varthabharthi


ನಿಮ್ಮ ಅಂಕಣ

ಕೃಷಿ ಯೋಜನೆಗಳಿಗೆ ದೂರದೃಷ್ಟಿ ಇಲ್ಲವಾದಲ್ಲಿ ಕೃಷಿ ಕಾಯ್ದೆಗಳು ಮರೀಚಿಕೆಯಲ್ಲವೇ?

ವಾರ್ತಾ ಭಾರತಿ : 2 Jan, 2021
ಡಾ. ವಿ. ರಮೇಶ, ಸಹ ಸಂಶೋಧಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

1947ರಲ್ಲಿ ಶೇ. 50ರಷ್ಟು ಜಿಡಿಪಿ ಕೃಷಿ ರಂಗದಿಂದ ಬರುತ್ತಿತ್ತು ಮತ್ತು ಪ್ರಸ್ತುತ ಇದರ ಪ್ರಮಾಣ ಶೇ. 15-16 ಆಗಿದೆಯಾದರೂ, ಶೇ. 60ರಷ್ಟು ಜನ ಕೃಷಿರಂಗದ ಮೇಲೆಯೇ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಕೇಂದ್ರ ಸರಕಾರ ತಂದಿರುವ 3 ವಿವಾದಾತ್ಮಕ ಕೃಷಿ ಕಾಯ್ದೆಗಳು ರೈತರ ಪ್ರತಿಭಟನೆಗೆ ಮೂಲ ಕಾರಣ. ಆದರೆ, 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಎನ್‌ಡಿಎ ಸರಕಾರದ ಚುನಾವಣಾ ಪ್ರಣಾಳಿಕೆಯ ಅಶ್ವಾಸನೆಗಳು ಮತ್ತು ರೈತರಿಗಾಗಿ ತಂದ ಯೋಜನೆಗಳು ಫಲಿಸಿದ್ದಾವೆಯೇ? ರೈತರ ನಂಬಿಕೆಗೆ ಅರ್ಹವೇ?

1943ರ ಬೆಂಗಾಲ್ ಕ್ಷಾಮದಿಂದಾಗಿ ದೇಶದಲ್ಲಿ ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಸತ್ತವರ ಸಂಖ್ಯೆ ಸುಮಾರು 30 ಲಕ್ಷ. 1965, 1966ರಲ್ಲಿ ಮಾನ್ಸೂನ್ ಮಳೆಯಾಗದ ಕಾರಣ ಆಹಾರ ಧಾನ್ಯಗಳ ಕೊರತೆಯಿಂದ ಮತ್ತು ಕುಂದಿದ ಆರ್ಥಿಕತೆಯಿಂದಾಗಿ, ಭಾರತಕ್ಕೆ ವಿಶ್ವ ಮಾರ್ಕೆಟ್‌ನಲ್ಲಿ ಆಹಾರ ಕೊಳ್ಳಲು ಸಹ ಸಾಧ್ಯವಿರಲಿಲ್ಲ. ಇಂತಹ ಹಸಿವಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅಮೆರಿಕ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಅಲಬಾಮದ ಪತ್ರಿಕೆಯೊಂದು ‘‘ಇಂಡಿಯಾದ ಹೊಸ ನಾಯಕರೊಬ್ಬರು ಭಿಕ್ಷಾಟನೆಗೆ ಬಂದಿದ್ದಾರೆ’’ ಎಂದು ಬರೆದಿತ್ತು. ಇದು ಅಂದಿನ ಭಾರತದ ಪರಿಸ್ಥಿತಿ. ಇವೆಲ್ಲವನ್ನು ಮೆಟ್ಟಿ ನಿಂತ ಭಾರತ ಎದೆಗುಂದದೆ ಸ್ವಾವಲಂಬನೆಯ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿತು.

ಹೌದು, 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗುವ ಮುನ್ನವೇ ಹಸಿರು ಕ್ರಾಂತಿ (ಆಹಾರ ಧಾನ್ಯಗಳು), ದುಂಡು ಕ್ರಾಂತಿ (ಆಲೂಗಡ್ಡೆ), ಶ್ವೇತ ಕ್ರಾಂತಿ (ಹಾಲು ಉತ್ಪಾದನೆ), ಹಳದಿ ಕ್ರಾಂತಿ (ಎಣ್ಣೆ ಬೀಜ ಉತ್ಪಾದನೆ), ಚಿನ್ನದ ಕ್ರಾಂತಿ (ಹಣ್ಣು ಉತ್ಪಾದನೆ), ಕೆಂಪು, ಬ್ರೌನ್ ಮತ್ತು ಸಿಲ್ವರ್ ಮುಂತಾದ ಕ್ರಾಂತಿಗಳನ್ನು ಮಾಡಿ ಇಂದು ಪ್ರಪಂಚ ಭೂಪಟದಲ್ಲಿ ಹಾಲು, ದ್ವಿದಳ ಧಾನ್ಯಗಳು ಮತ್ತು ಸೆಣಬು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಗೋಧಿ, ಭತ್ತ, ಕಬ್ಬು, ಶೇಂಗಾ, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವುದಲ್ಲದೆ, ಹಲವಾರು ದೇಶಗಳಿಗೆ ಉತ್ಪನ್ನಗಳನ್ನು ರಪ್ತು ಮಾಡುತ್ತಿದೆ. ಈ ಎಲ್ಲಾ ಕ್ರಾಂತಿಗಳ ಸಾರಥಿ ರೈತ ಪ್ರಸ್ತುತ ದೇಶದ ರಾಜಧಾನಿಯಲ್ಲಿ ಪ್ರತಿಭಟನೆಗೆ ಇಳಿದಿದ್ದಾನೆ. ಅದು ಆತನ ಸಂವಿಧಾನಬದ್ದ ಹಕ್ಕು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ ಈ ದೇಶದ ಕೆಲವು ದುಷ್ಟ ಶಕ್ತಿಗಳು ರೈತರನ್ನು ಖಾಲಿಸ್ಥಾನಿ, ದೇಶದ್ರೋಹಿ, ನಕಲಿ, ನಕ್ಸಲ್ ಮುಂತಾದ ಹೆಸರುಗಳಿಂದ ಕರೆಯುವ ಮಟ್ಟಕ್ಕೆ ತಲುಪಿವೆೆ.

