varthabharthi


ನಿಮ್ಮ ಅಂಕಣ

ಕೊರೋನದ ಆತಂಕದಿಂದ ಹೊರಬರಬೇಕಾಗಿದೆ

ವಾರ್ತಾ ಭಾರತಿ : 5 Jan, 2021
ಕೆ.ಎಸ್., ಮಂಗಳೂರು

ಕೊರೋನ ಹಾವಳಿಯ ಆರಂಭ ಕಾಲದಲ್ಲಿ ಜನರೆಲ್ಲ ಹೆದರಿ ಆತಂಕಕ್ಕೊಳಗಾಗಿದ್ದ ದಿನಗಳಲ್ಲಿ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯರು ಕೊರೋನ ಕಾರಣದಿಂದ ಹೆದರುವ ಅಗತ್ಯವಿಲ್ಲವೆಂದು ಮತ್ತೆ ಮತ್ತೆ ಹೇಳುತ್ತಾ ಬಂದಿದ್ದರು; ಮಾತ್ರವಲ್ಲ ಆ ವಿಚಾರವಾಗಿ ವಿವರಗಳನ್ನೊಳಗೊಂಡ ಪುಸ್ತಕವೊಂದನ್ನೂ ಬರೆದು ಪ್ರಕಟಿಸಿದ್ದರು. ಕೊರೋನದ ಸದ್ಯದ ವಿದ್ಯಮಾನಗಳನ್ನು ನೋಡಿದರೆ ಕಕ್ಕಿಲ್ಲಾಯರು ಬರೆದುದೆಲ್ಲವೂ ನಿಜವಾಗಿರುವುದು ಕಂಡು ಬರುತ್ತಿದೆ.

ಭಾರತದಲ್ಲಿ ದಿನವೊಂದಕ್ಕೆ ಸುಮಾರು 1ಲಕ್ಷಕ್ಕೆ ಸಮೀಪದಷ್ಟು ಮಂದಿ ಕೊರೋನ ಸೋಂಕಿಗೆ ಒಳಗಾಗುತ್ತಿದ್ದ ದಿನಗಳು ಹೋಗಿ, ಇದೀಗ ದಿನಕ್ಕೆ ಸುಮಾರು 16,000ದಷ್ಟು ಮಂದಿಯಲ್ಲಿ ಮಾತ್ರ ಕೊರೋನ ಕಾಣಿಸಿಕೊಳ್ಳುತ್ತಿದೆ. ಕೊರೋನ ರೋಗಿಗಳಲ್ಲಿ ಶೇ. 96ಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಜಗತ್ತಿನಲ್ಲಿ ಕೊರೋನ ಸಾವುಗಳ ಸರಾಸರಿ 1 ಲಕ್ಷಕ್ಕೆ 233 ಆಗಿದ್ದರೆ, ಭಾರತದಲ್ಲಿ ಅದು 110ರಷ್ಟೇ ಇದೆ. ಕರ್ನಾಟಕ, ಹಾಗೆಯೇ ಕರಾವಳಿ ಜಿಲ್ಲೆಗಳಲ್ಲೂ ಕೊರೋನ ಇಳಿಮುಖವಾಗಿರುವ ವಾಸ್ತವವನ್ನು ನಾವು ಗಮನಿಸುತ್ತಿದ್ದೇವೆ.

