varthabharthi


ವಿಶೇಷ-ವರದಿಗಳು

ನ್ಯಾಯದಾನದ ನಿರೀಕ್ಷೆಯಲ್ಲಿ ಅತಂತ್ರರಾಗಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು

ವಾರ್ತಾ ಭಾರತಿ : 8 Jan, 2021

ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ಬಂಧನಕ್ಕೊಳಗಾದ ಪ್ರಕರಣಗಳನ್ನು ‘ಠಿಛಿಡಿಜ್ಟಿಛಿ’ ಸುದ್ದಿಜಾಲತಾಣವು ಪಟ್ಟಿ ಮಾಡಿದೆ. ಇವರಲ್ಲಿ ಕೆಲವರ ಪ್ರಕರಣಗಳ ನ್ಯಾಯಾಂಗ ವಿಚಾರಣೆಯು ನಿಯಮಿತವಾಗಿ ನಡೆಯದೆ ಅವರು ಜೈಲಲ್ಲಿ ದಿನಗಳೆಯುತ್ತಿದ್ದಾರೆ, ಇನ್ನು ಕೆಲವರಿಗೆ ಜಾಮೀನು ದೊರೆತರೂ ಅವರ ಭವಿಷ್ಯ ಅನಿಶ್ಚಿತವಾಗಿದೆ. ಈ ಪೈಕಿ ಅನೇಕ ಪ್ರಕರಣಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿದ್ದು, ಅವುಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.


ಜಾಮಿಯಾ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ನಾಯಕರು

ಜಾಮಿಯಾ ಮಿಲ್ಲಿಯಾ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ಮೀರಾನ್ ಹೈದರ್ ಅವರನ್ನು 2020ರ ಎಪ್ರಿಲ್ 1ರಂದು ದಿಲ್ಲಿ ಪೊಲೀಸರು ಬಂಧಿಸಿದ್ದರು. 

ಮೀರಾನ್ ಹೈದರ್

ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ಹೂಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಆರ್‌ಜೆಡಿ ಪಕ್ಷದ ದಿಲ್ಲಿ ಘಟಕದ ಅಧ್ಯಕ್ಷರೂ ಆಗಿದ್ದ ಮೀರಾನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟಕ್ಕಾಗಿ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ರಚಿಸಿದ್ದ ಜಾಮಿಯಾ ಸಮನ್ವಯ ಸಮಿತಿಯ ಮುಂಚೂಣಿಯ ನಾಯಕರಾಗಿದ್ದರು.

ಆಸೀಫ್ ಇಕ್ಬಾಲ್ ತನ್ಹಾ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಮೂರನೇ ವರ್ಷದ ಪರ್ಶಿಯನ್ ಭಾಷಾ ವಿದ್ಯಾರ್ಥಿಯಾಗಿದ್ದಾರೆ. 2019ರ ಡಿಸೆಂಬರ್ 15ರಂದು ನಡೆದ ಜಾಮಿಯಾ ಹಿಂಸಾಚಾರ ಹಾಗೂ 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿ ಅವರನ್ನು 2020ರ ಮೇ 16ರಂದು ದಿಲ್ಲಿಯ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್‌ನ ಜೊತೆಗೆ ಅವರಿಗೆ ಒಡನಾಟವಿತ್ತು ಹಾಗೂ ಅವರು 2019ರ ಡಿಸೆಂಬರ್‌ನಲ್ಲಿ ಆರಂಭವಾದ ಸಿಎಎ ವಿರೋಧಿ ಹೋರಾಟದ ಭಾಗವಾಗಿದ್ದರು.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆಲುಮಿನಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಶಿಫಾವುರ್ರಹ್ಮಾನ್ ಅವರನ್ನು 2020ರ ಎಪ್ರಿಲ್ 26ರಂದು ದಿಲ್ಲಿ ಪೊಲೀಸರ ವಿಶೇಷ ದಳವು ಬಂಧಿಸಿತ್ತು. 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಕೂಡಾ ಅವರ ಮೇಲೆ ಹೊರಿಸಲಾಗಿತ್ತು.

ಶಿಫಾವುರ್ರಹ್ಮಾನ್

ಈ ಮೂವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸ ಲಾಗಿದೆ. 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಯ ಸಂದರ್ಭ, ತನ್ಹಾ ಸ್ಥಳದಲ್ಲೇ ಇರಲಿಲ್ಲವೆಂದು ಅವರ ವಕೀಲ ಸಿದ್ಧಾರ್ಥ್ ಅಗರ್ವಾಲ್ ಪುರಾವೆಗಳನ್ನು ಒದಗಿಸಿದ್ದರು.

