varthabharthi


ಗಲ್ಫ್ ಸುದ್ದಿ

#NRIappealDay ಮೂಲಕ ಟ್ವಿಟರ್ ಅಭಿಯಾನ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿವಾಸಿ ಕನ್ನಡಿಗರಿಂದ ರಾಜ್ಯ ಸರಕಾರಕ್ಕೆ ಒಕ್ಕೊರಳಿನ ಕೂಗು

ವಾರ್ತಾ ಭಾರತಿ : 2 Jan, 2021

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕ ಸೇರಿದಂತೆ ತಮ್ಮ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಶ್ವಾದ್ಯಂತವಿರುವ 30ಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಇಂದು ಟ್ವಿಟರ್ ಅಭಿಯಾನ ಹಮ್ಮಿಕೊಂಡಿತ್ತು.

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕ, ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು, ನನೆಗುದಿಗೆ ಬಿದ್ದಿರುವ ಎನ್.ಆರ್.ಕೆ. ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸುವುದು ಮತ್ತು ಹೆಚ್ಚು ಅನಿವಾಸಿ ಕನ್ನಡಿಗರ ಸಾಂಧ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ.

ಜ.2ರಂದು ಮಧ್ಯಾಹ್ನ ಟ್ವಿಟರ್ ಅಭಿಯಾನ ಆರಂಭವಾಗಿದ್ದು, 'ಎನ್ಆರ್ ಐ ಅಪೀಲ್ ಡೇ' #NRIappealDay ಎಂಬ ಹ್ಯಾಶ್'ಟ್ಯಾಗ್ ನೊಂದಿಗೆ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ. ಇಮೇಲ್ ಮೂಲಕವೂ ತಮ್ಮ ಬೇಡಿಕೆಯನ್ನು ಈಡೇರಿಸಲು ಟ್ವಿಟರಿಗರು ಆಗ್ರಹಿಸಿದ್ದಾರೆ.

''ಅನಿವಾಸಿ ಭಾರತೀಯ ಸಮಿತಿಗೆ ಸಮರ್ಥ ನೇತೃತ್ವ ಇದ್ದಲ್ಲಿ ಪ್ರಪಂಚದಾದ್ಯಂತ ಕನ್ನಡಿಗರು ಕನ್ನಡದ ಕಂಪನ್ನು ಪಸರಿಸಲು ಸಾಧ್ಯ, ಅನಿವಾಸಿ ಕನ್ನಡಿಗರು ಸಂಘಟನಾತ್ಮಕವಾಗಿ ಬೆಳೆಯಲೂ ಸಾಧ್ಯ' ಎಂದು ಸಾಗರೋತ್ತರ ಕನ್ನಡಿಗರು ಸಂಘದ ಅಧ್ಯಕ್ಷ ಚಂದ್ರಶೇಖರ್ ಲಿಂಗದಳ್ಳಿ ಟ್ವೀಟ್ ಮಾಡಿದ್ದಾರೆ.

''ಜನರ ನಡುವೆ ಇದ್ದು ಜನರ ಧ್ವನಿಯಾಗುವವರು ನಮ್ಮ ಜನಪ್ರತಿನಿಧಿಯಾಗಬೇಕು ಎಂದೇ ಎಲ್ಲರೂ ನಿರೀಕ್ಷಿಸುವುದು, ಹಾಗಾಗಿ ಅನಿವಾಸಿ ಭಾರತೀಯ ಸಮಿತಿಗೆ ಒಬ್ಬ ಸಮರ್ಥ ಅನಿವಾಸಿಯೇ ಉಪಾಧ್ಯಕ್ಷರಾಗಬೇಕು'' ಎಂದು ರೂಪ ಎಂಬವರು ಆಗ್ರಹಿಸಿದ್ದಾರೆ.

ತಾಯ್ನಾಡಿನಿಂದ ವಿದೇಶಕ್ಕೆ ದುಡಿಯಲು ಹೋದ ಅನಿವಾಸಿ ಕನ್ನಡಿಗರನ್ನು ಸಂಪೂರ್ಣವಾಗಿ ಮರೆಯಿತೇ ಕರ್ನಾಟಕ ಸರ್ಕಾರ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿಗಳ ಪ್ರತಿನಿಧಿಗಳು ಯಾರು? ನೆರೆಯ ಕೇರಳದ ಅನಿವಾಸಿಗಳಿಗೆ ವಿದೇಶದಲ್ಲಿ ಸಿಗುವ ಮನ್ನಣೆ ಮತ್ತು ಅವರ ಅಹವಾಲಿಗೆ ಸರಕಾರದಿಂದ ಸಿಗುವ ಸ್ಪಂದನೆ ನಮ್ಮ ಅನಿವಾಸಿ ಕನ್ನಡಿಗರಿಗೆ ಏಕೆ ಸಿಗುತ್ತಿಲ್ಲ? ನಮ್ಮ ಬೇಡಿಕೆ ಈಡೇರಿಸಿ ಎಂದು ರಘು ದೇಸಾಯಿ ಎಂಬವರು ಒತ್ತಾಯಿಸಿದ್ದಾರೆ.

