varthabharthi


ನಿಮ್ಮ ಅಂಕಣ

ಗ್ರಾಮ ಪಂಚಾಯತ್ ಚುನಾವಣೆ: ಸೋತವರಿಗೊಂದು ಚಿಂತೆ, ಗೆದ್ದವರಿಗೆ ಇನ್ನೊಂದು ಚಿಂತೆ

ವಾರ್ತಾ ಭಾರತಿ : 10 Jan, 2021
ಡಾ. ಡಿ. ಸಿ. ನಂಜುಂಡ

ಕೆಲವು ವರದಿಗಳ ಪ್ರಕಾರ ಈ ಚುನಾವಣೆಯಲ್ಲಿ ಪ್ರತಿ ವಾರ್ಡಿನಲ್ಲಿ ಅಭ್ಯರ್ಥಿಗಳು ಕನಿಷ್ಠ 20ರಿಂದ 25 ಲಕ್ಷ ರೂಪಾಯಿ ಖರ್ಚು ಮಾಡಿರುವ ಸಂಗತಿ ಅಲ್ಲಲ್ಲಿ ವರದಿಯಾಗುತ್ತಿವೆ. ರಾಮನಗರದ ಕೆಲವೆಡೆ ಮತ್ತು ಬೆಳಗಾವಿಯ ಕೆಲವು ವಾರ್ಡಿನಲ್ಲಿ ಅಭ್ಯರ್ಥಿಗಳು ಕನಿಷ್ಠ ಮೂವತ್ತರಿಂದ ಐವತ್ತು ಲಕ್ಷದವರೆಗೆ ಖರ್ಚು ಮಾಡಿ ಕೊನೆಗೂ ಸೋತಿರುವ, ಕೆಲವೆಡೆ ಪ್ರಯಾಸದಿಂದ ಗೆದ್ದಿರುವ ಉದಾಹರಣೆಗಳು ದಿನಕಳೆದಂತೆ ಕೇಳಿ ಬರುತ್ತಿವೆ. ಹೆಚ್ಚಿನ ಅಭ್ಯರ್ಥಿಗಳು ಸ್ವಂತ ಹಣಕ್ಕಿಂತ ಅಲ್ಲಿ-ಇಲ್ಲಿ ಸಾಲ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕಂಡುಬರುತ್ತಿದೆ. ಈಗ ಸೋತವರಿಗೆ ಸಾಲ ತೀರಿಸುವ ಚಿಂತೆ, ಗೆದ್ದವರಿಗೆ ಲಾಭ ಮಾಡುವ ಚಿಂತೆ.


ಭಾರತ ರಾಜಕೀಯ, ಚುನಾವಣೆಗಳ ಸಂತೆ. ವರ್ಷವಿಡೀ ಒಂದಲ್ಲ ಒಂದು ಚುನಾವಣೆಗಳು ಇದ್ದೇ ಇರುತ್ತವೆ. ವಿಶ್ವದ ಇತರ ದೇಶಗಳು ಸಹ ಭಾರತದ ಚುನಾವಣೆಯಿಂದ ಕಲಿಯುವುದು ಸಾಕಷ್ಟು ಇದೆ. ಭಾರತದ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ಬಹುನಿರೀಕ್ಷಿತ ಗ್ರಾಮ ಪಂಚಾಯತ್ ಚುನಾವಣೆ ಈಗ ತಾನೇ ಮುಗಿದಿದೆ. ಈ ಚುನಾವಣೆಯಲ್ಲಿ ಲಕ್ಷಾಂತರ ಮಂದಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿ ಅದರಲ್ಲಿ ಕೆಲವು ಜನರನ್ನು ಮಾತ್ರ ಅದೃಷ್ಟ ದೇವತೆ ಕೈಹಿಡಿದಿದೆ. ಸಂವಿಧಾನದಲ್ಲಿ ಚುನಾವಣೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಚುನಾವಣೆ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ನಡೆಯಬೇಕೆಂದು ಸಂವಿಧಾನದ ಆಶಯ. ಆದರೆ ಇಂದು ಭಾರತವೂ ಸೇರಿದಂತೆ ಪ್ರಪಂಚದ ಯಾವುದೇ ದೇಶದಲ್ಲಿ ಸಹ ಚುನಾವಣೆಗಳು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಡೆದಿರುವ ಉದಾಹರಣೆಯೇ ಇಲ್ಲ. ಅದಕ್ಕೆ ಇತ್ತೀಚಿನ ಅಮೆರಿಕದ ಅಧ್ಯಕ್ಷರ ಚುನಾವಣೆ ಕುರಿತು ಎದ್ದಿರುವ ವಿವಾದಗಳೇ ಉದಾಹರಣೆ.