2020ರ ಅಕ್ಟೋಬರ್ 27ರಂದು ತನ್ಹಾ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ತಿರಸ್ಕರಿಸಿದ್ದು, ಈಗ ತನ್ಹಾರ ಜೈಲುವಾಸವನ್ನು ಜನವರಿ 19ರ ತನಕ ಮತ್ತೆ ವಿಸ್ತರಿಸಿದೆ. ಇನ್ನೋರ್ವ ಆರೋಪಿ ಹೈದರ್ ಬಂಧನದಲ್ಲೇ ಇದ್ದು, ಆತನ ನ್ಯಾಯಾಂಗ ವಿಚಾರಣೆ ಮುಂದುವರಿದೆ.

2020ರ ಸೆಪ್ಟಂಬರ್ 15ರಂದು ಶಿಫಾವುರ್ರಹ್ಮಾನ್ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ನ್ಯಾಯಾಲಯವು ಅವರ ವಿರುದ್ಧ ದಾಖಲಾಗಿದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ತನಿಖೆ ನಡೆಸಲು ಬೇಕಾದ ಕಾಲಾವಧಿಯನ್ನು ವಿಸ್ತರಿಸಿತ್ತು. ರಹ್ಮಾನ್ ಅವರಿಗೆ ತನ್ನ ವಕೀಲರ ಜೊತೆ ವೀಡಿಯೊ ಮಾತುಕತೆ ನಡೆಸಲು ಕೂಡಾ ಜೈಲಿನ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು.

ತನ್ನ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ವಿಚಾರಣೆ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಶಿಫಾವುರ್ರಹ್ಮಾನ್ 2020ರ ನವೆಂಬರ್ 8ರಂದು ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ನಾಲ್ಕು ವಾರದೊಳಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಧೀಶ ಯೋಗೇಶ್ ಖನ್ನಾ ಅವರು ರಾಜ್ಯ ಸರಕಾರಕ್ಕೆ ಸೂಚಿಸಿದ್ದರು.

ಜೆಎನ್‌ಯು ವಿದ್ಯಾರ್ಥಿ ನಾಯಕರು 

ಉಮರ್ ಖಾಲಿದ್

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಚಳವಳಿ ನಾಯಕ ನಾಗಿದ್ದ ಉಮರ್ ಖಾಲಿದ್ ಅವರು ಈಶಾನ್ಯ ದಿಲ್ಲಿ ಗಲಭೆ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬರೆಂದು ದಿಲ್ಲಿ ಪೊಲೀಸರು ಹೆಸರಿಸಿದ್ದು, ಅವರನ್ನು 2020ರ ಸೆಪ್ಟಂಬರ್ 13ರಂದು ಬಂಧಿಸಲಾಗಿತ್ತು. ಅವರ ವಿರುದ್ಧ ದಿಲ್ಲಿ ಗಲಭೆಯ ಮುಖ್ಯ ಸಂಚುಗಾರನೆಂಬ ಆರೋಪ ಹೊರಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿಯೂ ಅವರ ವಿರುದ್ಧ ದೋಷಾರೋಪ ದಾಖಲಿಸಲಾಗಿತ್ತು.

ಉಮರ್ ಖಾಲಿದ್

ಪೊಲೀಸ್ ಕಸ್ಟಡಿಯಲ್ಲಿರುವ ಅವಧಿಯಲ್ಲಿ ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂಬ ಖಾಲಿದ್ ಅವರ ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ತಿರಸ್ಕರಿಸಿತ್ತು. 2020ರ ಅಕ್ಟೋಬರ್ 1ರಂದು ಅವರ ವಿರುದ್ಧ ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಎರಡನೇ ಎಫ್‌ಐಆರ್ ದಾಖಲಿಸಿದ್ದರು.

