varthabharthi


ವಿಶೇಷ-ವರದಿಗಳು

ಇಂದು ರಾಷ್ಟ್ರೀಯ ಯುವ ದಿನಾಚರಣೆಯಾಗಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಯುವನೀತಿ: ಭಾರತದ ಯುವಜನರ ನಿರೀಕ್ಷೆಗಳು

ವಾರ್ತಾ ಭಾರತಿ : 12 Jan, 2021
ಜನಾರ್ದನ ಕೆಸರಗದ್ದೆ ಸಂಚಾಲಕರು, ಸಂವಾದ ಯುವಜನ ಕಾರ್ಯ ಸಂಪನ್ಮೂಲ ಕೇಂದ್ರ, ಬೆಂಗಳೂರು.

ಇದೀಗ ಹೊರಬರಲಿರುವ 2020ರ ಯುವನೀತಿಯಲ್ಲಿ ಇದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷೆ ಮಾಡಲಾಗುತ್ತಿದೆ. ‘‘ಯುವಜನರು ದೇಶ ಕಟ್ಟಲು ಮುಂದಾಗಬೇಕು’’ ಎಂದಷ್ಟೇ ಹೇಳಿ ಅವರ ಕರ್ತವ್ಯಗಳನ್ನು ಮಾತ್ರ ವಿವರಿಸಿ ಮುಗಿಸಿದರೆ ಅದು ಯುವನೀತಿಯಾಗಲಾರದು. ದೇಶದ ಯುವಜನರ ಸ್ಥಿತಿ ಹೇಗಿದೆ, ಅವರು ಚೆನ್ನಾಗಿರುವುದಕ್ಕೆ (ವೆಲ್ ಬೀಯಿಂಗ್) ಏನು ಮಾಡಬೇಕಾಗಿದೆ ಎಂಬ ವಿವರ ಬೇಕು. ಯುವಜನರು ಬಹು ಸಂಖ್ಯೆಯಲ್ಲಿ ಇರುವುದರಿಂದ ಅವರೇ ದೇಶ. ಅವರು ಚೆನ್ನಾಗಿದ್ದರೆ ದೇಶ ಚೆನ್ನಾಗಿದ್ದಂತೆ.


ಭಾರತ ರಾಷ್ಟ್ರೀಯ ಯುವನೀತಿ-2020 ಇಷ್ಟೊತ್ತಿಗೆ ಬಿಡುಗಡೆ ಆಗಬೇಕಿತ್ತು. ಜನವರಿ 12 ರಾಷ್ಟ್ರೀಯ ಯುವ ದಿನ ಅಥವಾ ಆ ವಾರದಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಸಂದರ್ಭದಲ್ಲಾದರೂ ಯುವನೀತಿ ಹೊರ ಬರಬೇಕು. ಅದೂ ಅನಿಶ್ಚಿತ. ಈ ಬಗ್ಗೆ ಏನೂ ಸುಳಿವಿಲ್ಲ. ಕೋವಿಡ್ ಕಾರಣದಿಂದ ವಿಳಂಬವಾಗಿದೆ ಅಂದುಕೊಳ್ಳಬಹುದು. ಒಂದು ವೇಳೆ ಬಿಡುಗಡೆಯಾದರೂ ಇದು ಸಾರ್ವಜನಿಕ ಚರ್ಚೆಗೆ ತೆರೆಯಲ್ಪಡುವ ಕರಡು ಆಗಿ ಬರುತ್ತದೆಯೇ ಅಥವಾ ನೇರವಾಗಿ ಅಂಗೀಕರಿಸಲ್ಪಡುತ್ತದೆಯೇ ತಿಳಿಯದು. ಈ ಅನುಮಾನ ಯಾಕೆಂದರೆ ಭಾರತದಲ್ಲೀಗ ಸುಗ್ರೀವಾಜ್ಞೆಗಳ ಪರ್ವಕಾಲ. ಕೋವಿಡ್ ಕಾಲವಾಗಿರುವುದರಿಂದ ಚರ್ಚೆಯನ್ನು ಎಲ್ಲಾ ಹಂತಗಳಲ್ಲಿ ರದ್ದು ಪಡಿಸಲಾಗಿದೆ. ಈ ಕಾಲವನ್ನು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೇ ಪ್ರಜಾಪ್ರಭುತ್ವದ ಹಿನ್ನಡೆಯ ಕಾಲವೆಂದೇ ಪರಿಗಣಿಸಬಹುದು. ಶಾಸನ ಸಭೆಗಳ ಕಲಾಪ ರದ್ದು ಪಡಿಸಲು ಕೋವಿಡ್ ಉತ್ತಮ ನೆಪವಾಗಿದೆ. ಚರ್ಚೆ ಇಲ್ಲದೆ, ವಿರೋಧ ಇಲ್ಲದೆ, ವಿರೋಧ ಪಕ್ಷವಿಲ್ಲದೆ ಕಾಯ್ದೆಗಳನ್ನು ತರುವುದು, ಸುಗ್ರೀವಾಜ್ಞೆಗಳನ್ನು ತರುವುದು ನೈಜ ಪ್ರಜಾಸತ್ತೆಗೆ ಮಾರಕ. ಯುವನೀತಿಯೂ ಕೂಡ ಹೀಗೆ ಚರ್ಚೆಯಾಗದೆ ಪಾಸ್ ಆಗಬಹುದು. ಮತ ಹಾಕಿದ ನಂತರ ಉಳಿದೆಲ್ಲ ಸಂದರ್ಭಗಳಲ್ಲೂ ಜನರು ಅವರ ಪಾಡಿಗೆ ಇದ್ದುಬಿಡುವುದು ಪ್ರಜಾಸತ್ತೆಯ ಅತ್ಯಂತ ದುರ್ಬಲ ಸ್ಥಿತಿ. ಇದಲ್ಲದೆ ಈಗಿನ ಕೇಂದ್ರ ಸರಕಾರಕ್ಕೆ ನಿಜವಾಗಿಯೂ ಭಾರತದ ನಾಗರಿಕರು ಯುವನೀತಿಯನ್ನು ರೂಪಿಸುವುದರಲ್ಲಿ ಪಾಲ್ಗೊಳ್ಳಬೇಕು ಎಂದಿದ್ದರೆ ಅದನ್ನು ಕೇವಲ ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ತರದೆ ಪ್ರಾದೇಶಿಕ ಭಾಷೆಗಳಲ್ಲಿ, ಕನಿಷ್ಠ ಪಕ್ಷ ಎಂಟನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿ ತರಬೇಕು. ಆದರೆ ಹೊಸ ಶಿಕ್ಷಣ ನೀತಿಯೂ ಸೇರಿದಂತೆ ಯಾವ ನೀತಿಗಳೂ, ಕಾಯ್ದೆಗಳೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟನೆಗೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ಶಿಕ್ಷಣ ನೀತಿ ಬಗ್ಗೆ ಪ್ರತಿರೋಧ ಎದುರಿಸಬೇಕಾಯಿತು, ಪರಿಸರ ಪರಿಣಾಮ ಕಾಯ್ದೆಗೆ ಉಚ್ಚ ನ್ಯಾಯಾಲಯ ತಡೆ ನೀಡಿತು. ಮತ್ತೊಂದು ಸಲ ಕೇಂದ್ರವು ಮುಜುಗರಕ್ಕೆ ಒಳಗಾಗಬಾರದು. ಯುವನೀತಿಯು ಆರಂಭದಲ್ಲೇ ಸ್ಥಳೀಯ ಭಾಷೆಗಳಲ್ಲಿ ಪ್ರಕಟಗೊಳ್ಳಲಿ.

