ವಿಶೇಷ-ವರದಿಗಳು
ಜ.3 ರಂದು ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನ
ಆಧುನಿಕ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಸಂಪ್ರದಾಯವಾದಿಗಳ ದೃಷ್ಟಿಯಲ್ಲಿ ಹೆಣ್ಣು ಅಕ್ಷರ ಕಲಿಯುವುದು ಅಪರಾಧವಾಗಿದ್ದ ಕಾಲಮಾನದಲ್ಲಿ ಜಾತಿ ಮತ್ತು ಸಂಪ್ರದಾಯ ಕಟ್ಟಳೆಗಳನ್ನು ದಾಟಿ ಜಾತಿ ವಿರೋಧಿ ಮತ್ತು ಮಹಿಳಾ ವಿಮೋಚಕಿಯಾಗಿ ಸಾವಿತ್ರ ಬಾಯಿ ಫುಲೆ ಪಾತ್ರ ಅಪೂರ್ವವಾದದ್ದು. 18ನೇ ಶತಮಾನದಲ್ಲಿ ಜಾತಿ ಮತ್ತು ಪುರುಷ ಪ್ರಧಾನತೆಯೊಂದಿಗೆ ಬೆಸೆದುಕೊಂಡಿದ್ದ ಸಂಪ್ರದಾಯಗಳನ್ನು ಸಾಮಾಜಿಕ ಆಂದೋಲನಗಳ ಮೂಲಕ ಶೂದ್ರ ಮತ್ತು ಅತಿಶೂದ್ರ ಮಹಿಳೆಯರಿಗೆ ಅಕ್ಷರ ಉಣಬಡಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿ ಬಾಯಿ ಫುಲೆ ಹೊರಹೊಮ್ಮುತ್ತಾರೆ.
ಮಹಾರಾಷ್ಟ್ರದ ಪುಣೆಯ ಸತಾರ ಜೆಲ್ಲೆಯ ನಯಿಗಾಂವ್ ಎಂಬ ಊರಿನ ಬಂಡೋಜಿ ನೆವಶೆ ಪಾಟೀಲರ ಪುತ್ರಿಯಾಗಿ ಸಾವಿತ್ರಿ ಬಾಯಿ1831 ರ ಜನವರಿ03 ರಂದು ಜನ್ಮತಾಳುತ್ತಾರೆ. ಸಾವಿತ್ರಿ ಬಾಯಿಗೆ 9 ವರ್ಷ ಇರುವಾಗಲೇ 1840 ರಲ್ಲಿ ಜ್ಯೋತಿ ಬಾ ಫುಲೆಯೊಂದಿಗೆ ಮದುವೆಯಾಗುತ್ತದೆ. ಜ್ಯೋತಿ ಬಾ ಫುಲೆ ವಿವಾಹವಾದ ಮೇಲೆ ಪುಣೆಯ ಸ್ಕಾಟಿಷ್ ಮಿಷಿನ್ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತು ಇಂಗ್ಲೀಷ್ನಲ್ಲಿ ಅಪಾರ ಜ್ಞಾನ ಹೊಂದುತ್ತಾರೆ. ತನ್ನ ಮಡದಿ ಸಾವಿತ್ರಿ ಬಾಯಿಗೆ 1841 ರಲ್ಲಿ ಮನೆಯಲ್ಲೇ ಅಕ್ಷರ ಹೇಳಿಕೊಟ್ಟು ಪತ್ನಿಗೆ ಪತಿಯೇ ಗುರುವಾಗಿ ಇತಿಹಾಸ ನಿರ್ಮಿಸುತ್ತಾರೆ.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಂಪನ್ಮೂಲಗಳು ಜಾತಿ ವ್ಯವಸ್ಥೆಯಡಿಯಲ್ಲಿ ಸಂಪ್ರದಾಯಸ್ತರ ಪಾಲಾಗಿದ್ದವು. ಭಾರತದಲ್ಲಿ ಅಂದು ಅಂಗ್ಲರ ಆಡಳಿತ, ಮತ್ತೊಂದು ಕಡೆ ಶೂದ್ರಾತಿ ಶೂದ್ರರ ಮೇಲೆ ಜಾತಿವಾದಿಗಳ ದಬ್ಬಾಳಿಕೆ, ಹೆಣ್ಣು ಅಕ್ಷರ ಕಲಿಯಲೇ ಬಾರದೆಂಬ ಲಿಂಗತಾರತಮ್ಯದ ಕಟ್ಟಳೆಗಳು. ಇಂತಹ ಜಾತಿ ವ್ಯವಸ್ಥೆ ಮತ್ತು ವೈದಿಕತ್ವದ ಜಾತಿ ಆಧಾರಿತ ಸಂಸ್ಕೃತಿ ಮೇಲೆ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆಯವರು ಹೋರಾಡಲು ನಿರ್ಧರಿಸುತ್ತಾರೆ. ಆಗ ಸ್ತ್ರೀ-ಶೂದ್ರ-ಅತಿಶೂದ್ರ ಶೋಷಿತರು ಶಿಕ್ಷಣ ಕಲಿಯುವ ಹಕ್ಕನ್ನು ಕಳೆದುಕೊಂಡಿದ್ದರು. ಹೀಗಾಗಿ ಶೋಷಿತ ಸಮುದಾಯದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕದಲ್ಲಿ ಫುಲೆ ದಂಪತಿಗಳು ತೊಡಗಿಕೊಂಡು ಲಿಂಗತಾರತಮ್ಯದ ವಿರುದ್ಧ ಹೋರಾಡಿದ್ದು ಭಾರತದ ಇತಿಹಾಸದಲ್ಲಿ ಮೊದಲು.
ಸಾವಿತ್ರಿ ಬಾಯಿ ಫುಲೆ ಗಂಡನ ಜೊತೆ ಹೆಣ್ಣು ಮಕ್ಕಳಿಗೆ ಮನೆಯಲ್ಲೇ ಅಕ್ಷರ ಕಲಿಸಲು ಪ್ರಾರಂಭಿಸಿದಾಗ ಸಂಪ್ರದಾಯಸ್ತರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸ್ವಂತ ಜ್ಯೋತಿ ಬಾ ಫುಲೆ ತಂದೆ ಮಡಿವಂತರ ಜಾತಿ ವ್ಯವಸ್ಥೆಯ ಪಿತೂರಿಗೆ ಬಲಿಯಾಗಿ ಹದಿಹರೆಯ ವಯಸ್ಸಿನ ಸೊಸೆ ಸಾವಿತ್ರಿ ಬಾಯಿ ಮತ್ತು ಮಗ ಜ್ಯೋತಿ ಬಾ ಫುಲೆಯವರನ್ನು ಮನೆಯಿಂದ ಹೊರ ಹಾಕುತ್ತಾರೆ. ಇದರಿಂದ ಫುಲೆ ದಂಪತಿಗಳು ಧೃತಿಗೆಡದೆ ಶೂದ್ರ ಮತ್ತು ಅತಿಶೂದ್ರ ವರ್ಗದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಮುಂದಾಗುತ್ತಾರೆ. ಅದರೆ ಶಿಕ್ಷಕರಾಗಿ ಯಾರು ಮುಂದೆ ಬರುವುದಿಲ್ಲ. ಹೀಗಾಗಿ ಸಾವಿತ್ರಿ ಬಾಯಿ ಫುಲೆ 1846 ರಿಂದ 1847 ರ ವರೆಗೆ ಅಹ್ಮದ್ ನಗರದಲ್ಲಿ ಅಧ್ಯಾಪಕಿ ತರಬೇತಿ ಪಡೆದು ಅನೇಕ ವಿರೋಧಗಳ ನಡುವೆ 1848 ರಲ್ಲಿ ಕೇವಲ 9 ವಿದ್ಯಾರ್ಥಿನಿಯರಿಗಾಗಿ ಪುಣೆಯಲ್ಲಿ ಶಾಲೆ ಪ್ರಾರಂಭಿಸುತ್ತಾರೆ. ಜ್ಯೋತಿ ಬಾ ಫುಲೆ ಸ್ನೇಹಿತ ಸದಾಶಿವ ಗೋವಂದೆ ಅಹ್ಮದ್ ನಗರದಿಂದ ಪುಸ್ತಕಗಳನ್ನು ತರಿಸಿ ಶಾಲೆಗೆ ನೀಡುತ್ತಾರೆ. ಅದರೆ ಸಂಪ್ರದಾಯಸ್ತರ ತೀವ್ರ ವಿರೋಧದಿಂದ ಕೇವಲ 6 ತಿಂಗಳು ಮಾತ್ರ ಶಾಲೆ ನಡೆಯುತ್ತದೆ.