ಭಾರತದಲ್ಲಿ ಪ್ರತಿ ಚುನಾವಣಾ ಸಂದರ್ಭದಲ್ಲಿ ಕೋಟಿ-ಕೋಟಿ ಹಣ ಹರಿದಾಡುತ್ತದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ನೇರವಾದ ಪಾತ್ರವಿಲ್ಲದಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳು ಹಿಂಬದಿಯಿಂದ ಅಭ್ಯರ್ಥಿಗಳಿಗೆ ಹಣವನ್ನು ನೀಡಿ ಚುನಾವಣೆಗೆ ನಿಲ್ಲಿಸುತ್ತವೆ. ಕೆಲವೊಮ್ಮೆ ಚುನಾವಣೆಗೆ ಮುಂಚೆಯೇ ಇಲ್ಲಿ ಅಭ್ಯರ್ಥಿಗಳನ್ನು ಲಾಟರಿಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಲವು ಅಭ್ಯರ್ಥಿಗಳನ್ನು ಹರಾಜು ಕೂಗಿ ಆಯ್ಕೆ ಮಾಡಲಾಗುತ್ತದೆ.! ಇಂದು ಗ್ರಾಮ ಪಂಚಾಯತ್ ಚುನಾವಣೆ ವೈಯಕ್ತಿಕ ಪ್ರತಿಷ್ಠೆ ಅಥವಾ ಸ್ಥಳೀಯ ರಾಜಕೀಯ ಪುಡಾರಿಗಳ ನಡುವಿನ ಜಟಾಪಟಿಯಾಗಿ ಮಾರ್ಪಟ್ಟಿದೆ. ಹೀಗಾಗಿ ಪ್ರತಿ ವಾರ್ಡಿಗೆ ಅಭ್ಯರ್ಥಿಗಳು ಲಕ್ಷಗಟ್ಟಲೆ ವೆಚ್ಚ ಮಾಡಬೇಕಾದ ಅನಿವಾರ್ಯತೆಗೆ ಬಂದಿದ್ದಾರೆ. ಅಭ್ಯರ್ಥಿಗಳು ಕುರಿ, ಕೋಳಿಯಿಂದ ಹಿಡಿದು ಕೋಟ್ಯಂತರ ಬೆಲೆಬಾಳುವ ಜಮೀನುಗಳನ್ನು ಇಲ್ಲಿ ಅಡ ಇಡುತ್ತಾರೆ. ಕೆಲವು ಅಭ್ಯರ್ಥಿಗಳ ಮನೆಮನೆಗೆ ಹಣ ಮತ್ತು ದವಸ ಧಾನ್ಯಗಳನ್ನು ನೀಡುತ್ತಾರೆ. ಇನ್ನು ಕೆಲವು ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿದ ಗುರುತಿನ ಚಿಹ್ನೆಗಳ ರೂಪದ ನಿಜವಾದ ವಸ್ತುಗಳನ್ನು ಮತದಾರರಿಗೆ ನೀಡುತ್ತಾರೆ.

