varthabharthi


ನಿಮ್ಮ ಅಂಕಣ

ಭೂಮಿ ಕೊಟ್ಟ ರೈತರಿಗೆ ಉದ್ಯೋಗದ ಹಕ್ಕು ಸಿಗಲಿ

ವಾರ್ತಾ ಭಾರತಿ : 2 Jan, 2021

ಮಾನ್ಯರೇ,

ನಂಜನಗೂಡು ತಾಲೂಕಿನಲ್ಲಿ ಏಶ್ಯನ್ ಪೈಂಟ್ಸ್ ಕಾರ್ಖಾನೆ ಆರಂಭವಾಗಿದ್ದು, ಈ ಕಾರ್ಖಾನೆಯನ್ನು ಕೆಐಎಡಿಬಿ ಮತ್ತು ಜಿಲ್ಲಾಡಳಿತವನ್ನೊಳಗೊಂಡ ಸಮಿತಿ ಯಿಂದ ರೈತರ ಜೀವನಾಧಾರವಾಗಿದ್ದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸ್ಥಾಪಿಸಲಾಗಿದೆ. ಭೂಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಈ ಸಮಿತಿಯ ಸಮಕ್ಷಮದಲ್ಲಿ ಭೂಮಿ ಕಳೆದುಕೊಂಡ ಪ್ರತಿ ರೈತ ಕುಟುಂಬದ ಒಬ್ಬ ಸದಸ್ಯರಿಗೆ ಇದೇ ಕಾರ್ಖಾನೆಯಲ್ಲಿ ಉದ್ಯೋಗವನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ನಂತರ ಅರ್ಹ ರೈತ ಕುಟುಂಬದ ಉದ್ಯೋಗಾಂಕ್ಷಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಆದರೆ ಈಗ ಕಾರ್ಖಾನೆಯ ಆಡಳಿತ ಮಂಡಳಿ ಸಮಂಜಸವಲ್ಲದ ಕಾರಣವನ್ನು ನೀಡುತ್ತಾ ಭೂಮಿ ಕೊಟ್ಟ ರೈತ ಕುಟುಂಬದ ಉದ್ಯೋಗಾಕಾಂಕ್ಷಿಗಳಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಲು ನಿರಾಕರಿಸುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಕೆಐಎಡಿಬಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಇದೂ ಸಾಲದಂತೆ ಜಿಲ್ಲಾಧಿಕಾರಿಗಳ ಮತ್ತು ಕೆಐಎಡಿಬಿ ಕಚೇರಿಯೆದುರು ಧರಣಿ ಕೂಡ ನಡೆಸಲಾಗಿತ್ತು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳ ಕಾರ್ಖಾನೆಯ ಆಡಳಿತ ಮಂಡಳಿ ಇವರ ಸಮಸ್ಯೆ ಸ್ವೀಕರಿಸುವುದಿರಲಿ, ಇದರ ಬಗ್ಗೆ ಗಮನ ಕೂಡಾ ಹರಿಸಿಲ್ಲ. ಇದಕ್ಕೆ ಅನುಗುಣವಾಗುವಂತೆ ಸರಕಾರಿ ವ್ಯವಸ್ಥೆಯೂ ಕೂಡ ಹೀಗೆಯೇ ನಡೆದುಕೊಳ್ಳುತ್ತಿದೆ!

ಇಲ್ಲಿ ನೋಡುವುದಾದರೆ ಜಿಲ್ಲಾಧಿಕಾರಿಗಳು ಮತ್ತು ಕೆಐಎಡಿಬಿ ಅಧಿಕಾರಿಗಳ ಸಮಿತಿ ಮಧ್ಯವರ್ತಿಗಳಾಗಿ ರೈತರ ಭೂಮಿ ಕಿತ್ತು ಬಂಡವಾಳಶಾಹಿಯ ಕಾಲಿಗೆ ಒಪ್ಪಿಸುವುದಷ್ಟೇ ಇವರ ಕೆಲಸವೇ? ಹಾಗಾದರೆ, ಪ್ರಭುತ್ವ ಬಂಡವಾಳಶಾಹಿಗಳ ಮುಂದೆ ಮಂಡಿಯೂರಿದೆಯೇ ಎಂದು ಅನುಮಾನವಾಗುತ್ತಿದೆ. ಏಕೆಂದರೆ, ಇತ್ತ ಜೀವನಾಧಾರವಾದ ಭೂಮಿಯನ್ನೂ ಕಳೆದುಕೊಂಡು ಅತ್ತ ಉದ್ಯೋಗವೂ ಇಲ್ಲದೆ ಸತತ ಚಳಿ, ಮಳೆ, ಗಾಳಿ ಎನ್ನದೆ 39 ದಿನಗಳ ಕಾಲ ಉದ್ಯೋಗಾಕಾಂಕ್ಷಿಗಳು ಮತ್ತು ರೈತರು ನಿರಂತರ ನಿಂತ ಜಾಗದಲ್ಲೇ ಕಾರ್ಖಾನೆ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದರೂ ಚುನಾಯಿತ ಶಾಸಕರಾಗಲಿ, ಜಿಲ್ಲಾಡಳಿತವಾಗಲಿ, ಕೆಐಎಡಿಬಿ ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸುವ ಯಾವ ಗೋಜಿಗೂ ಹೋಗುತ್ತಿಲ್ಲ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತ ರೈತರು ಈ ಕಾರ್ಖಾನೆಯಿಂದ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡರೂ ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿಯನ್ನು ಕಾಲ್ನಡಿಗೆ ಮೂಲಕ ಹೋಗಿ ಮನವಿ ಸಲ್ಲಿಸಲು ಹೊರಟವರನ್ನು ಪೊಲೀಸ್ ತಡೆಗೋಡೆ ನಿರ್ಮಿಸಿ ತಡೆಯಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆಯನ್ನು ಆಲಿಸುವುದು ಅವರ ಕರ್ತವ್ಯ ಮತ್ತು ಜವಾಬ್ದಾರಿ ಕೂಡ. ಆದರೆ, ಇದು ವಿಫಲವಾಗಿರುವುದು ಪ್ರಜಾಪ್ರಭುತ್ವವನ್ನು ಕತ್ತಲೆಯ ದಿಕ್ಕಿಗೆ ದೂಡುವಂತಹ ಕ್ರೌರ್ಯವಾಗಿದೆ ಎಂದರೆ ತಪ್ಪಾಗಲಾರದು. ಅನ್ನ ನೀಡುತ್ತಿದ್ದ ರೈತರನ್ನು ಇಂದು ಗಂಜಿಗಾಗಿ ಪರಿತಪಿಸುವಂತೆ ಮಾಡಿದ್ದಾರೆ. ಭೂಮಿ ಜೊತೆಗೆ ಜೀವನವನ್ನು ಕಳೆದುಕೊಂಡ ರೈತ ಕುಟುಂಬದವರ ಪರವಾಗಿ ಮುಖ್ಯಮಂತ್ರಿಗಳು ಗಮನಹರಿಸ ಬೇಕಾಗಿದೆ. ಉಲ್ಬಣವಾಗಿರುವ ಸಮಸ್ಯೆಯನ್ನು ಮತ್ತು ಕಣ್ಣು-ಕಿವಿ ಕುರುಡಾಗಿರುವ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಭೂಮಿ ಕೊಟ್ಟ ಅನ್ನದಾತರಿಗೆ ಉದ್ಯೋಗದ ಹಕ್ಕನ್ನು ಕೊಡಿಸಬೇಕಾಗಿದೆ.

-ಪುನೀತ್. ಎನ್., ಅಶೋಕಪುರಂ, ಮೈಸೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)