ ಬ್ರಿಟಿಷರ ನಡವಳಿಕೆ ಹಾಗೂ ಹೆಜ್ಜೆಹೆಜ್ಜೆಗೂ ಜಾತಿ ಕಾರಣಕ್ಕಾಗಿ ತಮ್ಮನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಜಾತಿವಾದಿ ಪೇಶ್ವೆಗಳ ನಡವಳಿಕೆ ಈ ಎರಡರ ಬಗೆಗೂ ಪರಸ್ಪರ ಚರ್ಚಿಸಿದ ಇವರಿಗೆ ಬ್ರಿಟಿಷರ ನಡವಳಿಕೆಯೇ ತಕ್ಷಣಕ್ಕೆ ಸರಿಕಾಣಿಸಿತು. ಜಾತಿ ಹೊಂಡದಲ್ಲಿ ಬಿದ್ದು ಜೀವನಪರ್ಯಂತ ಸತ್ತಂತೆ ಬದುಕುವುದಕ್ಕಿಂತ, ಜಾತಿವಾದಿಗಳ ವಿರುದ್ಧ ಬ್ರಿಟಿಷರ ಬೆಂಬಲದಿಂದ ಹೋರಾಡುವುದೇ ಲೇಸೆಂದು ನಿರ್ಧರಿಸಿದರು. ತಾವು ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದೇವೆ ಎನ್ನುವುದಕ್ಕಿಂತ ತಮ್ಮನ್ನು ಮನುಷ್ಯರನ್ನಾಗಿ ಕಾಣದ, ಮುಖ್ಯವಾಗಿ ಧರ್ಮದ ಅಮಲನ್ನು ನೆತ್ತಿಗೇರಿಸಿಕೊಂಡ ಧೂರ್ತರ ವಿರುದ್ಧದ ಹೋರಾಟವಿದು ಎಂಬ ಭಾವನೆ ಇವರಲ್ಲಿ ಮಡುಗಟ್ಟಿತ್ತು. ಜಾತಿವಾದಿಗಳನ್ನು ಕೊನೆಗಾಣಿಸಲು ಇದೇ ತಕ್ಕ ಸಮಯ ಎಂಬ ಸ್ಪಷ್ಟ ನಿಲುವಿನ ಸೇಡು ಎಲ್ಲರ ಎದೆಯೊಳಗೆ ತುಂಬಿಕೊಂಡಿತು.

ಲೆಫ್ಟಿನೆಂಟ್ ಕರ್ನಲ್ ಫಿಲ್ಸ್‌ಮನ್ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಾಂಟನ್ ಹಾಗೂ ಮಹಾರ್ ಸೈನ್ಯದ ಮುಖಂಡ ಸಿದನಾಕನ ನೇತೃತ್ವದಲ್ಲಿ 500 ಮಹಾರ್ ಸೈನಿಕರು ಯುದ್ಧಕ್ಕೆ ಸಿದ್ಧರಾದರು. ಜೊತೆಗೆ 300 ಅಶ್ವದಳ, 5 ಬೆಟಾಲಿಯನ್ ಆಫೀಸರುಗಳು, 206 ಪೌಡರ್ ತೋಫಾಗಳು ಮತ್ತು ಅದನ್ನು ನಡೆಸುವ 24 ಬ್ರಿಟಿಷ್ ಸೈನಿಕರು 1817 ಡಿಸೆಂಬರ್ 31ರ ರಾತ್ರೋ ರಾತ್ರಿ ಶಿರೂರಿನಿಂದ ಪುಣೆಯ ಕಡೆಗೆ ಹೊರಟು 25 ಮೈಲಿ ನಡೆದು ಭೀಮಾ ನದಿಯ ದಡದ ಕೋರೆಗಾಂವ್ ತಲುಪಿದರು. ಜನವರಿ 1ರ ಬೆಳಗ್ಗೆ 9 ಗಂಟೆಗೆ ಯುದ್ಧ ಶುರುವಾಯಿತು. 500 ಜನರಿದ್ದ ಮಹಾರ್ ಸೈನಿಕರು, 5 ಸಾವಿರ ಕಾಲಾಳು ಪಡೆ ಹಾಗೂ 25,000 ಅಶ್ವದಳಗಳಿಂದ ಕೂಡಿದ್ದ ಪೇಶ್ವೆಯ ಸೈನ್ಯದ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಾಭಿಮಾನ ಹಾಗೂ ಕಿಚ್ಚಿನಿಂದ ಸತತ 12 ಗಂಟೆಗಳ ಕಾಲ ಶೌರ್ಯದಿಂದ ಹೋರಾಡಿದರು. ಬೆದರಿದ ಪೇಶ್ವೆಗಳ ಸೈನ್ಯ ಪಲಾಯನ ಮಾಡಿತು.

