varthabharthi


ನಿಮ್ಮ ಅಂಕಣ

ಕರ್ನಾಟಕ ರಾಜ್ಯಪತ್ರದಲ್ಲಿ ಕನ್ನಡವೇ ಇಲ್ಲ!

ವಾರ್ತಾ ಭಾರತಿ : 11 Jan, 2021
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ಮಾನ್ಯರೇ,

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಸಾರ್ವಜನಿಕ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಸರಕಾರಗಳು ಸಾಕಷ್ಟು ಕ್ರಮವಹಿಸುತ್ತಾ ಬಂದಿವೆ. ಅದರ ಮುಂದುವರಿದ ಭಾಗವಾಗಿ ಪ್ರಸ್ತುತವಾಗಿ ಕನ್ನಡಕಾಯಕ ವರ್ಷವಾಗಿ ಆಚರಿಸುತ್ತಿದ್ದು ಎಲ್ಲ ಇಲಾಖೆಗಳಲ್ಲಿನ ಪತ್ರ ವ್ಯವಹಾರಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಇಲಾಖೆಗಳು ಕ್ರಮವಹಿಸುತ್ತಿವೆ. ಸರಕಾರದ ಅಧಿಸೂಚನೆಗಳನ್ನು ಪ್ರಕಟಿಸುವ ಸರಕಾರದ ಅಧಿಕೃತ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆಗಳನ್ನು ಆಂಗ್ಲ ಭಾಷೆಯಲ್ಲಿಯೇ ಪ್ರಕಟಿಸಲಾಗುತ್ತಿದೆ. ಕರ್ನಾಟಕ ರಾಜ್ಯಪತ್ರವೆಂದು ಕನ್ನಡದಲ್ಲಿ ತಲೆಬರಹವಿದ್ದು, ಅಧಿಸೂಚನೆಗಳು ಮಾತ್ರ ಆಂಗ್ಲ ಭಾಷೆಯಲ್ಲಿ ಮುದ್ರಣಗೊಳ್ಳುತ್ತಾ ಕರ್ನಾಟಕ ರಾಜ್ಯಪತ್ರವು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯಪತ್ರದ ಆಂಗ್ಲ ವ್ಯಾಮೋಹದ ಈ ನಡೆಯಿಂದ ಸರಕಾರದ ಅಧಿಸೂಚನೆಗಳನ್ನು ಓದಲಿಚ್ಛಿಸುವ ಆಂಗ್ಲ ಭಾಷೆ ಬಾರದ ಕನ್ನಡಿಗರಿಗೆ ತೊಂದರೆಯಾಗಿದೆ. ಕನ್ನಡ ಕಾಯಕ ವರ್ಷದ ಆದೇಶದ ಪ್ರಕಾರ ಎಲ್ಲ ಇಲಾಖೆಗಳು ಹಾಗೂ ಇಲಾಖೆಗಳ ಅಂತರ್ಜಾಲ, ಫೇಸ್‌ಬುಕ್ ಪೇಜ್, ವೆಬ್‌ಸೈಟ್ ಸೇರಿದಂತೆ ಎಲ್ಲ ಕಾಗದ ಪತ್ರಗಳು ಕನ್ನಡಮಯವಾಗಬೇಕೆಂಬುದು ಕಡ್ಡಾಯ ನಿಯಮವಾಗಿದ್ದರೂ ಕರ್ನಾಟಕ ರಾಜ್ಯಪತ್ರ ಪ್ರಕಟಿಸುವ ಇಲಾಖೆಯ ಸಂಕಲನಾಧಿಕಾರಿಗಳಿಗೆ ಈ ಆದೇಶವನ್ನು ಪಾಲನೆ ಮಾಡುವ ಆಸಕ್ತಿ ಇದ್ದಂತಿಲ್ಲ. ಇನ್ನಾದರೂ ಕರ್ನಾಟಕ ರಾಜ್ಯಪತ್ರ ಪ್ರಕಟಿಸುವ ಇಲಾಖೆ ಇತ್ತ ಗಮನಹರಿಸಿ ಮುಂದಿನ ಸಂಚಿಕೆಗಳಿಂದ ರಾಜ್ಯಪತ್ರ ಕನ್ನಡದಲ್ಲೇ ಪ್ರಕಟವಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)