varthabharthi


ವಿಶೇಷ-ವರದಿಗಳು

ರೈತ ಪ್ರತಿಭಟನೆಯ ಜಾಗತಿಕ ಆಯಾಮ

ವಾರ್ತಾ ಭಾರತಿ : 5 Jan, 2021
ಉತ್ಸಾ ಪಟ್ನಾಯಕ್ ಅನುವಾದ : ನಾ ದಿವಾಕರ

ರೈತಾಪಿಯ ಈ ಮುಷ್ಕರ ಕೇವಲ ಕನಿಷ್ಠ ಬೆಂಬಲ ಬೆಲೆಗೆ ಸೀಮಿತವಾದದ್ದಲ್ಲ. ಸಾರ್ವಜನಿಕ ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯ ಉಳಿವಿಗೂ ಈ ಹೋರಾಟ ನಿರ್ಣಾಯಕವಾಗಿದೆ. ಭಾರತದ ಆಹಾರ ಕಣಜ ಎಂದೇ ಹೇಳಬಹುದಾದ ಉತ್ತರ ಭಾರತದ ಆಹಾರ ಧಾನ್ಯ ಉತ್ಪಾದನೆಯ ಆರ್ಥಿಕ ಸಕ್ಷಮತೆಯನ್ನು ಕಾಪಾಡದೆ ಹೋದಲ್ಲಿ ಇಡೀ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ವಿತರಣೆಯ ಪ್ರಕ್ರಿಯೆ ದುರ್ಬಲವಾಗುತ್ತದೆ. ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಏನೇ ಕೊರತೆ, ಲೋಪದೋಷಗಳಿದ್ದರೂ ಇದು ದೇಶದ ಬಹುಸಂಖ್ಯೆಯ ಜನರಿಗೆ ಜೀವನಾಧಾರ ಒದಗಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಿದೆ.


ರೈತರೊಂದಿಗೆ ಮಾತುಕತೆಯನ್ನೂ ನಡೆಸದೆ, ಕೇಂದ್ರ ಸರಕಾರ ಸಂಸತ್ತಿನಲ್ಲಿಯೂ ಚರ್ಚೆ ನಡೆಸದೆ ಅವಸರದಲ್ಲಿ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶದ ರೈತರು ನಡೆಸುತ್ತಿರುವ ಆಂದೋಲನ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ರೈತರ ಈ ಆಂದೋಲನ ಚಾರಿತ್ರಿಕ ಮಹತ್ವ ಪಡೆದಿದೆ. ರೈತಾಪಿಯ ಈ ಮುಷ್ಕರ ಕೇವಲ ಕನಿಷ್ಠ ಬೆಂಬಲ ಬೆಲೆಗೆ ಸೀಮಿತವಾದದ್ದಲ್ಲ. ಸಾರ್ವಜನಿಕ ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯ ಉಳಿವಿಗೂ ಈ ಹೋರಾಟ ನಿರ್ಣಾಯಕವಾಗಿದೆ. ಭಾರತದ ಆಹಾರ ಕಣಜ ಎಂದೇ ಹೇಳಬಹುದಾದ ಉತ್ತರ ಭಾರತದ ಆಹಾರ ಧಾನ್ಯ ಉತ್ಪಾದನೆಯ ಆರ್ಥಿಕ ಸಕ್ಷಮತೆಯನ್ನು ಕಾಪಾಡದೆ ಹೋದಲ್ಲಿ ಇಡೀ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ವಿತರಣೆಯ ಪ್ರಕ್ರಿಯೆ ದುರ್ಬಲವಾಗುತ್ತದೆ. ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಏನೇ ಕೊರತೆ, ಲೋಪದೋಷಗಳಿದ್ದರೂ ಇದು ದೇಶದ ಬಹುಸಂಖ್ಯೆಯ ಜನರಿಗೆ ಜೀವನಾಧಾರ ಒದಗಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಿದೆ.

