ಕೆಜಿಎಫ್-2 ಟೀಸರ್ ಬಿಡುಗಡೆ ಬೆನ್ನಲ್ಲೇ ನಟ ಯಶ್ಗೆ ಆರೋಗ್ಯ ಇಲಾಖೆ ನೋಟಿಸ್
ಬೆಂಗಳೂರು, ಜ.13: ಕೆಜಿಎಫ್-2 ಟೀಸರ್ ನಲ್ಲಿ ಬಂದೂಕಿನಿಂದ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯಾವಳಿ ಬಿಡುಗಡೆಯಾದ ಬೆನ್ನಲ್ಲೇ ನಟ ಯಶ್ಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ವಿವಾದಿತ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಟೀಸರ್ ನಿಂದ ತೆರವುಗೊಳಿಸುವಂತೆ ಸೂಚನೆ ನೀಡಿದೆ.
ಕೆಜಿಎಫ್-2 ಚಿತ್ರದ ನಾಯಕ ಯಶ್ ಅವರಿಗೆ ನೋಟಿಸ್ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು, ಕೆಜಿಎಫ್-2 ಟೀಸರ್ ಹಾಗೂ ಪೋಸ್ಟರ್ ಗಳಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಯಲ್ಲಿ ತಾವು ಸಿಗರೇಟ್ ಸೇದುವ ದೃಶ್ಯ ಕಂಡು ಬರುತ್ತಿದೆ. ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ಸೆಕ್ಷನ್ 5, ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2004ರ ಫೆಬ್ರವರಿ 25ರಂದು ಹೊರಡಿಸಿರುವ 137 ನಿಬಂಧನೆಗಳ ಪ್ರಕಾರ ಸಿಗರೇಟು ಸೇದುವುದನ್ನು ಪ್ರಚೋದಿಸುವ ದೃಶ್ಯಗಳು ನಿಯಮ ಉಲ್ಲಂಘನೆಯಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಿಮ್ಮಿಂದ ಇಂಥ ದೃಶ್ಯಗಳು ಕಂಡು ಬರಬಾರದಿತ್ತು. ಯುವ ಜನತೆ ನಿಮ್ಮನ್ನು ಅನುಸರಿಸುವ ಸಾಧ್ಯತೆಯಿದೆ. ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ. ಯುವ ಜನರು ನಿಮ್ಮನ್ನು ಅನುಸರಿಸಿ ದುಶ್ಚಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಕೂಡಲೇ ಸಾಮಾಜಿಕ ಜಾಲತಾಣದಲ್ಲಿರುವ ವಿವಾದಿತ ದೃಶ್ಯಗಳನ್ನು ತೆರವುಗೊಳಿಸಿ ಆರೋಗ್ಯವಂತ ಸಮಾಜ ಕಟ್ಟಲು ಸಹಕರಿಸುವಂತೆ ಇಲಾಖೆಯ ನಿರ್ದೇಶಕರು ಮನವಿ ಮಾಡಿದ್ದಾರೆ.