varthabharthi


ವಿಶೇಷ-ವರದಿಗಳು

ಸಿದ್ಧಾಂತಗಳ ಸಾವು

ವಾರ್ತಾ ಭಾರತಿ : 7 Jan, 2021
ಪ್ರೊ. ರಹಮತ್ ತರೀಕೆರೆ

ಸಿದ್ಧಾಂತವೊಂದರ ಆಧಾರದಲ್ಲಿ ಜನಾಭಿಪ್ರಾಯ ರೂಪಿಸುವ, ಅವರನ್ನು ಸಂಘಟಿಸುವ ಮತ್ತು ರಾಜಕೀಯ, ಸಾಮಾಜಿಕ ಬದಲಾವಣೆಗೆ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ‘ಚಳವಳಿ’ ಎನ್ನುವುದಾದರೆ, ಭಾರತದಲ್ಲಿ ಪ್ರಭಾವಶಾಲಿಯಾಗಿರುವುದು ಪ್ರತಿಗಾಮಿ ಸಿದ್ಧಾಂತಗಳೇ. ಸಮಾಜವಾದಿ ಆಶಯವುಳ್ಳ ಸಿದ್ಧಾಂತ ಮತ್ತು ಚಳವಳಿಗಳು ದಿಗಿಲುಗೊಳ್ಳುವಂತೆ ಇವುಗಳ ಸಾಮರ್ಥ್ಯ ಹೆಚ್ಚಳಗೊಂಡಿದೆ. ಊಳಿಗಮಾನ್ಯ ಪದ್ಧತಿ, ಬಂಡವಾಳವಾದ, ಉಚ್ಚಜಾತಿಗಳ ಹಿತಸಾಧಕ ತತ್ವಸಿದ್ಧಾಂತಗಳು, ಭಾವುಕ ಜನರಿಗೆ ಧಾರ್ಮಿಕ ಕನಸುಗಳನ್ನು ಕೊಟ್ಟು ತಮ್ಮ ರಾಜಕೀಯ, ಸಾಮಾಜಿಕ ಬುನಾದಿಯನ್ನು ವಿಸ್ತರಿಸಿಕೊಂಡಿವೆ.


ಒಮ್ಮೆ ಪೂರ್ಣಚಂದ್ರ ತೇಜಸ್ವಿಯವರು, ಚಂದ್ರಬಾಬು ನಾಯ್ಡು ಆಂಧ್ರದ ಚುನಾವಣೆ ಗೆದ್ದ ಬಳಿಕ, ‘‘ಈಗ ಬೇಕಾಗಿರುವುದು ಸಿದ್ಧಾಂತಗಳಲ್ಲ; ಜನರ ಅಗತ್ಯಗಳಿಗೆ ಮಿಡಿವ ಚುರುಕಾದ ರಾಜಕೀಯ ನಾಯಕತ್ವ. ವಸಾಹತುಶಾಹಿ, ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಜಾಗತೀಕರಣ ಮುಂತಾದ ಪರಿಭಾಷೆಗಳು ನಿರುಪಯುಕ್ತ’’ ಎಂಬರ್ಥದ ಹೇಳಿಕೆ ನೀಡಿದ್ದರು. ಆದರೆ ಕಾರ್ಪೊರೇಟ್ ವ್ಯವಸ್ಥೆಗೆ ಸರ್ವಾನುಕೂಲ ಒದಗಿಸುವುದನ್ನೇ ಅಭಿವೃದ್ಧಿ ಮತ್ತು ಆದರ್ಶ ಸರಕಾರವೆಂದು ಭಾವಿಸಿದ್ದ ನಾಯ್ಡು ಅವರಿಗೆ, ಜನ ಮುಂದಿನ ಚುನಾವಣೆಯಲ್ಲಿ ಶೋಚನೀಯವಾದ ಸೋಲನ್ನು ಉಣಬಡಿಸಿದರು. ಬಳಿಕ ಹಿಂದುತ್ವ ಮತ್ತು ಕಾರ್ಪೊರೇಟ್ ಅಭಿವೃದ್ಧಿಗಳ ಮಿಶ್ರ ಮಾದರಿಯ ಪ್ರತೀಕವಾದ ಗುಜರಾತಿನ ಮುಖ್ಯಮಂತ್ರಿ ಮೋದಿಯವರು ಗೆದ್ದು ಪ್ರಧಾನಿಯಾದರು. ಅವರ ಗೆಲುವಿನ ಸಂಭ್ರಮ ಗಾಳಿಯಲ್ಲಿ ಇನ್ನೂ ಇರುವಾಗಲೇ, ದಿಲ್ಲಿ ಚುನಾವಣೆಯಲ್ಲಿ ಆಮ್‌ಆದ್ಮಿ, ಮೋದಿಯವರ ಪಕ್ಷವನ್ನು ಗುಡಿಸಿಹಾಕಿ ವಿಜಯದ ನಗೆ ಬೀರಿತು. ಆದರೆ ನೋಟು ರದ್ದತಿ, ಜಿಎಸ್‌ಟಿಗಳಿಂದ ದೇಶದ ಆರ್ಥಿಕತೆಯ ಸೊಂಟ ಮುರಿದರೂ, ಹಿಂದುತ್ವದ ಪ್ರತೀಕವಾದ ಮೋದಿ ಕೈಗೆ ಜನ ಮತ್ತೊಮ್ಮೆ ದೇಶದ ಚುಕ್ಕಾಣಿ ಕೊಟ್ಟರು. ಭಾರತದ ಚುನಾವಣೆ ಮತ್ತದರ ಫಲಿತಾಂಶಗಳು ಊಹಾತೀತವಾಗಿರುತ್ತವೆ.

ಪ್ರಜಾಪ್ರಭುತ್ವದಲ್ಲಿ ಚುನಾವಣಾ ಫಲಿತಾಂಶಗಳಿಗೆ ಸಂಕೀರ್ಣ ಕಾರಣಗಳಿದ್ದು, ಅವುಗಳ ಆಧಾರದಲ್ಲಿ ಸಿದ್ಧಾಂತದ ಗೆಲುವು-ಸೋಲಿನ ಪ್ರಶ್ನೆಯನ್ನು ಸರಳವಾಗಿ ತೀರ್ಮಾನಿಸುವುದು ಕಷ್ಟ. ಪ್ರತಿ ಚುನಾವಣಾ ಫಲಿತಾಂಶವೂ ಮತದಾರರ ಆಶೋತ್ತರವೇನು ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಲೇ ಇರುತ್ತದೆ. ನಿರಾಶೆಗೈದ ಅಧಿಕಾರಸ್ಥ ಪಕ್ಷವನ್ನು ತಿರಸ್ಕರಿಸಿ, ಇನ್ನೊಂದು ಪಕ್ಷ ತಮ್ಮ ಕಷ್ಟಗಳಿಗೆ ಮಿಡಿಯಬಹುದು ಎಂಬ ಆಸೆಗಣ್ಣಿಂದ ಜನ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅವರ ಹೆಚ್ಚಿನ ಪ್ರಯೋಗಗಳು ನಿರಾಶೆಯಲ್ಲಿ ಮುಗಿದಿವೆ ಎನ್ನುವುದು ವಾಸ್ತವ. ಈಚೆಗೆ ಸರಕಾರವೊಂದು ಯಾವ ಬಗೆಯಲ್ಲಿ ತಮಗೆ ನೆರವಾಗುತ್ತದೆ ಎಂಬ ಅಂಶಕ್ಕಿಂತ, ನಮಗೆ ಬೇಡವಾದವರನ್ನು ಹೇಗೆ ಹದ್ದುಬಸ್ತಿನಲ್ಲಿ ಇಡುತ್ತದೆ ಎಂಬ ನೇತ್ಯಾತ್ಮಕ ಅಂಶವೂ ಮತದಾನಕ್ಕೆ ಕಾರಣವಾಗುತ್ತಿದೆ. ಮುಖ್ಯವಾದ ಪ್ರಶ್ನೆಯೆಂದರೆ, ವೈವಿಧ್ಯಮಯ ಜೀವನಕ್ರಮವೂ ಅಸಮಾನ ಆರ್ಥಿಕ ಬೆಳವಣಿಗೆಯೂ ಇರುವ ದೇಶವನ್ನು, ಎಲ್ಲರೂ ಘನತೆ-ನೆಮ್ಮದಿಯಿಂದ ಬದುಕಬಲ್ಲ ತಾಣವಾಗಿ ಬದಲಿಸಬಲ್ಲ ರಾಜಕೀಯ ತತ್ವಸಿದ್ಧಾಂತ, ನಾಯಕತ್ವ ಅಥವಾ ವ್ಯವಸ್ಥೆ ಯಾವುದು ಎಂಬುದು.