ಉದಾಹರಣೆಗೆ ಅಭ್ಯರ್ಥಿಗೆ ಕುಕ್ಕರ್, ದೀಪ, ಪಾತ್ರೆಗಳು, ಮುಂತಾದ ಚಿಹ್ನೆಗಳನ್ನು ಚುನಾವಣಾ ಆಯೋಗ ನೀಡಿದರೆ, ಅಭ್ಯರ್ಥಿಯು ನಿಜವಾದ ದೀಪಗಳು, ಪಾತ್ರೆಗಳು, ಕುಕ್ಕರ್‌ಗಳನ್ನು ಮನೆ ಮನೆಗೆ ಹಂಚುತ್ತಾನೆ!. ಉತ್ತರ ಕರ್ನಾಟಕದ ಕೆಲವು ಕಡೆ ಆಡು ಕುರಿಗಳನ್ನು ಸಹ ಮನೆಮನೆಗೆ ಮತಕ್ಕಾಗಿ ಹಂಚಿರುವ ಸುದ್ದಿಗಳು ಕೇಳಬರುತ್ತಿವೆ. ಕೆಲವು ಅಭ್ಯರ್ಥಿಗಳು ಲಕ್ಷಾಂತರ ಬೆಲೆಬಾಳುವ ಮನೆಗಳನ್ನು ಸಹ ಅಡ ಇಟ್ಟು ಅಥವಾ ಮಾರಿ ಸೋತು ರಸ್ತೆಗೆ ಬಿದ್ದಿರುವ ಉದಾರಣೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇನ್ನು ಕೆಲವರಿಗೆ ಸಾಲ ತೀರಿಸಲಾಗದೆ ರಾತ್ರೋರಾತ್ರಿ ಊರು ಬಿಟ್ಟು ಓಡಿ ಹೋಗುವ ಪರಿಸ್ಥಿತಿ. ಅಷ್ಟೇ ಅಲ್ಲದೆ ಇಲ್ಲಿ ಮತದಾರರಿಗೆ ಚುನಾವಣೆಯ ಹಿಂದಿನ ದಿನ ಪ್ರತಿ ಕುಟುಂಬದಲ್ಲಿರುವ ಒಟ್ಟು ಮತಗಳ ಸಂಖ್ಯೆಗನುಗುಣವಾಗಿ ಹಣವನ್ನು ಸಹ ಪ್ರತ್ಯೇಕವಾಗಿ ಹಂಚಲಾಗುತ್ತದೆ.

ನಮ್ಮ ಮತದಾರರು ಸಹ ಕಡಿಮೆಯೇನಿಲ್ಲ. ಇವೆಲ್ಲ ಒಂದು ಸಲದ ಆಫರ್ ಎಂದು ಅಂದುಕೊಂಡು ಎಲ್ಲಾ ಅಭ್ಯರ್ಥಿಗಳು ಕೊಡುವ ಹಣವನ್ನು ಸದ್ದಿಲ್ಲದೆ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಚುನಾವಣೆಯ ದಿನ ಹಣ ಹಂಚುವ ಸಂದರ್ಭದಲ್ಲಿ ದೇವರ ಫೋಟೊದ ಮೇಲೆ ಹಣ ಪಡೆದವರಿಂದ ಆಣೆ ಪ್ರಮಾಣ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಇನ್ನು ಕೆಲವು ಕಡೆಯಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ಫಲಿತಾಂಶ ಬರುವ ದಿನದವರೆಗೂ ಹಳ್ಳಿಗಳಲ್ಲಿ ಬಾಡೂಟಗಳು ಮತ್ತು ಗುಂಡು ಪಾರ್ಟಿಗಳು ನಿರಂತರವಾಗಿ ನಡೆಯುತ್ತವೆ. ಊರಿಗೆ ದಿನನಿತ್ಯ ಊಟ ಹಂಚಲಾಗುತ್ತದೆ. ಬೇಕಾದವರು ಪಾರ್ಸೆಲ್ ತೆಗೆದುಕೊಂಡು ಹೋಗುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿರುತ್ತದೆ! ಇನ್ನು ಕೆಲವು ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಮತದಾರರ ಸಾಮಾಜಿಕ ಕಾರ್ಯಕ್ರಮಗಳಿಗೆ ಅಂದರೆ ಮದುವೆ, ದೇವಸ್ಥಾನಗಳಿಗೆ ದಾನಧರ್ಮ, ಇತ್ಯಾದಿಗಳಿಗೆ ಹಣವನ್ನು ನೀಡುವ ವಾಗ್ದಾನವನ್ನು ಮಾಡಿ ಮತಗಳಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಮತದಾರರಿಗೆ ನೀಡಿರುವ ಚೆಕ್‌ಬೌನ್ಸ್ ಆಗಿ ಪಡೆದವರು ಮತ್ತು ಕೊಟ್ಟವರ ನಡುವೆ ಬೀದಿಕಾಳಗ ನಡೆದಿದೆ. ರಾಜ್ಯದ ಎಷ್ಟೋ ಗ್ರಾಮ ಪಂಚಾಯತ್‌ಗಳು ಇಂದಿಗೂ ವಂಶ ಪಾರಂಪರ್ಯ ಆಗಿ ಮಾರ್ಪಟ್ಟಿವೆ. ತಲೆ-ತಲೆಮಾರುಗಳಿಂದ ಒಂದೇ ಕುಟುಂಬದವರು ಅಲ್ಲಿ ಗೆಲ್ಲುತ್ತಿದ್ದಾರೆ. ಬೇರೆಯವರಿಗೆ ಅವಕಾಶವಿಲ್ಲದಂತಾಗಿದೆ. ಎಲ್ಲಕ್ಕಿಂತ ಮುಖ್ಯ ಇದು ಜಾತಿ ಆಧಾರಿತ ನಡೆಯುವ ಚುನಾವಣೆ. ಇವೆಲ್ಲವನ್ನು ಕೇಳಲು ಯಾವುದೋ ಚಲನಚಿತ್ರದ ಕಥೆಯಂತೆ ಭಾಸವಾದರೂ ಇವೆಲ್ಲವೂ ಸತ್ಯ ಘಟನೆಗಳೇ.