ವಸಾಹತುಕಾಲ ಸ್ಥಿತಿಯ ಮರುನಿರ್ಮಾಣ
ಉತ್ತರದ ಔದ್ಯಮಿಕ ದೇಶಗಳಾದ ಅಮೆರಿಕ, ಕೆನಡಾ ಮತ್ತು ಐರೋಪ್ಯ ಸಂಘಟನೆಯ ರಾಷ್ಟ್ರಗಳಲ್ಲಿ ಅಲ್ಲಿನ ಗ್ರಾಹಕರಿಂದಲೇ ಹೆಚ್ಚಿನ ಬೇಡಿಕೆ ಇರುವ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ದೇಶಗಳ ಹವಾಮಾನಕ್ಕೆ ಅನುಗುಣವಾಗಿ ಅಲ್ಲಿನ ಏಕ ಬೆಳೆಯ ಭೂಮಿಯಲ್ಲಿ ಬೆಳೆಯಲಾಗುವ ಆಹಾರ ಧಾನ್ಯಗಳು ಮತ್ತು ಹೈನು ಉತ್ಪನ್ನಗಳು ಹೇರಳವಾಗಿ ಸಂಗ್ರಹವಾಗಿರುತ್ತವೆ. ಈ ಧಾನ್ಯಗಳಿಗೆ ಮತ್ತು ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಈ ದೇಶಗಳಿಗೆ ಅನಿವಾರ್ಯವಾಗಿರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಶ್ರೀಮಂತ ರಾಷ್ಟ್ರಗಳು ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದ್ದು ಆಹಾರ ಧಾನ್ಯ ಸಂಗ್ರಹಣೆಯ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸುತ್ತಿವೆ. ಬದಲಾಗಿ ಈ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ಆಹಾರಧಾನ್ಯಗಳನ್ನು ಆಮದು ಮಾಡಿಕೊಂಡು, ಇಲ್ಲಿನ ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಗುತ್ತಿಗೆ ಕೃಷಿ ಪದ್ಧತಿಗೆ ಒಳಪಡಿಸಿ ರಫ್ತು ಬೆಳೆಗಳನ್ನು ಬೆಳೆಯುವಂತೆ ಒತ್ತಡ ಹೇರಲಾಗುತ್ತಿದೆ. ಈ ರೀತಿಯ ಒತ್ತಡಕ್ಕೆ ಕಾರಣವೇನೆಂದರೆ ಈ ಔದ್ಯಮಿಕ ರಾಷ್ಟ್ರಗಳಲ್ಲಿ ಭಾರತದಲ್ಲಿ ಬೆಳೆಯುವಂತಹ ಆಹಾರ ಧಾನ್ಯಗಳನ್ನು ಬೆಳೆಯಲಾಗುವುದಿಲ್ಲ. ಅಂದರೆ ವಸಾಹತು ಕಾಲಘಟ್ಟದ ಆರ್ಥಿಕ ಸನ್ನಿವೇಶವನ್ನು ಪುನರ್ ಸೃಷ್ಟಿಸುವತ್ತ ಔದ್ಯಮಿಕ ರಾಷ್ಟ್ರಗಳು ಮುನ್ನಡೆದಿವೆ.