1947ರಲ್ಲಿ ಶೇ. 50ರಷ್ಟು ಜಿಡಿಪಿ ಕೃಷಿ ರಂಗದಿಂದ ಬರುತ್ತಿತ್ತು ಮತ್ತು ಪ್ರಸ್ತುತ ಇದರ ಪ್ರಮಾಣ ಶೇ. 15-16 ಆಗಿದೆಯಾದರೂ, ಶೇ. 60ರಷ್ಟು ಜನ ಕೃಷಿರಂಗದ ಮೇಲೆಯೇ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಕೇಂದ್ರ ಸರಕಾರ ತಂದಿರುವ 3 ವಿವಾದಾತ್ಮಕ ಕೃಷಿ ಕಾಯ್ದೆಗಳು ರೈತರ ಪ್ರತಿಭಟನೆಗೆ ಮೂಲ ಕಾರಣ. ಆದರೆ, 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಎನ್‌ಡಿಎ ಸರಕಾರದ ಚುನಾವಣಾ ಪ್ರಣಾಳಿಕೆಯ ಅಶ್ವಾಸನೆಗಳು ಮತ್ತು ರೈತರಿಗಾಗಿ ತಂದ ಯೋಜನೆಗಳು ಫಲಿಸಿದ್ದಾವೆಯೇ? ರೈತರ ನಂಬಿಕೆಗೆ ಅರ್ಹವೇ? ಎಂದು ಎಳೆ ಎಳೆಯಾಗಿ ನೋಡುವುದಾದರೆ.

ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಲಿಲ್ಲ:

2014ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಚಾರದಲ್ಲಿ ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಲಾಗುವುದು ಮತ್ತು ಬೆಂಬಲ ಬೆಲೆಯನ್ನು ವರದಿಯಂತೆ ನೀಡಲಾಗುವುದೆಂದು ಪ್ರಚಾರ ಮಾಡಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಸ್ವಾಮಿನಾಥನ್ ವರದಿ ಜಾರಿ ಮಾಡಲು ಸಾಧ್ಯವಿಲ್ಲವೆಂದು, ಸುಪ್ರೀಂ ಕೋರ್ಟಿನಲ್ಲಿ ಅಫಿದವಿತ್‌ನ್ನು ಸಲ್ಲಿಸಿತು. ಆದರೆ, ಸುಳ್ಳು ಆಶ್ವಾಸನೆ ಏಕೆ ನೀಡಬೇಕಿತ್ತು ಎಂಬ ಪ್ರಶ್ನೆಗೆ ಸರಕಾರ ಸರಿಯಾಗಿ ಉತ್ತರ ನೀಡಿಲ್ಲ. ಸ್ವಾಮಿನಾಥನ್ ವರದಿಯಲ್ಲಿರುವ ಬೆಂಬಲ ಬೆಲೆಯನ್ನೇ ಮುಗಿಸಲು ಹೊರಟಿರುವುದು ರೈತರ ಪ್ರತಿಭಟನೆಗೆ ಮೂಲ ಕಾರಣ. 2015ರಲ್ಲಿ ‘ಪ್ರಧಾನ್ ಮಂತ್ರಿ ಕೃಷಿ ಸಂಚಾಯಿ ನೀರಾವರಿ ಯೋಜನೆ’ಯನ್ನು ತರಲಾಯಿತು. ಇದರ ಉದ್ದೇಶ ರೈತರ ಮಾನ್ಸೂನ್ ಮಳೆಯಾಶ್ರಯವನ್ನು ತಪ್ಪಿಸುವುದು ಮತ್ತು ನೀರಾವರಿ ಕೃಷಿಯನ್ನು ಹೆಚ್ಚಿಸುವುದು. ರೂ. 50,000 ಕೋಟಿಗಳ ಯೋಜನೆಯು 8,000:42,000 ಕೋಟಿ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗಿತ್ತು. ಪಾರ್ಲಿಮೆಂಟರಿ ಸ್ಟಾಂಡಿಂಗ್ ಕಮಿಟಿಯ ವರದಿಯ ಪ್ರಕಾರ(2018) ಮತ್ತು ಸಿಎಜಿ ಪ್ರಕಾರ ಕೇವಲ ಶೇ. 10ರಷ್ಟು ಯೋಜನೆ ಮಾತ್ರ ಅನುಷ್ಠಾನವಾಗಿದೆ, ಅಂದರೆ ಯೋಜನೆ ವಿಫಲವಾಗಿದೆ.

