varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

2020: ಮೊದಲು ಮುದುಡಿ ಕೊನೆಗೆ ಅರಳಿದ ವರ್ಷ

ವಾರ್ತಾ ಭಾರತಿ : 1 Jan, 2021
ರವೀಶ್ ಕುಮಾರ್, ಕನ್ನಡಕ್ಕೆ: ಡಾ. ಕೌಸರ್ ನಿಸಾಫ್

ರವೀಶ್ ಕುಮಾರ್ ಇಂದು ಅತ್ಯಂತ ಚಿರಪರಿಚಿತ ಹೆಸರು.

ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಾ ಬಂದಿರುವ ಇವರಿಗೆ ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ವಸ್ತುನಿಷ್ಠ ಸೇವೆಯನ್ನು ಪರಿಗಣಿಸಿ, 2019ರ ಪ್ರತಿಷ್ಠಿತ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

"ನನ್ನ ಪ್ರಕಾರ, ವರ್ಷ 2020, ಜನತೆಯ ಧ್ವನಿಯನ್ನೇ ಅಳಿಸಿಹಾಕುವ ಪ್ರಕ್ರಿಯೆಯೊಂದಿಗೆ ಆರಂಭವಾಯಿತು. ಇದೀಗ ಈ ವರ್ಷವು ಕೊನೆಗೊಳ್ಳುತ್ತಿರುವಾಗ ದೇಶದ ಜನತೆ ಮತ್ತೆ ತನ್ನ ಸ್ವಂತಿಕೆಯನ್ನು ಮೆರೆಯಲು ಹೊರಟಂತಿದೆ. ಪಂಜಾಬಿನ ರೈತರಿಗೆ ಎಲ್ಲ ಪಂಜಾಬಿ ಭಾಷಿಗರು ಮತ್ತು ಪಂಜಾಬಿ ಸಮಾಜದ ಎಲ್ಲ ವರ್ಗಗಳ ಜನರು ನೀಡಿದ ಬೆಂಬಲವು ಒಂದು ದೊಡ್ಡ ಚಿತ್ರವನ್ನು ಮೂಡಿಸುತ್ತದೆ. ಪಂಜಾಬಿನ ಗಾಯಕರು, ಕ್ರೀಡಾಳುಗಳು, ಪಂಜಾಬಿನಿಂದ ಹೋಗಿ ಜಗತ್ತಿನ ವಿವಿಧೆಡೆ ನೆಲೆಸಿದ್ದವರು-ಹೀಗೆ ಎಲ್ಲರೂ ಪಂಜಾಬಿನ ರೈತರ ಜೊತೆ ನಿಂತಿದ್ದಾರೆ. ಅಂದರೆ ಜನತೆ, ಜನತೆಯ ಜೊತೆ ನಿಂತಿದ್ದಾರೆ. ಪಂಜಾಬಿನಲ್ಲೀಗ ಹಿಂದೂ-ಮುಸ್ಲಿಮ್ ಎನ್ನಬಹುದಾದ ಯಾವ ಸನ್ನಿವೇಶವೂ ಇಲ್ಲ. ಅಲ್ಲೀಗ ಇರುವುದು ಪಂಜಾಬ್-ಪಂಜಾಬ್ ಮಾತ್ರ. ಭಾರತದೆಲ್ಲೆಡೆ ಹೀಗಾಗಿದ್ದರೆ ಎಷ್ಟು ಚೆನ್ನಾಗಿತ್ತು !"