ತಮ್ಮ ಕನಸಿನ ಸಮಾಜವನ್ನು ಕಟ್ಟುವುದಕ್ಕೆ ತಕ್ಕನಾದ ತತ್ವಸಿದ್ಧಾಂತದ ಹುಡುಕಾಟವನ್ನು ಎಲ್ಲ ಕಾಲದ ಚಿಂತಕರು-ರಾಜಕೀಯ ತತ್ವಶಾಸ್ತ್ರಜ್ಞರು ನಡೆಸುತ್ತ ಬಂದಿದ್ದಾರೆ. ಬಸವಣ್ಣ, ಅಂಬೇಡ್ಕರ್, ಮಾರ್ಕ್ಸ್, ವಿವೇಕಾನಂದ, ಗಾಂಧಿ, ಪೆರಿಯಾರ್, ನಾರಾಯಣ ಗುರು, ಲೋಹಿಯಾ ಮುಂತಾದವರ ತತ್ವಚಿಂತನೆಯಲ್ಲಿ ಇದರ ಶೋಧವಿತ್ತು; ಸಮಕಾಲೀನ ಸಮಾಜ ಸೀಳುಹಾದಿಯಲ್ಲಿ ನಿಂತಾಗಲೆಲ್ಲ, ಪರ್ಯಾಯ ತಾತ್ವಿಕತೆಗಳ ಹುಡುಕಾಟ ತೀವ್ರಗೊಳ್ಳುತ್ತದೆ. ರಾಜಕೀಯ-ಸಾಮಾಜಿಕ ಚಿಂತಕರು ಮತ್ತು ಚಳವಳಿಗಳು, ಸಾಮಾನ್ಯವಾಗಿ ವರ್ತಮಾನ ಸಮಾಜವನ್ನು ರೋಗಗ್ರಸ್ತ ದೇಹವೆಂದು ಭಾವಿಸಿ, ಅದಕ್ಕೆ ಮದ್ದರೆವ ರೂಪಕಗಳಲ್ಲಿ ಪರ್ಯಾಯ ತತ್ವಸಿದ್ಧಾಂತ ಮತ್ತು ರಾಜಕಾರಣವನ್ನು ಶೋಧಿಸುವುದುಂಟು. ಈ ಪ್ರಕ್ರಿಯೆಯಲ್ಲಿ ಜನರ ಆಲೋಚನಾ ಕ್ರಮವನ್ನು ರೂಪಿಸುವುದುಂಟು. ಆದರೆ ಜನರೂ ಸಿದ್ಧಾಂತ ಮತ್ತು ಚಳವಳಿಗಳ ಚಹರೆಯನ್ನು ಬದಲಿಸುವುದನ್ನು ಮರೆಯುವಂತಿಲ್ಲ. ಹೊಸತಲೆಮಾರಿನ ಯುವಜನರನ್ನು ಸೆಳೆಯಲು ಆಪ್ ಎಡಪಂಥಕ್ಕೂ ಹಿಂದುತ್ವಕ್ಕೂ ಹೊರತಾದ ಹೊಸ ರಾಜಕೀಯ ತಾತ್ವಿಕತೆ ರೂಪಿಸಿತು. ಅದನ್ನು ರೂಪಿಸುವಲ್ಲಿ ದಿಲ್ಲಿಗರ ಸಾತ್ವಿಕ ಸಿಟ್ಟು, ಪರ್ಯಾಯದ ಹುಡುಕಾಟ, ಹೊಸ ಆಶೋತ್ತರಗಳೂ ಒತ್ತಾಸೆಯಾದವು.