ಈ ಯುದ್ಧದಲ್ಲಿ 22 ಮಹಾರ್ ಸೈನಿಕರು ಹುತಾತ್ಮರಾದರು. ಬಾಬಾಸಾಹೇಬರು ಈ ಯುದ್ಧವನ್ನು ಸ್ವದೇಶಿ ಗುಲಾಮಗಿರಿಯ ವಿರುದ್ಧ ನಡೆಸಿದ ಸ್ವಾಭಿಮಾನದ ಯುದ್ಧವನ್ನಾಗಿ ಚರಿತ್ರೆಯಲ್ಲಿ ದಾಖಲಿಸಿದರು. ಈ ಯುದ್ಧದಲ್ಲಿ ಅಪಾರ ಸೈನಿಕರಿಂದ ಕೂಡಿದ ಪೇಶ್ವೆಗಳನ್ನು ಅತ್ಯಂತ ಕಡಿಮೆ ಸಂಖ್ಯೆಯ ಮಹಾರ್ ಸೈನಿಕರು ಸೋಲಿಸಿದ್ದು ಬ್ರಿಟಿಷರಿಗೆ ಅಚ್ಚರಿ ಮೂಡಿಸಿತು. ಈ ವಿಜಯದ ಸಂಕೇತವಾಗಿ 1821ರ ಮಾರ್ಚ್ 26ರಂದು ಶಿರೂರು ಸಮೀಪವಿರುವ ಕೋರೆಗಾಂವ್‌ನಲ್ಲಿ ಸ್ಮಾರಕ ಸ್ಥಾಪಿಸಲು ಅಡಿಗಲ್ಲು ಹಾಕಲಾಯಿತು. ಸ್ಥಂಭವೊಂದನ್ನು ಸ್ಥಾಪಿಸಿ ಅದರಲ್ಲಿ ಭೀಮಾ ಕೋರೆಗಾಂವ್ ಯುದ್ಧದ ವಿವರ ಹಾಗೂ ಹೋರಾಡಿ ಹುತಾತ್ಮರಾದವರ ಹೆಸರುಗಳನ್ನು ಕೆತ್ತಲಾಯಿತು. ಇದನ್ನು ಮಹಾರ್ ಸ್ತಂಭ, ವಿಜಯ ಸ್ತಂಭ, ಸ್ಮರಣ ಸ್ತಂಭ ಎನ್ನುವ ಹೆಸರುಗಳಿಂದ ಕರೆಯಲಾಗುತ್ತಿದೆ. ಜನವರಿ 1, 1927ರಂದು ಬಾಬಾಸಾಹೇಬರು ಕೋರೆಗಾಂವ್ ಕದನದ ಮಹಾರ್ ಕಲಿಗಳ ಸ್ಮತಿದಿನವನ್ನಾಗಿ ಆಚರಿಸಿ ಗೌರವ ಸಲ್ಲಿಸಿದರು.

ಬ್ರಿಟಿಷರು ಭಾರತವೆಂದರೆ ಮನುಷ್ಯರನ್ನು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವಿಭಜಿಸಿ, ಅಸಮಾನತೆಗಳನ್ನು ಸೃಷ್ಟಿಸಿ, ಅವಮಾನಿಸುತ್ತಿರುವ ನಾಡೆಂದು ಅರಿತುಕೊಂಡರು. ಅಸ್ಪಶ್ಯರನ್ನು ಶಿಕ್ಷಣದಿಂದ ದೂರವಿಡಲಾಗಿದೆ ಎನ್ನುವ ಕಾರಣಕ್ಕಾಗಿ ಮೆಕಾಲೆಯೂ 1835ರ ಸಾರ್ವತ್ರಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದನು. ಆ ನಂತರ 1947ರ ಸ್ವಾತಂತ್ರ್ಯ ಚಳವಳಿಯವರೆಗೂ ಬ್ರಿಟಿಷರು ಭಾರತದಲ್ಲಿ ಜಾರಿಗೊಳಿಸಿದ ಎಲ್ಲಾ ಬಗೆಯ ಸುಧಾರಣೆಗಳಿಗೂ ಈ ಯುದ್ಧದ ವಿಜಯ ಭೂಮಿಕೆಯಾಗಿದೆ ಎನ್ನಬಹುದು. ಜಾತಿಯ ಕಾರಣಕ್ಕಾಗಿ ಶೋಷಿತರ ರಕ್ತ ಇವತ್ತಿಗೂ ಬೀದಿಯಲ್ಲಿ ಚೆಲ್ಲುತ್ತಿದೆ. ಅತ್ಯಾಚಾರ, ಅವಮಾನ, ಅಪಮಾನ, ಬಹಿಷ್ಕಾರ, ದೌರ್ಜನ್ಯಗಳು ದಲಿತರ ಮೇಲೆ ಸರ್ವೇಸಾಮಾನ್ಯವಾಗಿಬಿಟ್ಟಿವೆ.

ಸವರ್ಣೀಯರ ಕೇರಿಗೆ, ಸಾರ್ವಜನಿಕ ದೇವಸ್ಥಾನಕ್ಕೆ, ಹೊಟೇಲ್‌ಗಳಿಗೆ ದಲಿತರ ಪ್ರವೇಶವಿಲ್ಲದ, ದಲಿತನ ದನ ಸವರ್ಣೀಯನ ಹೊಲದಲ್ಲಿ ಹುಲ್ಲುತಿಂದ ಕಾರಣಕ್ಕಾಗಿ ದಲಿತನಿಗೆ ಮಲ ತಿನ್ನಿಸಿದ, ಭೂಮಿ ಪಡೆಯುವುದಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ ಕಾರಣಕ್ಕಾಗಿ ಕೊಂದ, ಬೀದಿಯಲ್ಲಿ ತಲೆಯೆತ್ತಿ ನಡೆದಾಡಿದ ಕಾರಣಕ್ಕಾಗಿ ಬೆತ್ತಲೆಯಾಗಿ ನಿಲ್ಲಿಸಿದ, ಮೇಲ್ವರ್ಗದವರು ತಮ್ಮ ತೀಟೆಗಾಗಿ ದಲಿತ ಹೆಣ್ಣುಮಕ್ಕಳನ್ನು ಹೊಲಗದ್ದೆಗಳಲ್ಲಿ ಅತ್ಯಾಚಾರ ಮಾಡಿದ, ಪ್ರೀತಿಸಿ ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಮರ್ಯಾದೆಯ ಹೆಸರಿನಲ್ಲಿ ಅವರನ್ನು ದಿನನಿತ್ಯ ಕೊಂದಿರುವ ಹಾಗೂ ಕೊಲ್ಲುತ್ತಿರುವ ದೇಶ ಭಾರತ. ಜಾತಿಯನ್ನೇ ನೀತಿಯನ್ನಾಗಿಸಿಕೊಂಡಿರುವ ಈ ನೆಲದಲ್ಲಿ ಇಂತಹ ಕಾರಾಳ ದಿನಗಳನ್ನು ಎದುರುಹಾಕಿಕೊಂಡು, ಸ್ವಾಭಿಮಾನದಿಂದ ನಡೆದುಕೊಳ್ಳುತ್ತಲೇ ಜಾತಿವಾದಿ ಮನಸ್ಸುಗಳನ್ನು ಪರಿವರ್ತಿಸಿದ್ದು ಕರ್ನಾಟಕದ ದಲಿತ ಸಂಘರ್ಷ ಸಮಿತಿ. ಆದರೆ ವರ್ತಮಾನದಲ್ಲಿ ದಸಂಸ ಏನಾಗಿದೆ? ದಸಂಸ ಹುಟ್ಟುಹಾಕಿದವರೇ ಮುಜುಗರ ಪಟ್ಟುಕೊಳ್ಳುವಂತಹ ಹೀನ ಸ್ಥಿತಿಗೆ ವರ್ತಮಾನದ ಚಳವಳಿಗಾರರು ನಡೆದುಕೊಳ್ಳುತ್ತಿಲ್ಲವೆ? 2018ರ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಮ್ಮ ನಡುವೆ ತಳಸಮುದಾಯಗಳ ಸಾಕ್ಷಿಪ್ರಜ್ಞೆಯಂತಿರುವ ಪ್ರೊ. ಆನಂದ್ ತೇಲ್ತುಂಬ್ಡೆಯವರನ್ನು ಬಿಡಿಸಿಕೊಳ್ಳಲಾರದ ಸ್ಥಿತಿಗೆ ದಲಿತ ಸಂಘಟನೆಗಳು ತಲುಪಿವೆ ಎಂದರೆ ಏನರ್ಥ?