 1990ರ ದಶಕದಲ್ಲಿ ಫಿಲಿಪ್ಪೀನ್ಸ್ ಮತ್ತು ಹತ್ತು ವರ್ಷಗಳ ನಂತರ ಆಫ್ರಿಕಾ ಖಂಡದ ಬೋಸ್ಟ್ವಾನಾ ದೇಶಗಳು ಈ ರೀತಿಯ ಒತ್ತಡಕ್ಕೆ ಬಲಿಯಾಗಿದ್ದವು. ಈ ಸಂದರ್ಭದಲ್ಲೇ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಧಾನ್ಯಗಳ ಬೆಳೆಯನ್ನು ಎಥನಾಲ್ ಉತ್ಪಾದನೆಗೆ ಬಳಸಲು ಆರಂಭಿಸಿದ್ದರ ಪರಿಣಾಮವಾಗಿ 2007ರ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿದವು. ಆಹಾರ ಧಾನ್ಯಗಳಿಗಾಗಿ ಆಮದು ಪದಾರ್ಥಗಳನ್ನೇ ಅವಲಂಬಿಸಿದ್ದ 37 ದೇಶಗಳಲ್ಲಿ ಹಾಹಾಕಾರ ಉಂಟಾಗಿದ್ದು, ಆಹಾರಕ್ಕಾಗಿ ದಂಗೆಗಳು ಉಂಟಾಗಿದ್ದವು. ನಗರ ಪ್ರದೇಶದ ಜನರು ಹೆಚ್ಚಿನ ಬಡತನಕ್ಕೆ ನೂಕಲ್ಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ ಭದ್ರತೆ ಅತ್ಯಂತ ಮಹತ್ವದ ಸಂಗತಿಯಾಗಿದ್ದು ಇದನ್ನು ಜಾಗತಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವುದು ಅಪಾಯಕಾರಿಯಾಗುತ್ತದೆ. ಆದಾಗ್ಯೂ ಆಹಾರ ಭದ್ರತೆಯನ್ನು ಸಾಧಿಸಲು ಈ ದೇಶಗಳ ಸಾರ್ವಜನಿಕ ಆಹಾರ ಸಂಗ್ರಹಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಒಂದು ದಶಕದ ಹಿಂದೆಯಷ್ಟೇ ಭಾರತ ಈ ನಿಟ್ಟಿನಲ್ಲಿ ಜಾಗೃತವಾಗಿ ತನ್ನ ಆಹಾರ ಸಂಗ್ರಹವನ್ನು ಸಂರಕ್ಷಿಸಲು ಯಶಸ್ವಿಯಾಗಿತ್ತು. 2008ರ ಬೆಲೆ ಏರಿಕೆಗೂ ಮುನ್ನ ಆರು ವರ್ಷಗಳ ಕಾಲ ತಟಸ್ಥವಾಗಿದ್ದ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆರ್ಥಿಕ ಪುನಶ್ಚೇತನದ ಪರಿಣಾಮ ಪಂಜಾಬ್‌ನಲ್ಲಿ ಜಡಗಟ್ಟಿದ್ದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಹುಸಂಖ್ಯೆಯ ಬಡಜನತೆಯನ್ನು ‘‘ಬಡತನ ರೇಖೆಯ ಕೆಳಗಿರುವ’’ ಪಡಿತರ ವ್ಯವಸ್ಥೆಯಿಂದ ಹೊರಗುಳಿಯುವಂತೆ ಮಾಡಿದ ಪರಿಣಾಮ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಲಿಲ್ಲ. 2016ರ ನೋಟು ರದ್ದತಿಯಿಂದ ಉಂಟಾದ ನಿರುದ್ಯೋಗ ಮತ್ತು 2020ರ ಕೋವಿಡ್ ಪರಿಣಾಮದಿಂದ ಸೃಷ್ಟಿಯಾದ ಉದ್ಯೋಗ ಕೊರತೆ ಆಹಾರ ಧಾನ್ಯಗಳ ಒಟ್ಟಾರೆ ಬೇಡಿಕೆಯ ಪ್ರಮಾಣ ಚಾರಿತ್ರಿಕ ಕುಸಿತ ಕಾಣುವಂತೆ ಮಾಡಿವೆ.

ಭಾರತದ ರೈತಾಪಿ ಯಾವುದೇ ತರ್ಕಬದ್ಧ ಕಾರಣಗಳೇ ಇಲ್ಲದೆ ಅಪ್ರಾಮಾಣಿಕ ವ್ಯಾಪಾರದ ತಂತ್ರಗಾರಿಕೆಗಳಿಗೆ ಬಲಿಯಾಗಬೇಕಾಯಿತು. ಜಾಗತಿಕ ಬೆಲೆಗಳ ಏರುಪೇರುಗಳ ಪರಿಣಾಮ ಭಾರತದ ರೈತರು ತೀವ್ರ ಸಾಲದ ಹೊರೆಗೆ ಸಿಲುಕಿ ಸಂಕಷ್ಟಕ್ಕೀಡಾಗಬೇಕಾಯಿತು. ಪಂಜಾಬ್‌ನ ಒಂದು ಗ್ರಾಮದಲ್ಲಿ ಆತ್ಮಹತ್ಯೆಯಿಂದ ತಮ್ಮ ಗಂಡಂದಿರನ್ನು ಕಳೆದುಕೊಂಡ 59 ವಿಧವೆಯರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೊಡನೆ ಭಾರತ ಪೈಪೋಟಿ ನಡೆಸುವುದು ತರವಲ್ಲ. ಏಕೆಂದರೆ 1990ರ ದಶಕದಲ್ಲಿ ಈ ಶ್ರೀಮಂತ ರಾಷ್ಟ್ರಗಳು ತಮ್ಮ ಬೆಂಬಲ ಬೆಲೆ ಪದ್ಧತಿಯನ್ನು ಪರಿಷ್ಕರಿಸುವ ಮೂಲಕ ಅಲ್ಲಿನ ರೈತರಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲು ಆರಂಭಿಸಿದ್ದವು.