ನತಾಶಾ ನರ್ವಾಲ್ ಹಾಗೂ ದೇವಂಗನಾ ಕಲಿಟಾ 

ಮಹಿಳಾ ವಿದ್ಯಾರ್ಥಿನಿಯರ ಸಂಘಟನೆ ಪಿಂಜರಾ ತೋಡ್‌ನ ಸ್ಥಾಪಕ ಸದಸ್ಯೆಯರು ಹಾಗೂ ಜೆಎನ್‌ಯುವಿನ ಸಂಶೋಧನಾ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಹಾಗೂ ದೇವಂಗನಾ ಕಲಿಟಾ ಅವರನ್ನು 2020ರ ಮೇ 23ರಂದು ದಿಲ್ಲಿ ಪೊಲೀಸರು ಜಫರಾಬಾದ್ ಪ್ರದೇಶದಲ್ಲಿ ನಡೆದ ಸಿಎಎ ಪ್ರತಿಭಟನೆಗೆ ಸಂಬಂಧಿಸಿ ಬಂಧಿಸಿದ್ದರು. ಇದಾದ ಒಂದು ದಿನದ ಆನಂತರ ದಿಲ್ಲಿ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿತ್ತು. ನ್ಯಾಯಾಲಯದ ಆದೇಶದ ಬೆನ್ನಲ್ಲೇ ದಿಲ್ಲಿ ಪೊಲೀಸರು ಇವರಿಬ್ಬರನ್ನು ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು ಹಾಗೂ ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಕೊಲೆ, ಗಲಭೆ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಲಾಗಿತ್ತು. ನರ್ವಾಲ್ ಹಾಗೂ ಕಲಿಟಾ ಅವರನ್ನು ಯುಎಪಿಎ ಕಾಯ್ದೆಯಡಿಯೂ ಬಂಧಿಸಲಾಗಿತ್ತು.

ನತಾಶಾ ನರ್ವಾಲ್ ಹಾಗೂ ದೇವಂಗನಾ ಕಲಿಟಾ 

2020ರ ಸೆಪ್ಟ್ಟಂಬರ್ 1ರಂದು ದಿಲ್ಲಿ ಹೈಕೋರ್ಟ್ ಕಲಿಟಾ ವಿರುದ್ಧದ ನಾಲ್ಕು ಪ್ರಕರಣಗಳ ಪೈಕಿ ಒಂದರಲ್ಲಿ ಜಾಮೀನು ನೀಡಿತ್ತು. ಆದಾಗ್ಯೂ, ದಿಲ್ಲಿ ಪೊಲೀಸರು ಈ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಕಲಿಟಾ ವಿರುದ್ಧ ಯುಎಪಿಎ ಕಾಯ್ದೆಯಡಿ ಇನ್ನೊಂದು ಎಫ್‌ಐಆರ್ ದಾಖಲಿಸಲಾಗಿದ್ದು, ಆಕೆಯಿನ್ನೂ ಜೈಲಿನಲ್ಲೇ ಇದ್ದಾರೆ. ನರ್ವಾಲ್‌ಗೆ ದಿಲ್ಲಿಯ ಕಾರ್ಕರ್‌ಡೂಮಾ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ನೀಡಿದೆ. ನರ್ವಾಲ್ ಈಗಲೂ ಜೈಲಿನಲ್ಲಿದ್ದು, ಆಕೆಯ ವಿರುದ್ಧ ಕಠಿಣವಾದ ಯುಎಪಿಎ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಶರ್ಜೀಲ್ ಇಮಾಮ್

ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿಯಾದ ಶರ್ಜೀಲ್ ಇಮಾಮ್ ಅವರನ್ನು ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಅವರು ದೇಶದ್ರೋಹಿ ಹೇಳಿಕೆಗಳನ್ನು ನೀಡಿದ್ದರೆಂಬ ಆರೋಪದಲ್ಲಿ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ‘ಚಕ್ಕಾ ಜಾಮ್’  ಪ್ರತಿಭಟನೆಗೆ ಕರೆ ನೀಡಿದ್ದಕ್ಕಾಗಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.