ಕೆಲವು ವರದಿಗಳ ಪ್ರಕಾರ ಈ ಚುನಾವಣೆಯಲ್ಲಿ ಪ್ರತಿ ವಾರ್ಡಿನಲ್ಲಿ ಅಭ್ಯರ್ಥಿಗಳು ಕನಿಷ್ಠ 20ರಿಂದ 25 ಲಕ್ಷ ರೂಪಾಯಿ ಖರ್ಚು ಮಾಡಿರುವ ಸಂಗತಿ ಅಲ್ಲಲ್ಲಿ ವರದಿಯಾಗುತ್ತಿವೆ. ರಾಮನಗರದ ಕೆಲವೆಡೆ ಮತ್ತು ಬೆಳಗಾವಿಯ ಕೆಲವು ವಾರ್ಡಿನಲ್ಲಿ ಅಭ್ಯರ್ಥಿಗಳು ಕನಿಷ್ಠ ಮೂವತ್ತರಿಂದ ಐವತ್ತು ಲಕ್ಷದವರೆಗೆ ಖರ್ಚು ಮಾಡಿ ಕೊನೆಗೂ ಸೋತಿರುವ, ಕೆಲವೆಡೆ ಪ್ರಯಾಸದಿಂದ ಗೆದ್ದಿರುವ ಉದಾಹರಣೆಗಳು ದಿನಕಳೆದಂತೆ ಕೇಳಿ ಬರುತ್ತಿವೆ. ಹೆಚ್ಚಿನ ಅಭ್ಯರ್ಥಿಗಳು ಸ್ವಂತ ಹಣಕ್ಕಿಂತ ಅಲ್ಲಿ-ಇಲ್ಲಿ ಸಾಲ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕಂಡು ಬರುತ್ತಿದೆ. ಈಗ ಸೋತವರಿಗೆ ಸಾಲ ತೀರಿಸುವ ಚಿಂತೆ, ಗೆದ್ದವರಿಗೆ ಲಾಭ ಮಾಡುವ ಚಿಂತೆ. ಬೆಳಗಾವಿಯ ಒಂದು ಕಡೆ ಒಂದು ಹಾಸ್ಯಪ್ರಸಂಗ ನಡೆದಿದ್ದು, ಚುನಾವಣೆಯಲ್ಲಿ ಗೆಲ್ಲಲು ಓರ್ವ ಅಭ್ಯರ್ಥಿ ತನ್ನ ಕ್ಷೇತ್ರದ ಮತದಾರರಿಗೆ ಬೆಳ್ಳಿ ನಾಣ್ಯಗಳನ್ನು ಹಂಚಿದ್ದ ಎನ್ನಲಾಗಿದೆ.