ಅಂತರ್‌ರಾಷ್ಟ್ರೀಯ ಕೃಷಿ ಒಡಂಬಡಿಕೆಯ ಸಹಾಯಧನವನ್ನು ಕಡಿಮೆ ಮಾಡುವ ಒಪ್ಪಂದದ ಅನುಸಾರ ಈ ರೀತಿ ನೇರ ನಗದು ನೀಡುವುದು ನಿಯಮಗಳ ಉಲ್ಲಂಘನೆಯಾಗಿದ್ದರೂ, ಇದು ಒಡಂಬಡಿಕೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳದಂತೆ ಈ ದೇಶಗಳು ಎಚ್ಚರವಹಿಸಿದ್ದವು. ಇದರಿಂದ ಉಂಟಾಗಬಹುದಾದ ಪರಿಣಾಮವನ್ನು ಗಮನಿಸದೆಯೇ ಭಾರತ ಮತ್ತಿತರ ರಾಷ್ಟ್ರಗಳು ಈ ಒಡಂಬಡಿಕೆಗೆ ಸಹಿ ಹಾಕಿದ್ದವು. ಅಮೆರಿಕದ 20 ಲಕ್ಷ ರೈತರಿಗೆ ನೀಡುವ ನೇರ ನಗದು ಸಹಾಯಧನದ ಪ್ರಮಾಣ ಆ ದೇಶದ ಒಟ್ಟು ಕೃಷಿ ಉತ್ಪನ್ನದ ಮೌಲ್ಯದಲ್ಲಿ ಅರ್ಧದಷ್ಟಾಗುತ್ತದೆ. ಇದಕ್ಕೆ ಅಮೆರಿಕದ ಬಜೆಟ್‌ನ ಶೇ. 1ರಷ್ಟು ನಿಧಿ ಬಳಕೆಯಾಗುತ್ತದೆ. ಭಾರತದಲ್ಲಿ ಇದೇ ರೀತಿ ಒಟ್ಟು ಕೃಷಿ ಉತ್ಪಾದನಾ ಮೌಲ್ಯದ ಶೇ. 25ರಷ್ಟು ಪ್ರಮಾಣವನ್ನು ಒಂದು ಕೋಟಿ 20 ಲಕ್ಷ ರೈತರಿಗೆ ಸಹಾಯಧನದ ರೂಪದಲ್ಲಿ ನೀಡಿದರೂ ಕೇಂದ್ರ ಬಜೆಟ್‌ನಲ್ಲಿ ಶೇ. 50ರಷ್ಟು ನಿಧಿಯ ಬಳಕೆಯಾಗುತ್ತದೆ. ಇದು ಆರ್ಥಿಕವಾಗಿ ಅಸಾಧ್ಯವಾಗಿದ್ದು ಆಡಳಿತ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.