ಹೀಗಾಗಿ ಪುನಃ ಮತ್ತೊಂದು ಮನೆ ತೆಗೆದುಕೊಂಡು ಶಾಲೆ ಪ್ರಾರಂಭಿಸುತ್ತಾರೆ. ಸಾವಿತ್ರಿ ಬಾಯಿ ಫುಲೆ ಪ್ರತಿ ನಿತ್ಯ ಶಾಲೆಗೆ ನಡೆದು ಹೋಗುವಾಗ ಜಾತಿವಾದಿಗಳು ಅವರ ಮೇಲೆ ಕಲ್ಲು, ಸಗಣಿ, ಕೆಸರು ಎಸೆದು ಕಿರುಕುಳ ನೀಡಿ ನಿಂದಿಸುತ್ತಾರೆ. ಇಂತಹ ಅಪಮಾನ, ದೌರ್ಜನ್ಯ ಮತ್ತು ಗೊಡ್ಡು ಬೆದರಿಕೆಗೆ ಸಾವಿತ್ರಿ ಬಾಯಿ ಫುಲೆ ಹೆದರದೆ ಧೈರ್ಯವಾಗಿ ಮುನ್ನಡೆಯುತ್ತಾರೆ. ಪತಿ ಜ್ಯೋತಿ ಬಾ ಫುಲೆ ಮಡದಿ ಸಾವಿತ್ರಿಯಲ್ಲಿ ಭರವಸೆ, ಧ್ಯೆರ್ಯ ಮತ್ತು ಪ್ರೀತಿಯನ್ನು ತುಂಬುತ್ತಾರೆ. ಸಾವಿತ್ರಿ ಬಾಯಿ ಫುಲೆ ಶಾಲೆಗೆ ಹೋಗುವಾಗ ಹಳೇ ಸೀರೆ ಉಟ್ಟುಕೊಂಡು, ಕೈ ಚೀಲದಲ್ಲಿ ಮತ್ತೊಂದು ಸೀರೆ ತೆಗೆದುಕೊಂಡು ಶಾಲೆಗೆ ಹೋಗಿ ಹಳೆ ಸೀರೆ ಬದಲು ತೆಗೆದುಕೊಂಡು ಹೋಗಿ, ಬೇರೆ ಸೀರೆ ಉಟ್ಟುಕೊಂಡು ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಪಾಠ ಮಾಡುತ್ತಾರೆ. ಮುಂದೆ 1851 ರಲ್ಲಿ ಮತ್ತೊಂದು ಮನೆಯಲ್ಲಿ 2ನೇ ಶಾಲೆ ಪ್ರಾರಂಭಿಸುತ್ತಾರೆ.