ಶರ್ಜೀಲ್ ಇಮಾಮ್

ಅವರ ಜೈಲು ವಾಸದ 88ನೇ ದಿನದ ಬಳಿಕ ಯುಎಪಿಎ ಕಾಯ್ದೆಯ 43ಡಿ ಸೆಕ್ಷನ್‌ನಡಿ ಅವರ ವಿರುದ್ಧ ತನಿಖೆಗಾಗಿ ಕಾಲಾವಕಾಶ ವಿಸ್ತರಣೆ ಕೋರಿ ದಿಲ್ಲಿ ಪೊಲೀಸರು ನ್ಯಾಯಾಲಯದ ಮೆಟ್ಟಲೇರಿದ್ದರು ಹಾಗೂ ನ್ಯಾಯಾಲಯವು ಯುಎಪಿಎ ಕಾಯ್ದೆಯಡಿ ತನಿಖೆ ನಡೆಸಲು ದಿಲ್ಲಿ ಪೊಲೀಸರಿಗೆ ಅನುಮತಿ ನೀಡಿತ್ತು. ತನ್ನ ಜೈಲುವಾಸದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿರುವುದನ್ನು ಪ್ರಶ್ನಿಸಿ ಇಮಾಮ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ 2020ರ ಜುಲೈ 10ರಂದು ತಿರಸ್ಕರಿಸಿತ್ತು. ಇದೀಗ ಜನವರಿ 19ರ ತನಕ ಶರ್ಜೀಲ್ ಇಮಾಮ್, ಉಮರ್ ಖಾಲಿದ್‌ರ ಜೈಲುವಾಸವನ್ನು ಮತ್ತೆ ವಿಸ್ತರಿಸಿದೆ.

ಪತ್ರಕರ್ತರು

ಸಿದ್ದೀಕ್ ಕಪ್ಪನ್

ಅಝಿಮುಖಂ ಮಲಯಾಳಂ ಸುದ್ದಿ ಜಾಲ ತಾಣದ ದಿಲ್ಲಿ ಪ್ರತಿನಿಧಿ ಸಿದ್ದೀಕ್ ಕಪ್ಪನ್ ಅವರನ್ನು 2020ರ ಅಕ್ಟೋಬರ್ 6ರಂದು ಮಥುರಾದಲ್ಲಿ ಬಂಧಿಸಲಾಗಿತ್ತು. 19 ವರ್ಷದ ದಲಿತ ಯುವತಿಯನ್ನು ನಾಲ್ವರು ‘ಮೇಲ್ಜಾತಿ’ಯ ಜನರು ಅತ್ಯಾಚಾರವೆಸಗಿದ್ದರಿಂದ ಗಂಭೀರವಾಗಿ ಘಾಸಿಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.   ಪ್ರಕರಣದ ವರದಿಗಾರಿಕೆಗಾಗಿ ಹಾಥರಸ್‌ಗೆ ತೆರಳುತ್ತಿದ್ದ ಸಿದ್ದೀಕ್ ಅವರನ್ನು ಮಥುರಾ ಸಮೀಪ ಅಕ್ಟೋಬರ್ 6ರಂದು ದಿಲ್ಲಿ ಪೊಲೀಸರು ಬಂಧಿಸಿದ್ದರು. ಸಿದ್ದೀಕ್ ವಿರುದ್ಧ ಯುಎಪಿಎ ಹಾಗೂ ಭಾರತೀಯ ದಂಡಸಂಹಿತೆ ಹಾಗೂ ಮಾಹಿತಿತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಬಂಧಿಸಲಾಗಿತ್ತು. ಆನಂತರ ಆತನನ್ನು ಹಾಥರಸ್ ಸಂಚು ಪ್ರಕರಣದಲ್ಲಿ ಹೆಸರಿಸಲಾಗಿತ್ತು.

ಸಿದ್ದೀಕ್ ಕಪ್ಪನ್

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ದಿಲ್ಲಿ ನ್ಯಾಯಾಲಯವು ಜಾಮೀನು ನೀಡಿದ ಬಳಿಕ, ಸಿದ್ದೀಕ್ ಅವರಿಗೆ ಜಾಮೀನು ಅರ್ಜಿಯ ತ್ವರಿತ ವಿಲೇವಾರಿ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಆಸೀಫ್ ಸುಲ್ತಾನ್