ಯುವನೀತಿ-2020ರ ಕರಡು ಸಿದ್ಧಪಡಿಸುವ ಜವಾಬ್ದಾರಿಯನ್ನು ‘ಯುನೈಟೆಡ್ ನೇಷನ್ಸ್ ವಾಲಂಟಿಯರ್ಸ್ ಇಂಡಿಯಾ’ ಅವರಿಗೆ ನೀಡಲಾಗಿತ್ತು. ಯುಎನ್‌ವಿಯು ಜಾಗತಿಕ ಸಂಸ್ಥೆಯಾಗಿರುವುದರಿಂದ ಒಂದು ವಿಶಾಲ ಮಾನವ ಹಕ್ಕುಗಳ ನೆಲೆಯಲ್ಲಿ ಅದು ಕೆಲಸ ಮಾಡುತ್ತದೆ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾಗಿರುವುದರಿಂದ ಸಹಜವಾಗಿಯೇ ಸುಸ್ಥಿರ ಅಭಿವೃದ್ಧಿ ಮತ್ತು ಒಳಗೊಳಿಸುವಿಕೆಯ ವಿಚಾರಗಳ ಬಗ್ಗೆ ಅದು ಎಚ್ಚರವಾಗಿದೆ. ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಭಾಗವಾಗಿರುವ ‘‘ಲೀವ್ ನೋ ವನ್ ಬಿಹೈಂಡ್’’ ಪರಿಕಲ್ಪನೆಯಲ್ಲಿ ಯುವಜನರು ಕೂಡ ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು ಎಂಬ ಅಂಶ ಇದೆ. ಆದುದರಿಂದ ಯುಎನ್ ವಿಯಿಂದ ಉತ್ತಮವಾದ ಯುವನೀತಿಯ ಕರಡನ್ನೇ ನಿರೀಕ್ಷಿಸಬಹುದು. ಆದರೆ ಒಂದು ಮಾಹಿತಿ ಮೂಲದ ಪ್ರಕಾರ ಯುಎನ್‌ವಿ ರಚಿಸಿದ ಕರಡು ನೀತಿಗೆ ಕೇಂದ್ರವು ಮೂರು ನಾಲ್ಕು ಬಾರಿ ತಿದ್ದುಪಡಿಯನ್ನು ಮಾಡಿಸಿಕೊಂಡಿದೆ. ಯುವನೀತಿಯನ್ನು ರೂಪಿಸುವಲ್ಲೂ ಈ ದೇಶದ ಜನರು ಅದರಲ್ಲೂ ಮುಖ್ಯ ವಾಗಿ ಯುವಜನರು ಭಾಗವಹಿಸಬೇಕು. ಭಾಗವಹಿಸಬೇಕಿತ್ತು.

ಯುವಜನರೊಂದಿಗೆ ಸಮಾಲೋಚನೆ ಮಾಡಿ ಅವರ ಆಶೋತ್ತರಗಳನ್ನು ಸಂಗ್ರಹಿಸುವ ಕೆಲಸವನ್ನು ಬಾಷ್ಟನ್ ಕನ್ಸಲ್ಟಿಂಗ್ ಗ್ರೂಪ್ ಅವರಿಗೆ ಒಪ್ಪಿಸಲಾಗಿತ್ತು. ಅವರು ಆನ್‌ಲೈನ್ ಮೂಲಕ ಯುವಜನರ ಅಭಿಪ್ರಾಯ ಸಂಗ್ರಹ ಮಾಡಿದ್ದಾರಂತೆ. ಆದರೆ ಇದರಲ್ಲಿ ಎಷ್ಟು ಯುವಜನರು ಮಾಹಿತಿ ನೀಡಿದ್ದಾರೆ, ಆನ್‌ಲೈನ್ ಮೂಲಕ ಯಾವ ವರ್ಗದ ಯುವಜನರು ಅಭಿಪ್ರಾಯ ನೀಡಿದ್ದಾರೆ ಎಂಬುದನ್ನು ಪಾರದರ್ಶಕವಾಗಿ ಜನರಿಗೆ ತಿಳಿಸುವ ಅಗತ್ಯವಿದೆ. ದೇಶದ ನಾಲ್ಕು ಕಡೆಗಳಲ್ಲಿ ಯುವಜನರ ಜೊತೆಗೆ ನೇರ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಅದರಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಸಭೆ ಒಂದು ಮಾತ್ರ. ಅದು ಚೆನ್ನೈನಲ್ಲಿ. ಅಲ್ಲಿನ ಸಂಘಟಕರು ತಿಳಿಸಿದಂತೆ ಸುಮಾರು ನೂರಾಐವತ್ತು ಯುವಜನರು ಸೇರಿದ್ದರಂತೆ. ಭಾರತದ ಇಂದಿನ ಸಂದರ್ಭಕ್ಕೆ ಯುವನೀತಿಯು ಬಹಳ ಪ್ರಮುಖ ನೀತಿಯಾಗಿದೆ. ಯಾಕೆಂದರೆ ಪ್ರಸ್ತುತದ ಜಗತ್ತು ಯುವ ಜಗತ್ತು.