ಕೊರೋನ ಹಾವಳಿ ಈ ರೀತಿಯಲ್ಲಿ ಕಡಿಮೆಯಾಗಲು ಕಾರಣವೇನು? ಈ ದಿನಗಳಲ್ಲಿ ಜನರ ನಡುವಿನ ಸಂಪರ್ಕ ಮೊದಲಿಗಿಂತ ಹೆಚ್ಚಾಗಿದೆ. ಬಸ್ಸುಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಮದುವೆ, ಜಾತ್ರೆಗಳಲ್ಲಿ ಜನರು ಹಿಂದಿನಂತೆ ಬೆರೆತು ಭಾಗವಹಿಸುವ ರೀತಿಯನ್ನು ನೋಡಿದಾಗ ಕೊರೋನದ ಬಗೆಗಿನ ಆತಂಕವನ್ನು ಅವರು ಮನಸ್ಸಿನಿಂದ ತೆಗೆದು ಹಾಕಿರುವುದು ಕಂಡುಬರುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಏರುಗತಿಯಲ್ಲಿದ್ದ ಕೊರೋನ, ಜನರು ಹೆಚ್ಚು ಹೆಚ್ಚಾಗಿ ಬೆರೆಯುತ್ತಿರುವ ಈ ದಿನಗಳಲ್ಲಿ ನಿಯಂತ್ರಣಕ್ಕೆ ಬಂದಿದೆ ಅಂದರೆ ಜನರಲ್ಲಿ ಪ್ರತಿರೋಧ ಶಕ್ತಿ ಬೆಳೆದಿದೆಯೆಂದಲ್ಲವೇ? ಕಕ್ಕಿಲ್ಲಾಯರು ಈ ಹಿಂದೆ ವಿವರಿಸಿದ್ದಂತೆ ಬಹುತೇಕ ಜನರಲ್ಲಿ ಕೊರೋನ ಸೋಂಕು ತಗಲಿದ್ದರೂ ಯಾವುದೇ ರೋಗಲಕ್ಷಣಗಳನ್ನು ತೋರಿಸದೆ ಮರೆಯಾಗಿ ಹೋಗಿಬಿಡುತ್ತದೆ. ನನಗೆ ಕೊರೋನ ಬಂದೇ ಇಲ್ಲವೆಂದು ಭಾವಿಸುವ ಬಹುತೇಕ ಜನರಲ್ಲಿ ಬಹುಶಃ ಅದು ಈಗಾಗಲೇ ಬಂದು ಹೋಗಿ ಅವರಲ್ಲಿ ಪ್ರತಿರೋಧ ಗುಣ ಬೆಳೆದಿದ್ದಿರಬೇಕು. ಇಲ್ಲದಿದ್ದರೆ ಜನರು ಪರಸ್ಪರ ಹೆಚ್ಚು ಹೆಚ್ಚು ಬೆರೆಯುತ್ತಿರುವಂತೆಯೇ ಕೊರೋನ ಸೋಂಕು ಕಡಿಮೆಯಾಗುತ್ತಿರುವುದೇಕೆ? ಇನ್ನು ಕೆಲವು ತಿಂಗಳುಗಳು ಕಳೆದರೆ ಬಹುಶಃ ಜನರು ಕೊರೋನ ಅಂದರೆ ಅದೊಂದು ಶೀತ, ಫ್ಲೂನಂತಹ ಸಾಧಾರಣ ಕಾಯಿಲೆಯೆಂದು ನಿಶ್ಚಿಂತರಾಗಲೂಬಹುದು. ಬಹಳ ಹಿಂದೆ ಅನುಮಾನಿಸಿದಂತೆ ಸಮುದಾಯ ಪ್ರತಿರೋಧ ಗುಣ ಬಂದಾಗಿದೆಯೆಂದೇ ಅನಿಸುತ್ತಿದೆ.