ವರ್ತಮಾನಕ್ಕನುಗುಣವಾಗಿ ದಲಿತ ಚಳವಳಿಯ ಬಗ್ಗೆ ಎನ್ಕೆ ಹನುಮಂತಯ್ಯನವರ ಮಾತು ಅರ್ಥಗರ್ಭಿತವೆನಿಸುತ್ತದೆ: ‘‘ದಲಿತ ಚಳವಳಿ ಒಂದು ಕಾಲಕ್ಕೆ ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ಹಲ್ಲೆಯಾದರೂ ಅಲ್ಲಿಗೆ ಹೋಗಿ ಕ್ರಾಂತಿಯ ಮೊಟ್ಟೆಗಳನ್ನಿಟ್ಟು ಬರುವ ನವಿಲಿನ ಕೆಲಸವನ್ನು ಮಾಡುತ್ತಿತ್ತು; ನಂತರ ಆ ಮೊಟ್ಟೆಗಳು ಒಡೆದು ಅಲ್ಲಿ ಹೊಸನವಿಲುಗಳು ಹುಟ್ಟುತ್ತಿದ್ದವು. ಕ್ರಾಂತಿಯನ್ನು ಮುಂದುವರಿಸುತ್ತಿದ್ದವು. ಈಗ ಆ ನವಿಲುಗಳೆಲ್ಲ ಬಿಕರಿಯಾಗಿ ಕಸಾಯಿಖಾನೆಯಲ್ಲಿ ಪುಕ್ಕ ತರಿಸಿಕೊಂಡು ಮಾಂಸವಾಗಿ ಮಾರಾಟಗೊಳ್ಳುತ್ತಿವೆ’’ ಎಂಬ ಮಾತು ಎದೆಗಿರಿದ ಚೂರಿಯಂತಿದೆ. ಬಿಕರಿಯಾಗುವ ಮನಸ್ಥಿತಿಯಿಂದ ದಲಿತ ಸಂಘಟನೆಗಳು, ಹೋರಾಟಗಾರರು, ನೌಕರರು, ವಿದ್ಯಾರ್ಥಿಗಳು ಹೊರಬಂದು ಸಮುದಾಯದ ಹಿತಾಸಕ್ತಿಗಾಗಿ ದುಡಿಯಬೇಕಾದ ತುರ್ತಿದೆ. ಆ ಮೂಲಕ ಬಾಬಾಸಾಹೇಬರ ಋಣವನ್ನು ತೀರಿಸಬೇಕಿದೆ. ಆಗ ಮಾತ್ರ ಶೋಷಿತರು ಎಲ್ಲಾ ಬಗೆಯಲ್ಲೂ ವಿಮೋಚನೆ ಹೊಂದಲು ಸಾಧ್ಯ. ಅದಕ್ಕಾಗಿ ಕೋರೆಗಾಂವ್ ವಿಜಯೋತ್ಸವವೂ ಒಂದು ಭೂಮಿಕೆಯಾಗಲಿ. ಈ ಯುದ್ಧ ಭಾರತೀಯರೆಲ್ಲರ ಪ್ರಜ್ಞೆಯಲ್ಲಿ ಸುಳಿದಾಡಲಿ. ಹಾಗೆಯೇ ರೋಗಗ್ರಸ್ಥ ಮನಸ್ಥಿತಿಗಳಿಗೆ ಮುಲಾಮಾಗಲಿ. ಜೊತೆಗೆ ತಮ್ಮನ್ನು, ತಮ್ಮ ಸಮುದಾಯದ ಸ್ವಾಭಿಮಾನವನ್ನು ಅಡವಿಡುತ್ತಿರುವ ನಕಲಿ ಹೋರಾಟಗಾರರೆಲ್ಲರಿಗೂ ಮಾದರಿಯಾಗಲಿ. ಒಟ್ಟಾರೆಯಾಗಿ ಕೋರೆ ಗಾಂವ್ ಯುದ್ಧ ಶೋಷಿತ ಸಮುದಾಯಗಳ ವಿಮೋಚನೆಗೆ ದಿಕ್ಕಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)