ಈಗ ವಿಶ್ವದಲ್ಲಿ 15ರಿಂದ 24ವರ್ಷ ವಯಸ್ಸಿನ ಯುವಜನರ ಸಂಖ್ಯೆ 120 ಕೋಟಿ ಇದೆ. ವಿಶ್ವದ ಯುವಜನರ ಪೈಕಿ ಶೇ. 20 ಭಾರತದಲ್ಲೇ ಇದ್ದಾರೆ. ‘ಭಾರತದ ಯುವನೀತಿ 2014’ರ ಪ್ರಕಾರ 15ರಿಂದ 29 ವರ್ಷ ವಯಸ್ಸಿನವರು ಯುವಜನರು. ದೇಶದಲ್ಲಿ ಈ ವಯೋಮಾನದವರ ಸಂಖ್ಯೆ ಈಗ ಸುಮಾರು 40 ಕೋಟಿ. ಕೋವಿಡ್ ಮತ್ತು ಕೋವಿಡ್ ಪೂರ್ವದಲ್ಲೇ ಅಧಃಪತನಗೊಂಡಿರುವ ಭಾರತದ ಆರ್ಥಿಕ ಸ್ಥಿತಿಯ ನೇರ ಬಲಿಪಶುಗಳು ಯುವಜನರೇ. ಅವರ ಭವಿಷ್ಯವೇ ಡೋಲಾಯಮಾನವಾಗಿದೆ. ಶಿಕ್ಷಣ, ಉದ್ಯೋಗ, ಸಂಬಂಧ-ಕುಟುಂಬ ಜೀವನ ಇವು ಮೂರು ಯುವಜನರ ಯೌವನದ ದಿನಗಳಲ್ಲಿ ನಡೆವ ಜೀವನದ ಪ್ರಮುಖ ತಿರುವುಗಳು. ಖಾಸಗೀಕರಣ ಆಗಿರುವ, ಇನ್ನಷ್ಟು ಖಾಸಗೀಕರಣಗೊಳ್ಳಲಿರುವ ಶಿಕ್ಷಣದಿಂದ ಬಡ ಮತ್ತು ದಮನಿತ ಸಮುದಾಯಗಳ ಯುವಜನ ಮತ್ತಷ್ಟು ವಂಚಿತರಾಗುತ್ತಾರೆ. ಡಿಜಿಟಲ್ ಡಿವೈಡ್ ಇದೀಗ ಮೂರ್ತ ರೂಪದಲ್ಲಿ ಕಂಡಿದೆ.