ವರ್ಷ 2020 ಮುಗಿಯುವುದರಲ್ಲಿದೆ. ಈ ವರ್ಷವನ್ನು ವಿಶ್ಲೇಷಿಸುವ ಅತ್ಯಂತ ಮಹತ್ವದ ದೃಶ್ಯವೊಂದು ಡಿಸೆಂಬರ್ 3ರಂದು ಕಂಡು ಬಂತು. ಅಂದು ವಿಜ್ಞಾನ ಭವನದಲ್ಲಿ ಸರಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ರೈತರು ನೆಲದಲ್ಲಿ ಕುಳಿತು ಊಟ ಮಾಡತೊಡಗಿದರು. ರೈತರು, ಸರಕಾರ ಕಳಿಸಿಕೊಟ್ಟ ಆಹಾರವನ್ನು ತಿರಸ್ಕರಿಸಿ (ಸಿಖ್ಖರ ಗುರುದ್ವಾರದ) ಲಂಗರ್‌ನಿಂದ ಬಂದ ರೊಟ್ಟಿ ಮತ್ತು ಮೊಸರನ್ನು ತಿಂದರು. ಈ ರೀತಿ ರೈತರು ನೆಲದಲ್ಲಿ ಕುಳಿತು ಉಣ್ಣುತ್ತಿರುವ ದೃಶ್ಯವು ಭಾರತದ ಜನತೆಯ ಸ್ವಾಭಿಮಾನವನ್ನು ಹೊಸದಾಗಿ ಮರುಸ್ಥಾಪಿಸಿದೆ. ಸರಕಾರವಂತೂ ಅವರ ಸ್ವಾಭಿಮಾನವನ್ನು ತನ್ನ ಕಾಲಡಿಯಲ್ಲಿ ಹೊಸಕಿ ಹಾಕಲು ಭಾರೀ ಉತ್ಸಾಹ ತೋರಿತ್ತು. ರೈತರು ನೆಲದಲ್ಲಿ ಕುಳಿತು ಉಣ್ಣುತ್ತಿರುವ ದೃಶ್ಯವನ್ನು ಮಾಧ್ಯಮಗಳು ಕಡೆಗಣಿಸಿದರೂ ಆ ಚಿತ್ರವು ಸರಕಾರದ ದೃಷ್ಟಿಯಲ್ಲಿ ಜನತೆಗಿರುವ ಸ್ಥಾನಮಾನವೇನೆಂಬುದಕ್ಕೆ ಉದಾಹರಣೆಯಾಗಿ ಬಹುಕಾಲ ಉಳಿಯಲಿದೆ. ನೆಲದಲ್ಲಿ ಕೂರುವ ಮೂಲಕ ರೈತರು ಒಂದು ಬಲಿಷ್ಠ ಸರಕಾರವನ್ನು ನೆಲಮಟ್ಟಕ್ಕೆ ಇಳಿಸಿದ್ದಾರೆನ್ನಬಹುದು. ಆದ್ದರಿಂದ ನನ್ನ ಪ್ರಕಾರ ಈ ದೃಶ್ಯವು ವರ್ಷದ ಆರಂಭದಲ್ಲಿ ತುಳಿಯಲ್ಪಟ್ಟಿದ್ದ ಜನತೆಯ ಪುನರಾಗಮನದ ಸಂಕೇತವಾಗಿದೆ.

ಸ್ವಲ್ಪ ನೆನಪಿಸಿಕೊಳ್ಳಿ. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ದೇಶದಲ್ಲಿ, ಪ್ರಸ್ತುತ ರೈತ ಚಳವಳಿಗಿಂತಲೂ ದೊಡ್ಡ ಮಟ್ಟದ ಪ್ರದರ್ಶನಗಳು ನಡೆದಿದ್ದವು. ಅದೆಷ್ಟೋ ಕಡೆ ಹಲವು ದಿನ ಮಾತ್ರವಲ್ಲ ಹಲವು ವಾರಗಳಷ್ಟು ದೀರ್ಘ ಕಾಲ ಜನರು ಧರಣಿ ಕೂತಿದ್ದರು. ಅಂದು ಎಲ್ಲ ಚಳವಳಿಗಾರರು ತಮ್ಮ ಚಳವಳಿಯನ್ನು ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿದ್ದ ಚಳವಳಿಯ ಭಾಗವಾಗಿ ಗುರುತಿಸಿಕೊಂಡಿದ್ದರು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ತಮ್ಮದೇ ಆದ ವೇದಿಕೆಗಳನ್ನು ರಚಿಸಿಕೊಂಡು ಆಂದೋಲನಕ್ಕೆ ನೇತೃತ್ವ ನೀಡಿದ್ದರು. ತರುಣರು, ತರುಣಿಯರು ಸಂವಿಧಾನದ ಪ್ರತಿಯನ್ನೇ ತಮ್ಮ ಧ್ವಜವಾಗಿಸಿಕೊಂಡು ಚಳವಳಿಯಲ್ಲಿ ಭಾಗವಹಿಸಿದ್ದರು. ಸರಕಾರ ಮಾತ್ರ ಇದನ್ನೆಲ್ಲಾ ಸಂಪೂರ್ಣ ಕಡೆಗಣಿಸಿ ಬಿಟ್ಟಿತು. ಆ ಚಳವಳಿಗಾರರ ಜೊತೆ ಏನಾದರೂ ಮಾತುಕತೆ ನಡೆಸಬೇಕೆಂದು ಸರಕಾರಕ್ಕೆ ಒಮ್ಮೆಯೂ ಅನಿಸಲಿಲ್ಲ. ಅಂದಿನ ಚಳವಳಿಯ ವೇಳೆ ಎಲ್ಲ ವೇದಿಕೆಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ಓದಲಾಗಿತ್ತು. ಆದರೂ ಸರಕಾರ ಕಿವಿಗೊಡಲಿಲ್ಲ. ನಾವು ಭಾರತದ ಪ್ರಜೆಗಳು ಎಂಬ ಸಂವಿಧಾನದ ಮೊದಲ ಪಂಕ್ತಿಗೆ ಸರಕಾರವು ಕೊನೆಯ ಪಂಕ್ತಿಗೆ ಸಲ್ಲಬೇಕಾದ ಗೌರವವನ್ನೂ ಸಲ್ಲಿಸಲಿಲ್ಲ.

ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಪ್ರಸ್ತುತ ಪ್ರದರ್ಶನಕಾರರಿಗೆ ಗುಂಡು ಹೊಡೆಯಬೇಕೆಂಬ ಘೋಷಣೆಗಳನ್ನು ಕೂಗತೊಡಗಿದರು. ಅವರ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡತೊಡಗಿದರು. ಅವರು ಭಟ್ಟಂಗಿ ಮಾಧ್ಯಮವನ್ನು ಮುಂಚೂಣಿಯಲ್ಲಿಟ್ಟು ವ್ಯಾಪಕ ಅಪಪ್ರಚಾರ ನಡೆಸಿದರು. ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಹೋರಾಡುತ್ತಿದ್ದವರ ಮೇಲೆ ಆರೋಪಗಳ ಮಳೆ ಸುರಿಸಿದರು. ದಿಲ್ಲಿಯಲ್ಲಿ ಗಲಭೆಯಾದರೆ, ದೇಶದ ಇತರೆಡೆ ಪ್ರಸ್ತುತ ಚಳವಳಿಯಲ್ಲಿ ಭಾಗವಹಿಸಿದವರನ್ನು ಅದಕ್ಕೆ ಹೊಣೆಗಾರರಾಗಿಸಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ನತಾಶಾ ನರ್ವಾಲ್, ದೇವಾಂಗನಾ ಕಾಲಿತಾ, ಸಫೂರಾ ಝರ್ಗರ್ ರಂತಹ ವಿದ್ಯಾರ್ಥಿಗಳನ್ನು ಬಂಧಿಸಿ ಭಾರೀ ಗಂಭೀರ ವಿಧಿಗಳನ್ವಯ ಅವರ ವಿರುದ್ಧ ಆರೋಪ ಪಟ್ಟಿ ತಯಾರಿಸಲಾಯಿತು. ಉಮರ್ ಖಾಲಿದ್ ಮೇಲೆ ಭಯೋತ್ಪಾದನೆಯ ಕಾಯ್ದೆಗಳನ್ವಯ ಮೊಕದ್ದಮೆ ಹೂಡಲಾಯಿತು. ಡಾ. ಕಫೀಲ್ ಖಾನ್ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಸುಳ್ಳು ಆರೋಪಗಳನ್ನು ಹೊರಿಸಿ ಆರು ತಿಂಗಳ ಕಾಲ ಅವರನ್ನು ಜೈಲಲ್ಲಿಡಲಾಯಿತು. ಕೊರೋನ ಪಿಡುಗಿನ ಆಗಮನದೊಂದಿಗೆ ಆ ಳವಳಿ ಸಂಪೂರ್ಣ ತಣ್ಣಗಾಗಿ ಬಿಟ್ಟಿತು.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಆಂದೋಲನವನ್ನು ಮಟ್ಟ ಹಾಕುವುದರಲ್ಲಿ ಸರಕಾರ ಯಶಸ್ವಿಯಾಯಿತು. ಆ ಬಳಿಕ ಇಡೀ ವರ್ಷ ದೇಶದಲ್ಲಿ ಯಾವುದೇ ಆಂದೋಲನದ ಯಾವುದೇ ಚಿತ್ರ ಅಥವಾ ದೃಶ್ಯ ಕಾಣಲು ಸಿಕ್ಕಿರಲಿಲ್ಲ. ದೇಶದ ಜನತೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆಯೋ ಎಂಬಂತಿತ್ತು ಸನ್ನಿವೇಶ. ಜನತೆಯ ಧ್ವನಿಯನ್ನು ಎಷ್ಟೊಂದು ಕ್ರೂರವಾಗಿ ಅಡಗಿಸಲಾಯಿತೆಂಬುದನ್ನು ಕಂಡವರು, ಇಲ್ಲಿ ಯಾರಾದರೂ ಇನ್ನೊಂದು ಆಂದೋಲನವನ್ನು ಆರಂಭಿಸುವ ಧೈರ್ಯ ತೋರಲಾರರು ಎಂದೇ ಭಾವಿಸಿದ್ದರು. ಆದರೆ ಆ ಭಾವನೆ ತಪ್ಪೆಂಬುದನ್ನು ಇದೀಗ ಪಂಜಾಬಿನ ರೈತರು ಸಾಬೀತು ಪಡಿಸಿದ್ದಾೆ. ಭಟ್ಟಂಗಿ ಮಾಧ್ಯಮಗಳು ತಮ್ಮ ವಿರುದ್ಧ ಎಷ್ಟು ಅಪಪ್ರಚಾರ ನಡೆಸಿದರೂ ತಮ್ಮ ಜೊತೆ ಮಾತುಕತೆಗೆ ಬರುವಂತೆ ಸರಕಾರವನ್ನು ನಿರ್ಬಂಧಿಸುವ ಶಕಿ್ತ ತಮಗೆ ಇದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಎಷ್ಟೋ ರಾಜ್ಯಗಳಲ್ಲಿ ನಡೆದ ಆಂದೋಲನ ವಿಫಲವಾದ ಬೆನ್ನಿಗೆ, ಪಂಜಾಬ್ ಎಂಬ ಸಣ್ಣ ರಾಜ್ಯದಿಂದ ಮೂಡಿದ ರೈತರ ಚಳವಳಿಯು ಸರಕಾರವನ್ನು ಮಣಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.