ಸಮರ್ಪಕ ಬೆಲೆಯ ನಿಷ್ಕರ್ಷೆ
ತಮಗೆ ಅಲ್ಪಪ್ರಮಾಣದ ನಗದು ಪಾವತಿ ಮಾಡುವುದನ್ನು ಭಾರತದ ರೈತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇಶದ ಸಮಸ್ತ ಜನತೆಗಾಗಿ ತಾವು ಬೆಳೆಯುವ ಆಹಾರ ಧಾನ್ಯಗಳಿಗೆ ಸಮರ್ಪಕವಾದ, ತರ್ಕಬದ್ಧವಾದ ಬೆಲೆ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಹಾಗಾದಲ್ಲಿ ಮಾತ್ರ ರೈತರು ತಮ್ಮ ಬೇಸಾಯದ ವೆಚ್ಚವನ್ನು ಸರಿದೂಗಿಸಿ ಸಾಧಾರಣ ಬದುಕು ನಡೆಸಲು ಸಾಧ್ಯವಾಗುತ್ತದೆ. ಭಾರತದ ಸಂದರ್ಭದಲ್ಲಿ ಬೆಂಬಲ ಬೆಲೆ ಪದ್ಧತಿಯೊಂದೇ ನ್ಯಾಯಯುತವಾಗಿ ಕಾಣುತ್ತದೆ. ಪಂಜಾಬ್‌ನಲ್ಲಿ ಅಂತರ್ಜಲ ಕುಸಿಯುತ್ತಿರುವುದು ಆತಂಕಕಾರಿ ವಿಷಯವೇ ಆದರೂ ಇಲ್ಲಿ ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸುವುದು ಮುಖ್ಯವಾಗುತ್ತದೆ. ಕಡಿಮೆ ನೀರು ಬಳಕೆಯಾಗುವಂತಹ ಮಾದರಿಗಳನ್ನು ಬಳಸಬೇಕಾಗುತ್ತದೆ. (ಕೃಷಿ ವಿಜ್ಞಾನಿಗಳು ಕಂಡುಹಿಡಿದಿರುವ Rice Intensification ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚಿನ ಸಾವಯವ ಗೊಬ್ಬರವನ್ನು ಬಳಸುವುದು ಮತ್ತು ಹೆಚ್ಚಿನ ಅಂತರದಲ್ಲಿ ಭತ್ತದ ನಾಟಿ ಮಾಡುವುದು, ಚೌಕಾಕಾರದಲ್ಲಿ ನಾಟಿ ಮಾಡುವುದರ ಮೂಲಕ ನಡುವೆ ಹೆಚ್ಚಿನ ಜಲಸಾಂದ್ರತೆಯನ್ನು ತಡೆಗಟ್ಟಿ, ತೇವಾಂಶವನ್ನು ಉಳಿಸಿಕೊಳ್ಳುವುದು, ಅಂತರ್ಜಲ ಸಂರಕ್ಷಣೆಯ ಒಂದು ವಿಧಾನವಾಗಿದೆ-ಅನುವಾದಕ)