ಬಹಳ ತಾಂತ್ರಿಕ ಪರಿಕರಗಳನ್ನು ಕೊಳ್ಳಲಾಗದ, ಇಂಟರ್‌ನೆಟ್ ಡೇಟಾ ಖರೀದಿಸಲಾರದ ಕುಟುಂಬಗಳ ಯುವಜನರು ಶಿಕ್ಷಣ ಮತ್ತು ಮಾಹಿತಿಯಿಂದ ವಂಚಿತರಾಗುತ್ತಾರೆ. ಕೋವಿಡ್ ಪೂರ್ವದಲ್ಲೇ 45 ವರ್ಷಗಳಲ್ಲೇ ಅತ್ಯಧಿಕವಾಗಿ ಶೇ. 14ಕ್ಕೆ ಏರಿದ್ದ ದೇಶದ ನಿರುದ್ಯೋಗ ಪ್ರಮಾಣ ಇದೀಗ ಶೇ. 27 ದಾಟಿದೆ. ಕೆಲಸ ಕಳೆದುಕೊಂಡಿರುವ ಯುವಜನರು ಒಂದು ಕಡೆಯಾದರೆ ಮುಂದೆ ದುಡಿಮೆಗೆ ಇಳಿಯಬೇಕಾದ (Youth Entering work foce) ಯುವಜನರಿಗೆ ಉದ್ಯೋಗ-ಜೀವನೋಪಾಯದ ಅವಕಾಶಗಳು ಸಿಗಬೇಕಾದರೆ ಯುವನೀತಿ, ಉದ್ಯೋಗ ನೀತಿಯಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿದೆ. ಯುವನೀತಿಯು ಯುವಜನರ ದೈಹಿಕ, ಮಾನಸಿಕ ಆರೋಗ್ಯದ ಉನ್ನತಿ ವಿಚಾರಗಳನ್ನೂ ಒಳಗೊಂಡಿರಬೇಕು. ದೇಶದಲ್ಲಿ ನಡೆಯುವ ಒಟ್ಟು ಸುಮಾರು ಶೇ. 40 ಆತ್ಮಹತ್ಯೆ ಪ್ರಕರಣಗಳು 15 ರಿಂದ 29 ವಯೋಮಾನದವರದು ಎಂದು ನ್ಯಾಷನಲ್ ಕ್ರೈಂ ಬ್ಯೂರೋ ವರದಿ ಹೇಳುತ್ತದೆ. ಒಂದು ಅಧ್ಯಯನದ ಪ್ರಕಾರ ನಮ್ಮ ದೇಶದ ಶೇ. 30 ಯುವಜನರಿಗೆ ಮಾನಸಿಕ ಕಾಯಿಲೆ ಅಥವಾ ಒತ್ತಡಗಳಿವೆ. ಕೋವಿಡ್ ಸಮಯವು ಈ ಒತ್ತಡವನ್ನು ಹೆಚ್ಚು ಮಾಡಿದೆ ಎನ್ನುವುದರಲ್ಲಿ ಯಾವುದೇ ವಿವಾದಗಳಿಲ್ಲ. ಇನ್ನು ದೈಹಿಕ ಆರೋಗ್ಯ ವಿಚಾರಕ್ಕೆ ಬರುವುದಾದರೆ ‘ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷಿಯನ್ ಸರ್ವೇ 2016-18’ರ ಪ್ರಕಾರ ದೇಶದಲ್ಲಿ ಶೇ. 20 ಯುವಜನರು (15-19 ವರ್ಷ ವಯಸ್ಸಿನವರು) ಕುಂಠಿತ ದೈಹಿಕ ಬೆಳವಣಿಗೆ ಹೊಂದಿದ್ದಾರೆ. (moderate or severely less Body Mass Index).