ತತ್ವಸಿದ್ಧಾಂತವೆಂದರೆ, ತತ್ವಶಾಸ್ತ್ರದ ನೆಲೆಯಲ್ಲಿ ತರ್ಕಬದ್ಧವಾಗಿ ಪ್ರತಿಪಾದಿತವಾಗಿರುವ ಒಂದು ವಿಚಾರ ಪ್ರಣಾಳಿಕೆ. ಪ್ರತಿ ತತ್ವಸಿದ್ಧಾಂತದೊಳಗೂ ಲೋಕದೃಷ್ಟಿಯೊಂದು ಇರುತ್ತದೆ. ಅದು ಅಮೂರ್ತ ರೂಪದಲ್ಲಿದ್ದು ಅದರೊಳಗೆ ಸಮಾಜ ರಾಜಕಾರಣ ಮತ್ತು ಆರ್ಥಿಕತೆಗಳನ್ನು ಮರುರೂಪಿಸುವ ಉದ್ದೇಶಗಳಿರುತ್ತವೆ; ಜನ, ಸಮಾಜ, ಅಧಿಕಾರ, ಸಂಪತ್ತುಗಳನ್ನು ವಶಪಡಿಸಿಕೊಳ್ಳುವ ಮತ್ತು ನಿಯಂತ್ರಿಸುವ ಆಶಯಗಳಿರುತ್ತವೆ. ಬುನಾದಿ ತತ್ವಶಾಸ್ತ್ರೀಯವಾಗಿದ್ದರೂ ಪರಿಣಾಮದಲ್ಲಿ ಅವು ಮೂರ್ತವಾದ ಸಾಮಾಜಿಕ, ರಾಜಕೀಯ, ಆರ್ಥಿಕ ಪಲ್ಲಟಗಳಿಗೆ ಪ್ರೇರಕವಾಗುತ್ತ ಬಂದಿವೆ. ತತ್ವಸಿದ್ಧಾಂತಗಳಲ್ಲಿ ದಮನಿತರ ಪರವಾದವು ಮಾತ್ರ ಇರುವುದಿಲ್ಲ. ಮಾರುಕಟ್ಟೆವಾದ, ಹಿಂದುತ್ವವಾದ, ಇಸ್ಲಾಮಿ ಮೂಲಭೂತವಾದ ಮುಂತಾದವೂ ಇರುತ್ತವೆ. ಸಿದ್ಧಾಂತವೊಂದರ ಆಧಾರದಲ್ಲಿ ಜನಾಭಿಪ್ರಾಯ ರೂಪಿಸುವ, ಅವರನ್ನು ಸಂಘಟಿಸುವ ಮತ್ತು ರಾಜಕೀಯ, ಸಾಮಾಜಿಕ ಬದಲಾವಣೆಗೆ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ‘ಚಳವಳಿ’ ಎನ್ನುವುದಾದರೆ, ಭಾರತದಲ್ಲಿ ಪ್ರಭಾವಶಾಲಿಯಾಗಿರುವುದು ಪ್ರತಿಗಾಮಿ ಸಿದ್ಧಾಂತಗಳೇ. ಸಮಾಜವಾದಿ ಆಶಯವುಳ್ಳ ಸಿದ್ಧಾಂತ ಮತ್ತು ಚಳವಳಿಗಳು ದಿಗಿಲುಗೊಳ್ಳುವಂತೆ ಇವುಗಳ ಸಾಮರ್ಥ್ಯ ಹೆಚ್ಚಳಗೊಂಡಿದೆ. ಊಳಿಗಮಾನ್ಯ ಪದ್ಧತಿ, ಬಂಡವಾಳವಾದ, ಉಚ್ಚಜಾತಿಗಳ ಹಿತಸಾಧಕ ತತ್ವಸಿದ್ಧಾಂತಗಳು, ಭಾವುಕ ಜನರಿಗೆ ಧಾರ್ಮಿಕ ಕನಸುಗಳನ್ನು ಕೊಟ್ಟು ತಮ್ಮ ರಾಜಕೀಯ, ಸಾಮಾಜಿಕ ಬುನಾದಿಯನ್ನು ವಿಸ್ತರಿಸಿಕೊಂಡಿವೆ.