ಈ ಸಂದರ್ಭದಲ್ಲಿ ಪುಣೆಯ ಶೈಕ್ಷಣಿಕ ತಜ್ಞ ಮೇಜರ್ ಕ್ಯಾಂಡಿ ಶಾಲೆಗೆ ಪುಸ್ತಕಗಳನ್ನು ನೀಡುತ್ತಾರೆ. ಸಾವಿತ್ರಿ ಬಾಯಿ ಫುಲೆ ಸಂಬಳವಿಲ್ಲದೆ ಹೆಣ್ಣು ಮಕ್ಕಳ ಶಿಕ್ಷಣ ವೃದ್ಧಿಗಾಗಿ ಮುಖ್ಯೋಪಧ್ಯಾಯಿಣಿಯಾಗಿ ಉದಾತ್ತ ಸೇವೆ ಸಲ್ಲಿಸುತ್ತಾರೆ. ಮುಂದೆ, ಗಂಡನ ಜೊತೆ ಸೇರಿ 1851 ರಲ್ಲಿ ಅನಾಥ ಮಕ್ಕಳಿಗಾಗಿ ಹೆಚ್ಚುವರಿ ಶಾಲೆಗಳನ್ನು ತರೆಯುತ್ತಾರೆ. 1852 ರಲ್ಲಿ ಮಹಿಳಾ ಸೇವಾ ಮಂಡಲ್ ಸ್ಥಾಪಿಸಿ ಮಹಿಳೆಯರು ಶಿಕ್ಷಣ ಕಲಿಯಬೇಕು, ವಿಧವೆಯರು ಮರು ವಿವಾಹವಾಗಬೇಕು ಎಂದು ಜನ ಜಾಗೃತಿ ಮೂಡಿಸುತ್ತಾರೆ. ಹೀಗೆ ಲಿಂಗ ತಾರತಮ್ಯದ ವಿರುದ್ದ ಮತ್ತು ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ ದಬ್ಬಾಳಿಕೆಗಳ ವಿರುದ್ದ ಫುಲೆ ದಂಪತಿಗಳು ಹೋರಾಡುತ್ತಾರೆ. ಇಂತಹ ಸೇವೆ ಸಲ್ಲಿಸಿದ್ದಕ್ಕಾಗಿ 16-ನವೆಂಬರ್-1852 ರಲ್ಲಿ ಶಿಕ್ಷಣ ಇಲಾಖೆ ಫುಲೆ ದಂಪತಿಗಳನ್ನು ಸನ್ಮಾನಿಸುತ್ತದೆ. ಅದೇ ವರ್ಷ ಸರ್ಕಾರ ಸಾವಿತ್ರಿ ಬಾಯಿ ಫುಲೆಯವರಿಗೆ ಮಾದರಿ ಅಧ್ಯಾಪಕಿ ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಸಾವಿತ್ರಿ ಬಾಯಿ ಫುಲೆ ಕೇವಲ ಸಾಮಾಜಿಕ ಹೊರಾಟಗಾರ್ತಿ ಮಾತ್ರ ಆಗಿರಲಿಲ್ಲ. ತಮ್ಮ ಲೇಖನಿ ಮೂಲಕ ನೊಂದ ಶೋಷಿತರ ಕಣ್ಣೀರೊರೆಸುವ ವಿಚಾರಗಳನ್ನು ಮತ್ತು ದಬ್ಬಾಳಿಕೆ ನೀತಿಯನ್ನು ಖಂಡಿಸುತ್ತಿದ್ದ ಆ ಕಾಲದ ಪ್ರಬುದ್ಧ ಲೇಖಕಿಯಾಗಿದ್ದರು. ಅವರು 1854 ರಲ್ಲಿ ಕಬ್ಯ ಫುಲೆ ಎಂಬ ಕವನ ಸಂಗ್ರಹಣೆ ಪ್ರಕಟಿಸುತ್ತಾರೆ. ಫುಲೆ ದಂಪತಿಗಳು 1855 ರಲ್ಲಿ ಕಾರ್ಮಿಕರು ಮತ್ತು ರ್ಯೆತರ ಮಕ್ಕಳಿಗೆ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿದ ಅಪ್ರತಿಮ ಸಮಾಜ ಸುಧಾರಕಿಯಾಗಿದ್ದರು.
