varthabharthi


ರಾಷ್ಟ್ರೀಯ

ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂ ಕೋರ್ಟ್‌

ವಾರ್ತಾ ಭಾರತಿ : 12 Jan, 2021

ಹೊಸದಿಲ್ಲಿ,ಜ.12: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ಕುರಿತು ದಿಲ್ಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಕುರಿತಾದಂತೆ ಇಂದು ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಕೈಗೆತ್ತಿಕೊಂಡು ಮೂರು ವಿವಾದಾತ್ಮಕ ಕಾಯ್ದೆಗಳಿಗೆ ತಡೆ ನೀಡಿದೆ. ಮುಂದಿನ ಆದೇಶದವರೆಗೂ ಕಾಯ್ದೆಗಳಿಗೆ ತಡೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಇಂದು ಸುಪ್ರೀಂ ಕೋರ್ಟ್‌ ನಲ್ಲಿ ರೈತರ ಪ್ರತಿಭಟನೆ ಮತ್ತು ಕೃಷಿ ಮಸೂದೆಯ ಕುರಿತಾದಂತೆ ತೀರ್ಪು ನೀಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, "ಎಚ್ಎಸ್.‌ ಮಾನ್‌, ಪ್ರಮೋದ್‌ ಕುಮಾರ್‌ ಜೋಶಿ, ಅಶೋಕ್‌ ಗುಲಾಟಿ ಹಾಗೂ ಅನಿಲ್‌ ಧಾವಂತ್‌ ಸೇರಿದಂತೆ ಒಟ್ಟು ನಾಲ್ಕು ಮಂದಿ ಕೃಷಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದು, ಇವರು ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಅವಲೋಕಿಸಲಿದ್ದಾರೆ” ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ನಿಷೇಧಿತ ಸಿಖ್‌ ಸಂಘಟನೆಗಳು ಈ ಪ್ರತಿಭಟನೆಯ ಭಾಗವಾಗಿದೆಯೇ ಎಂಬುವುದನ್ನು ಕೇಂದ್ರ ಸರಕಾರವು ಸ್ಪಷ್ಟಪಡಿಸಬೇಕು ಎಂದ ನ್ಯಾಯಮೂರ್ತಿಗಳು, ರೈತರು ಟ್ರ್ಯಾಕ್ಟರ್‌ ರ್ಯಾಲಿಯ ಮೂಲಕ ಗಣರಾಜ್ಯೋತ್ಸವ ದಿನದಂದು ರಾಜಧಾನಿಗೆ ಪ್ರವೇಶಿಸದಂತೆ ತಡೆಯಲು ದಿಲ್ಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

"ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥಪಡಿಸಲೇಬೇಕಾಗಿದೆ. ಆದ್ದರಿಂದ ನಾವೇ ಕಮಿಟಿಯೊಂದನ್ನು ರೂಪಿಸಿ ಕಾನೂನಿನ ಸಾಧಕ ಬಾಧಗಳು ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾದಂತೆ ನಮ್ಮೊಂದಿಗೆ ಸಹಕರಿಸಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿಕೆ ನೀಡಿದ್ದಾರೆ.

"ಹಲವಾರು ಮಂದಿ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ ಆದರೆ ಪ್ರಧಾನಿ ಮಾತ್ರ ಇದುವರೆಗೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ರೈತರ ಪರ ವಕೀಲ ಎಮ್‌ ಎಲ್‌ ಶರ್ಮಾ ಹೇಳಿಕೆ ನೀಡಿದ್ದು, ಈ ವೇಳೆ ಮುಖ್ಯ ನ್ಯಾಯಮೂರ್ತಿ, "ಪ್ರಧಾನಿಯನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾಗಿ timesofindia.com ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)