ಬೆಳೆ ವಿಮೆ:

2011-12ರಿಂದ ಸರಕಾರಿ ಸ್ವಾಮ್ಯದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಬೆಳೆ ವಿಮೆ ಯೋಜನೆಯ ಸರಕಾರಿ ಕೃಷಿ ವಿಮೆ ಕಂಪೆನಿಯು ರೈತರಿಂದ ವಿಮೆಯ ಕಂತನ್ನು ಪಡೆದು ಬೆಳೆಯ ನಂತರ ವಿಮೆಗಳನ್ನು ನೀಡುತ್ತಿತ್ತು. ಕೆಲವು ಸಲ ವಿಮೆಯ ಮೊತ್ತ ಅಧಿಕವಾಗಿ ಕಂಪೆನಿಗೆ ಬರಿಸಲು ಹೊರೆಯಾಗುತ್ತಿತ್ತು, ಅಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉಳಿದ ಮೊತ್ತವನ್ನು ಬರಿಸಿದ್ದವು. 2013ರಲ್ಲಿ ಯುಪಿಎ ಸರಕಾರ ವಿಮೆ ಯೋಜನೆಯನ್ನು ರಾಷ್ಟ್ರೀಯ ಬೆಳೆ ವಿಮೆ ಕಾರ್ಯಕ್ರಮವನ್ನಾಗಿ ಪರಿವರ್ತಿಸಿತು, ಅದರೆ ಅದು ಕಾರ್ಯರೂಪಕ್ಕೆ ಬಂದದ್ದು ಮಾತ್ರ 2015-16ರಿಂದ. ನಂತರ ಎನ್‌ಡಿಎ ಸರಕಾರ ‘ಪಿಎಮ್ ಫಸಲ್ ಬಿಮಾ ಯೋಜನೆ’ ಎಂದು ಮರುನಾಮಕರಣ ಮಾಡಿ, ಖಾಸಗಿಯವರಿಗೆ ಆಹ್ವಾನ ಮಾಡಿತು. 2017ರ ‘ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ)’ ಅಧ್ಯಯನದ ವರದಿಯ ಪ್ರಕಾರ, ಎಲ್ಲಾ ವಿಮೆ ಕಂಪೆನಿಗಳು ರೂ. 15,891 ಕೋಟಿ ವಿಮೆ ಕಂತಿನ ಹಣವನ್ನು ರೈತರಿಂದ ಪಡೆದಿದ್ದರೆ, ರೂ. 5,962 ಕೋಟಿ ಹಣವನ್ನು ಮಾತ್ರ ರೈತರು ವಿಮೆಯನ್ನಾಗಿ ವಾಪಸು ಪಡೆದಿದ್ದರು ಅಂದರೆ ಸುಮಾರು 10,000 ಕೋಟಿ ರೂ. ಕಂಪೆನಿಗಳಿಗೆ ಲಾಭವಾಗಿತ್ತು.! 2014-15ರಲ್ಲಿ ಶೇ. 14ರಷ್ಟು ರೈತರ ವಿಮೆ ಸಂದಾಯವಾಗಿಲ್ಲ. ಆದರೆ 2015-16ರಲ್ಲಿ ಇದರ ಪ್ರಮಾಣ ಶೇ. 37ಕ್ಕೆ ತಲುಪಿತ್ತು. ‘ಕಣ್ಣನ್ ಕಸ್ತೂರಿ’ ಎಂಬ ಸ್ವತಂತ್ರ ಸಂಸ್ಥೆಯ ಸಂಶೋಧನಾ ಅಧ್ಯಯನದ (2019) ಪ್ರಕಾರ ಹೊಸ ಯೋಜನೆಯಲ್ಲಿ ವಿಮೆಯು ಖಾಸಗಿ ಕಂಪೆನಿಗಳಿಗೆ ಅಧಿಕ ಲಾಭ ನೀಡಿದ್ದು ಫಲಾನುಭವಿ ರೈತರ ಸಂಖ್ಯೆ ಮತ್ತು ವಿಮೆಯಲ್ಲಿ ಒಟ್ಟು ಕೃಷಿ ಭೂಮಿಯ ವಿಸ್ತೀರ್ಣವು ಸಹ ಕುಗ್ಗಿದೆ ಎಂದಿತ್ತು. ಅಲ್ಲದೆ ಮೊದಲು ವಿಮೆ ಕಂಪೆನಿ ಶೇ. 12ರಷ್ಟು ಹಣವನ್ನು ಹಿಡಿದು ಮಿಕ್ಕಿದ್ದನ್ನು ರೈತರಿಗೆ ನೀಡುತ್ತಿತ್ತು. ಈಗ ಅದರ ಪ್ರಮಾಣ ಶೇ. 44 ಏರಿಕೆಯಾಗಿದೆ. 2014-15ರಲ್ಲಿ ಶೇ. 27ರಷ್ಟು ರೈತರು ವಿಮೆ ಹೊಂದಿದ್ದರೆ 2017-18ರಲ್ಲಿ ಇದರ ಪ್ರಮಾಣ ಶೇ. 26 ಮಾತ್ರ.