ನನ್ನ ಪ್ರಕಾರ, ವರ್ಷ 2020, ಜನತೆಯ ಧ್ವನಿಯನ್ನೇ ಅಳಿಸಿಹಾಕುವ ಪ್ರಕ್ರಿಯೆಯೊಂದಿಗೆ ಆರಂಭವಾಯಿತು. ಇದೀಗ ಈ ವರ್ಷವು ಕೊನೆಗೊಳ್ಳುತ್ತಿರುವಾಗ ದೇಶದ ಜನತೆ ಮತ್ತೆ ತನ್ನ ಸ್ವಂತಿಕೆಯನ್ನು ಮೆರೆಯಲು ಹೊರಟಂತಿದೆ. ಪಂಜಾಬಿನ ರೈತರಿಗೆ ಎಲ್ಲ ಪಂಜಾಬಿ ಭಾಷಿಗರು ಮತ್ತು ಪಂಜಾಬಿ ಸಮಾಜದ ಎಲ್ಲ ವರ್ಗಗಳ ಜನರು ನೀಡಿದ ಬೆಂಬಲವು ಒಂದು ದೊಡ್ಡ ಚಿತ್ರವನ್ನು ಮೂಡಿಸುತ್ತದೆ. ಪಂಜಾಬಿನ ಗಾಯಕರು, ಕ್ರೀಡಾಳುಗಳು, ಪಂಜಾಬಿನಿಂದ ಹೋಗಿ ಜಗತ್ತಿನ ವಿವಿಧೆಡೆ ನೆಲೆಸಿದ್ದವರು-ಹೀಗೆ ಎಲ್ಲರೂ ಪಂಜಾಬಿನ ರೈತರ ಜೊತೆ ನಿಂತಿದ್ದಾರೆ. ಅಂದರೆ ಜನತೆ, ಜನತೆಯ ಜೊತೆ ನಿಂತಿದ್ದಾರೆ. ಪಂಜಾಬಿನಲ್ಲೀಗ ಹಿಂದೂ-ಮುಸ್ಲಿಮ್ ಎನ್ನಬಹುದಾದ ಯಾವ ಸನ್ನಿವೇಶವೂ ಇಲ್ಲ. ಅಲ್ಲೀಗ ಇರುವುದು ಪಂಜಾಬ್-ಪಂಜಾಬ್ ಮಾತ್ರ. ಭಾರತದೆಲ್ಲೆಡೆ ಹೀಗಾಗಿದ್ದರೆ ಎಷ್ಟು ಚೆನ್ನಾಗಿತ್ತು ! ನಾವೆಲ್ಲರೂ ಭಾರತೀಯರಾಗಿರುವ ಭಾರತ ! ಭಾರತೀಯರನ್ನು ಹಿಂದೂ-ಮುಸ್ಲಿಮ್ ಎಂದು ವಿಂಗಡಿಸಲು ಹಗಲಿರುಳೆನ್ನದೆ ಸದಾ ಸಂಚು ಹೂಡುತ್ತಿರುವ ಭಟ್ಟಂಗಿ ಮಾಧ್ಯಮಗಳು ಮತ್ತು ಐ.ಟಿ.ಸೆಲ್‌ಗಳ ಎಲ್ಲ ಕಸರತ್ತುಗಳನ್ನು ಸೋಲಿಸಿ ಬಿಡುವ ಭಾರತ! ಒಡೆಯುವವರು ಎಷ್ಟೇ ಸಕ್ರಿಯರಾಗಿದ್ದರೇನಂತೆ? ಸಂಪೂರ್ಣ ಭಾರತವು ಕಳೆದುಕೊಂಡಿದ್ದ ಹೋರಾಟದಲ್ಲಿ ಪಂಜಾಬ್ ಏಕಾಂಗಿಯಾಗಿ ಜಯ ಸಾಧಿಸಿದೆ. ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಹೋರಾಟದ ಮೊದಲ ಚರಣದ ಯಶಸ್ಸಿನ ಶ್ರೇಯವು ಪಂಜಾಬಿಗೆ ಮತ್ತು ಪಂಜಾಬಿನ ರೈತರಿಗೆ ಸಲ್ಲುತ್ತದೆ. ಹೀಗೆ, ಹಲವಾರು ನಿರಾಶೆಗಳ ಸರಣಿಯನ್ನೇ ಹೊತ್ತು ಬಂದಿದ್ದ ಈ ವರ್ಷವು ಇದೀಗ ನಮ್ಮೆಲ್ಲರಲ್ಲಿ ಹೊಸದೊಂದು ಆಶಾವಾದವನ್ನು ಚಿಗುರಿಸಿ ತೆರಳುತ್ತಿದೆ.