ಸಾವಿತ್ರಿ ಬಾಯಿ ಫುಲೆ ನೀಡುವ ಶಿಕ್ಷಣದಲ್ಲಿ ಸಾಮರ್ಥ್ಯದ ಭರವಸೆ ಎಷ್ಟಿತ್ತೆಂದು ತಿಳಿಯಬೇಕಾದರೆ ಅವರ ನೆಚ್ಚಿನ ಶಿಷ್ಯೆ ದಲಿತ ವಿದ್ಯಾರ್ಥಿನಿ ಮುಕ್ತ ಬಾಯಿ1855 ರಲ್ಲಿ ಮಂಡಿಸಿದ ಪ್ರಬಂಧ ಒಂದು ಶ್ರೇಷ್ಠ ಉದಾಹರಣೆ. ಫುಲೆ ದಂಪತಿಗಳು ಕೇವಲ ಅಕ್ಷಾರಾಭ್ಯಾಸ ಮಾತ್ರ ಬೋಧಿಸುತ್ತಿರಲಿಲ್ಲ, ಬದಲಿಗೆ ಅವರ ಶಿಕ್ಷಣ ದೌರ್ಜನ್ಯಕ್ಕೆ ಒಳಗಾಗಿದ್ದವರ ಸಾಮಾಜಿಕ ಕ್ರಾಂತಿ ಕಿಡಿಯಾಗಿತ್ತು. ಸಂಪ್ರದಾಯಸ್ತರ ಒಳಮನಸ್ಸನ್ನು ಅರಿತು, ಜಗತ್ತನ್ನು ವಿಮರ್ಷಿಸಿ ನೋಡುವ ಸಾಧನವಾಗಿತ್ತು. ಮುಕ್ತ ಬಾಯಿಯ ಪ್ರಬಂಧ ಮಾಂಗ್ ಮತ್ತು ಮಹಾರ್ ದುಃಖ ಕುರಿತು ಹೇಳುವ ಕ್ರಾಂತಿ ನುಡಿಯಾಗಿತ್ತು. ಇದು ದಬ್ಬಾಳಿಕೆಯನ್ನು ಪ್ರಚೋಧಿಸುವುದನ್ನು ಎತ್ತಿ ತೋರಿಸುತ್ತಿತ್ತು. ಶೋಷಿತ ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ ಕುರಿತು ಅಹ್ಮದ್ ನಗರದ ಪ್ರಸಿದ್ದ ಪತ್ರಿಕೆಯಾದ ದ್ಯಾನೋದಯ ಎಂಬ ಪತ್ರಿಕೆಯಲ್ಲಿ ಪ್ರಬಂಧ ಪ್ರಕಟವಾಗಿತ್ತು. ಮುಂದೆ, 1856 ರಲ್ಲಿ ಸಾವಿತ್ರಿ ಬಾಯಿ ಫುಲೆ ಜ್ಯೋತಿ ಬಾ ಫುಲೆಯವರ ಸಾಮಾಜಿಕ ಹೋರಾಟದ ಭಾಷಣಗಳನ್ನು ಪರಿಷ್ಕರಿಸಿ ಪ್ರಕಟಿಸುತ್ತಾರೆ.