2015ರ ವಿಮೆ ಯೋಜನೆಯ ಪ್ರಾರಂಭದಲ್ಲಿ ಬ್ಯಾಂಕುಗಳಿಂದ ಮತ್ತು ಕೋ ಆಪರೇಟೀವ್ ಸೊಸೈಟಿಗಳಿಂದ ಸಾಲ ಪಡೆಯುವ ರೈತರ ಖಾತೆಗಳಿಂದ ವಿಮೆ ಕಂಪೆನಿಗಳಿಗೆ ಕಡ್ಡಾಯವಾಗಿ ವಿಮೆ ಕಂತಿನ ಹಣ ಹೋಗುತ್ತಿತ್ತು ಮತ್ತು ರೈತರಿಗೆ ಅರಿವಿಲ್ಲದೆಯೇ ವಿಮೆಯಲ್ಲಿ ನೋಂದಾಯಿತರಾಗಿರುತ್ತಿದ್ದರು. ಇದನ್ನು ಖಂಡಿಸಿ 2018ರಲ್ಲಿ ಗುಜರಾತ್ ಆರೆಸ್ಸೆಸ್‌ನ ‘ಭಾರತೀಯ ಕಿಸಾನ್ ಸಂಘ’ವು ನ್ಯಾಯಾಲಯದಲ್ಲಿ ಸಾರ್ವಜನಿಕ ಮೊಕದ್ದಮೆಯನ್ನು ಹೂಡಿತ್ತು. ಒಟ್ಟಾರೆ ಖಾಸಗಿ ಕಂಪೆನಿಗಳಿಗೆ (ರಿಲಯನ್ಸ್, ಎಸ್ಸಾರ್) ಲಾಭ ದೊರೆಯಿತು. ಇದನ್ನು ಖಂಡಿಸಿದ ಕೃಷಿ ತಜ್ಞ ಪಿ. ಸಾಯಿನಾಥ್ 2018ರಲ್ಲಿ ‘‘ಎನ್‌ಡಿಎ ಸರಕಾರದ ಬೆಳೆ ವಿಮೆ ಕಾರ್ಯಕ್ರಮವು ರಫೇಲ್‌ಗಿಂತ ದೊಡ್ಡ ಹಗರಣ’’ ಎಂದಿದ್ದರು. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ, ಹೊಸ ಯೋಜನೆಯಿಂದ ರೈತರಿಗೆ ಅತಿಯಾದ ನಷ್ಟವಾಗಿದ್ದು, ಖಾಸಗಿ ಕಂಪೆನಿಗಳು ಹೆಚ್ಚು ಲಾಭ ಪಡೆದಿರುವುದು ಖಚಿತ.

ಆಪರೇಷನ್ ಗ್ರೀನ್ಸ್:

2018ರ ಬಜೆಟ್‌ನಲ್ಲಿ ಆರ್ಥಿಕ ಮಂತ್ರಿ ದೇಶದಲ್ಲಿನ ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ದೆಯನ್ನು ಸಂಗ್ರಹಿಸಿಡಲು, ರೂ. 500 ಕೋಟಿ ವೆಚ್ಚದಲ್ಲಿ ಶೈತ್ಯಾಗಾರಗಳನ್ನು ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಘೋಷಿಸಿದ್ದರು. ನಂತರದಲ್ಲಿ ರೂ. 162 ಕೋಟಿಯನ್ನು ಬಿಡುಗಡೆ ಮಾಡಲು ಘೋಷಿಸಲಾಯಿತಾದರೂ, ಇದುವರೆಗೂ ಸರಿಯಾದ ವಿವರಗಳಿಲ್ಲ, ಅಂದರೆ ಯೋಜನೆ ವಿಫಲವಾಯಿತಲ್ಲವೇ?

ಕಬ್ಬು ಬೆಳೆಗಾರರ ಹಣ ಸಂದಾಯ:

2017ರ ಉತ್ತರ ಪ್ರದೇಶದ ವಿಧಾನಸಭೆಯ ಚುನಾವಣಾ ಸಂದರ್ಭದಲ್ಲಿ ಮೋದಿ ‘‘ಕಬ್ಬು ಬೆಳೆಯುವ ರೈತರ ಹಣವನ್ನು ಕಾರ್ಖಾನೆಗಳಿಂದ ಕೇವಲ 14 ದಿನಗಳಲ್ಲೇ ನೀಡುವಂತೆ ಮಾಡಲಾಗುವುದು’’ ಎಂದಿದ್ದರು. ಪ್ರಸ್ತುತ ಸುಮಾರು 14,000 ಕೋಟಿ ರೂ. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಸಂದಾಯವಾಗಿಲ್ಲ ಎಂದು ‘ಕಿಸಾನ್ ಕೇತಿ ಸಂಘ’ದ ಅಧ್ಯಕ್ಷ ಚೌದರಿ ಪುಷ್ಪೇಂದ್ರ ಸಿಂಗ್ ನುಡಿದಿದ್ದಾರೆ (2020 ಜುಲೈ). ಕಬ್ಬು ಬೆಳೆಗಾರರು ಕೂಡಾ ದಿಲ್ಲಿಯ ಪ್ರಸ್ತುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಗಮನಾರ್ಹ. ಮುಂದುವರಿದು, ನರೇಗ ಯೋಜನೆಯನ್ನು ಕೃಷಿಗೂ ಸಹ ವಿಸ್ತರಿಸಲಾಗುವುದು ಎಂದು 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು ಆದರೆ ಅದು ಹಾಗೇ ಉಳಿದುಹೋಯಿತು.