ಈ ವರ್ಷವು ನಮ್ಮ ಪ್ರಜಾಸತ್ತೆಯ ಮೇಲೆ ತೀವ್ರ ಪ್ರಹಾರ ನಡೆಸಿದ ವರ್ಷವೂ ಹೌದು. ಕೋವಿಡ್ - 19ನ್ನು ನೆಪವಾಗಿ ಬಳಸಿ ಹಲವು ದೇಶಗಳ ಸರಕಾರಗಳು ತಮ್ಮ ನಾಗರಿಕರ ಹಕ್ಕು, ಅಧಿಕಾರಗಳಿಗೆ ಅಂಕುಶ ಹಾಕುವ ಕೆಲಸ ಮಾಡಿವೆ. ಲಾಕ್‌ಡೌನ್‌ನಿಂದಾಗಿ ಜನತೆ ಬೀದಿಗೆ ಬರಲಾರರು ಎಂಬ ಲೆಕ್ಕಾಚಾರವು ಅವರ ಧೈರ್ಯವನ್ನು ಹೆಚ್ಚಿಸಿದೆ. ಆದರೂ ಅನೇಕ ದೇಶಗಳಲ್ಲಿ ಜನರು ಬೀದಿಗೆ ಬಂದಿದ್ದಾರೆ ಮತ್ತು ತಮ್ಮ ಹಕ್ಕು, ಅಧಿಕಾರಗಳ ಸಂರಕ್ಷಣೆಗಾಗಿ ಹೋರಾಡಿದ್ದಾರೆ. ಬೇಲಾರುಸ್‌ನಲ್ಲಿ ಚುನಾವಣೆಯ ಪ್ರಕ್ರಿಯಲ್ಲಿ ಅಕ್ರಮ ನಡೆದಾಗ ಅಲ್ಲಿಯ ಜನತೆ ಅದರ ವಿರುದ್ಧ ಒಂದು ದೀರ್ಘ ಹೋರಾಟ ನಡೆಸಿದರು. ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್‌ರನ್ನು ಸೋಲಿಸಲು ಕೋವಿಡ್ ಪಿಡುಗಿನ ನಡುವೆಯೂ ಅಲ್ಲಿಯ ಜನತೆಯ ಒಂದು ದೊಡ್ಡ ವರ್ಗ ಒಗ್ಗಟ್ಟಾಗಿ ಕೆಲಸ ಮಾಡಿತು. ಕೊನೆಗೂ ತಮ್ಮ ಪ್ರಜಾಸತ್ತೆಯನ್ನು ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ನಮ್ಮ ದೇಶದಲ್ಲೂ ಲಾಕ್‌ಡೌನ್ ಅವಧಿಯನ್ನು ಒಂದು ಅವಕಾಶವಾಗಿ ಬಳಸಿಕೊಂಡು ಅದರ ತೆರೆಮರೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನೆಲ್ಲಾ ಬದಿಗೊತ್ತಿ, ಜನತೆಯ ಮೇಲೆ ಹಲವು ನಿಯಮ, ನಿರ್ಬಂಧಗಳನ್ನು ಹೇರಲಾಯಿತು. ನಮ್ಮಲ್ಲಿ ಕೋವಿಡ್ ಸೋಂಕಿನ ಅವಧಿಯು ಜನರ ಶರೀರವನ್ನು ಬಾಧಿಸುವ ಜೊತೆಗೆ ನಮ್ಮಲ್ಲಿನ ಪ್ರಜಾಸತ್ತಾತ್ಮಕ ವಾತಾವರಣವನ್ನೂ ಸಾಕಷ್ಟು ಬಾಧಿಸಿದೆ. ನಿಜವಾಗಿ ಕೋವಿಡ್ ಸೋಂಕು ಎಷ್ಟೋ ದೇಶಗಳ ರಾಷ್ಟ್ರೀಯ ಚಾರಿತ್ರ್ಯವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ.