ಅಂತರ್‌ರಾಷ್ಟ್ರೀಯ ಕೃಷಿ ಒಡಂಬಡಿಕೆಗಳಲ್ಲಿ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳು ಅಸಂಬದ್ಧ ರೀತಿಯಲ್ಲಿ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳ ಅಡಿಯಲ್ಲೇ ಆಹಾರ ಧಾನ್ಯಗಳ ಬೆಂಬಲ ಬೆಲೆ ನಿರ್ಧರಿಸುವುದನ್ನೂ ಅಳವಡಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಒಂದು ನಿಯಮವಾಗಿದೆ. 2018ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ವಿರುದ್ಧ ದೂರು ಸಲ್ಲಿಸಿದ್ದ ಅಮೆರಿಕ ಸರಕಾರ, ಭಾರತದಲ್ಲಿ 1986-88ರ ಮೂಲ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು, ಅಂದಿನ ಡಾಲರ್ ಮೌಲ್ಯ 12.5 ರೂ.ಗಳಿಗೆ ಅನುಗುಣವಾಗಿ ಭಾರತ 2013-14ರಲ್ಲಿ ಭತ್ತ ಮತ್ತು ಗೋಧಿಗೆ ಒಂದು ಕ್ವಿಂಟಾಲಿಗೆ ಕ್ರಮವಾಗಿ 235 ರೂ. ಮತ್ತು 354 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಕೋರಿತ್ತು. ಆದರೆ ಭಾರತದಲ್ಲಿ ಈ ವೇಳೆಗೆ ಬೆಂಬಲ ಬೆಲೆ ಕ್ರಮವಾಗಿ 1,348 ರೂ. ಮತ್ತು 1,386 ರೂ.ಗಳಷ್ಟಿತ್ತು. ಕ್ವಿಂಟಲ್‌ಗೆ ಒಂದು ಸಾವಿರ ರೂ. ಹೆಚ್ಚಾಗಿತ್ತು. ಇದನ್ನು 2013-14ರ ಭತ್ತ ಮತ್ತು ಗೋಧಿ ಉತ್ಪನ್ನದ ಒಟ್ಟು ಮೌಲ್ಯದೊಡನೆ ಗುಣಾಕಾರ ಮಾಡಿದರೆ ಇದು ಒಟ್ಟು ಉತ್ಪಾದನೆಯ ಶೇ. 77 ಮತ್ತು ಶೇ. 67ರಷ್ಟಾಗುತ್ತದೆ. ಈ ಲೆಕ್ಕಾಚಾರವನ್ನು ವಿಶ್ವವಾಣಿಜ್ಯ ಸಂಸ್ಥೆಯ ಮುಂದಿರಿಸಿದ್ದ ಅಮೆರಿಕ ಸರಕಾರ, ಭಾರತದ ಈ ನೀತಿ ಅಂತರ್‌ರಾಷ್ಟ್ರೀಯ ಒಪ್ಪಂದದಲ್ಲಿ ನಿಗದಿಪಡಿಸಿರುವ ಗರಿಷ್ಠ ಶೇ. 10ರಷ್ಟು ಬೆಂಬಲ ನೀಡುವ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಎರಡು ತಿಂಗಳ ಹಿಂದೆ ಅಮೆರಿಕ ಭಾರತಕ್ಕೆ ಮತ್ತಷ್ಟು ಹೊಸ ಸವಾಲುಗಳನ್ನು ಹಾಕಿದೆ. ದುರ್ಬಲ ಅಭಿವೃದ್ಧಿಶೀಲ ದೇಶಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೃಷಿ ಒಡಂಬಡಿಕೆಯಲ್ಲಿ ಅಪ್ರಾಮಾಣಿಕವಾದ, ಅಸಂಬದ್ಧ ನಿಯಮಗಳನ್ನು ಅಳವಡಿಸಲಾಗಿದೆ. ಭಾರತದ ರೈತರು ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಆಹಾರ ಉತ್ಪನ್ನ ಮಾಡುತ್ತಿದ್ದು 2013-14ರಲ್ಲಿ 60.5ರಷ್ಟಿದ್ದ ಡಾಲರ್ ಮೌಲ್ಯಕ್ಕೆ ತುಲನೆ ಮಾಡಿದರೆ ಭಾರತ ನೀಡುತ್ತಿರುವ ಬೆಂಬಲ ಬೆಲೆ ಜಾಗತಿಕ ಬೆಲೆಗಳಿಗಿಂತಲೂ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಅಂದರೆ ವಾಸ್ತವವಾಗಿ ಬೆಂಬಲ ಬೆಲೆ ನಕಾರಾತ್ಮಕವಾಗಿಯೇ ಕಂಡುಬರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ನೋಡಿದಾಗ ಭತ್ತ ಮತ್ತು ಗೋಧಿಯ ಬೆಲೆಗಳು ಚಾರಿತ್ರಿಕ ಕುಸಿತ ಕಂಡಿವೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ಕೃಷಿ ಸಹಾಯಧನ ತೀವ್ರ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲೇ ಈ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಂತಹ ದೇಶಗಳ ಮಾರುಕಟ್ಟೆಗಳಲ್ಲಿ ತಂದು ಸುರಿಯಲು ಹತಾಶರಾಗಿವೆ. ಈ ದೃಷ್ಟಿಯಿಂದ ನೋಡಿದಾಗ ಭಾರತದ ರೈತ ಸಂಘಟನೆಗಳು ತಾವು ವಿರೋಧಿಸುತ್ತಿರುವ ಮೂರು ಕೃಷಿ ಮಸೂದೆಗಳಿಂದ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಲಾಭವಾಗುತ್ತದೆ ಎನ್ನುವುದನ್ನು ಸರಿಯಾಗಿ ಗುರುತಿಸಿದ್ದು, ವಿದೇಶಿ ಕೃಷಿ ಉದ್ದಿಮೆಗಳು ಭಾರತದ ಕೃಷಿ ವ್ಯವಸ್ಥೆಗೆ ಮಾರಕವಾಗುವುದನ್ನೂ ಸಮರ್ಪಕವಾಗಿ ಗುರುತಿಸಿವೆ.