ರಾಷ್ಟ್ರೀಯ ಏಕರೀತಿಯ ಮಾರ್ಕೆಟ್ ಸ್ಥಾಪನೆ:

2016ರಲ್ಲಿ ಕೃಷಿ ಸಹಕಾರ ಮಾರಾಟ ಮಂಡಳಿಯನ್ನು ಏಕ ರೀತಿಯ ಮಾರ್ಕೆಟ್ ವ್ಯವಸ್ಥೆಯಲ್ಲಿ ತರಲು ‘ಇಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ (eNAMeNAM)’ ಎಂಬ ಆನ್‌ಲೈನ್ ವ್ಯಪಾರ ವ್ಯವಸ್ಥೆಯನ್ನು ತರಲಾಯಿತು. 2019ರ ಲೋಕಸಭೆಯಲ್ಲಿ ಕೃಷಿ ಸಚಿವಾಲಯವು ನೀಡಿದ ಅಂಕಿ ಅಂಶಗಳ ಪ್ರಕಾರ 1.64 ಕೋಟಿ ರೈತರು ಮತ್ತು 1.24 ಲಕ್ಷ ವ್ಯಾಪಾರಿಗಳು ನಲ್ಲಿ ನೋಂದಣಿ ಮಾಡಿದ್ದು, ಇದರಲ್ಲಿ ಶೇ. 49 ನೋಂದಣಿ ರೈತರು ಮಾತ್ರ ಲಾಭ ಹೊಂದಿದ್ದಾರೆ. ಆದರೆ 2011ರ ಜನಗಣತಿ ಪ್ರಕಾರ ದೇಶದಲ್ಲಿ 11.89 ಕೋಟಿ ಕೃಷಿಕರು ಮತ್ತು 26.31 ಕೋಟಿ ಕೃಷಿ ಕಾರ್ಮಿಕರು ಇದ್ದಾರೆ. ಯೋಜನೆ ವೈಫಲ್ಯಕ್ಕೆ ಕಾರಣ ಯಾರು? ಸರಕಾರವೋ ಅಥವಾ ರೈತರೋ?

2018ರ ಬಜೆಟ್‌ನಲ್ಲಿ ಕೇಂದ್ರವು 22,000 ಗ್ರಾಮೀಣ ಮಾರುಕಟ್ಟೆಗಳನ್ನು ಸಣ್ಣ ಕೃಷಿ ಮಾರುಕಟ್ಟೆಗಳಾಗಿ ಪರಿವರ್ತಿಸಲು ಘೋಷಿಸಿತ್ತು, ಅದರೆ ಈವತ್ತಿಗೂ ಒಂದು ಮಾರ್ಕೆಟ್ ಕೂಡ ಸ್ಥಾಪನೆಯಾಗಿಲ್ಲ (30 ನವೆಂಬರ್ 2020) ಎಂದು ‘ದಿ ವೈರ್’ ಪತ್ರಿಕೆಯು ಆರ್‌ಟಿಐ ಮೂಲಕ ಗಳಿಸಿರುವ ಮಾಹಿತಿಯನ್ನು ವರದಿ ಮಾಡಿದೆ.

ಪಿಎಂ ಕಿಸಾನ್ ಯೋಜನೆ:

ಎಲ್ಲಾ ಕೃಷಿ ಯೋಜನೆಗಳು ವಿಫಲವಾದಾಗ 2019ರ ಲೋಕಸಭೆಯ ಚುನಾವಣೆಗೂ ಮುನ್ನ ರೈತರ ನಂಬಿಕೆಯನ್ನು ಗಳಿಸುವ ನೆಪದಲ್ಲಿ ಒಂದು ಸಮಿತಿಯನ್ನು ರಚಿಸಿ ರೈತರಿಗಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಒಂದು ಯೋಜನೆಯನ್ನು ರೂಪಿಸಲು ಸಮಿತಿಗೆ ಸೂಚಿಸಿತ್ತು ಕೇಂದ್ರ ಸರಕಾರ. ಸಮಿತಿಯು 8 ರಾಜ್ಯಗಳನ್ನು ಸುತ್ತಿದ ನಂತರ ತೆಲಂಗಾಣ (ಎಕರೆಗೆ ರೂ. 5,000), ಒಡಿಶಾ ಮತ್ತು ಜಾರ್ಕಂಡ್ (ಎಕರೆಗೆ ರೂ. 4,000)ನಲ್ಲಿ ಚಾಲ್ತಿಯಲ್ಲಿದ್ದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಭೂಮಿಯನ್ನು ಹೊಂದಿರುವ ಆಧಾರದ ಮೇಲೆ ವಾರ್ಷಿಕ ಖಾತೆಗೆ ಹಣವನ್ನು ಸಂದಾಯ ಮಾಡುವ ಯೋಜನೆಯನ್ನು ಗಮನಿಸಿತು. ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿತು. ತಕ್ಷಣ ಎಚ್ಚೆತ್ತ ಸರಕಾರ ಪಿಎಮ್ ಕಿಸಾನ್‌ನ್ನು ಘೋಷಿಸಿಯೇ ಬಿಟ್ಟಿತು(ವಾರ್ಷಿಕ 6,000 ರೂ.). ಇದರ ಮೊದಲ ಕಂತನ್ನು ಕೂಡಾ ಚುನಾವಣೆಗೂ ಮೊದಲೇ ನೀಡಲಾಯಿತು. ಅದರ ಫಲದಿಂದಾಗಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತೆಂಬುದರಲ್ಲಿ ಅನುಮಾನವಿಲ್ಲ. ರೈತರ ದುಡ್ಡನ್ನು ರೈತರಿಗೆ ನೀಡಿ ಅಧಿಕಾರ ಪಡೆದದ್ದು ವಿಪರ್ಯಾಸವೇ ಸರಿ. ರಂಗರಾಜನ್ ವರದಿಯ ಪ್ರಕಾರ ಗ್ರಾಮೀಣ ಭಾಗದ ಬಡತನ ಎಂದರೆ 5 ಜನರ ಸಂಸಾರಕ್ಕೆ ಮಾಸಿಕ ರೂ. 4,860 ವೆಚ್ಚ ತಗಲುತ್ತದೆ. ಆದರೆ ಕೇಂದ್ರದ ಪಿಎಂ ಕಿಸಾನ್ ಯೋಜನೆಯು ಕೇವಲ ಮಾಸಿಕ ರೂ. 500 ಮಾತ್ರ ನೀಡುತ್ತದೆ. ಇದು ಬಡತನ ನಿರ್ಮೂಲನಾ ಯೋಜನೆಯೋ ಅಥವಾ ಕೃಷಿ ಆದಾಯ ಹೆಚ್ಚಿಸುವ ಯೋಜನೆಯೋ ಗೊತ್ತಿಲ್ಲ, ಏಕೆಂದರೆ ನಬಾರ್ಡ್‌ನ 2016-17ರ ವರದಿಯ ಪ್ರಕಾರ ಒಂದು ಸಾಮಾನ್ಯ ಕೃಷಿ ಸಂಸಾರದ ಸಾಲ ರೂ. 1,04,602 ಆದರೆ ಸರಕಾರ ನೀಡುತ್ತಿರುವುದು ಕೇವಲ 6,000 ರೂ. ಇದಲ್ಲದೆ ಯೋಜನೆಯಲ್ಲಿ ಸುಮಾರು 14.5 ಕೋಟಿ ರೈತರು ಫಲಾನುಭವಿಗಳಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಆದರೆ ಸರಕಾರದ ವೆಬ್‌ಸೈಟ್‌ನಲ್ಲಿ 12 ಕೋಟಿ ರೈತರು ನೋಂದಾಯಿತರಾಗಿದ್ದರು.