ಭಾರತದಲ್ಲಿ ಕೋವಿಡ್ ಸೋಂಕಿನ ಕುರಿತಾದ ಚರ್ಚೆಯನ್ನೇ ಚಪ್ಪಾಳೆ ತಟ್ಟುವುದು, ಗಂಟೆ ಬಾರಿಸುವುದು ಮುಂತಾದ ಮೂಢನಂಬಿಕೆಯ ಆಚರಣೆಗಳ ಮೂಲಕ ಆರಂಭಿಸಲಾಯಿತು. ಇದೆಲ್ಲಾ ಮೂರು ಅಥವಾ ನಾಲ್ಕು ದಿನಗಳಲ್ಲಿ ಮುಗಿಯುವ ಸಮಸ್ಯೆ ಎಂಬಂತೆ ಜನತೆಯನ್ನು ನಂಬಿಸಲಾಗಿತ್ತು. ಜನರು ಆ ದಿನಗಳನ್ನು ಉತ್ಸವದ ರೂಪದಲ್ಲಿ ಆಚರಿಸಿದರು. ಸಾಕ್ಷಾತ್ ಪ್ರಧಾನ ಮಂತ್ರಿಯವರು ಪ್ರಸ್ತುತ ಬಿಕ್ಕಟ್ಟನ್ನು ಬಗೆಹರಿಸಲು ವೈಜ್ಞಾನಿಕ ವಿಧಾನಗಳ ಬದಲು ಮೂರ್ಖ ವಿಧಾನಗಳನ್ನು ಅವಲಂಬಿಸಿದರು.

ಕೊರೋನ ಯೋಧರೆಂದು ವೈಭವೀಕರಿಸಲಾದ ವೈದ್ಯರುಗಳು ತಮ್ಮ ವೇತನಕ್ಕಾಗಿ ಮುಷ್ಕರಗಳನ್ನು ನಡೆಸಬೇಕಾಯಿತು. ವೈದ್ಯರ ಮೇಲೆ ಹಲವು ಬಗೆಯ ನಿರ್ಬಂಧಗಳನ್ನು ಹೇರಲಾಯಿತು. ಅವರಲ್ಲಿ ಅನೇಕರು ಅರ್ಧಂಬರ್ಧ ವೇತನ ಪಡೆದು ತಮ್ಮ ಸೇವೆ ಸಲ್ಲಿಸಬೇಕಾಯಿತು. ಕೊರೋನ ಪೀಡಿತರನ್ನು ಉಪಚರಿಸುತ್ತಾ ಪ್ರಾಣ ಕಳೆದುಕೊಂಡ ಹುತಾತ್ಮ ವೈದ್ಯರಿಗೆ ಸಲ್ಲಬೇಕಾದ ಪರಿಹಾರವನ್ನು ಪಾವತಿಸುವಲ್ಲಿ ತೀವ್ರ ವಿಳಂಬವಾಯಿತು. ಕೊನೆಗೆ ಈ ಕುರಿತು ಪ್ರಧಾನ ಮಂತ್ರಿಯವರೇ ಪತ್ರ ಬರೆಯಬೇಕಾಯಿತು. ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ಕೊರೋನ ವಿರುದ್ಧ ಹೋರಾಟಕ್ಕೆಂದು ಒಂದಷ್ಟು ಮಂದಿಯನ್ನು ಆರೋಗ್ಯ ಕಾರ್ಯಕರ್ತರಾಗಿ ನೇಮಿಸಲಾಯಿತು. ಆ ಬಳಿಕ ಅವರನ್ನು ವಜಾಗೊಳಿಸಲಾಯಿತು. ಅವರಿಗೆ ಸಲ್ಲಬೇಕಾಗಿದ್ದ ವೇತನವನ್ನೂ ನಿರಾಕರಿಸಲಾಯಿತು. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡಲಾರಂಭಿಸಿದಾಗ ಅವರ ಮೇಲೆ ಲಾಠಿ ಪ್ರಹಾರ ನಡೆಯಿತು. ಕ್ರಮೇಣ ದೇಶದ ಜನರು ಕೋವಿಡ್ ವಿಷಯದಲ್ಲಿ ಅಸಡ್ಡೆ ತೋರಲಾರಂಭಿಸಿ ತಮಗೆ ಆಪ್ತರಾಗಿದ್ದ ಹಲವರನ್ನು ಕಳೆದುಕೊಂಡರು. ನಾಗರಿಕರ ಮೇಲೆ ಹಲವು ಬಗೆಯ ದಂಡಗಳನ್ನು