ಆದರೆ ಅದರ ಸಾಚಾತನವನ್ನು ಪರೀಕ್ಷಿಸಲು ಅಕ್ಕಸಾಲಿಗನ ಅಂಗಡಿಗೆ ಹೋದ ಕೆಲವು ಮತದಾರರು ಅದು ನಕಲಿ ಬೆಳ್ಳಿನಾಣ್ಯ ಎಂದು ತಿಳಿದು ಬಂದಿದ್ದು, ಅಭ್ಯರ್ಥಿಯ ಮೇಲೆ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ವಿಜಯಪುರದ ಕೆಲವೆಡೆ ಮನೆ ಪತ್ರಗಳನ್ನು ಅಡ ಇಟ್ಟು ಸಾಲ ಮಾಡಿ ಕೊನೆಗೆ ಅದು ನಕಲಿ ದಾಖಲೆಗಳೆಂದು ಬಯಲಾಗಿರುವುದು ಕಂಡುಬಂದಿದೆ! ಧಾರವಾಡದಲ್ಲಿ ಓರ್ವ ಅಭ್ಯರ್ಥಿ ಇತ್ತೀಚೆಗೆ ತಾನು ಖರೀದಿಸಿದ್ದ ಹೊಸ ಸೈಟೊಂದನ್ನು ಮಾರಿ ಚುನಾವಣೆಯಲ್ಲಿ ಸೋತು ಆತ್ಮಹತ್ಯೆಗೆ ಯತ್ನಿಸಿದ ಪ್ರಯತ್ನ ಪ್ರಕರಣ ವರದಿಯಾಗಿದೆ. ಗ್ರಾಮ ಪಂಚಾಯತ್ ಅವ್ಯವಸ್ಥೆ ಇಲ್ಲಿಗೆ ಮುಗಿಯುವುದಿಲ್ಲ. ಇದೊಂದು ಪ್ರತಿಷ್ಠೆಯ ಕಣವಾಗಿ ಇರುವುದರಿಂದ ಚುನಾವಣೆಯಿಂದ ಹಿಡಿದು ಮುಂದಿನ ಒಂದೆರಡು ವರ್ಷದವರೆಗೂ ನಿರಂತರವಾಗಿ ಚುನಾವಣೆಯ ವಿವಿಧ ಕಾರಣಗಳಿಂದ ಅಲ್ಲಲ್ಲಿ ಕೊಲೆಗಳು ನಡೆಯುತ್ತಲೇ ಇರುತ್ತವೆ. ಕೆಲವೆಡೆ ಗೆದ್ದ ಅಭ್ಯರ್ಥಿಗಳನ್ನು ಕೊಂದರೆ ಇನ್ನು ಕೆಲವೆಡೆ ಅಭ್ಯರ್ಥಿಗಳು, ಹಿಂಬಾಲಕರು ಇತ್ಯಾದಿ ಜನರು ಪ್ರಾಣ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಕೆಲವೆಡೆ ಗೆದ್ದ ಅಭ್ಯರ್ಥಿಗಳ ಅಪಹರಣ ಸಹ ನಡೆಯುತ್ತದೆ. ಇದರ ಮಧ್ಯೆ ಯಾವುದೇ ಹಣ ನೀಡದೆ ಪ್ರಾಮಾಣಿಕವಾಗಿ ಜನಸೇವೆಗಾಗಿ ಗೆದ್ದು ಬಂದಿರುವ ಅಭ್ಯರ್ಥಿಗಳು ಸಹ ಇದ್ದಾರೆ.