ಪಂಜಾಬ್ ಮತ್ತು ಹರ್ಯಾಣದಲ್ಲಿ ಈಗಾಗಲೇ ರೈತರು ವಿದೇಶಿ ಕೃಷಿ ಉದ್ದಿಮೆಗಳೊಡನೆ ಗುತ್ತಿಗೆ ಕೃಷಿಯನ್ನು ನಡೆಸಿ ಅದರ ದುಷ್ಪರಿಣಾಮಗಳನ್ನು ಎದುರಿಸಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಲೆ ಮತ್ತು ಗುಣಮಟ್ಟದ ಬಗ್ಗೆ ಒಪ್ಪಿತ ನಿಯಮಗಳನ್ನೂ ಉಲ್ಲಂಘಿಸುವ ಮೂಲಕ ರೈತರಿಗೆ ವಂಚಿಸುವ ಈ ಅಗೋಚರ ಖಾಸಗಿ ಕಾರ್ಪೊರೇಟ್ ಉದ್ದಿಮೆಗಳೊಡನೆ ತಾವು ಯಾವುದೇ ರೀತಿಯಲ್ಲೂ ವ್ಯವಹರಿಸಲು ಸಿದ್ಧರಾಗಿಲ್ಲ ಎಂದು ರೈತ ಸಮುದಾಯ ಸ್ಪಷ್ಟವಾಗಿ ಹೇಳಿದೆ. ಎಷ್ಟೇ ಅದಕ್ಷತೆ ಇದ್ದರೂ, ಹಣ ಪಾವತಿಯಲ್ಲಿ ವಿಳಂಬ ಉಂಟಾದರೂ, ತಮ್ಮ ಉತ್ಪನ್ನಗಳನ್ನು ಸರಕಾರಿ ಏಜೆಂಟರಿಗೆ ನಿಗದಿತ ಬೆಂಬಲ ಬೆಲೆಗೆ ಮಾರಾಟ ಮಾಡಲು ರೈತರು ಸಿದ್ಧರಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳ ಅನುಸಾರ ಮಾರುಕಟ್ಟೆ ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಿದರೆ ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಉದ್ದಿಮೆಗಳೊಡನೆ ವಿದೇಶಿ ಕೃಷಿ ಉದ್ದಿಮೆಗಳೂ ಪ್ರವೇಶಿಸುತ್ತವೆ, ಇದರಿಂದ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೂ ಪೆಟ್ಟಾಗುವುದಲ್ಲದೆ, ಸಾರ್ವಜನಿಕ ಸಂಗ್ರಹಣೆಯ ಪದ್ಧತಿಯೂ ಇಲ್ಲವಾಗುತ್ತದೆ ಎನ್ನುವ ರೈತರ ಆತಂಕ ನ್ಯಾಯಯುತವಾಗಿದೆ.

ಸಹಾಯಧನ ಪಡೆಯುವ ವಿದೇಶಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿನ ಬಡ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹಲವು ಕೃಷಿ ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಆದರೆ ಈ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಲ್ಲಿ ಹಸಿರು ಇಂಧನ ಬಳಕೆಯ ಆಗ್ರಹ ಹೆಚ್ಚಾಗುತ್ತಿದ್ದು ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತದೆ ಎನ್ನುವ ವಾಸ್ತವಾಂಶವನ್ನು ಈ ತಜ್ಞರು ಮರೆಮಾಚುತ್ತಿದ್ದಾರೆ. ಹಾಗಾಗಿ ಇಂದು ಕಡಿಮೆ ಬೆಲೆಯ ಆಹಾರ ಧಾನ್ಯಗಳ ಆಮದು ಪ್ರಕ್ರಿಯೆಗೆ ಅವಕಾಶ ನೀಡಿದರೆ ಮುಂಬರುವ ದಿನಗಳಲ್ಲಿ ಇದರಿಂದ ಭಾರತದ ರೈತರು ವಿನಾಶದ ಅಂಚಿಗೆ ತಲುಪುವುದೇ ಅಲ್ಲದೆ, ಬೆಲೆ ಏರಿಕೆ ತೀವ್ರವಾಗಿ ಈ ಹಿಂದೆ ಕೆಲವು ಅಭಿವೃದ್ಧಿಶೀಲ ದೇಶಗಳು ಎದುರಿಸಿದ್ದ ಸಂಕಷ್ಟಗಳನ್ನೇ ಭಾರತವೂ ಎದುರಿಸಬೇಕಾಗುತ್ತದೆ. ತಮ್ಮ ಬೆವರು ಹರಿಸಿ ವ್ಯವಸಾಯದಲ್ಲಿ ತೊಡಗಿರುವ ಭಾರತದ ರೈತಾಪಿಯ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಈ ಕೃಷಿ ಮಸೂದೆಗಳನ್ನು ವಿರೋಧಿಸುವುದೇ ಅಲ್ಲದೆ, ಸ್ಥಳೀಯ ಮತ್ತು ವಿದೇಶಿ ಉದ್ಯಮಿಗಳ ಕುತಂತ್ರಗಳ ವಿರುದ್ಧ ದನಿ ಎತ್ತಬೇಕಿದೆ.

ಕೃಪೆ: TheHindu

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)