varthabharthi


ಗಲ್ಫ್ ಸುದ್ದಿ

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಇಂದು 30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರಿಂದ ಟ್ವಿಟರ್ ಅಭಿಯಾನ

ವಾರ್ತಾ ಭಾರತಿ : 2 Jan, 2021

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕ ಸೇರಿದಂತೆ ತಮ್ಮ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಶ್ವಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಜ.2ರಂದು ಸಂಜೆ 4ಕ್ಕೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿವೆ.

'ಎನ್ಆರ್ ಐ ಅಪೀಲ್ ಡೇ' #NRIappealDay ಎಂಬ ಹ್ಯಾಶ್'ಟ್ಯಾಗ್ ನೊಂದಿಗೆ ಜ.2ರಂದು ಅಂತಾರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ತೀರ್ಮಾನಿಸಿದ್ದು, ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇಮೇಲ್ ಮೂಲಕ ಬೇಡಿಕೆಯನ್ನು ಈಡೇರಿಸಲು ಕರ್ನಾಟಕ ಸರಕಾರವನ್ನು ಒತ್ತಾಯಿಸಲಿವೆ.

ಈ ಅಭಿಯಾನಕ್ಕೆ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಖತರ್, ಕುವೈತ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಒಮನ್, ಬಹರೈನ್, ಇಂಡೋನೇಶ್ಯ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಝರ್ಲ್ಯಾಂಡ್, ಘಾನ, ನ್ಯೂಝಿಲೆಂಡ್, ವೆಸ್ಟ್ ಇಂಡಿಸ್, ಹಾಂಕಾಂಗ್, ಸಿಂಗಪೂರ, ಸ್ಕಾಟ್ಲ್ಯಾಂಡ್, ನಾರ್ವೆ, ನೆದರ್ಲ್ಯಾಂಡ್, ಸೌತ್ ಕೊರಿಯಾ  ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿವೆ ಎಂದು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್ ಸಂಚಾಲಕ ಹಿದಾಯತ್ ಅಡ್ಡೂರ್ ತಿಳಿಸಿದ್ದಾರೆ.

ಅನಿವಾಸಿ ಕನ್ನಡಿಗರ ನಾಲ್ಕು ಪ್ರಮುಖ ಬೇಡಿಕೆಗಳು

1) ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಗೆ ಉಪಾಧ್ಯಕ್ಷರನ್ನ ಕೂಡಲೇ ನೇಮಿಸಬೇಕು

2) ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು.

3) ನನೆಗುದಿಗೆ ಬಿದ್ದಿರುವ ಎನ್.ಆರ್.ಕೆ. ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸುವುದು.

4) ಹೆಚ್ಚು ಅನಿವಾಸಿ ಕನ್ನಡಿಗರ ಸಾಂಧ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)