ದೇಶದಲ್ಲಿ 10 - 19 ವರ್ಷ ಒಳಗಿನ ಶೇ. 28 ಯುವಜನರು ಅನೀಮಿಯಾ ಅಥವಾ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ 10 ರಿಂದ 19 ವರ್ಷದೊಳಗಿನ ಶೇ. 25 ಜನರು ಸೂಕ್ಷ್ಮ ಪೋಷಕಾಂಶಗಳಿಂದಾಗುವ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದಾರೆ. ಕೋವಿಡ್ ಮತ್ತು ನಂತರ ದುಡಿದುಣ್ಣುವ ಕುಟುಂಬಗಳು ದುಡಿಮೆಯನ್ನೇ ಕಾಣದ ಕಾಲದಲ್ಲಿ ಅಂತಹ ವರ್ಗದ ಯುವಜನರು ಹೆಚ್ಚು ಪೋಷಕಾಂಶ ಆಹಾರ ಪಡೆಯಲು ಆರೋಗ್ಯ ಸುಧಾರಿಸಿಕೊಂಡಿರಲು ಸಾಧ್ಯವಿಲ್ಲ. ಯುವನೀತಿಯು ಯುವಜನರ ಸಮಗ್ರ ಅಭಿವೃದ್ಧಿಯ ನೆಲೆಯಲ್ಲಿ ಇದನ್ನು ಚರ್ಚಿಸಿ ಅದಕ್ಕೆ ಪೂರಕ ಕಾರ್ಯಕ್ರಮಗಳನ್ನು ಘೋಷಿಸಬೇಕಾಗಿದೆ. ಈ ದೃಷ್ಟಿಯಿಂದ ನೋಡಿದರೆ 2012ರ ಎಕ್ಸ್‌ಪೋಷರ್ ಡ್ರಾಫ್ಟ್ ಯುವನೀತಿಯು (Exposure Draft National Youth Policy&2012) ಒಂದು ಮೈಲಿಗಲ್ಲು ಎನ್ನಬಹುದು. ಅದರ ಆಧಾರದ ಮೇಲೆ ಬಂದಿರುವ 2014ರ ಭಾರತದ ಯುವನೀತಿಯು ಯುವಜನ ಅಭಿವೃದ್ಧಿ ಸೂಚ್ಯಂಕದ ಪರಿಕಲ್ಪನೆಯನ್ನು ಬಳಸಿಕೊಂಡು ಸರ್ವೇ ಸ್ಯಾಂಪಲ್ ಮಾಡಿ ವರದಿಯನ್ನು ಯುವನೀತಿಗೆ ಅಡಕಗೊಳಿಸಿತು. ಆರೋಗ್ಯ (ಹೆರಿಗೆಗೆ ಆಸ್ಪತ್ರೆಯ ಲಭ್ಯತೆ, ಯುವಜನರಲ್ಲಿ ಅನಾರೋಗ್ಯ ಸಾವಿನ ಪ್ರಮಾಣ, ಶೇಕಡವಾರು ರಕ್ಕಹೀನತೆ, ಶರೀರದ ತೂಕ ಇತ್ಯಾದಿ), ಶಿಕ್ಷಣ (ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾತಿ, ಶೈಕ್ಷಣಿಕ ಸಾಧನೆಯ ಹಂತ ಇತ್ಯಾದಿ), ಕೆಲಸ (ಕೆಲಸದಲ್ಲಿ ಭಾಗವಹಿಸುವ ದರ, ಪ್ರತಿ ಯುವಕ/ಯುವತಿಗೆ ವರ್ಷದಲ್ಲಿ ಸಿಗುವ ಕೆಲಸದ ದಿನ ಇತ್ಯಾದಿ), ಸೌಕರ್ಯಗಳು (ಸುರಕ್ಷಿತ ನೀರಿನ ಲಭ್ಯತೆ, ಮನೆ, ವಿದ್ಯುತ್, ಶೌಚಾಲಯ ಇತ್ಯಾದಿ), ಯುವಜನ ಸೌಕರ್ಯಗಳು ( ಮಾಹಿತಿ, ಸಂವಹನ, ತಂತ್ರಜ್ಞಾನ ಇತ್ಯಾದಿ) ಮತ್ತು ಯುವಜನರ ಭಾಗವಹಿಸುವಿಕೆ ಗಳನ್ನು ಯುವಜನ ಅಭಿವೃದ್ಧಿ ಸೂಚಕಗಳಾಗಿ ಬಳಸಿಕೊಳ್ಳಲಾಯಿತು.