ಹೇರಲಾಯಿತು. ಆರಂಭದಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಐಸಿಯು ಘಟಕಗಳನ್ನು ಸ್ಥಾಪಿಸುವುದಾಗಿ ಮತ್ತು ವೆಂಟಿಲೇಟರ್‌ಗಳನ್ನು ಅಳವಡಿಸುವುದಾಗಿ ಹೇಳಲಾಗಿತ್ತು. ಆದರೆ ಕೆಲವು ತಿಂಗಳ ಬಳಿಕ ಈ ಕುರಿತು ಚರ್ಚೆಯೇ ಇಲ್ಲವಾಗಿ ಬಿಟ್ಟಿತು. ಹೀಗೆ ಭಾರತ ಕೊರೋನ ನಿಯಂತ್ರಣದ ವಿಷಯದಲ್ಲಿ ಪ್ರಸ್ತಾಪಯೋಗ್ಯವಾದ ಏನನ್ನೂ ಸಾಧಿಸಲು ವಿಫಲವಾಯಿತು. ನಮ್ಮ ದೇಶದ ಮಾಧ್ಯಮಗಳು ಕೂಡಾ ಕೊರೋನ ಸೋಂಕಿನ ಕುರಿತಾದ ಸುದ್ದಿ ಮತ್ತು ಚರ್ಚೆಗಳಲ್ಲಿ ವೈಜ್ಞಾನಿಕ ಧೋರಣೆ ತಾಳಲಿಲ್ಲ. ನಮ್ಮ ಹಲವು ಸುದ್ದಿ ಚಾನೆಲ್‌ಗಳು ದೇಶದ ಪ್ರಜಾಸತ್ತೆಯನ್ನು ಕೊಂದು ಬಿಡುವ ಗುತ್ತಿಗೆ ಪಡೆದುಕೊಂಡಿರುವಂತೆ ನಡೆದುಕೊಂಡವು. ಕೋಮು ಸಂಬಂಧಿ ವಿಷಯಗಳ ಹೊರತು ಬೇರಾವುದೂ ಅವರಿಗೆ ಗಮನಾರ್ಹವೆಂದು ಕಾಣಿಸಲೇ ಇಲ್ಲ.

ಈ ವರ್ಷವು ಮಾಧ್ಯಮರಂಗದ ಪತನವನ್ನು ಗುರುತಿಸಲಾದ ವರ್ಷವಾಯಿತು. ಪತನವಂತೂ ಮೊದಲೇ ನಡೆದಿತ್ತು. ಆದರೆ ಮಾಧ್ಯಮಗಳು ಸರಕಾರದ ಬೂಟಿನಡಿಯಲ್ಲಿ ಅದುಮಿರುವುದನ್ನು ಈ ಬಾರಿ ಹೆಚ್ಚು ಜನ ಕಣ್ಣಾರೆ ಕಂಡರು. 2021ರಲ್ಲಿ ಈ ಸತ್ಯವನ್ನು ಇನ್ನೂ ಹೆಚಿ್ಚನ ಜನರು ಕಾಣುವಂತಾಗಬಹುದು.

ಒಡೆಯುವವರು ಎಷ್ಟೇ ಸಕ್ರಿಯರಾಗಿದ್ದರೇನಂತೆ? ಸಂಪೂರ್ಣ ಭಾರತವು ಕಳೆದುಕೊಂಡಿದ್ದ ಹೋರಾಟದಲ್ಲಿ ಪಂಜಾಬ್ ಏಕಾಂಗಿಯಾಗಿ ಜಯ ಸಾಧಿಸಿದೆ. ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಹೋರಾಟದ ಮೊದಲ ಚರಣದ ಯಶಸ್ಸಿನ ಶ್ರೇಯವು ಪಂಜಾಬಿಗೆ ಮತು್ತ ಪಂಜಾಬಿನ ರೈತರಿಗೆ ಸಲ್ಲುತ್ತದೆ. ಹೀಗೆ, ಹಲವಾರು ನಿರಾಶೆಗಳ ಸರಣಿಯನ್ನೇ ಹೊತ್ತು ಬಂದಿದ್ದ ಈ ವರ್ಷವು ಇದೀಗ ನಮ್ಮೆಲ್ಲರಲ್ಲಿ ಹೊಸದೊಂದು ಆಶಾವಾದವನ್ನು ಚಿಗುರಿಸಿ ತೆರಳುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)