ಕಾಶ್ಮೀರದಲ್ಲಿ ಲಷ್ಕರೆ ತಯ್ಯಿಬ ಉಗ್ರಗಾಮಿ ಗುಂಪಿನ ಕಮಾಂಡರ್, ಬುರ್ಹಾನ್ ವಾನಿಯ ಕುರಿತ ಲೇಖನವನ್ನು ಬರೆದಿದ್ದ ಕಾಶ್ಮೀರಿ ಪತ್ರಕರ್ತ ಆಸೀಫ್ ಸುಲ್ತಾನ್  ಅವರನ್ನು 2018ರ ಆಗಸ್ಟ್ 31ರಂದು ಶ್ರೀನಗರ ಪೊಲೀಸರು ಬಂಧಿಸಿದ್ದರು. ನಿಷೇಧಿತ ಉಗ್ರಗಾಮಿ ಗುಂಪಿಗೆ ಆಯಕಟ್ಟಿನ ಬೆಂಬಲ ನೀಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ. ಆವಾಗಿನಿಂದ ಅವರು ಜೈಲಿನಲ್ಲೇ ಇದ್ದಾರೆ. ಆಸೀಫ್ ಸುಲ್ತಾನ್ ಈಗಾಗಲೇ ಜೈಲಿನಲ್ಲಿ 800ಕ್ಕೂ ಅಧಿಕ ದಿನಗಳನ್ನು ಕಳೆದಿದ್ದಾರೆ. ಅವರ ಬಿಡುಗಡೆಗೆ ಆಗ್ರಹಿಸಿ ಅವರ ಸ್ನೇಹಿತರು ಹಾಗೂ ಬೆಂಬಲಿಗರು ಟ್ವಿಟರ್ ಅಭಿಯಾನವನ್ನು ನಡೆಸುತ್ತಿದ್ದಾರೆ.

ಪ್ಯಾಟ್ರಿಶಿಯಾ ಮುಖಿಮ್

ಮೇಘಾಲಯದ ಉಚ್ಚ ನ್ಯಾಯಾಲಯವು 2020ರ ನವೆಂಬರ್ 10ರಂದು ನೀಡಿದ ಆದೇಶದಲ್ಲಿ ಪತ್ರಕರ್ತೆ ಪ್ಯಾಟ್ರಿಶಿಯಾ ಮುಖಿಮ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿತ್ತು. ಮೇಘಾಲಯದಲ್ಲಿ ಬುಡಕಟ್ಟುಯೇತರ ಜನರ ಮೇಲೆ ದಾಳಿಗಳು ಮುಂದುವರಿಯುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಅವರು ಬರೆದ ಲೇಖನಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ಯಾಟ್ರಿಶಿಯಾ ಮುಖಿಮ್

ಮುಖಿಮ್ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಡಬ್ಲೂ. ಡಿಯೆಂಗ್‌ಡೊ ಅವರು, ಪತ್ರಕರ್ತೆಯ ವಿವಾದಾತ್ಮಕ ಫೇಸ್‌ಬುಕ್ ಪೋಸ್ಟ್, ರಾಜ್ಯದ ಬುಡಕಟ್ಟು ಹಾಗೂ ಬುಡಕಟ್ಟುಯೇತರ ನಡುವಿನ ಸೌಹಾರ್ದ ಬಾಂಧವ್ಯವನ್ನು ವಿಭಜಿಸುವ ದುರುದ್ದೇಶ ಹೊಂದಿದೆ ಎಂದು ಹೇಳಿದ್ದರು.

ಈ ಹಿಂದೆ ಪ್ಯಾಟ್ರಿಶಿಯಾ ಅವರು ನ್ಯಾಯಾಧೀಶರ ನಿವೃತ್ತಿಯ ಸವಲತ್ತುಗಳನ್ನು ಹೆಚ್ಚಿಸುವ ಏಕಪಕ್ಷೀಯ ಆದೇಶಗಳನ್ನು ಟೀಕಿಸಿದ್ದಕ್ಕಾಗಿ ಹೈಕೋರ್ಟ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.

ಎಲ್ಗಾರ್ ಪರಿಷದ್ ಪ್ರಕರಣ

2020ರ ಜನವರಿಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ)ಯು ಎಲ್ಗಾರ್ ಪರಿಷದ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಬಳಿಕ ದಿಲ್ಲಿ ಮೂಲದ ಪತ್ರಕರ್ತ, ಮಾನವಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ, ಶಿಕ್ಷಣ ತಜ್ಞ ಹಾಗೂ ನಾಗರಿಕ ಸ್ವಾತಂತ್ರಗಳ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿತ್ತು.