ಭಾರತದ ಯುವಜನ ಅಭಿವೃದ್ಧಿ ಸೂಚ್ಯಂಕವು 0.548 ಇದ್ದು (ಒಂದು ಅಂದರೆ ಗರಿಷ್ಠ ಅಭಿವೃದ್ಧಿ) ಯುವಜನ ಅಭಿವೃದ್ಧಿಯಲ್ಲಿ ಭಾರತ 183 ರಾಷ್ಟ್ರಗಳ ಪೈಕಿ 133 ನೇ ಸ್ಥಾನದಲ್ಲಿದೆ (2016). 2012ರ ಕರಡು ನೀತಿಯಲ್ಲಿ ಯುವಜನರೆಂದರೆ ಏಕರೂಪಿ ವರ್ಗವಲ್ಲ, ಅವರನ್ನು ಅವರ ಸಾಮಾಜಿಕ, ಆರ್ಥಿಕ, ಭೌಗೋಳಿಕ, ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಅಧ್ಯಯನ ಮಾಡಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ ಎಂಬ ಪ್ರಮುಖ ಅಂಶವನ್ನೂ ಮುಂದಿಟ್ಟಿತು. ಇದೀಗ ಹೊರಬರಲಿರುವ 2020ರ ಯುವನೀತಿಯಲ್ಲಿ ಇದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷೆ ಮಾಡಲಾಗುತ್ತಿದೆ. ‘‘ಯುವಜನರು ದೇಶ ಕಟ್ಟಲು ಮುಂದಾಗಬೇಕು’’ ಎಂದಷ್ಟೇ ಹೇಳಿ ಅವರ ಕರ್ತವ್ಯಗಳನ್ನು ಮಾತ್ರ ವಿವರಿಸಿ ಮುಗಿಸಿದರೆ ಅದು ಯುವನೀತಿಯಾಗಲಾರದು. ದೇಶದ ಯುವಜನರ ಸ್ಥಿತಿ ಹೇಗಿದೆ, ಅವರು ಚೆನ್ನಾಗಿರುವುದಕ್ಕೆ (ವೆಲ್ ಬೀಯಿಂಗ್) ಏನು ಮಾಡಬೇಕಾಗಿದೆ ಎಂಬ ವಿವರ ಬೇಕು. ಯುವಜನರು ಬಹು ಸಂಖ್ಯೆಯಲ್ಲಿ ಇರುವುದರಿಂದ ಅವರೇ ದೇಶ. ಅವರು ಚೆನ್ನಾಗಿದ್ದರೆ ದೇಶ ಚೆನ್ನಾಗಿದ್ದಂತೆ. ಸರಕಾರಗಳು ಜನ ಕಲ್ಯಾಣದ ಯೋಜನೆಗಳಿಂದ ಹಿಂದೆ ಸರಿದು ಜನರ ನಿಯಂತ್ರಣದ ಕಾನೂನುಗಳನ್ನು ತರುವ ಕಡೆಗೆ ಸಾಗಿವೆ. ಹೆರಿಗೆ ಸಮಯದ ಸಾವುಗಳನ್ನು (ಎಮ್‌ಎಮ್‌ಆರ್) ಕಡಿಮೆ ಮಾಡುವ ನೆಪದಿಂದ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಹೆಚ್ಚು ಮಾಡುವ ಕಾನೂನು ಮಾಡುತ್ತಿರುವುದು ಇದಕ್ಕೆ ಒಂದು ಉತ್ತಮ ಉದಾಹರಣೆ. ಹೆರಿಗೆ ಸಮಯದ ಸಾವುಗಳು ಸಂಭವಿಸುವುದಕ್ಕೆ ಮುಖ್ಯ ಕಾರಣವೇ ಬಡತನದಲ್ಲಿರುವ ಹೆಣ್ಣು ಮಕ್ಕಳ ಅಪೌಷ್ಟಿಕತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆ. ಇದನ್ನು ಸರಿಪಡಿಸದೆ ಮದುವೆ ವಯಸ್ಸನ್ನು ಹೆಚ್ಚು ಮಾಡುವುದು ಮಾತ್ರ ನಿರೀಕ್ಷಿತ ಫಲ ನೀಡದು. ಈ ಕಾಯ್ದೆ ಭಾರತದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ರೂಪಿಸ ಲಾಗುತ್ತಿದೆ.