ಜನರ ಆಲೋಚನಾ ಕ್ರಮವನ್ನು ರೂಪಿಸಿ ಸಾಮಾಜಿಕ ರಾಜಕೀಯ ಪಲ್ಲಟಗಳಿಗೆ ಕಾರಣವಾಗಬಲ್ಲ ತತ್ವಸಿದ್ಧಾಂತಗಳನ್ನು ಸಾಮಾಜಿಕ-ರಾಜಕೀಯ ದಾರ್ಶನಿಕರು ಮಾತ್ರ ಕಟ್ಟುವುದಿಲ್ಲ. ಜನರಿಗೆ ಲೋಕದೃಷ್ಟಿ ರೂಪಿಸಿಕೊಳ್ಳಲು ಪ್ರಭಾವಶಾಲಿ ಲೇಖಕರ ಸಾಹಿತ್ಯ ಕೃತಿಗಳೂ ಇದರಲ್ಲಿ ತುಸು ಪಾತ್ರವಹಿಸುತ್ತವೆ. ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಭಾಷಣದಲ್ಲಿ, ಅನಂತಮೂರ್ತಿಯವರು ಮೃತ್ಯುಸಜ್ಜೆಯಲ್ಲಿದ್ದು ಬರೆದ ‘ಹಿಂದುತ್ವ ಅಥವಾ ಹಿಂದ್‌ಸ್ವರಾಜ್’ ಕೃತಿಯಲ್ಲಿ; ಲಂಕೇಶರ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಲೇಖನದಲ್ಲಿ; ದೇವನೂರರ ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಇವುಗಳ ಕೆಲವು ವಿನ್ಯಾಸಗಳಿವೆ. ಸಾಹಿತ್ಯವು ತನ್ನನ್ನು ಪ್ರಭಾವಿಸಿದ ಜಾಗತಿಕ ತತ್ವಸಿದ್ಧಾಂತಗಳನ್ನು ಸ್ಥಳೀಯ ಜೀವನಾನುಭವದ ಮೂಲಕ ಮರುಹುಟ್ಟಿಸುತ್ತದೆ. ಇದು ತತ್ವಸಿದ್ಧಾಂತಗಳ ಕಲಾತ್ಮಕ ರೂಪಾಂತರ. ಸಮಾಜದಲ್ಲಿ ಹಲವು ತತ್ವಸಿದ್ಧಾಂತಗಳು ಏಕಕಾಲದಲ್ಲಿ ಕ್ರಿಯಾಶೀಲವಾಗಿ ರುತ್ತವೆ. ಅವುಗಳಲ್ಲಿ ಸಂಘರ್ಷ-ಸಾಮರಸ್ಯ ಏರ್ಪಡುತ್ತಿರುತ್ತದೆ. ಭಾರತದಲ್ಲಿ ಮಾರುಕಟ್ಟೆವಾದ ಮತ್ತು ಮತೀಯವಾದಗಳು ಹೀಗೆ ಏಕೀಭವಿಸಿವೆ. ವ್ಯವಸ್ಥೆಯ ಪರವಾದ ತಾತ್ವಿಕತೆಗಳು, ಜನಪರವಾದ ತಾತ್ವಿಕತೆಗಳನ್ನು ತುಳಿಯಲು ಯತ್ನಿಸುತ್ತವೆ. ಭಾರತದಲ್ಲಿ ಜಾತ್ಯತೀತತೆ, ಸಮಾಜವಾದ, ವಿಚಾರವಾದ ಇತ್ಯಾದಿ ಪರಿಕಲ್ಪನೆಗಳು ಗೇಲಿಗೆ ಒಳಗಾಗುತ್ತಿರುವುದನ್ನು ಗಮನಿಸಬೇಕು. ಅಂಬೇಡ್ಕರ್‌ರನ್ನು ಹೀಯಾಳಿಸುವ ‘ವರ್ಶಿಪಿಂಗ್ ಫಾಲ್ಸ್ ಗಾಡ್ಸ್’ ತರಹದ ಕೃತಿ ಪ್ರಕಟವಾದವು. (ಇಲ್ಲಿರುವ ಗಾಡ್ ಶಬ್ದದ ಹಿಂದೆ ಕಮ್ಯುನಿಸಂನ ವಿಫಲತೆಯನ್ನು ವಿವರಿಸುವ ‘ಗಾಡ್ ದಟ್ ಫೈಲ್ಡ್’ ಕೃತಿಯ ಪ್ರೇರಣೆಯಿದೆ.) ನಾಸ್ತಿಕ ಮಾನವತಾವಾದಿಯಾದ ವಿಚಾರವಾದವು 20ನೇ ಶತಮಾನದ ಮೊದಲ ಘಟ್ಟದಲ್ಲಿ ವಿಮೋಚನ ಚಳವಳಿ ಭಾಗವಾಗಿ ಕೆಲಸ ಮಾಡಿತ್ತು. ಈಗದನ್ನು ವ್ಯವಸ್ಥಿತವಾಗಿ ದುರುಳೀಕರಿಸಲಾಗಿದೆ.