ಇದಕ್ಕೆಲ್ಲ ಕಾರಣ ಹುಡುಕುತ್ತಾ ಹೋದರೆ ಕೆಲವೊಂದು ವಿಚಾರಗಳು ಬೆಳಕಿಗೆ ಬರುತ್ತವೆ. ಅದರಲ್ಲೂ ಮುಖ್ಯವಾಗಿ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಇತರ ಚುನಾವಣೆ ನಡೆಯುವ ಸಂದರ್ಭದಲ್ಲಿ ಜಾರಿಗೆ ಬರುವ ಗಂಭೀರವಾದ ನೀತಿ ಸಂಹಿತೆಗಳು ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾಡಳಿತ/ಚುನಾವಣಾ ಆಯೋಗ ತರದೆ ಇರುವುದನ್ನು ಇಲ್ಲಿ ಗಮನಿಸಬಹುದು. ನೀತಿ ಸಂಹಿತೆಗಳು ಜಾರಿಯಲ್ಲಿದ್ದರೂ ಅದು ಕೇವಲ ಕಾಗದದ ಮೇಲೆ ಮಾತ್ರ. ಗ್ರಾಮ ಪಂಚಾಯತ್‌ನಲ್ಲಿ ನೀತಿ ಸಂಹಿತೆಗಳನ್ನು ಗಾಳಿಗೆ ತೂರುವ ಕಲೆಯನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಪಂಚಾಯತ್ ಚುನಾವಣೆಗಳಲ್ಲಿ ಕೋಟಿ-ಕೋಟಿ ಹಣ, ಹೆಂಡ ಮತ್ತಿತರ ವಸ್ತುಗಳನ್ನು ಬಳಸುವುದನ್ನು ಕಣ್ಣಿಗೆ ಕಂಡರೂ ಸಹ ಸಂಬಂಧಪಟ್ಟವರು ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಈ ಎಲ್ಲಾ ವಿಚಾರಗಳನ್ನು ರಾಜ್ಯ ಚುನಾವಣಾ ಆಯೋಗವೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಸ್ವಲ್ಪದಿನದಲ್ಲಿ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಚುನಾವಣೆ ನಡೆಯಲಿದ್ದು, ಅದು ಮತ್ತಷ್ಟು ರೋಚಕವಾಗಿರಲಿದೆ.

ಇತ್ತೀಚಿನ 15ನೇ ಹಣಕಾಸಿನ ಆಯೋಗವು ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವ ಕುರಿತು ಯೋಜನೆ ರೂಪಿಸುತ್ತಿದೆ. ಸರಕಾರ ಇತ್ತೀಚೆಗೆ ಗ್ರಾಮಪಂಚಾಯತ್‌ಗಳಿಗೆ ಸುಂಕವನ್ನು ಸಂಗ್ರಹಿಸುವ ಅಧಿಕಾರವನ್ನು ಸಹ ಕೊಟ್ಟಿದೆ. ಅದಕ್ಕಿಂತ ಮುಖ್ಯವಾಗಿ ನರೇಗಾ ಹಾಗೂ ಮತ್ತಿತರ ಕಾಮಗಾರಿಗಳಿಗೆ ಹೆಚ್ಚಿನ ಹಣ ಗ್ರಾಮಪಂಚಾಯತ್‌ಗಳಿಗೆ ಹರಿದು ಬರುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಕಾರ್ಯಕ್ರಮ ವರ್ಷಪೂರ್ತಿ ಇರುವುದರಿಂದ ಮತ್ತು ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಕೊನೆ ಇಲ್ಲದಿರುವುದರಿಂದ ಲಕ್ಷಾಂತರ ಖರ್ಚು ಮಾಡಿ ಗೆದ್ದ ಅಭ್ಯರ್ಥಿಗಳು ನರೇಗಾ ಕಾರ್ಯಕ್ರಮಗಳ ಮೂಲಕ ಹಣ ಮಾಡುವ ದೂರಾಲೋಚನೆಯಲ್ಲಿ ಇದ್ದಾರೆ ಎಂದರೆ ತಪ್ಪಲ್ಲ. ಇದಲ್ಲದೆ ಗ್ರಾಮಪಂಚಾಯತ್‌ಗಳಿಗೆ ಬರುವ ತುಂಡುಗುತ್ತಿಗೆ ವ್ಯವಹಾರ ಸಹ ಸಾಕಷ್ಟು ಹಣ ಮಾಡುವ ಮಾರ್ಗ ಎಂದು ಅಭ್ಯರ್ಥಿಗಳು ಕಂಡುಕೊಂಡಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಮುಂದೆ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗಳು ನಡೆಯುತ್ತವೆ. ಹೀಗಾಗಿ ಗೆದ್ದ ಅಭ್ಯರ್ಥಿಗಳ ಖರೀದಿ ಪ್ರಕ್ರಿಯೆ ಈಗ ಜೋರಾಗಿ ನಡೆಯುತ್ತಿದೆ. ಕೆಲವು ಗ್ರಾಮಪಂಚಾಯತ್ ಚುನಾವಣೆಗಳಲ್ಲಿ ಯಾರಿಗೂ ಸಹ ಸರಿಯಾದ ಬಹುಮತ ಬರದಿರುವುದರಿಂದ ಇಲ್ಲಿ ಆಯ್ಕೆಯಾದ ಸದಸ್ಯರಿಗೆ ಸಾಕಷ್ಟು ಡಿಮ್ಯಾಂಡ್ ಇರುತ್ತದೆ. ಇತ್ತೀಚೆಗೆ ಸರಕಾರ ಗ್ರಾಮಪಂಚಾಯತ್‌ಗಳಿಗೆ ಮೀಸಲಾತಿ ನಿಗದಿಪಡಿಸಿರುವುದರಿಂದ ನಿರ್ದಿಷ್ಟ ಜಾತಿಯ ಅಭ್ಯರ್ಥಿಗಳಿಗಂತೂ ಲಾಟರಿ ಹೊಡೆದ ಅನುಭವ. ವರದಿಗಳ ಪ್ರಕಾರ ಸಂಬಂಧಪಟ್ಟ ಪಕ್ಷಗಳು ಗೆದ್ದ ಸದಸ್ಯರನ್ನು ಈಗಾಗಲೇ ಗುಪ್ತ ಸ್ಥಳದಲ್ಲಿ ಇರಿಸಿದ್ದಾರೆ. ಪ್ರವಾಸದ ನೆಪದಲ್ಲಿ ಗೆದ್ದವರನ್ನು ಪರ ಊರಿಗೆ ಕಳಿಸಿರುವ, ರೆಸಾರ್ಟ್‌ಗಳಲ್ಲಿ ಇರಿಸುವ ಪ್ರಕ್ರಿಯೆ ಸಹ ಆರಂಭವಾಗಿದೆ. ಇಲ್ಲಿ ಹಣಕ್ಕಾಗಿ ಗೆದ್ದ ಅಭ್ಯರ್ಥಿಗಳು ತಮ್ಮನ್ನೇ ತಾವು ಮಾರಿಕೊಳ್ಳಲು ಸ್ಪರ್ಧೆಯಲ್ಲಿ ನಿಂತಿರುತ್ತಾರೆ.