ಮದುವೆ ಎಂಬುದು ಯುವಜನ ಸಂಬಂಧಿತ ವಿಚಾರ ಅಲ್ಲವೇ? ಇದರಲ್ಲಿ ಯುವಜನ ವ್ಯವಹಾರಗಳ ಸಚಿವಾಲಯ ಯಾಕೆ ಭಾಗವಾಗಿಲ್ಲ? ಅಥವಾ ಯುವನೀತಿಯು ಮದುವೆಯ ವಿಚಾರದ ಪ್ರಸ್ತಾಪ ಬೇಡವೇ? ಜನರ ಆರ್ಥಿಕ ಸಾಮಾಜಿಕ ಅಗತ್ಯಗಳ ಬಗ್ಗೆ ಮೌನ ವಹಿಸಿ ಅವರ ಸಾಂಸ್ಕೃತಿಕ ವ್ಯವಹಾರಗಳಲ್ಲಿ ಸರಕಾರವು ತನ್ನ ಧೋರಣೆಗೆ ತಕ್ಕಂತೆ ತಲೆ ಹಾಕುವುದು ಸರಿಯಲ್ಲ. ಯುವಜನರೆಂದರೆ ಹೊಸ ಲೋಕ ದೃಷ್ಟಿಕೋನವನ್ನು ರೂಪಿಸಿಕೊಂಡು ಹೊಸ ಸಮಾಜ ಕಟ್ಟ ಬಲ್ಲವರು. ಸಂವಿಧಾನದ ಆಶಯದ ಪ್ರಕಾರ ಗಡಿಗಳನ್ನು ಮೀರಿದ ಸ್ನೇಹ, ಪ್ರೇಮ, ಸಂಬಂಧಗಳನ್ನು ಬೆಸೆಯಲು ಯುವಜನರು ತಯಾರಿರುವಾಗ ಸರಕಾರಗಳು ಬೇರೆ ಬೇರೆ ಕಾನೂನುಗಳ ರೂಪದಲ್ಲಿ ಗಡಿ ಮೀರಿದ ಸಂಬಂಧಗಳಿಗೆ ಕಡಿವಾಣ ಹಾಕಲು ಹೊರಟಿವೆ. ಪ್ರಗತಿಯ ವಿಚಾರದಲ್ಲಿ ನವ ಸಮಾಜವನ್ನು, ನಾಗರಿಕ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಇದು ಹಿಮ್ಮುಖ ನಡಿಗೆಯಂತೆಯೇ ಕಾಣುತ್ತದೆ.

ಕೋವಿಡ್ ನಂತರದ (ಅದರ ಇನ್ನೊಂದು ರೂಪವೂ ಕೊನೆಗೊಂಡರೆ) ಜಾಗತಿಕ ಸಮುದಾಯವು ಒಂದು ವಿಶಾಲ ಮಾನವೀಯ ಹಾಗೂ ಜೀವಪರ ನೆಲೆಯ ಹೊಸ ಸಾಮಾಜಿಕ, ಆರ್ಥಿಕ ರಾಜಕೀಯ ಸಂಬಂಧಗಳನ್ನು ಎದುರು ನೋಡುತ್ತಿದೆ. ಈ ಜಗತ್ತಿನಲ್ಲಿ ಇನ್ನು ಮುಂದಿನ ಹಲವು ದಶಕಗಳ ಕಾಲ ಬಾಳಿ ಬದುಕಬೇಕಾದ ಯುವಜನರು ಈ ಭೂಮಿಯ ಭೌತಿಕ ಪರಿಸರ ಮತ್ತು ಸಾಮಾಜಿಕ ಪರಿಸರವನ್ನು ಹೇಗೆ ಇಟ್ಟುಕೊಳ್ಳಬಯಸುತ್ತಾರೆ ಎಂದು ಅವರನ್ನೇ ಕೇಳಬೇಕು. ಅದಕ್ಕಾಗಿ ಅವರು ಎಲ್ಲ ತೀರ್ಮಾನಗಳಲ್ಲೂ ಭಾಗವಹಿಸಬೇಕು. ಭಾರತದ ಯುವಜನರು ರಾಷ್ಟ್ರೀಯ ಯುವನೀತಿಯನ್ನು ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಒಂದು ಉತ್ತಮ ನೀತಿ ರೂಪಿಸುವುದರಲ್ಲಿ ಅವರೆಲ್ಲರು ಸಕ್ರಿಯವಾಗಿ ಭಾಗವಹಿಸುವರು, ಸ್ಪಂದಿಸುವರು ಎಂಬ ಭರವಸೆ ಇಡೋಣ ಮತ್ತು ಅದಕ್ಕೆ ಅವಕಾಶ ಮಾಡಿಕೊಡೋಣ. ರಾಷ್ಟ್ರೀಯ ಯುವ ಸಪ್ತಾಹದ ಶುಭಾಶಯಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)