ಈ ಮೂಲಕ 18ನೇ ಶತಮಾನದ ಪ್ರಬುದ್ದ ಲೇಖಕಿಯಾಗಿದ್ದರು. ಮುಂದೆ 1863 ರಲ್ಲಿ ಕಾನೂನು ಬಾಹಿರ ಮಕ್ಕಳು ಮತ್ತು ತಾಯಂದಿರಿಗಾಗಿ ಆಶ್ರಯ ಮನೆ ಸ್ಥಾಪಿಸುತ್ತಾರೆ. ಮುಂದುವರೆದು ಕುಡಿಯಲು ನೀರು ಕೋಡದೆ ಅಸ್ಪಶ್ಯತೆ ಆಚರಿಸುವ ಮೇಲ್ಜಾತಿಗಳ ವಿರುದ್ಧ ಹೋರಾಟ ನಡೆಸುತ್ತಾರೆ. 1868 ರಲ್ಲಿ ತಮ್ಮ ಮನೆಯ ಬಾವಿಯಯನ್ನು ಅಸ್ಪಶ್ಯರ ಉಪಯೋಗಕ್ಕೆ ಮೀಸಲಿಡುತ್ತಾರೆ. ಫುಲೆ ದಂಪತಿಗಳು 1873 ರಲ್ಲಿ ಮೊಟ್ಟ ಮೊದಲ ಜಾತಿ ವಿರೋಧಿ ಸಂಘಟನೆಯಾಗಿ ಸತ್ಯ ಶೋಧಕ ಸಮಾಜ ಕಟ್ಟುತ್ತಾರೆ. ಪಶ್ಚಿಮ ಮಹಾರಾಷ್ಟ್ರದ ಬರಗಾಲ ಪೀಡಿತ ಜನರಿಗೆ ಸಹಾಯ ಮಾಡಲು ಸತ್ಯ ಶೋಧಕ ಸಂಘಟನೆಯಿಂದ ಸ್ವಯಂಸೇವಕರ ಒದಗಿಸುವ ಮೂಲಕ ಅನೇಕ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾರೆ. ಸಾವಿತ್ರಿ ಬಾಯಿ ಫುಲೆಯವರ ಮೇಲೆ ಸನಾತನ ಸಂಪ್ರದಾಯವಾದಿಗಳು ಅನೇಕ ರೀತಿಯ ದೌರ್ಜನ್ಯ ನಡೆಸುತ್ತಾರೆ. ಅದರೆ ಅವರು ಇದಕ್ಕೆಲ್ಲ ಅಂಜದೆ ಧೈರ್ಯವಾಗಿ ಮಹಿಳೆಯರು ಮತ್ತು ಶೂದ್ರರು ಗುಲಾಮರಲ್ಲ, ಅವರು ಶಿಕ್ಷಣ ಪಡೆಯಲು ಅರ್ಹರು ಎಂದು ಸಂಪ್ರದಾಯವಾದಿಗಳನ್ನು ಎಚ್ಚರಿಸುತ್ತಾರೆ. 1874 ರಲ್ಲಿ ಫುಲೆ ದಂಪತಿಗಳು ಬ್ರಾಹ್ಮಣ ವಿಧವೆಯ ಯಶವಂತ ಎಂಬ ಮಗನನ್ನು ದತ್ತು ಸ್ವೀಕರಿಸಿ ಅಂತರ್ಜಾತಿಗಳಲ್ಲಿ ಸಮಾನತೆ ಸಾಧಿಸುತ್ತಾರೆ. 1980 ರಲ್ಲಿ ವಿಧವೆಯರಿಗೆ ತಲೆ ಬೋಳಿಸುವ ಆಚರಣೆಯನ್ನು ಸಾವಿತ್ರಿ ಬಾಯಿ ಫುಲೆ ಕಟುವಾಗಿ ವಿರೋಧಿಸುತ್ತಾರೆ.
ಫುಲೆ ದಂಪತಿಗಳು ಇಂಗ್ಲಿಷ್ ನ ತಾಯಿ ಎಂದು ಕರೆಯುತ್ತಿದ್ದರು. ಪೇಶ್ವೆರ ಆಳ್ವಿಕೆ ತೊಲಗಿತು, ಇಂಗ್ಲಿಷ್ ತಾಯಿ ಬಂದಿತು ಎಂದು ಅನೇಕ ಕವಿತೆಗಳನ್ನು ಬರೆದು ಶೋಷಿತ ಸಮುದಾಯಗಳು ಇಂಗ್ಲಿಷ್ ಕಲಿಯಿರಿ, ನಿಮ್ಮಲ್ಲಿರುವ ಗುಲಾಮತನ ನಾಶವಾಗುತ್ತದೆ ಮತ್ತು ಎದ್ದೇಳಿರಿ, ಕಲಿಯಲು ಎದ್ದೇಳಿ ಎಂದು ಶೂದ್ರ ಅತಿಶೂದ್ರರಲ್ಲಿದ್ದ ಅಂಧಃಕಾರ ಹೊಗಲಾಡಿಸುತ್ತಾರೆ.