ಸುಮಾರು 75 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ಭಾರತದ ಗ್ರಾಮಪಂಚಾಯತ್ ಚುನಾವಣೆಗಳ ಕಥೆ ಮತ್ತು ವ್ಯಥೆ ಇದು. ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಪಂಚಾಯತ್‌ಗಳ ಮೇಲೆ ನಿಂತಿರುತ್ತದೆ. ಯಾವುದೇ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ನೀಲನಕ್ಷೆ ಅಲ್ಲಿನ ಗ್ರಾಮ ಸಭೆ ಮತ್ತು ಪಂಚಾಯತ್‌ಗಳಿಂದ ಆಗಬೇಕು. ಒಂದೆಡೆ ಭ್ರಷ್ಟ ಅಭ್ಯರ್ಥಿಗಳು ಮತ್ತು ಅವಿದ್ಯಾವಂತರು ಹೆಚ್ಚಾಗಿ ಪಂಚಾಯತ್‌ಗಳಿಗೆ ಆಯ್ಕೆಯಾಗುತ್ತಿರುವುದು ಪಂಚಾಯತ್ ರಚನೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿದೆ. ಹೆಚ್ಚಿನ ಪಂಚಾಯತ್‌ಗಳಲ್ಲಿ ಮಹಿಳೆಯರು ಆಯ್ಕೆಯಾಗಿರುವುದರಿಂದ ಆ ಕುಟುಂಬಗಳ ಪುರುಷರೇ ಈ ಮಹಿಳೆಯರ ಪರವಾಗಿ ಮುಂದಿನ ಐದು ವರ್ಷ ಗ್ರಾಮ ಪಂಚಾಯತ್‌ಗಳಲ್ಲಿ ಆಡಳಿತ ನಡೆಸುತ್ತಾರೆ. ಇದಕ್ಕಿಂತ ಕುಚ್ಯೋದ್ಯ ಬೇರೆ ಏನಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)