varthabharthi


ನಿಮ್ಮ ಅಂಕಣ

ಅನುಭವ ಮಂಟಪವು ಸಮಾನತೆಯ ಶಕ್ತಿಸೌಧವಾಗಲಿ

ವಾರ್ತಾ ಭಾರತಿ : 6 Jan, 2021
-ಸೌಮ್ಯ ಹೆಗ್ಗಡಹಳ್ಳಿ, ಗುಂಡ್ಲುಪೇಟೆ, ಚಾಮರಾಜನಗರ

ಮಾನ್ಯರೇ,
ಸಮಸಮಾಜದ ನೆಲೆಗಟ್ಟಿನಲ್ಲಿ ಎಲ್ಲರ ಒಳಿತನ್ನು ಬಯಸಿದ ವೈಚಾರಿಕ ಚಿಂತನೆಯೇ ಅನುಭವ ಮಂಟಪವೆಂಬುದು ನಮಗೆಲ್ಲ ತಿಳಿದಿದೆ. ಬಸವಾದಿ ಶರಣರ ಕಾಯಕ ಮತ್ತು ವಚನ ಚಳವಳಿ, ಜಾತಿ ಸಮಾನತೆಯೆಂಬ ವೈಚಾರಿಕ ಚಳವಳಿಯನ್ನು ಮುನ್ನಡೆಸಲು ಕಟ್ಟಿದ್ದು ಮಹಾಮನೆಯೆಂಬ ಅನುಭವ ಮಂಟಪ. ಆದರೆ ಇತೀಚಿನ ದಿನಗಳಲ್ಲಿ ಒಂದಷ್ಟು ಬೆಳವಣಿಗೆಗಳು ಬಸವಣ್ಣ ಬಯಸಿದ ಸಮಾನತೆಯನ್ನು ಒಪ್ಪಿಕೊಳ್ಳದೆ, ಅವರ ಚಿಂತನೆಯನ್ನು ಇವತ್ತಿನ ಮನುವಾದಿ ಮತ್ತು ಕೋಮುವಾದಿ ಶಕ್ತಿಗಳು ಹೇಗೆ ತಿರುಚುತ್ತಿವೆ ಎಂಬುದಕ್ಕೆ ಇವತ್ತಿನ ರಾಜ್ಯ ಸರಕಾರ ಎಲ್ಲ ದಿನಪತ್ರಿಕೆಗಳಲ್ಲಿ ನೀಡಿರುವ ನೂತನ ಅನುಭವ ಮಂಟಪದ ಭೂಮಿಪೂಜೆಯ ಜಾಹೀರಾತು ಸಾಕ್ಷಿಯಾಗಿದೆ. ಈ ಜಾಹೀರಾತು ಬರಹದಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂದೂ ಬರೆಯಲಾಗಿದೆ. ಬಸವಣ್ಣನವರು ಎಂದೂ ಸನಾತನವಾದಿಗಳನ್ನು ಒಪ್ಪದೆ ಸಮಾನತೆಯ ಹಾದಿಯಲ್ಲಿ ನಡೆದವರು. ಅನುಭವ ಮಂಟಪ ಎನ್ನುವುದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿರುವ ವಿವಿಧ ಧರ್ಮ ಕುಲ-ಜಾತಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮಸಮಾಜದತ್ತ ಕೊಂಡೊಯ್ಯುವುದಲ್ಲದೆ ಸಕಲರ ಲೇಸನ್ನು ಬಯಸುವುದಾಗಿದೆ. ಆದರೆ ಇವರು ಬಸವಣ್ಣನವರನ್ನು ಒಂದೇ ಒಂದು ಧರ್ಮದ ಐಕ್ಯತೆಗೆ ಗುರುತಿಸುವುದರ ಮೂಲಕ ಮೂಲೆಗುಂಪು ಮಾಡುತ್ತಿರುವುದು ಬಹಳ ವಿಪರ್ಯಾಸದ ಸಂಗತಿಯಾಗಿದೆ. ಅನುಭವ ಮಂಟಪ ಎಂಬುದು ಸಮಾನತೆಯ ಶಕ್ತಿಸೌಧವಾಗಬೇಕು ಹೊರತು ಸನಾತನವಾದಕ್ಕಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)