ಕೊರೋನವನ್ನು ಪ್ರತಿಬಂಧಿಸುವ ವ್ಯಾಕ್ಸಿನ್ ಪ್ರಯೋಗಗಳು ಈಗ ಚರ್ಚೆಯಲ್ಲಿವೆ. ಕೊರೋನದ ಹಾವಳಿ ಕಡಿಮೆಯಾಗುತ್ತಿರುವ ರೀತಿಯನ್ನು ನೋಡಿದರೆ, ವ್ಯಾಕ್ಸಿನ್‌ನ ಅಗತ್ಯವುಂಟೇ ಎಂಬ ಪ್ರಶ್ನೆ ಏಳುತ್ತದೆ. ಜನರ ಆತಂಕ ಕಡಿಮೆಯಾಗುವ ಮೊದಲೇ ವ್ಯಾಕ್ಸಿನ್ ಪ್ರಯೋಗ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡುವ ಧಾವಂತ ಔಷಧಿ ಕಂಪೆನಿಗಳು ಹೊಂದಿರುವುದು ಕಂಡು ಬರುತ್ತದೆ. ಅತ್ಯವಸರದಲ್ಲಿ ವ್ಯಾಕ್ಸಿನ್ ತಯಾರಿಸಿ ಅದರ ಪರಿಣಾಮ, ಪ್ರಯೋಜನಗಳ ಬಗ್ಗೆ ಖಾತ್ರಿಯಿಲ್ಲದ ಈ ಕಂಪೆನಿಗಳು ವ್ಯಾಕ್ಸಿನ್ ಸಂಬಂಧ ತಮ್ಮ ಮೇಲೆ ಯಾವುದೇ ದಾವೆ ಹೂಡದಿರುವ ಖಾತ್ರಿಯನ್ನು ಸರಕಾರದಿಂದ ಕೇಳಿರುವುದೇಕೆ? ಕೊರೋನ ಸೋಂಕು ಇಳಿಮುಖವಾಗುತ್ತಿರುವಂತೆಯೇ, ಸರಕಾರ ಕೂಡ ವ್ಯಾಕ್ಸಿನ್ ವಿತರಣೆಗೆ ಅವಸರಪಡುವುದೇಕೆ? ವ್ಯಾಕ್ಸಿನ್ ದರಗಳನ್ನು ನೋಡಿದರೆ ಮತ್ತು ಅದನ್ನು ಜನರಿಗೆ ವಿತರಿಸುವ ಕಲಾಪಗಳ ಯೋಜನೆಗಳನ್ನು ನೋಡಿದರೆ ಆ ಹೆಸರಿನಲ್ಲೂ ಒಂದಷ್ಟು ದೋಚುವ ಹುನ್ನಾರಗಳು ಕಂಡುಬರುತ್ತಿವೆ.

ಕೊರೋನದ ಹೆಸರಿನಲ್ಲಿ ಹೆದರಿದ್ದೂ ಹೆದರಿಸಿದ್ದೂ ಅತಿಯಾಗಿ ಅದರ ದುಷ್ಪರಿಣಾಮ ನಮ್ಮ ಮಕ್ಕಳ ಮೇಲೆ ಆಗಿರುವುದಂತೂ ನಿಜ. ಶಾಲೆಗಳನ್ನು ತೆರೆಯದೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟಿದ್ದರ ದುಷ್ಪರಿಣಾಮಗಳು ಈಗಾಗಲೇ ವರದಿಯಾಗುತ್ತಿವೆ. ಮಕ್ಕಳು ಮೊಬೈಲಿನಲ್ಲಿ ಪಾಠ ಕಲಿಯುವುದಕ್ಕಿಂತ ಹೆಚ್ಚಾಗಿ ಆಟಗಳಲ್ಲಿ ತಲ್ಲೀನರಾಗಿ ಮೊಬೈಲಿನ ಚಟಕ್ಕೆ ತುತ್ತಾಗಿರುವ ದೃಶ್ಯಗಳನ್ನು ಮನೆ ಮನೆಗಳಲ್ಲಿ ನೋಡಬಹುದಾಗಿದೆ.

ಕೊರೋನದ ಹೆಸರಿನಲ್ಲಿ ಹೆದರಿದ್ದು ಅತಿಯಾಯಿತು. ಇನ್ನಾದರೂ ಈ ಬಗ್ಗೆ ವಿಚಾರಮತಿಗಳಾಗೋಣ. ವಯಸ್ಸಾದವರ ಮತ್ತು ಈಗಾಗಲೇ ವಿವಿಧ ರೋಗಗಳಿಗೆ ತುತ್ತಾಗಿರುವವರ ಬಗ್ಗೆ ಮಾತ್ರ ಎಚ್ಚರ ವಹಿಸಿದರೆ ಸಾಕೆನಿಸುತ್ತಿದೆ. ಉಳಿದವರೆಲ್ಲರೂ ಕೊರೋನ ಭೂಮಿಯಲ್ಲಿ ಉಳಿದರೂ ಹೆದರದಿರೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)