2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ಸುಮಾರು 12 ಕೋಟಿ ರೈತರಿಗೆ ವಾರ್ಷಿಕ ರೂ. 75,000 ಕೋಟಿ ಲೆಕ್ಕದಲ್ಲಿ ಹಣವನ್ನು ನೀಡಲಾಗುತ್ತಿದ್ದು, ಭೂಮಿ ಇಲ್ಲದ ಮತ್ತು ಬಾಡಿಗೆ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಕೈಬಿಡಲಾಗಿದೆ. ಇವರಲ್ಲಿ ಅನೇಕರು ಹಿಂದುಳಿದವರು ಮತ್ತು ಶೋಷಿತ ವರ್ಗಗಳು. ಇವರ ಪಾಡೇನು.? 2020ಕ್ಕೆ ರೈತರ ಆದಾಯ ದ್ವಿಗುಣ ಮಾಡಲಾಗುವುದು ಎಂದು ರೈತರ ಖಾತೆಗೆ ಹಣ ಹಾಕಲಾಗುತ್ತಿದೆ. ಇದರ ಬದಲು ಸರಿಯಾದ ಬೆಂಬಲ ಬೆಲೆ ನೀಡಬಹುದಲ್ಲವೇ?

ಸಾಲ ಮನ್ನಾ:

ನ್ಯಾಷನಲ್ ಸ್ಯಾಂಪಲ್ ಸರ್ವೇ ಮಾಹಿತಿಯ ಪ್ರಕಾರ ಭಾರತದ ರೈತನ ಸರಾಸರಿ ಬ್ಯಾಂಕ್ ಸಾಲ ರೂ. 47,000 ಮತ್ತು ಸಣ್ಣ ಮತ್ತು ಮಧ್ಯಮ ರೈತರ ಸಾಲವು 31,000-54,000. ಸುಮಾರು ಶೇ. 52 ಕೃಷಿಕ ಸಂಸಾರಗಳು ಸಾಲವನ್ನು ಮಾಡಿದ್ದು ಇದರ ಮೊತ್ತ ಸುಮಾರು ರೂ. 1 ಲಕ್ಷ ಕೋಟಿ. ಇದನ್ನು ಮನ್ನಾ ಮಾಡಲು ಕೇಂದ್ರ ಸರಕಾರದಿಂದ ಆಗುವುದಿಲ್ಲ. ಆದರೆ ಕಾರ್ಪೊರೇಟ್‌ನ ಉದ್ಯಮಿಗಳ ಸುಮಾರು 8 ಲಕ್ಷ ಕೋಟಿ ಸಾಲ ಬಿಟ್ಟುಬಿಡಲಾಗಿದೆ ಎಂದು ಕಾಂಗ್ರೆಸ್ 2020ರಲ್ಲಿ ದೂರಿದೆ. ಆದರೆ ಪಿಎಮ್ ಕಿಸಾನ್ ಯೋಜನೆಯಲ್ಲಿ ಎಕರೆಗೆ 6,000 ಲೆಕ್ಕದಲ್ಲಿ ವಾರ್ಷಿಕ 72,000 ಕೋಟಿ ತಗಲುತ್ತದೆ. ಸರಕಾರವೇಕೆ ಸಾಲ ಮನ್ನಾ ಘೋಷಿಸಬಾರದು?