ಬಲಿಷ್ಠ ತತ್ವವಾದಗಳು ತಮಗೆ ತೊಡಕಾಗಿರುವ ತತ್ವವಾದಗಳನ್ನು ಉಪಾಯವಾಗಿ ವಶಪಡಿಸಿಕೊಂಡು ಪಳಗಿಸುವುದುಂಟು. ಅಂಬೇಡ್ಕರ್, ಗಾಂಧಿವಾದ, ಬಸವತತ್ವಗಳನ್ನು ಬಲಪಂಥೀಯ ಸಿದ್ಧಾಂತಗಳು ಬಳಸಿಕೊಳ್ಳುತ್ತಿರು ವುದನ್ನು ಗಮನಿಸಬಹುದು. ಪರಸ್ಪರ ವಿರುದ್ಧವಾಗಿರುವ ಸಿದ್ಧಾಂತ ಮತ್ತು ರಾಜಕೀಯ ಪಕ್ಷಗಳು, ಅಧಿಕಾರ ಗ್ರಹಣಕ್ಕಾಗಿ ಪರಸ್ಪರ ಬೆರೆಯಬಲ್ಲವು. ಅಂಬೇಡ್ಕರ್ ಪೆರಿಯಾರ್‌ವಾದಿ ಪಕ್ಷಗಳು, ಮುಸ್ಲಿಂಲೀಗ್ ಕೂಡ, ಬೇರೆಬೇರೆ ಕಾಲದಲ್ಲಿ ಹಿಂದುತ್ವವಾದಿ ಪಕ್ಷಗಳೊಂದಿಗೆ ಕೈಜೋಡಿಸಿವೆ. ವಿರುದ್ಧ ಸಿದ್ಧಾಂತಗಳ ನಡುವೆ ಏರ್ಪಡುವ ಈ ಹೊಸ ಸಂಬಂಧಗಳು ಸಾಮಾನ್ಯವಾಗಿ ಅವಕಾಶವಾದಿ. ಕೆಲವೊಮ್ಮೆ ಮಾತ್ರ ಹೆಚ್ಚು ಅಪಾಯಕರವಾದುದನ್ನು ದೂರವಿಡುವ ಚಾರಿತ್ರಿಕ ಅನಿವಾರ್ಯತೆಯಲ್ಲಿ ಹುಟ್ಟಿದ ತಾತ್ಪೂರ್ತಿಕ ಒಪ್ಪಂದಗಳಾಗಿರುತ್ತವೆ. ನಿಜ, ತೇಜಸ್ವಿ ಪರಿಭಾವಿಸಿದಂತೆ, ಜನ ನಿತ್ಯ ಬದುಕಿನಲ್ಲಿ ದೊಡ್ಡದೊಡ್ಡ ಅಮೂರ್ತ ಸಿದ್ಧಾಂತ ಇಲ್ಲವೇ ಆದರ್ಶಗಳಲ್ಲಿ ಬದುಕುವುದಿಲ್ಲ; ಅವರಿಗೆ ಚಳವಳಿಗಳು ಕೊಡುವ ಆಲೋಚನಾ ಕ್ರಮಕ್ಕಿಂತ ಹೆಚ್ಚಾಗಿ, ಅವರ ದೈನಿಕ ಬದುಕಿನ ಅನುಭವಗಳೇ ಹೊಸ ತಾತ್ವಿಕತೆ ಕಂಡುಕೊಳ್ಳಲು ಪ್ರೇರೇಪಿಸುತ್ತವೆ. ಆದರೆ ದೈನಿಕ ತುರ್ತಿನಿಂದ ಮಾಡಿಕೊಳ್ಳುವ ಆಯ್ಕೆಗಳ ಪರಿಣಾಮ ಏನಾಗಿದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಭಾರತದಲ್ಲಿ ಬಹುಸಂಖ್ಯಾತ ಜನರ ದೈನಿಕ ಬದುಕನ್ನು ರೂಪಿಸುತ್ತಿರುವ ಪ್ರಭಾವಶಾಲಿ ರಾಜಕಾರಣವು, ಕಾರ್ಪೊರೇಟ್‌ವಾದ ಇಲ್ಲವೇ ಮತೀಯವಾದದ ಭಾಗವಾಗಿದೆ. ಸಿದ್ಧಾಂತಗಳು ತಮ್ಮ ಬದುಕನ್ನು ಹೇಗೆ ರೂಪಿಸುತ್ತಿವೆ ಎನ್ನುವುದರ ರಾಜಕೀಯ ಖಬರಿಲ್ಲದೆ ಜನ ನಿತ್ಯದಲ್ಲಿ ಮುಳುಗಿ ಮುಗ್ಧವಾಗಿ ಬದುಕುವುದು ಸಲ್ಲಕ್ಷಣವೇನಲ್ಲ.

ಯಾವುದೇ ಜೀವಪರ ತತ್ವಸಿದ್ಧಾಂತಗಳು ಚರಿತ್ರೆಯಲ್ಲಿ ಹಾಗೆ ಸುಲಭವಾಗಿ ಕಣ್ಮರೆಯಾಗುವುದಿಲ್ಲ. ಆದರೆ ಹೊಸ ಕಾಲ-ದೇಶ-ಸಂದರ್ಭದಲ್ಲಿ ಅಪ್ರಸ್ತುತಗೊಳ್ಳುವ ಆತಂಕವನ್ನು ಮಾತ್ರ ಸದಾ ಎದುರಿಸುತ್ತವೆ. ಬದಲಾದ ಆರ್ಥಿಕ, ಸಾಮಾಜಿಕ, ರಾಜಕೀಯ ವಾಸ್ತವದಲ್ಲಿ ಅವು ಮರುಹುಟ್ಟು ಪಡೆಯದಿದ್ದರೆ ಮೂರ್ಛಾವಸ್ಥೆಗೆ ಸಲ್ಲುತ್ತವೆ. ರೂಪಾಂತರವು ತತ್ವಸಿದ್ಧಾಂತ ಮತ್ತು ಚಳವಳಿಗಳ ಜೀವನ್ಮರಣದ ಪ್ರಶ್ನೆ. ಭಾರತದಲ್ಲಿ ಮತೀಯವಾದ ಮತ್ತು ಬಂಡವಾಳವಾದಗಳು ಸಮರ್ಥವಾಗಿ ಮರುಹುಟ್ಟು ಪಡೆದಿವೆ. ಆದರೆ ಸಮಾಜವಾದಿ ಸಿದ್ಧಾಂತಗಳು ರಾಜಕೀಯವಾಗಿ ಹಿಂಜರಿಯುತ್ತಿವೆ. ಇದಕ್ಕೆ ಇವು ಅರ್ಥಪೂರ್ಣವಾಗಿ ರೂಪಾಂತರಗೊಳ್ಳುವಲ್ಲಿ ತೋರುತ್ತಿರುವ ವಿಳಂಬವೂ ಒಂದು ಕಾರಣವಿದ್ದೀತು. ಈ ಬಿಕ್ಕಟ್ಟು ತತ್ವಸಿದ್ಧಾಂತಗಳನ್ನು ಆತ್ಮಾವಲೋಕನಕ್ಕೆ ಕೂಡ ಪ್ರೇರೇಪಿಸಿದಂತಿದೆ. ಜಾತಿ ಮತ್ತು ಅಸ್ಪಶ್ಯತೆಯ ಪ್ರಶ್ನೆಯನ್ನು ಅಮುಖ್ಯವಾಗಿಸಿಕೊಂಡಿದ್ದ ಎಡಪಂಥೀಯ ಧಾರೆಗಳು ಅಂಬೇಡ್ಕರ್ ಹಾಗೂ ದಲಿತರನ್ನು ಒಳಗೊಳ್ಳುವತ್ತ ಚಲಿಸುತ್ತಿವೆ; ಇದರ ಭಾಗವಾಗಿ ತೇಲ್ತುಂಬ್ಡೆ ಚಿಂತನೆಗಳು ಕನ್ನಡಕ್ಕೆ ಬರುತ್ತಿವೆ; ಜಿಗ್ನೇಶ್-ಕನ್ಹಯ್ಯಿ ಹೊಸ ನಾಯಕರಾಗಿ ಕಾಣಿಸಿಕೊಂಡಿದ್ದಾರೆ; ಜೈಭೀಮ್-ಲಾಲ್‌ಸಲಾಂ ಜೋಡಿ ಕರೆಯಾಗಿ ಕೇಳಿಸುತ್ತಿದೆ; ಸಶಸ್ತ್ರ ಹೋರಾಟದಲ್ಲಿ ನಂಬಿಕೆಯಿಟ್ಟಿದ್ದ ಚಳವಳಿ, ಕಾಡಿಂದ ಹೊರಬಂದು ಸಮಾನಮನಸ್ಕ ಧಾರೆಗಳ ಜತೆಗೂಡಿ ಕೂಡುಹೋರಾಟದ ಪರಿಕಲ್ಪನೆ ಮಂಡಿಸುತ್ತಿದೆ; ವಿಚಾರವಾದಗಳು, ಶುಷ್ಕ ನಾಸ್ತಿಕವಾದವನ್ನು ಉಗ್ಗಡಿಸದೆ, ಬಹುಸಂಖ್ಯಾತ ಜನ ತಮ್ಮ ಧಾರ್ಮಿಕತೆ ಭಾಗವಾಗಿ ಕಟ್ಟಿಕೊಂಡಿರುವ ಸಾಂಸ್ಕೃತಿಕ ಲೋಕದೊಳಗಿನ ಚೈತನ್ಯಶೀಲತೆ ಮತ್ತು ಪ್ರತಿರೋಧ ಪರಂಪರೆಯನ್ನು ಅರಿವ ನಮ್ರತೆ ಪ್ರಕಟಿಸುತ್ತಿವೆ; ಗಾಂಧಿವಾದಿ ದೊರೆಸ್ವಾಮಿ ಎಡಚಳವಳಿಯನ್ನು ಸೇರಿದ್ದರೆ, ಎಡವಾದಿ ಪ್ರಸನ್ನ ಗಾಂಧಿವಾದಿ ಪ್ರಯೋಗ ಮಾಡುತ್ತಿದ್ದಾರೆ. ಆದರೆ ಈ ಪಲ್ಲಟಗಳು ರಾಜಕೀಯ ಅಧಿಕಾರ ಪಡೆವ ಜನಾಂದೋಲನವಾಗಿ ರೂಪುಗೊಳ್ಳುತ್ತಿಲ್ಲ. ನೈತಿಕ ಕಾಳಜಿಯನ್ನು ಜೀವಂತವಾಗಿಡುವ ಚಟುವಟಿಕೆಯಾಗಿ ಸೀಮಿತಗೊಂಡಿವೆ. ಪರಿವರ್ತನೆಯ ತುಡಿತವುಳ್ಳ ತತ್ವಸಿದ್ಧಾಂತಗಳು ಚರಿತ್ರೆಯಲ್ಲಿ ತಮ್ಮ ಅವಕಾಶಕ್ಕಾಗಿ ಕಾಯಬೇಕು, ನಿಜ. ಎಲ್ಲೀತನಕ, ಹೇಗೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)