ಮತ್ತೊಂದು ಸಂಗತಿ ಎಂದರೆ 1890 ರಲ್ಲಿ ಭಾರತದಲ್ಲಿ ಫ್ಲೇಗ್ ಕಾಣಿಸಿಕೊಂಡು ವಿಪರೀತ ಬಡತನ, ಬರಗಾಲ ಕಂಡು ಬಂದಾಗ ಸಾವಿತ್ರಿ ಬಾಯಿ ಫುಲೆಯವರು ತಮ್ಮ ಸತ್ಯ ಶೋಧಕ ಸಮಾಜ ಸಂಘಟನೆಯ ಮೂಲಕ ಅವಿರತವಾಗಿ ಶ್ರಮಿಸುತ್ತಾರೆ. ಹೀಗೆ ಸಾವಿತ್ರಿ ಬಾಯಿ ಫುಲೆಯವರು ಅಜ್ಞಾನ ಮತ್ತು ಗುಲಾಮಗಿರಿ ವಾದವನ್ನು ತಿರಸ್ಕರಿಸಿ ಸತ್ಯದ ಶಕ್ತಿಯಿಂದ ಹೋರಾಡಿ ಅಸತ್ಯದ ದುರಾಳತೆಯನ್ನು ಮೆಟ್ಟಿ ನಿಲ್ಲುವ ಭಾರತದ ಶಿಕ್ಷಣ ಕ್ಷೇತ್ರದ ಧ್ರುವತಾರೆಯಾಗಿದ್ದಾರೆ. ಭಾರತ ಸರ್ಕಾರವು 1997 ರಲ್ಲಿ ಸಾವಿತ್ರಿ ಬಾಯಿ ಫುಲೆಯವರ ಗೌರವ ಸೂಚಕವಾಗಿ ಅವರ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಪ್ರತಿ ವರ್ಷ ಸಾವಿತ್ರಿ ಬಾಯಿ ಫುಲೆ ಯವರ ಉತ್ಸವ ನಡೆಸುತ್ತಿದೆ. ಕರ್ನಾಟಕ ಸರ್ಕಾರವು ಪ್ರತಿ ವರ್ಷ ಜನವರಿ-3 ರಂದು ಸಾವಿತ್ರಿ ಬಾಯಿ ಫುಲೆಯವರ ಕ್ರಾಂತಿಕಾರಿ ಶಿಕ್ಷಣದ ಹೆಜ್ಜೆಗಳನ್ನು ತಿಳಿಸಲು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲು ಅದೇಶಿಸಿದೆ. ಬಾಬಾ ಸಾಹೇಬ್ ಡಾ॥ ಜ್ಯೋತಿ ಬಾ ಫುಲೆಯವರನ್ನು ಮಹಾತ್ಮ ಎಂದು ಕರೆಯುತ್ತಿದ್ದರು. ಫುಲೆ ದಂಪತಿಗಳ ಒಗ್ಗಟಿನ ಶೈಕ್ಷಣಿಕ ಹೋರಾಟ ಗಂಡು-ಹೆಣ್ಣಿನ ನಡುವೆ ಲಿಂಗ ಸಮಾನತೆಯ ಧ್ಯೋತಕವಾಗಿ ಭಾರತದ ಇತಿಹಾಸದಲ್ಲಿ ಹಚ್ಚಳಿಯದೆ ಉಳಿದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