ಆನಂದ್ ತೇಲ್ತುಂಬ್ಡೆ

ಈ ಮಾನವಹಕ್ಕು ಹೋರಾಟಗಾರರ ಬಂಧನ ಪ್ರಕರಣವು ನ್ಯಾಯಾಲಯಲ್ಲಿ ದಾಖಲಿಸಲ್ಪಟ್ಟಿದ್ದರೂ ಇನ್ನಷ್ಟೇ ವಿಚಾರಣೆ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. 83 ವರ್ಷದ ಕ್ರೈಸ್ತ ಧರ್ಮಗುರು ಹಾಗೂ ಜಾರ್ಖಂಡ್‌ನ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾದ 16ನೇ ವ್ಯಕ್ತಿಯಾಗಿದ್ದಾರೆ. ಪಾರ್ಕಿನ್‌ಸನ್ಸ್ ಸೇರಿದಂತೆ ಹಲವಾರು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಬಳಲುತ್ತಿದ್ದ ಅವರ ಜಾಮೀನು ಬಿಡುಗಡೆ ಕೋರಿ ವಕೀಲರಾದ ಶರೀಫ್ ಶೇಖ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಆರೋಗ್ಯ ಪರಿಸ್ಥಿತಿ, ಇಳಿವಯಸ್ಸು ಹಾಗೂ ಮಹಾರಾಷ್ಟ್ರದ ಕಾರಾಗೃಹಗಳಲ್ಲಿ ಕೊರೋನ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದಾಗ್ಯೂ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು.

ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾದ ಇನ್ನೋರ್ವ ಕವಿ ಹಾಗೂ ಮಾನವಹಕ್ಕುಗಳ ಕಾರ್ಯಕರ್ತ ವರವರ ರಾವ್ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಪಾಲನೆಯನ್ನು ಪಡೆಯಲು ಪರದಾಡುತ್ತಿದ್ದಾರೆ. ತನ್ನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವುದನ್ನು ಅವರು ಜಾಮೀನು ಅರ್ಜಿಯಲ್ಲಿ ಪ್ರಸ್ತಾವಿಸಿದ್ದರೂ ಅವರಿಗೆ ಬಿಡುಗಡೆಯನ್ನು ನಿರಾಕರಿಸಲಾಗಿದೆ. ಆಸ್ಪತ್ರೆಗೆ ಪದೇ ಪದೇ ದಾಖಲಾಗಬೇಕಾದಂತಹ ಪರಿಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ. ಅವರನ್ನು ವಶಕ್ಕೆ ತೆಗೆದುಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಅವರ ಆರೋಗ್ಯದ ಬಗ್ಗೆ ಸೂಕ್ತವಾದ ಕಾಳಜಿಯನ್ನು ವಹಿಸುತ್ತಿಲ್ಲವೆಂದು ಕುಟುಂಬಿಕರು ಆರೋಪಿಸಿದ್ದಾರೆ.

ಮಾಜಿ ಕೌನ್ಸಿಲರ್‌ಗಳು

ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿದ ಕೊಲೆ ಯತ್ನದ ಪ್ರಕರಣವೊಂದರಲ್ಲಿ ದಿಲ್ಲಿ ನಗರಪಾಲಿಕೆಯ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ಅವರನ್ನು 2020ರ ಫೆಬ್ರವರಿ 26ರಂದು ಬಂಧಿಸಲಾಗಿತ್ತು. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಇಶ್ರತ್ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪದ ದೂರುಗಳಿರಲಿಲ್ಲ. ಕಾಂಗ್ರೆಸ್ ಪಕ್ಷದವರೆಂಬ ಕಾರಣಕ್ಕಾಗಿ ರಾಜಕೀಯ ಸೇಡಿನಿಂದ ಆಕೆಯನ್ನು ಬಂಧಿಸಲಾಗಿದೆಯೆಂದು ಅವರ ವಕೀಲರಾದ ಝಕೀರ್ ರಾಝಾ ಆಪಾದಿಸಿದ್ದಾರೆ.