ರೈತರ ಆದಾಯ ದ್ವಿಗುಣ 2022ರಿಂದ 2024ಕ್ಕೆ ಶಿಪ್ಟ್:

2016ರಲ್ಲಿ ಕೇಂದ್ರ ಸರಕಾರವು ಒಂದು ಸಮಿತಿಯನ್ನು ರಚಿಸಿದೆ. ಈ ಸಮಿತಿಯು 2018ರಲ್ಲಿ ವರದಿಯನ್ನು ಸಲ್ಲಿಸಿ 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಮಾಹಿತಿ ನೀಡಿತ್ತು. ಆದರೆ ಕೇಂದ್ರ ಸರಕಾರವೇ 2020ರಲ್ಲಿ ಪ್ರಕಟಿಸಿರುವ ‘ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ’ ಎಂಬ ಕಿರು ಹೊತ್ತಿಗೆಯಲ್ಲಿ ತಿಳಿಸಿರುವಂತೆ ಮತ್ತು ಸ್ವತಃ ರೈತರ ಆದಾಯ ದ್ವಿಗುಣ ಸಮಿತಿಯ ಅಧ್ಯಕ್ಷರೂ ಆದಂತಹ ಡಾ. ಅಶೋಕ್ ದಳವಾಯಿ ತಿಳಿಸಿರುವಂತೆ ರೈತರ ಆದಾಯ ದ್ವಿಗುಣದ ಅವಧಿ 2022ರಿಂದ 2024ಕ್ಕೆ ಶಿ್‌ಟ ಆಗಿದೆಯಂತೆ. ವರದಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಹೇಳಿರುವ ತಜ್ಞರು, ದೇಶದಲ್ಲಿಯೇ ಅಧಿಕ ರೈತರು ಆತ್ಮಹತ್ಯೆ ಕಂಡಿರುವ ವಿದರ್ಭದಲ್ಲಿ ನೆಲೆಸಿರುವ ಸುಭಾಷ್ ಪಾಳೇಕರ್‌ರವರ ಪಾರಂಪರಿಕ ಕೃಷಿಯನ್ನು ಮಾಡಲು ಸಲಹೆ ಕೊಟ್ಟಿದ್ದಾರೆ. ಭಾರತ ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡಮಿಯ ಹಲವು ವಿಜ್ಞಾನಿಗಳು ಪತ್ರದ ಮೂಲಕ ಪ್ರಧಾನಿಗೆ, ಸುಭಾಷ್ ಪಾಳೇಕರ್ ಕೃಷಿ ವೈಜ್ಞಾನಿಕವಾಗಿ ಯೋಗ್ಯವಲ್ಲವೆಂದೂ, ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದೂ ಹೇಳಿದ್ದರು. ಆದರೆ, ಪ್ರಧಾನಿಗಳು ಸಂಶೋಧನೆಯ ಅನುಮೋದನೆಯೇ ಇಲ್ಲದ ಕೃಷಿಯ ಬಗ್ಗೆ ವಿಶ್ವಸಂಸ್ಥೆಯು ಹಮ್ಮಿಕೊಂಡ ಸಮಾವೇಶದಲ್ಲಿ (14 ನೇ ವಿಶ್ವಸಂಸ್ಥೆಯ ಸಭೆಯಲ್ಲಿ) ಪ್ರಸ್ತಾಪ ಮಾಡಿದ್ದರು. 2019ರಲ್ಲಿ ‘ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರೀಸರ್ಚ್’ ಸಂಶೋಧನಾ ಸಂಸ್ಥೆಯು ಬಿಹಾರದ ಕೃಷಿಯ ಬಗ್ಗೆ ಒಂದು ಸಂಶೋಧನಾ ವರದಿಯನ್ನು ಮಾಡಿದೆ. 2006ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿತು. ಪರಿಣಾಮ ರೈತರ ಆದಾಯವು 2007 ರಿಂದ 2010ರ ವರೆಗೂ ಏರಿತಾದರೂ ಆನಂತರ ಇಳಿಮುಖವಾಗುತ್ತಾ ಬಂದಿದೆ (2020). ಮಾರುಕಟ್ಟೆಯ ದರಗಳಲ್ಲಿ ಏರುಪೇರು, ಮೊದಲಿಗೆ ಬೆಳೆಯುತ್ತಿದ್ದ ಕೃಷಿ ಜಿಡಿಪಿ 2000-08ರಲ್ಲಿ ಶೇ. 2ರಷ್ಟಿತ್ತು. ನಂತರ 2008-2011ವರೆಗೂ ಶೇ. 3.1 ಆಗಿತ್ತು ಆದರೆ 2012-2017ವರೆಗೂ ಇಳಿಮುಖವಾಗಿ ಶೇ. 1.3 ಆಗಿದೆ. ಅಲ್ಲದೆ 2002ರಲ್ಲಿ 79.49 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ಪ್ರಮಾಣವು ಈಗ 76.77 ಲಕ್ಷ ಹೆಕ್ಟೇರ್‌ಗೆ ಬಂದಿದೆ ಮತ್ತು ಎಲ್ಲಾ ಬೆಳೆಗಳನ್ನು ಬಿಟ್ಟು ರೈತರು ಜೋಳ, ಕಬ್ಬು ಬೆಳೆಯಲು ಹೊರಟಿದ್ದಾರೆ. ಅಂದರೆ ಏಕ ರೀತಿಯ ಬೆಳೆಗೆ ಕಾರಣವಾಗಿದೆ.