ಸಮರ್ಥ ನಾಯಕತ್ವವಿಲ್ಲದೆ ದಿಕ್ಕು ತಪ್ಪಿದ ದೋಣಿಯಂತಾದ NRI ಸಮಿತಿಯನ್ನು ಪುನಶ್ಚೇತನಗೊಳಿಸಬೇಕು. ಅನಿವಾಸಿಗರ ಆಶೋತ್ತರಗಳಿಗೆ ಸ್ಪಂದಿಸುವ ಉತ್ತಮ ವ್ಯವಸ್ಥೆ ರೂಪಿಸಿಕೊಡಬೇಕು. ಅನಿವಾಸಿಗರ ನಾಡಿಮಿಡಿತ ಕರ್ನಾಟಕದ ಅಭಿವೃದ್ದಿಗೆ ಮಿಡಿಯುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ನಿಝಾಮ್ ಉರುವಾಲುಪದವು ಎಂಬವರು ಟ್ವೀಟ್ ಮಾಡಿದ್ದಾರೆ.

''ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಅನಿವಾಸಿಗಳು ಪೌರತ್ವ ಪಡೆಯಲು ಬಂದವರಲ್ಲ, ಅವರು ದುಡಿದ ಪ್ರತಿಯೊಂದು ರೂಪಾಯಿ ತಾಯ್ನಾಡಿಗೆ ಕಳುಹಿಸಿ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುವವರು, ಕಡೆಗಣಿಸದಿರಿ ನಮ್ಮನ್ನ'' ಎಂದು ಸಿದ್ದಲಿಂಗೇಶ್ವರ ರೇವಪ್ಪ ಮನವಿ ಮಾಡಿದ್ದಾರೆ.

''ನಾನು ಅನಿವಾಸಿ ಕನ್ನಡಿಗನಲ್ಲ. ಆದರೆ ನನ್ನ ಮನೆಯಲ್ಲೂ ಅನಿವಾಸಿ ಕನ್ನಡಿಗರು ಇದ್ದಾರೆ. ಅವರು ತಮ್ಮ ಮನೆ, ಕುಟುಂಬ ಬಿಟ್ಟು ಉದ್ಯಮ ಅರಸಿ ಹೋಗಿ ಅದನ್ನು ದೇಶದ ಪ್ರಗತಿಯಲ್ಲಿ ತಂದು ತಮ್ಮ ಕೊಡುಗೆ ನೀಡಿರುವರು. ಅವರ ಧ್ವನಿಗೆ ಮುಖ್ಯಮಂತ್ರಿ ಸ್ಪಂದಿಸಬೇಕೆಂದು ವಿನಂತಿಸುತ್ತೇನೆ'' ಎಂದು ರಾಫಿ ನಗರ ಎಂಬವರು ಟ್ವೀಟ್ ಮಾಡಿದ್ದಾರೆ.

ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸಲೇ ಇಲ್ಲ, ಮುಖ್ಯಮಂತ್ರಿಗಳೇ ಅದೇ ತಪ್ಪನ್ನು ನೀವು ಮತ್ತೆ ಮಾಡದಿರಿ. ಕೂಡಲೇ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸಿ. ಅನಿವಾಸಿ ಕನ್ನಡಿಗರು ಮತ್ತು ಕರ್ನಾಟಕ ಸರಕಾರದ ನಡುವೆ ಸಂಪರ್ಕ ಕೊಂಡಿಯಾಗಿ ಇರಬೇಕಾದುದೇ ಅನಿವಾಸಿ ಭಾರತೀಯ ಸಮಿತಿ. 3 ವರ್ಷಗಳ ನಿರ್ಲಕ್ಷ್ಯತೆ ಕೊನೆಗೊಳಿಸಿ. ತಕ್ಷಣವೇ ಉಪಾಧ್ಯಕ್ಷರ ನೇಮಕವಾಗಲಿ. ಕೊರೋನ ಮಹಾಮಾರಿಯಿಂದ ಅನಿವಾಸಿ ಕನ್ನಡಿಗರು ಅತೀ ಹೆಚ್ಚು ಸಂಕಷ್ಟಕ್ಕೀಡಾದ್ದಾರೆ. ಅತ್ತ ಇದ್ದ ಉದ್ಯೋಗವೂ ಕಳೆದುಕೊಂಡು ಆಸರೆಯೇ ಇಲ್ಲದಾಗಿದ್ದಾರೆ. ಜನಪ್ರತಿನಿಧಿಗಳೇ, ನಮ್ಮ ಬೇಡಿಕೆಗೂ ಸ್ಪಂದಿಸಿ ಎಂದು ಶಶಿಧರ್ ಎಂಬವರು ಆಗ್ರಹಿಸಿದ್ದಾರೆ.