ಇಶ್ರತ್ ಜಹಾನ್

ಮಂಡೋಲಿ ಜೈಲಿನ 16ನೇ ಕೊಠಡಿಯಲ್ಲಿ ಇರಿಸಲಾಗಿದ್ದ ಇಶ್ರತ್ ಜಹಾನ್ ಜೊತೆಗಿದ್ದ ಐವರು ಸಹಕೈದಿಗಳಿಗೆ ಕೊರೋನ ಲಕ್ಷಣವಿತ್ತು. ಈ ಕಾರಣದಿಂದಾಗಿ ಇಶ್ರತ್ ಅವರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು ಎಂದು ಸಹೋದರಿ ಸರ್ವಾರ್ ಜಹಾನ್ ಹೇಳುತ್ತಾರೆ. ಚಳಿಯಿಂದ ರಕ್ಷಣೆ ನೀಡುವ ಬೆಚ್ಚಗಿನ ಟ್ರಾಕ್‌ಸೂಟ್ ನೀಡಲು ಅವಕಾಶ ನೀಡಬೇಕೆಂಬ ಆಕೆಯ ಕುಟುಂಬದ ಬೇಡಿಕೆಯನ್ನು ಜೈಲಿನ ಅಧಿಕಾರಿಗಳು ತಿರಸ್ಕರಿಸಿದ್ದರು. ಜೂನ್ 12ರಂದು ಇಶ್ರತ್‌ರನ್ನು ಆಕೆಯ ವಿವಾಹದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿತ್ತು. ಆಕೆಯ ವಿರುದ್ಧದ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿರುವುದರಿಂದ ಆಕೆಗೆ ನ್ಯಾಯಾಂಗ ಕಸ್ಟಡಿಯ ಅಗತ್ಯವಿಲ್ಲವೆಂದು ಅವರ ನ್ಯಾಯವಾದಿ ಲಲಿತ್ ವಲೇಚಾ ವಾದಿಸಿದರೂ, ಆಕೆಗೆ ಮಧ್ಯಂತರ ಜಾಮೀನು ವಿಸ್ತರಿಸಲು ನ್ಯಾಯಾಧೀಶರು ನಿರಾಕರಿಸಿದ್ದರು. ಮದುವೆಯ ನಂತರ ಇಶ್ರತ್ ಜೈಲಿನಲ್ಲಿಯೇ ಬಂಧಿಯಾಗಿದ್ದಾರೆ.

ದಿಲ್ಲಿಯ ನೆಹರೂ ವಿಹಾರದ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹೀರ್ ಹುಸೈನ್ ಅವರನ್ನು ಈಶಾನ್ಯ ದಿಲ್ಲಿಯಲ್ಲಿ ಗುಪ್ತಚರದಳದ ಸಿಬ್ಬಂದಿ ಅಂಕಿತ್ ಶರ್ಮಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.
ತಾಹೀರ್ ಬಂಧನ ರಾಜಕೀಯ ಪ್ರೇರಿತವಾಗಿದ್ದು ಅವರ ವಿರುದ್ಧ ಹೊರಿಸಲಾದ ಆರೋಪಗಳು ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ರಾಜಕೀಯ ಅವುಟವಾಗಿದೆ ಎಂದು ತಾಹೀರ್‌ರ ವಕೀಲ, ಕೆ. ಕೆ. ಮಾನನ್ ನ್ಯಾಯಾಲಯದಲ್ಲಿ ಆಪಾದಿಸಿದ್ದಾರೆ. ತಾಹಿರ್ ಗಲಭೆಯಲ್ಲಿ ಶಾಮೀಲಾಗಿರುವುದನ್ನು ಅಥವಾ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದ್ದಾರೆಂಬುದನ್ನು ಸಾಬೀತುಪಡಿಸುವ ಒಂದೇ ಒಂದು ಸಿಸಿಟಿವಿ ಅಥವಾ ವೀಡಿಯೊ ಚಿತ್ರಿಕೆಯನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆಂದು ಅವರು ಹೇಳಿದ್ದಾರೆ.
ಆನಂತರ ಹುಸೈನ್ ವಿರುದ್ಧ ಕಪ್ಪುಹಣ ಬಿಳುಪು ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಆರ್ಥಿಕ ನಿಧಿ ಪೂರೈಸಿದ ಆರೋಪವನ್ನು ಕೂಡಾ ಹೊರಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರು

ದಿಲ್ಲಿ ವಿಶ್ವವಿದ್ಯಾನಿಲಯದ ಹಳೆವಿದ್ಯಾರ್ಥಿ ಹಾಗೂ ಎಂಬಿಎ ಪದವೀಧರೆ 28 ವರ್ಷ ವಯಸ್ಸಿನ ಗುಲ್ಫಿಶಾ ಫಾತಿಮಾ ಅವರನ್ನು 2020ರ ಎಪ್ರಿಲ್ 9ರಂದು ಜಫರಾಬಾದ್‌ನ ಸಿಎಎ ವಿರೋಧಿ ಧರಣಿಯ ಕುರಿತು ದಾಖಲಿಸಲಾಗಿದ್ದ ಎಫ್‌ಐಆರ್‌ನ ಆಧಾರದಲ್ಲಿ ಬಂಧಿಸಲಾಗಿತ್ತು. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಆಕೆಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಗುಲ್ಫಿಶಾ ಸಿಎಎ ವಿರೋಧಿ ಪ್ರತಿಭಟನೆ ಯಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು ಹಾಗೂ ಇತರ ಮುಸ್ಲಿಂ ಮಹಿಳೆಯರಲ್ಲಿ ಭೀತಿ ಮೂಡಿಸುವುದಕ್ಕಾಗಿ ಆಕೆಯನ್ನು ಬಲಿಪಶು ಮಾಡಲಾಗಿದೆಯೆಂದು ಅವರ ವಕೀಲರಾದ ಮಹಮೂದ್ ಪ್ರಾಚಾ ಹೇಳಿದ್ದಾರೆ.

ಗುಲ್ಫಿಶಾ ಫಾತಿಮಾ, ಖಾಲಿದ್ ಸೈಫಿ

ನನ್ನನ್ನು ತನಿಖಾಧಿಕಾರಿಗಳು ಸುಶಿಕ್ಷಿತ ಭಯೋತ್ಪಾದಕಿಯೆಂದು ನಿಂದಿಸಿದ್ದಾರೆ, ‘‘ನೀನು ಹೊರಗೆ ಗಲಭೆಗೆ ಪ್ರಚೋದನೆ ನೀಡಿರುವೆ. ಹೀಗಾಗಿ ನೀನು ಜೈಲಿನೊಳಗೆ ಸಾಯುವೆ’’ ಎಂದು ಬೆದರಿಸುತ್ತಿದ್ದರೆಂದು ಗುಲ್ಫಿಶಾ ಹೆಚ್ಚುವರಿ ಸೆಶನ್ಸ್ ನಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ ತಿಳಿಸಿದ್ದರು.

2020ರ ಅಕ್ಟೋಬರ್ 21ರಂದು ಗುಲ್ಫಿಶಾ ಶಾಸನಾತ್ಮಕ ಜಾಮೀನು ಬಿಡುಗಡೆ ಕೋರಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.

ಗುಲ್ಫಿಶಾ ವಿರುದ್ಧ 90 ದಿನಗಳ ಅವಧಿಯಲ್ಲಿ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸದೆ ಇರುವುದರಿಂದ ಶಾಸನಾತ್ಮಕವಾಗಿ ಆಕೆಗೆ ಜಾಮೀನು ಬಿಡುಗಡೆ ದೊರೆಯಬೇಕಿತ್ತಾದರೂ, ಇತ್ತೀಚೆಗಷ್ಟೇ ಅದು ಸಾಧ್ಯವಾಗಿದೆ.

 ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಖಾಲಿದ್ ಸೈಫಿ ಅವರನ್ನು ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯ ಚಾಂದ್‌ಬಾಗ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಿದ್ದರು. ಯುನೈಟೆಡ್ ಎಗೆಯಿನ್‌ಸ್ಟ್ ಹೇಟ್ (ದ್ವೇಷದ ವಿರುದ್ಧ ಏಕತೆ) ಎಂಬ ಸಂಘಟನೆಯ ಸದಸ್ಯರಾಗಿದ್ದ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದೋಷಾರೋಪ ಹೊರಿಸಲಾಗಿತ್ತು.

ಸೈಫಿ ಅವರು ಮೊದಲ ಬಾರಿಗೆ 2020ರ ಮಾರ್ಚ್ 18ರಂದು ಹಾಗೂ ಆನಂತರ ಜುಲೈ 17ರಂದು ಜಾಮೀನು ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.

2020ರ ಸೆಪ್ಟಂಬರ್ 11ರಂದು ದಿಲ್ಲಿಯ ನ್ಯಾಯಾಲಯವು ಸೈಫಿಗೆ ಒಂದು ಪ್ರಕರಣದಲ್ಲಿ ಜಾಮೀನು ನೀಡಿತ್ತು. ಇತ್ತೀಚೆಗೆ ಇನ್ನೊಂದು ಪ್ರಕರಣದಲ್ಲಿ ಸೈಫಿ ಅವರಿಗೆ ಜಾಮೀನು ಬಿಡುಗಡೆ ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ದವೆ ಅವರು ಕ್ಷುಲ್ಲಕ ಕಾರಣಗಳಿಗಾಗಿ ಸೈಫಿ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿರುವ ದಿಲ್ಲಿ ಪೊಲೀಸರ ಕ್ರಮವು ವಿವೇಚನಾರಹಿತವಾದುದು ಹಾಗೂ ಸೇಡಿನ ಮನೋಭಾವದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
 


 ಕೃಪೆ: thewire

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)