ಬೆಂಬಲ ಬೆಲೆಯನ್ನು ಬಿಹಾರದಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ಸರಕಾರ ರೈತರಿಂದ ಉತ್ಪನ್ನವನ್ನು ಕೊಳ್ಳಲಿಲ್ಲ. ಗೋಧಿಗೆ ಕ್ವಿಂಟಾಲ್ ಬೆಂಬಲ ಬೆಲೆ ರೂ. 1,760 ಇದ್ದರೆ ಮಾರ್ಕೆಟ್ ಬೆಲೆ 600-700, ಭತ್ತ ಬೆಂಬಲ ಬೆಲೆ ರೂ. 1,868 ಇದ್ದರೆ ಮಾರ್ಕೆಟ್ ಬೆಲೆ 900-1000 ಮತ್ತು ಜೋಳಕ್ಕೆ ಬೆಂಬಲ ಬೆಲೆ ರೂ. 1,850 ಇದ್ದರೆ ಮಾರ್ಕೆಟ್ ಬೆಲೆ 1,000-1,300 ಆಗಿತ್ತು ಎಂದು ವರದಿ ಹೇಳಿದೆ. ಖಾಸಗಿಯವರು ಕಡಿಮೆ ಬೆಲೆಗೆ ಧಾನ್ಯಗಳನ್ನು ಕೊಳ್ಳುತ್ತಾರೆ, ಶೈತ್ಯಾಗರಗಳಿಲ್ಲ, ದಲ್ಲಾಳಿಗಳು, ಮೋಸ ಮತ್ತು ಸರಕಾರಿ ಮಂಡಿಗಳು ಸಹ ಹಾಳಾಗಿದ್ದಾವೆ, ಹೀಗೆ ಸುಮಾರು ಶೇ. 50ರಷ್ಟು ರೈತರು ಹಾಕಿರುವ ಬಂಡವಾಳವನ್ನು ಸಹ ಪಡೆಯಲು ಆಗುತ್ತಿಲ್ಲ ಎಂದು ಸಾಮಾಜಿಕ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕರಾದ ಎ. ಎನ್. ಸಿನ್ಹಾ ತಿಳಿಸಿದ್ದಾರೆ.

ದೇಶದಲ್ಲಿ ಈಗಾಗಲೇ ದೊಡ್ಡ ದೊಡ್ಡ ರೈತರು ಕೃಷಿ ಒಪ್ಪಂದದಡಿ ಕೃಷಿ ಮಾಡುತ್ತಿದ್ದಾರೆ, ಆದರೆ ಕೃಷಿ ಒಪ್ಪಂದ ಕಾಯ್ದೆಯಲ್ಲಿ ರೂಪಿಸಿರುವ ಕೆಲವು ಅಂಶಗಳು ಅನುಮಾನಾಸ್ಪದ. ಅಂದರೆ ಸೆಕ್ಷನ್ 13ರಲ್ಲಿ ತಿಳಿಸಿರುವಂತೆ ಯಾವುದೇ ಅಧಿಕಾರಿ ಸಹ ರೈತನ ಹಿತಕ್ಕಾಗಿ ಕೆಲವು ತಪ್ಪುಗಳನ್ನು ಎಸಗಿದ್ದರೆ ಅಂತಹವರ ವಿರುದ್ಧ ಮೊಕದ್ದಮೆ ಹೊಡಲು ಈ ದೇಶದ ಯಾವ ರೈತರಿಗೆ ಅಥವಾ ಸಾಮಾನ್ಯ ಪ್ರಜೆಗೆ ಹಕ್ಕು ಇರುವುದಿಲ್ಲವಂತೆ. ‘‘ಇಂತಹ ಕಾಯ್ದೆಗಳು ಸಂಪೂರ್ಣವಾಗಿ ಮಾನವ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಿದ್ದು, ಕೇವಲ 1975-77 ರ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇಂತಹ ಉದಾಹರಣೆಯನ್ನು ಕಂಡಿದ್ದೆವು’’ ಎಂದು ಕೃಷಿ ತಜ್ಞ ಪಿ. ಸಾಯಿನಾಥ್ ಹೇಳುತ್ತಾರೆ.

ಕೊರೋನ ಎಂಬ ಸಾಂಕ್ರಾಮಿಕ ರೋಗ ಇಡೀ ಪ್ರಪಂಚದ ಆರ್ಥಿಕತೆಯನ್ನು ನಿರ್ನಾಮ ಮಾಡಿರುವ ಹೊತ್ತಿನಲ್ಲಿ ರೈತ ಕಷ್ಟಪಟ್ಟು ಬೆಳೆದಿರುವ ಆಹಾರಕ್ಕೆ ಬೆಂಬಲ ಬೆಲೆ ನೀಡುವುದನ್ನು ಬಿಟ್ಟು ಸಂವಿಧಾನಾತ್ಮಕವಾಗಿ ರಾಜ್ಯಗಳ ಅಡಿಯಲ್ಲಿ ಬರುವಂತಹ ಕೃಷಿ ವಿಷಯಕ್ಕೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ತಂದು ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಚರ್ಚೆ ಇಲ್ಲದೆಯೇ ಕಾಯ್ದೆ ಜಾರಿ ಮಾಡುವ ಅವಶ್ಯಕತೆ ಇತ್ತೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)