''ಜಾತಿಗೊಂದು, ಭಾಷೆಗೊಂದು ನಿಗಮ ಮಾಡುವ ರಾಜ್ಯ ಸರ್ಕಾರ, ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನೇಕೆ ನೇಮಿಸಿಲ್ಲ? ಸರ್ಕಾರ ಆದ್ಯತೆಯ ಮೇರೆಗೆ ಅನಿವಾಸಿ ಕನ್ನಡಿಗರ ಕಷ್ಟಸುಖ ಬಲ್ಲವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು'' ಎಂದು ಜಗದೀಶ ಎಂಬವರು ಮನವಿ ಮಾಡಿದ್ದಾರೆ.

ಕರ್ನಾಟಕ ಸರಕಾರದಲ್ಲಿ ಅನಿವಾಸಿ ಭಾರತೀಯ ಸಮಿತಿಯಿದೆ. ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ ಮತ್ತು ಉಪಾಧ್ಯಕ್ಷರನ್ನು ನೇಮಿಸಿರುತ್ತಾರೆ. ಅನಿವಾಸಿ ಕನ್ನಡಿಗರ ಕುಂದುಕೊರತೆ ನೀಗಿಸುವ ಕೆಲಸ ಮಾಡುತ್ತದೆ. ಆದರೆ ಸಮಿತಿಗೆ ಉಪಾದ್ಯಕ್ಷರಿಲ್ಲದೇ ಅನಿವಾಸಿ ಕನ್ನಡಿಗರ ಮತ್ತು ಸರಕಾರದ ನಡುವಿನ ಕೊಂಡಿಯೇ ಇಲ್ಲವಾಗಿದೆ ಎಂದು ಮಹೇಶ ಕಾಶಿ ಎಂಬವರು ಟ್ವೀಟ್ ಮಾಡಿದ್ದಾರೆ.

ಅಲ್ಲದೇ, ಸಾವಿರಾರು ಮಂದಿ #NRIappealDay ಎಂಬ ಹ್ಯಾಶ್'ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿ ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ, ಸಚಿವರಾದ ಸುರೇಶ್ ಕುಮಾರ್, ಲಕ್ಷ್ಮಣ ಸವದಿ ಸೇರಿ ಹಲವು ಸಚಿವರಿಗೆ ಟ್ಯಾಗ್ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರು ಸ್ಥಾನಕ್ಕೆ ಯಾರನ್ನೂ ನೇಮಕವೇ ಮಾಡಿಲ್ಲ! ಅನಿವಾಸಿ ಕನ್ನಡಿಗರೆಂದರೆ ಸರ್ಕಾರಕ್ಕೆ ಅಷ್ಟೂ ನಿರ್ಲಕ್ಷ್ಯತೆಯೇ? ತಾಯ್ನಾಡಿನಿಂದ ವಿದೇಶಕ್ಕೆ ದುಡಿಯಲು ಹೋದ ಅನಿವಾಸಿ ಕನ್ನಡಿಗರನ್ನು ಸಂಪೂರ್ಣವಾಗಿ ಮರೆತರೇ ಕರ್ನಾಟಕ ಸರ್ಕಾರ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿಗಳ ಪ್ರತಿನಿಧಿಗಳು ಯಾರು?

-ಟ್ವೀಟ್, ಕನ್ನಡಿಗಾಸ್ ಫೆಡರೇಶನ್

ಹೊರದೇಶಗಳಲ್ಲಿರುವ ಕನ್ನಡಿಗರು ಭೌತಿಕವಾಗಿ ನಮ್ಮಿಂದ ದೂರವಿರಬಹುದು. ಆದರೆ ಅವರೆಲ್ಲ ಕರ್ನಾಟಕದ ಮಣ್ಣಿನಮಕ್ಕಳು, ಕನ್ನಡಮ್ಮನ ಕರುಳಬಳ್ಳಿಯ ಕುಡಿಗಳು. ದೂರದೇಶಗಳಲ್ಲಿ ಇದ್ದೂ ತಾಯ್ನಾಡಿನ ಧ್ಯಾನ ಮಾಡುವ ಅನಿವಾಸಿ ಕನ್ನಡಿಗರನ್ನು ಸರ್ಕಾರ ನಿರ್ಲಕ್ಷ್ಯ ಮಾಡಕೂಡದು. ಅವರ ಎದೆಯ ದನಿಗೆ ಕಿವಿಗೊಡಬೇಕು. ಸರ್ಕಾರ ಮೂರು ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಕೂಡಲೇ ಉಪಾಧ್ಯಕ್ಷರನ್ನು ನೇಮಿಸುವ ಜತೆಗೆ, ಕನ್ನಡ ಕಾಳಜಿಯ ಕ್ರಿಯಾಶೀಲ ಅಧಿಕಾರಿಗೆ ಸಮಿತಿಯ ಜವಾಬ್ದಾರಿ ನೀಡಬೇಕು. ಅನಿವಾಸಿ ಕನ್ನಡಿಗರು ಮತ್ತು ಸರ್ಕಾರದ ನಡುವೆ ಇರುವ ಏಕೈಕ ಕೊಂಡಿ ಈ ಸಮಿತಿ ಎಂಬುದನ್ನು ಸರ್ಕಾರ ಮರೆಯಬಾರದು.

-ನಾರಾಯಣಗೌಡ.ಟಿ.ಎ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)